ಶನಿವಾರ, ಏಪ್ರಿಲ್ 25, 2026

ಮಹಾಮಾತೆ ಕುನ್ತೀ ಕಂದೆರೆದಾಗ (ಪುಸ್ತಕ ಯಾನ - 346)


ಪುಸ್ತಕದ ಶೀರ್ಷಿಕೆ : ಮಹಾಮಾತೆ ಕುನ್ತೀ ಕಂದೆರೆದಾಗ 

ಲೇಖಕರು : ಡಾ||ಕೆ. ಎಸ್. ನಾರಾಯಣಾಚಾರ್ಯ

ಪ್ರಕಾಶಕರು : ಸಾಹಿತ್ಯ ಪ್ರಕಾಶನ

ಪ್ರಥಮ ಮುದ್ರಣ : 2003

ನಾಲ್ಕನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 168

ಬೆಲೆ : 160 ರೂ. 


' ಮಹಾಮಾತೆ ಕುನ್ತೀ ಕಂದೆರೆದಾಗ ' ಶೀರ್ಷಿಕೆಯನ್ನು ನೋಡಿದಾಗಲೇ ಇದು ಕುಂತಿಯ ಕಥಾನಕ ಎಂದು ಅರಿವಾಗುತ್ತದಾದರೂ.. ಇದು ವಿಶೇಷವಾಗಿ ಕುಂತಿಯ ಅಂತರಂಗದಿಂದ ನಿರೂಪಿತವಾದ ಪೌರಾಣಿಕ ಕಾದಂಬರಿ. ಹಾಗೆಂದು ಇಲ್ಲಿ ಆಕೆ ತನ್ನ ಕುರಿತ ಎಲ್ಲಿಯೂ ಸ್ವಮರುಕದಿಂದ ಹೇಳಿಕೊಂಡದ್ದು ಕಾಣಲಿಲ್ಲ. ಬದಲಾಗಿ, ಇಲ್ಲಿ ಮಹಾಭಾರತ ನಡೆದು ಬಂದ ಹಾದಿ ಹಾಗೂ ಹಾಗಾಗದೆ.. ಹೀಗಾಗಿದ್ದಿದ್ದರೆ ಎಂದು ಆಲೋಚಿಸುವ ಪರಿ ಬದಲಾಗಬಹುದಾಗಿದ್ದ ಕತೆಯ ಹರಹನ್ನೇ ಬದಲಾಯಿಸುತ್ತಿತ್ತೇನೋ..! 


ಕುಂತಿಯ ಬಾಲ್ಯದಿಂದ ಅಂತ್ಯದವರೆಗೂ ಕಟ್ಟಿಕೊಡುವ ನೋಟದಲ್ಲಿ ಇದುವರೆಗೂ ಕಾಣದ ಹಲವು ಹೊಳಹುಗಳನ್ನು ಕಾಣಬಹುದಾಗಿದೆ. ಮಹಾಭಾರತದಲ್ಲಿ ಗಟ್ಟಿಯಾಗಿ ನಿಂತು.. ಮನದ ದುಗುಡಗಳನ್ನು ಅನುಭವಿಸುತ್ತಿದ್ದರೂ.. ಕೃಷ್ಣನ ಹೊರತಾಗಿ ತನ್ನ ಅಂತರಂಗದ ನುಡಿಗಳನ್ನು ಕೆಲ ಬಾರಿ ವಿದುರನ ಜೊತೆಗೆ ಹಂಚಿಕೊಂಡದ್ದನ್ನಷ್ಟೇ ನೋಡಬಹುದು. 


ಹೆತ್ತ ತಾಯ್ತಂದೆಯರಿಂದ ದೂರವಾಗಿ ದತ್ತಕದ ರೂಪದಲ್ಲಿ ಅರಮನೆಗೆ ಹೋದರೂ ಅನುಭವಿಸಿದ ಅನಾಥಪ್ರಜ್ಞೆ ಅವಳಷ್ಟೇ ನಮ್ಮನ್ನೂ ಕಾಡುತ್ತದೆ. ಅದಕ್ಕೇ ಇರಬೇಕೇನೋ ತನ್ನ ಮಕ್ಕಳಿಗಿಂತಲೂ ಮಾದ್ರಿಯ ಮಕ್ಕಳನ್ನೇ ಹೆಚ್ಚು ಆದರಿಸಿ, ಪ್ರೀತಿ ತೋರಿ ಅವರಲ್ಲಿ ಆ ಅನಾಥಪ್ರಜ್ಞೆ ಮೂಡದಂತೆ ನೋಡಿಕೊಂಡದ್ದು. ತನ್ನ ಮಕ್ಕಳಲ್ಲಿಯೂ ಅದೇ ಭಾವ ಬೆಳೆಸಿದ್ದು.. ಅಗ್ನಿಪುತ್ರಿ ಪಾಂಚಾಲಿಗೆ ತಾಯಿಯ ಪ್ರೀತಿ, ಮಮತೆಯನ್ನು ತೋರಿದ್ದು... ಮಹಾಮಾತೆಯಾಗಲು ಇದಕ್ಕಿಂತಲೂ ಇನ್ನೇನು ಬೇಕಲ್ಲವೇ..?!


ಕರ್ಣನೆಂಬ ಪುತ್ರ ತನಗಿದ್ದರೂ.. ಕರುಳಬಳ್ಳಿಯ ಮೋಹವನ್ನೇ ತೊರೆದು ಬದುಕಬೇಕಾದ ಪರಿಸ್ಥಿತಿ ಬಂದಾಗ ತನ್ನ ತಾಯ್ತಂದೆಯರ ಮಾತಿಗೆ ಕಟ್ಟುಬಿದ್ದು ಪ್ರಾಪ್ತ ವಯಸ್ಸಿನಲ್ಲಿ ಸ್ವಯಂವರದ ಮೂಲಕ ವಿವಾಹವಾದದ್ದು. ಆದರೆ, ಗಂಡನ ಪ್ರೀತಿಯಾದರೂ ಸಂಪೂರ್ಣವಾಗಿ ದೊರೆಯಬಾರದಿತ್ತೇ..?! ಅಲ್ಲಿಯೂ ಗಂಡನ ಪ್ರೀತಿಗೆ ಮತ್ತೊಬ್ಬಳು ಪಾಲುದಾರಳು. ಅದಾದರೂ ಸರಿ.. ಮುಂದೆ ಬದುಕಿನಲ್ಲಿ ದೊರೆತ ಸುಖವಾದರೂ ಏನಿತ್ತು..? ಮಾದ್ರಿಯಾದರೂ ಸಹಗಮನ ಮಾಡಿದಳು. ವೈರಾಗ್ಯ, ಕರ್ತವ್ಯ ಎಲ್ಲದರ ಹೊಣೆ ಹೊತ್ತ ಕುಂತಿಗೆ ಅದು ಸಾಧ್ಯವಿತ್ತೇ..?


ಶಾಪವಾದ ವರವೇ.. ಮುಂದೊಮ್ಮೆ ಅವಳ ಪಾಲಿನ ಅಸಹಾಯಕತೆಯನ್ನು ಪರಿಹರಿಸಿತಾದರೂ.. ಆಕೆ ಮೊದಲಿಗೆ ಯಮನನ್ನೇ ಆಯ್ಕೆ ಮಾಡಿಕೊಂಡದ್ದು ಏಕೆ..? ಧರ್ಮ ಪರಿಪಾಲಕ, ನಿಷ್ಕಪಟವಾಗಿ ನ್ಯಾಯ ತೀರ್ಮಾನಿಸುವ ಯಮನ ಗುಣಗಳೇ ನೆನಪಿಗೆ ಬಂದರೂ ನರಕದ ಪರಿಪಾಲಕನೂ ಆಗಿದ್ದವನ ಗುಣ ಧರ್ಮರಾಯ ತನ್ನ ಅನುಜರಿಗೆ ಭೂಮಿಯ ಮೇಲೆ ನರಕದರ್ಶನ ಮಾಡಿಸುವಾಗ ನೆನಪಾದ ಪರಿಯ ಕುಂತಿಯ ಆಲೋಚನೆ ಕಾಡದೇ ಬಿಡುವುದಿಲ್ಲ. 


ದೂರ್ವಾಸರು ನೀಡಿದ್ದ ವರವನ್ನು ಹಿರಿಯರ ಜೊತೆ ಹಂಚಿಕೊಂಡಿದ್ದರೆ..!? ಅವರ ಮಾರ್ಗದರ್ಶನ ಹಾಗೂ ಎಚ್ಚರಿಕೆ ಸಿಕ್ಕಿದ್ದರೆ..!?


ಪಾಂಡುವೇ ಉಳಿದು.. ಅರಮನೆಯಲ್ಲಿಯೇ ಮತ್ತೆ ಅವರ ವಾಸವಿದ್ದಿದ್ದರೆ..!?


ಪಾಂಡುವಿನ ಮಗನಾಗಿ ಯುವರಾಜ ಪಟ್ಟ ಸಿಕ್ಕಿಯೂ ಖಾಂಡವ ವನಕ್ಕೆ ಹೋಗಬೇಕಾದ ಪರಿಸ್ಥಿತಿ ಬಾರದೇ ಇದ್ದಿದ್ದರೆ..!?


ಅರಗಿನ ಮನೆಯಲ್ಲಿ ಉಳಿಯದೇ ಸುಟ್ಟು ಸತ್ತೇ ಹೋಗಿದ್ದಿದ್ದರೆ..!?


ಕರ್ಣನೂ ಸೇರಿ ಆರು ಮಕ್ಕಳಿದ್ದು, ಕರ್ಣನ ಮನಸ್ಸು ದುರ್ಯೋಧನನ ಕಡೆ ವಾಲದೇ ಇದ್ದಿದ್ದರೆ..!? ಕರ್ಣನ ಮೇಲೆಯೂ ಆ ಮತ್ಸರ ಇದ್ದಿದ್ದರೆ..!?


ಹೀಗೆ ಹಲವಾರು ಸಾಧ್ಯಾಸಾಧ್ಯತೆಗಳ ಆಲೋಚನೆ ಕೇವಲ ಕುಂತಿಯ ಮೂಲಕ ನಮಗೂ ದಾಟುತ್ತಾ ಹೋಗುತ್ತವೆ.


ಧೃತರಾಷ್ಟ್ರನ ಬೌದ್ಧಿಕ ಕುರುಡುತನ, ಸ್ವಾರ್ಥಪೂರಿತ ಕುರುಡು ಪ್ರೀತಿ, ತನ್ನ ಮಕ್ಕಳಿಗೆ ಮಾತ್ರವೇ ಮೀಸಲಾಗಿದ್ದ ಗಾಂಧಾರಿಯ ಪ್ರೀತಿ ಹಾಗೂ ಪತನದ ದುಃಖ ಹೀಗೆ ಕುಂತಿಯ ನೋಟ ಎಲ್ಲರ ಮೇಲೆಯೂ ಹರಿಯುತ್ತದೆ. ಆದರೂ.. ತನ್ನ ಅಂತಿಮ ಯಾತ್ರೆಯನ್ನು ಅವರ ಜೊತೆಯಲ್ಲಿಯೇ ಮುಗಿಸಬೇಕಾದ ಸಂದರ್ಭ. ಅದನ್ನು ನಿರಾಕರಿಸಲಾಗದ ಅಥವಾ ಬಿಟ್ಟು ನಡೆಯಲಾಗದ ಆಲೋಚನೆಯ ಪರಿ ಕೇವಲ ಕುಂತಿಗೆ ಮಾತ್ರವಲ್ಲ ನಮ್ಮ ಜೀವನದಲ್ಲಿಯೂ ಬರುವ ಅಂತಹ ಕ್ಷಣಗಳ ನೆನಪು ಮಾಡಿಸುತ್ತದೆ.


"ಸಾವು ಬೇಕೆಂದಾಗ ಬರುವುದಿಲ್ಲ! ಬದುಕು ಕೇಳಿದಾಗ ಸಿಗುವುದೂ ಇಲ್ಲ!" ಎನ್ನುವ ನುಡಿ ಬದುಕು - ಸಾವಿನ ಪರಿಯುನ್ನು ಕುಂತಿಯ ಅಂತರಂಗದ ದರ್ಶನದ ಮೂಲಕ ನಮಗೂ ದರ್ಶನವಾಗುವಂತೆ ಮಾಡುತ್ತದೆ. 


"ಕೃಷ್ಣ! ನೀನೇ ಈ ದಡ! ನೀನೇ ನನ್ನ ಧೃಡ! ನನ್ನ ಎಲ್ಲ ಚಿಂತನೆಗಳೂ ಉಪಶಮನ ಆಗುವುದೇ ನಿನ್ನ ನೆನಪಿನಲ್ಲಿ!" ಎನ್ನುವ ಕುಂತಿಯ ಮಾತು ಆಪದ್ಭಾಂಧವ, ರಕ್ಷಕ ಕೃಷ್ಣನನ್ನು ನೆನೆಯುವ ಒಂದು ನೆನಪಷ್ಟೇ.. ಅಡಿಗಡಿಗೂ ಕೃಷ್ಣನನ್ನು ಸ್ಮರಿಸುವ ಹಲವಾರು ಪ್ರಸಂಗಗಳನ್ನು ನಾವಿಲ್ಲಿ ಕಾಣಬಹುದು.


ವಿದುರನ ಮೂಲಕ ಕೆಲ ಸಂದೇಹಗಳಿಗೆ ಉತ್ತರಗಳು ವ್ಯಾಖ್ಯಾನದ ರೂಪದಲ್ಲಿ ಸಿಗುತ್ತಿದ್ದರೆ.. ಕೆಲವು ಸಂಜಯನ ಮಾತಿನಲ್ಲಿ, ಹೆಚ್ಚಿನಂಶ ಕುಂತಿಯ ಅಂತರಂಗದಲ್ಲಿ ಹೀಗೆ ಲೇಖಕರು ವಿಭಿನ್ನ ನೋಟವನ್ನು ಕಟ್ಟಿಕೊಟ್ಟಿದ್ದಾರೆ. ವಿಭಿನ್ನ ನೋಟದ ಓದು ಈ ಕಾದಂಬರಿ. ಅಲ್ಲದೇ, ನಾನಿಲ್ಲಿ ಹೇಳಿರುವುದು ಸ್ವಲ್ಪದರಲ್ಲಿ ಸ್ವಲ್ಪವಷ್ಟೇ.. ಕೆ. ಎಸ್. ನಾರಾಯಣಾಚಾರ್ಯರ ಕೃತಿಗಳನ್ನು ಓದಿ ಸವಿದಷ್ಟು ಸವಿಯೇ.. ಆದರೆ, ಅದರ ಸಾರವನ್ನು ದಾಟಿಸುವುದು ಸುಲಭವಲ್ಲವೇ ಅಲ್ಲವೆಂಬುದು ನನ್ನ ಓದಿನ ಮಿತಿಯ ನನ್ನ ಅನುಭವ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ