ಪುಸ್ತಕದ ಶೀರ್ಷಿಕೆ : ಮನ ಮೆಚ್ಚಿದವಳು
ಲೇಖಕರು : ಪ್ರೇಮಾ ಭಟ್
ಪ್ರಕಾಶಕರು : ಹಂಸಧ್ವನಿ ಪ್ರಕಾಶನ
ಪ್ರಥಮ ಮುದ್ರಣ : 1965
ಪುಟಗಳು : 96
ಮನಮೆಚ್ಚಿದವಳು ಶ್ರೀಮತಿ ಪ್ರೇಮಾ ಭಟ್ ಅವರ ಕಥಾ ಸಂಕಲನ. ಇದರಲ್ಲಿ 11 ಚೆಂದದ ಕಥೆಗಳಿವೆ. ಇದಕ್ಕೆ ಅನುಪಮಾ ನಿರಂಜನ ಅವರ ಶುಭ ಹಾರೈಕೆಯೂ ಇದೆ.
ತುಂಬಿದ ಬಿಂದಿಗೆ : ಲಲಿತೆಯ ಮನೆಯಲ್ಲಿ ತಾಯಿ ಖಾಯಿಲೆ ಬಿದ್ದಿದ್ದರಿಂದ ಎಲ್ಲಾ ಕೆಲಸವೂ ಲಲಿತೆಯ ಮೇಲೆಯೇ ಬಿದ್ದಿತ್ತು. ಅದರಲ್ಲಿ ಅವಳಿಗೆ ಬಹಳ ಇಷ್ಟದ ಕೆಲಸವೆಂದರೆ.. ಅವರ ಮನೆಯಲ್ಲಿದ್ದ ಹಳೆಯ ಕಾಲದ ಬಿಂದಿಗೆಯನ್ನು ಫಳಫಳ ಎನ್ನುವಂತೆ ಬೆಳಗಿ ಅದರ ತುಂಬಾ ನೀರು ತುಂಬಿಸಿ, ಅದನ್ನು ದೇವರ ಮುಂದೆ ಪೂಜೆಗೆ ಇಡುವುದು. ಹಿರಿಯರೊಬ್ಬರ ಸಲಹೆ ಮೇರೆಗೆ ಹಾಗೆ ಮಾಡಿದರೆ ಮನೆಗೆ ಶ್ರೇಯಸ್ಸು ಎಂದು ಬಲವಾಗಿ ನಂಬಿದ್ದಳು.ಲಲಿತಳ ಸೋದರ ಮಾವನ ಮಗನಾದ ಸದಾಶಿವನನ್ನು ಮದುವೆಯಾದ ಆಕೆ ತನ್ನ ಗಂಡನ ಮನೆಗೂ ಬಿಂದಿಗೆಯನ್ನು ಕೊಂಡೊಯ್ದಳು. ಹರೆಯದ ಕನಸುಗಳ ಸದಾಶಿವ, ಮುಗ್ದೆ ಲಲಿತ ಹಾಗೂ ಆ ತುಂಬಿದ ಕುಟುಂಬದಲ್ಲಿ ಈ ಬಿಂದಿಗೆಯ ಕಾರಣಕ್ಕೆ ಶುರುವಾದ ಪ್ರಸಂಗ ಲಲಿತಾಳ ಸಾವಿನಲ್ಲಿ ಮುಕ್ತಾಯವಾಗಿದ್ದೇಕೆ..??
ಸಾಕು ಮಗ : ಶ್ರೀಧರನಿಗೆ ತಂದೆ ನರಸಿಂಗರಾಯರು ತನ್ನ ಬಗ್ಗೆ ತೋರುತ್ತಿದ್ದ ಅಸಡ್ಡೆಯನ್ನು ಕಂಡಾಗಲೂ ಆತನ ಮನಸ್ಸಿನಲ್ಲಿ ಇಂತಹದ್ದೊಂದು ಸಂದೇಹ ಮೂಡಿರಲಿಲ್ಲ. ಆದರೆ, ತಾನು ಅವರ ಸಾಕು ಮಗನೆಂದು.. ಆದರೆ, ತಾಯಿ ಸುಮಿತ್ರಮ್ಮ ಹೆತ್ತ ಮಗನಂತೆಯೇ ಅವನನ್ನು ಬೆಳೆಸುತ್ತಿದ್ದರು. ಹೆತ್ತ ಮಕ್ಕಳೇ ಆಗದ ಈ ಕಾಲದಲ್ಲಿ ಸಾಕು ಮಗ ಆಗುತ್ತಾನೆಯೇ..?! ಎಂಬ ಭಾವ ರಾಯರದ್ದು. ಇದೆಲ್ಲದಕ್ಕೂ ಶ್ರೀಧರನ ಪ್ರತಿಕ್ರಿಯೆಯೇನು ಹಾಗೂ ಆತನಿಗೆ ಸತ್ಯ ತಿಳಿದ ನಂತರ ಆತನ ನಡೆಯೇನು..??
ಮನಮೆಚ್ಚಿದವಳು : ಎಂ.ಬಿ.ಬಿ.ಎಸ್ ನಲ್ಲಿ ಮೊದಲ ಸ್ಥಾನ ಪಡೆದು ತೇರ್ಗಡೆಯಾಗಿದ್ದ ಹರಿಗೆ ಇದ್ದದ್ದು ಅಮ್ಮ ಮಾತ್ರ. ಅಪ್ಪ ಇರಲಿಲ್ಲ. ಅಮ್ಮ ಯಾವಾಗಲೂ ಆತನ ಮದುವೆಗೆ ಒತ್ತಾಯಪಡಿಸುತ್ತಿದ್ದಾಗ ಆತ ತನ್ನ ಮನ ಮೆಚ್ಚಿದವಳಿಗಾಗಿ ಕಾಯುತ್ತಿದ್ದ. ಆತನ ಮನಮೆಚ್ಚಿದವಳು ಸಿಗುವುದಕ್ಕೂ.. ಆತ ವೃತ್ತಿ ಜೀವನದಲ್ಲಿ ಮಾಡಿದ ಸಹಾಯ ಇಲ್ಲಿ ಕೊಂಡಿಯಂತಿದೆ. ತಾವು ಮಾಡಿದ ಪಾಪ-ಪುಣ್ಯಗಳ ಫಲವನ್ನು ತಾವು ಅನುಭವಿಸುವಂತೆ.. ಇಲ್ಲಿ ಒಳ್ಳೆಯದು ಮಾಡಿದಾಗ ಒಳ್ಳೆಯದ್ದೇ ತಿರುಗಿ ಬರುವ ನಿದರ್ಶನವಿದೆ.
ಕುಲಪುತ್ರ : ಲತಾಳಿಗೆ ತನಗಿನ್ನು ಮಕ್ಕಳಾಗದು ಎಂದು ತಿಳಿದಾಗ ಆನಂದ ನೀಡಿದ ಬೇರೆ ಮಗು ಸಾಕುವ ಸಲಹೆಯನ್ನು ಒಪ್ಪದೇ ಮನೆಗೆ ತಮ್ಮದೇ ಮಗು ಬೇಕು ಎಂದು ಆನಂದನಿಗೆ ತನ್ನ ಸೋದರ ಮಾವನ ಮಗಳಾದ ಸುಕನ್ಯೆಯೊಂದಿಗೆ ಮದುವೆ ಮಾಡಿಸುತ್ತಾಳೆ. ಆತ ಬಡಪಟ್ಟಿಗೆ ಒಪ್ಪಿರಲಿಲ್ಲವಾದರೂ.. ಆಕೆಯ ಮನೋವೇದನೆಯನ್ನು ನೋಡಲಾಗದೆ, ಆಕೆ ಮತ್ತೆ ಅದರಿಂದಾಗಿ ಕಾಯಿಲೆ ಬೀಳಬಾರದೆಂಬ ಕಾಳಜಿಗೆ ಒಪ್ಪುತ್ತಾನೆ. ಸುಕನ್ಯೆ ಮನೆಗೆ ಬಂದ ಮೇಲೂ ಆಕೆಯ ಕುರಿತು ಅಷ್ಟು ಲಕ್ಷ್ಯ ವಹಿಸದೇ ಇದ್ದರೂ.. ನಂತರ ಎಲ್ಲರೂ ಹೊಂದಿಕೊಂಡು ಸುಖದಿಂದಲೇ ಇರುತ್ತಾರೆ. ಸುಕನ್ಯೆ ಗರ್ಭಿಣಿಯಾದ ಸಂದರ್ಭದಲ್ಲಿ ತಾಯಿ ಹಾಗೂ ಮಗುವಿನ ಆಯ್ಕೆ ಬಂದಾಗ ಆನಂದ ಹಾಗೂ ಲತಾರ ಆಯ್ಕೆ ಏನಾಗಿತ್ತು..??
ತೊಟ್ಟಿಲು : ಸರಸ್ವತಮ್ಮನವರ ಹಿರಿಯ ಮಗಳು ಕುಮುದಾಳಿಗೆ ಮಗು ಸತ್ತದ್ದು ನೆನಪಿರಲಿಲ್ಲ. ಮಗು ಬದುಕಿದೆ ಎಂದು ತನ್ನ ಭ್ರಮಾಲೋಕದಲ್ಲಿಯೇ ಇದ್ದಳು. ಆಕೆಯ ತಂಗಿ ಹಾಗೂ ತಮ್ಮನಾದ ಭಾಗ್ಯ ಹಾಗೂ ಶಶಿಯೂ ಅರ್ಥ ಮಾಡಿಸಲು ಯತ್ನಿಸಿದರೂ ಆಕೆ ತನ್ನ ಭ್ರಮಾಲೋಕದಿಂದ ಹೊರಬಂದಿರಲಿಲ್ಲ. ಮದುವೆಯಾಗಿ ಐದು ವರ್ಷಗಳ ನಂತರ ಹುಟ್ಟಿದ್ದ ಮಗು ಸತ್ತಿತ್ತು. ಪತಿ ಶಂಕರ್ ನೊಂದಿಗೆ ಮತ್ತೆ ಗಂಡನ ಮನೆಗೆ ಮರಳಿದ ನಂತರ ನಾದಿನಿ ಕುಮದಾಳ ಉಪಸ್ಥಿತಿಯಲ್ಲಿ ಕೊಂಚ-ಕೊಂಚವಾಗಿ ಚೇತರಿಸಿಕೊಳ್ಳುತ್ತಿದ್ದಳು. ನಂತರ ಅವಳ ಬದುಕಿನಲ್ಲಿ ಮತ್ತೆ ತೊಟ್ಟಿಲು ಕಟ್ಟುವಂತಾಯಿತೇ..??
ಬದುಕಿನಡೆಗೆ : ಕುಮುದಾಳ ಮೊದಲ ಮಗಳಾದ ಸುಧಾಳಿಗೆ ಕಾಲು ಊನವಿತ್ತು. ಎರಡನೆಯ ಮಗು ವಂಶೋದ್ಧಾರಕನಾದ ಗೋಪಾಲ. ಮತ್ತೆರಡು ಹೆಣ್ಣುಮಕ್ಕಳು. ಆರು ಜನರ ಸಂಸಾರದ ನಿರ್ವಹಣೆ ನಾರಾಯಣನಿಗೆ ಕಷ್ಟವಾಗಿತ್ತು. ಸುಧಾ ತನ್ನ ನ್ಯೂನತೆಯನ್ನು ಮರೆಯಲೆಂಬಂತೆ ಹೆಚ್ಚು ಓದುತ್ತಿದ್ದಳು. ಆದರೆ, ಸಮಾಜದ ಚುಚ್ಚು ಮಾತುಗಳು ತಪ್ಪಿರಲಿಲ್ಲ. ತಂಗಿ ಜಯ ಕೂಡಾ ಕೆಲವೊಮ್ಮೆ ನೋಯಿಸುತ್ತಿದ್ದಳು. ತಂದೆ ಕಾಯಿಲೆ ಬಿದ್ದು ಸತ್ತಾಗ ಸುಧಾಳೇ ಉದ್ಯೋಗಕ್ಕೆ ಸೇರಿ ಶಿಕ್ಷಕಿಯಾಗಿ ಮನೆಯನ್ನು ನಿರ್ವಹಿಸಿ, ತಮ್ಮನನ್ನು ತಿದ್ದುತ್ತಿದ್ದಳು. ಅವಳ ಮದುವೆಯ ಕುರಿತ ನಿರಾಸೆ ಆಕೆಯನ್ನು ಸಾವಿನತ್ತ ಕೊಂಡೊಯ್ದಿತ್ತು. ಮತ್ತೆ ಬದುಕಿನೆಡೆಗೆ ಕರೆತಂದ ಪ್ರಸಂಗವೇನು..??
ಹೀಗೂ ಉಂಟೆ : ಸುಮಂಗಲ ಶ್ರೀಮಂತರ ಮನೆಯ ಮಗಳು. ಯಮುನಾ ಅವಳ ಸಹಪಾಠಿಯಾಗಿದ್ದಳು. ಬಡತನದಲ್ಲಿಯೇ ಬೆಳೆದ ಹುಡುಗಿ. ಬಡತನವನ್ನೂ ನಿರ್ಲಕ್ಷಿಸಿ ಸುಮಂಗಲಾಳೇ ಬಯಸಿ ಒಂದಾದ ಸ್ನೇಹ. ಎಷ್ಟೋ ಸಹಾಯ ಮಾಡಿದ ಸುಮಂಗಲಾ ಯಮುನಾಳನ್ನು ಸದಾ ತನ್ನ ಜೊತೆಗೇ ಇಟ್ಟುಕೊಂಡಿರುತ್ತಿದ್ದಳು. ಸುಮಂಗಲಾಳಿಗೆ ವಿವಾಹವಾದ ಸಂದರ್ಭದಲ್ಲಿ ಯಮುನಾ ಕೆಲಸಕ್ಕೆ ಸೇರಿ ದುಡಿಯುವಂತಾಗಿತ್ತು. ಆದರೆ, ಜೊತೆಗಿರಬೇಕೆಂಬ ಸುಮಂಗಲಾಳ ಆಸೆಗೆ ಆಕೆ ಮಾಡುತ್ತಿದ್ದ ತ್ಯಾಗವೂ ಅಷ್ಟೇ ದೊಡ್ಡದಿತ್ತು.
ಆಸೆ ಫಲಿಸಿದಾಗ : ಪಾರ್ವತಿಗೆ ಗುಲಾಬಿ ಗಿಡವೆಂದರೆ ಬಹಳ ಅಕ್ಕರೆ. ತನ್ನ ಕೈಯಲ್ಲಿ ಹಾಕಿದ ಗಿಡ ಹುಟ್ಟದಾದಾಗ, ಅಮ್ಮನ ಕೈಯಲ್ಲಿ ಗಿಡ ನೆಡಿಸಿ ಅದನ್ನು ಪೋಷಿಸುತ್ತಿದ್ದಳು. ಅದನ್ನು ದಿನಾ ಮುಡಿಯುವುದೆಂದರೆ ಅವಳಿಗೆ ಬಹಳ ಪ್ರೀತಿ. ಮದುವೆಯಾಗಿ ಗಂಡನ ಮನೆಗೆ ಹೋದ ನಂತರವೂ ಅದೇ ಕನವರಿಕೆ. ಗರ್ಭಿಣಿಯಾಗಿ ಮತ್ತೆ ತವರಿಗೆ ಮರಳಿ ಬಂದು ಆ ಹೂವು ಮುಡಿಯಬೇಕೆಂಬ ಸಂದರ್ಭದಲ್ಲಿ ಆಘಾತಕಾರಿ ಸುದ್ದಿಯೊಂದು ಅವಳನ್ನು ಮುಟ್ಟಿತ್ತು. ಅವಳ ಆಸೆ ಫಲಿಸಿತೇ ಅಥವಾ ಮುರುಟಿತೇ..??
ಅವಳು ಹೆತ್ತಳು : ನಿರ್ಮಲ ಹೆತ್ತ ನಾಲ್ಕನೆಯ ಮಗುವೂ ಹೆಣ್ಣು ಎಂದಾದಾಗ ಎಲ್ಲರ ಕಣ್ಣಲ್ಲಿಯೂ ಒಂದು ರೀತಿಯ ತಾತ್ಸಾರ ಹಾಗೂ ಹೆಣ್ಣೇ ಎಂಬ ಭಾವ. ಆದರೆ ಐದನೆಯವನು ಮೋಹನ. ಗಂಡು ಎಂದು ತೀರಾ ಪ್ರೀತಿ, ಆಸ್ಥೆಯಲ್ಲಿ ಬೆಳೆದ ಮೋಹನ ನಂತರ ಹೆತ್ತತಾಯಿಗೆ ಹೇಗೆ ನಡೆದುಕೊಂಡ..?? ಗಂಡು-ಹೆಣ್ಣು ಎಂಬ ಭೇದ ಮಾಡುವವರಿಗೆ ತಕ್ಕ ಪಾಠ ಇಲ್ಲಿದೆ.
ತುಂತುರು ಮಳೆಯಲ್ಲಿ : ಪಾರ್ವತಮ್ಮನವರ ಏಕಮಾತ್ರ ಪುತ್ರಿ ಪಂಕಜ. ಆಕೆಯ ತಂದೆ ದೊಡ್ಡ ಶ್ರೀಮಂತರಾಗಿದ್ದು.. ನಂತರ ಗಳಿಸಿದ ಹಣವೆಲ್ಲಾ ಪೋಲು ಮಾಡಿದ್ದರು. ಈಗ ಅವರು ಕಾಲವಾಗಿದ್ದರು. ಇದೊಬ್ಬ ಮಗಳೆಂದರೆ ಪಾರ್ವತಮ್ಮನವರಿಗೆ ಎಲ್ಲಿಲ್ಲದ ಅಕ್ಕರೆ. ಆಕೆಯ ಓದು ಮುಗಿಯುತಿದ್ದ ಸಂದರ್ಭದಲ್ಲಿ ಆಕೆಗೆ ವರ ಒದಗಿ ಬಂದಿತ್ತು. ಕಾಲೇಜಿನಿಂದ ತುಂತುರು ಮಳೆಯಲ್ಲಿ ಬರಲೋ.. ಬೇಡವೋ.. ಎಂದು ಬರುತ್ತಿದ್ದ ಅವಳು ಒಬ್ಬರ ಮನೆಗೆ ಭೇಟಿ ನೀಡಬೇಕಾಯಿತು. ಆ ತುಂತುರು ಮಳೆಯಲ್ಲಿ ನಡೆದ ಘಟನೆಯೇನು..??
ಗಂಗಾ-ಗೌರಿ : ಗಂಗಾ ಹಾಗೂ ಗೌರಿಗೆ ವಯಸ್ಸಿನ ಅಂತರ ಬಹಳ. ನೋಡಿದವರು ಅವರನ್ನು ಅಕ್ಕ-ತಂಗಿ ಎನ್ನುವ ಬದಲು ಅಮ್ಮ-ಮಗಳು ಎಂದೇ ಭಾವಿಸುತ್ತಿದ್ದರು. ಗಂಗಾ ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾಗಿ ತವರು ಸೇರಿದವಳು ತಾಯಿಯಿಲ್ಲದ ತಂಗಿ ಗೌರಿಯನ್ನೇ ತನ್ನ ಮಗಳೆಂದು ವಿದ್ಯಾಭ್ಯಾಸ ಕೊಡಿಸಿ ಓದಿಸುತ್ತಿದ್ದಳು. ಆದರೆ, ಮದುವೆಯಾದ ನಂತರವೂ ಅವರಿಬ್ಬರ ಭಾಂದವ್ಯ ತಾಯಿ ಮಗಳಂತೆ ಇದ್ದರೂ.. ಗಂಗೆಯ ಉಪಸ್ಥಿತಿ ಗೌರಿಯ ಗಂಡ ಶ್ರೀಕಂಠನಿಗೆ ಮಗ್ಗುಲ ಮುಳ್ಳಾಗಿತ್ತು. ಈ ಸಮಸ್ಯೆಗೆ ಗೌರಿ ಕಂಡುಕೊಂಡ ಪರಿಹಾರವೇನು..??
1965 ರಲ್ಲಿ ಮುದ್ರಣ ಕಂಡಿರುವ ಈ ಕಥಾ ಸಂಕಲನ ಆ ಕಾಲಘಟ್ಟದ ಹೆಣ್ಣುಮಕ್ಕಳು ಎದುರಿಸುತ್ತಿದ್ದ ಎಷ್ಟೋ ಸಮಸ್ಯೆಗಳ ಮೇಲೆ ಹಾಗೂ ಕೌಟುಂಬಿಕ ಚಿತ್ರಣಗಳ ಮೇಲೆ ಬೆಳಕು ಹಾಯಿಸುತ್ತದೆ. ಇಂದು ಕಾಲ ಬದಲಾಗಿದ್ದರೂ.. ಸಂಪೂರ್ಣವಾಗಿ ಬದಲಾಗಿಲ್ಲ. ಇಲ್ಲಿನ ಸಮಸ್ಯೆಗಳಿಗೆ ಪರಿಹಾರಗಳು ಈ ಕಥೆಯಲ್ಲಿಯೇ ಇವೆ. ಒಂದೊಳ್ಳೆ ಕಥಾಸಂಕಲನದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ