ಶನಿವಾರ, ಏಪ್ರಿಲ್ 25, 2026

ಅತೀತಭವ (ಪುಸ್ತಕ ಯಾನ - 324)


ಪುಸ್ತಕದ ಶೀರ್ಷಿಕೆ : ಅತೀತಭವ

ಲೇಖಕರು : ಅಶ್ವಿನಿ ಸುನಿಲ್ 

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್ 

ಪ್ರಥಮ ಮುದ್ರಣ : 2024

ಪುಟಗಳು : 104

ಬೆಲೆ : 135 ರೂ. 


ನಮ್ಮ ಪುಸ್ತಕ ಅವಲೋಕನದ ಸದಸ್ಯರೂ ಆಗಿರುವ ಅಶ್ವಿನಿ ಸುನಿಲ್ ಅವರ ಎರಡನೆಯ ಪ್ರಕಟಿತ ಪುಸ್ತಕ ಇದು. ಮಾಮ್ಸ್ಪ್ರೆಸ್ಸೊ ವೇದಿಕೆಯಲ್ಲಿ ಇವರ ಕೆಲ ಬರಹಗಳನ್ನು ಓದಿದ್ದೆ. ಹೀಗೆ ಒಟ್ಟಾಗಿ ಕಥಾಸಂಕಲನದ ರೂಪದಲ್ಲಿ ಚಂದದ ಕಥೆಗಳನ್ನು ಓದುತ್ತಿರುವುದು ಮತ್ತಷ್ಟು ಸಂತೋಷ ತಂದಿದೆ. ಈ ಕಥಾಸಂಕಲನದಲ್ಲಿ ಒಟ್ಟು 15 ಕಥೆಗಳಿವೆ. 'ಅತೀತಭವ' ಎನ್ನುವ ಶೀರ್ಷಿಕೆ ಕುತೂಹಲ ಹುಟ್ಟಿಸಿದ್ದಂತೂ ನಿಜ. 


 ವಿಂಡೋ ಸೀಟ್ : ಸಾಮಾನ್ಯವಾಗಿ ನಾವು ಬಸ್, ಕಾರು ಅಥವಾ ರೈಲಿನ ಪ್ರಯಾಣ ಯಾವುದೇ ಇರಲಿ ವಿಂಡೋ ಸೀಟ್ ಅನ್ನು ಬಯಸುವುದೇ ಹೆಚ್ಚು. ಪ್ರಯಾಣದಲ್ಲಿ ಹೊರನೋಟ ಹಾಗೂ ತಂಗಾಳಿಯ ಆಹ್ಲಾದಮಯ ಕಚಗುಳಿ ನಮ್ಮ ಪ್ರಯಾಣವನ್ನು ಮತ್ತಷ್ಟು ಚೆಂದವಾಗಿಸುತ್ತದೆ. ಆದರೆ, ವಾಗ್ದೇವಿಗೆ ಮಾತ್ರ ವಿಂಡೋ ಸೀಟ್ ಬೇಡವಾಗಿತ್ತು. ಅಮ್ಮನ ಜೊತೆ ಆಕೆ ಚಿಕ್ಕಂದಿನಲ್ಲಿ ಸಾಕ್ಷಿಯಾಗಿದ್ದ ಹಾಗೂ ಆ ಘಟನೆಯ ಭಾಗವೇ ಆಗಿದ್ದವಳಿಗೆ ಅದೇ ಕಾಡುತ್ತಿತ್ತು. ಬಹುಶಃ ಅದೇ ಕೊನೆಯ ದಿನ ಕಿಟಕಿಯ ಸೀಟ್ ಬಳಿ ಕೂತದ್ದು. ಬಹುಶಃ, ಆ ಘಟನೆಯೊಂದೇ ಆ ಭಯಕ್ಕೆ ಕಾರಣವಲ್ಲ. ಆ ಘಟನೆಯ ಹಿಂದಿನ ಮನಸ್ಥಿತಿ, ಮನಸ್ಸಿನಲ್ಲಿಯೇ ಉಳಿದು ಹೋದ ಪರಿ ನಮಗೂ ಬಾಲ್ಯದ ಇಂತಹ ಯಾವುದೋ ಒಂದು ಘಟನೆಯನ್ನು ನೆನಪಿಸುವುದಂತೂ ಸತ್ಯ. 


ಪೆಟ್ಟಿಗೆ ಹಿಡಿದ ಕೈ : ಗಂಗಿ ಹಾಗೂ ಕುಂಜಿರಾಮನಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳು. ಮೊದಲನೆಯವನು ಸುಂದರ ಅಪ್ಪನಂತೆ ಸಾಧು ಸ್ವಭಾವದವನಾದರೆ.. ಎರಡನೆಯವನೇ ಶೇಖರ. ಅಮ್ಮನದ್ದೇ ಪ್ರತಿರೂಪ. ಅಂತಹಾ ಗಠವಾಣಿ ಗಂಗಿಗೆ ಶತ್ರುವೇ ಆಗದಂತಹಾ ಸೊಸೆ ಕಮಲ. ಕುಂಜಿರಾಮ ಸಾಧು ಸ್ವಭಾವದವನಾದರೂ.. ಆತನ ಸ್ವಭಾವವೇ ವಿಚಿತ್ರ. ಮಳೆಗಾಲದಲ್ಲಿ ಜೋರಾಗಿ ಮಳೆ ಸುರಿಯುವಾಗ ಮಾತ್ರ ಕುಂಜಿರಾಮನಿಗೆ ಕೈತುಂಬಾ ಕೆಲಸ. ಕುಮುದಿನಿ ನದಿಯಲ್ಲಿ ತೇಲಿ ಬರುವ ವಸ್ತುಗಳನ್ನು ಹಿಡಿಯುವುದರಲ್ಲಿ ಆತನದ್ದು ಎತ್ತಿದ ಕೈ. ಹಾಗೆಯೇ ಪೆಟ್ಟಿಗೆಯ ಜೊತೆಗೆ ಬಂದ ಕೈ ಆತನ ಬದುಕನ್ನೇ ಬದಲಿಸಿತ್ತು. ಬದಲಾದ ಕಥೆ ನೀವೇ ಓದಿ. 


ಮಣ್ಣಿನ ವಾಸನೆ : ಮೊದಲ ಮಳೆಯ ಹನಿ ಮಣ್ಣಿಗೆ ಬಿದ್ದಾಗ ಅದರಿಂದ ಬರುವ ಪರಿಮಳ ಈಗಲೂ ನೆನಪಿಸಿಕೊಂಡರೆ ಮೈ ಮನವೆಲ್ಲಾ ಪುಳಕ. ಆದರೆ, ಮಧುಮಿತಾಗೆ ಮಾತ್ರ ಆ ವಾಸನೆ ಮೂಗಿಗೆ ಅಡರುವ ಮೊದಲೇ ಮನಸೇರಿ ಬಾಗಿಲು ಹಾಕಿಕೊಳ್ಳುವ ಧಾವಂತ. ಆಕೆ ಹೀಗೆ ತಾಳ್ಮೆ ಕಳೆದುಕೊಂಡು ಒದ್ದಾಡುವವಳಲ್ಲ. ಆದರೆ, ಅವಳನ್ನು ಭಾದಿಸುತ್ತಿದ್ದಾದರೂ ಏನು..? ಮನುಷ್ಯನ ನಡವಳಿಕೆಗೂ ಹಾಗೂ ಬದುಕಿನಲ್ಲಿ ಅನುಭವಿಸುತ್ತಿರುವ ಸಂದರ್ಭಕ್ಕೂ ಯಾವೆಲ್ಲ ರೀತಿಯ ಸಂಬಂಧವಿರುತ್ತದೆ ಎನ್ನುವ ಸೂಕ್ಷ್ಮತೆಯನ್ನು ತೋರುವ ಕಥೆ. 


ಜಾಹ್ನವಿ : ಜಾಹ್ನವಿ ಕಾಲೇಜಿನಿಂದ ಮನೆಗೆ ಬರುವಾಗ ಬಸ್ಸಿಳಿದು ಆರು ಕಿಲೋಮೀಟರ್ ನಡೆಯಬೇಕಾಗಿದ್ದ ಸಂದರ್ಭ. ಪ್ರತಿದಿನ ಇರುತ್ತಿದ್ದ ಗೆಳತಿ ಶಾಂಭವಿಯೂ ಜೊತೆಗಿರಲಿಲ್ಲ. ಎಡೆಬಿಡದೆ ಸುರಿಯುತ್ತಿದ್ದ ಮಳೆಗೆ ದಾರಿಯೆಲ್ಲಾ ಕೆಸರುಮಯ. ಅಂದು ಬಸ್ ಬರುವಾಗ ಸಹಾ ತಡವಾಗಿತ್ತು. ಆದರೆ, ಹಳ್ಳಿಯಲ್ಲೇ ಹುಟ್ಟಿ ಬೆಳೆದವಳಿಗೆ ಇದೆಲ್ಲಾ ಕಷ್ಟ ಲೆಕ್ಕಕ್ಕೇ ಇಲ್ಲ. ಅಂದು ಬಸ್ಸಿಗೆ ಹತ್ತುವಾಗಲೇ ಆಕೆಯ ಕಣ್ಣು ಆಗಂತುಕನೊಬ್ಬನ ಮೇಲೆ ಹರಿದಿತ್ತು. ಬಸ್ಸಿಳಿದ ನಂತರವೂ ಆಕೆಯನ್ನೇ ಹಿಂಬಾಲಿಸುತ್ತಿದ್ದ. ಹೆಣ್ಣುಮಕ್ಕಳ ಮನಸ್ಸಲ್ಲಿ ಇಂತಹಾ ಪರಿಸ್ಥಿತಿ ಎದುರಾದಾಗ ಮೊದಲಿಗೆ ಅಸುರಕ್ಷಿತ ಭಾವನೆ ನೀಡುವುದು ಸತ್ಯ. ಇಂತಹಾ ಸಂಧರ್ಭದಲ್ಲಿ ಜಾಹ್ನವಿ ಏನು ಮಾಡಿದಳು..? ಅಷ್ಟಕ್ಕೂ ಆತ ಯಾರು ಓದಿ ನೋಡಿ. 


ಕುಲೆ ಸೊಪ್ಪು : ಗೋಪಾಲ ಇನ್ನು ಮನೆಗೆ ಬರದ ಗೌರಿಯನ್ನು ಹುಡುಕಿ ಹೊರಟಿದ್ದರೆ ರಾತ್ರಿಯೆಲ್ಲಾ ಆತನಿಗೆ ಕೇಳುತ್ತಿದ್ದ ಗೆಜ್ಜೆಶಬ್ದಕ್ಕೆ ಮನಸ್ಸಿನಲ್ಲಿ ಹಿಂದೆಲ್ಲಾ ಕೇಳಿದ್ದ ಘಟನೆಗಳದ್ದೇ ನೆನಪು. ಇನ್ನು ಕುಲೆತ ಸೊಪ್ಪು ಮುಟ್ಟಿದರೆ ಕಥೆಯೇ ಮುಗಿಯಿತು ಎಂದುಕೊಂಡವನ ಪರಿಸ್ಥಿತಿ ಏನಿತ್ತು..? ಗೌರಿ ಮತ್ತೆ ಹಟ್ಟಿಗೆ ಬಂದದ್ದು ಯಾವಾಗ..? ಆತ ರಾತ್ರಿಯನ್ನು ಹೇಗೆ ಕಳೆದ..?


ಅಪ್ಪ : ಚಿಕ್ಕಂದಿನಲ್ಲಿ ಹಾಸ್ಟೆಲ್ ಗೇಟಿನ ಬಳಿ ಕಣ್ಣೀರಿಡುತ್ತಾ ನಿಂತಿದ್ದ ತನ್ನನ್ನೇ ನೆನಪಿಸಿಕೊಂಡಿದ್ದವನು, ಈಗ ಅಪ್ಪನನ್ನು ಮೂರು ತಿಂಗಳ ಮಟ್ಟಿಗೆ ಆಶ್ರಮದಲ್ಲಿ ಬಿಡಲು ಹೊರಟಿದ್ದ ಸುಮಂತ. ನಿಜ ವಿಷಯ ಏನೆಂದೇ ಅರಿಯದೆ ಅಪ್ಪನೊಡನೆ ದ್ವೇಷ ಸಾಧಿಸಿದ ಮಗ ಕೊನೆಗಾದರೂ ನಿಜ ಅರಿತ. ಆನಂತರ ಅವನ ನಡವಳಿಕೆ ಹೇಗಿತ್ತು..?


ಫೇ(ಕ್)ಸ್ ಬುಕ್ : 38 ವರ್ಷಗಳ ಕಾಲ ಜೊತೆಗೆ ಇದ್ದ ಹೆಂಡತಿ ಅನಿರೀಕ್ಷಿತವಾಗಿ ಕಾಲವಾದಾಗ ಸುಂದರಮೂರ್ತಿಯವರು ಬೆಂಗಳೂರಿನ ಮಗನ ಮನೆಗೆ ಬಂದಿದ್ದರು. ಆದರೆ, ಮೊದಲಿದ್ದುದ್ದಕ್ಕೂ ಇಂದಿಗೂ ವ್ಯತಿರಿಕ್ತವಾದ ಪರಿಸ್ಥಿತಿ. ಆದರೆ, ನಚಿಕೇತ ಹಾಗೂ ಸ್ಮಾರ್ಟ್ ಫೋನಿಗೆ ಹೊಂದಿಕೊಂಡ ಸುಂದರಮೂರ್ತಿಯವರು ಮುಂದೆ ಸ್ಯಾಂಡಿಯಾದದ್ದು ವಿಭಿನ್ನ ಕತೆ. ಸಾಮಾಜಿಕ ಜಾಲತಾಣಗಳ ಸಂಬಂಧಗಳಿಗೂ.. ನೈಜ ಸಂಬಂಧಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರುವ ಕಥೆ ಇದು. 


ಭ್ರಮೆ : ವಿನೋದಿನಿಗೆ ಕಳೆದ ಹತ್ತು-ಹದಿನೈದು ದಿನಗಳಿಂದ ವಿಚಿತ್ರ ಸಮಸ್ಯೆ. ಮನೆಯಲ್ಲಿರುವಾಗಲೂ ಮಾಸ್ಕ್ ಹಾಕಿಕೊಂಡೇ ಇರುತ್ತಿದ್ದಳು. ಬಾಯಾರಿಕೆಯಾದಾಗ ನೀರು, ತಿಂಡಿ-ಊಟ ಅದು ಹೇಗೆ ಮಾಡುತ್ತಿದ್ದಳೋ ಗೊತ್ತಿಲ್ಲ. ಆದರೆ, ಅವಳಿಗೊಂದು ವಿಚಿತ್ರ ವಾಸನೆ ಕಾಡುತ್ತಿತ್ತು. ಅದು ಅವಳನ್ನು ಮಾತ್ರವೇ..! ಮನೆಯಲ್ಲಿದ್ದವರಾರಿಗೂ ಆ ಸಮಸ್ಯೆ ಇರಲಿಲ್ಲ. ಅಷ್ಟಕ್ಕೂ ಆ ಸಮಸ್ಯೆ ಭ್ರಮೆಯೇ ಅಥವಾ ನಿಜವೇ ಓದಿ ನೋಡಿ. 


ಗೋಲಿ ಸೋಡಾ : ಕೃಷ್ಣಪ್ರಸಾದನ ಜೊತೆಗೆ ಗೆಳೆಯರೆಲ್ಲರೂ ಸೇರಿದಾಗ ಮತ್ತೆ ಗಣೇಶನ ವಿಚಾರ ಪ್ರಸ್ತಾಪವಾಗಿತ್ತು. ಈಗ ಆತ 'ಪಾವ್ ಗೋಲಿಸ್' ಎನ್ನುವ ಗೋಲಿ ಸೋಡಾ ಶಾಪ್ ಒಂದನ್ನು ನಡೆಸುತ್ತಿದ್ದ. ಆದರೆ, ಕೃಷ್ಣಪ್ರಸಾದನಿಗೆ ಆತನ ನೆನಪಾಗಿದ್ದೇ ಬೆಚ್ಚಿ ಬೀಳುವಂತಾಗಿತ್ತು. ಆತ ಗಣೇಶನನ್ನು ಮರೆತೇ ಇರಲಿಲ್ಲ. ಜೀವನವಿಡೀ ಪಾಪಪ್ರಜ್ಞೆ ಕಾಡುವಂತೆ ಮಾಡಿದ್ದವನು ಅವನು.  ಕೃಷ್ಣಪ್ರಸಾದನ ಪಾಪಪ್ರಜ್ಞೆ ಕಳೆಯಿತೇ ಅಥವಾ ಗಣೇಶನಿಂದ ಅದು ಮತ್ತಷ್ಟು ಹೆಚ್ಚಿತೇ..? ಅದಕ್ಕೂ ಗೋಲಿ ಸೋಡಾಗೂ ಇರುವ ಸಂಬಂಧವೇನು..?


ದ್ರೋಹ : ಶೇಂದಿ ತೆಗೆಯುವುದು ಸಂಕಪ್ಪನ ಕುಟುಂಬದಲ್ಲಿ ತಲತಲಾಂತರದಿಂದ ಬಂದ ಉದ್ಯೋಗ.ತಂದೆಗೆ ವಯಸ್ಸಾದ ನಂತರ ಸಂಕಪ್ಪ ಹಾಗೂ ಆತನ ಅಣ್ಣ ವೆಂಕಯ್ಯ ಆ ಉದ್ಯೋಗವನ್ನು ಮುಂದುವರಿಸಿದ್ದರು. ಸಾಯುವ ಮೊದಲು ಅಣ್ಣ-ತಮ್ಮಂದಿರಿಗೆ ಆಸ್ತಿ ಹಂಚುವಂತೆ ಮರಗಳನ್ನು ಹಂಚಿಬಿಟ್ಟಿದ್ದ ಆ ತಂದೆ. ಈಗ ಸಂಕಪ್ಪನ ಕಸುಬನ್ನು ರಮೇಶ ಮುಂದುವರಿಸಬೇಕಿತ್ತು. ಈಗ ತಾನು ತೆಗೆಯುವ ಮರಗಳಲ್ಲಿ ಸೇಂದಿ ಹೆಚ್ಚು ಬರುವುದಿಲ್ಲ ಎನ್ನುವುದಕ್ಕೆ ಯಾರೋ ತನಗೆ ದ್ರೋಹ ಮಾಡುತ್ತಿದ್ದಾರೆ ಎಂಬ ಅನುಮಾನ ಅವನದ್ದು. ಅವನ ಅನುಮಾನ ನಿಜವೇ..? ಹಾಗಾದರೆ, ಆ ದ್ರೋಹಿಗಳು ಯಾರು..?


ಬಣ್ಣದ ಡಸ್ಟರ್ : ಪುರುಷೋತ್ತಮನ ತಾಯಿ ಟೈಲರ್ ಆಗಿದ್ದವರು. ಶಾಲೆಯಲ್ಲಿ ಮೇಷ್ಟ್ರು ಡಸ್ಟರ್ ಬೇಕಿದ್ದರೆ ಆತನಿಗೇ ಹೇಳುತ್ತಿದ್ದರು. ಆದರೆ, ಅದೊಂದು ದಿನ ಅನ್ಯಮನಸ್ಕತೆಯಿಂದ ಶಾಲೆಯಲ್ಲಿ ಕೂತಿದ್ದವನಿಗೆ ಏನೋ ಹೊಳೆದಿತ್ತು. ಶಾಲೆಯಲ್ಲಿ ಅಮ್ಮ ಹೊಲಿದು ಕೊಟ್ಟಿದ್ದ ಎಲ್ಲಾ ಡಸ್ಟರ್ ಗಳನ್ನು ತಂದು ಮನೆಯಲ್ಲಿ ಹೊಲಿಗೆ ಬಿಚ್ಚುತ್ತಿದ್ದವನ ಹಿಂದಿನ ಆಲೋಚನೆ ಏನಿತ್ತು..?


ಅತೀತಭವ : ಶೀರ್ಷಿಕೆಯಿಂದಲೇ ಸೆಳೆದ ಕಥೆ ಇದು. ಯೋಗಿಂದ್ರನಿಗೆ 'ಸಾಯಿ' ಎಂದು ಕರೆದಾಗಲೆಲ್ಲಾ ತನ್ನನ್ನೇ ಕರೆದಂತೆನಿಸಿ ಅವರತ್ತ ನೋಡುತ್ತಿದ್ದ. ಇದೊಂದು ವಿಭಿನ್ನ ಅನುಭವ ಅವನಿಗೆ. ಬ್ಯಾಂಕಿನ ಉದ್ಯೋಗದಲ್ಲಿದ್ದವನು ಈಗ ತೆಲುಗು ಮಾತನಾಡುತ್ತಿದ್ದ ರಾಜಮಂಡ್ರಿಗೆ ಬಂದಿದ್ದವನಿಗೆ ಮಾತ್ರ ತೆಲುಗು ಬರುತ್ತಿರಲಿಲ್ಲ. ಆ ಊರಿನಲ್ಲಿ ತನ್ನ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಇದ್ದ ಏಕೈಕ ಜೀವ ಬ್ಯಾಂಕಿನ ಜವಾನ ಮಹಾಂತೇಶ. ಮಹಾಂತೇಶನ ಸಹಾಯದಿಂದ ತನ್ನ ಆಲೋಚನೆಯ ಹಿಂದಿನ ಮರ್ಮವನ್ನು ಕಂಡುಹಿಡಿಯಲು ಹೊರಟವನಿಗೆ ಸಿಕ್ಕ ಗತದ ಅನುಭವವೇನು..?


ಶರ್ಮಿಷ್ಠಾ : ಅಂತಸ್ತಿನಲ್ಲಿ ಎಲ್ಲರ ಸರಿಸಮಾನವಾಗಿರದ ಶರ್ಮಿಷ್ಠಾಳಲ್ಲಿ ಚಿಕ್ಕಂದಿನಲ್ಲಿ ಮನಸ್ಸಿನಲ್ಲಿದ್ದ ಗುರಿ ಒಂದೇ.. ತಾನು ದುಡಿದು ತನ್ನ ಕಾಲ ಮೇಲೆ ನಿಂತು ಸ್ವತಂತ್ರವಾಗಿ ತಲೆ ಎತ್ತಿ ಬದುಕಬೇಕು. ಹಾಗೆಯೇ ಬದುಕುತ್ತಿದ್ದವಳಿಗೆ ವಿವಾಹದ ಕುರಿತ ಸ್ಪಷ್ಟ ಕನಸೇ ಇರಲಿಲ್ಲ. ಆದರೆ, ಅವಳ ಬದುಕು ಬದಲಾಗಿತ್ತು. ಈಗ ಮನೆಗೆ ಬರಲಿದ್ದ ತನ್ನ ಗೆಳತಿ ಕೌಸ್ತುಬಾಳ ದೆಸೆಯಿಂದ ಹಿಂದಿನದೆಲ್ಲವೂ ನೆನಪಾಗುತ್ತಲಿತ್ತು. ಅಂತಹಾ ಸಂದರ್ಭವನ್ನು ಆಕೆ ಹೇಗೆ ನಿಭಾಯಿಸಿದಳು..?

"ಒಂದು ಬೇಕಾದರೆ ಒಂದನ್ನು ಕಳೆದುಕೊಳ್ಳಲೇಬೇಕು. ನನ್ನ ಬದುಕು ನನ್ನದು." ಎನ್ನುವ ಶರ್ಮಿಷ್ಠಾ ಮಾತು ಅದೆಷ್ಟು ಸತ್ಯವಲ್ಲವಾ ಎಂದೆನಿಸಿತು.


ಗೊರಬು : ಶಂಕರ ಮದುವೆಯಾದ ಹೊಸತರಲ್ಲಿ 10 ವರ್ಷದ ಹಿಂದೆ ಕೊಂಡು ತಂದಿದ್ದ ಗೊರಬು ಅದು. ಆತ ಅದನ್ನು ಬಿಟ್ಟು ಮತ್ತಾವುದನ್ನೂ ಬಳಸುತ್ತಿದ್ದನ್ನು ಪತ್ನಿ ಚಂದ್ರಮತಿಯೂ ನೋಡಿರಲಿಲ್ಲ. ಅಷ್ಟಕ್ಕೂ ಶಂಕರನಿಗೆ ಆ ಗೊರಬಿನ ಮೇಲೆ ಇದ್ದ ವ್ಯಾಮೋಹ ಎಂತಹದು..? ಈಗ ಆ ಕಳೆದು ಹೋಗಿದ್ದ ಗೊರಬು ಮತ್ತೆ ಸಿಕ್ಕಿತೇ..?


ಹಗಲುಗನಸು : ನೀಲಿಮಾ ಹಾಗೂ ಪ್ರತೀಕ್ಷಾರಿಗೆ ಮೊದಲಿನಷ್ಟು ಸಮಯವಿಲ್ಲದಿದ್ದರೂ.. ಈಗಲೂ ಏನಾದರೂ ವಿಶೇಷ ವಿಚಾರಗಳಿದ್ದರೆ ಹಂಚಿಕೊಳ್ಳುತ್ತಿದ್ದರು. ಹಾಗೆ ಪ್ರತೀಕ್ಷಾಳಿಂದ ಬಂದ ಕರೆಯೊಂದು ನೀಲಿಮಾಳಿಗೆ ಹೊಸ ವಿಚಾರವೊಂದನ್ನು ಮುಟ್ಟಿಸಿತ್ತು. ಅದೇ ಸುರಭಿಯ ಮದುವೆ. ಪೂರ್ತಿ ವಿಚಾರ ತಿಳಿಯದಿದ್ದರೂ ನೀಲಿಮಾಗಂತೂ ಕಾಲು ನೆಲದ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಹಗಲುಗನಸು ಕಾಣುತ್ತಲೇ ಇದ್ದವಳಿಗೆ ಸಂಜೆ ಬಂದ ಕರೆ ತಿಳಿಸಿದ್ದೇನು..?


 ಮನುಷ್ಯನ ಸಹಜ ಸ್ವಭಾವಗಳನ್ನು ಸೂಕ್ಷ್ಮತೆಯಲ್ಲಿ ಕಂಡು ಹಾಗೂ ಮನುಷ್ಯನ ಮನಸ್ಸಿನ ಭಾವನೆಗಳು, ತಾಕಲಾಟಗಳು, ತುಮುಲಗಳು.. ಮನುಷ್ಯರ ವರ್ತನೆಯ ಮೇಲೆ ಬೀರುವ ಪ್ರಭಾವ ಜೊತೆಗೆ ಬಾಲ್ಯದ ಹಾಗೂ ಎಂದು ಕೇಳಿದ ಘಟನೆಗಳು ಯಾವುದೋ ಸಮಯದಲ್ಲಿ ನೆನಪಾಗಿ ಪ್ರಭಾವಿಸುವ ಮನಸ್ಸಿನ ಸೂಕ್ಷ್ಮ ವಿಚಾರಗಳನ್ನು ಸೊಗಸಾದ ಕಥೆಗಳ ಮೂಲಕ ಪ್ರಸ್ತುತಪಡಿಸಿದ್ದಾರೆ ಅಶ್ವಿನಿ ಸುನಿಲ್. ಇಂತಹಾ ಇನ್ನು ಹಲವು ಕಥೆಗಳು ಹಾಗೂ ಸಾಹಿತ್ಯ ನಿಮ್ಮ ಲೇಖನಿಯಿಂದ ಹೊರಬರಲಿ ಎಂದು ಹಾರೈಸುವೆ. ಚೆಂದದ ಕಥಾ ಸಂಕಲನವನ್ನು ಇನ್ನೂ ಓದದಿದ್ದವರು ತಪ್ಪದೇ ಓದಿ ನೋಡಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ