ಪುಸ್ತಕದ ಶೀರ್ಷಿಕೆ : ನೇಹಲ
ಲೇಖಕರು : ಡಾ. ಕೆ. ಎನ್. ಗಣೇಶಯ್ಯ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2010
ತೃತೀಯ ಮುದ್ರಣ : 2017 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 168
ಬೆಲೆ : 120 ರೂ.
ಡಾ. ಕೆ.ಎನ್ ಗಣೇಶಯ್ಯನವರ ಕಥೆಗಳು ಹಾಗೂ ಕಾದಂಬರಿಗಳ ಓದಿನ ರುಚಿಯೇ ವಿಭಿನ್ನ. ಇತಿಹಾಸವನ್ನು ಹಾಗೂ ಸತ್ಯವನ್ನು ವಿಭಿನ್ನವಾಗಿ ಹೀಗೂ ನೋಡಬಹುದೆಂದು ತೋರಿಸಿ ಕೊಡುವ ಕಥೆಗಳು. ಆಕರಗಳೊಂದಿಗೆ ಉಲ್ಲೇಖಿತವಾಗಿರುವುದು.. ಯೋಚನೆಗೆ ಹಚ್ಚುವಂತಹಾ ಕಥೆಗಳ ಮೂಲಕ ಈಗ ನಮ್ಮ ಓದಿಗೆ ಸಿಕ್ಕಿದೆ. ಜೊತೆಗೆ ಈ ಕಥೆಗಳ ಹುಟ್ಟು ಹಾಗೂ ಕಥಾವಸ್ತುವಿನ ಆಯ್ಕೆಯ ಕುರಿತಾಗಿಯೂ ಲೇಖಕರು ಬರೆಯುವುದು.. ಕಥೆಗಳ ಹುಡುಕಾಟದಲ್ಲಿರುವ ಯುವಲೇಖಕರಿಗೆ ಕಥಾವಸ್ತುಗಳ ಆಯ್ಕೆಯ ದಾರಿಯನ್ನು ತೋರುತ್ತದೆ. ಈ ಕಥಾಸಂಕಲನದಲ್ಲಿ ಒಟ್ಟು 8 ಕಥೆಗಳಿವೆ.
ಹರಿದಳಾ ಗೋದಾವರಿ ಅಂಡಮಾನಿಗೆ : ಇದು ಸ್ವಾತಂತ್ರ್ಯಪೂರ್ವದ ಸಮಯದ ಘಟನೆಯೊಂದನ್ನು ಒಳಗೊಂಡ ಕಥೆ. ಲೇಖಕರು ಮಗಳು ಪುಣ್ಯ 'ಗೋದಾವರಿ' ಎಂಬ ತೆಲುಗು ಸಿನಿಮಾ ನೋಡಿ ತಾನೂ ಆ ಚಿತ್ರದ ನಾಯಕಿಯಂತೆ ನದಿಯಗುಂಟ ತಿರುಗಾಡಬೇಕೆಂಬ ಆಸೆಗೆ ಅಲ್ಲಿ ಹೊರಟಿದ್ದವರು.. ಗೈಡ್ ನ ಮಾತುಗಳಲ್ಲಿ ಅಲ್ಲೂರಿ ಸೀತಾರಾಮರಾಜುವಿನ ಹೆಸರು ಕೇಳಿದ ತಕ್ಷಣ ಚುರುಕಾಗಿದ್ದರು. ನಮ್ಮಲ್ಲಿಯ ಸಂಗೊಳ್ಳಿ ರಾಯಣ್ಣ, ಕನ್ನೇಶ್ವರ ರಾಮರಂತೆ ಅಲ್ಲೂರಿ ಸೀತಾರಾಮರಾಜು ತೆಲುಗಿನವರ ಎದೆಯಲ್ಲಿ ಸ್ವಾತಂತ್ರ್ಯದ ವೀರ ಕಥೆಗಳನ್ನು ಭುಗಿಲಬ್ಬಿಸುವ ಹೆಸರು. ಬ್ರಿಟಿಷರ ದಬ್ಬಾಳಿಕೆಗೆ ಸಿಡಿದೆದ್ದು ಕಾಡುಜನರನ್ನು ಒಟ್ಟುಗೂಡಿಸಿ.. ಅವರೊಂದಿಗೆ ಸೇರಿ ಸ್ವಾತಂತ್ರ್ಯಕ್ಕಾಗಿ ಜೀವದ ಹಂಗಿಲ್ಲದೆ ಹೋರಾಡಿದವರು. ಕೊನೆಗೆ ಬ್ರಿಟಿಷರ ಕುತಂತ್ರಗಳಿಗೆ ಬಲಿಯಾದ ದೇಶಭಕ್ತ. ಅಲ್ಲಿ ಗೈಡ್ ತೋರಿಸಿದ್ದು ಹೆಂಚಿನ ಚಾವಣಿಯ ಪೊಲೀಸ್ ಠಾಣೆಯನ್ನು. ಆ ಗುಡಿಸಿಲ ಠಾಣೆಯನ್ನು ಸುಟ್ಟು ಹಾಕಲಾಗಿತ್ತು. ಆದರೆ, ಮತ್ತೆ ಸರ್ಕಾರದವರು ಮೊದಲಿನ ಸ್ಥಿತಿಗೆ ರಿಪೇರಿ ಮಾಡಿದ್ದರು. ಅದರ ಕುರಿತು ಹೆಚ್ಚಿನ ವಿಚಾರಗಳನ್ನು ಕೇಳಿದಾಗ ಗೊತ್ತಿಲ್ಲವೆಂದೇ ಹೇಳಿದವನ ಮಾತಿನಲ್ಲಿ ಇನ್ನೂ ಏನೋ ಉತ್ತರ ಕಂಡಂತಾದಾಗ ಅದರ ಹಿಂದೆ ಬಿದ್ದು ದೊರಕಿಸಿಕೊಂಡ ಮಾಹಿತಿ ಹಾಗೂ ಕಥೆಯೇ ಇದು. ಅಷ್ಟಕ್ಕೂ "ಹರಿದಳಾ ಗೋದಾವರಿ ಅಂಡಮಾನಿಗೆ" ಎಂಬುದರ ಅರ್ಥವೇನು ಓದಿನೋಡಿ.
ನೇಹಲ : ಮಾಧವಿ ಬೆಂಗಳೂರಿನಿಂದ ಮಲಯಾಬಾದಿಗೆ ಬಂದದ್ದೇ ಆ ಹಸುಗಳನ್ನು ನೋಡಲು. ಭಾರತದಲ್ಲಿನ ಗೋಶಾಲೆಗಳ ಸ್ಥಿತಿ-ಗತಿಗಳ ಮೇಲೆ ಅಧ್ಯಯನ ಕೈಗೊಂಡಿದ್ದವರು ರಾಯಚೂರು ತಲುಪಿ ಅಲ್ಲಿಗೆ ತಲುಪಿದ್ದರು. ರಾಯಚೂರಿನ ಗೆಜಿಟಿಯರ್ ನಲ್ಲಿ ಮಲಯಾಬಾದಿನ ಗೋಶಾಲೆಯ ಬಗ್ಗೆ ಓದಿದ್ದರೂ ಅಲ್ಲಿನ ವಿವರಗಳಿಂದ ತೃಪ್ತಿಯಾಗಿರಲಿಲ್ಲ. ಅಲ್ಲದೇ, ಮಲಯಾಬಾದಿನ ಗೋಶಾಲೆಯ ಸ್ಥಾಪನೆಯ ಬಗ್ಗೆ ಆಕೆಗೆ ತದ್ವಿರುದ್ಧವಾದ ಮಾಹಿತಿಗಳು ದೊರೆತಿದ್ದವು. ಅಷ್ಟಕ್ಕೂ ಆ ಮಾಹಿತಿಗಳೇನು ಹಾಗೂ ಆಕೆ ಕಂಡ ದೃಶ್ಯವೇನು..?
ಮಾಧವಿಗೆ ಅಲ್ಲಿ ಸಿಕ್ಕ ವ್ಯಕ್ತಿ ನಡೆದುಕೊಂಡ ನಡವಳಿಕೆಯಿಂದ ಆಕೆಗೆ ಯಾವೆಲ್ಲಾ ಅನುಭವವಾಯಿತು..? ಅಷ್ಟಕ್ಕೂ ಆ ವ್ಯಕ್ತಿ ಆ ಗುಡ್ಡದ ಮೇಲೆ ಏನು ಮಾಡುತ್ತಿದ್ದ..? ಅಲ್ಲದೆ ಮಾಧವಿ ತನಗೇ ತಿಳಿಯದೆ ಚರಿತ್ರೆಯ ಮಹತ್ತರ ರಹಸ್ಯವನ್ನು ಚಿತ್ರದಲ್ಲಿ ಸೆರೆಹಿಡಿದಿದ್ದರು. ಅದು ವಿಜಯನಗರದ ಚರಿತ್ರೆಯಲ್ಲಿನ ಒಂದು ಪ್ರಮುಖ ಘಟನೆಗೆ ಕನ್ನಡಿಯಾಗಿತ್ತು. ಕ್ರಿಸ್ತಶಕ ಸಾವಿರದ ನಾನೂರರ ಸಮಯದ ಆ ಘಟನೆಯಾದರೂ ಏನು..?
ಅಲ್ಲಿ ಸಿಕ್ಕ ಒಂದು ಅಸ್ಥಿಪಂಜರ ನೇಹಲಳದ್ದು ಎಂದು ಗುರುತಿಸಲಾಯಿತು. ಅಷ್ಟಕ್ಕೂ.. ಗೋಶಾಲೆ ಕುರಿತಾದ ಮಾಹಿತಿ ಅದರೊಂದಿಗೆ ತಳುಕಿ ಹಾಕಿಕೊಂಡಿರುವುದಾದರೂ ಹೇಗೆ..?
ದೇಹಾತ್ಮ : ಇದು ವಿಜ್ಞಾನಕ್ಕೆ ಸಂಬಂಧಿಸಿದ ಕಥೆ. 2018ರಲ್ಲಿ ಭಾರತದಿಂದ ಹೊರಟ ರಾಜಗುರು ಎಂದು ಕರೆಸಿಕೊಳ್ಳುತ್ತಿದ್ದ ಆಧ್ಯಾತ್ಮಿಕ ಗುರು ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಿದ್ದ ಆಶ್ರಮ ವಿಶ್ವಪ್ರಸಿದ್ಧಿಯಾಗಿತ್ತು. ರಾಜಗುರುವಿನ ನಿಜವಾದ ಹೆಸರು ಶಂಕರ್ ದೇವ್
ಈಗ ಸುಜಾನಾ ಎನ್ನುವವರು ಕೋರ್ಟ್ಗೆ ಒಂದು ದೂರಿತ್ತಿದ್ದರು. ರಾಜಗುರು ನಿಜವಾದ ರಾಜಗುರು ಅಲ್ಲವೆಂದು.
2022 ರಲ್ಲಿ ಚೀನಾಕ್ಕೆ ಭೇಟಿಯಿತ್ತು ಹಿಂತಿರುಗುತ್ತಿದ್ದ ರಾಜಗುರುವಿದ್ದ ವಿಮಾನ ಇನ್ನೇನು ಭೂಮಿಯನ್ನು ಮುಟ್ಟಬೇಕು ಎನ್ನುವಷ್ಟರಲ್ಲಿ ಸ್ಪೋಟ ಸಂಭವಿಸಿತ್ತು. ಆದರೆ, ಅಪಘಾತದ ವಿವರಗಳನ್ನು ಬಹಿರಂಗಗೊಳಿಸಿರಲಿಲ್ಲ.
ಈ ಘಟನೆಗೂ ಮೇರಿ ಸುಜಾನಾ ಎನ್ನುವವರು ಈಗ ಕೋರ್ಟ್ ಗೆ ಹೋಗಿದ್ದ ಕೇಸ್ ಗೂ ಇದ್ದ ಸಂಬಂಧವೇನು..?
ಪ್ರಪಂಚ ಕಂಡರಿಯದ ಒಂದು ವಿಚಿತ್ರ ಘಟನೆಯಂತೆ ಭಾಸವಾಗುವ ಕಥೆ ಇದು. ಇದಕ್ಕಿಂತ ಹೆಚ್ಚಿನ ವಿಚಾರಗಳನ್ನು ಬಿಚ್ಚಿಟ್ಟರೆ ಈ ಕಥೆಯ ಸ್ವಾರಸ್ಯವೇ ಕೆಡಬಹುದೇನೋ..
ಗ್ರಹಲೀಲಾ : ಖಗೋಳಶಾಸ್ತ್ರ ಹಾಗೂ ಗಣಿತದಲ್ಲಿ ಆಚಾರ್ಯರೆನಿಸಿಕೊಂಡಿರುವ ಭಾಸ್ಕರರ ಜನ್ಮಸ್ಥಳದಲ್ಲಿ ಅವರ ನೆನಪಿಗಾಗಿ ಗಣಿತ ಅಧ್ಯಯನ ಸಂಸ್ಥೆಯನ್ನು ನಿರ್ಮಿಸಲು ಹೊರಟಾಗ ಅವರ ಹುಟ್ಟೂರಿನ ಹುಡುಕಾಟ ನಡೆಯುತ್ತಿತ್ತು. ಭಾಸ್ಕರಾಚಾರ್ಯರ ಹುಟ್ಟೂರಾದ ವಿಜ್ಜಲವೀಡೆ ಎನ್ನುವ ಊರು-ಕೇರಿ ಅಥವಾ ಜಾನಪದ ಹಾಡುಗಳಲ್ಲಿ ಆ ಹೆಸರು ತಿಳಿದಿದ್ದರೆ ನಮಗೆ ತಿಳಿಸಿ ಎಂದು ವಿನಂತಿಸಿಕೊಳ್ಳುತ್ತಿದ್ದವರು ಗೋರೆ.
ಭಾಸ್ಕರಾಚಾರ್ಯರು ಎಂದರೆ ಎರಡನೇ ಭಾಸ್ಕರ. 'ಲೀಲಾವತಿ' ಎಂಬ ಗಣಿತ ಗ್ರಂಥದ ಕರ್ತೃ. ಲೀಲಾವತಿ ಎಂದಾಕ್ಷಣ ಭಾಸ್ಕರಾಚಾರ್ಯರು ನೆನಪಾಗುವುದರ ಜೊತೆಗೆ ಅದರ ಹಿಂದಿನ ಕಥೆಯೂ ನೆನಪಾಗುತ್ತದೆ. ಹೀಗೆ ಭಾಸ್ಕರಾಚಾರ್ಯರ ಜೀವನದ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಭಾಸ್ಕರರು ಹಾಗೂ ಪ್ರಿಯಂಸಖಿಯರ ಮಗಳೇ ಲೀಲಾವತಿ . ಲೀಲಾವತಿಯ ಮದುವೆಯ ಹಿಂದಿನ ಕಥೆ ಇಲ್ಲಿ ಬೇರೆಯದ್ದೇ ಸತ್ಯವನ್ನು ಹೇಳುತ್ತದೆ. ಭಾಸ್ಕರರು ಹಾಗೂ ಲೀಲಾವತಿಯರ ಬದುಕಿನ ಕಥೆ ಇಲ್ಲಿದೆ
ರಾಗ ಪಂಜರ : ಇದು ವಿಜಯ ವಿಠಲ ದೇವಾಲಯದ ಕಂಬಗಳಿಂದ ಹೊರಡುವ ಸಂಗೀತದ ಬಗೆಗಿನ ಕಥೆ. ಸಂಗೀತ ಸ್ವರಗಳ ಕಂಬಗಳಾಗಿದ್ದರೆ.. ಅಲ್ಲಿ ಏಳು ಕಂಬಗಳಿದ್ದಿರಬೇಕು. ಬದಲಿಗೆ ಅಲ್ಲಿರುವುದು 4, 8, 16 ಕಂಬದ ಗುಚ್ಛಗಳು ಹಾಗೂ ಮತ್ತೊಂದು ಅನುಮಾನವನ್ನು ಡಾಕ್ಟರ್ ಯಶೋಧಮ್ಮನವರ ಮುಂದಿಟ್ಟವರಿಗೆ ಅಲ್ಲಿ ದೊರೆತ ಉತ್ತರಗಳೇ ವಿಭಿನ್ನ. ಇದು ಕೇವಲ ಸಂಗೀತದ ಕುರಿತ ಹಾಗೂ ಸಂಗೀತದ ಕಂಬಗಳ ಕುರಿತ ಕಥೆ ಮಾತ್ರವಲ್ಲ. ಈ ಕಥೆಯಲ್ಲಿ ಕೃಷ್ಣದೇವರಾಯನನ್ನು ಮದುವೆಯಾದ ಗಜಪತಿಯ ಮಗಳು ಜಗನ್ಮೋಹಿನಿ ಹಾಗೂ ತಿಮ್ಮರಸುವೂ ಕಾಣಸಿಗುತ್ತಾರೆ. ಹಾಗಾದರೆ, ಅದಕ್ಕೂ.. ಈ ದೇಗುಲಕ್ಕೂ, ಸಂಗೀತ ಕಂಬಗಳಿಗೂ ಇರುವ ಕೊಂಡಿ ಏನು ಓದಿ ನೋಡಿ.
ನಿಷಿದ್ಧ ಬಂಧ: ಪ್ರೊಫೆಸರ್ ನರೇನ್ ಗಾಂವ್ಕರ್ ಅವರು ಎರಡು ದಿನಗಳಿಂದ ಕಾಣುತ್ತಿಲ್ಲವೆಂದು ತಕ್ಷಣ ಸಹಾಯ ಬೇಕೆಂದ ಸುದ್ದಿ ಅಮೆರಿಕಾದ ವಾಷಿಂಗ್ಟನ್ ಸಂಸ್ಥೆಯ ಡೈರೆಕ್ಟರ್, ಅಲ್ಲಿಂದ ಪೊಲೀಸರಿಗೆ ನಂತರ ಹಲವು ಜನರನ್ನು ತಕ್ಷಣವೇ ಎಚ್ಚರಿಸುತ್ತಾ ಅಮೆರಿಕದ ಮಿಲಿಟರಿ ಬೇಸ್ ನ ಅಧಿಕಾರಿಗಳು ಅದಾಗಲೇ ಅವರು ವಾಸವಿದ್ದ ಸಣ್ಣದ್ವೀಪದತ್ತ ಬಂದಾಗಿತ್ತು. ಪ್ರೊಫೆಸರ್ ನರೇನ್ ಗಾಂವ್ಕರ್ ಅವರು ವಾಷಿಂಗ್ಟನ್ ಸಂಸ್ಥೆಯಲ್ಲಿ ಸಂಶೋಧಕರಾಗಿದ್ದರು. ಶೆಲ್ಲಿ ಅವರ ಜೊತೆಗೆ ಸಂಶೋಧನೆ ಮಾಡುತ್ತಾ ಎರಡು ವರ್ಷದಿಂದ ಅವರಿಬ್ಬರೇ ಆ ದ್ವೀಪದಲ್ಲಿ ವಾಸವಾಗಿದ್ದರು. ಮನುಷ್ಯನಲ್ಲಿ ಕಾಣುವ ಸಂಘ ಜೀವನ, ಅದಕ್ಕಿಂತ ಮೊದಲೇ ಇರುವೆ, ಜೇನುನೊಣ, ಕಣಜಗಳಂತಹಾ ಕೀಟಗಳಲ್ಲಿ ವಿಕಾಸಗೊಂಡಿತ್ತು. ಆದರೆ, ಅದು ಅಂತಹಾ ಕೆಲವೇ ಜೀವಿಗಳಲ್ಲಿ ಏಕೆ ಮತ್ತು ಹೇಗೆ ವಿಕಾಸಗೊಂಡಿದೆ ಎಂಬುದರ ಜೊತೆಗೆ ಇರುವೆಗಳ ನಿಸ್ವಾರ್ಥ ಮತ್ತು ತ್ಯಾಗ ಜೀವನದ ಕುರಿತಾಗಿ ಸಂಶೋಧನೆ ನಡೆಸುತ್ತಿದ್ದರು. ಅವರು ಅಮೆರಿಕಾಗೆ ಹೋಗಿ ಬಂದ ಮಾರನೆಯ ದಿನವೇ ಅಲ್ಲಿಂದ ಕಾಣೆಯಾಗಿದ್ದರು. ಅಷ್ಟಕ್ಕೂ ಅವರೇ ಸಂಶೋಧನೆಗಾಗಿ ಹೋಗಿ ಕಾಣೆಯಾಗಿದ್ದರೇ ಅಥವಾ ಅಪಹರಣವೇ..? ನಿಷಿದ್ಧ ಬಂಧಕ್ಕೂ.. ಈ ಕಾಣೆಗೂ ಏನಾದರೂ ಸಂಬಂಧವಿದೆಯೇ..? ಪತ್ತೇದಾರಿ ಜಾಡಿನಲ್ಲಿ ಹೋದರೂ ವೈಜ್ಞಾನಿಕ ತಳಹದಿಯ ಮೇಲೆ ರಚನೆಯಾಗಿರುವ ಕಥೆ ಇದು.
ಜ್ಜಿನನಂ ಕಿತ್ತು ಶಿವನಂ ನಿಲಿಪೆವು : ಏಕಾಂತರಾಮಯ್ಯ ಆತನ ಕಾಲದ ಇತರೆ ಶಿವಭಕ್ತರಂತೆ ಬಸವಣ್ಣನಿಗೂ ಮುನ್ನ ಶಿವನನ್ನೇ ದೇವನೆಂದು ನಂಬಿದವರು. ಈಗ ಏಕಾಂತ ರಾಮಯ್ಯನವರ ಬದುಕಿನ ಪ್ರಬಂಧವೊಂದು ಆತನ ಪವಾಡದ ರಹಸ್ಯ ಎನ್ನುವುದಕ್ಕಿಂತ ಅಲ್ಲಿ ನಡೆದ ಸತ್ಯವನ್ನು ಬಯಲಾಗಿಸುವ ಪ್ರಯತ್ನದಲ್ಲಿತ್ತು. ಅದನ್ನು ಆತನ ಅನುಯಾಯಿಗಳು ಹೇಗೆ ಸ್ವೀಕರಿಸಿದರು..? ಅಷ್ಟಕ್ಕೂ ಆ ಘಟನೆ, ಪವಾಡ ಹಾಗೂ ಸತ್ಯಾಸತ್ಯತೆಯ ನಂಟೇನು..? ಅಷ್ಟಕ್ಕೂ ಇಲ್ಲಿ ದೇಗುಲ ಹಾಗೂ ಜೈನ ಬಸದಿಗಳ ಪ್ರಸ್ತಾಪವೇಕಿದೆ..? ಓದಿ ನೋಡಿ.
ಟಿಪ್ಪಣಿಗೊಂದು ಕಥೆ : ನಿಷಿದ್ಧ ಬಂಧ ಈ ಕಥೆಯ ಮೇಲೆ ನೇರವಾಗಲ್ಲದಿದ್ದರೂ.. ಪರಿಣಾಮವನ್ನಂತೂ ಬೀರಿದೆ. ಲೇಖಕರ ಕತೆಗಳಲ್ಲಿ ಸೃಷ್ಟಿಗೊಂಡಿರುವ ಪಾತ್ರಗಳಿಂದ ಪ್ರಭಾವಿತರಾಗಿ, ಸಂಪೂರ್ಣ ಸೋತು, ಅವು ಪ್ರತಿಬಿಂಬಿಸುವ ಧ್ಯೇಯಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲು ತೊಡಗಿದಾಗ ನಡೆಯಬಹುದಾದ ಅನಾಹುತಗಳನ್ನು ಯೋಚಿಸಿ ಕಟ್ಟಿಕೊಟ್ಟಿರುವ ಕತೆ ಇದು.ಈ ಕತೆಯ ನಂತರ ಲೇಖಕರು ಮಾಡಿರುವ ತೀರ್ಮಾನವೆಂದರೆ.. ಇನ್ನು ಮುಂದೆ ಅವರ ಕತೆಗಳಲ್ಲಿ ಆತ್ಮಹತ್ಯೆಯನ್ನು ದೂರವಿಡುವುದು. ಅದೇಕೆ..? ಇಲ್ಲಿನ ಕತೆ ಏನು..? ಓದಿ ನೋಡಿ.
ಕೆ. ಎನ್. ಗಣೇಶಯ್ಯನವರ ಕತೆಗಳ ಓದಿನ ಅನುಭವವೇ ವಿಭಿನ್ನ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ