ಶನಿವಾರ, ಏಪ್ರಿಲ್ 25, 2026

ಊರಮ್ಮ ಮಾರಮ್ಮ (ಪುಸ್ತಕ ಯಾನ - 345)


ಪುಸ್ತಕದ ಶೀರ್ಷಿಕೆ : ಊರಮ್ಮ ಮಾರಮ್ಮ

ಲೇಖಕರು : ಬಿ. ಎಸ್. ನಾಗರತ್ನ ಕುಮಾರಿ

ಪ್ರಕಾಶಕರು : ಹಂಪಿ ಕನ್ನಡ ವಿಶ್ವವಿದ್ಯಾಲಯ 

ಪ್ರಥಮ ಮುದ್ರಣ : 1994

ಪುಟಗಳು : 32


ಸಾಮಾನ್ಯವಾಗಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಮ್ಮ ಕಡೆಯ ಊರುಗಳಲ್ಲಿ ಜಾತ್ರೆಗಳ ಸಮಯ. ಅದರಲ್ಲಿಯೂ ಮಾರಿ ಹಬ್ಬ. ದೇವತೆಯೆಂದು ಪೂಜಿಸುವ ಮಾರಮ್ಮನನ್ನು ಕೆಲವೊಮ್ಮೆ ಬೈಯುವ ಬೈಗುಳವಾಗಿಯೂ ಬಳಸುವಾಗ ಆ ಕುರಿತು ತಿಳಿಯಬೇಕೆನ್ನುವ ಆಸಕ್ತಿ ಮೂಡಿತ್ತು. ಆಗ ಅಚಾನಕ್ಕಾಗಿ ಕಣ್ಣಿಗೆ ಬಿದ್ದದ್ದು ಈ ಪುಸ್ತಕ ಊರಮ್ಮ ಮಾರಮ್ಮ.


ಊರಮ್ಮ ಎಂದರೆ ಊರಿನ ತಾಯಿ. ಲೇಖಕರೇ ಊರಮ್ಮ ಇರುವಂತೆ ಊರಪ್ಪ ಏಕಿಲ್ಲ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಪುರಾತನ ಕಾಲದಲ್ಲಿ ಜನರು ಅಲೆಮಾರಿಗಳಾಗಿದ್ದಾಗ.. ಒಂದೇ ಕಡೆ ನೆಲೆ ನಿಂತು ಮಕ್ಕಳನ್ನು ಸಾಕಬೇಕಾಗಿತ್ತು. ಆ ಹೊಣೆ ಹೊತ್ತದ್ದು ಹೆಣ್ಣು. ಮಗುವಿಗೆ ಜನ್ಮ ಕೊಟ್ಟು, ಸಲಹುತ್ತಾ ಆಕೆ ನಿಂತ ಕಡೆ ಮನೆಯಾಯಿತು. ಅಲ್ಲಿಂದ ಮುಂದೆ ಅದೇ ನೆಲೆಯಲ್ಲಿ ಕುಟುಂಬವಾಯಿತು. ಅದೇ ಊರಿಗೆ ದಾರಿಯಾಯಿತು. ತಾಯಿ ಕೇವಲ ಪೋಷಣೆ ಮಾತ್ರವಲ್ಲದೆ, ಗುರುವಾಗಿ, ರಕ್ಷಕಿಯಾಗಿ, ವೈದ್ಯೆಯಾಗಿ.. ಹೀಗೆ ಎಲ್ಲಾ ರೀತಿಯಲ್ಲಿಯೂ ರಕ್ಷಣೆ ನೀಡಿದಳು. ಜೊತೆಗೆ ಮನೆಯ ಯಜಮಾನಿ ಎಂದು ತಾಯಿಯನ್ನೇ ಗುರುತಿಸುತ್ತಿದ್ದುದರಿಂದ ಎಲ್ಲರ ಒಡತಿಯೂ ಅವಳೇ ಆಗಿದ್ದಳು. ಮುಂದೆ ಆಕೆಯೇ ದೇವತೆಯಾದಳು. ಹಾಗೆ ಊರಿಗೆ ಅಮ್ಮನಾಗಿದ್ದವಳಿಗೆ ಊರಮ್ಮ ಎಂದು ಕರೆದರು.


ಹೀಗೆ ಪ್ರತಿ ಊರಮ್ಮನಿಗೆ ತಮ್ಮ ತಮ್ಮದೇ ಊರಿನ ಹೆಸರುಗಳು ಹುಟ್ಟಿಕೊಂಡವು. ಉದಾಹರಣೆಗೆ ಕಾಳೇನಹಳ್ಳಿ ಅಮ್ಮ ಕಾಳಮ್ಮ.. ರೋಗಗಳನ್ನು ಓಡಿಸಲು ಅಮ್ಮನಿಗೆ ಬೇರೆ ಹೆಸರುಗಳು ಹುಟ್ಟಿಕೊಂಡವು. ಪ್ಲೇಗನ್ನು ಓಡಿಸಿದ ಅಮ್ಮ ಪ್ಲೇಗಮ್ಮ ಆದಳು.


ಊರಿನಿಂದ ಬಂದವಳು ಊರಮ್ಮನಾದರೆ.. ಹೊರಗಿನಿಂದ ಬಂದವಳು ಮಾರಮ್ಮ. ಮಾರಮ್ಮನ ಕುರಿತ ಕತೆಯನ್ನು ನೀವೇ ಓದಿ ನೋಡಿ. 


ದೇವತೆಗಳಲ್ಲಿ ಮೊದಲು ವಲಸೆ ಬಂದ ದೇವತೆ ಇವಳೇ ಎಂಬ ಪ್ರತೀತಿ ಇದೆ. ಆದರೆ, ಕೆಟ್ಟದಕ್ಕೆಲ್ಲಾ ಮಾರಿ ಎಂದು ಕರೆಯುವುದೂ ರೂಢಿಯಲ್ಲಿದೆ. ' ದಾರೀಲಿ ಹೋಗೋ ಮಾರೀನ ಮನೆಗೆ ಕರೆದಂತೆ ' ಎನ್ನುವ ಮಾತನ್ನು ಕೇಳಿಲ್ಲವೇ..??


ಮಾರಮ್ಮನಿಗೆ ಪ್ರಾಣಿ ಕೊಡುವುದು ಕೂಡ ಅವಳಿಗೆ ಅಲ್ಲ. ಬದಲಾಗಿ ಅವಳ ಭೂತಗಳಿಗೆ ಎಂದು ಹೇಳುತ್ತಾರೆ. ಹಲವಾರು ಕಡೆ ಮಾರಿದೇವತೆಯ ನಡೆ - ನುಡಿ, ಆಚರಣೆಗಳಲ್ಲಿ ಬದಲಾಗಿರುವ ರೂಪುರೇಷೆಗಳನ್ನು ಹೇಳುತ್ತಾರೆ. ಮಾರಮ್ಮನ ರೂಪ, ಅಲಂಕಾರ, ಗುಡಿಯ ಚಿತ್ರಣಗಳನ್ನು ಬಿಡಿಸಿಡುತ್ತಾರೆ. 


ಮಾರಿಹಬ್ಬ ಸಾಮಾನ್ಯವಾಗಿ ಬಯಲು ನಾಡಿನ ಕಡೆಗಳಲ್ಲಿ ಬೇಸಿಗೆಯಲ್ಲಿ ಅಂದರೆ ಯುಗಾದಿಗೂ ಮುನ್ನ ನಡೆದರೆ, ಉತ್ತರ ಕನ್ನಡದ ಕೆಲವು ಜಿಲ್ಲೆಗಳಲ್ಲಿ ಜುಲೈ ತಿಂಗಳಿನಲ್ಲೂ.. ದಕ್ಷಿಣ ಕನ್ನಡದ ಕೆಲವೆಡೆ ನವೆಂಬರ್ ತಿಂಗಳಿನಲ್ಲಿಯೂ ನಡೆಯುತ್ತದೆ ಎಂಬ ಮಾಹಿತಿ ನೀಡುತ್ತಾರೆ.


 ಈ ಹಬ್ಬದಲ್ಲಿ ಹಲವಾರು ರೀತಿಯ ಆಚರಣೆಯ ವಿಧಾನಗಳಿವೆ. ಅದರಲ್ಲಿ ಹರಕೆ ಹೊರುವುದು, ಸಿಡಿ ಆಡುವುದು, ಕೊಂಡ ಹಾಯುವುದು, ಬಾಯಿ ಬೀಗ ಹಾಕಿಸಿಕೊಳ್ಳುವುದು, ಗಾವು ಸಿಗಿಯುವುದು ಅಂದರೆ ಬಲಿಗೆ ತರುವ ಪ್ರಾಣಿಯನ್ನು ಬಾಯಿಯಿಂದಲೇ ಸೀಳುವುದು, ಛಡಿ ಸೇವೆ/ ಬೆತ್ತದ ಸೇವೆ ಹೀಗೆ ಈ ಸೇವೆಗಳಲ್ಲಿಯೂ ಪ್ರಾದೇಶಿಕವಾಗಿ ಅನೇಕ ವ್ಯತ್ಯಾಸವನ್ನು ಕಾಣಬಹುದಾಗಿದೆ.


 ಕುಕ್ಕೆ ಮಾರಮ್ಮ, ಪೆಟ್ಟಿಗೆ ಮಾರಿ, ಘಟ ಸೇವೆ, ಮಡೆ ಸೇವೆ, ತಳಿಗೆ ಸೇವೆ ಹೀಗೆ ಹಲವಾರು ರೀತಿಯ ಸೇವೆಗಳ ಕುರಿತಾಗಿಯೂ ಹೇಳುತ್ತಾರೆ.


ತಂಬಿಟ್ಟು, ತುಪ್ಪ ಮತ್ತು ಬೇಯಿಸಿ ಒಟ್ಟಿಗೆ ಸೇರಿಸಿದ ಹುರುಳಿಕಾಳು, ಅವರೆಕಾಳುಗಳನ್ನು ಅರ್ಪಿಸುವುದು ಮತ್ತೊಂದು ವಿಧದ ಸೇವೆ. ಈ ಪದ್ಧತಿಯನ್ನು ನಾವು ನಮ್ಮೂರಿನಲ್ಲಿಯೂ ಆಚರಿಸುತ್ತೇವೆ. ಅಲ್ಲದೆ, ಊರಿನಲ್ಲಿ ಮಾರಿ ಹಬ್ಬದಲ್ಲಿ ನಡೆಯುವ ಎಷ್ಟೋ ಆಚರಣೆಗಳ ಹಿಂದಿನ ಕಾರಣ ತಿಳಿದುಕೊಂಡೆ.


 ಲೇಖಕರು ಮತ್ತೊಂದು ಮಾತನ್ನು ಹೇಳುತ್ತಾರೆ. ಊರಮ್ಮ ಮತ್ತು ಮಾರಮ್ಮ ನಮ್ಮ ಮಿತ್ರ ದೇವತೆಗಳೂ ಅಲ್ಲ, ಶತ್ರು ದೇವತೆಗಳೂ ಅಲ್ಲ. ನಮ್ಮ ಹಿಂದಿನ ಮನಸ್ಥಿತಿಯಿಂದ ಹುಟ್ಟಿದವು. ಅಲ್ಲದೆ, ಒಂದು ಕಡೆ ಸಾತ್ವಿಕ ದೇವತೆಯಾಗಿ ಮತ್ತೊಂದುಕಡೆ ಮಾರಕದೇವತೆಯಾಗಿ ಆಕೆ ಕಾರ್ಯನಿರ್ವಹಿಸುತ್ತಾಳೆ. ಊರಮ್ಮ ಮಾರಮ್ಮನಾಗಿ... ಚಾಮುಂಡಿಯಾಗಿ, ದುರ್ಗೆಯಾಗಿ ಕೊನೆಗೆ ಶಿವೆಯಾಗಿದ್ದಾಳೆ. ಅಂದರೆ ಶುಭ ದೇವತೆಯಾಗಿದ್ದಾಳೆ ಎನ್ನುತ್ತಾರೆ.


 ಇಲ್ಲಿ ನಾನು ಹೇಳಿರುವ ಕೆಲವು ಅಂಶಗಳು ಕುತೂಹಲ ಮೂಡಿಸಲು ಅಷ್ಟೇ.. ಲೇಖಕರೇ ಉಲ್ಲೇಖಿಸಿರುವ ಮಾಹಿತಿಗಳು. ಆಸಕ್ತರು ಸಂಪೂರ್ಣ ಮಾಹಿತಿಗಾಗಿ archive ನಲ್ಲಿ ಲಭ್ಯವಿರುವ ಈ ಪುಸ್ತಕವನ್ನು ಓದಬಹುದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ