ಪುಸ್ತಕದ ಶೀರ್ಷಿಕೆ : ಗಾದಿ
ಲೇಖಕರು : ಪ್ರೇಮಾ ಭಟ್
ಪ್ರಕಾಶಕರು : ಪ್ರೇಮಸಾಯಿ ಪ್ರಕಾಶನ
ಪ್ರಥಮ ಮುದ್ರಣ : 2002
ಪುಟಗಳು : 136
ಗ್ರಂಥಾಲಯದಲ್ಲಿ ನಾವೆಲ್ಲರೂ ಕಾದಂಬರಿಗಳನ್ನು ಓದುವುದು ಸರ್ವೇಸಾಮಾನ್ಯ. ಆದರೆ, ಇಲ್ಲಿ ಕಾದಂಬರಿಯೇ ಗ್ರಂಥಾಲಯದ ಕುರಿತ ಕಥಾವಸ್ತುವುಳ್ಳದ್ದು. ಕನ್ನಡಿಗರ ಗ್ರಂಥಾಲಯದ ಕುರಿತ ಆಸಕ್ತಿ ತಿಳಿವನ್ನು ಹೆಚ್ಚಿಸುವ ಪ್ರಚೋದಿಸುವ ಯೋಚನೆ ರಾಮಕ್ಕ ಪದ್ಮಕ್ಕ ಸೇವಾ ನಿಧಿಗೆ ಬಂದು ಅದರ ಫಲವಾಗಿ ತರಂಗ ವಾರಪತ್ರಿಕೆಯ ಸಹಕಾರದಿಂದ 1997ರಲ್ಲಿ ಗ್ರಂಥಾಲಯ ಬೆಳವಣಿಗೆಗೆ ಪೂರಕವಾದ ಕಥಾವಸ್ತುವುಳ್ಳ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಇಂತಹದ್ದು ಕರ್ನಾಟಕದಲ್ಲಿಯೇ ಮೊಟ್ಟ ಮೊದಲನೆಯ ಸ್ಪರ್ಧೆ. ಈ ಕಥಾ ಸ್ಪರ್ಧೆಯ ಬಹುಮಾನ ಮೂರು ಜನ ಲೇಖಕರಿಗೆ ಸಮನಾಗಿ ಹಂಚಿಕೆಯಾಯಿತು. ಅದರಲ್ಲಿ ಲೇಖಕಿ ಪ್ರೇಮಾ ಭಟ್ ಅವರು ಕೂಡಾ ಒಬ್ಬರು. ಅವರ ಈ ಗಾದಿ ಕಾದಂಬರಿ ಗ್ರಂಥಾಲಯದ ಕುರಿತಾದ ಕಥಾವಸ್ತುವನ್ನು ಹೊಂದಿದೆಯಾದರೂ.. ಕಥೆಯ ಶೀರ್ಷಿಕೆ 'ಗಾದಿ' ಎಂದಿರುವುದು ಮತ್ತಷ್ಟುಕುತೂಹಲ ಮೂಡಿಸುತ್ತದೆ.
ಕರಿಬಸಪ್ಪನವರಿಗೆ ಜಿಲ್ಲಾ ಗ್ರಂಥಾಲಯ ತುಮಕೂರಿಗೆ ವರ್ಗಾವಣೆಯಾದ್ದರಿಂದ ಅವರ ಜಾಗಕ್ಕೆ ಅಪ್ಸರಾ ಬಂದಿದ್ದಳು. ಗ್ರಂಥಾಲಯ ವಸಂತ ಮಹಲಿನ ಪೋರ್ಟಿಕೋದಿಂದ ನಿಂತು ನೋಡಿದರೆ ಬೆಂಗಳೂರಿನ ದೃಶ್ಯಾವಳಿಗಳು ಸೊಗಸಾಗಿ ಕಾಣುತ್ತಿದ್ದವು. ಗ್ರಂಥಾಲಯವೆಂದರೆ ಅಲ್ಲಿ ಶಿಸ್ತುಬದ್ಧವಾದ ಜೀವನ, ಕನ್ನಡದ ಬಳಕೆ ಹಾಗೂ ಕಟ್ಟುನಿಟ್ಟಾದ ಸಮಯ ಪಾಲನೆ ಇರಬೇಕು ಎಂದು ಆಶಿಸುತ್ತಿದ್ದ ಅಪ್ಸರಾಳಿಗೆ ಇಲ್ಲಿ ಅದಾವುದೂ ಕಂಡು ಬರಲಿಲ್ಲ.
ಅಪ್ಸರಾ ತಂದೆಯ ಮಾತಿನಂತೆ ಓದಿನಿಂದಲೇ ಉದ್ಯೋಗ ಹುಡುಕಿಕೊಳ್ಳಬೇಕೆಂದು ತನ್ನ ಜೀವನವನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದ ಕಷ್ಟ ಜೀವಿ. ಅಣ್ಣ ಸರಿಯಾಗಿದ್ದಿದ್ದರೆ ಪರವಾಗಿರಲಿಲ್ಲ.. ಆದರೆ, ಮನೆಯ ಜವಾಬ್ದಾರಿಯೂ ಈಗ ಈಕೆಯ ಮೇಲೆಯೇ ಇದ್ದುದರಿಂದ ದೂರದ ಬಂಧು ಒಬ್ಬರ ಮನೆಯಲ್ಲಿದ್ದು, ಅವರ ಮನೆಯ ಸಹಾಯಕಳಾಗಿ.. ಬರುತ್ತಿದ್ದ ಸಂಬಳವನ್ನು ಅಮ್ಮನಿಗೆ ಕಳುಹಿಸುತ್ತಲೇ ಆ ಮನೆಯವರ ಸಲಹೆಯಂತೆ ಬಿ.ಲಿಬ್ ಮಾಡಿಕೊಂಡು ಸಹಾಯಕ ಗ್ರಂಥಪಾಲಕರ ಹುದ್ದೆ ಸಿಕ್ಕಿ ಜೀವನ ಕಟ್ಟಿಕೊಂಡಿದ್ದಳು.
ಅಲ್ಲಿನ ಸಹಾಯಕ ಗ್ರಂಥಾಧಿಕಾರಿ ಲಿಂಗರಾಜು ಮಂಡ್ಯ ಜಿಲ್ಲೆಯಲ್ಲಿದ್ದ. 'ಯಶವಂತ ಈಗ ಮೈಸೂರಲ್ಲಿ ಗ್ರಂಥಾಲಯದಲ್ಲಿದ್ದಾನೆ. ಅವನು ನಿಮ್ಮ ಹಸ್ಬೆಂಡ್ ಎಂದು ಕೇಳಿದೆ. ನಿಜವೇ..?!' ಎಂದಾಗ ವೈಯಕ್ತಿಕ ವಿಚಾರವನ್ನು ಚರ್ಚಿಸಲು ಇಷ್ಟವಿದ್ದವಿಲ್ಲದಿದ್ದರೂ.. ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಳು.
ಮನೆಯ ಪಕ್ಕದಲ್ಲಿದ್ದ ಹುಡುಗಿ ಪುಟ್ಟ ಪ್ರಿಯಾಂಕಾಳ ಮಾತು ಸಹಾ ಅವಳ ವೈಯಕ್ತಿಕ ಬದುಕಿನ ಸೋಲಿನಂತೆ ಕಂಡಿತ್ತು. ದೂರದಲ್ಲಿದ್ದ ಅಣ್ಣ, ಅಮ್ಮ ತೀರಿಕೊಂಡ ಮೇಲೆ ಒಬ್ಬಂಟಿಯಾಗಿದ್ದ ಆಕೆಗೆ ಸಮಾಜ ಆಗಾಗ ಗಂಡ ಬಿಟ್ಟವಳು ಎಂದು ಹಂಗಿಸುವುದಿತ್ತು. ಮಗುವಾದರೂ ಇದ್ದಿದ್ದರೆ ಎಂಬ ದೂರದ ಆಸೆಯೂ ಇತ್ತು. ಆದರೆ, ಅದೂ ಇರಲಿಲ್ಲ.
ದಿನೇ ದಿನೇ ಲಿಂಗರಾಜುವಿನೊಡನೆ ಸ್ನೇಹ ಹೆಚ್ಚುತ್ತಿತ್ತು. ಪುಸ್ತಕ ವಿನಿಮಯ, ಚರ್ಚೆ ಮನೆಯವರಿಗೂ ಬಂದಿತ್ತು. ಕಚೇರಿಯಲ್ಲಿ ಬೇರೆಲ್ಲರೂ ಅಪ್ಸರಾಳನ್ನು, ಆಕೆಯ ಕರ್ತವ್ಯ ಪಾಲನೆಯನ್ನು ಖಂಡಿಸುತ್ತಿದ್ದರೂ.. ಲಿಂಗರಾಜು ಮಾತ್ರ ಅದೆಲ್ಲದರ ಜೊತೆಗೆ ಆಕೆಗೆ ಆಪ್ತವಾಗಿದ್ದ. ಉಳಿದವರು ತಮ್ಮ ನಡೆಯನ್ನು ತಿದ್ದಿಕೊಳ್ಳುವ ಬದಲಾಗಿ ಆಕೆಯನ್ನು ಅಲ್ಲಿಂದ ತೊಲಗಿಸಿ ತಮ್ಮ ಮೊದಲಿನ ಸ್ವೇಚ್ಛೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ತಂತ್ರಗಾರಿಕೆ ನಡೆಸಿದರು. ಅದೆಲ್ಲದಕ್ಕೂ ಬಲಿಪಶುವಾದಳು ಅಪ್ಸರಾ. ಲಿಂಗರಾಜುವಿಗೆ ಈ ಯಾವ ಕುತಂತ್ರದ ವಾಸನೆಯೂ ಹತ್ತಿರಲಿಲ್ಲ. ಅದಾದ ನಂತರವೂ ಆ ಗುರುತರ ಆಪಾದನೆಯಿಂದ ಆಕೆಯನ್ನು ಪಾರು ಮಾಡಲಾಗಲಿಲ್ಲ. ಅಂತಹಾ ಆಪಾದನೆ ಕುರಿತು ನೀವೇ ಓದಿ ತಿಳಿಯಿರಿ.
ಆಕೆಗೆ ತನ್ನ ಪ್ರಾಮಾಣಿಕತೆಯ ಫಲವಾಗಿ ಸಿಕ್ಕಿದ್ದು ಮೈಸೂರಿನ ಗ್ರಂಥಾಲಯಕ್ಕೆ ವರ್ಗಾವಣೆ. ಆದರೆ, ಇಲ್ಲಿಂದ ಅಲ್ಲಿಗೆ ಹೋಗುವ ಮುನ್ನ ಲಿಂಗರಾಜುವಿನ ಸ್ನೇಹದಿಂದ ಆತನ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ್ದಳು. ಅಲ್ಲಿ ಆತನ ತಾಯಿ ಹಾಗೂ ತಂಗಿಯರ ಪರಿಚಯವಾಗಿತ್ತು.
ಮುಂದೆ ಇವರ ಓಡನಾಟವೇನೂ ನಿಲ್ಲಲಿಲ್ಲ. ಲಿಂಗರಾಜು ತಾನೇ ಮುಂದಾಗಿ ಆಕೆಯ ಜೊತೆಗೆ ತನ್ನ ವಿವಾಹದ ಕುರಿತು ಪ್ರಸ್ತಾಪಿಸಿದಾಗ ಆಕೆ ಒಪ್ಪಿದಳು. ಆಕೆ ಲಿಂಗರಾಜುವಿನ ಕುಟುಂಬದ ಜವಾಬ್ದಾರಿಯನ್ನು ಹೊರಬೇಕಾಗಿ ಬಂದಾಗ ವಿಚಲಿತಳಾಗಲಿಲ್ಲ. ಬದಲಾಗಿ, ಅದನ್ನು ಪ್ರೀತಿಯಿಂದಲೇ ಸ್ವೀಕರಿಸಿದ್ದಳು. ಲಿಂಗರಾಜುವಿನ ತಂಗಿಯ ವಿವಾಹದ ಸಂಧರ್ಭದಲ್ಲಿ ತಾನು ಪ್ರೀತಿಯಿಂದ ಕೊಂಡಿದ್ದ ಏಕೈಕ ಕಾರನ್ನು ಮಾರಬೇಕಾಗಿ ಬಂದಾಗಲೂ ಆಕೆ ಯಾವುದೇ ಕಹಿ ಭಾವನೆ, ಅಸಹನೆ ಇಟ್ಟುಕೊಳ್ಳದೆ ಆತನಿಗೆ ಸಹಕರಿಸುತ್ತಾಳೆ. ದುಡಿದು, ದುಡಿದು ಹಣ್ಣಾಗುತ್ತಿರುವಾಗಲೇ ಯಶವಂತನ ಕಾಕದೃಷ್ಟಿಯೂ ಬಿದ್ದು.. ಆಕೆ ಕೆಲಸವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಪ್ರಾಮಾಣಿಕತೆಗೆ ಬೆಲೆಯಿಲ್ಲವಾದರೂ.. ಹುಷಾರಾಗಿಯೇ ತನ್ನ ಕಾರ್ಯಗಳನ್ನು ನಿಭಾಯಿಸುತ್ತಿದ್ದ ಅಪ್ಸರಾ ಮೋಸ ಹೋದದ್ದಾದರೂ ಹೇಗೆ..?? ಅದು ತನ್ನ ವಿರುದ್ದದ ಕುತಂತ್ರವಾಗಿತ್ತು ಎಂದು ತಿಳಿದಾಗ ಆಕೆಯ ಪ್ರತಿಕ್ರಿಯೆ ಏನಿತ್ತು..??
ಅಪ್ಸರಾಳಿಗೆ ಮನೆಯಲ್ಲಿ ಮೊದಲಿದ್ದ ಬೆಲೆ ಸಿಗುತ್ತಿರಲಿಲ್ಲ. ಆದರೆ, ಹಣ ಬೇಕಾದಾಗ ಎಲ್ಲರಿಗೂ ಇವಳೇ ದಿಕ್ಕು. ತಂಗಿಯ ಬಾಣಂತನ, ತಂಗಿಯ ಗಂಡನ ಅಪಘಾತದ ಚಿಕಿತ್ಸೆಗೂ ಇವಳೇ ಹಣ ತೆರಬೇಕಾಗಿ ಬಂದಾಗ ಕುಟುಂಬದ ಹಿತದೃಷ್ಟಿಯಿಂದ ನೋಡುವ ಅಪ್ಸರಾ ಅದಕ್ಕೂ ಹಿಂದೆ-ಮುಂದೆ ಆಲೋಚಿಸುವುದಿಲ್ಲ.
ಆದರೆ, ಅವಳ ಭಾವನೆಗಳಿಗೆ ದೊಡ್ಡ ಹೊಡೆತ ಬಿದ್ದಾಗ ಮನಸ್ಸು ಘಾಸಿಗೊಳ್ಳುತ್ತದೆ. ಲಿಂಗರಾಜು ಅವಳನ್ನು ಮದುವೆಯಾದದ್ದು ಅವಳ ಮೇಲಿನ ಪ್ರೀತಿಯಿಂದಲ್ಲ.. ಬದಲಾಗಿ, ಅವಳ ಹಣಕ್ಕಾಗಿ ಎಂದು ತಿಳಿದಾಗಲೂ ಆಕೆ ಸಾವರಿಸಿಕೊಂಡು ಸಾಗುತ್ತಿದ್ದಳು. ಆಕೆ ವೃತ್ತಿಯ ಸಹೋದ್ಯೋಗಿ, ಸ್ನೇಹಿತನಾಗಿ ನೋಡಿದ್ದ ಲಿಂಗರಾಜುವಿಗೂ.. ವಿವಾಹವಾದ ನಂತರ ನೋಡುತ್ತಿದ್ದ ಲಿಂಗರಾಜುವಿಗೂ ಬಹಳ ವ್ಯತ್ಯಾಸವಿತ್ತು. ತಾನು ಆಸೆಪಡುತ್ತಿದ್ದ ಮಗು ತನ್ನ ಒಡಲಲ್ಲಿ ಪಡಿಮೂಡುತ್ತಿದೆ ಎಂದು ತಿಳಿದಾಗ ಆಕೆ ಸಂಭ್ರಮಿಸಿದ್ದಳು. ಆದರೆ, ಲಿಂಗರಾಜು ಆ ಮಗುವನ್ನು ತೆಗೆಸಲು ಹೇಳಿದ್ದ. ಆದರೆ, ಅನಿರೀಕ್ಷಿತ ಸಂಧರ್ಭದಲ್ಲಿ ಮಗು ಅವಳಿಂದ ಜಾರಿಯಾಗಿತ್ತು.
ಇದರ ನಂತರ ಅಪ್ಸರಾ ಒಂದು ನಿರ್ಧಾರಕ್ಕೆ ಬರುತ್ತಾಳೆ. ಅದಕ್ಕೂ ಅವಳ ಕನಸಿಗೂ.. ಈ ಕಾದಂಬರಿಯ ಶೀರ್ಷಿಕೆಗೂ ಒಂದು ಸಂಬಂಧವಿದೆ. ಆ ಸಂಬಂಧವೇನು...?
ಒಬ್ಬ ಮಹಿಳೆ ಮಠಾಧಿಪತಿಯಾಗಿ 'ಗಾದಿ'ಯನ್ನು ಅಲಂಕರಿಸಿದುದರ ಹಿಂದಿನ ಘಟನೆಗಳ ಸರಮಾಲೆ ಇಲ್ಲಿ ಕಂಡು ಬರುತ್ತದೆ.
ಲಿಂಗರಾಜುವಿಗೆ ತನ್ನ ಬದುಕಿನ ಘೋರ ಸತ್ಯವೊಂದು ತಿಳಿದು ಬರುತ್ತದೆ. ಅದೆಂದರೆ, ಆತನ ತಾಯಿ ಸ್ವಂತ ತಾಯಿಯಲ್ಲ. ತನ್ನ ತಂಗಿಯರು, ಬಳಗ ಎಂದುಕೊಂಡಿದ್ದವರು ತನ್ನವರೇ ಅಲ್ಲವೆಂದು. ಅದನ್ನು ತಿಳಿದ ನಂತರ ಬದಲಾದ ಆತನ ಬದುಕಿನ ಗತಿಯೇನು..?
ಇಲ್ಲಿ ಹೆಣ್ಣಾಗಿ ಅಪ್ಸರಾ ಭಾವುಕತೆಯ ಬದಲಾಗಿ ನಿರ್ಲಿಪ್ತತೆ, ಸಮಚಿತ್ತತೆಯತ್ತ ಸಾಗುತ್ತಾ ಹೋದರೆ.. ಲಿಂಗರಾಜು ತಾನು ಗಂಡಾಗಿ ಭಾವುಕತೆಯ ಕೈಗೆ ಬುದ್ದಿ ಕೊಟ್ಟನೆಂದೆನಿಸಿತು.
ಅಂತ್ಯವಂತೂ ಊಹಿಸಲು ಸಾಧ್ಯವೇ ಆಗುವುದಿಲ್ಲ. ಹಾಗೂ ಆ ತಿರುವು ಒಂದು ಪಥದಲ್ಲಿ ಸಾಗುತ್ತಿದ್ದವರನ್ನು ಬೇರೆಯದ್ದೇ ಲೋಕಕ್ಕೆ ಎತ್ತಿ ಎಸೆದಂತೆನ್ನಿಸಿತು.
ಇಲ್ಲಿ ಗ್ರಂಥಾಲಯದ ಹಲವು ಅಕ್ರಮಗಳನ್ನು ತೆರೆದಿಟ್ಟಿದ್ದಾರೆ. ಅದನ್ನು ಓದಿದಾಗ ಹೀಗೆಲ್ಲಾ ಇರುತ್ತದಾ ಎಂದು ಅಚ್ಚರಿಯಾಗಿದ್ದಂತೂ ಹೌದು. ಸಂಚಾರಿ ಗ್ರಂಥಾಲಯದ ಕುರಿತ ವಿಚಾರವೂ ಇಷ್ಟವಾಯಿತು. ಒಳ್ಳೆಯ ಹಾಗೂ ವಿಭಿನ್ನ ಕಥಾವಸ್ತುವಿನಿಂದ ಈ ಕಾದಂಬರಿ ಪ್ರೇಮಾಭಟ್ ಮೇಡಂ ಅವರ ಉಳಿದ ಪುಸ್ತಕಗಳಿಗಿಂತ ತುಸು ಹೆಚ್ಚೇ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ