ಶನಿವಾರ, ಏಪ್ರಿಲ್ 25, 2026

ಕತೆ ಕತೆ ಕಾರಣ (ಪುಸ್ತಕ ಯಾನ - 326)


ಪುಸ್ತಕದ ಶೀರ್ಷಿಕೆ : ಕತೆ ಕತೆ ಕಾರಣ

ಲೇಖಕರು : ವೈದೇಹಿ

ಪ್ರಕಾಶಕರು : ಅಕ್ಷರ ಪ್ರಕಾಶನ

ಪ್ರಥಮ ಮುದ್ರಣ : 2016

ಪುಟಗಳು : 148

ಬೆಲೆ : 145 ರೂ.


ಜಾನಕಿ ಶ್ರೀನಿವಾಸಮೂರ್ತಿಯವರು ವೈದೇಹಿ ಎಂಬ ತಮ್ಮ ಕಾವ್ಯನಾಮದಿಂದಲೇ ಪ್ರಖ್ಯಾತರು. ಫೆಬ್ರವರಿ 12, 1945ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ, ಕಥೆ, ಕಾದಂಬರಿಗಳನ್ನು ರಚಿಸಿದ್ದಾರೆ.


ಮರಗಿಡಬಳ್ಳಿ, ಅಂತರಂಗದ ಪುಟಗಳು, ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು, ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ಬಡಗಿ, ಹರಿವ ನೀರು (ಪ್ರಬಂಧ ಸಂಕಲನಗಳು), ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಸೇಡಿಯಾಪು ನೆನಪುಗಳು, ಮುಂತಾದ ಕೆಲ ಪುಟಗಳು (ಆತ್ಮಚರಿತ್ರ ನಿರೂಪಣೆ), ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ, ಬೆಳ್ಳಿಯ ಸಂಕೋಲೆಗಳು, ಮೂವರು ಅಕ್ಕತಂಗಿಯರು, ಸಂಗೀತ ಸಂವಾದ, ಸೂರ್ಯ ಕಿನ್ನರಿಯರು (ಅನುವಾದ), ಜಾತ್ರೆ (ಸ್ಕೃತಿಕಥನ) ಅವರ ಪ್ರಕಟಿತ ಕೃತಿಗಳು. 15 ಮಕ್ಕಳ ನಾಟಕಗಳು, ಮಕ್ಕಳ ಕಥೆಗಳ ಸಂಪಾದಿತ ಸಂಗ್ರಹ ಪ್ರಕಟಿಸಿದ್ದಾರೆ.


ಗೀತಾ ದೇಸಾಯಿ ದತ್ತಿ ನಿಧಿ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಎಂಕೆ.ಇಂದಿರಾ ಪ್ರಶಸ್ತಿ, ಎರಡು ಬಾರಿ ದೆಹಲಿಯ ’ಕಥಾ’ ಪ್ರಶಸ್ತಿ, ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಕರ್ಣಾಟಕ ರಾಜ್ಯದ ದಾನ ಚಿಂತಾಮಣಿ ಪ್ರಶಸ್ತಿ, ನೃಪತುಂಗ ಸಾಹಿತ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. 


******************************


"ಅಮ್ಮಚ್ಚಿ ಎಂಬ ನೆನಪು" ನಾನು ಓದಿದ ವೈದೇಹಿಯವರ ಮೊದಲ ಪುಸ್ತಕ. ಈ ಓದಿಗೆ ದಾರಿ ಮಾಡಿಕೊಟ್ಟದ್ದು ಇವರ ಅಮ್ಮಚ್ಚಿ ಎಂಬ ನೆನಪು ಕಥೆ ಆಧಾರಿತ ಚಲನಚಿತ್ರ. ಇದಾದ ನಂತರ ಓದಿದ ಎರಡನೇ ಪುಸ್ತಕವೇ 'ಕತೆ ಕತೆ ಕಾರಣ'. ಇವರ ಕಥೆಗಳು ಗಾಢವಾಗಿ ಆವರಿಸುವುದರ ಜೊತೆಗೆ ಸುತ್ತಮುತ್ತಲಿನ ವಿಚಾರಗಳ ಸೂಕ್ಷ್ಮತೆಯನ್ನು ಹಾಗೂ ಮಾನವೀಯ ಸಂಬಂಧಗಳನ್ನು ಕಟ್ಟಿಕೊಡುವ ಇವರ ಕಥನ ಶೈಲಿ ಹಾಗೂ ನಿರೂಪಣೆ ನಿಜಕ್ಕೂ ವಿಭಿನ್ನವೆನಿಸಿದೆ. ಈ ಕಥಾಸಂಕಲನದಲ್ಲಿ 12 ಕಥೆಗಳಿವೆ. ಇವುಗಳನ್ನು ಕತೆಗಳು ಎನ್ನುವುದಕ್ಕಿಂತ ಜೀವನಚಿತ್ರಗಳು ಎಂದರೆ ತಪ್ಪಾಗಲಾರದೇನೋ.. ಅದರಲ್ಲಿಯೂ ಹೆಣ್ಮನಗಳ, ಹೆಣ್ಣುಮಕ್ಕಳ ಜೀವನಶೈಲಿಯ ಸೂಕ್ಷ್ಮಚಿತ್ರಣ ಹಾಗೂ ಅಂತರಂಗದ ಪುಟಗಳು, ಹೇಳದೆಯೂ.. ಹೇಳುವಂತಹಾ ಹಲವು ಸೂಕ್ಷ್ಮಗಳು ಇಲ್ಲಿವೆ. 


 ಅಮುದ ಹೇಳಿದ ಕತೆ : ಇದು ಆಮುದ ಹೇಳಿದ ಕಥೆಯಾದರೂ.. ನಮಗೆ ನಿರೂಪಕಿ ಹೇಳುವ ಅಮುದಳ ಕಥೆ. ಅವರ ಮನೆಯ ಬಾಡಿಗೆಗಿದ್ದ ಅಮುದ ಅವರ ದೊಡ್ಡಪ್ಪನ ಕುರಿತಾಗಿ ಹೇಳಿದ್ದು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲಿನ ಸೈನ್ಯದಲ್ಲಿ ವಿಮಾನ ಪಡೆಯಲ್ಲಿ ಪೈಲೆಟ್ ಆಗಿದ್ದವರು. ಸೈನಿಕರೊಬ್ಬರ ಶೌರ್ಯದ ಕಥೆಯಾ ಇದು ಎಂದು ಓದುತ್ತಾ ಹೋದಂತೆ ಸೈನಿಕನೊಬ್ಬನ ಅಂತರಂಗದ ತುಮುಲಗಳು ಬಿಚ್ಚಿಡುತ್ತಾ ಹೋಗುವ ಪರಿ ಆಕೆಯ ದೊಡ್ಡಪ್ಪನ ಮೂಲಕ ಕಾಣಸಿಗುತ್ತದೆ. ಮಿಲಿಟರಿ ಸಾಹಸಗಳ ಕುರಿತಾಗಿ, ತಮ್ಮ ಧೈರ್ಯ, ಶೌರ್ಯ, ಸಾಹಸಗಳ ಕುರಿತಾಗಿ ಅವರು ಹೇಳಬಹುದು ಎಂಬ ಆಸೆಯಿಂದ ಹೋದವಳಿಗೆ ಅಲ್ಲಿ ದಕ್ಕಿದ್ದೇ ಬೇರೆ. ಸೈನಿಕನಿಗೆ ತನ್ನ ದೇಶಸೇವೆಯ ಹೆಮ್ಮೆ ಇರುತ್ತದೆಂಬುದು ಹೌದಾದರೂ.. ಇದು ತನ್ನಿಂದ ಘಟಿಸಿದ ಹಿಂಸೆಗೆ ಪ್ರಾಯಶ್ಚಿತ್ತ ಹುಡುಕುತ್ತಿರುವ ವಿಭಿನ್ನ ಕಥೆಯಾಗಿಯೂ ಕಾಣುತ್ತದೆ. ಅದು ಅಷ್ಟೇ ಆಗಿದಿದ್ದರೆ ಇಲ್ಲಿ ಕಥೆಯಾಗುತ್ತಿರಲಿಲ್ಲ. ದೊಡ್ಡಪ್ಪನನ್ನು ದೊಡ್ಡ ನಿರೀಕ್ಷೆಯೊಂದಿಗೆ ಭೇಟಿಯಾಗಿದ್ದ ಅಮುದಾಳಿಗೆ ಅವರ ತುಮುಲ ಅರಿವಾಗುವುದರೊಳಗಾಗಿ.. ಅವರ ಬದುಕು ಬದಲಾದ ಬಗೆ ಹೇಗೆ..?


 ಸ್ಥಳ ಪುರಾಣ : ಹೇಳುವುದನ್ನೇ ಪ್ರೀತಿಸುವ ಜಾಯಮಾನದ ಶ್ರೀಮತತ್ತೆಯ ಕಮೆಂಟರಿಯ ಮೂಲಕ ನಮಗೆ ಇಲ್ಲಿಯ ಸ್ಥಳ ಪುರಾಣ ಕಾಣಸಿಗುತ್ತದೆ. ಲೋಕಲ್ ಹಿಸ್ಟೋರಿಯನ್ ಎಂದು ಕರೆಯುತ್ತಿದ್ದರೂ.. ಆಕೆಗದರಿಂದ ಬೇಸರವಿರಲಿಲ್ಲ. ಊರು-ಮನೆಯ ಇತಿಹಾಸ ಅರಿತವಳು ಹೇಳಿದ ಸ್ಥಳಪುರಾಣ ಉತ್ಸವದಿಂದ ಶುರುವಾಗಿ ತೇರು, ಅದರ ನಿರ್ಮಾಣಕ್ಕೆ ಬೇಕಾದ ಮರ ಸಿಕ್ಕ ಬಗೆ, ಆ ಮರದಲ್ಲಿ ಕಂಡ 12 ಕುಣಿಕೆಗಳು.. ಹೀಗೆ ಒಂದರ ಹಿಂದೆ ಒಂದು ಕಥೆಗಳು ಅಲ್ಲಲ್ಲ ಸ್ಥಳ ಪುರಾಣಗಳು ಕಾಣಸಿಗುತ್ತಲೇ ಹೋಗುತ್ತವೆ.


ಮಂಜಮ್ಮಜ್ಜಿ ಹೋಯ್ತಂತೆ : ಮಂಜಮ್ಮಜ್ಜಿಯ ಕಥೆ ಓದಿದಾಗ ಮೊದಲಿಗೆ ನನಗೆ ನೆನಪಾಗಿದ್ದು ಕಾರಂತರ ಮೂಕಜ್ಜಿ. ಕಾರಂತರು ಅಲ್ಲಿ ಮೂಕಜ್ಜಿಯನ್ನು ಚಿತ್ರಿಸಿರುವ ಬಗೆಗೂ ಇಲ್ಲಿ ಮಂಜಮ್ಮಜ್ಜಿ ಚಿತ್ರಣವಾಗಿರುವ ಬಗೆಗೂ ಅಜಗಜಾಂತರ ವ್ಯತ್ಯಾಸವಿದೆ. ಅತೀಂದ್ರಿಯ ಶಕ್ತಿಯುಳ್ಳವಳಂತೆ, ಕಂಡವರಿಗೆಲ್ಲಾ ಏನನ್ನಾದರೂ ಹೇಳುತ್ತಿದ್ದ ಮಂಜಮ್ಮಜ್ಜಿಯನ್ನು ನಿಜವಾಗಿಯೂ ಯಕ್ಷಿ ಆವರಿಸಿತ್ತೇ..? ವೈವಾಹಿಕ ಜೀವನವನ್ನು ಒಂದೇ ದಿನದಲ್ಲಿ ಮುಗಿಸಿಕೊಂಡು ಬಂದವಳ ನಂತರದ ಬದುಕಾದರೂ ಹೇಗಿತ್ತು..? ಇಲ್ಲಿ ಮಂಜಮ್ಮಜ್ಜಿ ಹೋಯ್ತಂತೆ ಎಂಬುದಕ್ಕೂ ಹೋದರಂತೆ ಎನ್ನುವುದಕ್ಕೂಲೇಖಕಿ ಕಟ್ಟಿಕೊಟ್ಟಿರುವ ವಿಭಿನ್ನತೆಯನ್ನು ಗುರುತಿಸಬಹುದು. ವಯಸ್ಸಾದವರ ಸಾವನ್ನು, ಅದರಲ್ಲೂ ಯಾರೂ ಇಲ್ಲದವರ ಸಾವನ್ನು ಇತರರು ನೋಡುವ ಪರಿ ಕಾಣುತ್ತದೆ. ಮಾತಿನಿಂದಲೇ ಗೌರವ ಪಡೆದುಕೊಳ್ಳುವುದು ಹಾಗೂ ಕಳೆದುಕೊಳ್ಳುವುದು ಎರಡರ ಚಿತ್ರಣವೂ ಇಲ್ಲಿದೆ.


ವ್ಯಕ್ತಿ ಪುರಾಣ : ಇಲ್ಲಿ ವಿಶಿಷ್ಟ ವೃತ್ತಿಯೊಂದನ್ನು ಪಾಲಿಸುತ್ತಿದ್ದ 'ಪ್ರೇತ ಬ್ರಾಹ್ಮಣ'ರ ಉಲ್ಲೇಖ ಕಾಣಸಿಗುತ್ತದೆ. ತನ್ನ ಹೀನಾಯ ಸ್ಥಿತಿಯಿಂದ ಹೊರಬರಬೇಕೆಂದು ಸ್ವಪ್ರಯತ್ನದಿಂದ ಹೊರಬಂದು ಬೇರೆ ವ್ಯಕ್ತಿತ್ವವನ್ನೇ ರೂಢಿಸಿಕೊಂಡರು. ಆದರೆ, ಆತನನ್ನು ಮುಂಚಿನ ರೂಪಿನಲ್ಲಿ ಕಾಣುವ ರಾಮಚಂದ್ರ ಹಾಗೂ ಆತನ ಯಶಸ್ಸಿನ ರೂಪವನ್ನು ತೋರುವ ನೀಲಕಂಠ ಶಾಸ್ತ್ರಿಗಳು ಇಬ್ಬರೂ ಆತನ ಕುರಿತು ಹೇಳುತ್ತಾರೆ. ಎರಡೂ ಆತನ ಬದುಕಿನ ಚಿತ್ರಣಗಳನ್ನು ಕಟ್ಟಿಕೊಡುತ್ತವಾದರೂ.. ಇದೆಲ್ಲವನ್ನೂ ಕೇಳಿದವರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತದಾ..?! ಆ ಜಾಗದಲ್ಲಿ ನಾವೇ ಇದ್ದಿದ್ದರೆ ವ್ಯಕ್ತಿ ಪುರಾಣವನ್ನು ಯಾವ ರೀತಿ ಕಾಣುತ್ತಿದ್ದೆವು ಎಂಬುದನ್ನು ಯೋಚಿಸುವಂತೆ ಮಾಡಿದ ಕತೆ ಇದು.


ಬಾಕಿ ಇತಿಹಾಸ : ಜಾತಕ ನೋಡಿ ಭವಿಷ್ಯ ಹೇಳುವ ಸಂದರ್ಭದಲ್ಲಿ ತಮ್ಮ ಮನೆಯ ಕುಟುಂಬದ ಹಿರಿಯರೊಬ್ಬರ ಕಥೆಯನ್ನು ಹೇಳುವ ಪ್ರಸಂಗ. ಅದರಲ್ಲಿಯೂ ಜಾತಕದ್ದೇ ಪ್ರಮುಖ ಪಾತ್ರ. ಸನ್ಯಾಸಯೋಗವಿದ್ದ ಆತನಿಗೆ ಮದುವೆ ಮಾಡಿ ಸಂಸಾರಿಯನ್ನಾಗಿಸುತ್ತೇನೆ ಎಂದು ಹೊರಟ ಅವನ ಮಹಾ ಹಠವಾದಿ ಅಪ್ಪ. ಇದು ಶುದ್ಧೋದನ ಮಹಾರಾಜ ಹಾಗೂ ಬುದ್ಧನ ಕತಾರೂಪದಂತೆ ತೋರಿದರೂ.. ಇಲ್ಲಿ ಹಾಗಾಗುವುದಿಲ್ಲ. ಆತನಿಗೆ ಮದುವೆಯಾಯಿತು ಎಂಬುದು ಹೌದಾದರೂ.. ಆತನಿಗೆ ಸನ್ಯಾಸಯೋಗ ಕೈ ಹಿಡಿಯಿತಾ..? ಇದು ಮಹಾರಾಜರ ವಂಶವಲ್ಲವಾದ್ದರಿಂದ ಆತನ ವಿಧವೆ ಪತ್ನಿ ಅನುಭವಿಸಿದ ಪಾಡು ಎಷ್ಟಿತ್ತು ಎಂಬುದನ್ನು ಎತ್ತಿ ತೋರುವ ಕಥೆ. 


ಆ ಮನೆ ಈ ಮನೆ : ಗಂಡ-ಹೆಂಡತಿ ಮಗನಿದ್ದ ಕುಟುಂಬ ಈಗ ಹಳೆಯ ಮನೆಯಿಂದ ಹೊಸ ಮನೆಗೆ ಹೋಗುತ್ತಿದ್ದರು. ಸದ್ದು ಮಾಡುವ ಒಂದು ಕೀಟ ಮಗನ ಪಾಲಿಗೂ.. ಅಪ್ಪನ ಪಾಲಿಗೂ ಕಂಡದ್ದು ಹೇಗೆ..? ನೋಡುವ ನೋಟಕ್ಕೆ, ವಯಸ್ಸು ಹಾಗೂ ಪರಿಸ್ಥಿತಿಯ ಅಂತರದಿಂದ ಇರುವ ಆಲೋಚನೆಗೂ ವ್ಯತ್ಯಾಸ ಕಾಣುತ್ತದೆ. 


ಅವನಿ : ಒಂದು ಅಸಂಗತ ಕಥೆ ಇದು. ದೈತ್ಯಾಕೃತಿ ಹಾಗೂ ಕುಬ್ಜತೆಗಳ ಎರಡೂ ರೂಪಗಳನ್ನು ಕಾಣುವ ಅವನಿ. ಎರಡು ಪರಿಸ್ಥಿತಿಗಳಲ್ಲಿ ಕಂಡದ್ದೇನು..? ಗಲಿವರ ಹಾಗೂ ಆಲಿಸ್ ನ ಮಾಯಾಲೋಕ ನೆನಪಾದವು.


ವಲಸೆ ಪುರಾಣ : ವಯಸ್ಸಾದ ನಂತರ ಹಿರಿಯರ ಬದುಕಲ್ಲಿ.. ಅದರಲ್ಲೂ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣುವ ಪರಿಸ್ಥಿತಿ ಇದು. ಮಕ್ಕಳಿಗೆ ಚಿಕ್ಕಂದಿನಿಂದಲೂ ಮಹತ್ವಾಕಾಂಕ್ಷೆಗಳನ್ನು ರೂಪಿಸಿ ಬೆಳೆಸಿದ ಪರಿಣಾಮ ಈಗ ಅವರು ಹೆತ್ತವರ ಜೊತೆಯಲ್ಲಿರಲು ಕಷ್ಟ. ಅವರ ಭವಿಷ್ಯದ ಪರಿಸ್ಥಿತಿಗೆ ಹೊಂದಿಕೊಳ್ಳಲು ಇವರಿಗೆ ಕಷ್ಟ. ಇಂತಹದ್ದೇ ಸಂದರ್ಭದಲ್ಲಿ ವಲಸೆ ಪರ್ಯಾಯವಾಗುವುದಿಲ್ಲವಾದರೂ.. ಅದು ಮತ್ತಾರಿಗೋ ಆಸರೆಯೂ ಆಗಬಲ್ಲದು ಎಂದು ತೋರುವ ಮಾರ್ಮಿಕ ಕತೆ.


ಆ ರಾತ್ರಿ : ರೈಲಿನ ರಾತ್ರಿ ಪ್ರಯಾಣದ ಒಂಟಿತನವನ್ನು ಹೆಣ್ಣುಮಕ್ಕಳು ನೆನೆಸಿಕೊಂಡರೆ ಆ ಪರಿಸ್ಥಿತಿಯ ಆತಂಕದ ಊಹೆ ಮಾಡಿಕೊಳ್ಳಬಹುದು. ಇಲ್ಲಿ ಅಂತಹದ್ದೇನೋ ಘಟಿಸುತ್ತದೆ ಎಂದೇ ಕಥೆ ಓದಿಸಿಕೊಂಡು ಹೋದರೂ.. ವಿಶೇಷ ಘಟಿಸುವುದು ನಡೆಯಲ್ಲಲ್ಲ. ಬದಲಿಗೆ ಆಲೋಚನೆಯಲ್ಲಿ. ಕಥೆಯನ್ನು ಓದುತ್ತಲೇ ಆ ಹೆಣ್ಣುಮಗಳ ಆತಂಕ ನಮ್ಮದೂ ಆಗಿ ಹೋಗುತ್ತದೆ. ಅಂತಹದ್ದೇ ಆಲೋಚನೆ ನಮಗೂ ಬರುತ್ತದೆ ಹಾಗೂ ಅಂತಹದ್ದೇ ಆಲೋಚನೆಯನ್ನು ನಾವು ಬದಲಿಸಿಕೊಳ್ಳುವಂತಹಾ ವಿಶೇಷತೆಯೂ ಘಟಿಸುತ್ತದೆ. 


ಧರ್ಮಸೂಕ್ಷ್ಮ ಪುರಾಣ : ಕೆಲವೊಂದು ಘಟನೆಗಳನ್ನು ಆಪ್ತರಲ್ಲಿ ಅದರಲ್ಲಿಯೂ ಸಂಗಾತಿಗಳಲ್ಲಿ ಹಂಚಿಕೊಳ್ಳಲು ತೊಳಲಾಡುತ್ತಿರುವಾಗ ಒಬ್ಬರ ಮನಸ್ಸಿನಲ್ಲಿ ಸರಿ-ತಪ್ಪುಗಳ ತುಲನೆ ನಡೆಯುತ್ತಿದ್ದರೆ.. ಮತ್ತೊಬ್ಬರ ಮನಸ್ಸಿನಲ್ಲಿ ಅನುಮಾನ ಹಾಗೂ ಆತಂಕ. ಇದು ಒಂದು ರೀತಿಯ ತೊಳಲಾಟವಾದರೆ.. ತಾನು ಮಾಡಿದ್ದು ಸರಿಯೋ..ತಪ್ಪೋ..! ಎಂಬ ಘಟನೆ ಮತ್ತೊಂದು ಧರ್ಮಸೂಕ್ಷ್ಮ. ಈ ಎರಡೂ ದುಗುಡಗಳು ಕಳೆದು ಬೆಳಕಾಯಿತಾ..?


ಆಖ್ಯಾನ ಪ್ರತ್ಯಾಖ್ಯಾನ : 28 ವರ್ಷ ಕಳೆದ ಮಗಳಿಗೆ ಬಂದ ನಾಲ್ಕೂ ಜಾತಕಗಳಲ್ಲಿ ಬಹಳ ಕಾಲದ ನಂತರ ಒಂದು ಹೊಂದುತ್ತಿತ್ತು. ಆದರೆ, ಆ ಜಾತಕದ ಹಿಂದೆ ಇದ್ದ ಕುಟುಂಬದ ಇತಿಹಾಸವನ್ನೂ ನೋಡಬೇಕಲ್ಲವಾ..?! ಹಾಗೆಯೇ ಆ ಕುಟುಂಬದ ಇತಿಹಾಸವನ್ನು ಹಾಗೂ ತಮ್ಮ ಹಿರಿಯರ ಇತಿಹಾಸವನ್ನು ತಳುಕು ಹಾಕಿಕೊಂಡ ಒಂದು ಪ್ರಸಂಗವನ್ನು ಹೇಳಿದ ನಂತರ ಏನಾಯ್ತು..? ಅಷ್ಟಕ್ಕೂ ಆ ಇತಿಹಾಸ ಬಿಚ್ಚಿಕೊಳ್ಳುವಾಗ ಸತ್ಯಕ್ಕಿದ್ದ ಜಯ, ಕಾಲ ಬದಲಾಗುತ್ತಿದ್ದಂತೆ ತನ್ನ ಗಟ್ಟಿತನವನ್ನು ಬದಲಿಸಿಕೊಂಡ ಚಿತ್ರಣವೂ ಕಾಣುತ್ತದೆ. 


ಕತೆ ಕತೆ ಕಾರಣ : ಸರಸೋತತ್ತೆಯ ಕಥಾ ಸರಪಳಿಗಳು ಒಂದಕ್ಕೊಂದು ಬೆಳೆಯುತ್ತಲೇ ಇದ್ದವು. ಆಕೆಗೆ ತನ್ನೊಳಗಿನ ಕಥೆಗಳನ್ನು ಹೊರ ಹಾಕಬೇಕಿತ್ತು. ಅದಕ್ಕೊಂದು ಕಾರಣ ಬೇಕಿತ್ತು. ತಾನು ಕಂಡದ್ದು, ಕೇಳಿದ್ದು ಎಲ್ಲವನ್ನು ಕತೆ ಕಟ್ಟಿ ಹೇಳುತ್ತಿದ್ದ ಆಕೆ ಈ ಕಥೆಯ ಜೀವಾಳ. ಇಲ್ಲಿನ ಕಥೆಗಳು ಮತ್ತಾರದ್ದೋ ಬದುಕುಗಳೇ.. ಹೀಗೆ ಕತೆ ಹೇಳುತ್ತಿದ್ದ ಸರಸೋತತ್ತೆ ಮುಂದೆ ದಂತಕತೆಯಾದದ್ದು ಹೇಗೆ ಓದಿ ನೋಡಿ.


 ಇಲ್ಲಿನ ಪ್ರತಿ ಕಥೆಗಳ ಶೀರ್ಷಿಕೆಗಳು ಕಥೆಯ ಒಂಚೂರು ಸುಳಿವನ್ನೂ ಬಿಟ್ಟು ಕೊಡುವುದಿಲ್ಲ. ಕಥೆಯ ಗಾಂಭೀರ್ಯತೆ ಶೀರ್ಷಿಕೆಗಳಿಗೂ ಇದೆ. ಕಥಾ ನಿರೂಪಣೆ ಹೆಚ್ಚು ಆವರಿಸಿಕೊಂಡಿತು. ಇಲ್ಲಿನ ಕಥೆಗಳು ಹುಟ್ಟಲು ಕಾರಣಗಳೇ ಬೇಕಿಲ್ಲವೆಂಬಂತೆ.. ಒಂದು ಪ್ರಸಂಗವೇ ಇನ್ನೊಂದು ಕಥೆಗೆ ಮುನ್ನುಡಿಯಾಗುವಂತೆ ಕಥೆಗಳೊಳಗಿನ ಉಪಕತೆಗಳು, ಇತಿಹಾಸ, ಪುರಾಣಗಳು.. ಆ ಕಥಾಪರಿಸರವನ್ನು ಕಣ್ಮುಂದೆ ಕಟ್ಟಿಕೊಟ್ಟಿರುವ ಲೇಖಕಿಯ ನೋಟ ಗಾಢವಾಗಿ ಕಾಡುತ್ತದೆ. 


 ಇಲ್ಲಿ ಲೇಖಕಿ ಮಾತ್ರವಲ್ಲ ಕಥೆಗಳು ಸಹಾ ಹಳೆ ಬೇರಿನ ಗಟ್ಟಿತನದೊಂದಿಗೆ ಅಂದಿನ ಹೆಣ್ಣುಮಕ್ಕಳನ್ನು ಇಂದಿನ ಹೆಣ್ಣುಮಕ್ಕಳ ಮೂಲಕ ತೋರುವ ಪರಿ ಹೆಚ್ಚೇ ಕಟ್ಟಿಹಾಕುತ್ತದೆ. ಇವರ ಉಳಿದ ಸಾಹಿತ್ಯವನ್ನೂ ಸವಿಯಬೇಕಿದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ