ಶನಿವಾರ, ಏಪ್ರಿಲ್ 25, 2026

ಮಾನಿನಿಯ ಮನದ ಧ್ವನಿ

ಹೆಣ್ಣಿನ ಮನದಾಳವನ್ನು ಬೇರಾರೂ ಅಲ್ಲ.. ಸ್ವತಃ ಆಕೆಯೇ ಅರಿಯಲಾರಳೇನೋ..! ಎಷ್ಟೇ ಆಪ್ತತೆ ಇದ್ದರೂ.. ಆಕೆಯ ಒಳಗನ್ನು ಬಿಚ್ಚಿಟ್ಟು ನಿರಾಳವಾಗುವುದಕ್ಕಿಂತ ತ್ಯಾಗಮಯಿ ಎಂಬ ಪಟ್ಟಕ್ಕೆ ತಕ್ಕಂತೆ ತನ್ನ ಆಸೆಗಳನ್ನು ಅದುಮಿಕೊಂಡು ಬದುಕುವುದೇ ಹೆಚ್ಚು. ಆದರೆ, ಈ ವ್ಯಾಖ್ಯಾನ ಬದಲಾಗಬೇಕಿದೆ. ಬದಲಾಗುತ್ತಿರುವುದು ಸಕಾರಾತ್ಮಕ ಸೂಚನೆಯೂ ಹೌದು. ಇಲ್ಲವಾದಲ್ಲಿ ಅವಳ ಮಾನಸಿಕ ಸಮಸ್ಯೆಗಳ ಮೂಲವೇ ಅದಾಗಬಹುದು. ಶರಪಂಜರ ಕಾದಂಬರಿಯ ಕಾವೇರಿ ಇದಕ್ಕೊಂದು ಉತ್ತಮ ನಿದರ್ಶನವಾಗಬಲ್ಲಳು. ಅದರಾಚೆಗಿನ ಹಲವಾರು ನೋಟಗಳನ್ನು ನಾವಿಲ್ಲಿ ಕಾಣಬಹುದು.


**********************


ಸುಧಾ ಆಡುಕಳ ಅವರ ಬಕುಲದ ಬಾಗಿಲಿನಿಂದ ಓದಿದಾಗ ಅವುಗಳು ಮಹಿಳೆಯರ ಪಿಸುಮಾತುಗಳಲ್ಲ ಬದಲಿಗೆ ಮನದಾಳದ ಮಾತುಗಳು ಎನ್ನಿಸಿದ್ದವು. ಇವು ಹೆಣ್ಣುಮಕ್ಕಳು ಕೂಗಿ ಜಗತ್ತಿಗೆ ಹೇಳಬೇಕೆನಿಸುವ ಮಾತುಗಳು. ಬಕುಲದ ನಾಡಿನಿಂದ ಬಂದ ಲೇಖಕಿ ಎಲ್ಲಾ ಕಾಲದ ಹೆಣ್ಣು ಮಕ್ಕಳ ಅಂತರಂಗ ಹೊಕ್ಕಿ ಒಂದು ಬಾಗಿಲು ನಿರ್ಮಿಸಿ ಕೊಟ್ಟಿದ್ದಾರೆ.


ಹೆಣ್ಣು ಮಕ್ಕಳ ಅಂತರಂಗವನ್ನು ಮತ್ತೊಂದು ಆಯಾಮದಲ್ಲಿ ತೆಗೆದಿಡುವ ಪರಿ ಅನನ್ಯವಾದುದು. ಇವು ಬರೀ ನೆನ್ನೆಯ ರೂಪಕಗಳಲ್ಲ. ಬದಲಿಗೆ, ಎಂದಿಗೂ ಪ್ರಸ್ತುತವೆನಿಸುವ ದನಿಗಳು. 


ಹೂವೇ ತೊರೆದು ಹೋದ ಎಸಳೆಂದು ಎಲ್ಲೆಡೆ ಚಿತ್ರಿತಳಾದ ರಾಧೆಯೆಡೆಗೆ ಶ್ಯಾಮ ಬರುತ್ತಾನೆ. ಕೃತಕ ಸೌಂದರ್ಯದಿಂದ ಅಲಂಕೃತಳಾಗಿ ಪಾರ್ಥನನ್ನು ಸೆಳೆದಿದ್ದು ನಂತರ ತಾನು ತಾನಾಗಿಯೇ ಇರಲು ಕೃತಕ ಸೌಂದರ್ಯದ ತೆರೆ ಸರಿಸುವ ಮಣಿಪುರದ ರಾಣಿ ಚಿತ್ರಾ ಇದ್ದಾಳೆ.


ಸೀತೆಯಂತಹಾ ತಾಯಂದಿರಿದ್ದಾರೆ. ತನ್ನನ್ನು ಸುತ್ತಿದ್ದ ಭವದ ಬಂಧನವನ್ನು ತೊಡೆದ ಪುರಾಣದ ಮೊದಲ ಹೆಣ್ಣಾದ ಮಾಧವಿಯಂತೆ ಕೊನೆಗಾಲ ಬಯಸುವ ಎಷ್ಟೋ ಮಾನಿನಿಯರು ಕಾಣ ಸಿಗುತ್ತಾರೆ.


ಇನ್ನೂ ಕಾಯುತ್ತಲೇ ಇರುವ, ಹತ್ತಿರವಿದ್ದೂ ದೂರ ನಿಲ್ಲುವ ಅನಿವಾರ್ಯತೆಯಿಂದ ಕಾಯುತ್ತಲೇ ಇರುವ ಊರ್ಮಿಳೆಯರಿದ್ದಾರೆ. ಮಹಾರಾಣಿಯ ತೆರೆಯೊಳಗೆ ಮರೆಯಾದ ಶಾಂತಲೆಯಂತಹಾ ಅದ್ಭುತ ನರ್ತಕಿಯರು ಕಾಣೆಯಾಗುತ್ತಲೇ ಇದ್ದಾರೆ.


ತನುವಿನ, ಮನದ, ವಿಷಯದ, ಭವವನ್ನು ಗೆದ್ದ ಗೊರವನನ್ನೇ ಹುಡುಕುತ್ತಿರುವ ಅಕ್ಕನಿದ್ದಾಳೆ. ಎಲ್ಲ ಯುದ್ಧಗಳನ್ನು ಜಯಿಸಿದರೂ ಹೆಣ್ಣು ಜಯಿಸದೇ ಹೋಗುವ ಸಮರಕ್ಕೆ ಸಾಕ್ಷಿಯಾದ ನರ್ಮದಾ ಪುರುಕುತ್ಸಾನಿ ಸಿಗುತ್ತಾಳೆ. ಬಿಚ್ಚಿಡಲು ಆಗದ, ಮುಚ್ಚಿಡಲೂ ಆಗದ ಇಕ್ಕಟ್ಟಾದ ಕಿರುದಾರಿಯಲ್ಲಿ ಸತ್ಯದ ಗೆರೆಗಳಿವೆ.


ಅಹಲ್ಯೆಯಂತೆಯೇ ಕಲ್ಲಾದ ಸಾಲು ಸಾಲು ಅಹಲ್ಯೆಯರು ಕಾಣ ಸಿಗುತ್ತಾರೆ. ಬುದ್ಧನ ಜ್ಞಾನೋದಯದ ಹಿಂದೆ ಬೆಂದ ಯಶೋಧರೆ ಒಡಲ ಕುದಿತ ಮರುಕಳಿಸುತ್ತಲೇ ಇರುವುದು ಕಾಣುತ್ತದೆ. 


ನಿಮ್ಮೊಳಗಿನ ಲೋಕದಲ್ಲಿ ಉರಿದು ಹೋದ ಎಷ್ಟೋ ಚಂದ್ರರಿರಬಹುದು ಹುಡುಕಿ ಎನ್ನುವ ಗುರುದೇವರ ರವೀಂದ್ರರ ಚಂದ್ರ ಕಾಡುತ್ತಾಳೆ. ಹೊಸ ಬದಲಾವಣೆಗಾಗಿ ತನ್ನ ರಕ್ತ ಹರಿಸಿ ಮೊಲೆ ಕೊಯ್ದಿಟ್ಟ ನಂಗೇಲಿಯ ಬಲಿದಾನ ಕಣ್ಣ ಮುಂದೆ ಕಟ್ಟುತ್ತದೆ. 


ಬರೀ ಅಕ್ಷರಗಳಿಂದಲೇ ಪರಿಚಿತೆಯಾಗಿದ್ದ ಅಮೃತಾ ಪ್ರೀತಮ್ ಒಬ್ಬ ಮಹಿಳೆಯಾಗಿ, ಬದುಕಿನ ಲೇವಾದೇವಿಗೆ ಸತ್ಯದ ರಸೀದಿಯನ್ನು ಅಂಟಿಸಿಕೊಂಡವರಾಗಿ ಕಾಣುತ್ತಾರೆ. ಕೃಷ್ಣನ ಪ್ರೀತಿಯ ಆಳವನ್ನು ಕಂಡ ಕುಬ್ಜೆ ಮಾಲಿನಿ ಕಾಣುತ್ತಾಳೆ. 


ಶಚಿ ತೀರ್ಥದಲ್ಲಿ ಮುದ್ರೆ ಉಂಗುರ ಮಾತ್ರವಲ್ಲ ಪ್ರೀತಿಯನ್ನು ಸಹಾ ಕಳೆದುಕೊಂಡ ಶಕುಂತಲೆಯ ಮುಂದಿನ ಬದುಕಿದೆ. ದ್ರೌಪದಿಯ ವಿಷಾದವಿದೆ. ಗೆಲ್ಲಿಸಲೇಬೇಕು ಎಂದೆನಿಸುವಂತೆ ಕಾಡುವ ಅಂಬೆಯ ಬದುಕಿದೆ. ಜೀವನಪೂರ್ತಿ ಕಣ್ಣನ್ನು ಕಟ್ಟಿಕೊಂಡು ಕಣ್ಣರಿಯದಿದ್ದರೂ ಕರುಳರಿಯುವಂತೆ ಬಾಳಿದ ಗಾಂಧಾರಿಗೆ ಅರಿವಾದ ಸತ್ಯವಿದೆ. 


ಗುರು ರವೀಂದ್ರರ ಬಂಗಾಳದ ಹೆಣ್ಣೊಬ್ಬಳ ಕಥೆ ಇಂದಿಗೂ ಪ್ರಸ್ತುತವೆನಿಸುತ್ತದೆ. ಬಿಂದುಗಳನ್ನು ಸೇರಿಸ ಹೊರಟು ಬಿಂದುಗಳ  ಕಣ್ಮರೆಗೆ ಮೂಕ ಸಾಕ್ಷಿಯಾದ ಮೃಣಾಲ್ ನ ಕರುಣೆಯ ತೊರೆ ಬತ್ತದಿರಲಿ ಎಂದು ಆಶಿಸುತ್ತಾ ಕರುಣೆಯ ತೊರೆಯೊಳಗೆ ಮುಳುಗಿ ಹೋಗುವಾಗ ಜಗದ ಅನೇಕ ಹೆಣ್ಣುಗಳ ನೋವಿಗೆ ದನಿಯಾಗಿ ನಿಂತ ತನ್ನ ಬದುಕಿನ ದೌರ್ಜನ್ಯವನ್ನು ಬಯಲಿಗೆಳೆದ "ಮರುಭೂಮಿಯ ಹೂ" ವಾರಿಸ್ ಡೇರಿ ಸಿಗುತ್ತಾಳೆ. ಬಿಡುಗಡೆಯ ಕನಸು ಕಾಣುವ ಹೆಣ್ಣಿನ ಎಲ್ಲಾ ಗುಣಗಳಿಗೆ ರೂಪಕವಾಗಿ ನಿಲ್ಲುವ ನಂದಿನಿ ಕಾಡುತ್ತಾಳೆ. 


ಮತ್ತೆ ಮತ್ತೆ ಕಾಡುವ ಪಾತ್ರಗಳಾದ ಎಲ್ಲವೂ ತಣ್ಣಗೆ ಮಾತನಾಡುತ್ತಲೇ ಎದೆಯ ಬೇಗುದಿಯನ್ನು ತೆರೆದಿಡುತ್ತಾರೆ. ಬಹುಶಃ ಆ ಭಾವಗಳೆಲ್ಲವನ್ನೂ ಓದಿಯೇ ಅರಿಯಬೇಕು.


*******************


ಕವಿತೆಗಳು ಹಾಗೂ ಗದ್ಯಗಂಧಿಯ ಮೂಲಕ ಹೆಣ್ಮನದ ಅಂತರಂಗವನ್ನು ತೆರೆದಿಡುವಲ್ಲಿ ನನಗಿಷ್ಟವಾಗುವುದು ಎಂ. ಆರ್. ಕಮಲಾ ಮೇಡಂ ಅವರ ನೋಟ. ಗದ್ಯಗಂಧಿ ಹಾಗೂ #ಕ್ವಾರಂಟೈನ್ ಪುಸ್ತಕಗಳ ಆಯ್ದ ಸಾಲುಗಳು ಇಲ್ಲಿವೆ. ಇವು ಮಾನಿನಿಯರ ಮನದಾಳವನ್ನು ದರ್ಶಿಸುವಂತೆ ಮಾಡುತ್ತವೆ.


"ಅವಳ ನೆನಪುಗಳಿಗೆ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಿವೆ. ಕಾಲದಲ್ಲಿ ಮಾಸದ ಚೆಲುವಿದೆ. ವರ್ತಮಾನದ ಸಂಕಷ್ಟಗಳಿಗೆ ಸವಾಲೊಡುವ ಸತ್ವವಿದೆ. ಸೊಗಡಿನ ಒಂದು ಅವರೆ ಹೊಲ, ತೆಂಗಿನ ಗಿಡದ ಧ್ಯಾನ ಕಾಲಕ್ಕೆ ಉಸಿರು ತುಂಬಬಲ್ಲದು !"


ಹಳ್ಳಿಗಳಲ್ಲಿ ಕೆಲವು ಮನೆಗಳಲ್ಲಿ ಒಡೆದ ಬಳೆಗಳ ಚೂರು ಕಾಣಿಸಬಹುದು. ಆ ಬಳೆಗಳ ಚೂರಿನ ಹಿಂದೆ ನೋವಿನ ಕಥೆಗಳು ಇದ್ದರೂ.. ನೋವನ್ನು ಆಕರ್ಷಕವಾಗಿ ತೋರಿಸುವ ಜಾಣ್ಮೆ ಹಾಗೂ ಆ ಕಲಾತ್ಮಕತೆಯಲ್ಲಿಯೇ ತಮ್ಮ ನೋವನ್ನು ಮರೆಯುವ ಜೀವಗಳನ್ನು ತೋರುತ್ತಾರೆ. ಆ ಬಳೆಗಳ ಚೂರು ಹೇಗೆಲ್ಲಾ ಹೊಡೆದಿರಬಹುದು ಎಂದೂ ಹೇಳುತ್ತಾರೆ


"ಅಸಹಾಯಕತೆ, ಸಿಟ್ಟಿನಿಂದ ಅವಳೇ ಚೂರು ಮಾಡಿರಬಹುದು. ಅದ್ಯಾರೋ ಗಂಡನನ್ನು ಕಳೆದುಕೊಂಡಿರಬಹುದು. ಬಳೆಚೂರುಗಳ ಹಿಂದೆ ಬರೀ ನೋವಿನ ಕಥೆಗಳೇ. ಅದನ್ನು ಮರೆಸಲೆಂದೇ ಚೂರುಗಳ ಅಂಟಿಸಿ, ತೋರಣ ಮಾಡಿ ಬಾಗಿಲಲ್ಲಿ ತೂಗಿದಳು.


ಹಸಿರು ಬಳೆಯ ಚೂರೊಂದು ಈಗ ಅವಳ ಕಣ್ಣಲ್ಲಿ ಕೂತು ನಾಚಿಕೆಯಿಂದ ನುಡಿಯುತ್ತಿದೆ. 'ನೋಯಬೇಡ ಪ್ರೀತಿಯ ಅಪ್ಪುಗೆಗೂ ಒಡೆದ ಬಳೆಯ ಚೂರುಗಳಿವೆ. ಹುಡುಕಿ ಮಾಲೆ ಮಾಡಿ, ಅವನ್ನಷ್ಟೇ ಎಲ್ಲರ ಮನೆಯ ಬಾಗಿಲುಗಳಿಗೆ ತೋರಣ ಮಾಡಿ ತೂಗಿಬಿಡು., ಉಳಿದವನ್ನು ಮತ್ತೆಂದೂ ಮರಳದಂತೆ ದೂರ ಎಸೆದು ಬಿಡು!"


ಇದು ನೋವನ್ನು ದೂರವಿಟ್ಟು ಖುಷಿನಷ್ಟೇ ನೆನಪಿಸಿಕೊಳ್ಳುವ ಬಗೆಯೂ ಹೌದು. ಎಷ್ಟೋ ಬಾರಿ ನೋವುಗಳನ್ನೇ ನೆನಪಿಸಿಕೊಂಡು.. ಖುಷಿಗಳನ್ನು ಮರೆಯುವ ನಮಗೆ ಇದು ಅವಳ ಮೂಲಕ ಹೇಳುವ ಚೆಂದದ ಪಾಠವಾಗವಲ್ಲದು. 


"ಈಗಲೂ ಅವಳು ಮಳೆಗೆ ಖುಷಿಯಿಂದ ಕುಣಿವ ಹುಡುಗಿಯೇ! ಆದರೆ ಕೊಚ್ಚಿ ಹಾಕುವ ಮಳೆಗಾಲದಲ್ಲಿ ಮಾತ್ರ ಅವಳ ಬಾಲ್ಯದ ಪಾತ್ರ ಅಮ್ಮನ ಪಾತ್ರವಾಗಿ ಬದಲಾಗುತ್ತಿರುತ್ತದೆ !"


ಮಳೆಗಾಲ ಬಂದಾಗ ಈಗಲೂ ಮಳೆಯಲ್ಲಿ ಕುಣಿಯುವ ಖುಷಿಯನ್ನು ತಪ್ಪಿಸಿಕೊಳ್ಳುವವರು ಯಾರು..? ಕೆಲವು ಹೆಣ್ಣುಮಕ್ಕಳು ಆಸೆ ಇದ್ದರೂ ಯಾರೇನೆಂದುಕೊಳ್ಳುತ್ತಾರೋ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರು ಮುಕ್ತವಾಗಿ ಸಂಭ್ರಮಿಸುತ್ತಾರೆ. ಆದರೆ, ಕಾಲ ಹಾಗಿರುತ್ತದೆ.. ಎನ್ನುವವರಿಗೆ ಲೇಖಕಿಯ ಈ ಮಾತುಗಳು ಇಷ್ಟವಾಗಬಹುದು


---------------------------


ಕ್ವಾರಂಟೈನ್ ದಿನಗಳಲ್ಲಿ ಹೊರಗೆಲ್ಲೂ ಓಡಾಡಬಾರದು ಎನ್ನುವ ನಿಯಮ ವಿಧಿಸಿದಾಗ ಅವರೊಂದಿಗೆ ಇಲ್ಲದ ಅಮ್ಮನೊಂದಿಗೆ ಕಾಲ್ಪನಿಕ ಮಾತುಕತೆಯನ್ನು ಆರಂಭಿಸುವ ರೀತಿಯಲ್ಲಿ ಬರೆದಿರುವ ಮಾತುಗಳು, ಆಗಿನ ಕಾಲದ ಅಮ್ಮ ಇದ್ದದ್ದಕ್ಕೂ.. ಈಗಿನ ಕಾಲದ ಮಕ್ಕಳು ಇರುವುದಕ್ಕೂ ಇರುವ ವ್ಯತ್ಯಾಸ ತೋರುತ್ತಾರೆ.  

ಇಲ್ಲಿ ಸ್ತ್ರೀ ಸ್ವಾತಂತ್ರದ ಕುರಿತಾಗಿಯೂ ಮಾತು ಬಂದಾಗ ಅಮ್ಮನ ಮೂಲಕ ಹೇಳುವ ಮಾತು ಹೀಗಿದೆ. "ಹೆಣ್ಣುಮಕ್ಕಳು ಕ್ವಾರಂಟೈನ್ ಆಗಿದ್ದು ಈಗಲೇನೆ? ಎಷ್ಟು ಸಾವಿರ ವರ್ಷಗಳಾಯ್ತು ಕೊರೊನಾ ವೈರಸ್ ಹೆಣ್ಣುಮಕ್ಕಳಿಗೆ ಬಂದು, ಈಗ ಜನ ಮಾತಾಡ್ತಿದ್ದಾರೆ ಕಣೆ." ಎನ್ನುವ ಮಾತು ಎಷ್ಟು ನಿಜವಲ್ಲವಾ ಎನಿಸುತ್ತದೆ. 


"ಎರಡು ಪಾವು ಅನ್ನ ಬೇಯಿಸುತ್ತಿದ್ದವಳು ಮೂರು ಪಾವು ಹಾಕುತ್ತಿದ್ದಾಳೆ. ಬೆಕ್ಕು, ನಾಯಿಗಳ ಕೂಗು ಅವಳಿಗೀಗ ಕೇಳುತ್ತಿದೆ." ಎನ್ನುವ ಮಾತು ಕೊರೊನ ಕಾಲದಲ್ಲಿ ಮಹಿಳೆಯರು ರೂಡಿಸಿಕೊಂಡ ಮಾನವೀಯತೆಯ ಮುಖದರ್ಶನ ಮಾಡಿಸಿತು. ಈ ಸಾಲು ಕೇವಲ ಉದಾಹರಣೆಯಷ್ಟೇ.


"ಅವಳೆಂದೂ ತನ್ನ ಬದುಕನ್ನು ನೋವಿನ ಕೂಪ ಮಾಡಿಕೊಂಡಿಲ್ಲ. ತಲ್ಲಣ, ತಳಮಳಗಳನ್ನು ಕ್ರಿಯಾಶೀಲವಾಗಿ ನಿಭಾಯಿಸುವುದನ್ನು ಹುಟ್ಟಿನಿಂದಲೇ ಕಲಿತಿದ್ದಾಳೆ" ಎನ್ನುತ್ತಾ ಅವಳ/ತನ್ನದೇ ಮೂಲಕ ಇಂದಿನ ಜನತೆಯು ಇರಬೇಕಾದ ದಾರಿ ತೋರುತ್ತಾರೆ. ಇದು ಮಹಿಳೆಯರು ಬದುಕಬೇಕಾದ ಬಗೆಯೂ ಹೌದೆನ್ನಿಸಿತು.


********************


ಡಾ. ಪ್ರೇಮಲತಾ ಬಿ ಅವರ ಐದು ಬೆರಳುಗಳು ಕಥಾಸಂಕಲನದಲ್ಲಿ ಇಂತಹಾ ಕತೆಗಳನ್ನು ಕಾಣಬಹುದು.


ಈಶ್ವರಿ : ಶಾರದಮ್ಮನ ಮಗಳಾದ ಈಶ್ವರಿ ಹುಟ್ಟಿದಾಗಿನಿಂದ ಸೀಳು ಬಾಯಿಯ ಕುರೂಪಕ್ಕೆ ಹಾಗೂ ವಿಕಾರತೆಗೆ ಒಳಗಾಗಿದ್ದವಳು. ತಂದೆ ಮಗಳಿಗೆ ಬೇಕಾದ ಚಿಕಿತ್ಸೆ ಒದಗಿಸುವುದರ ಬದಲಾಗಿ ಹೆಂಡತಿಯ ಮೇಲೆ ಅಪವಾದ ಹೊರಿಸುತ್ತಾ.. ಮಗಳನ್ನು ಮುಂದಿಟ್ಟುಕೊಂಡು ದೂರವಾಗಿದ್ದ. ಸಮಾಜದಲ್ಲಿ, ಶಾಲೆಯಲ್ಲಿ ಹೀಗೆ ಎಲ್ಲೆಡೆಯಲ್ಲಿಯೂ ಅವಳ ರೂಪದಿಂದ ಆಕೆ ವಿಭಿನ್ನವಾಗಿ ಗುರುತಿಸುತ್ತಿದ್ದ ಹಾಗೆಯೇ ತಾತ್ಸರಕ್ಕೂ ಒಳಗಾಗುತ್ತಿದ್ದಳು. ಇಂತಹಾ ಈಶ್ವರಿ ಬೆಳೆದು ದೊಡ್ಡವಳಾಗಿ ಯೌವ್ವನಕ್ಕೆ ಕಾಲಿಟ್ಟ ದಿನಗಳ ಚಿತ್ರಣ ಇಲ್ಲಿದೆ. ಆಕೆಯ ವಿವಾಹ ಹಾಗೂ ಮನದ ತುಮುಲಗಳ ನಡುವೆ ಆಕೆಯ ಭಾವಗಳ ತಾಕಲಾಟದ ವ್ಯಥೆ ಇಲ್ಲಿ ಕಾಣುತ್ತದೆ. ಹೆಣ್ಣೊಬ್ಬಳ ಮನದ ತುಮುಲಕ್ಕೆ ಆರೋಗ್ಯದ ಕಾರಣವೂ ಸೇರಿದರೆ ಅನುಕಂಪದಿಂದ ನೋಡುವವರೇ ಹೆಚ್ಚು. ಅದನ್ನು ಮೀರಿ ನಿಂತ ಬಗೆ ಕಾಣುತ್ತದೆ. 


ತೆರೆದ ಬಾಗಿಲು : ಗ್ರೀಷ್ಮಾಳ ತಲೆಯಲ್ಲಿ ಸೆಕೆಂಡ್ ಹ್ಯಾಂಡ್ ಹುಡುಗಿ ಎನ್ನಿಸಿಕೊಳ್ಳುವ ಅವಮಾನಕ್ಕಿಂತ ಹೆಚ್ಚಿನ ಆತಂಕಗಳಿದ್ದುದಕ್ಕೆ ಕಾರಣವೂ ಇದ್ದವು. ಮಧ್ಯಮ ವರ್ಗದ ಮನೆಯಲ್ಲಿ ಹುಟ್ಟಿ ಸ್ನಾತಕೋತ್ತರ ಪದವಿ ಪಡೆದು ಕೆಲಸದಲ್ಲಿದ್ದರೂ ಮದುವೆಯ ಕುರಿತು ಆಕೆಗೂ ಕನಸುಗಳಿದ್ದವು. ಆದರೆ, ಮದುವೆಯಾದ ಕೆಲ ಸಮಯದಲ್ಲಿಯೇ ಕನಸು ಕಮರಿತ್ತು. ಮೊದಲ ಮದುವೆಯಲ್ಲಿಯೇ ಆಯ್ಕೆಗಳಿದ್ದರೂ ಈಗ ಎರಡನೇ ಮದುವೆಗೆ ಹೆಚ್ಚಿನ ಆಯ್ಕೆಗಳಿರಲಿಲ್ಲ. ಹಿಂದೆ ಆದದ್ದಕ್ಕಿಂತಲೂ.. ಹೆಚ್ಚಿನ ಗಂಭೀರ ತಪ್ಪುಗಳಾದರೆ ಎಂಬ ಆತಂಕ. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದವಳಿಗೆ ಎರಡನೇ ವಿವಾಹದ ಸಂದರ್ಭ ತೋರಿದ ದಾರಿಯ ಜೊತೆಗೆ ಹೆಣ್ಣು ತನ್ನದಲ್ಲದ ತಪ್ಪಿಗೆ ಹಿಂಜರಿಯುವಾಗ.. ಮನದಲ್ಲೇ ಕೊರಗುವಾಗ ಅದನ್ನು ಸಮಾಜ ಸರಿಪಡಿಸಬಹುದಾದ ದಾರಿ ಇಲ್ಲಿ ಕಾಣುತ್ತದೆ.


ಮಹಿಳೆಯರಾಗಿ ಮನದ ಮಾತು ಹೊರ ಹಾಕುವುದರ ಜೊತೆಗೆ ಮಹಿಳೆಯರ ಮೇಲೆ ಹೇರುವ ಬಿರುದುಗಳು ಅವರಿಗೆ ಹೊರೆಯಾಗದಂತೆ, ಸಹಕಾರ ನೀಡುವ ಪರಿಸರ ನಿರ್ಮಾಣವಾಗುವ ನಿಟ್ಟಿನತ್ತ ಹೆಜ್ಜೆ ಹಾಕೋಣ. ಇದರಿಂದ ಮನಸ್ಸು ತಿಳಿಯಾಗುತ್ತದೆ ಹಾಗೂ  ಹೇರಿಕೊಂಡ ಭಾರವೂ ಹಗುರಾಗುತ್ತದೆ. 


(ಆಕರಗಳು :


ಬಕುಲದ ಬಾಗಿಲಿನಿಂದ - ಸುಧಾ ಆಡುಕಳ

ಗದ್ಯಗಂಧಿ - ಎಂ. ಆರ್. ಕಮಲ 

#ಕ್ವಾರಂಟೈನ್ - ಎಂ. ಆರ್. ಕಮಲ

ಐದು ಬೆರಳುಗಳು - ಡಾ. ಪ್ರೇಮಲತಾ. ಬಿ )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ