ಶನಿವಾರ, ಏಪ್ರಿಲ್ 18, 2026

ಅಪ್ಪನೆಂಬ ಆಕಾಶ

'ಅಪ್ಪ' ಎಂಬ ಶಬ್ದಕ್ಕೆ ಅದೆಷ್ಟು ರೀತಿಯ ವ್ಯಾಖ್ಯಾನ ನೀಡಬಹುದು.. ವಿವಿಧ ಪುಸ್ತಕಗಳನ್ನು ಓದುವಾಗ ಅದೆಷ್ಟು ರೀತಿಯ ಅಪ್ಪಂದಿರನ್ನು ಕಾಣಬಹುದು. ಆದರೆ, ಮನಸ್ಸಿಗೆ ಹತ್ತಿರವಾಗುವ ಅಪ್ಪನ ಪಾತ್ರ ನಮ್ಮ ನಿಜಜೀವನದಲ್ಲಿಯೂ ಹತ್ತಿರವಾಗಿದ್ದಾಗಲಷ್ಟೇ ತೀರಾ ಆಪ್ತವೆಂದೆನ್ನಿಸುತ್ತದೆ. ನನ್ನ ಓದಿನ ಪರಿಮಿತಿಯಲ್ಲಿ 'ಅಪ್ಪ'ನ ಆಯಾಮಗಳನ್ನು ತಿಳಿದಂತೆ ಹೇಳುತ್ತಾ ಸಾಗುತ್ತೇನೆ.


'ಸಾಯಿಸುತೆ'ಯವರ ಮುಗಿಲ ತಾರೆ ಹಾಗೂ ಶರದೃತುವಿನ ಚಂದ್ರ ಕಾದಂಬರಿಯಲ್ಲಿ ಕಂಡುಬರುವ 'ಭಾಷ್ಯಂ' ತನ್ನ ಓದಿಗೆ ತಕ್ಕ ಹುಡುಗಿ ಸಿಗಲಿಲ್ಲವೆಂದು ಹೆಂಡತಿಯ ಮೇಲೆ ಕೆಲವೊಮ್ಮೆ ಕೋಪ ತೋರಿದರೂ.. ಮಕ್ಕಳ ಪಾಲಿಗೆ ಬಹಳ ಒಳ್ಳೆಯ ಅಪ್ಪ. ಚೈತ್ರ ಹಾಗೂ ಸ್ಮಿತಾ ಇಬ್ಬರಿಗೂ ದಕ್ಕಿದ ಅಪ್ಪ ವಿಭಿನ್ನವೇ. ಹಾಗೆಂದು ಮಕ್ಕಳ ತಪ್ಪನ್ನು ತಿಳಿಸದೇ ಬಿಟ್ಟವರಲ್ಲ. ಅಲ್ಲದೆ, ದೊಡ್ಡ ಮಗಳು ಚೈತ್ರಳಿಗೆ ಮಾನಸಿಕ ಬೆಂಬಲ ಬೇಕಾದಾಗ ಅದನ್ನು ಸಹಾ ನೀಡುತ್ತಾರೆ. ಸ್ಮಿತಾಳ ಗಂಡ ಸಂದೀಪ ಹಾಗೂ ಸ್ಮಿತಾ ಇಬ್ಬರೂ ಆ ಮನೆಯ ಜವಾಬ್ದಾರಿ ತೆಗೆದುಕೊಳ್ಳದೆ ಹುಡುಗಾಟಿಕೆಯಲ್ಲಿಯೇ ಜೀವನ ನಡೆಸುತ್ತಿದ್ದಾಗ ಕೂಡಾ ತಿದ್ದಿ ಬುದ್ದಿ ಮಾತು ಹೇಳುತ್ತಾರೆ. ಅಳಿಯನನ್ನು ಮಗನ ಸ್ಥಾನದಲ್ಲಿ ಕಂಡು ಬುದ್ದಿ ಹೇಳುವ ಪರಿ ಹಾಗೂ ಅದರಲ್ಲಿ ಅವರು ತೋರುವ ಪ್ರಬುದ್ಧತೆ ತಂದೆಯ ಗಾಂಭೀರ್ಯವನ್ನು ಬಿಡಿಸಿಡುತ್ತದೆ.


ಅಕ್ಷಯ್ ಪಂಡಿತ್ ಅವರ 'ಬಯಲಲಿ ತೇಲುತ ತಾನು' ಕಥಾ ಸಂಕಲನದಲ್ಲಿ ನೀಲಿ ನಕ್ಷತ್ರ ಕತೆಯಲ್ಲಿ ಕಂಡ ಅಪ್ಪನ ಪಾತ್ರ ವಾಸ್ತವಕ್ಕೆ ಬಹಳ ಹತ್ತಿರವೆನ್ನಿಸಿತು. ಕೆಲವು ತಂದೆಯರಿಗೆ ಮಕ್ಕಳು ತಮ್ಮಂತೆಯೇ ಆಗಿ ತಮ್ಮದೇ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಆಸೆಯಿದ್ದರೆ.. ಇನ್ನು ಕೆಲವು ಅಪ್ಪಂದಿರು, ಮಕ್ಕಳು ತಮ್ಮಂತಾಗದೆ.. ತಮಗಿಂತ ಇನ್ನೂ ದೊಡ್ಡ ಹುದ್ದೆಗೇರಿ ತಮಗೆ ಹೆಸರು ತರಲಿ ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಎಲ್ಲವೂ ಅವರವರ ವೃತ್ತಿಯ ಮೇಲೆ  ಹಾಗೂ ಅವರವರ ಆಲೋಚನೆಯ ಮೇಲೆ ಅವಲಂಬಿತ. ರಮಾಕಾಂತಗೌಡ ಎನ್ನುವ ಬ್ಲೂ ಸ್ಟಾರ್ ಸೆಕ್ಯೂರಿಟಿ ತನ್ನ ಮಗ ರಮೇಶ ತನ್ನಂತಾಗದೇ ಎತ್ತರಕ್ಕೇರಲಿ ಎಂದು ಆಶಿಸುವ ತಂದೆ. ಆದರೆ, ಮಗನ ಬದುಕಿನ ತಿರುವು ಬೇರೆಯೇ ಇತ್ತು. ಹಾಗಾದಾಗ, ತಂದೆಯ ಮನಸ್ಸಿನ ಭಾವಗಳು ಹೇಗಿರುತ್ತವೆ ಎಂದೂ ಆಲೋಚಿಸುವಂತೆ ಮಾಡಿತ್ತು.


ಜೋಗಿಯವರ 'ನಿರ್ಗಮನ' ಕಾದಂಬರಿ ಬೆಳೆಯುವುದೇ ಕಾಣೆಯಾದ ಅಪ್ಪನ ಹುಡುಕಾಟದಲ್ಲಿ. ಅನಿರುದ್ಧನ ತಂದೆ ಶಾರದಾಪ್ರಸಾದ್ ಕಾಣೆಯಾದಾಗ ಶುರುವಾಗುವ ಕತೆ ಬೆಳೆಯುವ ಪರಿ ವಿಭಿನ್ನ. ಇಲ್ಲಿ ಗಂಡು ಮಕ್ಕಳು ಹಾಗೂ ತಂದೆಯ ಒಡನಾಟಕ್ಕೆ ಹೆಚ್ಚಿನ ಆದ್ಯತೆ ಇದೆ ಎಂದೆನ್ನಿಸಿತು. ಇದು ಹೆಣ್ಣುಮಕ್ಕಳು ಹಾಗೂ ತಂದೆಯ ಒಡನಾಟಕ್ಕಿಂತ ವಿಭಿನ್ನ. ಬಹುಶಃ, ನಮ್ಮ ಜೀವನದಲ್ಲಿಯೂ ಇದನ್ನು ಕಾಣಬಹುದು. ಈ ವ್ಯತ್ಯಾಸವನ್ನು ಅರಿಯಬಹುದು. ತಂದೆ ಕಾಣೆಯಾದಾಗ ಅವರು ಬೇಕೆಂದು ಒಂಟಿಯಾಗಿರಲು ಆಯ್ದುಕೊಂಡ ಸಂಧರ್ಭ, ಅದಾದ ನಂತರ ಅವರು ಹಾಗೂ ಮಗನ ವಿಭಿನ್ನ ಪ್ರಪಂಚಗಳು ಎಲ್ಲವೂ ಚಿತ್ರಿತವಾಗಿ ಕತೆ ಬೇರೆಯದ್ದೇ ತಿರುವು ಪಡೆಯುತ್ತದೆ. ಸಂಗಾತಿಯ ಅನುಪಸ್ಥಿತಿಯಲ್ಲಿ ತಂದೆಯಾದವನು ಮಗನ ಜೊತೆಗೆ ಬೆಸೆದುಕೊಳ್ಳುವ ಕೊಂಡಿಯೇ ಮಾಯವಾಯಿತಾ ಎಂದು ಆಲೋಚಿಸುವಂತಾಗುತ್ತದೆ. 


ಎ. ಪಿ. ಮಾಲತಿಯವರ 'ವಸಂತದ ಹೂವುಗಳು' ಕಥಾಸಂಕಲನದ 'ಅವನು ಮತ್ತು ಮಗು' ಕತೆಯಲ್ಲಿ ಬರುವ ಅಪ್ಪನೂ ವಿಭಿನ್ನವಾಗಿ ಕಂಡನು. ಮಗು ಅಪ್ಪನಂತಿದೆಯಾ ಇಲ್ಲವೇ ಅಮ್ಮನಂತಿದೆಯಾ ಎಂದು ಜನರು ಸುಲಭವಾಗಿ ನಿರ್ಧರಿಸಿಬಿಡುತ್ತಾರೆ. ಅದರಲ್ಲಿಯೂ ಮಗು ಕೊಂಚ ಚೆನ್ನಾಗಿ ಕಂಡು, ಅಪ್ಪ ಅಥವಾ ಅಮ್ಮ ಅದಕ್ಕಿಂತ ಕಪ್ಪು ಅಥವಾ ಸಾಧಾರಣ ರೂಪಿನವರಾಗಿದ್ದರೆ ಇದು ಅವರದ್ದೇ ಮಗು ಎನ್ನುವ ಅನುಮಾನ ಮೂಡಿಬಿಡುತ್ತದೆ. ದಾದರ್ ರೈಲ್ವೆ ನಿಲ್ದಾಣದಲ್ಲಿ ಚೆಂದದ ಮಗುವನ್ನು ಎತ್ತಿಕೊಂಡ ಅವನು ಅದನ್ನು ಸಂಭಾಳಿಸದೆ ಒದ್ದಾಡುತ್ತಿರುವುದನ್ನು ಕಂಡು ಒಬ್ಬ ಯುವಕನಿಗೂ ಈ ಅನುಮಾನವೇ ಬಂದಿತು. ಅದು ಅವನದೇ ಮಗುವಾ ಅಥವಾ ಅವನು ಮಗುವನ್ನು ಕದ್ದುಕೊಂಡು ಬಂದು ಅದನ್ನು ಸಂಭಾಳಿಸಲಾಗದೆ ಒದ್ದಾಡುತ್ತಿರುವನಾ ಎಂದು. ಈ ಕಥೆ ನಮ್ಮ ನೋಡುವ ಕಣ್ಣಿಗೂ ಅಲೋಚಿಸುವ ಮನಸ್ಥಿತಿಗೂ ಹಿಡಿದ ಕನ್ನಡಿಯಂತಿದೆ. ಆದರೆ, ಆ ಮಗು ಆತನದ್ದೇ ಆಗಿತ್ತು. ಪತ್ನಿಯಿಲ್ಲದ ಪರಿಸ್ಥಿತಿಯಲ್ಲಿ ಮಗುವನ್ನು ಸಂಭಾಳಿಸಲು ಆತ ಪಡುತ್ತಿದ್ದ ಪಾಡು, ಮಗುವಿನ ಚೆಂದದ ಬಟ್ಟೆ ಹಾಗೂ ಆತನ ಮಾಸಿದ ಬಟ್ಟೆ ಅದೆಲ್ಲದಕ್ಕೂ ಕಾರಣವಾಗಿತ್ತು. ಅಪ್ಪನೇ ಹಾಗಲ್ಲವಾ..? ತಾನು ಹೇಗೆಯೇ ಇದ್ದರೂ.. ತನ್ನ ಮಗು ಚೆನ್ನಾಗಿರಬೇಕು ಎಂದು ಆಶಿಸುವಾತ. 


ಡಾ. ಅಜಿತ್ ಹರೀಶಿ, ವಿಠಲ್ ಶೆಣೈ ಅವರ 'ಕಥಾಭರಣ' ಕಥಾಸಂಕಲನದಲ್ಲಿ ವಾಣಿ ಕಾಮತ್ ಅವರು 'ಅಪ್ಪ' ಎಂಬ ಶೀರ್ಷಿಕೆಯಡಿಯಲ್ಲಿ ಅಪ್ಪನ ಕುರಿತ ಕತೆಯೊಂದನ್ನು ಕಟ್ಟಿಕೊಟ್ಟಿದ್ದಾರೆ. ಅಪ್ಪ ಎಂಬ ವ್ಯಕ್ತಿ ಒಂದು ರೀತಿಯಲ್ಲಿ ನಿಗೂಢತೆಯನ್ನೇ ಹೊದ್ದಂತೆ ಬದುಕುವವನು. ನಿಖಿಲ್ ನ ದೃಷ್ಟಿಯಲ್ಲಿ ನಿಕೃಷ್ಟನಾಗಿ ಕಾಣುವ ಅಪ್ಪ ಕೊನೆಯಲ್ಲಿ ಬದಲಾಗಿ ಬಿಡುತ್ತಾನೆ. ಅಪ್ಪನನ್ನು ನೋಡಿಯೋ.. ಊಹಿಸಿಯೋ.. ಒಂದು ರೀತಿಯಲ್ಲಿ ಅಂತರ್ಮುಖಿಯಾಗಿಯೇ ಬೆಳೆಯುವ ಮಗ, ಸದಾ ತನ್ನನ್ನು ಹೋಲಿಸುತ್ತಿದ್ದ ಅಣ್ಣನಿಂದಲೂ ದೂರ ಉಳಿದವನು ಬದಲಾದದ್ದಕ್ಕೆ ಕಾರಣ ಅಪ್ಪನಾ..

ಅಪ್ಪನೆಂಬ ನಿಲುಕಲಾರದ ವ್ಯಕ್ತಿತ್ವವನ್ನು ಬಿಡಿಸಿಡುವ ಕಥೆ ಇದು.


ಇವೆಲ್ಲದಕ್ಕಿಂತ ವಿಭಿನ್ನವಾಗಿ ಅಪ್ಪನನ್ನು ಕಟ್ಟಿಕೊಟ್ಟ ಪುಸ್ತಕ ಸಂತೋಷಕುಮಾರ ಮೆಹೆಂದಳೆಯವರ ಮನೋ-ವೈಜ್ಞಾನಿಕ ಕೃತಿ 'ಅವನು.. ಶಾಪಗ್ರಸ್ತ ಗಂಧರ್ವ'.


ಎಷ್ಟೋ ಜನರಿಗೆ ಅಪ್ಪ ಕೆಟ್ಟವನು.. ಎಷ್ಟೋ ಜನರಿಗೆ ತನ್ನ ಅಪ್ಪನ ಮುಖವನ್ನೇ ಕಂಡರೆ ಆಗುವುದಿಲ್ಲ, ಕೆಲವರ ಮನೆಯಲ್ಲಿ ಆತ ಅಸಹಾಯಕತನದ ಪರಮಾವಧಿಯಂತಿರುವ ಬೇಜವಾಬ್ದಾರಿಯ ಮನುಷ್ಯ. ಅಪ್ಪ ಅದನ್ನು ಮಾಡಲಿಲ್ಲ, ಅಪ್ಪ ಇದನ್ನು ಮಾಡಲಿಲ್ಲ ಎನ್ನುವವರೇ ಹೆಚ್ಚು. ಹೆಣ್ಣುಮಕ್ಕಳಿಗೆ ಹಿಡಿ ಪ್ರೀತಿ ಸಿಕ್ಕರೆ ಸಾಕು ಅಪ್ಪನಿಂದ.. ಅವನೇ ಅವಳ ಪಾಲಿನ ದೈವ. ಆದರೆ, ಎಷ್ಟೋ ಗಂಡುಮಕ್ಕಳಿಗೆ ಅಪ್ಪನ ಕುರಿತ ದೂರು ಇದ್ದದ್ದೇ.. ಅದರಲ್ಲೂ ಅಪ್ಪನೆನ್ನುವ, ಸಿಡುಕ, ಒರಟ ಮನುಷ್ಯನ ಕುರಿತು. 


ಅಪ್ಪ ಹೀಗ್ಯಾಕೆ..?? ಅಪ್ಪನನ್ನು ಆಕಾಶ ಮಾಡಿದ ಮೇಲೆ ಅವನು ಕೈಗೆ ಸಿಗದೆ ಹೋಗಿಬಿಟ್ಟನಾ..?? ಅಪ್ಪ ಯಾಕೆ ಯಾವುದಕ್ಕೂ ಬೇಡಿಕೆ ಇಡದೆ ಸುಮ್ಮನಾಗಿಬಿಟ್ಟ..?? ಎಲ್ಲದಕ್ಕೂ ಇಲ್ಲಿ ಉತ್ತರ ಸಿಗುತ್ತದೆ.


ಅಪ್ಪನನ್ನು ಯಾರಾದರೂ ದ್ವೇಷಿಸುವವರಿದ್ದರೆ ಅವರಿಗೂ ಈ ಪುಸ್ತಕ ಓದಲು ಸಜೆಸ್ಟ್ ಮಾಡುವೆ. ಯಾಕೆಂದರೆ, ದ್ವೇಷದ ಹಿಂದಿನ ಮನಸ್ಥಿತಿ ಹಾಗೂ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಲಿದೆ ಈ ಪುಸ್ತಕ.


ಇಂತಹಾ ಹಲವಾರು ಓದಿನ, ನಿಜ ಜೀವನದ ನೋಟಗಳು ಸಿಕ್ಕ ಮೇಲೂ.. ಅಪ್ಪ ಎಂದರೆ ಆಕಾಶವೇ.. ನಾವು ಕಂಡಷ್ಟು ಮಾತ್ರವೇ ನಮ್ಮ ನೋಟಕ್ಕೆ ಸಿಕ್ಕುವ ಅಪ್ಪ ಅರ್ಥವಾಗಿದ್ದಕ್ಕಿಂತ.. ಅರ್ಥವಾಗದೇ ಉಳಿದದ್ದೇ ಹೆಚ್ಚು ಎಂಬುದು ನನ್ನ ಅಭಿಪ್ರಾಯ. ಆದರೆ, ಅರ್ಥವಾದ, ದಕ್ಕಿದ ಅಪ್ಪನ ಸುಂದರ ಚಿತ್ರಣವಂತೂ ನಮ್ಮ ಮನಸ್ಸಲ್ಲಿ ಪಡಿಮೂಡಿರಲಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ