ಶನಿವಾರ, ಏಪ್ರಿಲ್ 18, 2026

ಮಿಂಚು (ಪುಸ್ತಕ ಯಾನ - 234)


ಪುಸ್ತಕದ ಶೀರ್ಷಿಕೆ : ಮಿಂಚು

ಲೇಖಕರು : ಅ. ನ. ಕೃ

ಪ್ರಕಾಶಕರು : ಶ್ರೀನಿವಾಸ ಮುದ್ರಣಾಲಯ

ಪ್ರಥಮ ಮುದ್ರಣ : 1930

ಪುಟಗಳು : 150


ಕನ್ನಡ ಸಾಹಿತ್ಯದಲ್ಲಿ "ಕಾದಂಬರಿ ಸಾರ್ವಭೌಮ"ರೆಂದೇ  ಖ್ಯಾತರಾಗಿರುವ ಅ.ನಾ.ಕೃ ಅವರ ಕಥಾಸಂಕಲನ 'ಮಿಂಚು'ವಿನಲ್ಲಿ 9 ಕಥೆಗಳಿವೆ. ಈ ಕಥೆಗಳಲ್ಲಿ ಅವಳ-ಬಾಳು ಎಂಬ ಕಥೆಯನ್ನು ಹೊರತುಪಡಿಸಿ ಉಳಿದ ಕಥೆಗಳು ವಿವಿಧ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 


ಈ ಕಥಾ ಸಂಕಲನದಲ್ಲಿ ಹಲವು ಕಥೆಗಳು ಸುಖಾಂತ್ಯವಲ್ಲ. ದುಃಖಾಂತ್ಯವೇ.. ಕಥೆಗಳು ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯಲು ಕೆಲವು ಲೇಖಕರು ದುಃಖಾಂತ್ಯವನ್ನು ನೀಡುವುದುಂಟು. ಆದರೆ, ಅ.ನ.ಕೃ ಅವರೇ ತಮ್ಮ ಕಥೆಗಳು ಸೌಖ್ಯದಲ್ಲಿ ಮುಕ್ತಾಯವಾಗುವುದಿಲ್ಲ ಎಂಬುದಕ್ಕೆ ತಮ್ಮ ಕಾರಣವನ್ನು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ. ಅದೆಂದರೆ, ನಲ್ಲನ ನಳಿತೋಳ್ಗ ಮೇಲೆ ನಲ್ಲೆಯು ಮಲಗಿ ನಿದ್ರಿಸುತ್ತಾ.. ಮಧುರ ಗೀತೆಯನ್ನು ಹಾಡುತ್ತಿರುವುದೇ ಲೋಕವಲ್ಲ ಅಥವಾ ಪರ್ಶಿಯ ದೇಶಿಯರು ನೆನೆಸುವಂತೆ ಸಂಗೀತದ ಸೌಖ್ಯದಲ್ಲಿ ಮೈಮರೆತು 

"ಹಾ ! ತುಂಬುಬಟ್ಟಲನ್ನು ಕಾಲವದು ತಾಂನುಣ್ಚಿ 

ಕೈಗೆ ದೊರೆಯದೆ ಬರುವ ಪರಿಯ ವಿವರಿಸಲೇಂ ? 

ನಿನ್ನೆ ಸತ್ತಿಹುದಿನ್ನು ನಾಳೆ ಹುಟ್ಟದೆಇಹುದು 

ಇಂದು ಸೊಗವಿರಲವನು ನೆನೆದಳುವುದೇಕೆ ? ಎಂದಿರಲು ಸಾಧ್ಯವಿಲ್ಲ.


ಸುಖ-ದುಃಖಗಳೆರಡೂ ಬಾಳಿನಲ್ಲಿದ್ದರೂ ಕಷ್ಟವನ್ನು ಹೊರ ಹಾಕುವುದಕ್ಕೆ, ಮನಸ್ಸಿನ ಮಾತನ್ನು, ಕಂಡದ್ದನ್ನು ಕಟ್ಟಿಕೊಡುವುದಕ್ಕೆ 

ಕಥೆಗಳನ್ನು ಬರೆಯುವುದನ್ನು ಆಯ್ಕೆ ಮಾಡಿಕೊಂಡಾಗ.. ಹೆಚ್ಚಿನಂಶದ ಕತೆಗಳು ದುಃಖಾಂತ್ಯಗಳಾಗಿವೆ. ಲೇಖಕರ ಅಂತಃಕರಣದಿಂದ ನೋಡುವ ಚಕ್ಷುವೇ ಈ ಕಥೆಗಳ ಮನಮಿಡಿಯುವ ಬರವಣಿಗೆ ಹಾಗೂ ಅಂತ್ಯಕ್ಕೆ ಕಾರಣವಾಗಿರಬಹುದು ಎಂದು ನನಗನಿಸುತ್ತದೆ. 


ನನ್ನ ಮುದ್ದು ಸರೋಜ : ಈ ಕಥೆಯಲ್ಲಿ ನಾಯಕ ತನ್ನ ಯೌವ್ವನದ ದಿನಗಳಲ್ಲಿ ಮೈಸೂರಿನ ಮಹಾರಾಜರ ವರ್ಧಂತಿಯನ್ನು ತನ್ನ ಯೌವ್ವನದ ಪತ್ನಿಯೊಂದಿಗೆ ನೋಡಲು ಹೋಗಿ ಬಂದ ದಿನಗಳನ್ನು ನೆನಪಿಸಿಕೊಳ್ಳುತ್ತಲೇ.. ತನ್ನ ಮುದ್ದು ಸರೋಜನ ನೆನಪು ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಅವರು ಹಿಂದಿನಂತಿರಲಿಲ್ಲ "ಮನವನ್ನು ರಮಿಸುವ ಹೂ ಗಿಡಗಳು, ಆತ್ಮವನ್ನು ವಿರಮಿಸುವ ಹೆಂಗಸರು, ಮಕ್ಕಳು ಎರಡಿಲ್ಲದ ಮನೆ ಸ್ಮಶಾನ" ಎಂದುಕೊಂಡು ಮನೆ ಬಿಟ್ಟು ಅಲ್ಲಿ-ಇಲ್ಲಿ ಜೀವನ ಕಳೆಯುತ್ತಾ ಸಾಗುತ್ತಿದ್ದವರಿಗೆ ಮತ್ತೆ ಸರೋಜಾ ಹುಟ್ಟಿ-ಬೆಳೆದ, ಆಡಿದ ಮನೆಯನ್ನು ನೋಡುವ ಆಸೆಯಾಗಿ ಹೋದರೆ ಈಗ ಎಲ್ಲವೂ ಬದಲಾಗಿತ್ತು. ಆದರೆ, 30-32 ವರ್ಷಗಳ ಹಿಂದೆ ನಡೆದ ಘಟನೆ ಈಗಲೂ ಅವರ ಕಣ್ಮುಂದಿನಂತಿತ್ತು. ಅದಲ್ಲದೆ, ಪುಟ್ಟ ಮಗುವೊಂದರ ಲವಲವಿಕೆ ಹಾಗೂ 'ಸರೋಜಾ' ಎಂದು ಕರೆದೊಡನೆ ಹೋದ ಚಿತ್ರಣವೂ ಕಣ್ಣಿಗೆ ಕಟ್ಟಿದಂತಿತ್ತು. ಆದರೆ, ಈಗ ಆ ಸರೋಜಾಳೂ ಇರಲಿಲ್ಲ. ಪುಟ್ಟ ಸರೋಜಾ ಏನಾಗಿದ್ದಳು..?? ಏನೇ ಆದರೂ ನೆನಪುಗಳು ಮಾತ್ರ ಅಳಿಯದು ಜೊತೆಗೆ ಸಾಗುವುದು ಎಂದೆನಿಸುವಂತೆ ಮಾಡಿದ ಕಥೆ.


ಶ್ರೀಪತಿಯ ಕಲ್ಯಾಣ : ರಾಮು ಹಾಗೂ ಕಿಟ್ಟಿ ಇಬ್ಬರೂ ಬಾಲ್ಯದಿಂದಲೂ ಸುಖ-ದುಃಖಗಳನ್ನು ಹಂಚಿಕೊಂಡು ಬೆಳೆದ ಗೆಳೆಯರು. ಒಬ್ಬರನ್ನೊಬ್ಬರು ಆಗಲಿ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಆದರೆ, ಅಭಿಪ್ರಾಯಗಳಲ್ಲಿ ಭೇದವಿರುತ್ತಿತ್ತು. ರಾಮುವಿಗೆ ನಾಟಕಗಳನ್ನು ನೋಡಬೇಕೆಂಬ ಆಸೆ ಹೆಚ್ಚಾಗಿ ಕಿಟ್ಟಿಯನ್ನು ಬಲವಂತ ಪಡಿಸಿ 'ಸುಭದ್ರಾ ಕಲ್ಯಾಣ'ಕ್ಕೆ ಕರೆದುಕೊಂಡು ಹೋದ. ಅದಾದ ನಂತರ ಬಂದ ಚರ್ಚೆಯಲ್ಲಿ ಇಂತಹಾ ನಾರಿ ಚೌರ್ಯಗಳೆಲ್ಲ ಶುದ್ಧ ಕಟ್ಟುಕತೆ ಎಂಬ ಕಿಟ್ಟಿಯ ಮಾತಿಗೆ ರಾಮು 'ಶ್ರೀಪತಿ ಕಲ್ಯಾಣ'ವನ್ನು ಹೇಳಿದ. ಅಷ್ಟಕ್ಕೂ ಶ್ರೀಪತಿ ಯಾರು..?? ಆತ ಕೂಡ ವಧುವನ್ನು ಅಪಹರಿಸಿ ವಿವಾಹವಾದ್ದೇಕೆ ಎಂಬುದನ್ನು ತಿಳಿಯಲು ಈ ಕಥೆ ಓದಿ.


೯||ಗಂಟೆ : ಬೆಂಗಳೂರಿಗೆ ಬಂದ ಬೋರೇಗೌಡ ಎಂಬಂತೆ ಬೆರಗಿನಿಂದ ಬಂಗಾಳ ಸೇರಿದವರು ಈಗ ಮತ್ತೆ ತನ್ನ ಊರಾದ ಮೈಸೂರಿಗೆ ಮರಳುತ್ತಿರುವ ಸಂದರ್ಭದಲ್ಲಿ ರೈಲಿನಲ್ಲಿ ಕುಳಿತಾಗ ಪ್ರಕಾಶರಾವ್ ಪರಿಚಯವಾಗಿತ್ತು. ಆತ ಮನೆ ತೊರೆದು ಒಂದು ವರ್ಷವೇ ಆಗಿತ್ತು. ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಗುಣಗಾನ ಮಾಡುತ್ತಾ... ಪ್ರತಿಯೊಂದಕ್ಕೂ ಅವರ ವಿಚಾರವನ್ನೇ ನೆನೆಸುತ್ತಿದ್ದ.  ಪ್ರತಿ ಸ್ಟೇಷನ್ನಲ್ಲಿಯೂ ಟೆಲಿಗ್ರಾಂಗಳನ್ನು ಕೊಡುತ್ತಿದ್ದ. ಇನ್ನೇನು ರೈಲು ನಿಲ್ಲುವ ಸಮಯ. ಗಂಟೆ 9.30. ಪತ್ನಿ ಹಾಗೂ ಮಕ್ಕಳು ಬಂದಾಗಿತ್ತು. ಆದರೂ ಆತ ಅವರನ್ನು ಸೇರಲಾಗಲಿಲ್ಲ. ಏಕೆ  ?


ಪುನರುಜ್ಜೀವನ : ಸಾಮ್ರಾಟ್ ಅಕಬರನಿಗೆ ಶರಣಾಗಿದೇಶವನ್ನು ಮರೆತಿದ್ದ ಪೃಥ್ವಿರಾಜನ ಪತ್ನಿ ಯೋಷಿ. ಮೇವಾಡದ ರಾಣಾ ಪ್ರತಾಪಸಿಂಹ ತನ್ನ ರಾಜ್ಯವನ್ನು ಕಳೆದುಕೊಂಡರೂ ಕಾಡಿನಲ್ಲಿದ್ದ. ಆದರೆ, ಮನ ಕಲಕಿದ ಘಟನೆಯಿಂದ ಶರಣಾಗುತ್ತೇನೆಂದು ಪತ್ರ ಬರೆದ. ಅದೇ ಖುಷಿಗೆ 'ಖುಸ್ ರೋಜ್' ಹಬ್ಬವನ್ನು ಮಾಡಿದ ಅಕಬರನ ಅರಮನೆಗೆ ಹೋಗಿದ್ದ ಯೋಷಿ ಬಂದಾಗ ಸಿಡಿದಿದ್ದಳು. ಪೃಥ್ವಿರಾಜನಿಗೆ ಒಂದು ಸಂದೇಶವನ್ನು ಕೊಟ್ಟು ಆತ್ಮಾರ್ಪಣೆ ಮಾಡಿಕೊಂಡಳು. ಇದರ ಮುಂದಿನ ಪರಿಣಾಮ ಪೃಥ್ವಿರಾಜನನ್ನು ಬಡಿದಬ್ಬಿಸಿತ್ತು. ಪ್ರತಾಪಸಿಂಹ ಶರಣಾಗುವ ಬದಲಾಗಿ ಇನ್ನಷ್ಟು ಬಲಿಷ್ಠನಾದ. ಹೆಣ್ಣಿಂದ ಸೃಷ್ಟಿ ಹೇಗೋ, ಬದುಕಿನ ಕೊನೆಯೂ ಸಮೀಪಿಸಬಲ್ಲದು. ಸಾಮ್ರಾಜ್ಯ ಹಾಗೂ ಆಲೋಚನೆಗಳ ಪುನರುಜ್ಜೀವನವೂ ಆಗಬಲ್ಲದು ಎಂದು ಹೇಳುವ ಐತಿಹಾಸಿಕ ಕಥೆ. 


ಅವಳ-ಬಾಳು : ಮಾದು ಬೆಂಗಳೂರಿನಲ್ಲಿ ಓದುತ್ತಿದ್ದಿದ್ದು ಜ್ಞಾನಾರ್ಜನೆಗೋಸ್ಕರ ಅಷ್ಟೇ.. ಆತನ ಮನೆಯಲ್ಲಿ ಶ್ರೀಮಂತರು. ಆತನ ತಾಯಿ ಮೀನಾಕ್ಷಮ್ಮನವರು ಊರಿಗೆಲ್ಲ ತಾಯಿಯಿದ್ದಂತೆ. ಆಕೆಯ ಮಮತೆ, ಹೃದಯ ವೈಶಾಲ್ಯ ದೊಡ್ಡದು. ಸಮಚಿತ್ತದಿಂದ ಎಲ್ಲರನ್ನೂ ಒಂದೇ ರೀತಿ ಕಾಣುತ್ತಿದ್ದ ತಾಯಿಯ ಮಮತೆಯ ಮಗ ಮಾದು. 

ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ತನ್ನ ಮುಂದಿನ ಮನೆಯ ಗೊಡವೆಯೂ ಆತನಿಗೆ ಬೇಕಿರಲಿಲ್ಲ. ಅಂತಹಾ ಸಂದರ್ಭದಲ್ಲಿ ನಡೆಯಬಾರದೇನೋ ನಡೆಯಿತು ಎಂಬಂತಿದ್ದ ಆ ಹೆಣ್ಣಿನ ಮಾತುಗಳು ಆತನನ್ನು ಕಲುಕಿದಾಗ ತಿಳಿದದ್ದು ಆಕೆ ಕಮಲ. ತನ್ನ ಪತಿಯ ಕೆಲಸದ ಉನ್ನತಿಗೋಸ್ಕರ ತನಗೆ ಇಚ್ಛೆ ಇಲ್ಲದಿದ್ದರೂ.. ಮನಸ್ಸಿನ ವಿರೋಧವಾಗಿ ನಡೆದುಕೊಂಡಿದ್ದಳು. ಮರುದಿನವೇ ಆಕೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಪತ್ರ ಬರೆದಿಟ್ಟು ಹೊರಟಳು. ಮಾದು ತಾನೇ ಇದೆಲ್ಲದಕ್ಕೂ ಕಾರಣವೆಂದು ನೊಂದುಕೊಂಡನು. ಇದೆಲ್ಲವೂ ನನಗೆ 'ನಾನು ಕೊಂದ ಹುಡುಗಿ' ಎಂಬ ಕಥೆಯನ್ನು ನೆನಪಿಸಿತು. ಆದರೆ, ಈ ಕಥೆಯ ಮುಂದುವರಿದ ಭಾಗವೇ ಬೇರೆ.

ತನ್ನ ಮನಸ್ಸಿನ ಕ್ಷೋಭೆಯನ್ನೆಲ್ಲಾ ಬದಿಗಿಟ್ಟು ಕಾನೂನು ಓದಲು ಮದರಾಸಿಗೆ ಬಂದವಣಿಗೆ ಆಕೆ ಮತ್ತೆ ಕಂಡದ್ದು ವೇಶ್ಯಾಗೃಹದಲ್ಲಿ. ಅಚ್ಚರಿ ಎಂದರೆ ಆಕೆಯೇ ಅದನ್ನು ಮುನ್ನಡೆಸುತ್ತಿದ್ದವಳು. ಅವಳ ಬಾಳು ಎಲ್ಲಿಂದ ಎಲ್ಲಿಗೆ ಬಂದಿತ್ತು ಎಂಬುದು ಅಚ್ಚರಿಯಾಗಿತ್ತು ಆತನಿಗೆ. ಮತ್ತೆ ಆಕೆಯನ್ನು ಕಾಣುವಷ್ಟರಲ್ಲಿ ಆಕೆ ಅಲ್ಲಿನ ಮನೆಯನ್ನು ತೊರೆದಾಗಿತ್ತು.

ಅಣ್ಣನ ಕರುಣೆ ತೋರುತ್ತಿದ್ದ ಮಾದುವಿಗೆ ಆಕೆ ಮತ್ತೆ ವಿಚಿತ್ರ ಸಂದರ್ಭದಲ್ಲಿ ಸಿಕ್ಕಳು. ತಾನೇ ವಕೀಲನಾಗಿ ವಾದ ಮಾಡಿ ಆಕೆಯನ್ನು ಪಾರು ಮಾಡಿದ. ಮೀನಾಕ್ಷಮ್ಮನವರ ತಾಯ್ತನ ಮತ್ತೊಂದು ರೂಪ ಪಡೆದುಕೊಂಡ ಕಥೆ ಕಾಣುತ್ತದೆ. ಹಾಗಾದರೆ ಕಮಲ ಬದುಕಿನ ಕತೆಯೇನು ? ಅವಳ ಬಾಳು ಒಂದು ಬದಿ ಮುಟ್ಟಿತೆಂಬ ಸಂತೃಪ್ತಿ ಸಿಕ್ಕ ಕಥೆ ಹಾಗೂ ಈ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಕಥೆ.


ಮುಂದೇನು ಗತಿ : "ತಾಯಿ-ತಂದೆಗಳೇ ಗಮನಿಸಿರಿ. ನಿಮ್ಮ ಅಳಿಯನಾಗುವನಲ್ಲಿ ವಿದ್ಯೆ, ಧನಗಳಿಗಿಂತಲೂ ಅಮೂಲ್ಯವಾದ ಪುರುಷಧನವಿದೆಯೋ ಇಲ್ಲವೋ ಗಮನಿಸಿ. ಆನಂತರ ಕುವರಿಯರ ದಾನವನ್ನು ಆಲೋಚಿಸಿರಿ" ಎಂಬ ಮಾತನ್ನು ಸೀತಾಳ ಮೂಲಕ ಹೇಳಿಸಿರುವ ಲೇಖಕರು.. ಅಮ್ಮನನ್ನು ಕಳೆದುಕೊಂಡ ಮಗು ಸೀತಾ ಮದುವೆಯಾದ ನಂತರವೂ ಸುಖ ಕಾಣದೆ ವೈಧವ್ಯವನ್ನು ಅನುಭವಿಸುವಾಗ ವಾಗ ಮತ್ತೊಬ್ಬನಿಗೆ ಮನಸೋತು, ತನ್ನ ವೀಣಾವಾದನದಿಂದಲೇ ಆತನನ್ನು ಗೆದ್ದರೂ.. ಆಕೆಯ ಬಾಳು ಅಲ್ಲಿಯೂ ಸಮನಾಗಲಿಲ್ಲ. ಮಗು ಹುಟ್ಟಿದ ನಂತರ ಆತನೂ ತೀರಿಕೊಂಡ. ಅವಳಿಗೆ ಮುಂದೇನು ಗತಿ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತಲೇ ಅವಳಿಗೆ ಸಿಕ್ಕ ಮುಂದಿನ ಗತಿಯನ್ನೂ ತೋರುತ್ತಾರೆ. 


ಪರಿಣಾಮ: ಇದು ವಿಜಯನಗರದ ಕಥೆ. ಅರಸದಾದ ನರಸರಿಗೆ ತಿಪ್ಪಾಜಿಯಿಂದ ವೀರನರಸಿಂಹನು, ನಾಗಾಂಬಿಕೆಯಿಂದ ಕೃಷ್ಣದೇವರಾಯನೂ ಜನಿಸುತ್ತಾರೆ. ಹಿರಿಯ ಮಗ ವೀರನರಸಿಂಹನೇ ತಂದೆಯ ನಂತರ ಆಳ್ವಿಕೆ ನಡೆಸುತ್ತಿದ್ದನಾದರೂ.. ಶ್ರೀಕೃಷ್ಣದೇವರಾಯನಲ್ಲಿ ಆತನಿಗೆ ಬಹಳ ಪ್ರೀತಿ, ಆದರೆ, ಸ್ವಂತ ಮಗುವಾದ ನಂತರ ಅದರಲ್ಲಿ ಅಪರಿಮಿತವಾದ ಪ್ರೀತಿ ಇಟ್ಟು ರೋಗಿಷ್ಟ ಶಿಶುವನ್ನು ರಾಜನನ್ನಾಗಿಸಲು ಕೃಷ್ಣನನ್ನೇ ನಿವಾರಿಸಿಕೊಳ್ಳಲು ಹೋಗುವ ಪ್ರಸಂಗ ಹಾಗೂ ಅದು ಅವನಿಗೆ ಮುಳುವಾದದ್ದು, ತಿಮ್ಮಣ್ಣ ಕವಿಯನ್ನು ಅವಮಾನಿಸಿದ ಪ್ರಸಂಗ, ಅಪ್ಪಾಜಿಗೆ ಮರ್ಯಾದೆ ಕೊಡದದ್ದು ಇದೆಲ್ಲದರ ಪರಿಣಾಮವೇನಾಯಿತು..? ಎಂಬುದರ ಐತಿಹಾಸಿಕ ಕಥನ.


ಸಾವಿತ್ರಿ ಯ ಸೌಭಾಗ್ಯ (?) : ಸಾವಿತ್ರಿ ಸ್ವಲ್ಪ ಚಿಕ್ಕವಳಿರುವಾಗ ಆಕೆಯ ತಾಯಿ ತೀರಿಕೊಂಡಿದ್ದಳು. "ನಿನ್ನನ್ನು ಯಾರು ಮರೆತರೂ ನಾನು ಮರೆಯುವುದಿಲ್ಲ. ನೀನು ನನ್ನನ್ನು ನೋಡಲಾಗುವುದಿಲ್ಲ. ಆದರೆ, ನಾನು ನೋಡುತ್ತಾ ನಿನ್ನ ಮಂಗಳವನ್ನೇ ಹಾರೈಸುತ್ತಿರುತ್ತೇನೆ" ಎಂದ ಅಮ್ಮನ ಮಾತನ್ನು ನೆನಪಿಟ್ಟುಕೊಂಡಿದ್ದಳು. ಆಕೆಯ ತಮ್ಮ ಪುಟ್ಟುವಿಗೆ ಆಕೆ ಎರಡನೇ ತಾಯಿಯಂತೆ. ಭಾಗೀರಥಮ್ಮನವರ ಮಗಳು ಸುಬ್ಬಿ ಅವರ ಮಲತಾಯಿಯಾಗಿ ಬಂದ ನಂತರ ಮಕ್ಕಳು ಪಟ್ಟ ಪಾಡನ್ನು ತೋರುತ್ತಾರೆ. ಭಾಗಿರಥಮ್ಮನವರ ಆಳ್ವಿಕೆಯಲ್ಲಿ ಎಲ್ಲವೂ ಸಾಗುತ್ತಿರುವಾಗ, ಸಾವಿತ್ರಿಗೆ ಮದುವೆಯಾಗಿ, ವೈಧವ್ಯವೂ ಪ್ರಾಪ್ತವಾಯಿತು. ಆಕೆಯ ಸೌಭಾಗ್ಯ ಎಲ್ಲಿಂದ ಎಲ್ಲಿಗೆ ಹೋಯಿತು ಎನ್ನುವುದರ ಜೊತೆಗೆ ಆಕೆ ತನ್ನ ತಾಯಿಯನ್ನು ಸೇರುತ್ತೇನೆಂದು ಬರೆದ ಪತ್ರ ಪುಟ್ಟುವಿನ ಕೈಗೆ ಸಿಕ್ಕು ಆದ ಪರಿಣಾಮವನ್ನು ಹೃದಯಂಗಮವಾಗಿ ಚಿತ್ರಿಸುತ್ತಾರೆ. ಸಾವಿತ್ರಿಯ ಸೌಭಾಗ್ಯ (?) ನೀವೇ ಓದಿ ನಿರ್ಧರಿಸಬೇಕು. 


ಕಂದ: ಈ ಕಥೆಯು ವಿಭಿನ್ನವಾಗಿದೆ. ಈ ಕಥಾಸಂಕಲನದಲ್ಲಿನ ಪುಟ್ಟ ಕಥೆ ಇದು. ಕಂದನು ಐದು ವರ್ಷದ ಶಿಶು. ಆತನ ತಂದೆಯನ್ನು ಹಳ್ಳಿಯವರು ಅನಾಥಬಂಧುವೆಂದೇ ಕರೆಯುತ್ತಿದ್ದರು. ವೈದ್ಯಕೀಯ ವೃತ್ತಿ ಮಾಡುತ್ತಿದ್ದ ಅವರು ತನಗೂ ತನ್ನ ಕಂದನಿಗೂ ಎಷ್ಟು ಬೇಕೋ ಅಷ್ಟು ಮಾತ್ರವನ್ನು ಸ್ವೀಕರಿಸುತ್ತಿದ್ದರು. ಹೆಸರಿಡದೆ, ಮಗುವನ್ನು ಕಂದನೆಂದೇ ಸಂಬೋಧಿಸುತ್ತಿದುದ್ದೇಕೆ..?? ಅವರ ಅತ್ಯಲ್ಪ ಆಸೆಯು ಬದುಕನ್ನು ಪೂರೈಸುತ್ತಿದ್ದಾದರೂ.. ಒಬ್ಬರ ಕ್ರೂರತನ ಕಂದನ ಬದುಕನ್ನು ಹೇಗೆ ನಿರ್ನಾಮ ಮಾಡಿತು ಎಂಬುದನ್ನು ತೋರುತ್ತಾರೆ. 


ಕಥೆಗಳ ನಿರೂಪಣೆಯಂತೂ ಹೃದಯಂಗವಾಗಿ ಸಾಗುತ್ತದೆ. ಕಥೆಯಲ್ಲಿ ಭಾಷೆಯ ಲಾಲಿತ್ಯ ಬಹಳ ಸೊಗಸಾಗಿದೆ. ಈಗಿನ ಹೊಸ ತಲೆಮಾರಿನ ಕಥೆಗಳಿಗೂ.. ಅಂದಿನ ಕಥೆಗಳಿಗೂ ಇರುವ ವ್ಯತ್ಯಾಸದಲ್ಲಿ ಮೊದಲು ಕಾಣುವುದು ಪದಗಳ ಲಾಲಿತ್ಯ ಹಾಗೂ ಭಾಷೆ. ಭಾವವೂ ಹೆಚ್ಚು ತಾಕುತ್ತದೆ. ಮನಸ್ಸಿನ ಆಳಕ್ಕಿಳಿಯುವ ಕಥೆಗಳು. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ