ಪುಸ್ತಕದ ಶೀರ್ಷಿಕೆ : ಕನಸಿನ ರಾಣಿ
ಲೇಖಕರು : ಪ್ರೇಮಾ ಭಟ್
ಪ್ರಕಾಶಕರು : ಶ್ರೀ ಪ್ರೇಮಸಾಯಿ ಪ್ರಕಾಶನ
ಪ್ರಥಮ ಮುದ್ರಣ : 2009
ಪುಟಗಳು : 144
ಬೆಲೆ : 50 ರೂ.
ಅಜ್ಜಿ ಕಥೆಗಳೆಂದರೆ ಸಾಮಾನ್ಯವಲ್ಲ. ಅವು ಬೇಕೆಂದಾಗ ಸಿಗುವುದೂ ಇಲ್ಲ. ಆಕೆ ಅನಕ್ಷರಸ್ಥಳಾಗಿದ್ದರೂ ಆಕೆ ಹೇಳುವ ಕಥೆಗಳಲ್ಲಿ ನೀತಿ ಪಾಠವಿರುತ್ತಿತ್ತು. ಅದರಿಂದ, ಬದುಕಿನಲ್ಲಿ ಕಲಿಯಬೇಕಾದ್ದು ಹಾಗೂ ಅಳವಡಿಸಿಕೊಳ್ಳಬೇಕಾದದ್ದು ಬಹಳವೇ ಇದೆ. ಮೊದಲೆಲ್ಲಾ ಮಕ್ಕಳು ಅವಳನ್ನು ಸುತ್ತುವರಿದು ಕಥೆ ಕೇಳುತ್ತಿದ್ದರೂ.. ಆಧುನಿಕತೆಯ ಪ್ರಭಾವದಿಂದ ಅದು ಕಡಿಮೆಯಾಗಿದೆ. ಆಟದ ನಡುವೆ, ರಾತ್ರಿ ಊಟ ಮಾಡುತ್ತಾ ಅಜ್ಜಿ ಕಥೆಗಳನ್ನು ಕೇಳಿ ಹೇಳಿಸಿಕೊಳ್ಳುತ್ತಿದ್ದ ಮಕ್ಕಳು ಕಡಿಮೆಯಾಗಿದ್ದಾರೆ. ಈಗ ಮೊಬೈಲ್ ಎಲ್ಲವನ್ನೂ ಆವರಿಸಿಯಾಗಿದೆ. ಆದರೆ, ಏನೇ ಆದರೂ ಮನುಷ್ಯರ ನಡುವಿನ ಸಂಪರ್ಕವನ್ನು, ಅವರು ಬುದ್ಧಿ ಮಾತುಗಳಿಂದ ಹೇಳುತ್ತಿದ್ದ ಕಥೆಗಳನ್ನು ಅವರಷ್ಟು ಭಾವಪೂರ್ಣವಾಗಿ ಹೆಣೆಯಲು ಸಾಧ್ಯವಾಗದು. ತಲೆಮಾರಿನಿಂದ ತಲೆಮಾರುಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ ಅಜ್ಜಿಯ ಕೈಯಲ್ಲಿ ಮೊಬೈಲ್ ಅಥವಾ ಅಜ್ಜಿಯ ಕಣ್ಣ ಮುಂದೆ ಟಿ.ವಿಯೋ ಬಂದಿದೆ. ಕಥೆ ಹೇಳುವ ಅಜ್ಜಿಯಂದಿರು ಹಾಗೆಯೇ ಕಥೆ ಕೇಳುವ ಮೊಮ್ಮಕ್ಕಳು ಇಬ್ಬರೂ ಕಡಿಮೆಯಾಗಿದ್ದಾರೆ. ಮೊಮ್ಮಕ್ಕಳು ಹಾಸ್ಟೆಲ್ ನಲ್ಲಿಯೂ, ಅಜ್ಜಿಯಂದಿರು ವೃದ್ದಾಶ್ರಮದಲ್ಲಿಯೂ ಎಂಬ ಕುಟುಂಬಗಳೂ ಇಲ್ಲದಿಲ್ಲ.
ಇಂತಹಾ ಸಂದರ್ಭದಲ್ಲಿ ಅಜ್ಜಿ ಕಥೆಯನ್ನು ಕೇಂದ್ರವಾಗಿಟ್ಟುಕೊಂಡು.. ಅಜ್ಜಿ ಚೆಂದದ ನೀತಿಪಾಠದ ಕಥೆಗಳ ಮೂಲಕ ಮೊಮ್ಮಗಳಿಗೆ ಕಥೆಗಳನ್ನು, ಬುದ್ಧಿಮಾತುಗಳನ್ನು, ತಾನು ಹೇಳಬೇಕಾದುದನ್ನು ದಾಟಿಸುತ್ತಿದ್ದಾರೆ. ಅಜ್ಜಿ ಅಷ್ಟು ಬುದ್ಧಿವಂತಿಕೆಯಿಂದ ಕಥೆ ಹೆಣೆಯುವಾಗ.. ಅದನ್ನು ಕೇಳಿ ಬೆಳೆಯುವ ಮೊಮ್ಮಕ್ಕಳು ಮಾತ್ರ ಇದ್ದರೆ ಸಾಲದು. ಅದನ್ನು ಅರಗಿಸಿಕೊಂಡು, ಸಮಯೋಚಿತವಾಗಿ ಬಳಸಿಕೊಂಡು, ಅದರಿಂದಾಗಿ ಮುಂದೆ ಬರುವ ಮೊಮ್ಮಕ್ಕಳಿದ್ದಾಗ ಮಾತ್ರವೇ ಅಜ್ಜಿ ಕಥೆಗೊಂದು ಮೌಲ್ಯ. ಹಾಗೆ ಇಲ್ಲಿ ಜ್ಯೋತಿ ಇದ್ದಾಳೆ. ಅದನ್ನು ಕೇಳಿ ಬೆಳೆದ ಒಬ್ಬಳು ಮೊಮ್ಮಗಳು ಕಷ್ಟದಿಂದ ಸುಖದೆಡೆಗೆ ಸಾಗುವ ರೀತಿಯನ್ನು ಹಾಗೂ ಕಥೆ ಕೇಳದ ಮತ್ತೊಬ್ಬಳ ಬದುಕನ್ನು ಸಹಾ ತೋರುತ್ತಾರೆ. ಹಾಗೆಂದು, ಇದು ಮಕ್ಕಳ ಸಾಹಿತ್ಯವಲ್ಲ ಅಥವಾ ಅಜ್ಜಿ ಹೇಳುವ ಜಾನಪದ ಅಥವಾ ಅಜ್ಜಿ ಕತೆ ಮಾತ್ರವಲ್ಲ. ಬದಲಾಗಿ ಇದೊಂದು ವಿಶಿಷ್ಟ ಕಾದಂಬರಿಯಾಗಿ ರೂಪಿತವಾಗಿದೆ. ಈ ಕಾದಂಬರಿ 'ಸೌಂದರ್ಯ' ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.
ಕೃಷ್ಣವೇಣಿಯ ಮಗ ದಿವ್ಯಾನಂದ ಅಪಘಾತವಾಗಿ ಸತ್ತ ನಂತರ ಸೊಸೆ ವಸುಧಾಳ ಆಶ್ರಯದಲ್ಲಿದ್ದರೂ.. ಸೊಸೆ ಮನೆಯಲ್ಲಿ ಇಲ್ಲದಾಗ ಮೊಮ್ಮಕ್ಕಳ ಕಾಳಜಿ ಮಾಡುತ್ತಾ ಅವರನ್ನು ಪೋಷಿಸುತ್ತಿದ್ದರು. ಗಂಡ ತೀರಿಕೊಂಡ ಮೇಲೆ ವಸುಧಾ ಡಾಕ್ಟರ್ ಉಮಾ ಲ್ಶಂಕರ್ ಅವರ ಮನೆಯಲ್ಲಿ ಅಡುಗೆ ಕೆಲಸಕ್ಕೆಂದು ಹೋಗುತ್ತಿದ್ದಳು. ತಾನು ಕೆಲಸ ಮಾಡಿದರೂ.. ತನ್ನ ಮಕ್ಕಳು ಚೆನ್ನಾಗಿರಬೇಕು, ಚೆನ್ನಾಗಿ ಓದಬೇಕೆಂಬುದು ಅವಳ ಆಸೆ ಹಾಗೂ ಕನಸು. ಅವಳಿಗೆ ಇಬ್ಬರು ಮಕ್ಕಳು. ಮೊದಲನೆಯವಳು ಜ್ಯೋತಿ ಹಾಗೂ ಎರಡನೆಯವಳು ಪುಷ್ಪವಲ್ಲಿ.
ವಸುಧಾ ಕೃಷ್ಣವೇಣಿಗೆ ತಾನಾಗಿಯೇ ಯಾವ ವಿಷಯವನ್ನೇ ಆಗಲಿ ಹೇಳುತ್ತಿರಲಿಲ್ಲ. ಕೃಷ್ಣವೇಣಿಯೂ ಅಷ್ಟೇ.. ಸೊಸೆ ತಾನಾಗಿ ಹೇಳದೆ, ಮೇಲೆ ಬಿದ್ದು ಕೇಳಲು ಹೋಗುತ್ತಿರಲಿಲ್ಲ. ಅದು ಅವಳಿಗೆ ಇಷ್ಟವೂ ಆಗುವುದಿಲ್ಲ. ಇಬ್ಬರ ನಡುವೆ ವೈಮನಸ್ಸು ಇಲ್ಲದಿದ್ದರೂ.. ಅವರ ನಡುವಿನ ಬಾಂಧವ್ಯ ಅಷ್ಟು ಗಟ್ಟಿಯಾದದ್ದೇನಲ್ಲ. ಅವರಿಬ್ಬರ ನಡುವೆ ಕೊಂಡಿಯಂತಿದ್ದದ್ದು ಜ್ಯೋತಿ. ದಿವ್ಯಾನಂದ ಇದ್ದಾಗ ಹೊರಗೆ ಹೆಜ್ಜೆ ಇಡದ ವಸುಧಾ ಹೊರಗೆ ದುಡಿಯಲೇಬೇಕಾದ ಪರಿಸ್ಥಿತಿಗೆ ಬಂದಿದ್ದಳು. ಜ್ಯೋತಿಯ ಅದೃಷ್ಟ ಚೆನ್ನಾಗಿತ್ತೇನೋ.. ಡಾಕ್ಟರ್ ಉಮಾಶಂಕರ್ ಅವರು ಅವಳು ಎಷ್ಟು ಓದುತ್ತಾಳೋ ಓದಲಿ, ಅವಳ ಫೀಸು ಹಾಗೂ ಶಾಲಾ ಖರ್ಚನ್ನು ನಾನೇ ನೋಡಿಕೊಳ್ಳುತ್ತೇನೆ ಎಂದಿದ್ದರು. ಜ್ಯೋತಿಯ ಭವಿಷ್ಯವೇ ನಿರ್ಧಾರವಾಯಿತೇನೋ ಎನ್ನುವಷ್ಟು ಸಂತಸದಲ್ಲಿದ್ದಳು ವಸುಧಾ.
ದೊಡ್ಡವಳು ಜ್ಯೋತಿಗೆ ಅಜ್ಜಿಯ ಕತೆಗಳೆಂದರೆ ಅಚ್ಚುಮೆಚ್ಚು. ಆದರೆ, ಜ್ಯೋತಿ ಅಜ್ಜಿಯ ಬಳಿ ಕಥೆ ಕೇಳಲು ಕುಳಿತಾಗಲೆಲ್ಲಾ ವಸುಧಾಳಿಗೆ ಕೋಪ. ಮಗಳು ಎಲ್ಲಿ ಕಥೆ ಎಂದು, ಓದಿನಲ್ಲಿ ಹಿಂದುಳಿಯುತ್ತಾಳೋ ಎಂದು ಭಯ. ಇದನ್ನರಿತ ಕೃಷ್ಣವೇಣಿ ಹಾಗೂ ಜ್ಯೋತಿ ವಸುಧಾ ಇದ್ದಾಗ ಕತೆ ಹೇಳುವುದನ್ನು ಅಥವಾ ಕೇಳುವುದನ್ನು ಮಾಡುತ್ತಿರಲಿಲ್ಲ. ಜ್ಯೋತಿ ಓದಿನಲ್ಲಿ ಬಹಳ ಮುಂದಿದ್ದಳು. ಹಾಗೆಯೇ ಲೋಕಜ್ಞಾನ ಹಾಗೂ ಅಜ್ಜಿ ಕೊಟ್ಟ ತಿಳುವಳಿಕೆಯಿಂದ.. ಏನು ನಿರ್ಧಾರ ತೆಗೆದುಕೊಳ್ಳಬೇಕು ಹೇಗೆ ನಡೆದುಕೊಳ್ಳಬೇಕು ಎಂಬುದರಲ್ಲಿಯೂ ಮುಂದಿದ್ದಳು.
ಮಗಳ ಓದಿನ ಜೊತೆಗೆ ಮಗಳ ಮದುವೆಯ ವಿಚಾರವೂ ಅವಳ ತಲೆಯಲ್ಲಿತ್ತು. ಒಮ್ಮೆ ಡಾಕ್ಟರ್ ಮನೆಗೆ ಅವರ ಪತ್ನಿ ಶಾಂತಬಾಯಿಯವರ ತಂಗಿ ಶೈಲಾ ಬಂದು ಕೆಲ ದಿನಗಳಿದ್ದರು. ಅವರ ಹಾಗೂ ಅವರ ಮಕ್ಕಳಿಂದ ಮನೆಯವರೆಲ್ಲರಿಗೂ ತೊಂದರೆಯಾಗಿದ್ದರೂ.. ಹೋಗುವಾಗ ವಸುಧಾಳಿಗೆ ತನ್ನ ಶ್ರೀಮಂತಿಕೆ ತೋರಲು ಒಂದಿಷ್ಟು ಹಣ ಕೊಟ್ಟರು. ಅದನ್ನು ಏನು ಮಾಡುವುದೆಂದು ಯೋಚಿಸುತ್ತಿದ್ದವಳಿಗೆ ಕೃಷ್ಣವೇಣಿಯವರೇ ಅದಕ್ಕೆ ಇನ್ನೊಂದಿಷ್ಟು ಹಣ ಹಾಕಿ ಜ್ಯೋತಿಗೆ ಒಂದೆಳೆ ಸರ ಮಾಡಿಸಲು ಹೇಳಿದ್ದರು. ಶಾಂತಾಬಾಯಿಯವರೇ ಅದಕ್ಕೆ ಸಾಲದ ರೂಪದಲ್ಲಿ ಹಣ ಕೊಟ್ಟು ಆಕೆ ತಮ್ಮ ಮನೆ ಕೆಲಸ ಬಿಟ್ಟು ಹೋಗದಂತೆ ತಮ್ಮ ಋಣದಲ್ಲಿಟ್ಟುಕೊಂಡರು. ವಸುಧಾಳಿಗೆ ಗೊತ್ತೇ ಆಗದೆ ಅದರ ಸುಳಿಗೆ ಸಿಲುಕಿಯಾಗಿತ್ತು. ಒಡವೆ ಕಷ್ಟಕ್ಕಾದರೂ ಆಗಬಹುದು ಎಂದುಕೊಂಡರೆ.. ಜ್ಯೋತಿ ಹಾಗೂ ಅಜ್ಜಿ ದೇವಸ್ಥಾನಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಅದೂ ಕಳ್ಳತನವಾಯಿತು.
ವಸುಧಾಳಿಗೆ ಟ್ಯೂಮರ್ ಬಂದು ಅದನ್ನು ಆಪರೇಷನ್ ಮಾಡಿ ಕೂಡಲೇ ತೆಗೆಯಬೇಕಿತ್ತು. ಆದರೆ, ಅದರ ಖರ್ಚು ದೊಡ್ಡದೇ ಇತ್ತು. ಅದಕ್ಕಾಗಿ ಮನೆಯವರು ತೆತ್ತ ಬೆಲೆಯೂ ದೊಡ್ಡದೇ.
ಡಾಕ್ಟರ್ ಉಮಾಶಂಕರ್ ಅವರೇ ಖರ್ಚು ಕೊಟ್ಟು ಆಪರೇಷನ್ ಅನ್ನು ಮಾಡಿಸಿದ್ದರು. ಶಾಂತಾಬಾಯಿಯವರು ಆಸ್ಪತ್ರೆಗೆ ಬಂದು ನೋಡುವಷ್ಟು ಕಾಳಜಿ ತೋರಲಿಲ್ಲ. ಆದರೆ, ಅವರಿಗೆ ಹೊಳೆದ ಉಪಾಯವೇ ಬೇರೆ. ಆಕೆ ವಸುಧಾಳ ಸಾಲದ ನೆಪನ್ನಿಟ್ಟುಕೊಂಡು ಒಳ್ಳೆಯ ಕೆಲಸಗಾತಿ, ನೋಡಲು ಚೆನ್ನಾಗಿರುವ, ತಕ್ಕಮಟ್ಟಿಗೆ ಓದಿರುವ ಜ್ಯೋತಿಯನ್ನು ತಮ್ಮ ಮೊದಲ ಮಗ ಯಶೋವಂತನಿಗೆ ತಂದುಕೊಳ್ಳಲು ನೋಡಿದರು. ಆದರೆ, ಅವರಿಬ್ಬರ ಮಧ್ಯೆ 9 ವರ್ಷದ ವಯಸ್ಸಿನ ಅಂತರವಿತ್ತು. ವಯಸ್ಸಿನ ಅಂತರದಿಂದ ಮಾತ್ರವಲ್ಲದೆ, ಆತನ ದುರಭ್ಯಾಸಗಳನ್ನು ಮುಂದಿಟ್ಟುಕೊಂಡು ಮದುವೆಯನ್ನು ನಿರಾಕರಿಸಬಹುದಾಗಿದ್ದರೂ.. ಜ್ಯೋತಿ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದಳು. ಇದರಿಂದ ತನ್ನ ಮನೆಯ ಮೇಲಿರುವ ಸಾಲ ತೀರಿ ತನ್ನಮ್ಮ ಕಷ್ಟಪಡುವುದು ತಪ್ಪುತ್ತದೆ ಎಂಬುದರ ಜೊತೆಗೆ, ತನ್ನ ಬದಲಾಗಿ ತನ್ನ ತಂಗಿಯನ್ನು ಓದಿಸಬಹುದೆಂದು ತನ್ನ ಆಸೆಗಳನ್ನೆಲ್ಲಾ ತ್ಯಾಗ ಮಾಡಿದಳು.
ಯಶವಂತ ಮದುವೆಯಾದ ತಕ್ಷಣ ಬದಲಾಗದಿದ್ದರೂ.. ನಿಧಾನವಾಗಿ ಜ್ಯೋತಿಯ ಸಹನೆ ಆತನಲ್ಲಿ ಪಾಪಪ್ರಜ್ಞೆ ಮೂಡಿಸತೊಡಗಿತ್ತು. ಅಲ್ಲದೇ, ಜ್ಯೋತಿ ತನಗೆ ಅಜ್ಜಿ ಹೇಳಿದ್ದ ಕಥೆಗಳನ್ನೆಲ್ಲ ಆತನಿಗೆ ಹೇಳುವಾಗ ಆತನಲ್ಲಿಯೂ ಬದಲಾವಣೆ ಕಾಣುತ್ತಿತ್ತು. ಆ ಬದಲಾವಣೆ ಎಷ್ಟರಮಟ್ಟಿಗಿತ್ತು..?
ಈ ಸಂಧರ್ಭ ನನಗೆ ಅರೇಬಿಯನ್ ನೈಟ್ಸ್ ಕತೆಗಳನ್ನು ನೆನಪಿಸಿತು.
ತನ್ನ ಸುಖವನ್ನೇ ತೊರೆದು ಓದಿಸಿದ ಜ್ಯೋತಿಗೆ ತಂಗಿ ಪುಷ್ಪವಲ್ಲಿ ಒಂದು ಮಾತೂ ಹೇಳದೆ, ಸಾಧ್ಯವಾದಷ್ಟು ಜಾಗ್ರತೆಯಾಗಿ ಋಣಮುಕ್ತವಾಗಬೇಕೆನ್ನುತ್ತಾ ಲಂಡನ್ ಗೆ ಹಾರಿದಳು. ಅವಳ ಮುಂದಿನ ಬದುಕು ಹೇಗಿತ್ತು..?
ಯಶೋವಂತನ ತಮ್ಮ ಮದುವೆ ಮಾಡಿಕೊಂಡು, ಬೇರೆ ಮನೆ ಮಾಡಿಕೊಂಡು ಹೊರಟನು. ಅವರ ಹಾಗೂ ಇವರ ನಡುವೆ ಅಂತಹಾ ಸಾಮರಸ್ಯವೇನೂ ಇರಲಿಲ್ಲವಾದರೂ ಹೊಂದಿಕೊಂಡು ಹೋಗುತ್ತಿದ್ದಳು ಜ್ಯೋತಿ. ಆದರೆ, ಅವರಿಗೆ ಮಕ್ಕಳಿದ್ದರೂ.. ಜ್ಯೋತಿಗೆ ಮಗುವಿಲ್ಲದ ಕೊರತೆಯಿತ್ತು. ಆ ಕೊರತೆ ನೀಗಿದ್ದು ಹೇಗೆ..?
ಅಜ್ಜಿ ಹೇಳಿದ ಕಥೆಗಳನ್ನು ಕೇಳಿ ಬೆಳೆದ ಜ್ಯೋತಿ ತನ್ನನ್ನು ತಾನು ಮಾತ್ರ ಬದಲಾಯಿಸಿಕೊಳ್ಳದೆ, ತನ್ನ ಸುತ್ತಲಿನವರನ್ನೂ ಬದಲಾಯಿಸಿದಳು. ಒಂದೇ ಮನೆಯಲ್ಲಿ ಇದ್ದರೂ.. ಒಂದೇ ತಾಯಿಯ ಮಕ್ಕಳಾದರೂ.. ಹೋಲಿಕೆ ಇಲ್ಲದ ಜ್ಯೋತಿ ಹಾಗೂ ಪುಷ್ಪವಲ್ಲಿ. ಪುಷ್ಪವಲ್ಲಿಗೆ ಅಜ್ಜಿಯ ಕತೆಗಳನ್ನು ಕೇಳುವ ಆಸಕ್ತಿ ಇರಲಿಲ್ಲ. ಕಥೆ ಕೇಳುವ ಹವ್ಯಾಸವನ್ನೇ ಇಟ್ಟುಕೊಂಡಿರದ ಪುಷ್ಪವಲ್ಲಿ ಬದುಕು ಹೇಗೆ ಬದಲಾಯಿತು..?
'ಕನಸಿನ ರಾಣಿ' ಇಲ್ಲಿ ಕೇವಲ ಕಥೆಗಳಲ್ಲಿ ಮಾತ್ರವಿಲ್ಲ. ತನ್ನ ಕನಸನ್ನು ನನಸು ಮಾಡಿಕೊಳ್ಳುವುದರಲ್ಲಿಯೂ ಕಾಣುತ್ತಾಳೆ. ಕಾದಂಬರಿಯ ಅಂತ್ಯ ಬದುಕಿನಲ್ಲಿ ರೂಢಿಸಿಕೊಳ್ಳುವ ಆದರ್ಶವನ್ನು ನೀತಿಪಾಠದಂತೆ ಹೇಳುತ್ತಿದೆ. ಒಂದು ಭತ್ತ ಹಾಗೂ ಒಂದು ಮುಷ್ಠಿ ಭತ್ತದ ಕಥೆಯನ್ನು ಬಹಳ ಮಾರ್ಮಿಕವಾಗಿ ಹೇಳುತ್ತಾ ಕಟ್ಟಿಕೊಟ್ಟಿರುವ ಸುಂದರ ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ