ಶುಕ್ರವಾರ, ಏಪ್ರಿಲ್ 17, 2026

ಯಜ್ಞ (ಪುಸ್ತಕ ಯಾನ - 218)


ಪುಸ್ತಕದ ಶೀರ್ಷಿಕೆ : ಯಜ್ಞ

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ಸಂಯುಕ್ತ ಪ್ರಕಾಶನ

ಪ್ರಥಮ ಮುದ್ರಣ : 1982

ಪುಟಗಳು : 164


ಉಪ್ಪೂರಿನಲ್ಲಿ ನೆಲೆಸಿದ್ದ ಯಜ್ಞನಿಗೆ ಇದ್ದದ್ದು ತನ್ನ ತಾಯಿ ಹಾಗೂ ಅಣ್ಣ ಅತ್ತಿಗೆ. ಅಣ್ಣ ಪೌರೋಹಿತ್ಯ ಮಾಡುತ್ತಾ, ಅದರ ಕಾಸಿನಿಂದ ಹಾಗೂ ದಾನ-ಧರ್ಮಗಳಿಂದ ಬದುಕು ನಡೆಸುತ್ತಿದ್ದವನು. ಆದರೆ, ಅತ್ತಿಗೆ ಕಾಮಾಕ್ಷಿ ಕರ್ಮಯೋಗಿ. ನಾಲ್ಕು ಗಂಡಾಳಿನ ಸಮಕ್ಕೆ ಕೆಲಸ ಮಾಡುತ್ತಿದ್ದು, ಎಂದಿಗೂ ಕೂತವಳಲ್ಲ. ಸೋಮಾರಿತನದ ಶಬ್ದವೇ ಅರಿತಿರಲಿಲ್ಲ. ಮನೆಯಲ್ಲಿ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ವಿಪರೀತ ಕೆಲಸ. ಆದರೆ, ಅದೆಲ್ಲವನ್ನೂ ಪೂರೈಸುತ್ತಿದ್ದಳು. ಆಕೆಗೆ ದುಡಿತದಲ್ಲಿ ಎಷ್ಟು ಸಹಾಯ ಮಾಡಿದರೂ ಅದು ಸಾಲದು. ಯಜ್ಞ ಎಷ್ಟೇ ಕೆಲಸ ಮಾಡಿದರೂ ಅತ್ತಿಗೆಯಿಂದ ಮೆಚ್ಚುಗೆ ಸಿಗುತ್ತಿದ್ದದ್ದು ತೀರಾ ಕಡಿಮೆ. ಅಮ್ಮನಿಗೆ ಮಾತ್ರ ಮಗ ಓದಿ ಬುದ್ದಿವಂತನಾಗಲಿ ಎನ್ನುವ ಆಸೆ. ಹಾಗಾಗಿ, ಶ್ರದ್ಧೆಯಿಂದ ಕಲಿ ಎಂದು ಆಗಾಗ್ಗೆ ಹೇಳುತ್ತಿದ್ದರು. 


ಉಡುಪಿ ಮಠಕ್ಕೆ ಹೋಗುತ್ತಿದ್ದಾಗ ಜೊತೆಯಾಗುತ್ತಿದ್ದದ್ದು ಸೀತಾರಾಮ. ಆತ ಸಣ್ಣವನಾದರೂ ಹೆಚ್ಚು ಫಟಿಂಗ. ಸೀತುವಿನ ಅಪ್ಪ ಕಳ್ಳತನ ಮಾಡಿ ಊರವರಿಂದ ಅಷ್ಟೇನೂ ಒಳ್ಳೆಯ ಹೆಸರು ಪಡೆದಿರಲಿಲ್ಲ. ಜೊತೆಗೆ, ಮನೆಯ ಸಮಸ್ತ ಕೆಲಸವನ್ನು ನಿರ್ವಹಿಸುತ್ತಿದ್ದದ್ದು ಅಮ್ಮನೇ. ಜೊತೆಗೆ ಅಪ್ಪಯ್ಯ ಸೇಸಿಯ ಜೊತೆ ಇರುತ್ತಿದ್ದದ್ದು ಆತನಿಗೆ ಅರಿಯದ ವಿಷಯವೇನೂ ಆಗಿರದಿದ್ದುದರಿಂದ ಆತನಿಗೆ ತಂದೆಯ ಮೇಲೆ ಗೌರವವೂ ಇರಲಿಲ್ಲ, ಅವರ ಭಯವೂ ಇರಲಿಲ್ಲ. ಸೀತು ಬಹಳ ಚಂದವಾಗಿ ಹಾಡುತ್ತಿದ್ದ.


ಇವರ ಜೊತೆ ದೋಣಿಯಲ್ಲಿ ಬರುತ್ತಿದ್ದವರಲ್ಲಿ ಮುಖ್ಯಳಾಗಿದ್ದವಳು ಹೆಗ್ಗಡೆಯವರ ಮಗಳು ಮೀನಾಕ್ಷಿ. ಆಕೆ ಬಹಳ ಜಾಣೆ ಹಾಗೂ ಧೈರ್ಯವೂ ಹೆಚ್ಚು. ಸೀತುವಿನ ಸಮಸಮಕ್ಕೂ ಧ್ವನಿ ಏರಿಸುತ್ತಿದ್ದವಳು. ಅತ್ತ ಸೀತು ಹಾಡುತ್ತಿದ್ದರೆ.. ಇತ್ತ ಮೀನಾಕ್ಷಿ. ಕೇಳುವವರ ಕಣ್ಮನಗಳು ತಂಪಾಗುತ್ತಿದ್ದವು.


ಅಂಬಿಗ ಸೂರಪ್ಪನೆಂದರೆ ಮಕ್ಕಳೆಲ್ಲರಿಗೂ ಅಚ್ಚುಮೆಚ್ಚು. ಆದರೆ, ಆತನ ತಮ್ಮ ಮಾರ ಬಂದ ನಂತರ ಅವರಿಬ್ಬರ ನಡುವೆ ಇದ್ದ ಹಗರಣದಿಂದ ದೋಣಿಯಲ್ಲಿ ಮೊದಲಿನಂತೆ ಉಲ್ಲಾಸವಿರಲಿಲ್ಲ. ಬದಲಾಗಿ ಇಬ್ಬರಲ್ಲಿಯೂ ಪೈಪೋಟಿಯಿರುವಂತೆ ಕಾಣುತ್ತಿತ್ತು. ಒಂದು ದಿನ ಅಚಾನಕ್ಕಾಗಿ ನಡೆದ ಘಟನೆಯೊಂದರಲ್ಲಿ ದೋಣಿ ಅಪಘಾತವಾಗಿ ಈಜು ಬರದ ಸೂರಪ್ಪ ಸತ್ತ ನಂತರ ಮಕ್ಕಳೆಲ್ಲರಿಗೂ ಲವಲವಿಕೆಯೇ ಇರಲಿಲ್ಲ.


ಮೀನಾಕ್ಷಿಯ ಮನೆಯಲ್ಲಿ ಬಡತನ. ಅಪ್ಪನ ದುಡಿಮೆ ಮಕ್ಕಳಿಗೆ, ಮನೆಗೆ ಸಾಲದು. ಆಕೆಯ ಜೊತೆಯಲ್ಲಿ ಇಬ್ಬರು ತಂಗಿಯರು ಶಾಲೆ ಸೇರಿದ್ದರು. ಬ್ರಾಹ್ಮಣರು ಕೂಲಿ ಮಾಡಬಾರದು ಎಂದು ಕೂಲಿಗೂ ಹೋಗಲಿಲ್ಲ. ಸೀತು ಒಮ್ಮೆ ಮೀನಾಕ್ಷಿಗೆ ನಿನ್ನ ಕಣ್ಣು, ಮೂಗು, ನಗು ಎಲ್ಲವೂ ಚೆಂದ ನೀನು ಸಿನಿಮಾ ಹೀರೋಯಿನ್ ಆದರೆಷ್ಟು ಚೆಂದವೆಂದು ಆಸೆ ಹುಟ್ಟಿಸಿದ್ದ. ಆದರೆ, ಮನೆಯಲ್ಲಿ ಹೇಳದೆ, ಕೇಳದೆ ಹೋಗುವುದಕ್ಕೆ ಅವಳಿಗೆ ಭಯ.


ಸೀತುವಿನ ಮನೆಯಲ್ಲಿಯೂ ಕಿರಿಕಿರಿ ಶುರುವಾಗಿ.. ಯಜ್ಞನ ಜೊತೆ ಸೇರಿ ಆತ ಊರು ಬಿಟ್ಟ. ಹಳ್ಳಿಯಲ್ಲಿಯೇ ಬೆಳೆದಿದ್ದವರು ಹೋಗಿ ಸೇರಿದ್ದು ಪಟ್ಟಣಕ್ಕೆ. ಅದು ಪರಿಚಯದ ಉಪಾದ್ರರ ಹೋಟೆಲ್ ಗೆ. ಸೀತುವಿಕೆ ಮಾತಿನಲ್ಲಿರುವ ಲವಲವಿಕೆ ಕೆಲಸದಲ್ಲಿರಲಿಲ್ಲ. ಆದರೆ, ಯಜ್ಞ ಎಲ್ಲವನ್ನು ಮನಸ್ಸಿಟ್ಟು ಕಲಿತನಾದರೂ ಊರಿನ, ಅಮ್ಮನ ನೆನಪು ಕಾಡುತ್ತಿತ್ತು. ಸೀತು ಯಜ್ಞನನ್ನು ಅರ್ಧದಾರಿಗೆ ಬಿಟ್ಟು ಎಲ್ಲೋ ಹೊರಟು ಹೋದ. ಯಜ್ಞನಿಗೆ ಪಶ್ಚಾತ್ತಾಪವಾಗಿ ಮನೆಗೆ ಪತ್ರ ಹಾಕಿದ್ದ. ಮನೆಗೆ ಆತನ ದುಡಿಮೆಯ ಅವಶ್ಯಕತೆಯಿತ್ತಾದ್ದರಿಂದ ಯಾರೂ ಬೇಡವೆನ್ನಲಿಲ್ಲ. ಆದರೆ, ಒಮ್ಮೆ ಊರಿಗೆ ಹೋಗಿ ಬಂದ ನಂತರ ಹೋಟಲಿನ ಕೆಲಸದ ಬದಲಾಗಿ ಉಪಾದ್ರರ ಮಗಳು ವಾಗ್ದೇವಿ ಹಾಗೂ ಅಳಿಯ ಅನಂತಪದ್ಮರಾವ್ ಅವರ ಮನೆಯ ಅಡುಗೆ ಕೆಲಸಕ್ಕೆ ಸೇರಿದ.


ಎಲ್ಲವೂ ಸರಿಯಾಗಿಯೇ ಸಾಗುತ್ತಿದ್ದ ಸಮಯದಲ್ಲಿ ಆತನ ಅಕ್ಕನ ಮಗಳ ಮದುವೆ ಮಾಡಿದ್ದ. ಮತ್ತೊಬ್ಬಳು ಅಕ್ಕನ ಮಗಳ ಮದುವೆ ಮಾಡುವಷ್ಟರಲ್ಲಿ ಅಕ್ಕ ತೀರಿ ಹೋಗಿ, ಆಕೆಯ ಮಗಳು ಉಪ್ಪೂರಿನಲ್ಲಿಯೇ ನೆಲೆಸುವಂತಾಯಿತು. ಯಜ್ಞನಿಗೂ ಮದುವೆಯ ವಯಸ್ಸಾದುದರಿಂದ. ಅಮ್ಮನೇ ನೋಡಿದ ಭವಾನಿಯ ಜೊತೆಯಲ್ಲಿ ವಿವಾಹವಾಯಿತು. ಆದರೆ, ಅವಳನ್ನು ಪಟ್ಟಣಕ್ಕೆ ಕರೆತರುವಂತಿರಲಿಲ್ಲ. ಇನ್ನೂ ಅಕ್ಕನ ಮಗಳ ಮದುವೆಯ ಹೊಣೆ ಯಜ್ಞನ ಮೇಲಿತ್ತು. 


ಸೀತು ಒಮ್ಮೆ ಯಜ್ಞನಿಗೆ ಸಿಕ್ಕಾಗ ಸಿನಿಮಾ ನಿರ್ದೇಶಕರೊಬ್ಬರ ಬಳಿ ಕೆಲಸಕ್ಕಿದ್ದೇನೆಂದು ಹೇಳಿದ. ಅದಾದ ನಂತರ ಊರಿಗೆ ಹೋಗಿ ಬಂದ. ಅಲ್ಲಿ ಆದ ಬದಲಾವಣೆಯೆಂದರೆ.. ಮೀನಾಕ್ಷಿಯ ಜೊತೆ ಆತ ಊರು ಬಿಟ್ಟದ್ದು. ಮೀನಾಕ್ಷಿ ಆಟನೊಟ್ಟಿಗೆ ಓಡಿ ಹೋದ ಸುದ್ದಿ ಹರಡಿತು. ಯಜ್ಞನನ್ನು ಸೀತು ಜೊತೆಗೆ ಕರೆದರೂ.. ಮೊದಲು ಅರ್ಧದಲ್ಲಿ ಬಿಟ್ಟು ಹೋದದ್ದು ನೆನಪಾಗಿ ಧೈರ್ಯವಾಗಲಿಲ್ಲ. 


ಅಕ್ಕನ ಮಗಳ ಮದುವೆಯಾಗಿ ತನ್ನ ಹೆಂಡತಿ ಭವಾನಿಗೆ ಒಂದು ಗರ್ಭಪಾತವೂ ಆದ ನಂತರ ಅವಳನ್ನು ಇನ್ನು ಬಿಟ್ಟಿರುವುದು ಸರಿಯಲ್ಲವೆಂದು ಯಜ್ಞ ತನ್ನೊಡನೆ ಕರೆತಂದ. ಅಷ್ಟೊತ್ತಿಗಾಗಲೇ ಹಣ ಸೇರಿಸುವುದಕ್ಕಾಗಿ ಕರಿದ ತಿಂಡಿಗಳನ್ನು ಮಾಡಿ, ಹಣ ಒಟ್ಟು ಮಾಡುತ್ತಿದ್ದ. ಅದು ಅವನ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಆದರೆ, ಭವಾನಿ ಬಂದ ಮೇಲೆ ಅದು ಕೊಂಚ ಸುಲಭವಾಯಿತು. 


ಮೀನಾಕ್ಷಿ ತನ್ನ ಹಾಡುಗಾರಿಕೆಯಿಂದ ಪ್ರಸಿದ್ಧಿಗೆ ಬಂದಳು. ಸೀತುವಿಗೂ ಅವಳಿಗೂ ವಿಚ್ಛೇದನವಾಯಿತು ಎಂಬ ಸುದ್ದಿಯಿತ್ತು. ಆಕೆ ಮನೆಯವರಿಗೆ ಪತ್ರ ಬರೆದು ಹಣ ಕಳುಹಿಸುತ್ತಿದ್ದಳಾದರೂ.. ಆಕೆ ಎಲ್ಲಿದ್ದಾಳೆ ಎಂದು ಯಾರಿಗೂ ಸುಳಿವಿರಲಿಲ್ಲ. 


ತಂದೆ ಒಮ್ಮೆ ಮೀನಾಕ್ಷಿಯನ್ನು ನೋಡಿ ಬಂದ ಮೇಲೆ ಅವರ ಆರೋಗ್ಯ ಕ್ಷಯಿಸುತ್ತಾ ಬಂತು. ತಾಯಿಯೂ ತೀರಿಕೊಂಡಳು. ಆದರೆ, ತಂದೆಯ ಆರೋಗ್ಯ ಕೆಡುವಷ್ಟು ಮೀನಾಕ್ಷಿಯ ಬದುಕು ಹದಗೆಟ್ಟಿತ್ತೇ..??


ತಂಗಿ ಸೌಭಾಗ್ಯಳನ್ನು ಡಾಕ್ಟರ್ ಮಾಡಿ, ವಿದೇಶಕ್ಕೆ ಹೋಗಲು ಹಾಗೂ ಆಕೆಯ ಸಹಪಾಠಿಯನ್ನೇ ವಿವಾಹವಾಗಲು ಸಹಾಯ ಮಾಡಿದಳು. ತಂಗಿ ಶಶಿಯ ವಿವಾಹಕ್ಕೆ ನೆರವಾದಳು. ಮೀನಾಕ್ಷಿಯ ಮತ್ತೊಬ್ಬ ತಂಗಿ ನಳಿನಾ ಓಡಿ ಹೋದರೆ ಉಳಿದ ಕೊನೆಯ ತಂಗಿ ಸುನಂದಾ ಮೀನಾಕ್ಷಿಯ ಜೊತೆ ಇರುವಂತಾಯಿತು. ಅಕ್ಕನ ಉಪಕಾರ ಸ್ಮರಿಸಿದವಳು ಸುನಂದಾ ಮಾತ್ರವೇ..


ಯಜ್ಞ ಹಾಗೂ ಭವಾನಿಗೆ ಐವರು ಮಕ್ಕಳು. ಹಿರಿಯವನು ಹಯವದನ, ಶ್ರೀಪಾದ, ರಮೇಶ, ರಾಜೀವ ಹಾಗೂ ಚಿನ್ನು. ಈಗ ವಾಗ್ದೇವಿಯ ಮನೆ ಬಿಟ್ಟು ತನ್ನದೇ ಆದ ಪುಟ್ಟ ಹೋಟೆಲ್, ಗಲ್ಲಿ ಅಂಗಡಿಯೊಂದರಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಬಹಳ ಕಷ್ಟ ಜೀವಿಗಳು. ತಮ್ಮ ಕಷ್ಟ ಮಕ್ಕಳಿಗೆ ಬರಬಾರದೆಂದು ಯಜ್ಞ ಅಂದುಕೊಂಡರೆ ಮಕ್ಕಳು ಅದನ್ನು ಬೇರೆಯದ್ದೇ ರೀತಿ ಅರ್ಥ ಮಾಡಿಕೊಂಡರು.


ಹಯವದನ ಕೇಳಿದಾಗಲೆಲ್ಲಾ ಕೈಗೆ ದುಡ್ಡು ಸಿಕ್ಕಾಗ ದುಡ್ಡು ಕಂಡರೆ ಆತನಿಗೆ ನಿರ್ಲಕ್ಷ್ಯ. ಶ್ರೀಮಂತರ ಹಾಗೆ ಎಲ್ಲಾ ಶೋಕಿಯೂ ಇತ್ತು. ಶ್ರೀಪಾದ ಆತನನ್ನು ಮೀರಿಸುತ್ತಿದ್ದ. ಗುಂಪುಗಾರಿಕೆ ಮಾಡಿಕೊಂಡು ಕಾಲೇಜಿನಲ್ಲೆಲ್ಲಾ ಪುಂಡಾಟಕ್ಕಿಳಿಯುತ್ತಿದ್ದ. ಆದರೆ, ಓದಿನಲ್ಲಿ ಬಹಳ ಬಹಳ ಬುದ್ಧಿವಂತ. ಹಿರಿಯ ಮಕ್ಕಳನ್ನು ಅನ್ನಲಾಗದ ಭವಾನಿ ರಮೇಶ ಹಾಗೂ ರಾಜೀವನನ್ನು ಬೈಯುತ್ತಿದುದರಿಂದ ರಮೇಶ ರೋಸಿ ಹೋಗಿ ಪಲಾಯನ ಮಾಡಿದ. ರಾಜೀವ ಅತ್ತ ಕೆಲಸವನ್ನು ಮಾಡದೆ ತಂದೆ ತಾಯಿಯನ್ನು ಹಚ್ಚಿಕೊಳ್ಳದೆ.. ಕೆಲಸ ಸಿಕ್ಕ ಕೂಡಲೇ ದೂರಾದ.


ಹಯವದನ ಶ್ರೀಮಂತರ ಮಗಳು ನಳಿನಿಯನ್ನು ವಿವಾಹ ಮಾಡಿಕೊಂಡು ಬಂದ ನಂತರವೂ ತಂದೆ-ತಾಯಿಯ ಮೇಲೆ ಎಲ್ಲದಕ್ಕೂ ಅವಲಂಬಿತನಾಗಿದ್ದ. ಆತನ ಹೆಂಡತಿಯೂ ಅಷ್ಟೇ.. ಶ್ರೀಪಾದ ವಿದೇಶಕ್ಕೆ ಹಾರಿದ. ಭವಾನಿ ಯಜ್ಞನಿಗೆ ಇವರೆಲ್ಲರ ಕುರಿತು ಎಚ್ಚರಿಸುತ್ತಿದ್ದಳು. ಯಜ್ಞ ಅದಾವುದನ್ನೂ ಲೆಕ್ಕಿಸದೆ ಮಕ್ಕಳೆಲ್ಲರಿಗಾಗಿ ತನ್ನ ದುಡಿಮೆಯನ್ನು ಮೀಸಲಿಟ್ಟ. ಸ್ವಂತವಾಗಿ ಕಟ್ಟಿದ್ದ ಮನೆಯ ಮೇಲೂ ಸಾಲ ಮಾಡಿ, ಮನೆ ಮಾರುವ ಪರಿಸ್ಥಿತಿ ಬಂದಿತ್ತು. ಭವಾನಿಯೂ ತೀರಿಕೊಂಡ ಮೇಲೆ ಆತನ ಪಾಲಿಗೆ ಉಳಿದದ್ದು ಚಿನ್ನು ಮಾತ್ರ. ಬುದ್ಧಿ ಬೆಳೆಯದ.. ಮಗುವಿನಂತಹಾ ಮಗುವನ್ನು ಭವಾನಿ ಇದ್ದಾಗ ಹಚ್ಚಿಕೊಂಡಿರದ ಯಜ್ಞ ಈಗ ಆತನೇ ಸರ್ವಸ್ವವೆನ್ನುವಂತಾಗಿದ್ದ. 


ಬದುಕಿನಲ್ಲಿ ದುಡಿದು ದುಡಿದು ಹಣ್ಣಾಗಿದ್ದ ಯಜ್ಞ ಸೋತಿದ್ದ. ಆದರೆ, ಚಿನ್ನುವಿನ ಹೊಣೆ ಆತನ ಮೇಲಿತ್ತು. ಅದು ತೀರಿದ ನಂತರ ಯಜ್ಞನ ಪಾಡು ಏನಾಯಿತು..??


ಸೂರನ ಮಗನನ್ನು ಕೆಲವು ದಿನ ಮಾರ ನೋಡಿಕೊಂಡನಾದರೂ.. ನಂತರದ ವಿದ್ಯಾಭ್ಯಾಸ ನಡೆದದ್ದು ಯಜ್ಞನಿಂದ. ಆ ಸತ್ಯ ಶ್ರೀಪಾದನಿಗೆ ತಿಳಿದದ್ದು ಏಕೆ..?? ಇದರಿಂದ ಏನಾದರೂ ಬದಲಾವಣೆಯಾಯಿತೇ..??


ಸೀತು ಮತ್ತೆ ಯಜ್ಞನಿಗೆ ಸಿಕ್ಕಿದ್ದು ಯಾವ ಸ್ಥಿತಿಯಲ್ಲಿ..?? ಆತ ಮೀನಾಕ್ಷಿಯ ಕುರಿತು ಪಶ್ಚಾತಾಪ ಹೊಂದಿದ್ದನಾದರೂ.. ಈಗ ಆ ಪಶ್ಚಾತಾಪಕ್ಕೆ ಬೆಲೆ ಇರಲಿಲ್ಲ. ಮೀನಾಕ್ಷಿಯ ಸಾವು ಸಹ ದುರಂತ ಅಂತ್ಯವಾಗಿತ್ತು. ಅದಕ್ಕೆಲ್ಲಾ ಕಾರಣವೇನು ತಿಳಿಯಲು ಓದಿ ಯಜ್ಞ ಕಾದಂಬರಿಯನ್ನು.


ಬದುಕಿನಲ್ಲಿ ಮೋಸ ಮಾಡಿದವರು, ಕಳ್ಳತನ ಮಾಡಿದವರು ರಾಜಾರೋಷವಾಗಿ ಬದುಕುವ ಸಂದರ್ಭದಲ್ಲಿ ಕರ್ಮಜೀವಿಗಳಿಗೆ, ಕಷ್ಟಪಟ್ಟು ದುಡಿಯುವವರಿಗೆ, ಯಾವುದೇ ಮೋಸವನ್ನು ಮಾಡದೆ ಬದುಕಿದವರಿಗೆ ಎಂತಹಾ ಕಷ್ಟದ ಬದುಕು ಸಿಕ್ಕಿತು ಎಂಬುದನ್ನು ಕಂಡು ಕಣ್ಣಂಚು ತೇವವಾಗುವುದಂತೂ ಸತ್ಯ. ಮೀನಾಕ್ಷಿ ತನ್ನ ಪ್ರತಿಭೆಗೆ ಮನ್ನಣೆ ಸಿಗಲು ತೆತ್ತ ಬೆಲೆ ಅಂತಿಂಥದ್ದಲ್ಲ.. ಹಾಗೆಂದು ಮೋಸ ಮಾಡಿದವರಿಗೂ ಶಿಕ್ಷೆಯೇನೂ ಕಡಿಮೆಯಿರಲಿಲ್ಲ. ಅದಕ್ಕೆ ಸೀತುವೇ ಉದಾಹರಣೆ. ಆದರೆ, ಯಜ್ಞ ಹಾಗೂ ಭವಾನಿಯರ ಬದುಕು ಕಂಡಾಗ ಯಜ್ಞ ಕೇವಲ ಕೆಲಸಕ್ಕೆ ಮಾತ್ರ ಮನ್ನಣೆ ಕೊಟ್ಟು.. ಮನಸ್ಸಿನ ಮಾತಿಗೆ ಅಂದರೆ ಭಾವನಾತ್ಮಕವಾಗಿ ಹೆಚ್ಚು ಮಹತ್ವ ನೀಡಿದ್ದು ಆತನ ಪರಿಸ್ಥಿತಿಗೆ ಕಾರಣವಾಯಿತೇನೋ ಎಂದೆನಿಸಿತು. ಬದುಕಿನ ಯಜ್ಞದಲ್ಲಿ ತಮ್ಮನ್ನೇ ತಾವು ಸಮಿತ್ತುಗಳನ್ನಾಗಿಸಿಕೊಂಡ ಜೀವಗಳ ಅಂತಃಕರಣದ ಕಥೆ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ