'ಮಹಾಭಾರತದಲ್ಲಿ ನೇಪಥ್ಯಕ್ಕೆ ಸೇರಿರುವ ಪಾತ್ರ' ಎಂಬ ಶೀರ್ಷಿಕೆ ಕಂಡಾಗ ನನಗೆ ಮೊದಲಿಗೆ ನೆನಪಾದದ್ದು ವಿದುರ ಹಾಗೂ ಕುಟುಂಬದವರು. ವಿದ್ಯೆ, ನೀತಿ, ಅರ್ಹತೆ ಇದ್ದರೂ ಆತನ ಯೋಗ್ಯತೆಗೆ ತಕ್ಕಂತೆ ಬೆಳಕಿಗೆ ಬರುವ ಅವಕಾಶವಾಗಲಿಲ್ಲ ಎಂದೆನಿಸಿದೆ. ಆದರೆ, ಇಂತಹಾ ನೀತಿವಂತ ವಿದುರನಿಗೆ ತಕ್ಕ ಪತ್ನಿ ಕುರಿತು ನಾನೀಗ ಹೇಳಲು ಹೊರಟಿರುವುದು. ನಾನು ಆಯ್ಕೆ ಮಾಡಿಕೊಂಡಿರುವ ಪಾತ್ರ ವಿದುರನ ಪತ್ನಿ 'ಸುಲಭಾ'.
ಸತ್ಯವತಿಯ ಮಾತಿನಂತೆ ವ್ಯಾಸನಿಯೋಗ ಪದ್ಧತಿಯಲ್ಲಿ ಹುಟ್ಟಿದುದರಿಂದ ವಿದುರ ಅರಮನೆಯಲ್ಲೇ ಬೆಳೆಯುತ್ತಾನೆ. ಅವನಿಗೆ ಭೀಷ್ಮ ದೇವಕನೆಂಬ ರಾಜನ ಪುತ್ರಿ 'ಪಾರಸವಿ'ಯ ಜೊತೆ ಮದುವೆ ಮಾಡಿಸುತ್ತಾನೆ ಎಂಬ ಉಲ್ಲೇಖ ವ್ಯಾಸ ಭಾರತದ ಆದಿಪರ್ವದ ಮಹಾಭಾರತ ಕಥೆಯಲ್ಲಿ ಸಿಕ್ಕರೂ ಪಾರಸವಿಯ ಕುರಿತಾಗಿ ಹೆಚ್ಚಿನ ಮಾಹಿತಿ ಸಿಗುವುದಿಲ್ಲ.
ದೇವಕ ರಾಜ ಹಾಗೂ ಶೂದ್ರ ಮಹಿಳೆಗೆ ಜನಿಸಿದ ಮಗು 'ಸುಲಭಾ' ಜೊತೆಗೆ ವಿದುರನ ಮದುವೆಯಾಯಿತು ಎನ್ನುವ ಉಲ್ಲೇಖ ಹೆಚ್ಚಿನ ಕಡೆ ಸಿಗುತ್ತದೆ. 'ಸುಲಭಾ'ಳನ್ನು ಶ್ವಪಾಕಿ ಮತ್ತು ವತವ್ಯಾಧಿ ಎಂದೂ ಕರೆಯುತ್ತಾರೆ. ಇವಳು ರಾಜ ಶ್ವೇತಕಿಯ ಮಗಳು ಎಂದು ಕೆಲವೆಡೆ ಮಾಹಿತಿ ಸಿಗುತ್ತದೆ. 'ಸುಲಭಾಮೈತ್ರೇಯಿ' ಎನ್ನುವ 'ಪ್ರಧಾನ' ರಾಜರ್ಷಿಯ ಮಗಳಾದ ವೇದ ಪಾರಂಗತಳಾದ ಸುಲಭಾ ಕುರಿತ ಕೆಲವೆಡೆ ಓದುತ್ತೇವೆಯಾದರೂ.. ಇವರಿಬ್ಬರು ಬೇರೆಬೇರೆಯೇ .
ವಿದುರ ಹಾಗೂ ಸುಲಭಾರಿಗೆ ಅನುಕೇತು ಎಂಬ ಮಗ ಹಾಗೂ ಅಂಬಾವತಿ ಎಂಬ ಮಗಳು ಇರುತ್ತಾರೆ ಎಂಬ ಮಾಹಿತಿ ಒಂದೆಡೆ ಅಂತರ್ಜಾಲದಲ್ಲಿ ದೊರೆಯುತ್ತದೆ. ಅನಿರುದ್ಧ ಹಾಗೂ ಸಂಜಯ (ಮಹಾಭಾರತ ಯುದ್ಧವನ್ನು ದೃತರಾಷ್ಟ್ರನಿಗೆ ವಿವರಿಸಿದ ಸಂಜಯನಲ್ಲ), ಅನಸವ, ಅನುಕೇತು ಸೇರಿದಂತೆ ಒಂಬತ್ತು ಮಕ್ಕಳಿದ್ದರು ಎನ್ನುವ ಉಲ್ಲೇಖ ಸಿಕ್ಕರೂ ಇವೆಲ್ಲವೂ ಅಂತರ್ಜಾಲ ಆಧಾರಿತ ಮಾಹಿತಿಗಳು.
ಸುಲಭಾ ವಿದುರನಿಗೆ ತಕ್ಕ ಪತ್ನಿಯಾಗಿದ್ದು.. ನಾಗರೀಕರಲ್ಲಿ ನೀತಿಯನ್ನು ಅಳವಡಿಸಿಕೊಳ್ಳಲು ಆಕೆಯೂ ಸಲಹೆ ನೀಡುತ್ತಾ ಪತಿಯ ಜೊತೆಯಾಗಿದ್ದವಳು. ಅಲ್ಲದೇ ಗಂಡುಮಗು ಹಾಗೂ ಹೆಣ್ಣುಮಗು ಎಂಬ ಭೇದ-ಭಾವ ಮಾಡಬಾರದು ಎಂದು ದಂಪತಿಗಳಿಬ್ಬರೂ ನಾಗರೀಕರಲ್ಲಿ ಅರಿವು ಮೂಡಿಸುತ್ತಿದ್ದರು ಎಂದೂ ಹೇಳುತ್ತಾರೆ.
'ವಿದುರ ನೀತಿ' ಎಂದು ಆತನ ಪ್ರಸಿದ್ಧವಾಗಿ ನೀತಿಯನ್ನು ಬೋಧಿಸುವಾಗ ಮನೆಯಲ್ಲಿಯೂ ಅಂತಹದ್ದೇ ವಾತಾವರಣದಲ್ಲಿ ಬೆಳೆದವರು ಹಾಗೂ ಸದಾ ಜೊತೆಯಲ್ಲಿಯೇ ಇರುವವರು ಅದೆಲ್ಲವನ್ನು ರೂಢಿಸಿಕೊಂಡ ಬಗ್ಗೆ ಹಾಗೂ ಪತ್ನಿಯಾಗಿ ಆಕೆ ವಿದುರನಿಗೆ ಸಹಕರಿಸಿದ ಬಗೆಗೆ ಕೂಡಾ ಮೆಚ್ಚುಗೆ ನೀಡುವಂತಾಗುತ್ತದೆ. ಆಕೆ ಕೃಷ್ಣನ ಕುರಿತು ಕೇಳಿದ್ದರೂ.. ಆತನನ್ನು ನೋಡಿರಲೇ ಇಲ್ಲ. ಆದರೂ.. ಆತನ ಜಪ ಮಾಡುತ್ತಾ ನಿಜವಾದ ಕೃಷ್ಣಭಕ್ತೆಯಾಗಿ ರೂಪಿತಳಾಗಿದ್ದಳು. ಆಕೆ ಕೃಷ್ಣನನ್ನು ಕಂಡ ಸಂದರ್ಭವೊಂದು ಭಕ್ತಿಯ ಪರಾಕಾಷ್ಠೆಯನ್ನು ತೋರುವ ಸಂದರ್ಭವಾಗಿ ಉಲ್ಲೇಖಿತವಾಗಿದೆ. ಅದು ಹೀಗಿದೆ.
ಪಾಂಡವರು ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸವನ್ನು ಮುಗಿಸಿ ಬಂದು ತಮ್ಮ ರಾಜ್ಯವನ್ನು ಪಡೆಯುವ ಸಂದರ್ಭದಲ್ಲಿ ಶ್ರೀಕೃಷ್ಣ ಪಾಂಡವರ ದೂತನಾಗಿ ದುರ್ಯೋಧನನ ಬಳಿಗೆ ಸಂಧಾನಕ್ಕೆಂದು ಬರುವ ಸಂದರ್ಭದಲ್ಲಿ.. ಅರಮನೆಗೆ ಹೋಗುವ ಮುನ್ನ ವಿದುರನ ಮನೆಗೆ ಬರುತ್ತಾನೆ.
ಆ ಸಂದರ್ಭದಲ್ಲಿ ವಿದುರ ಮನೆಯಲ್ಲಿರಲಿಲ್ಲ. ವಿದುರನ ಪತ್ನಿಯಾದ ಸುಲಭಾ ಆತನ ಪ್ರಭಾವಳಿಯನ್ನು ನೋಡಿ ಭಕ್ತಿರಸದಲ್ಲಿ ಮಿಂದು ಹೋಗಿರುವಾಗ.. ಕೃಷ್ಣ ,ತನಗೆ ಹಸಿವಾಗಿದೆ. ತಿನ್ನಲು ಏನಾದರೂ ಸಿಗುತ್ತದೆಯಾ..?" ಎಂದು ಕೇಳಿದಾಗ ಒಳಹೋದವಳಿಗೆ ನೆನಪಾಗಿದ್ದು ಅಂದು ತಾನು ಅಡಿಗೆ ಮಾಡಿಲ್ಲವೆಂದು. ಆಗ ಮನೆಯಲ್ಲಿದ್ದ ಕಳಿತ ಬಾಳೆಹಣ್ಣಿನ ಗೊನೆಯಲ್ಲಿನ ಹಣ್ಣನ್ನು ಕಿತ್ತು, ಹಣ್ಣನ್ನು ಒಂದು ತಟ್ಟೆಯಲ್ಲಿ, ಸಿಪ್ಪೆಯನ್ನು ಒಂದು ತಟ್ಟೆಯಲ್ಲಿ ಹಾಕಿ ಹಣ್ಣಿನ ಬದಲಾಗಿ ಸಿಪ್ಪೆಯನ್ನೇ ಕೃಷ್ಣನಿಗೆ ಅರ್ಪಿಸುತ್ತಾಳೆ. ಕೃಷ್ಣನು ಪ್ರೀತಿಯಿಂದಲೇ ಸಿಪ್ಪೆಯನ್ನೇ ತಿನ್ನುತ್ತಾನೆ. ಅದೇ ಸಂದರ್ಭದಲ್ಲಿ ಮನೆಗೆ ಬಂದ ವಿದುರ ಆಕೆಯನ್ನು ಎಚ್ಚರಿಸಿದಾಗ.. ಆಕೆಗೆ ತನ್ನ ತಪ್ಪಿನ ಅರಿವಾಗಿ ಹಣ್ಣನ್ನು ತಂದಿಡುತ್ತಾಳೆ. ಆಗ ಕೃಷ್ಣ ಹೇಳುವ ಮಾತು "ಆ ಬಾಳೆಹಣ್ಣಿನ ಸಿಪ್ಪೆಯೇ ನನಗೆ ಎಲ್ಲದಕ್ಕಿಂತ ಹೆಚ್ಚು ರುಚಿಯಾಗಿ ಇಷ್ಟವಾಯಿತು" ಎಂದು.
ಪತ್ರಂ ಪುಷ್ಪಂ ಫಲಂ ತೋಯಂ
ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ
ಅರ್ಥಾತ್
ಯಾರು ಎಲೆಯನ್ನೋ, ಹೂವನ್ನೋ, ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾರೋ, ನನ್ನಲ್ಲೇ ಭಕ್ತಿಯಿಟ್ಟ ಅವರ ಭಕ್ತಿಯ ಆ ಕೊಡುಗೆಯನ್ನು ನಾನು ಪ್ರೀತಿಯಿಂದ ಸ್ವೀಕರಿಸುವೆ ಎನ್ನುವ ಭಗವದ್ಗೀತೆಯ ಶ್ಲೋಕವನ್ನು ಇಲ್ಲಿ ನೆನೆಯಬಹುದು.
ಮತ್ತೊಂದು ಪ್ರಸಂಗದಲ್ಲಿ, ಸಂಧಾನ ಮುಗಿದ ನಂತರ ವಿದುರನ ಮನೆಗೆ ಬಂದ ಕೃಷ್ಣನಿಗೆ ರಾತ್ರಿಯ ಊಟದ ಸಂದರ್ಭದಲ್ಲಿ ವಿದುರ ತಪ್ಪಾಗಿ ಹಣ್ಣಿನ ಬದಲು ಸಿಪ್ಪೆಯನ್ನು ಕೊಡಲು ಹೋಗುವಾಗ ಸುಲಭಾ ತನ್ನ ಪತಿಯನ್ನು ಎಚ್ಚರಿಸುವ ಕುರಿತಾಗಿ ಹೇಳುತ್ತಾರೆ. ಗಂಡ ತಪ್ಪು ಮಾಡಿದಾಗ ಹೆಂಡತಿ ನಯವಾಗಿ ತಿದ್ದುವ ಪರಿ ಹಾಗೂ ಎಚ್ಚರಿಸುವ ಅವಶ್ಯಕತೆಯನ್ನು ಬಿಂಬಿಸುವಂತಿದೆ ಈ ಸಂದರ್ಭ.
ಇನ್ನೊಂದು ಕತೆಯಲ್ಲಿ... ಕೃಷ್ಣ ಸಂಧಾನ ಸಭೆಗೆ ಹೋಗುವ ಮುನ್ನ ವಿದುರನ ಮನೆಗೆ ಬಂದಾಗ ಸುಲಭಾ ಸ್ನಾನ ಮಾಡುತ್ತಿರುತ್ತಾಳೆ. ಆಗ ತಾನು ಕೃಷ್ಣನೆಂದೂ.. ತನಗೆ ಹಸಿವಾಗಿದೆ ಎಂದು ಹೇಳಿದ ಕೂಗಿಗೆ ಭಕ್ತಿಪರವಶತೆಯಿಂದ ಮೈ ಮೇಲಿನ ಅರಿವಿಲ್ಲದಂತೆ, ಕೃಷ್ಣನನ್ನು ನೋಡಲು ಹಾಗೂ ಅತಿಥಿಸತ್ಕಾರಕ್ಕೆ ತಡವಾಗಬಾರದೆಂದು ಬಂದಾಗ ಕೃಷ್ಣನೇ ತನ್ನ ಮೈ ಮೇಲಿನ ವಸ್ತ್ರವನ್ನು ಆಕೆಗೆ ಪ್ರೀತಿಯಿಂದ ಹೊದಿಸುವ ಸಂದರ್ಭ ಉಲ್ಲೇಖವಾಗಿದೆ.
ಋಷಿ ಪತ್ನಿಯರಾದ ಅನುಸೂಯ ಹಾಗೂ ಅರುಂಧತಿಯರ ಸಾಲಿನಲ್ಲಿ ವಿದುರನ ಪತ್ನಿ ಸುಲಭಾ ನಿಲ್ಲುತ್ತಾಳೆ ಎನ್ನುವ ಉಲ್ಲೇಖಕ್ಕೆ ಈ ಸಂದರ್ಭ ಪುಷ್ಠಿ ನೀಡುವಂತಿದೆ. ತನ್ನ ಆರಾಧ್ಯದೈವವನ್ನು ಮಗುವಿನಂತೆ ಕಾಣುವ ಅಮ್ಮನಂತಹಾ ಸುಲಭಾ ಇಲ್ಲಿ ಕಾಣುತ್ತಾಳೆ. ನಂತರ, ಬಾಳೆಹಣ್ಣಿನ ಬದಲಾಗಿ ಸಿಪ್ಪೆಯನ್ನು ಅರ್ಪಿಸುತ್ತಾಳೆ. ಈ ಸಂಧರ್ಭವನ್ನು ವೀಕ್ಷಿಸುವ ವಿದುರ ತಪ್ಪು ತಿಳಿಯದೇ ಆಕೆಯನ್ನು ಎಚ್ಚರಿಸಿ ದಂಪತಿಯರಿಬ್ಬರೂ ಅತಿಥಿಸತ್ಕಾರ ಮಾಡುತ್ತಾರೆ.
1980 ರಲ್ಲಿ ಜಗದ್ಗುರು ರಾಮಭದ್ರಾಚಾರ್ಯರಿಂದ ರಚಿತವಾದ ಹಿಂದಿ ಸಣ್ಣ ಕವಿತೆಯಾದ 'ಕಾಕಾ ವಿದುರ'ದಲ್ಲಿಯೂ ವಿದುರ ಮತ್ತು ಅವನ ಪತ್ನಿ ಸುಲಭಾ ಪಾತ್ರವಿದೆ. ಇದರಲ್ಲಿ 108 ಸಣ್ಣ ಸಣ್ಣ ಕವಿತೆಗಳಿವೆ. ಇಲ್ಲಿಯೂ ಸುಲಭಾ ಪಾತ್ರದ ಉಲ್ಲೇಖ ಕಾಣುವುದು ಕೃಷ್ಣ ಸಂಧಾನಕ್ಕೆ ಬಂದ ಸಂದರ್ಭದಲ್ಲಿ.
ನನ್ನ ಓದಿನ ಪರಿಮಿತ ಮಿತಿಯಲ್ಲಿ ಮತ್ತೆಲ್ಲೂ ಸುಲಭಾಳ ಉಲ್ಲೇಖ ಸಿಗಲಿಲ್ಲ. ದೃತರಾಷ್ಟ್ರ, ಗಾಂಧಾರಿ ಕುಂತಿಯರ ಜೊತೆಗೆ ವಿದುರ ಮಾತ್ರ ವನವಾಸಕ್ಕೆ ಹೋದ ಉಲ್ಲೇಖ ಸಿಕ್ಕಿತು. ಅಲ್ಲಿಯೂ ಸುಲಭಾ ಕಾಣಿಸಲಿಲ್ಲ.
ಪತಿಯ ಪ್ರತಿಯೊಂದು ಹೆಜ್ಜೆಯಲ್ಲಿಯೂ ಆತನಿಗೆ ಸಹಕಾರ ನೀಡುತ್ತಾ.. ನೀತಿಯಲ್ಲಿ ನಡೆಯುತ್ತಾ, ಸತಿಧರ್ಮವನ್ನು ಪಾಲಿಸುವ ಕೃಷ್ಣಭಕ್ತೆಯಾದ, ಕುಂತಿ ತನ್ನ ಮನೆಯಲ್ಲಿರುವಾಗ ಆಕೆಗೆ ಸತ್ಕಾರ ನೀಡಿ ಸಹನೆಯಿಂದ ಜೊತೆಗೆ ನಿಲ್ಲುವ ತಾಳ್ಮೆಯ ಸುಲಭಾ ಬದುಕು ನಿಜಕ್ಕೂ ಸುಲಭವಲ್ಲವೇ ಅಲ್ಲ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ