ಪುಸ್ತಕದ ಶೀರ್ಷಿಕೆ : ಪ್ರದೋಷ
ಲೇಖಕರು : ರವಿ ಬೆಳಗೆರೆ
ಪ್ರಕಾಶಕರು : ಭಾವನ ಪ್ರಕಾಶನ
ಪ್ರಥಮ ಮುದ್ರಣ : 2021
ಪುಟಗಳು : 120
ಬೆಲೆ : 140 ರೂ.
ರವಿ ಬೆಳಗೆರೆಯವರು ಅರ್ಧ ಬರೆದಿಟ್ಟು ಹೋದ ಪುಸ್ತಕಗಳಲ್ಲಿ 'ಪ್ರದೋಷ' ಧಾರಾವಾಹಿಯೂ ಒಂದು. ಇದು 'ಹಾಯ್ ಬೆಂಗಳೂರ್' ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಅಪೂರ್ಣ ಕಾದಂಬರಿ ಎಂದು ಹೊರ ಪುಟದಲ್ಲಿಯೂ ಮುದ್ರಿಸಿದ್ದರೆ ಒಳ್ಳೆಯದಿತ್ತು ಎನ್ನಿಸಿತು.
ಮುಂದೊಂದು ದಿನ ಈ ಪುಸ್ತಕವನ್ನು ಪೂರ್ಣಗೊಳಿಸುವ ಇಚ್ಛೆ ಇದೆ ಎಂದು ಇದನ್ನು ಪ್ರಕಟಿಸುವ ಭಾವನಾ ಬೆಳಗೆರೆಯವರ ಮಾತು ಆಲೋಚನೆಗೆ ಹಚ್ಚಿತು. ಒಬ್ಬರು ಲೇಖಕರ ಕಾದಂಬರಿಯ ಎಳೆ ಹಿಡಿದು ಬರೆಯಬಹುದಾದರೂ.. ಅವರ ಬರವಣಿಗೆಯ ಶೈಲಿ ಮತ್ತು ಆಲೋಚನೆಗೆ ಹೊಂದಬಲ್ಲದಾ ಎಂಬ ಪ್ರಶ್ನೆ ಮೂಡಿತಾದರೂ.. ಅದೊಂದು ಹೊಸ ಪ್ರಯತ್ನವೂ ಆಗಬಲ್ಲದು ಎನ್ನಿಸಿತು. ಈಗಾಗಲೇ ಈ ರೀತಿಯ ಪ್ರಯತ್ನ ಆಗಿದೆ. ( ತ್ರಿವೇಣಿಯವರ 'ಅವಳ ಮಗಳು' ಅಪೂರ್ಣ ಕಾದಂಬರಿಯನ್ನು ಶ್ರೀಮತಿ ಎಮ್.ಸಿ.ಪದ್ಮಾರವರು ಪೂರ್ಣಗೊಳಿಸಿದ್ದಾರೆ )
'ಮಾಟಗಾತಿ' ಮತ್ತು 'ಸರ್ಪ ಸಂಬಂಧ' ಓದಿದ್ದೆ. ಆ ಎರಡೂ ಪರಸ್ಪರ ಕೊಂಡಿ ಇರುವ ಪುಸ್ತಕಗಳು. 'ಪ್ರದೋಷ'ದಲ್ಲಿ ಅಲ್ಲಿನ ಪಾತ್ರಗಳಿದ್ದರೂ ನಿರೀಕ್ಷೆಗೆ ತಕ್ಕಂತೆನ್ನಿಸಲಿಲ್ಲ. ಮಾಟಗಾತಿ ಹಾಗೂ ಸರ್ಪ ಸಂಬಂಧಗಳು ಪರಸ್ಪರ ಒಂದು ಎಳೆಯಿಂದ ಜೋಡಿಸಲ್ಪಟ್ಟಿದ್ದವು. ಪ್ರದೋಷ ಆ ಕ್ಯಾಟಗಾರಿಗೆ ಸೇರಿದರೂ ಅವುಗಳ ಎಳೆಯಿಲ್ಲದೆ ಸ್ವತಂತ್ರವಾಗಿದೇ ಎನ್ನಿಸಿತು. ಅಘೋರಿಗಳ ಕುರಿತ ಕತೆಯಿದೆ. ಸಂಪೂರ್ಣವಾಗಿದ್ದರೆ ಅದರ ರೋಚಕತೆಯೂ ಇರುತ್ತಿತ್ತೇನೋ..
ಇದೆಲ್ಲವನ್ನು ಹೊರತುಪಡಿಸಿ ಬರೆದಷ್ಟು ಕತೆಯ ವಿಚಾರಕ್ಕೆ ಬರುವುದಾದರೆ..
ಪ್ರದೋಷ ಎಂಬ ಶೀರ್ಷಿಕೆ ಮನಸೆಳೆದದ್ದು ಸುಳ್ಳಲ್ಲ. ಪ್ರದೋಷ ಎಂದರೆ ಇಳಿ ಸಂಜೆ.. ಹಗಲು ಮುಗಿದು ರಾತ್ರಿ ಆರಂಭವಾಗುವ ಕಾಲ. ಆ ಸಮಯದಲ್ಲಿ ಹುಟ್ಟಿದ ಮಗುವಿಗೆ ಆತನ ತಾತ ಇಟ್ಟಿದ್ದ ಹೆಸರು 'ಪ್ರದೋಷ್'.
ರಾಮಾಯಣದಲ್ಲಿಯೂ ಈ ರೀತಿ ಪ್ರದೋಷ ಕಾಲದಲ್ಲಿ ಕೂಡಿದಾಗ ಹುಟ್ಟಿದ ಮಗುವಿನ ಉಲ್ಲೇಖವಿದೆ. ಆತನೇ ರಾವಣ.
ಪ್ರದೋಷ ಕಾಲದಲ್ಲಿಯೇ ಕತೆ ಶುರುವಾಗುವುದು. ಆಂಧ್ರ, ಕರ್ನಾಟಕ ಹಾಗೂ ಆಫ್ರಿಕಾದ ಗಮಲಿನ ಕತೆ. ಮಸಾಯ್ ಮಾರಾ ಕಾಡು, ಅಮಾವಾಸ್ಯೆ , ಪಾಡ್ಯದ ಸೂರ್ಯ, ಟಿಂಬಾ ಮತ್ತು ಪ್ರದೋಷ ಕಾಲದ ಸನ್ನಿವೇಶಗಳ ನಂತರ ಏಳು ವರ್ಷಗಳ ಕತೆ ಎಳೆಎಳೆಯಾಗಿ ಬಿಚ್ಚಿಟ್ಟುಕೊಳ್ಳುತ್ತಾ ಹೋಗುತ್ತದೆ.
ನಾಸ್ತಿಕ ಕವಿತಾ, ನಂಬಿಕೆಯಿದ್ದರೆ ಇದೆ ಇಲ್ಲದಿದ್ದರೆ ಇಲ್ಲವೆಂಬಂತೆ ಬದುಕುವ ಹರಿಬಾಬುವಿನ ಮಗನೇ ಪ್ರದೋಷ್. ಸಾಮಾನ್ಯರ ಜೀವನದಂತೆ ಕಂಡರೂ ನಿಗೂಢವಾಗುತ್ತಿರುವ ಬದುಕಿನ ಜೊತೆಜೊತೆಗೆ ನಿಗೂಢ ಗತದ ಸೀತಮ್ಮ ಮತ್ತು ರಘುರಾಮಯ್ಯ
ಬ್ರಹ್ಮ ತೇಜಸ್ಸಿನ ಅಹೋಬಲ ನಾರಾಯಣ ಶಾಸ್ತ್ರಿಗಳು, ಬಾಲಾಂಜನೇಯ ಸ್ವಾಮಿ, ಸಾಂದೀಪನಿ ಮುಂತಾದ ಸಾತ್ವಿಕ ಶಕ್ತಿಗಳು ಜೊತೆಗೆ ಶ್ರೀ ಚಕ್ರ.
ಜೋಗೇಶ್ವರಿ, ವಲ್ಲಭಪಂಥರು, ಪ್ರಣವ ಶಿಷ್ಯ, ಲಾಲಿಬಾಬಾ, ವಜ್ರೋಲಿ ವಿದ್ಯೆಯ ವಾಮ ಪಂಥದ ಕೆಲವರು.
ಸಾತ್ವಿಕ ಹಾಗೂ ವಾಮ ಶಕ್ತಿಯ ಜೊತೆಗೆ ನಿಗೂಢ, ರೋಚಕವಾಗಿ ಕೂಡಿದ್ದರೂ ಅಪೂರ್ಣತೆಯ ಕಪ್ಪು ಚುಕ್ಕಿಯನ್ನು ದೊಡ್ಡದಾಗಿ ಕಾಣುವಂತೆ ಮಾಡುವ ಪುಸ್ತಕ.
ರೋಚಕತೆ ಇದ್ದರೂ ಎಲ್ಲವೂ ಅರ್ಧಂಬರ್ಧ ಎನ್ನಿಸುವುದರಿಂದ ಕೊಂಡ ನಂತರ ಹಣ ಹೋಯಿತು ಎಂದು ಕೊರಗುವುದರ ಬದಲು ಇಷ್ಟು ಓದಿದೆ ಎಂಬ ಸಂತೃಪ್ತಿ ಇರಲಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ