ಶುಕ್ರವಾರ, ಏಪ್ರಿಲ್ 17, 2026

ಜೋಕಾಲಿ (ಪುಸ್ತಕ ಯಾನ - 228)


ಪುಸ್ತಕದ ಶೀರ್ಷಿಕೆ : ಜೋಕಾಲಿ

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ಪ್ರೇಮಸಾಯಿ ಪ್ರಕಾಶನ

ಪ್ರಥಮ ಮುದ್ರಣ : 2012

ಪುಟಗಳು : 192

ಬೆಲೆ : 90 ರೂ.


ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಬರುವಾಗ ಅದಕ್ಕೆ ಮತ್ತೊಬ್ಬರ ಮಾರ್ಗದರ್ಶನದ ಅವಶ್ಯಕತೆಯಷ್ಟೇ ಅವರ ನೈಪುಣ್ಯತೆ ಹಾಗೂ ಆಸಕ್ತಿಗಳೂ ಅತ್ಯವಶ್ಯಕ. ಆದರೆ, ಕೆಲವರಿಗೆ ತಮ್ಮ ಶಕ್ತಿಯ ಅರಿವಿರುವುದಿಲ್ಲ. ಜಾಂಬವಂತ ಹನುಮನಿಗೆ ತನ್ನ ಶಕ್ತಿಯನ್ನು ನೆನಪಿಸಿದಂತೆ ತಮ್ಮಲ್ಲಿರುವ ಶಕ್ತಿಯನ್ನು ಉದ್ದೀಪನಗೊಳಿಸಿಕೊಳ್ಳಲು ಯಾರಾದರೊಬ್ಬರ ಅವಶ್ಯಕತೆ ಇರುತ್ತದೆ. ಆ ರೀತಿ ಸ್ಪೂರ್ತಿಯಾಗುವವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮತ್ತೊಬ್ಬರ ಬದುಕಿನಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತಾರೆ. ಅಂತಹಾ ಸಂಬಂಧಗಳು ಬೆಳೆದಂತೆ ಅಷ್ಟೇ ಅಂತಃಕರಣದಿಂದ ಸ್ನೇಹ/ಗೌರವವನ್ನು ಪೋಷಿಸಿಕೊಂಡು ಹೋಗುವುದು ಇಬ್ಬರಿಗೂ ಸೇರಿದ್ದು. ಈ ಕಾದಂಬರಿ 'ಹೊಸ ದಿಗಂತ' ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಜನಪ್ರಿಯವಾಗಿತ್ತು.


ದಿವಾಕರನ ಪತ್ನಿ ಹಾಗೂ ವಿಕ್ಕಿಯ ತಾಯಿಯಾಗಿದ್ದ ಕುಸುಮಾ ಕೆಲಸಕ್ಕೆ ಹೋಗುತ್ತಾ ತನ್ನ ದುಡಿಮೆಯಿಂದ ತನ್ನ ಜೀವನವನ್ನು ಕಟ್ಟಿಕೊಂಡಿರುತ್ತಾಳೆ. ಪುಟ್ಟ ವಿಕ್ಕಿಯನ್ನು ನೋಡಿಕೊಳ್ಳಲು ಆಕೆಗೆ ಜಯಮ್ಮನ ಸಹಾಯ, ಸಹಕಾರ ಬೇಕಾಗಿತ್ತು. ಹಾಗೆಂದು, ಆಕೆ ಕೆಲಸಕ್ಕೆ ಹೋಗಲೇಬೇಕು ಎನ್ನುವ ಅನಿವಾರ್ಯತೆ ಏನಿರಲಿಲ್ಲ. 


ದಿವಾಕರನ ಕೆಲಸ ಸದಾ ಟೂರಿನಲ್ಲಿ ಇರುವಂತಹದ್ದು. ಜೊತೆಗೆ ಪತಿ-ಪತ್ನಿಯರಲ್ಲಿ ಹೇಳಿಕೊಳ್ಳುವಂತಹ ಸ್ನೇಹ ಸಾಮರಸ್ಯವಿರಲಿಲ್ಲವಾದ್ದರಿಂದ ಒಂಟಿತನಕ್ಕೆ ಮದ್ದಾಗಿ ಆಕೆ ಕೆಲಸವನ್ನು ಆಯ್ಕೆ ಮಾಡಿಕೊಂದಿದ್ದಳು. ಮಗುವಾದ ನಂತರವೂ ಆಕೆ ಕೆಲಸವನ್ನು ಬಿಡದೆ ತಾನು ಕೆಲಸಕ್ಕೆ ಹೋಗುತ್ತೇನೆಂಬ ನಿರ್ಧಾರ ಮಾಡಿದ್ದಳು. ಕಛೇರಿಯ ಕೆಲಸದಲ್ಲಿ ಆಕೆ ಭ್ರಷ್ಟಾಚಾರದ ವಿವಿಧ ಮುಖಗಳನ್ನು ನೋಡಿ ಬೇಸತ್ತಿದ್ದಳಾದರೂ.. ವಿಧಿ ಇಲ್ಲದೆ ತಾನು ತನ್ನಷ್ಟಕ್ಕೆ ಕೆಲಸ ಮುಂದುವರಿಸಿಕೊಂಡು ಹೋಗುತ್ತಿದ್ದಳು.


ಜಯಮ್ಮ ವಿಕ್ಕಿಗೆ ಇನ್ನೊಬ್ಬ ತಾಯಿಯಂತಿದ್ದಳು. ವಿಕ್ಕಿಯೂ ಕುಸುಮನಿಗಿಂತಲೂ ಹೆಚ್ಚಾಗಿ, ಯಾವಾಗಲೂ ತನ್ನೊಡನೆಯೇ ಇರುವ ಜಯಮ್ಮನನ್ನೇ ಹೆಚ್ಚು ಹಚ್ಚಿಕೊಂಡಿದ್ದ. ಜಯಮ್ಮ ಬೇರೆ ಕೆಲಸದವರಂತಲ್ಲ. ಅವರಿವರ ಮನೆ ಕತೆಯನ್ನು ತಂದು ಇಲ್ಲಿ ಬಿತ್ತರಿಸುತ್ತಿರಲಿಲ್ಲ. ಜೊತೆಗೆ ಆಕೆ ವಿದ್ಯಾವಂತೆ. ಆಗಾಗ ಪತ್ರಿಕೆಗಳಲ್ಲಿ ಬರುವ ಕಥೆಗಳನ್ನು, ವಿಚಾರಗಳನ್ನು, ವಾರ್ತೆಗಳನ್ನು ಕುಸುಮಳ ಜೊತೆಗೆ ಚರ್ಚಿಸುವುದಿತ್ತು. ಅಲ್ಲದೇ, ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರು ನಡೆಸುತ್ತಿದ್ದ ಹೋರಾಟಕ್ಕೆ ತಾನೂ ತನ್ನ ಕೈಲಾದಂತೆ ಬೆಂಬಲಿಸುತ್ತಿದ್ದಳು. ಕುಸುಮ ಜಯಮ್ಮನನ್ನು ಸ್ನೇಹಿತೆಯಂತೆಯೇ ಕಾಣುತ್ತಿದ್ದಳು. ಭಾನುವಾರವನ್ನು ಹೊರತುಪಡಿಸಿ ಉಳಿದೆಲ್ಲಾ ದಿನ ಕೆಲಸಕ್ಕೆ ಬರುತ್ತಿದ್ದಳು ಜಯಮ್ಮ. 


ಎದುರು ಮನೆಗೆ ಬಂದ ಲೇಖಕ ಕೇಶವನನ್ನು ಕುಸುಮ ನೋಡಿದ್ದಳಾದರೂ.. ಆತನ ಕುರಿತು ಕುತೂಹಲವಿದ್ದರೂ ತಾನಾಗಿಯೇ ಪರಿಚಯ ಮಾಡಿಕೊಳ್ಳಲು ಹೋಗಿರಲಿಲ್ಲ. ಆತನೇ ತನ್ನ ಮಗು ಋಷಿಯನ್ನು ನೋಡಿಕೊಳ್ಳಲು ಸಂಜೆಯ ಸಮಯದಲ್ಲಿ ಜಯಮ್ಮನನ್ನು ತಮ್ಮ ಮನೆಗೆ ಕೆಲಸಕ್ಕೆ ಕಳುಹಿಸಬಹುದಾ ಎಂದು ಕೇಳಲು ಬಂದಾಗ ಪರಿಚಯವಾಗಿತ್ತು. ನಂತರ ಆತನ ಕುರಿತಾಗಿ ಹಾಗೂ ಆತನ ಕತೆಗಳ ಕುರಿತಾಗಿ ತಿಳಿದ ಕುಸುಮ ಅದನ್ನು ಓದುತ್ತಲೇ ತಾನೂ ಬರವಣಿಗೆಯತ್ತ ಆಸಕ್ತಿ ಮೂಡಿಸಿಕೊಳ್ಳುತ್ತಾಳೆ.


ಕೇಶವ ಮೂಲತಃ ಕೇರಳದವನಾದರೂ.. ಆತನ ಪತ್ನಿ ಮಗ ಋಷಿಯನ್ನು ಬಿಟ್ಟು ಹೋದ ನಂತರ ಅಲ್ಲಿರಲಾಗದೆ ಬರವಣಿಗೆಯ ಕಾರಣದಿಂದ ಇಲ್ಲಿ ಬಂದು ನೆಲೆಸಿರುತ್ತಾನೆ. 


ಬರವಣಿಗೆಗೆಂದು ಆತನ ಮಾರ್ಗದರ್ಶನ ಹಾಗೂ ಸಲಹೆಗಾಗಿ ಆಗಾಗ ಭೇಟಿ ನೀಡುತ್ತಿದ್ದ ಕುಸುಮ ಆತನ ಮನೆಯಲ್ಲಿದ್ದ ಜೋಕಾಲಿಯ ಮೇಲೆ ಕೂರುತ್ತಿದ್ದದ್ದೇ ಹೆಚ್ಚು. ಸ್ವಭಾವತಃ ಭಾವಜೀವಿಯಾಗಿದ್ದ ಕೇಶವನಿಗೂ.. ಸ್ನೇಹವನ್ನು ಬಯಸುತ್ತಿದ್ದ ಕುಸುಮಾಳಿಗೂ ಬೇಗನೆ ಹೊಂದಿಕೆಯಾಗಿ ಸ್ನೇಹ-ಸಲುಗೆಗಳು ಬೆಳೆದವು.


ಮಗು ತನಗಿಂತ ಜಯಮ್ಮನನ್ನು ಹೆಚ್ಚು ಹಚ್ಚಿಕೊಂಡಿರುವುದು ಅವಳ ಮನಸ್ಸಿಗೆ ಬಂದಾಗ ಜಯಮ್ಮನ ಕುರಿತು ಕೆಲವೊಮ್ಮೆ ಅಸಡ್ಡೆ ತೋರಿದ್ದಳು ಕುಸುಮ. ಜಯಮ್ಮನಿಗೂ ಕೇಶವ ಹಾಗೂ ಕುಸುಮ ಸಲುಗೆಯಿಂದಿರುವುದು ಕೆಲವೊಮ್ಮೆ ಸರಿಬರುತ್ತಿರುವುದಿಲ್ಲ. ಅಂತಹಾ ಸಮಯದಲ್ಲಿ ಕತೆಯೊಂದರ ಮೂಲಕ ಇಬ್ಬರ ಮನಸ್ಸನ್ನು ಬದಲಿಸುತ್ತಾನೆ ಕೇಶವ. ಸಾಹಿತ್ಯ ಓದುಗರ ಮೇಲೆ ನಿಜ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಪ್ರತ್ಯಕ್ಷ ಸಾಕ್ಷಿಯಂತಿದೆ ಈ ಪ್ರಕರಣ.


ಹಾಗೆಂದು, ಆಕೆಯ ಸ್ನೇಹವನ್ನು ದುರುಪಯೋಗ ಮಾಡಿಕೊಳ್ಳಲಿಲ್ಲ ಕೇಶವ. ಬದಲಾಗಿ, ಆಕೆಯ ಸಾಹಿತ್ಯಾಸಕ್ತಿಗೆ ಮತ್ತಷ್ಟು ಪೋಷಿಸಿ, ನೀರೆರೆದು ಬೆಳೆಸುತ್ತಾನೆ. ಮತ್ತೊಬ್ಬರ ಪ್ರೋತ್ಸಾಹದಿಂದಲೇ ಸಾಹಿತ್ಯ ಚಿಗುರುವುದಿಲ್ಲ. ಅವರ ಬರಹದಲ್ಲಿಯೂ ಅಂತಹಾ ಮೌಲ್ಯಗಳಿರಬೇಕು. ಸತ್ವಯುತವಾದ ಸಾಹಿತ್ಯವನ್ನು ಬರೆದು, ಪ್ರಶಸ್ತಿಯನ್ನು ಗೆಲ್ಲುತ್ತಾ.. ಸಾಹಿತ್ಯ ಕ್ಷೇತ್ರದ ಒಂದೊಂದೇ ಮೆಟ್ಟಿಲೇರುತ್ತಾ ಹೋದಳು ಕುಸುಮ. 


ತನ್ನ ಸಾಹಿತ್ಯ ಸೃಷ್ಟಿಗೆ ಸಮಯ ಸಾಲುತಿಲ್ಲವೆನ್ನುವ ಕಾರಣದಿಂದ ತನ್ನ ಕೆಲಸವನ್ನು ಬಿಡುತ್ತಾಳೆ ಕುಸುಮ. ಅದಕ್ಕೆ ದಿವಾಕರ ಅಡ್ಡಿಪಡಿಸುವುದಿಲ್ಲ. ಆದರೆ, ಆತನ ನಿರಾಸಕ್ತಿಯೂ ಬದಲಾಗಿರುವುದಿಲ್ಲ. 


ಎಲ್ಲವೂ ಸರಿಯಾಗಿಯೇ ಸಾಗುತ್ತಿತ್ತು ಎನ್ನುವ ಸಂದರ್ಭದಲ್ಲಿ ಜಯಮ್ಮ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯೊಂದಕ್ಕೆ ಹೋದವಳು ಅಲ್ಲಿಂದ ಮರಳಿ ಬರುವುದಿಲ್ಲ. ಜಯಮ್ಮನ ಸಾವಿಗೆ ಕಾರಣವೇನು..? 


ಋಷಿಯ ಹೊಣೆಯನ್ನು ಕೆಲವೊಮ್ಮೆ ಹೊರುವ ಕುಸುಮ ಕೇಶವನಿಗೆ ಹತ್ತಿರವಾಗುತ್ತಾ ಹೋಗುತ್ತಾಳೆ. 


ಸ್ನೇಹ ಸಲುಗೆಗಳು ಹೆಚ್ಚಾಗಿ ಇಬ್ಬರ ಮನದಲ್ಲೂ ಅನುರಾಗ ಮೊಳೆಯುತ್ತದಾದರೂ.. ಕುಸುಮಾಳಿಗೆ ಮದುವೆಯಾಗಿದ್ದು ಅದರ ಪರಿಧಿಯನ್ನು ಮೀರಿ ಆಚೆ ಬರಲು ಆಕೆ ಸಿದ್ಧಳಿರುವುದಿಲ್ಲ. ಅಕಸ್ಮಾತ್ ಹಾಗಾಗಿದ್ದರೂ ಕೇಶವನ ಪತ್ನಿಗಿಂತ ಆಕೆಯ ನಡೆ ವಿಭಿನ್ನವಾಗೇನೂ ಕಾಣುತ್ತಿರಲಿಲ್ಲ. 


ಆದರೆ, ಅವರಿಬ್ಬರ ಜೀವನದಲ್ಲಿಯೂ ಮಹತ್ತರ ಬದಲಾವಣೆಗಳಾಗುತ್ತವೆ. ಕೇಶವನ ಮೊದಲ ಪತ್ನಿಯ ದರ್ಶನವಾದ ನಂತರ ಆತ ಮೊದಲಿನಂತಿಲ್ಲದ್ದು ಏಕೆ..? ಅಣ್ಣನ ಸಾವು ಆತನ ಬದುಕಿನಲ್ಲಿ ತಂದ ಬದಲಾವಣೆಗಳೇನು..? 


ದಿವಾಕರನದ್ದು ಕುಸುಮಳೆಡೆಗೆ ನಿಜವಾಗಿಯೂ ನಿರಾಸಕ್ತಿಯಾಗಿರಲಿಲ್ಲ ಅಥವಾ ಸಾಮರಸ್ಯದ ಕೊರತೆಯೂ ಆಗಿರಲಿಲ್ಲ. ದೇವಿ ಎಂಬ ಪುಟ್ಟ ಹುಡುಗಿಯನ್ನು ಮನೆಗೆ ಕರೆ ತಂದ ದಿವಾಕರನ ನಡೆ ಮೊದಲಿಗೆ ಕುಸುಮಾಳನ್ನು ವಿಚಲಿತಗೊಳಿಸಿದರೂ ನಂತರ ಆತನ ಹೃದಯವೈಶಾಲ್ಯಕ್ಕೆ ಮನ ತುಂಬಿ ಬರುತ್ತದೆ. ದೇವಿ ಆತನ ಮಗಳೇನಲ್ಲ..! ಹಾಗಾದರೆ ದೇವಿಗೂ ದಿವಾಕರನಿಗೂ ಇದ್ದ ಸಂಬಂಧವೇನು..? ಬದಲಾದ ದಿವಾಕರ ಕೇಶವನನ್ನು ಮರೆಸುತ್ತಾನೆಯೇ..? ದಿವಾಕರನಿಗೆ ಆಕೆಯ ಹಾಗೂ ಕೇಶವನ ಸ್ನೇಹದ ಕುರಿತು ತಿಳಿದಿದ್ದರೂ ಅದುವರೆಗೂ ಚಕಾರವೆತ್ತದ್ದೇಕೆ..? ಕಾದಂಬರಿಯ ಕೊನೆಯಲ್ಲಿ ನಮ್ಮ ಕಣ್ಣಿಗೆ ಕಾಣುವ ದಿವಾಕರನ ಚಿತ್ರಣಕ್ಕೂ.. ಮೊದಲಿಗೆ ಕಾಣುವ ಚಿತ್ರಣಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಇದರ ಕಾರಣವನ್ನು ನೀವು ಓದಿಯೇ ಅರಿಯಬೇಕು. 


ಇಲ್ಲಿ ಕೆಲಸದ ಜಯಮ್ಮನ ಪಾತ್ರ ಬಹಳ ಮೌಲ್ಯಯುತವಾದದ್ದು. ಕುಸುಮಳ ಕಛೇರಿಯಲ್ಲಿನ ಚಿತ್ರಣದಲ್ಲಿ ಭ್ರಷ್ಟಾಚಾರ ಹಾಗೂ ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಆಂದೋಲನ ಚಿತ್ರಿತವಾಗಿದೆ. ಕಥಾನಾಯಕಿಯಾದ ಕುಸುಮಾಳ ಕೈಯಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆ ಅಥವಾ ಆಂದೋಲನದ ಕುರಿತ ವಿರೋಧವನ್ನು ವ್ಯಕ್ತಪಡಿಸಬಹುದಾಗಿದ್ದರೂ.. ಅದಕ್ಕಿಂತಲೂ ಜಯಮ್ಮನ ಮೂಲಕ ಅರಿವು ಮೂಡಿಸಿದ ಚಿತ್ರಣ ಬಹಳ ಶಕ್ತವಾಗಿದೆ ಎನ್ನಿಸಿತು. ಇದು ಈ ಕಾದಂಬರಿಯಲ್ಲಿ ಬಹಳ ಸಕಾರಾತ್ಮಕ ಚಿತ್ರಣವಾಗಿ ಕಂಡಿತು. 


ಮನಸ್ಸುಗಳ ತೂಗುಯ್ಯಾಲೆಗೆ, ಕೇಶವನ ಮನೆಯಲ್ಲಿದ್ದ ಜೋಕಾಲಿ ರೂಪಕವಾಗಿ ತೋರುತ್ತದೆ. ಇಲ್ಲಿ ಜೋಕಾಲಿಯೂ ಕೂಡ ಕಥೆಯ ಪ್ರಮುಖ ಪಾತ್ರದಂತೆಯೇ ಭಾಸವಾಯಿತು. ಒಂದೊಳ್ಳೆ ಸಂದೇಶ ನೀಡುವ ಚೆಂದದ ಕಾದಂಬರಿಯ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ