ಶನಿವಾರ, ಏಪ್ರಿಲ್ 25, 2026

#ನಾನೂ ಬರೆಯುತ್ತೇನೆ (ಪುಸ್ತಕ ಯಾನ - 334)


ಪುಸ್ತಕದ ಶೀರ್ಷಿಕೆ : #ನಾನೂ ಬರೆಯುತ್ತೇನೆ

ಲೇಖಕರು : ಭಾರತಿ ಜಿ ಕಾರಂತ್ 

ಪ್ರಥಮ ಮುದ್ರಣ : 2024

ಪುಟಗಳು : 60

ಬೆಲೆ : 120 ರೂ.


ವೃತ್ತಿಯಲ್ಲಿ ಶಿಕ್ಷಕಿಯಾಗಿ, ವೃತ್ತಿಯ ಜೊತೆಗೆ ಹವ್ಯಾಸವನ್ನು ಮುಂದುವರಿಸಲು ಸಾಹಿತ್ಯದಲ್ಲಿ ಚೊಚ್ಚಲ ಕೃತಿಯನ್ನು ಪ್ರಕಟಿಸಿರುವ ಭಾರತಿ ಜಿ ಕಾರಂತ್ ಅವರ ಪುಸ್ತಕ #ನಾನೂ ಬರೆಯುತ್ತೇನೆ. ಮಾಮ್ಸ್ಪ್ರೆಸ್ಸೋ ಎಂಬ ವೇದಿಕೆ ವಿವಾಹಿತ ಮಹಿಳೆಯರ ಅದರಲ್ಲೂ ಮುಖ್ಯವಾಗಿ ತಾಯಂದಿರ ವೇದಿಕೆಯಲ್ಲಿ ಬರೆಯುತ್ತಿದ್ದ ಎಲ್ಲರಿಗೂ "#ನಾನೂ ಬರೆಯುತ್ತೇನೆ" ಎನ್ನುವ ಪದ ನೋಡಿಯೇ ತಮಗೂ ಸಾಹಿತ್ಯಕ್ಕೂ ಬೆಳೆದ ನಂಟಿನ ಅನುಭವ ಚೆಂದವಾಗಿ ಆಗುತ್ತದೆ. ಎಷ್ಟೋ ತಾಯಂದಿರ ಒಳಗೆ ಸುಪ್ತವಾಗಿ ಅಡಗಿದ್ದ ಬರವಣಿಗೆಯ ಕಲೆಗೆ ಒಂದು ಮೆರುಗು ನೀಡಿದ್ದ ಆನ್ಲೈನ್ ವೇದಿಕೆ ಇದು. ಲೇಖಕಿ ಕೂಡಾ ಬರೆಯಲು ಪ್ರಾರಂಭಿಸಿದ್ದು ಈ ವೇದಿಕೆಯಿಂದಲೇ.. ಮಾಮ್ಸ್ಪ್ರೆಸ್ಸೋದಲ್ಲಿ ಇವರ ಹಲವು ಬರಹಗಳನ್ನು ಓದಿದ್ದೆನಾದರೂ ಈಗ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವ ಅನುಭೂತಿಯೇ ವಿಭಿನ್ನ.


ಈ ಪುಸ್ತಕದಲ್ಲಿ ಕಥೆಗಳು, ಅನುಭವಗಳು, ಲಹರಿಗಳು ಎಲ್ಲವೂ ಮಿಳಿತವಾಗಿವೆ. ಒಟ್ಟು 13 ಪ್ರಸಂಗಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.


ಹಳ್ಳಿಯ ಸೊಬಗು : ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಅಲ್ಲಿಯ ಸೊಗಡನ್ನು 25 ವರ್ಷಗಳ ಕಾಲ ಹತ್ತಿರದಿಂದ ಕಂಡು ಸವಿದ ಅನುಭವದ ಸೊಗಸಾದ ಲಹರಿಯೊಂದು ಇಲ್ಲಿದೆ.


ಇಂಜಿನಿಯರ್ ವಸಂತಿ !! : ತಾಯಿ ಎಂಬ ಇಂಜಿನಿಯರ್ ಅನ್ನು ಇಲ್ಲಿ ಪರಿಚಯಿಸಿದ್ದಾರೆ. ಹಾಗೆಂದು, ಅವರ ತಾಯಿ ಇಂಜಿನಿಯರಿಂಗ್ ಪದವಿ ಪಡೆದವರಲ್ಲ. ಬದಲಾಗಿ ಬದುಕಿನ ಅನುಭವದ ಡಿಗ್ರಿ ಪಡೆದವರು. ಇಂಜಿನಿಯರಿಂಗ್ ಸಬ್ಜೆಕ್ಟ್ ಗಳನ್ನು ಓದಿ ಪಾಸ್ ಮಾಡಿಕೊಂಡು ಇಂಜಿನಿಯರ್ ಎಂದು ಕರೆಸಿಕೊಳ್ಳುವವರಿಗಿಂತ ವಿಭಿನ್ನವಾದ ಇಂಜಿನಿಯರ್ ಅಮ್ಮನನ್ನು ಇಲ್ಲಿ ಕಾಣಬಹುದಾಗಿದೆ. 


ನಮ್ಮ ಕಷ್ಟಕ್ಕಾಗದ ಮಕ್ಕಳೇಕೆ!!? : ಮಕ್ಕಳು ನಮ್ಮ ಕಷ್ಟಕ್ಕಾಗಲಿ ಎಂದು ಸ್ವಾರ್ಥದಿಂದ ನಾವು ಅವರನ್ನು ಹೆರದಿದ್ದರೂ.. ಹೆತ್ತವರ ಕಷ್ಟಕ್ಕೆ ಮಿಡಿಯದ ಮಕ್ಕಳನ್ನು ಕಂಡಾಗ ಇಂತಹ ಆಲೋಚನೆಯೊಂದು ಮೂಡದೇ ಹೋಗದು. ಅಷ್ಟಕ್ಕೂ.. ಲಕ್ಷ್ಮಿಗೆ ಹೀಗನ್ನಿಸಿದ ಪ್ರಸಂಗ ನಮಗೂ ಮನಕಲಕುತ್ತದೆ. ಆದರೆ ಲಕ್ಷ್ಮಿಗೆ ಹೀಗನ್ನಿಸಲು ಕಾರಣ ಆಕೆಯ ಮಕ್ಕಳಲ್ಲ. ಬದಲಾಗಿ ಆಕೆಯ ಅನುಭವದಲ್ಲಿ ಕಂಡ ಮಕ್ಕಳು. ಅದೇನೆಂದು ನೀವೇ ಓದಿ ನೋಡಿ. 


ಬಿಕ್ಕುತಿಹಳು ಯಾರೋ ನೀರೆ... : ಲಕ್ಷ್ಮೀನಾರಾಯಣ ಭಟ್ಟರ 'ಎಲ್ಲಿ ಜಾರಿತೋ ಮನವು' ಎಂಬ ಭಾವಗೀತೆ ಭಾವನಾ ಜೀವಿಗಳಿಗೆ ಬಹಳ ಹತ್ತಿರವಾದ ಭಾವಗೀತೆ. ಇದನ್ನು ಓದುವಾಗ ಮನ ಎಲ್ಲೆಲ್ಲಿಗೋ ಅಲೆದು ನಂತರ ಸೇರುವುದೆಲ್ಲಿಗೆ..? ನೀವೇ ನೋಡಿ. 


ಪುನರ್ಜನ್ಮ ನೀಡಿದ ಸ್ನೇಹಿತರು - ಸ್ನೇಹ ಅತಿ ಮಧುರ : ಕಾಲೇಜು ಕಲಿಯುವ ಹೊತ್ತಿನಲ್ಲಿಯೇ ದೊಡ್ಡ ದಾನ ಶೂರ ಕರ್ಣ ಅನ್ನಿಸಿಕೊಂಡಿದ್ದ ಕಥಾನಾಯಕ ಮೊದಲ ಪ್ರಾಮುಖ್ಯತೆ ನೀಡುತ್ತಿದ್ದದ್ದು ಗೆಳೆಯರಿಗೆ. ಎಲ್ಲರಿಗೂ ಒಳಿತನ್ನೇ ಬಯಸುತ್ತಾ ಸಹಾಯ ಮಾಡುತ್ತಿದ್ದವನ ಬದುಕಿನಲ್ಲಿ ಒದಗಿ ಬಂದ ಕಷ್ಟವೇನು..? ಸ್ನೇಹ ಅತಿ ಮಧುರ ಎಂದು ಅನಿಸಿದ್ದೇಕೆ ಓದಿ ನೋಡಿ. 


ಹೊಂದಾಣಿಕೆಯೇ ಜೀವನವಾಗದಿರಲಿ!! : ಹೆಣ್ಣುಮಕ್ಕಳಿಗೆ.. ಅದರಲ್ಲೂ ಮದುವೆಯಾದ ಸಂದರ್ಭದಲ್ಲಿ ಹಾಗೂ ಅದರ ನಂತರ ಹೇಳುವುದು ನೀನೇ ಹೊಂದಾಣಿಕೆ ಮಾಡಿಕೊಂಡು ಹೋಗು ಎನ್ನುವುದಾಗಿ. ಆದರೆ, ಹೊಂದಾಣಿಕೆಗೆ ತಮ್ಮತನವನ್ನೇ ಕಳೆದುಕೊಳ್ಳುವಷ್ಟು ಹೊಂದಿಕೊಳ್ಳುವುದು ಎಷ್ಟು ಸರಿ ಎಂಬ ಆಲೋಚನೆಯೊಂದಿಗೆ ಕಟ್ಟಿಕೊಟ್ಟಿರುವ ಬರಹ.


ಸಾರ್ವಜನಿಕರಲ್ಲಿ ಒಂದು ವಿನಂತಿ - ನಿಮ್ಮ ಮಕ್ಕಳು ದುಶ್ಚಟಗಳ ಮೊರೆ ಹೋಗದಂತೆ ನೋಡಿಕೊಳ್ಳಿ !! : ಶಿಕ್ಷಕಿಯೂ ಆಗಿರುವ ಲೇಖಕಿ ತಮ್ಮ ಮಕ್ಕಳ ಕುರಿತ ಕಾಳಜಿಯನ್ನಷ್ಟೇ ಅಲ್ಲದೆ, ಶಾಲೆಯಲ್ಲಿ ಎಲ್ಲಾ ಮಕ್ಕಳನ್ನೂ ಅಷ್ಟೇ ಕಾಳಜಿಯಿಂದ ನೋಡುತ್ತಾರೆ. ಅದೇ ಕಾಳಜಿಯಿಂದ ನಮ್ಮ ಮಕ್ಕಳನ್ನು ದುಶ್ಚಟಗಳಿಂದ ದೂರವಿರಿಸುತ್ತಾ.. ಇನ್ನೊಬ್ಬರ ಮಕ್ಕಳು ದಾರಿ ತಪ್ಪದಂತೆ ಪರೋಕ್ಷವಾಗಿ ನೋಡಿಕೊಳ್ಳೋಣ ಎಂಬ ಸಂದೇಶ ನೀಡಿರುವ ವಾಸ್ತವಕ್ಕೆ ಬಹಳ ಹೊಂದಿಕೆಯಾಗುವ, ಅತ್ಯವಶ್ಯಕವಾಗಿರುವ ಕಥೆ ಇಲ್ಲಿದೆ. 


ಹಾಟ್ ಬಾಕ್ಸ್ ನ ಸ್ವಗತ : ವಸ್ತುಗಳಿಗೂ ಮಾತು ಬಂದರೆ ಅವುಗಳ ಭಾವನೆ ಹೇಗಿರಬಹುದು..? ಅದನ್ನೇ ಹಾಟ್ ಬಾಕ್ಸ್ ನ ಮೂಲಕ ಹೇಳಿದ್ದಾರೆ. 


ನೋಕಿಯಾ ಡಬಲ್ ಒನ್ ಡಬಲ್ ಜೀರೋ (1100) : ಪತ್ರದ ಮೂಲಕ ಸಂವಹನ ನಡೆಯುತ್ತಿದ್ದ ಕಾಲದಿಂದ ಇಂದು ಸ್ಮಾರ್ಟ್ ಫೋನ್ ಯುಗದವರೆಗೂ ಎಲ್ಲವೂ ಬದಲಾಗುತ್ತಲೇ ಬಂದಿರುವ ಸಂದರ್ಭದಲ್ಲಿ.. ನೋಕಿಯಾ ಡಬಲ್ ಒನ್ ಡಬಲ್ ಜೀರೋ ಮೊಬೈಲ್ ಅನ್ನು ಮರೆಯಲು ಸಾಧ್ಯವೇ ಇಲ್ಲ. ಅದರ ನೆನಪಿನ ಲೋಕವೇ ಇಲ್ಲಿ ತೆರೆದುಕೊಳ್ಳುತ್ತದೆ. 


ಬಾಲಕಾರ್ಮಿಕ - ಶಿವು ಗೌಡ : ಎಷ್ಟೋ ಜನ ಬಾಲಕಾರ್ಮಿಕರಾಗಲು ಅವರ ಬವಣೆಗಳೇ ಕಾರಣ. ಆದರೆ, ಅಂತಹವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಸಹಕಾರ ದೊರೆತರೆ, ಅವರಲ್ಲಿರುವ ಪ್ರತಿಭೆಗೆ ಮನ್ನಣೆ ಸಿಕ್ಕರೆ, ಅವರು ಬದುಕಿನಲ್ಲಿ ಎಷ್ಟು ಎತ್ತರಕ್ಕೇರಬಲ್ಲರು ಎಂಬ ನೈಜ ಘಟನೆ ಇಲ್ಲಿದೆ. ಶಿವು ಇಂದ ಶಿವಕುಮಾರ್ ಗೌಡ ಆದ ಕಥನ ನಿಜಕ್ಕೂ ಸ್ಪೂರ್ತಿದಾಯಕ.


ಆಸ್ತಿ ಅಂತಸ್ತುಗಳಿಲ್ಲದ "ಆ ದಿನಗಳು".. : "ಸಂಪತ್ತಿಗೂ ಸಂತೋಷಕ್ಕೂ ಸಂಬಂಧವಿಲ್ಲ"ವೆಂದು ಬಹಳಷ್ಟು ಕಡೆ ಕೇಳಿರುತ್ತೇವೆ. ಸೂಕ್ಷ್ಮವಾಗಿ ಗಮನಿಸಿದರೆ ಅದು ನಮ್ಮ ಅನುಭವಕ್ಕೂ ಬರುತ್ತದೆ. ನಮ್ಮ ಬದುಕನ್ನೇ ತೆಗೆದುಕೊಂಡರೆ ಅದರ ಅವಲೋಕನವೂ ಇದನ್ನು ನಿಜವೆಂದೇ ಸಾಬೀತುಪಡಿಸುತ್ತದೆ. ಅಂತಹಾ ಸುಂದರ ಸರಮಾಲೆಯೊಂದು ಇಲ್ಲಿದೆ. 


ಕರಾವಳಿಯ ಕಲೆ "ಯಕ್ಷಗಾನ" : ಕರಾವಳಿ ಭಾಗದ ಸಾಂಪ್ರದಾಯಿಕ ಜಾನಪದ ಕಲೆಯಾದ ಯಕ್ಷಗಾನದ ಪರಿಚಯದ ಜೊತೆಜೊತೆಗೆ ಯಕ್ಷಗಾನದ ಹಲವು ಮಜಲುಗಳನ್ನು ಹಾಗೂ ಹಲವಾರು ಗೊತ್ತಿರದ ಸಂಗತಿಗಳನ್ನು ತೆರೆದಿಟ್ಟಿದ್ದಾರೆ ಇಲ್ಲಿ. 


ನನ್ನ ಬದುಕಿನ ಹಾಸ್ಯ ಪ್ರಸಂಗ ಪಂಚಿಂಗ್ ಪಜೀತಿ : ಮತ್ತೊಬ್ಬರನ್ನು ಹಾಸ್ಯ ಮಾಡುವುದಕ್ಕಿಂತ, ನಮ್ಮ ಕುರಿತು ನಾವೇ ಹಾಸ್ಯ ಮಾಡಿಕೊಳ್ಳುವುದು ಆರೋಗ್ಯಕರವೂ ಹೌದು. ಶಿಕ್ಷಕಿಯಾಗಿರುವ ಇವರು ಶಾಲೆಗೆ ಹೋಗುವ ಸಂದರ್ಭದಲ್ಲಿ ಹೇಗೆಲ್ಲಾ ಇರುತ್ತದೆ ಹಾಗೂ ಪಂಚಿಂಗ್ ಪ್ರಸಂಗ ಹೇಗಿತ್ತು ಎಂಬುದನ್ನು ನೀವೇ ಓದಿ ನೋಡಿ.


ಸರಳವಾಗಿ, ಸುಂದರವಾಗಿ ಕಟ್ಟಿಕೊಟ್ಟಿರುವ ಈ ಕೃತಿಯಿಂದ ಶುರುವಾಗಿರುವ ಇವರ ಸಾಹಿತ್ಯ ಪಯಣ ಮುಂದುವರೆದು ಒಳ್ಳೊಳ್ಳೆಯ ಕೃತಿಗಳು ಇವರ ಲೇಖನಿಯಿಂದ ಮೂಡಿ ಬರಲಿ ಎನ್ನುವ ಶುಭಹಾರೈಕೆ ನನ್ನದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ