ಶನಿವಾರ, ಏಪ್ರಿಲ್ 25, 2026

ಹೃದಯದ ಸರಿಗಮ (ಪುಸ್ತಕ ಯಾನ - 322)


ಪುಸ್ತಕದ ಶೀರ್ಷಿಕೆ : ಹೃದಯದ ಸರಿಗಮ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು :ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2002

ಎರಡನೇ ಮುದ್ರಣ : 2023


ಈ ಕಾದಂಬರಿ ದಾಂಪತ್ಯದಲ್ಲಿ ಹೃದಯದ ಮಿಡಿತ ಎಷ್ಟು ಮುಖ್ಯ ಹಾಗೂ ಸೌಂದರ್ಯಕ್ಕಿಂತಲೂ ಗುಣ ಮುಖ್ಯ ಎಂಬುದರ ಅರಿವಾಗುತ್ತದೆ.


ಕಾದಂಬರಿಯ ನಾಯಕಿ ಜಯಲಕ್ಷ್ಮಿಯ ತಂದೆ ಶಾಮರಾಯರು ನಾಲ್ಕು ಎಕರೆ ಗದ್ದೆ, ಚಿನ್ನದ ಆಸೆಗೆ ತಮ್ಮ 25ನೇ ವಯಸ್ಸಿನಲ್ಲಿ ಕಡು ಕುರೂಪಿ ಹಳ್ಳಿ ಹುಡುಗಿಯನ್ನು ವಿವಾಹವಾಗಿದ್ದರು. ಅವರೇ ಸರೋಜಮ್ಮ. ಅವರಿಬ್ಬರ ಮದುವೆಯಾದ ಆರು ವರ್ಷಕ್ಕೆ ಹುಟ್ಟಿದ್ದು ಜಯಲಕ್ಷ್ಮಿ. ಹೆಂಡತಿ ತಮಗಿಂತ ದೊಡ್ಡವಳು, ಹಳ್ಳಿ ಹುಡುಗಿ, ಕುರೂಪಿ ಎಂದು ಶಾಮರಾಯರು ಪತ್ನಿಯ ಬಗ್ಗೆ ಬೇಸರ ಮಾಡಿಕೊಂಡವರಲ್ಲ. ಆಕೆಯೂ ಶ್ರೀಮಂತಿಕೆಯ ದರ್ಪ ತೋರದೆ ಪತಿಯನ್ನು ಹೊಂದಿಕೊಂಡು ಹೋಗುತ್ತಿದ್ದವರು. ಬಹುಶಃ ಜಯಲಕ್ಷ್ಮಿಗೆ ಇವರಿಬ್ಬರ ಈ ಗುಣಗಳೇ ಪ್ರಾಪ್ತಿಯಾಗಿರಬೇಕು.. 


ಜಯಲಕ್ಷ್ಮಿಯ ತಾಯಿ ತೀರಿಕೊಂಡ ನಂತರ ಶಾಮರಾಯರು ಪಾರ್ವತಿಯನ್ನು ವಿವಾಹವಾಗಿದ್ದರು. ಪಾರ್ವತಮ್ಮನವರು ರೂಪಿನಲ್ಲಿ ಚೆನ್ನಾಗಿದ್ದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು. ರಾಧಾ, ಗೋದ ಹುಟ್ಟಿದ ಮೇಲೆಯೂ ಜಯಲಕ್ಷ್ಮಿಯನ್ನು ಕಡೆಗಣಿಸಿದವರಲ್ಲ. ಸ್ವಂತ ಮಕ್ಕಳಿಗಿಂತಲೂ ಆಕೆಯ ಕುರಿತು ಹೆಚ್ಚು ಆಸ್ಥೆ ತೋರುತ್ತಿದ್ದರು. 


ಜಯಲಕ್ಷ್ಮಿ ತಾಯಿಯದ್ದೇ ಪಡಿಯಚ್ಚು. ಅಚ್ಚ ಕಪ್ಪು ಬಣ್ಣ, ಗಿಡ್ಡ, ಅಡ್ಡಗಲ ಮೈಕಟ್ಟು, ಮೊಂಡು ಮೂಗು, ನೀರಸ ಕಂಗಳು. ಆಕೆ ಹಾಗಿದ್ದರೂ ಪಾರ್ವತಮ್ಮನವರು ಮಲಮಗಳನ್ನು ಹೊಗಳುತ್ತಿದ್ದರೇ ಹೊರತು ಎಂದಿಗೂ ಆಡಿಕೊಂಡವರಲ್ಲ. "ನಮ್ಮ ಜಯ ನಕ್ಕಾಗ ಚೆನ್ನಾಗಿ ಕಾಣ್ತಾಳೆ. ಹಲ್ಲುಗಳು ಮುತ್ತು ಜೋಡಿಸಿ ಇಟ್ಟಂತಿವೆ. ಆ ಹಲ್ಲುಗಳ ಕಾಂತಿಯಲ್ಲಿ ಬೆಳದಿಂಗಳು ಹರಿಸುತ್ತಾಳೆ" ಎನ್ನುತ್ತಾ ಕೊಂಡಾಡುವ ಅಮ್ಮನಾಗಿದ್ದರು.. "ಹೆತ್ತವರಿಗೆ ಹೆಗ್ಗಣ ಮುದ್ದು" ಎನ್ನುವಂತೆ ತಮ್ಮ ಮಕ್ಕಳೇ ಹೆಚ್ಚು ಚೆಲುವು ಅಮ್ಮಂದಿರಿಗೆ. ಆದರೆ, ಇಲ್ಲಿ ಹೆರದಿದ್ದರೂ ತಾಯಿಯಾಗಿದ್ದ ಪಾರ್ವತಮ್ಮನಿಗೆ ಮಗಳ ಮೇಲೆ ಹೆಚ್ಚೇ ಅಕ್ಕರೆ. ಜಯಲಕ್ಷ್ಮಿಯೂ ಆಕೆಯನ್ನು ಚಿಕ್ಕಮ್ಮ ಎಂದು ಕೂಗುತ್ತಿದ್ದಳೇ ಹೊರತು ಎಂದಿಗೂ ತಾಯಿಗಿಂತ ಕಡಿಮೆ ಎಂದು ಭಾವಿಸಿದವಳಲ್ಲ. ನಮ್ಮ ಸುತ್ತಮುತ್ತಲಿನ ಪರಿಸರವೂ ರೂಪದ ಕುರಿತು ಕೀಳಿರಿಮೆ ಬೆಳೆಸಿಕೊಳ್ಳದಿರುವಂತೆ ಪ್ರಭಾವಿಸುವ ಚಿತ್ರಣ ಇದು. 


ಆಕೆ ರೂಪದಲ್ಲಿ ಕಡಿಮೆ ಇದ್ದರೂ.. ಓದಿನಲ್ಲಿ ಜಾಣೆಯಾಗಿದ್ದವಳು. ಶಿಕ್ಷಕಿಯಾಗಿ ಕೆಲಸ ಮಾಡುತ್ತಾ.. ಟ್ಯೂಷನ್ ನಿಂದಲೂ ಸಂಪಾದಿಸುತ್ತಿದ್ದಳು. ಹಾಗೆಂದು, ಆಕೆಗೆ ಗಳಿಸುತ್ತಿದ್ದೇನೆ ಎಂಬ ಅಹಂ ಇರಲಿಲ್ಲ. 


ತನ್ನ ಬಳಿ ಇದ್ದ ತಾಯಿಯ ಒಡವೆಗಳನ್ನು ಚಿಕ್ಕಮ್ಮನಿಗೆ ಧಾರಾಳವಾಗಿ ಕೊಡುತ್ತಿದ್ದರೂ ಅವರೇ ನಿರಾಕರಿಸುತ್ತಿದ್ದರು. ತನ್ನ ಮದುವೆಯ ವಿಚಾರ ಬಂದಾಗಲೂ ತನಗಿಂತ ಹೆಚ್ಚಾಗಿ ತನ್ನ ತಂಗಿಯರ ವಿವಾಹ ಸುಸೂತ್ರವಾಗಿ ಸಾಗಲಿ ಎಂದು ಆಸೆ ಪಡುತ್ತಿದ್ದವಳು. ತಾನು ಅಮ್ಮನ ಕಡೆಯಿಂದ ಬಂದ ಆಸ್ತಿ-ಪಾಸ್ತಿ ಸಮೇತ ಹೋದರೆ ಮುಂದೆ ಚಿಕ್ಕಮ್ಮ, ಅಪ್ಪ ಹಾಗೂ ತಂಗಿಯರ ಗತಿ ಏನು ಎಂದು ಯೋಚನೆ ಮಾಡುತ್ತಾ ಎಲ್ಲರ ಕುರಿತು ಆಲೋಚಿಸುತ್ತಿದ್ದವಳು. 


ಅಲ್ಲದೇ, ತಂಗಿಯರಿಗೆ ಅಂತಿಂಥಹಾ ವರನನ್ನು ಆಕೆ ಒಪ್ಪುತ್ತಿರಲಿಲ್ಲ. ಪಾರ್ವತಮ್ಮನವರು ತಮ್ಮ ಮಕ್ಕಳಿಗೆ ಎರಡನೇ ವಿವಾಹ ಅಥವಾ ಸಾಧಾರಣ ವರನಾದರೂ ಒಪ್ಪುತಿದ್ದರು. ಆದರೆ, ಜಯಲಕ್ಷ್ಮಿಗೆ ಬರುವ ಗಂಡು ಮಾತ್ರ ಸುಸ್ಥಿತಿಯಲ್ಲಿರಬೇಕು ಎಂದು ಆಶಿಸುತ್ತಿದ್ದರು. ಆದರೆ, ಚಿಕ್ಕಮ್ಮನನ್ನು ಜೋರು ಮಾಡಿ ರಾಧಾ-ಗೋಧರಿಗೆ ಒಳ್ಳೆಯ ಕಡೆ ವಿವಾಹ ಕುದುರಿಸಿ ಬಿಟ್ಟಿದ್ದಳು ಜಯಲಕ್ಷ್ಮಿ. ಆಕೆಯ ಮನಸ್ಸೇ ಅಷ್ಟು ನಿಷ್ಕಲ್ಮಶ.


ವಾಸುದೇವ ಹಾಗೂ ಅವನ ತಾಯಿ ರಾಜಮ್ಮ ಜಯಲಕ್ಷ್ಮಿಯನ್ನು ನೋಡಲು ಬಂದವರು ಹಣ ಹಾಗೂ ಆಸ್ತಿಯ ಆಸೆ ತೋರಿದಾಗ ನಿರ್ಭಯವಾಗಿಯೇ ನಿರಾಕರಿಸಿದ್ದಳು ಜಯಲಕ್ಷ್ಮಿ. ಆದರೆ, ವಾಸುದೇವ ಅಷ್ಟಕ್ಕೇ ಬಿಡದೆ, ಅಂದು ತಾಯಿಯ ಎದುರಿಗೆ ಇಲಿಮರಿಯಂತಿದ್ದವನು ನಂತರ ಆಕೆಯನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದನು. ಆದರೆ, ಆಕೆಯನ್ನು ಒಪ್ಪಿಸುವುದು ಅಷ್ಟು ಸುಲಭವಿರಲಿಲ್ಲ. ಆಕೆಯ ರೂಪನ್ನು ಕಂಡಿದ್ದವನು.. ಆಕೆ ಓಲೈಸಿದರೆ ಸೋಲುತ್ತಾಳೆ ಎಂದುಕೊಂಡಿದ್ದ ಆತನ ಊಹೆ ಸುಳ್ಳಾಗಿತ್ತು. ಆದರೂ.. ಕೊನೆಗೆ ವಾಸುದೇವನ ಜೊತೆಗೆ ಆಕೆಯ ವಿವಾಹ ಗಟ್ಟಿಯಾಯಿತು .


ಆದರೆ, ವಾಸುದೇವ ತಾಯಿಗಿಂತ ಹೆಚ್ಚಿನ ದುರುಳ. ಆತನಿಗೆ ಚಂಡನಾ ಎಂಬುವವಳ ಜೊತೆಗೆ ವಿವಾಹಬಾಹಿರ ಸಂಬಂಧವಿತ್ತು. ವಿವಾಹದ ನಂತರವೂ ಅದು ಮುಂದುವರಿಯಿತು. ವಿವಾಹದ ನಂತರವಾದರೂ ಆತ ಬದಲಾಗಿದ್ದರೆ ಚಿತ್ರಣವೇ ವಿಭಿನ್ನವಾಗಿರುತ್ತಿತ್ತು. ಆದರೆ, ಜಯಲಕ್ಷ್ಮಿಯನ್ನು ಹಣ ಸಿಗುತ್ತದೆ ಎಂಬ ಕಾರಣಕ್ಕೆ ವಿವಾಹವಾದವನು ಆಕೆಯಿಂದ ಹಣ ಕೀಳಲು ನೋಡುತ್ತಾನೆ


ವಿವಾಹವಾದ ನಂತರ ಅದೆಲ್ಲವೂ ತಿಳಿದ ಜಯಲಕ್ಷ್ಮಿ ಕುಗ್ಗಲಿಲ್ಲ. ಬದಲಾಗಿ, ಅತ್ತೆಯ ಜೊತೆ ಒಂದಾಗಿ ತನ್ನ ಸಂಸಾರವನ್ನು ಸರಿ ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಳು. ತನ್ನ ವಿವಾಹ ಹಾಗೂ ಆ ಸಂಸಾರವನ್ನು ಒಡೆದು ಬದುಕಬಹುದಾಗಿದ್ದರೂ ಆಕೆ ಹಾಗೆ ಮಾಡಲಿಲ್ಲ. ಬದಲಾಗಿ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುವ ಹಾಗೂ ಹೊಂದಿಕೊಂಡು ಹೋಗುವ ಗುಣವಂತೆಯಾಗಿ ಕಾಣುತ್ತಾಳೆ. ಗುಣವೆಂದರೆ ಕೇವಲ ಮೃದುತ್ವವಲ್ಲ, ಬದಲಾಗಿ ಸ್ವಾಭಿಮಾನವೂ ಎಂದು ಹೇಳುವ ಹೆಣ್ಣಾಗಿ ಕಾಣುತ್ತಾಳೆ ಜಯಲಕ್ಷ್ಮಿ. 


ಅವಳ ಸ್ವಾಭಿಮಾನಕ್ಕೆ ತಕ್ಕ ಬೆಲೆ ಸಿಕ್ಕಿತೇ..? ಜಯಲಕ್ಷ್ಮಿಯ ಬದುಕಿನ ದುರಂತಗಾಥೆ ಪಾರ್ವತಮ್ಮನವರಿಗೆ ತಿಳಿದಾಗ ಅವರ ಪ್ರತಿಕ್ರಿಯೆ ಏನಿತ್ತು..? ವಾಸುದೇವ ಬದಲಾಗುತ್ತಾನೆಯೇ..? ಚಂದನಾಳ ಬದುಕು ಏನಾಯಿತು..? ತಿಳಿಯಲು ಓದಿ ಹೃದಯದ ಸರಿಗಮ ಕಾದಂಬರಿಯನ್ನು


ರೂಪದ ಕುರಿತ ಕೀಳಿರಿಮೆ ಇಲ್ಲದೆ ಬದುಕಿದಾಗ ಮಾತ್ರವೇ ಇಂತಹಾ ಸದ್ಗುಣಗಳನ್ನು ಧೈರ್ಯವಾಗಿ ಅಳವಡಿಸಿಕೊಳ್ಳಲು ಸಾಧ್ಯ. ಸ್ವಾಭಿಮಾನಿಯಾಗಿ ಮುಂದುವರಿಯಲು ಸಾಧ್ಯ. ವಿವಾಹ ಮಾಡಿಕೊಳ್ಳುವವರೂ.. ರೂಪಕ್ಕಿಂತ ಹೆಚ್ಚಾಗಿ ಆಕೆಯ ಗುಣಕ್ಕೆ ಮಹತ್ವ ನೀಡಿದ್ದಲ್ಲಿ ಅವರ ದೊಡ್ಡತನ ಸಾಬೀತಾಗುತ್ತಿತ್ತು. ಆದರೆ, ಹಾಗಾಗಲಿಲ್ಲ. ರೂಪ ಇಲ್ಲದ ಕಡೆ ಪರಿಸ್ಥಿತಿಯನ್ನು ತಮಗೆ ಬೇಕಾದಂತೆ ಬದಲಿಸಿಕೊಳ್ಳುವ ಸಮಯ ಸಾಧಕರೇ ಹೆಚ್ಚು ಎನ್ನುವ ಉದಾಹರಣೆಯನ್ನು ಇಲ್ಲಿ ಕಾಣಬಹುದು. ಆದರೆ, ತಮ್ಮ ಸದ್ಗುಣಗಳಿಂದ ಸುತ್ತಲಿನವರನ್ನು ಬದಲಾಯಿಸುವ ಶಕ್ತಿ ಇದ್ದಾಗ ಮಾತ್ರವೇ ಒಳ್ಳೆಯ ಬದುಕು ಹೊಂದಲು ಸಾಧ್ಯ. 


ಹೆಚ್. ಜಿ. ರಾಧಾದೇವಿಯವರ ಇತರ ಕಾದಂಬರಿಗಳಿಗಿಂತ ವಿಭಿನ್ನವಾದ ತಾಯಿಯನ್ನು ಕಾಣಬಹುದಾಗಿದೆ ಇಲ್ಲಿ. ಹೆತ್ತ ತಾಯಿಯೇ ವೈರಿಗಳಾಗುವ ಪಾತ್ರ ಚಿತ್ರಣಕ್ಕಿಂತ ಹೆತ್ತ ಮಗಳಲ್ಲದಿದ್ದರೂ ಹೆತ್ತ ಮಗಳಿಗಿಂತ ಹೆಚ್ಚಾಗಿ ಕಾಣುವ ತಾಯಿ, ಅಂತಹಾ ತಾಯಿಗೆ ತಕ್ಕ ಮಗಳ ಚಿತ್ರಣ ಇಷ್ಟವಾಗುತ್ತದೆ. 


ಗುಣವಿಲ್ಲದ ರೂಪಕ್ಕಿಂತಲೂ.. ರೂಪವಿಲ್ಲದಿದ್ದರೂ ಗುಣವಿದ್ದರೆ ಚಂದ ಎಂದು ತೋರುವ ನಾಯಕಿ ಜಯಲಕ್ಷ್ಮಿಯನ್ನು ಮಾದರಿ ಹೆಣ್ಣಾಗಿ ಕಟ್ಟಿಕೊಟ್ಟಿದ್ದಾರೆ ಹೆಚ್.‌ಜಿ ರಾಧಾದೇವಿಯವರು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ