ಪುಸ್ತಕದ ಶೀರ್ಷಿಕೆ : ಕಿಚನ್ ಕವಿತೆಗಳು
ಲೇಖಕರು : ಭಾರತಿ ಬಿ. ವಿ
ಪ್ರಕಾಶಕರು : ಬಹುರೂಪಿ
ಪುಟಗಳು : 40
ಬೆಲೆ : 30 ರೂ.
'ಕಿಚನ್ ಕವಿತೆ'ಗಳು ಎಂದಾಗ ಅಡಿಗೆ ಮನೆಗೆ ಸಂಬಂಧಿಸಿದ ಕವಿತೆಗಳಿರಬಹುದು ಎಂಬ ನಿರೀಕ್ಷೆ ಇದ್ದರೂ.. ಜೀವನದ ಸರಳ ವಿಚಾರಗಳನ್ನು ಅಡುಗೆ ಮನೆಗೆ ತಳುಕು ಹಾಕುವ ಚಂದದ ಪ್ರಯತ್ನ ಮನಸ್ಸಿನಲ್ಲಿಯುತ್ತದೆ. 'ಇಂಗು-ತೆಂಗು ಇದ್ದರೆ ಮಂಗನೂ ಅಡುಗೆ ಮಾಡಬಲ್ಲದು' ಎಂಬ ಗಾದೆ ಮಾತಿದೆ. ಆದರೆ, ಅದಷ್ಟೇ ಇದ್ದರೆ ಸಾಲದು. ಸರಿಯಾದ ಅಳತೆಯ ಒಂದಿಷ್ಟು ಪ್ರೀತಿಯ ಹದಪಾಕ ಇರಬೇಕು ಎನ್ನುವ ಪುಟ್ಟ ಸಂದೇಶವನ್ನು ಶೀರ್ಷಿಕೆಯ ಅಡಿ ಬರಹದಲ್ಲಿಯೇ ನೀಡುತ್ತಾರೆ ಲೇಖಕಿ ಬಿ. ವಿ ಭಾರತಿಯವರು. ಹಾಗಾಗಿ, ಈ ಕಿಚನ್ ಕವಿತೆಗಳಿಗೆ ಒಂದಿಷ್ಟು ಒಗ್ಗರಣೆ ಹಾಗೂ ಒಂದಿಷ್ಟು ಪ್ರೀತಿಯ ಹದ ಪಾಕ ಸೇರಿಯಾಗಿದೆ.
ಲೇಖಕಿ ಕವಿತೆಗಳು ಹುಟ್ಟಿದ ಕುರಿತಾಗಿ ಹೇಳುವಾಗ ಹೀಗನ್ನುತ್ತಾರೆ. ಒಂದಿಷ್ಟು ವರ್ಷಗಳ ನಂತರ ಬೇಯಿಸುವುದು ಏಕತಾನತೆ ಅನ್ನಿಸಿ, ಆಗ ಅಂತಹಾ ಏಕತಾನತೆಯಿಂದ ಬಿಡುಗಡೆ ಹೊಂದಲು ಅಡುಗೆ ಮನೆಯಲ್ಲಿನ ವಸ್ತುಗಳು, ಪಾತ್ರೆಗಳು, ತರಕಾರಿ ಎಲ್ಲವಕ್ಕೂ ಮನುಷ್ಯ ತನ್ನ ಆರೋಪಿಸಲು ಶುರು ಮಾಡಿದ್ದಂತೆ. ಹಾಗಾಗಿ, ಈ ಕವಿತೆಗಳು ಹುಟ್ಟಿದ್ದಾದರೂ.. ಅಂತಹಾ ಹಲವಾರು ಕವಿತೆಗಳನ್ನು ಬರೆಯಲು ಈ ಆಲೋಚನೆಯಷ್ಟೇ ಸಾಲದು. ಹಾಗಾಗಿ, ಅದಕ್ಕೂ ಕಾರಣವನ್ನು ಹೇಳಿದ್ದಾರೆ. ಅದರ ಕುರಿತಾಗಿ ನೀವೇ ಓದಿ ನೋಡಿ.
ನಾನು ಈ ಮೊದಲು 'ಕೋಶಿಸ್ ಕವಿತೆಗಳು' ಎನ್ನುವ ಪುಸ್ತಕ ಪರಿಚಯ ಮಾಡುವಾಗ ನಾನು ಈ ಪುಸ್ತಕದ ಕುರಿತಾಗಿ ಉಲ್ಲೇಖಿಸಿದ್ದೆ. ಈಗ ನನಗೆ ಬಹಳ ಇಷ್ಟವಾದ ಕೆಲವು ಕವಿತೆಗಳ ಕುರಿತು ಇಲ್ಲಿ ಹೇಳುತ್ತೇನೆ.
ಯಾವತ್ತೂ ಒಬ್ಬರು ಇನ್ನೊಬ್ಬರಾಗಲಾರರು. ಅಂತಹಾ ನಡವಳಿಕೆಗಳನ್ನು ಅಳವಡಿಸಿಕೊಂಡರೂ ಸಹಾ.. ಎಷ್ಟೋ ನಡವಳಿಕೆಗಳು ಅವರಾಗಿಯೇ ಇರುವಂತೆ ಮಾಡುತ್ತದೆ. ಕೆಲವು ಅಡುಗೆಗಳು ಹೀಗೆ ಎನ್ನುತ್ತಾ ಆ ಕುರಿತು ಹೀಗೆ ಹೇಳುತ್ತಾರೆ..
ನನಗೆ ಯಾವುದರದ್ದೋ
ರೂಪ ಬದಲಿಸಿ ಮತ್ತೇನೋ ತಿನಿಸಾಗಿಸಿದರೆ
ಇಷ್ಟವಾಗುವುದೇ ಇಲ್ಲ
ಒಬ್ಬರು ಇನ್ನೊಬ್ಬರಾದರೆ ಅದೇನು ಸ್ವಾರಸ್ಯ !
ಎಷ್ಟೋ ವ್ಯಕ್ತಿಗಳನ್ನು ಕೆಲವೊಮ್ಮೆ ದೂರದಿಂದಲೇ ನೋಡಿರುತ್ತೇವೆ ಅಥವಾ ಅವರ ಕುರಿತು ಅವರ ಕಂಡ ವ್ಯಕ್ತಿತ್ವವನ್ನು ಅಭಿಮಾನಿಸುತ್ತಿರುತ್ತೇವೆ. ಆದರೆ, ಕೆಲವೊಮ್ಮೆ ಅವರ ಭಾವ, ಆಲೋಚನೆಗಳಿಗೂ ಮಾಡುವ ಕೆಲಸಕ್ಕೂ ಅಥವಾ ಬರವಣಿಗೆಗೆ ವ್ಯತಿರಿಕ್ತವಾದ ಪರಿಸ್ಥಿತಿ ಇದ್ದರೆ.. ಅವರು ಇಷ್ಟವಾಗುವುದೇ ಇಲ್ಲ. ಹಾಗಾಗಿ, ಅವರನ್ನು ದೂರದಿಂದಲೇ ಅಭಿಮಾನಿಸುವುದೊಳಿತು ಎನ್ನುವ ಭಾವ ನನಗೆ ಆಗಾಗ ಹುಟ್ಟುತ್ತಿರುತ್ತದೆ. ಹಾಗಾಗ, ತೀರಾ ಅಭಿಮಾನಿಸುವ ಅಥವಾ ಇಷ್ಟಪಡುವವರನ್ನು ಎಷ್ಟು ಬೇಕೋ ಅಷ್ಟೇ ರೂಢಿಸಿಕೊಂಡರೆ ಒಳ್ಳೆಯದಲ್ಲವಾ..
ನನಗೆ ಶುಂಠಿ ಬಾಯಿಗೆ ಸಿಕ್ಕಿ ಬಿಟ್ಟರೆ
ಅದೇನು ಅಸಹ್ಯ, ತುರಿದು ಹಾಕಿದರೆ ಘಮ
ಕೆಲವು ವ್ಯಕ್ತಿಗಳು ಹಾಗೇ, ಇಡಿಯಾಗಿ ಸಿಕ್ಕದೆ
ಸಣ್ಣ ಪ್ರಮಾಣದಲ್ಲಿ ಸಿಕ್ಕರೇ ಒಳ್ಳೆಯದು
ಕೆಲವೊಮ್ಮೆ ಮನುಷ್ಯರನ್ನು ಟೇಕನ್ ಫಾರ್ ಗ್ರಾಂಟೆಡ್ ಎಂಬಂತೆ, ತಮ್ಮಿಚ್ಛೆಗೆ ಬಂದಂತೆ.. ಅಥವಾ ಆಗಾಗ ತಮಗೆ ಬೇಕಾದಂತೆ ಬಳಸಿಕೊಳ್ಳುವ ವ್ಯಕ್ತಿತ್ವದವರೂ ಇಲ್ಲದಿಲ್ಲ. ಆದರೆ, ಅವರು ಅರ್ಥ ಮಾಡಿಕೊಳ್ಳಬೇಕಿದೆ ಮನುಷ್ಯ ಬಗ್ಗುವವರೆಗೆ ಬಗ್ಗಬಲ್ಲನಷ್ಟೇ.. ಅದಕ್ಕಿಂತ ಬಗ್ಗಿಸಲು ಹೊರಟಾಗ ಸಂಬಂಧದ ಎಳೆ ತುಂಡಾಗಬಹುದು.
ಗಾಜು ಮೈಕ್ರೋವೇವ್ ನಿರೋಧಕವಾದರೂ
ಕೆಲವು ಬಿರು ಬಿಸಿಗೆ ಬಿರುಕು ಬಿಡುತ್ತವೆ
ಹೇಗೂ ಹೊಂದಿಕೊಳ್ಳುತ್ತವೆ ಎಂದು
ಬೇಕಾಬಿಟ್ಟಿ ಬಳಸುವಂತಿಲ್ಲ, ಅರ್ಥವಾಯಿತೇ!
ಐದು ಬೆರಳುಗಳೂ ಒಂದೇ ಸಮವಾಗಿರುವುದಿಲ್ಲ. ನಮ್ಮಂತೆ ನೀನೇಕಿಲ್ಲ ಎಂದು ಕೇಳುವ ಮುನ್ನ ಜನರು ಅದನ್ನು ಅರ್ಥಮಾಡಿಕೊಳ್ಳಬೇಕು. ಲೇಖಕಿಗೂ ಅಂತಹ ಪ್ರಶ್ನೆಗಳು ನೆನಪಾಗಿ ಇಂತಹ ಚಂದದ ಕವಿತೆಯೊಂದು ಹುಟ್ಟಿದೆ ನೋಡಿ.
ಚಹಾ ಪುಡಿ ನೀರಿಗೆ ಹಾಕಿ ಕುದಿಸಬಹುದು
ಕಾಫಿ ಪುಡಿ ಹಾಗೆ ಕುದಿಸಿದರೆ ರುಚಿಗೆಡುತ್ತದೆ
ನಮ್ಮಂತೆ ನೀನೇಕಿಲ್ಲ, ಯಾಕಷ್ಟು ಸೂಕ್ಷ್ಮ ಅನ್ನುವವರಿಗೆಲ್ಲ
ಇದೇ ನನ್ನ ಉತ್ತರ ಅಷ್ಟೇ !
ಮೇಲೆ ಕಾಣುವ ಮನುಷ್ಯರಿಗೂ ಒಳಗಿನ ಅವರ ಮನಸ್ಥಿತಿಗಳಿಗೂ ಕನ್ನಡ ಹಿಡಿಯುವುದು ಕಷ್ಟವೇ.. ಮುಖ ನೋಡಿ ಮಣೆ ಹಾಕುವವರಿದ್ದಾರೆ. ಆದರೆ, ಮನಸ್ಸು ಓದುವವರು ಎಷ್ಟಿರಬಹುದು..? ಅದರಲ್ಲೂ>> ಸಾಮಾನ್ಯ ಮನುಷ್ಯರಿಗಂತೂ ಇನ್ನೊಬ್ಬರ ಮನಸ್ಥಿತಿಯನ್ನು ಅಳೆಯುವುದು ಬಹಳವೇ ಕಷ್ಟ. ಅದು ಸಂಪೂರ್ಣ ಅಸಾಧ್ಯವೂ ಹೌದು.
ಉಪ್ಪಿನಕಾಯಿಯೇ ವಾಸಿ
ಕೆಟ್ಟಾಗ ಮೇಲೆ ಬೂಸ್ಟ್ ಬೆಳೆಯುತ್ತದೆ,
ಮನುಷ್ಯರದ್ದೆ ಸಮಸ್ಯೆ!
ಒಳಗೆ ಕೊಳೆತರೆ ಹೊರಗೆ ತಿಳಿಯುವುದೇ ಇಲ್ಲ
"ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ" ಎಂಬ ಪರಿಸ್ಥಿತಿ ಕೆಲವರ ಬದುಕಲ್ಲಿ ಬಂದಿರಬಹುದು. ನಮಗೆ ಬದುಕಿನಲ್ಲಿ ಬಯಸಿದ್ದು ಸಿಕ್ಕಾಗ.. ಆ ಬಯಕೆ ಮುರುಟಿಯೇ ಹೋಗಿರಬಹುದು. ಅಂತಹಾ ಸಂದರ್ಭವನ್ನು ಹೀಗೆ ಹೇಳಿದರೆ..?!
ಬಯಸಿದಂಥ ಅಡುಗೆ ಮನೆ ನನ್ನದಾಯಿತು
ಅಷ್ಟರಲ್ಲಿ ಬೇಯಿಸುವುದೇ ಬೋರಾಗಿದೆ;
ಬದುಕಿನಲ್ಲಿ ಬಯಸಿದ್ದು ಸಿಗುವುದು ಮುಖ್ಯ,
ಆದರೆ 'ಯಾವಾಗಾ' ಎನ್ನುವುದಿನ್ನೂ ಮುಖ್ಯ
ಇಂತಹ ಹಲವಾರು ಸರಳ, ಸುಂದರ ಸಾಲುಗಳು ಮನಸೂರೆಗೊಳ್ಳುತ್ತವೆ. ಅಲ್ಲದೇ.. ಬದುಕಿನ ಕಹಿ ಸತ್ಯವನ್ನು ಹದವಾಗಿ ಹೇಳುತ್ತಾ ಹೋಗುತ್ತವೆ.
ಇಂತಹ ನಾಲ್ಕೇ ಸಾಲುಗಳ ಹಲವಾರು ಕವಿತೆಗಳ ಜೊತೆಗೆ ಇನ್ನು ನಾಲ್ಕು ಚೆಂದದ ಕವಿತೆಗಳನ್ನು ಹೇಳಿದ್ದಾರೆ.
ನನಗೆ ಇದರಲ್ಲಿ ಕಿಚನ್ ಕವಿತೆಗಳು ಕಂಡವು. ಅಡುಗೆ ಮನೆಯ ಕವಿತೆಗಳು ಕಾಣಲಿಲ್ಲ. ಇದರರ್ಥ, ಇಲ್ಲಿ ಪಟ್ಟಣದ ಅಡುಗೆ ಮನೆಯ ಪರಿಸರದ ಚಿತ್ರಣ, ಫ್ರಿಡ್ಜ್, ಮೈಕ್ರೋವೇವ್ ಇಂತಹಾ ಪರಿಸರಗಳು ಕಂಡವು. ಅಡುಗೆಮನೆಯ ಒಲೆ, ಮಸಿ ಪಾತ್ರೆ, ಹಸಿ ಸೌದೆ, ಕಪ್ಪು ಹೊಗೆ ಹೀಗೆ ಹಳ್ಳಿಯ ಪರಿಸರದ ಅಡುಗೆ ಮನೆ ಕಾಣಲಿಲ್ಲ. ಇದಕ್ಕೆ ಕಾರಣ ಈಗೀಗ ಹಳ್ಳಿಯ ಬದಲಾವಣೆಯ ಪ್ರಭಾವವೂ ಇದ್ದಿರಬಹುದು ಅಥವಾ ಇದಕ್ಕೆ ಲೇಖಕಿಯ ಅನುಭವವೂ ಕಾರಣವೆನ್ನಬಹುದು. ಇಲ್ಲಿನ ಕಿಚನ್ ಕವಿತೆಗಳು ಬದುಕಿನ ಸಂಭ್ರಮಕ್ಕೆ ಪ್ರೀತಿಯ ಹದಪಾಕವಾಗಿಯೂ... ಒಗ್ಗರಣೆಯ ಘಮಲಾಗಿಯೂ ಇನ್ನಷ್ಟು ರುಚಿಸುವಂತೆ ಮಾಡುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ