ಶನಿವಾರ, ಏಪ್ರಿಲ್ 18, 2026

ಸ್ತ್ರೀ ಎಂದರೆ ಅಷ್ಟೇ ಸಾಕೇ? (ಶಾಂತಲೆ )

"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ"


ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ, ಸನ್ಮಾನಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ನಂಬಿಕೆಯಿದೆ. ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸೊಸೆಯಾಗಿ, ಅಕ್ಕ-ತಂಗಿ, ಅತ್ತಿಗೆ, ನಾದಿನಿ, ಸ್ನೇಹಿತೆ ಹೀಗೆ ಎಲ್ಲಾ ಸಂಬಂಧಗಳನ್ನು ಸಮರ್ಥವಾಗಿ ನಿಭಾಯಿಸುವ ಗಟ್ಟಿಗಿತ್ತಿ. ಇಷ್ಟೇ ಅಲ್ಲದೇ..


ಕಾರ್ಯೇಷು ದಾಸಿ, ಕರಣೇಷು ಮಂತ್ರಿ; 

ಭೋಜೇಷು ಮಾತಾ, ಶಯನೇಷು ರಂಭಾ;

ರೂಪೇಷು ಲಕ್ಷ್ಮೀ, ಕ್ಷಮಾಯೇಷು ಧರಿತ್ರೀ,


ಎನ್ನುವ ಶ್ಲೋಕದಂತೆ ಆರು ಸದ್ಗುಣಗಳನ್ನು ಅರಿತೋ, ಅರಿವಿಲ್ಲದೆಯೋ ರೂಢಿಸಿಕೊಂಡು ತನ್ನ ಸಂಸಾರವನ್ನು ನಿಭಾಯಿಸುತ್ತಾಳೆ. ಇದು ದೈನಂದಿನ ಬದುಕಿನಲ್ಲಿಯಾದರೆ, ಸಾಮಾಜಿಕವಾಗಿ.. ಅದರಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಮೊದಲಿಗರು ಹಲವರಿದ್ದಾರೆ. ನನ್ನ ಇಂದಿನ ಲೇಖನದಲ್ಲಿ ಪ್ರಸ್ತುತ ಮಹಿಳೆಯರಿಗಿಂತ ಆ ಕಾಲದಲ್ಲಿ ವೀರ ಸಾಮ್ರಾಟರ ನಡುವಲ್ಲಿಯೂ ತಮ್ಮತನವನ್ನು ಉಳಿಸಿಕೊಂಡ ಹೆಣ್ಣು, ಅದರಾಚೆಗೆ ಬೆಳೆದ ಹೆಣ್ಣಾಗಿ ಚಾರಿತ್ರಿಕ ಪಾತ್ರದ ಹೆಣ್ಣಾಗಿ ಶಾಂತಲೆ ಇಷ್ಟವಾಗುತ್ತಾಳೆ. 


ಆದರೆ, ನನ್ನಿಷ್ಟದ ಸ್ತ್ರೀಯಾಗಿ ನನಗೆ ಆಪ್ತವೆನ್ನಿಸುವ ಪಾತ್ರ ಶಾಂತಲೆಯದ್ದು. ಶಾಂತಲೆಯ ಕುರಿತು ತಿಳಿಯುವಾಗಲೆಲ್ಲಾ ಅದರಲ್ಲೇ ತಲ್ಲೀನಳಾಗುವ ಭಾವವಂತೂ ಇದ್ದೇ ಇದೆ. ಕೆ. ವಿ. ಅಯ್ಯರ್ ಅವರ ಶಾಂತಲೆಯಂತೂ ನನ್ನ ಚಿತ್ತಭಿತ್ತಿಯಲ್ಲಿ ಹಾಗೆಯೇ ನೆಲೆ ನಿಂತಿದ್ದಾಳೆ. ಮ.ನಾ ಮೂರ್ತಿಯವರ ಹಾಗೂ ಸಿ. ಕೆ. ನಾಗರಾಜರಾವ್ ಅವರ ರಚನೆಯ ಶಾಂತಲೆಯ ಕುರಿತು ನಾನಿನ್ನೂ ಓದಿಲ್ಲ. ಹಾಗಾಗಿ, ನನ್ನ ಓದಿನ ಪರಿಮಿತಿಯಲ್ಲಿ ಮಾತ್ರವೇ ಇದನ್ನು ಬರೆಯುತ್ತೇನೆ. 


ವಿಷ್ಣುವರ್ಧನನಿಗೆ ಮೊದಲಿಗೆ ವಿವಾಹದಲ್ಲಿ ಆಸಕ್ತಿ ಇಲ್ಲದಿದ್ದರೂ.. ಅಮ್ಮನ ಪ್ರೀತಿಯ ಒತ್ತಾಯಕ್ಕೆ ಮಣಿದು ಜೊತೆಗೆ ರಾಜ್ಯದ ಹಿತದೃಷ್ಟಿಯಿಂದ, ಸಂತಾನಾಭಿವೃದ್ಧಿಯ ಕಾರಣವೂ ಸೇರಿ ವಿವಾಹಕ್ಕೆ ಒಪ್ಪಿಗೆ ನೀಡಿದರು. ಹಾಗೆ ಒಪ್ಪಿಗೆ ಪಡೆಯುವ ಮುನ್ನ ಮಹಾರಾಣಿ ಮಹಾದೇವಿಗೆ ಕಣ್ಣಿಗೆ ಬಿದ್ದಿದ್ದ ಹೆಣ್ಣು ಶಾಂತಲೆ. 


ಕುವರ ವಿಷ್ಣುವಿನ ಬ್ರಹ್ಮೋಪದೇಶದ ಸಂಧರ್ಭದಲ್ಲಿ ವಿಷ್ಣುವರ್ಧನನಿಗೆ ಶಾಂತಲೆಯ ದರ್ಶನವಾಯಿತು. ಧರ್ಮೇಶ್ವರನ ವರಪ್ರಸಾದದಿಂದ ಡಣಾಯಕ ಮಾರಸಿಂಗಮಯ್ಯ ಹಾಗೂ ಮಾಚಿಕಬ್ಬೆಗೆ ಜನಿಸಿದ ಮಗುವೇ ಶಾಂತಲೆ. ವೀಣಾ ವಾದನದ ಕಾರಣವೊಡ್ಡಿ ಮಹಾರಾಜರ ಮನಸ್ಸಿಗೆ ಆಕೆಯನ್ನು ಹತ್ತಿರವಾಗಿಸಲು ಮಹಾರಾಣಿಯವರು ಪ್ರಯತ್ನಿಸಿದರು. ಆ ಸಮಯದಲ್ಲಿ ವಿಷ್ಣುವರ್ಧನರು ಮನಸೋತದ್ದು ಶಾಂತಲೆಯೆಂದು ತಿಳಿದುಕೊಂಡು ಶಾಂತಲೆಯ ಪಕ್ಕದಲ್ಲಿದ್ದ ಲಕ್ಷ್ಮಿಗೆ. ಅಕ್ಕ-ತಂಗಿಯಂತಿದ್ದವರ ಮನದಾಸೆಯಂತೆ ಒಬ್ಬರನ್ನೇ ವಿವಾಹವಾದರು ಇಬ್ಬರೂ. ಪಟ್ಟಕ್ಕೇರಿ ವಿಷ್ಣುವರ್ಧನನ ಪಟ್ಟದ ರಾಣಿಯಾಗಿದ್ದು ಶಾಂತಲೆ. ವಿವಾಹದ ನಂತರ ವಿಷ್ಣುವರ್ಧನರ ಹೃದಯ ಸಾಮ್ರಾಜ್ಞಿಯೇ ಆಗಿ ಹೋದಳು ಶಾಂತಲೆ. ಕೇವಲ ಅಂತಃಪುರಕ್ಕೆ ಮಾತ್ರ ಸೀಮಿತವಾಗದೆ, ರಾಜ್ಯದ ಆಗುಹೋಗುಗಳನ್ನೂ ತಿಳಿಯುತ್ತಾ ಅಭಿಪ್ರಾಯಗಳನ್ನೂ ನೀಡುತ್ತಿದ್ದ ಶಾಂತಲೆ ಮುಂಬರುವ ದಿನಗಳಲ್ಲಿ ಅತ್ಯಂತ ಪ್ರಮುಖ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಾಳೆ.


ಶಾಂತಲೆಯದ್ದು ಬಹುಮುಖ ಪ್ರತಿಭೆ. ವೀಣೆಯನ್ನು ಹಿಡಿಯುವ ಕೈ ಸುಟ್ಟುಗ (ಸೌಟು)ವನ್ನು ಹಿಡಿಯಲು ಸಾಧ್ಯವೇ ಎಂಬ ಮಹಾರಾಜರ ಮಾತನ್ನು ಸುಳ್ಳಾಗುವಂತೆ ಮಾಡಿದ ಸಂಧರ್ಭವೂ ಇದೆ. ವೇಲಾಪುರಿ ಎಂದರೆ ಈಗಿನ ಬೇಲೂರಿನ ದೇವಾಲಯದ ಸಮಾರಂಭದಲ್ಲಿ ಲಕ್ಷ್ಮಿಯ ವೀಣೆ ಹಾಗೂ ಶಾಂತಲೆಯ ನೃತ್ಯ ಎಲ್ಲರನ್ನೂ ಮೋಡಿಗೊಳಪಡಿಸಿತು. ಚಿಕ್ಕಂದಿನಲ್ಲಿ ಕಲಿತಿದ್ದ ಶಾಸ್ತ್ರ, ಅಧ್ಯಯನಗಳಿಂದ ಆಕೆ ತೀರ್ಪು ಕೊಡುವ ಸಂಧರ್ಭದಲ್ಲಿ ಸಹಾ ತಪ್ಪುತ್ತಿರಲಿಲ್ಲ. 


ಕುವರವಿಷ್ಣುವಿನ ಮೇಲೆ ಶಾಂತಲೆ, ಲಕ್ಷ್ಮಿ, ವಿಷ್ಣುವರ್ಧನರ ಪ್ರೇಮವೆಷ್ಟಿತ್ತು, ನಂಬಿಕೆ ಎಷ್ಟಿತ್ತೆಂದರೆ ತಮಗೆ ಮಕ್ಕಳಾಗದಾಗ ಆತನೇ ಮುಂದಿನ ಸಾಮ್ರಾಜ್ಯದ ಅಧಿಪತಿ ಎಂದೂ ತೀರ್ಮಾನಿಸಿರುತ್ತಾರೆ. ಅದಕ್ಕೆ ಇನ್ನೇನು ಸಿದ್ಧತೆಗಳಾಗಬೇಕು ಎನ್ನುವಷ್ಟರಲ್ಲಿ ಕುವರವಿಷ್ಣುವಿನ ತೀರ್ಮಾನ ತಿಳಿಯುತ್ತದೆ. ಎಲ್ಲರ ಬದುಕಿಗೆ ಬೇರೆಯದ್ದೇ ತಿರುವು ನೀಡುತ್ತದೆ.


ಶಾಂತಲೆಯ ಆತ್ಮಾರ್ಪಣೆ ದುಡುಕು ಎಂದು ಮೊದಲಿಗೆ ಅನ್ನಿಸಿದರೂ ಮಮತಾಮಯಿಯಾದ ಅವಳ ಜಾಗದಲ್ಲಿ , ಮಹಾರಾಣಿಯಾದ ಅವಳ ಸ್ಥಾನದಲ್ಲಿ ನಿಂತು ಆಲೋಚಿಸಿದರೆ ಅವಳಿಗೆ ಬೇರೆ ಆಯ್ಕೆಯಾದರೂ ಏನಿತ್ತು ಎಂದೂ ಅನ್ನಿಸದೇ ಇರಲಾರದು. ಆತ್ಮಹತ್ಯೆ ಮಾಡಿಕೊಳ್ಳುವ ನಿಮಿಷದ ಮುನ್ನವೂ ಕೆಲವರು ಗುಟ್ಟು ಬಿಟ್ಟುಕೊಡದೆ ಇರುತ್ತಾರೆ. ತಮ್ಮ ಜೀವದ ಇನ್ನೊಂದು ಭಾಗವೇ ಅವಳು ಎನ್ನುವಂತಿದ್ದ ಲಕ್ಷ್ಮಿ ಹಾಗೂ ವಿಷ್ಣುವರ್ಧನನಿಗೂ ಸುಳಿವು ನೀಡದೆ ಹೊರಡುವ ಅವಳ ಮನಸ್ಸಿನ ದುಃಖ, ಘಾಸಿಯಾದದ್ದು ಹಾಗೂ ದೃಢತೆ ಸಾಮಾನ್ಯರ ಅಳತೆಗೋಲಿಗೆ ಸಿಗುವಂತದ್ದಲ್ಲ. 


ಕೆ. ವಿ. ಅಯ್ಯರ್ ಅವರ 'ಶ್ರೀ ವಿಷ್ಣುಕಾಂತೆ ಶಾಂತಲಾ'ವನ್ನೇ ಆಧರಿಸಿ ಶ್ರೀವಿಜಯ ಹಾಸನ ಅವರು 'ಆತ್ಮಾರ್ಪಣೆ ಅಥವಾ ಅಮರ ಸತಿ ಶಾಂತಲೆ' ಎಂಬ ನಾಟಕವನ್ನು ರಚಿಸಿದ್ದಾರೆ. 


ಇದರಲ್ಲಿ ಆತ್ಮಾರ್ಪಣೆ ಅಥವಾ ಅಮರ ಸತಿ ಶಾಂತಲೆ ಎಂಬ ಶೀರ್ಷಿಕೆಯನ್ನು ಕಂಡಾಗಲೇ ಶಾಂತಲೆಯ ಅಂತ್ಯದ ಕುರಿತ ಸ್ಪಷ್ಟತೆ ಕಂಡು ಬರುತ್ತದೆ. ಇಲ್ಲಿ ಆತ್ಮಾಹುತಿ ಎಂದು ಅಥವಾ ಆತ್ಮಹತ್ಯೆ ಎಂದು ಉಲ್ಲೇಖಿಸದೆ ಆತ್ಮಾರ್ಪಣೆ ಎಂದು ಉಲ್ಲೇಖಿಸಿರುವುದು ಆಕೆ ಮಾಡಿದ ತ್ಯಾಗಕ್ಕೆ ನೀಡಿದ ಗೌರವಯುತ ಅರ್ಪಣೆ ಎಂದೆನಿಸಿತು. ಶಾಂತಲೆಯೇ ಪ್ರಧಾನ ಪಾತ್ರದಲ್ಲಿರುವ ಈ ನಾಟಕ ಕಾದಂಬರಿಗಿಂತ ವಿಭಿನ್ನವಾಗಿಯೇನೂ ಕಂಡು ಬರಲಿಲ್ಲ. ಕಾದಂಬರಿಯ ಕೆಲವು ವಿಚಾರಗಳನ್ನು ಈ ನಾಟಕದಲ್ಲಿ ಕೈ ಬಿಡಲಾಗಿದೆ.


ಸಾ.ಶಿ. ಮರುಳಯ್ಯನವರ 'ನಾಟ್ಯ ಮಯೂರಿ'ಯ ಶಾಂತಲೆ ಶುರುವಾಗುವುದೇ ಶಾಂತಲೆಯ ನೃತ್ಯದ ಸಂದರ್ಭದಲ್ಲಿ. ಯುದ್ಧದ ವಿಜಯಕ್ಕಾಗಿ ಹೊನ್ನಾದೇವಿಗೆ ವಿಶೇಷ ಪೂಜೆ ಹಾಗೂ ವಿಶೇಷ ನರ್ತನದ ಸಂದರ್ಭದಲ್ಲಿ ಆಕೆಯ ನೃತ್ಯವನ್ನು ತಂದೆಯ ಜೊತೆಗೆ ಭಾವಿ ಪ್ರಭುಗಳಾದ ವಿಷ್ಣುವರ್ಧನರೂ ನೋಡುತ್ತಾರೆ. ನಂತರ, ಆತ್ಮೀಯ ಗೆಳೆಯ ಬಪ್ಪರಸನಿಂದ 64 ವಿದ್ಯೆ ಬಲ್ಲ ಶಾಂತಲೆಯ ಕುರಿತು ತಿಳಿದು ಅನುರಾಗ ಇನ್ನಷ್ಟು ಹೆಚ್ಚಾಗುತ್ತದೆ.


 ತಾಯಿ ಏಚಲದೇವಿಗೂ ಮಗನ ಮನಸ್ಸು ತಿಳಿದು ಶಾಂತಲೆಯೂ ಇಷ್ಟವಾಗುತ್ತಾಳೆ. ವಿಷ್ಣುವರ್ಧನನ ಬಹುಪತ್ನಿತ್ವಕ್ಕೆ ಒಪ್ಪಿದ ಶಾಂತಲೆ 'ಸವತಿ ಗಂಧವಾರಣೆ'ಯಾಗುತ್ತಾಳೆ.


ಶಾಂತಲೆಯ ಕುರಿತ ಕಾದಂಬರಿಗಳಲ್ಲಿ ಆಕೆಯ ಅಂತ್ಯದ ಕುರಿತು ವಿಭಿನ್ನ ಚಿತ್ರಣಗಳಿರುತ್ತವೆ. ಇಲ್ಲಿ ಶಾಂತಲೆ ಆ ತೀರ್ಮಾನಗಳನ್ನು ಕೈಗೊಳ್ಳುವುದಕ್ಕೂ ಮುನ್ನ ಹಲವಾರು ಘಟನೆಗಳು ಹಿನ್ನೆಲೆಯಾಗುತ್ತವೆ. ಉದಯಾದಿತ್ಯನ ಮಗನ ಎರೆಯಂಗ ಮರಣ, ರಾಜಮಾತೆಯವರ ಮರಣ, ತನ್ನ ಗಂಡು ಮಗು ಬಲ್ಲಾಳನ ಮರಣ, ತಾಯಿ ಮಾಚಿಕಬ್ಬೆ ಮುತ್ತೈದೆಯಾಗಿಯೇ ಸತ್ತ ನಂತರ.. ಶಾಂತಲೆಯ ಅಚ್ಚುಮೆಚ್ಚಿನ ಗೆಳತಿ ಸೋಮಲೆ ವಿವಾಹವಾದ ಮೂರು ತಿಂಗಳಲ್ಲಿಯೇ ವಿಧವೆಯಾಗಿ ಶಿವಗಂಗೆಯನ್ನು ಸೇರಿದಳು. ಹತ್ತು ವರ್ಷದ ಬಾಲಕ ಎರೆಯಂಗ ಕುದುರೆಯ ಕಾಲಿಗೆ ಸಿಕ್ಕಿ ಚಿಂದಿಚಿಂದಿಯಾಗಿದ್ದ. ವಿಪರ್ಯಾಸವೆಂದರೆ ವಿದ್ಯಾಪೀಠದಲ್ಲಿ ಅಭ್ಯಾಸ ಮಾಡುತ್ತಿದ್ದ ಆ ಮಗುವನ್ನು ಹುಟ್ಟುಹಬ್ಬದ ಸಲುವಾಗಿ ದ್ವಾರಸಮುದ್ರಕ್ಕೆ ಕರೆಸಿಕೊಳ್ಳಲಾಗಿತ್ತು. ಹುಟ್ಟು ಹಬ್ಬದ ದಿನವೇ ಆತ ಸಾವನ್ನು ಆಚರಿಸುವಂತಾಗಿತ್ತು. ಸಾವಿನ ಸರಣಿಗಳಿಂದ ನೊಂದು ಬದುಕನ್ನು ನಶ್ವರವೆಂದು ಭಾವಿಸುತ್ತಿದ್ದಳು ಶಾಂತಲೆ. ಕ್ಷಣಿಕವಾದ ಈ ಬದುಕಿನಿಂದ ಬಿಡುಗಡೆಬೇಕೆಂದು ಬಯಸುತ್ತಿರುವಾಗ ಪಟ್ಟದರಸಿಯ ಪಟ್ಟದಿಂದಲೂ ಬಿಡುಗಡೆ ಬೇಕೆಂದು ಕೇಳಿದಳು. ಆದರೆ, ನೀನು ಬದುಕಿರುವವರೆಗೂ ಅದು ಸಾಧ್ಯವಿಲ್ಲವೆಂದಾಗ.. ತನಗೆ ಮಕ್ಕಳಿಲ್ಲವೆಂದೂ.. ಜೊತೆಗೆ ತಾನು ಇರುವಾಗ ಬೇರೆ ಯಾವ ರಾಣಿಯರಿಗೂ ಆ ಪಟ್ಟದ ಮೇಲೆ ಕೂರಲಾಗದೆಂದು ತಿಳಿದು ತನ್ನ ತವರಿಗೆ ಹೋಗಿ ಬರಲು ಅನುಮತಿ ಕೇಳಿದವಳು ಶಿವಗಂಗೆಗೆ ಹೊರಟಳು.


ರಾಜಕಾರಣದ ನಿಮಿತ್ತ ಮಾರಸಿಂಗಮಯ್ಯನವರು ರಾಜ್ಯದ ಗಡಿ ಪ್ರದೇಶದಲ್ಲಿಯೇ ಸಂಚರಿಸುತ್ತಿದ್ದುದರಿಂದ, ವಿಷ್ಣುವರ್ಧನರು ಉತ್ತರದ ಗಡಿಯನ್ನು ಭದ್ರಪಡಿಸಿ ಬರುವ ಹೊತ್ತಿಗೆ ಶಾಂತಲೆ ಕಠಿಣ ಮನೋನಿರ್ಧಾರ ಮಾಡಿ 21 ದಿನಗಳಾಗಿದ್ದವು. ಶಿವಗಂಗೆಯ ಹೊನ್ನಾದೇವಿಯ ಗುಡಿಯ ಮುಂಭಾಗದ ಬಂಡೆಯ ಮೇಲೆ ಅನ್ನ ,ಆಹಾರಾದಿಗಳನ್ನು ತೊರೆದು ಹಗಲಿರುಳೆಲ್ಲದೆ, ಮಳೆಬಿಸಿಲೆನ್ನದೆ ಘೋರ ವ್ರತವನ್ನಾಚರಿಸುತ್ತಾ ಜೀವವನ್ನು ಅರ್ಪಿಸುತ್ತಾಳೆ.


ಇಲ್ಲಿ ರಾಣಿ ನಾಟ್ಯಮಯೂರಿಯಾಗಿ ಮೊದಲಿಗೆ ಕಂಡರೂ.. ನಂತರ ಅವಳ ನೃತ್ಯಕ್ಕಿಂತ ಶಿಲ್ಪಕಲೆಗೆ ಹೆಚ್ಚಿನ ಒತ್ತು ನೀಡಲಾಗಿದೆ. 


ಶಾಂತಲೆಯ ಕುರಿತು ಕೆ. ಎನ್. ಗಣೇಶನಯ್ಯನವರ ಕನಕ ಮುಸುಕುವಿನಲ್ಲಿ ಆಕೆ ಸಲ್ಲೇಖನ ಆ ವ್ರತ ಕೈಗೊಂಡಿದ್ದರ ಹಾಗೂ ವಿಷ್ಣುವರ್ಧನ ಹಾಗೂ ಶಾಂತಲೆಯರ ನಡುವಿದ್ದ ಭಿನ್ನಾಭಿಪ್ರಾಯಗಳ ಕುರಿತು ಓದಿದಾಗ ಈ ಕುರಿತ ಪುಸ್ತಕವಿದ್ದರೆ ಓದಬೇಕು ಎಂದುಕೊಂಡಿದ್ದೆ. ಆ ನಿರೀಕ್ಷೆ ಸಾಕಾರವಾದದ್ದು ವೈ. ಕೆ. ಸಂಧ್ಯಾ ಶರ್ಮ ಅವರ ಐತಿಹಾಸಿಕ ಕಾದಂಬರಿ "ನೃತ್ಯ ಸರಸ್ವತಿ"ಯನ್ನು ಓದಿದಾಗ. 


ವೈ. ಕೆ. ಸಂಧ್ಯಾಶರ್ಮ ಅವರ 'ನೃತ್ಯ ಸರಸ್ವತಿ'ಯಲ್ಲಿ ಭೋಕಿಮಯ್ಯನ ಪಾತ್ರಕ್ಕೆ ವಿಶೇಷ ತೂಕವಿದೆ. ಅಂದಿನ ಹೊಯ್ಸಳ ರಾಜ್ಯದ ಅಧಿಕೃತ ದಾಖಲೆ ಬರೆದಿಟ್ಟಿರುವ ಶಾಸನಕಾರ ಮತ್ತು ಕವಿ ಬೋಕಿಮಯ್ಯ ರಾಣಿ ಶಾಂತಲೆಯನ್ನು ಆರಾಧಿಸಿರುವ ಪರಿ ಹಾಗೂ ಕಂಡ ನೋಟ ಕಥೆಯಲ್ಲಿ ಬರುತ್ತಲೇ.. ಆಕೆಯ ಹೊಗಳಿಕೆ, ಬಿರುದುಗಳು ಅಲ್ಲಲ್ಲಿ ಕಣ್ಸೆಳೆಯುತ್ತವೆ. 


ಕೇವಲ ರಾಜ ವಂಶದವರು ರಾಜವಂಶದ ಯುವತಿಯರನ್ನೇ ವಿವಾಹವಾಗುವ ಸಂದರ್ಭಕ್ಕಿಂತಲೂ ವಿಭಿನ್ನವಾಗಿ ಚಿತ್ರಿತವಾಗಿದೆ. ಅಲ್ಲದೇ, ಇದು ಅಲ್ಲಲ್ಲಿ ಎದ್ದ ಅಪಸ್ವರ ಹಾಗೂ ಅದನ್ನು ನಿವಾರಿಸಿಕೊಂಡದ್ದರ ಜೊತೆಗೆ ಮತ್ತೆ ಶಾಂತಲೆಯೇ ಅಪವಾದವನ್ನು ತಾಳಲಾರದೆ ಅದನ್ನು ಬೇರೆಯದೇ ರೀತಿಯಲ್ಲಿ ನಿವಾರಿಸಿಕೊಂಡದ್ದು ಕಾಣುತ್ತದೆ.


ಇಲ್ಲಿ ವಿಷ್ಣುವರ್ಧನನ ಜೊತೆಯಾದ ಶಾಂತಲೆ ತನ್ನ ತೀರ್ಮಾನಗಳನ್ನು ತಿಳಿಸುವಾಗ ಆಕೆಯ ಉನ್ನತ ವ್ಯಕ್ತಿತ್ವ ಹಾಗೂ ಆಕೆಯ ನಡೆಗಳು ಆಕೆ ಎಷ್ಟು ಪ್ರಬುದ್ಧವಾಗಿ ಆಲೋಚನೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೇ.. ನೃತ್ಯ, ಭಕ್ತಿ, ಕಲೆ ಎಲ್ಲದರಲ್ಲಿಯೂ ಮೇಲುಗೈಯಾಗಿದ್ದ ಆಕೆ ರಾಜನಿಗೆ ಅಷ್ಟು ಪ್ರಿಯವಾದದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಪ್ರಜೆಗಳಿಗೂ ಹತ್ತಿರವಾಗುವುದು ಅಷ್ಟು ಸುಲಭವಲ್ಲ. ವಿವಾಹವಾದ ಹೊಸತರಲ್ಲಿ, ಸಿಂಹಾಸನವನ್ನೇರಿ ಪಟ್ಟಗಟ್ಟಿಸಿಕೊಳ್ಳಲು ನಿರಾಕರಿಸಿದ ಸಂದರ್ಭ ರಾಜನ ಕಣ್ಣಲ್ಲಿ, ಪ್ರಜೆಗಳ ದೃಷ್ಟಿಯಿಂದ ಹಾಗೂ ಆಕೆಯ ಆಲೋಚನೆ ಮೂರೂ ಕಂಡುಬರುತ್ತದೆ.


ತಾನೇ ಮಹಾರಾಜರಿಗೆ ಬಮ್ಮಲೆಯನ್ನು ತಂದು ವಿವಾಹ ಮಾಡಿಸುವ ಸಂದರ್ಭದಲ್ಲಿ ಹಾಗೂ ಅದೇ ದಿನ ತಾನು ಗರ್ಭಿಣಿಯಂದು ತಿಳಿದಾಗ ಆಕೆಯಲ್ಲಿ ಉಂಟಾಗುವ ಭಾವಗಳಲ್ಲಿ ಹಾಗೂ ಆಕೆಯ ಪ್ರೌಢ ನಡೆಯಲ್ಲಿ ಆಕೆಯ ಔನತ್ಯ ಎದ್ದು ಕಾಣುತ್ತದೆ.  


ಬಮ್ಮಲೆ ಪತ್ನಿಯಾಗಿ ಬಂದ ನಂತರ ಕ್ಷಣ-ಕ್ಷಣಕ್ಕೂ ಆಕೆ ರಾಜನ ಮೇಲೆ ತನ್ನ ಹಿಡಿತ ಸಾಧಿಸಲ,  ತನ್ನವನನ್ನಾಗಿ ಮಾಡಿಕೊಳ್ಳಲು ಒದ್ದಾಡುವ ಪರಿ ಹಾಗೂ ಇರ್ಷ್ಯೆ ಕಾಣುತ್ತಾ ಹೋದರೂ.. ಶಾಂತಲೆಯ ವ್ಯಕ್ತಿತ್ವ ಆಕೆಯನ್ನು ತಣ್ಣಗಾಗಿಸುವ ಪರಿಯೂ ಕಾಣುತ್ತದೆ. ಬಮ್ಮಲೆಯ ಮಗಳಾದ ಪದ್ಮಲೆ ಹಾಗೂ ಮಗ ಬಲ್ಲಾಳನ ಆಗಮನ ರಾಜನಿಗೆ, ಬಮ್ಮಲೆಗೆ ಮಾತ್ರವಲ್ಲದೇ ಶಾಂತಲೆಗೂ ಇಬ್ಬರಿಗೂ ಖುಷಿ ತಂದದ್ದು ನಿಷ್ಕಲ್ಮಶ ಅಂತಃಕರಣವನ್ನು ತೋರುತ್ತದೆ.


ಪದ್ಮಲೆ ಹಾಗೂ ಬಲ್ಲಾಳರು ದೊಡ್ಡಬ್ಬೆ ಶಾಂತಲೆಯ ಕುರಿತು ತೋರುವ ಪ್ರೀತಿ ಹಾಗೂ ಆದರಗಳು ಯಾವುದೇ ಪ್ರೀತಿ, ಗೌರವವನ್ನು ಒತ್ತಾಯವಾಗಿ ಹೇರುವುದಕ್ಕೂ.. ತಾನಾಗಿ ಮೂಡುವುದಕ್ಕೂ ಇರುವ ವ್ಯತ್ಯಾಸವನ್ನು ತೋರುತ್ತವೆ. ಮಕ್ಕಳ ಮೇಲೆ ಅಷ್ಟು ಛಾಪು ಏರಿದ್ದ ಶಾಂತಲೆಯ ವ್ಯಕ್ತಿತ್ವ ಎಷ್ಟರಮಟ್ಟಿಗಿತ್ತು ಎಂಬುದರ ಅರಿವಾಗುತ್ತದೆ.


ಮಗ ಬಿಟ್ಟಿಯಣ್ಣನನ್ನು ಗರುಡನನ್ನಾಗಿಸುವಾಗ ತಾಳ್ಮೆಯ ಖನಿಯಂತಿದ್ದ ಶಾಂತಲೆ ದುಡುಕುವುದು ಹಾಗೂ ಅವಳ ನಿರ್ಧಾರಗಳು ರೂಪಿತವಾದಾಗ ಅವಳ ಮನಸ್ಸಿನ ಮೇಲೆ ಆಗುವ ಒತ್ತಡ ಹಾಗೂ ಆ ಕ್ಷಣದಲ್ಲಿ ಆಕೆ ತೆಗೆದುಕೊಳ್ಳುವ ನಿರ್ಧಾರಗಳು ಬಹುಶಃ ವಯಸ್ಸಿನ ಪ್ರಭಾವವೂ ಇರಬಹುದು ಎಂದೆನಿಸಿತು. ಹೇಗಿದ್ದ ಶಾಂತಲೆ ಹೇಗಾದಳು ಎನ್ನುತ್ತಾ ಶಾಂತಲೆಯ ಕುರಿತು ಪರಿತಪಿಸುವಂತಾಗುತ್ತದೆ. ಪದೇ ಪದೇ ಅಂತಹಾ ಘಟನೆಗಳು ನಡೆದರೆ ಅವಳು ತಾನೇ ಏನು ಮಾಡುತ್ತಾಳೆ..! ಮಗನನ್ನೇ ಕಳೆದುಕೊಳ್ಳುವ ತಾಯಿಯಾಗಿ, ಪಿತೂರಿಯ ವಿರುದ್ಧ ರಾಜನನ್ನು ಎಚ್ಚರಿಸಲಾಗದ ಅಸಹಾಯಕಳಾಗಿ, ಕೆಲವೊಮ್ಮೆ ರಾಜ್ಯದ ಒಳಿತಿನಿಂದ ತೆಗೆದುಕೊಂಡ ನಿರ್ಧಾರಗಳು ಸ್ವಂತಕ್ಕೆ ಮುಳ್ಳಾದ ಸಂಗತಿಗಳು ಕಣ್ಣಲ್ಲಿ ನೀರು ತರಿಸುತ್ತವೆ. 


ಶಿವಗಂಗೆಗೆ ಹೊರಡುವ ಆಕೆಯ ನಿರ್ಧಾರವನ್ನು ನೀನೇಕೆ ಹೋಗುತ್ತೀಯೆ ಎಂದು ಕೇಳಿ ಆಕ್ಷೇಪಿಸಿಯಾನು ಎಂಬ ಭ್ರಮೆ ಕೇವಲ ಶಾಂತಲೆಗಲ್ಲದೆ ನಮ್ಮ ಮನಸ್ಸಿನಲ್ಲಿಯೂ ಮೂಡುತ್ತದೆ. ಆಕೆಯ ಶೂನ್ಯ ನೋಟ, ವಿರಾಗಿಣಿಯಂತಹಾ ನಿರ್ಗಮನ ನಮ್ಮಲ್ಲೂ ಶೂನ್ಯ ಹುಟ್ಟಿಸುತ್ತದೆ.


ಬೋಕಿಮಯ್ಯನ ಮಾತು "ಆಕೆ ಇಲ್ಲದ ಈ ನಾಡು ದೇವರಿಲ್ಲದ ಗುಡಿ, ದೀಪವಿಲ್ಲದ ಗೃಹ... ಮಹಾರಾಣಿಯವರಿಲ್ಲದ ಈ ನಾಡು ಇನ್ನೂ ಹೊಸತನದ ಕಲೆಯ ಮಿಂಚು ಕಳೆದುಕೊಳ್ಳುವುದು. ಇನ್ನು ಮೇಲೆ ಇದು ದೋರಸಮುದ್ರವಲ್ಲ... ಹಳೆಯ ಬೀಡು... ಹಾಳಾಳು ಬೀಡು..." ಎಂದು ಹೇಳುವ ಮಾತು ಎಷ್ಟೊಂದು ಸತ್ಯ..! 


ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎಂಬ ಮಾತಿನಂತೆ ಇಲ್ಲಿ ಶಾಂತಲೆಯೇ ಎದ್ದು ಕಾಣುತ್ತಾಳೆ. ಇಲ್ಲಿ ಆಕೆಯಿಂದ ಪ್ರೇರೇಪಿತರಾದ ಪ್ರಜೆಗಳು, ಬಮ್ಮಲೆ ನೃತ್ಯದ ಕುರಿತ ತಾತ್ಸಾರದ ಮಾತುಗಳು, ಪದಕದ ಕುರಿತ ಸಂಗತಿಗಳು.. ಹೀಗೆ ಸಣ್ಣ-ಸಣ್ಣ ಸಂಗತಿಗಳೂ ಮನಸ್ಸಿಗೆ ಮುಟ್ಟುತ್ತವೆ.


ಶಾಂತವಾಗಿದ್ದ ಶಾಂತಲೆ ದಿನೇ ದಿನೇ ಬಳಲುವಾಗ, ಆಕೆಯ ದುಃಖ-ನೋವುಗಳು ನಮ್ಮವೇ ಎಂದೆನ್ನಿಸುವ ಭಾವ ಕಾಡುವಾಗ ಆಕೆ ಇಷ್ಟಾದರೂ ಆವರಿಸಿಕೊಳ್ಳದಿದ್ದರೆ ಹೇಗೆ..? 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ