ಪುಸ್ತಕದ ಶೀರ್ಷಿಕೆ : ನೀಲ ಮಲಯ್ ಜಲಯಾನ
ಲೇಖಕರು : ವಾಣಿ ರಾವ್
ಪ್ರಕಾಶಕರು : ವಿಜಯ ಸಾಹಿತ್ಯ ಪ್ರಕಾಶನ
ಪ್ರಥಮ ಮುದ್ರಣ : 2005
ಪುಟಗಳು : 152
ಬೆಲೆ : 90 ರೂ.
ಸಂಗೀತ, ಸಾಹಿತ್ಯ, ವೈದ್ಯಕೀಯ ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಶ್ರೀಮತಿ ವಾಣಿ ರಾವ್ ಅವರು ಹೋಮಿಯೋಪತಿಯಲ್ಲಿ ಪಿ.ಎಚ್.ಡಿ ಯಲ್ಲಿ ಪದವೀಧರರು. ಹಲವು ರಾಜ್ಯಗಳಲ್ಲಿ ಸಂಚರಿಸಿ, ಹಲವು ಕಡೆ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ವಾಯುಪಡೆಯಲ್ಲಿ ಕೆಲಸ ಮಾಡಿರುವ ಇವರ ಪತಿಯೊಂದಿಗೆ ಭಾರತದ ಹಲವು ಕಡೆ ಸಂಚರಿಸಿ ಭಾರತ-ಪಾಕಿಸ್ತಾನದ ಮೂರು ಯುದ್ಧಗಳನ್ನು ಕಣ್ಣಾರೆ ನೋಡಿದ್ದಾರೆ. ವಾಯುಪಡೆಯ ಮಹಿಳಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.
ವಾಣಿ ಅವರು ರಚಿಸಿದ ಪ್ರಮುಖ ಕೃತಿಗಳು : ಸುಪ್ತಚೇತನ, ದರ್ಪಣ, ಆಕಾಶದೀಪ, ಹೇಮಶೃಂಗ (ಕಾದಂಬರಿ); ವನಸುಮ, ನೀಲಕೊಳ, ಗಣೇಶ ಎಲ್ಲಿ, ಮಾಯಾವಿ (ಮಕ್ಕಳ ಕತೆ); ಸಿಂಧು-ಬಿಂದು (ಭಾಷಾಂತರ); ಚಿನ್ನಯ ರಾಮಾಯಣ, ಮಗು, ಸ್ವಾಮಿ ಪ್ರಣವಾನಂದಜೀ (ವೈದ್ಯಕೀಯ); ಹೋಮಿಯೋಪತಿ, ಮೆಟೀರಿಯಾ ಮೆಡಿಕಾ ಸೂತ್ರಗಳು (ಕವನ ಸಂಕಲನ); ಸರ್ವಜಿತು, ಸರ್ವಧಾರಿ, ಕಲೇಸಂ ಪ್ರಕಟಣೆ ಎಪ್ಪತ್ತರ ವಯಸು (ಸಂಪಾದಿತ) ಮುಂತಾದವು. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರ ಹಲವು ಬರಹಗಳು ರೇಡಿಯೋ ದೂರದರ್ಶನಗಳಲ್ಲಿ ಪ್ರಸಾರವಾಗಿವೆ. ಇವರ 'ಗಗನಕುಸುಮ' ಕಥಾಸಂಕಲನಕ್ಕೆ ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ, 'ಚಂದ್ರಕಾಂತ ಶಿಲೆಯ ಚಂಡಮಾರುತ' ಪುಸ್ತಕಕ್ಕೆ ಮಲ್ಲಿಕಾ ಪ್ರಶಸ್ತಿಯೂ ಲಭಿಸಿದೆ
ಲೇಖಕಿ ಹಾಗೂ ಅವರ ತಂಗಿ ಇಬ್ಬರೇ ಸಿಂಗಾಪುರಕ್ಕೆ ಹೋಗಿದ್ದಾಗ.. ಕ್ರೂಸಿಂಗ್ ಗೆ ಹೋಗಿದ್ದು.. ಅನಿರೀಕ್ಷಿತ ಪ್ರಸಂಗವೊಂದರಿಂದ ಐದು ದಿನಗಳ ಕಾಲ ಕ್ರೂಸಿಂಗ್ ಅನ್ನು ಮುಂದೂಡಬೇಕಾಗಿ ಬಂದು, ಕಡಲ ಮೇಲೆ ಐದು ದಿನಗಳನ್ನು ಹೆಚ್ಚಾಗಿ ಕಳೆಯಬೇಕಾಗಿ ಬಂದಾಗ ಪ್ರವಾಸಿಗರಿಗೆ ಯಾವ ಆತಂಕವೂ ಆಗದೆ, ಭೂಮಿಯ ಮೇಲೆ ಅನಾಹುತ, ಅಪಘಾತಗಳು ಸಂಭವಿಸುತ್ತಿದ್ದರೂ ನೀರ ಮೇಲಿದ್ದವರು ಜಲಯಾನದಲ್ಲಿ ಯಾವ ಬದಲಾವಣೆಯೂ ಇಲ್ಲದೇ ಸುಖ-ಸಂತೋಷದಲ್ಲಿಯೇ ಮುಳುಗಿದ್ದರು. ಆದರೆ, ಅಲ್ಲಿನವರಿಗೆ ಯಾವುದರಲ್ಲಿಯೂ ಹೆಚ್ಚು-ಕಡಿಮೆಯಾಗದಂತೆ ನೋಡಿಕೊಂಡ ಆ ಸಿಬ್ಬಂದಿಯನ್ನು ಕಂಡು ಸಿಬ್ಬಂದಿಯವರ, ಪ್ರವಾಸಿಗರ ಓಳ-ಹೊರಗಿನ ಜೀವನದ ಅನುಭವವಾಗಿ ಅಷ್ಟು ದೊಡ್ಡ ಹಡಗುಗಳನ್ನು ನಡೆಸುವವರು ಯಾವ ನೆಲೆಯೂ ಇಲ್ಲದೆ, ಆ ಮಟ್ಟಕ್ಕೇರಿದ ಕಥೆಗಳನ್ನು ಕೇಳಿ ಆಶ್ಚರ್ಯವಾದದ್ದು.. ತಾವು ಮಾತ್ರ ಶ್ರೀಮಂತರಾಗಿ ಕೂರದೆ, ಅನೇಕ ಕಷ್ಟ ಪಡುವವರನ್ನು ಮೇಲೆ ತಂದವರು.. ಅವಕಾಶಗಳನ್ನು ಕಲ್ಪಿಸಿ ಕೊಟ್ಟವರ ಕಥೆಗಳನ್ನು ಕೇಳುತ್ತಾ ಅದರ ಆಧಾರದ ಮೇಲೆ ರಚಿಸಿರುವ ಕಾದಂಬರಿಯೇ ನೀಲ ಮಲಯ್ ಜಲಯಾನ.
ನೀಲ ಮೊದಮೊದಲು ಹಡಗಿನ ಡೆಕ್ ಮೇಲೆ ನಿಂತು ಸಮುದ್ರಯಾನವನ್ನು ಆನಂದಿಸುತ್ತಿದ್ದಳಾದರೂ.. ಬಂದ ಕೋಲ್ಮಿಂಚು ಹಾಗೂ ಅದರ ಶಬ್ದ, ಜೊತೆಗೆ ಬಂದ ವಿನ್ನಿ ಆಕೆಯನ್ನು ಎಚ್ಚರಿಸಿ ಒಳಗೆ ಕರೆದ. ಹೊರಗೆ ಪ್ರಕೃತಿಯ ಆಟ ಎಷ್ಟೆಲ್ಲಾ ಇದ್ದರೂ.. ಹಡಗಿನೊಳಗಿದ್ದ 8000 ಜನಕ್ಕೆ ಇದಾವುದರ ಪರಿವೆಯೂ ಇಲ್ಲದೆ ತಮ್ಮ ಚಟುವಟಿಕೆಯಲ್ಲಿ ಮುಳುಗಿ ಹೋಗಿದ್ದರು. ಹಡಗಿನಲ್ಲಿದ್ದ ಕೆಲವರು ನೀಲಾಳಿಗೆ ಪರಿಚಿತರು. ವಿನ್ನಿ ಆಕೆಯ ತಮ್ಮನಂತಿದ್ದ. ಈಕೆ ವಿದೇಶಿ ಪ್ರವಾಸಿಗರಿಗೆ ಗೈಡ್ ಆಗಿದ್ದಳು. ಭಾರತೀಯಳಾಗಿದ್ದವಳು ಮಲೇಶಿಯಾ ಭಾಷೆ ಕಲಿತು ಭಾಷಾಂತರ ಮಾಡುತ್ತಿದ್ದಳು.
ಆಕೆಗೆ ಪರಿಚಿತನಾಗಿದ್ದ ಪಾಲ್ ಕೂಡ ಭಾರತೀಯನೇ.. ಅವನ ಹೆಂಡತಿ ಇಂಡೋನೇಷಿಯನ್. ಈತ ಸಿಂಗಾಪುರದಲ್ಲಿ ವ್ಯಾಪಾರಸ್ಥ. ಐದು ವರ್ಷಗಳ ಮುಂಚೆ ಸಣ್ಣ ವ್ಯಾಪಾರಿಯಾಗಿದ್ದವನು ಈಗ ಕ್ರೂಸರ್ ನಲ್ಲಿ ಹಾಲಿಡೇ ಮಾಡುವಷ್ಟು ಶ್ರೀಮಂತ.
ನೀಲಾ ಮೂವರು ಯಾತ್ರಿಕರಿಗೆ ಗೈಡ್ ಆಗಿ ಬಂದಿದ್ದವಳು. ಈಗ ಆ ಮೂವರೂ ಮಲೇಶಿಯಾದ ಕಾಡಿನಲ್ಲಿ ಟ್ರಕ್ಕಿಂಗ್ ಎಂದು ಹೋಗಿದ್ದವರು ಅಲ್ಲಿಯೇ ಉಳಿದರು. ಅವರು ಬರುವವರೆಗೂ ಹೋಟೆಲ್ ನಲ್ಲಿಯೇ ಉಳಿದುಕೊಳ್ಳಲು ಇಷ್ಟಪಡದೆ, ಕ್ರೂಸರ್ ನಲ್ಲಿ ಹೊರಟಿದ್ದಳು. ಅದು ಅತ್ಯಂತ ದೊಡ್ಡ ಏಷ್ಯಾ-ಪೆಸಿಫಿಕ್ ಕ್ರೂಸಿಂಗ್. ನಾಳೆಗೆ ಅದು ಮಲೇಶಿಯಾ ತಲುಪಲಿತ್ತು. ಸೂಪರ್ ಸ್ಟಾರ್ ವಿರ್ಗೋ ಅಲ್ಲಿ ಲಂಗರು ಹಾಕಲಿತ್ತು. ಹಾಗಾಗಿ ರಾತ್ರಿಯಿಡೀ ಸೆಂಡ್ ಆಫ್ ಪಾರ್ಟಿಯ ಸಂಭ್ರಮದಲ್ಲಿದ್ದವರಿಗೆ ಮರುದಿನ ರೇಡಿಯೋದಲ್ಲಿ ಬಂದ ಸುದ್ದಿಯೊಂದು ಕಂಗಡಿಸಿತ್ತು. ದೊಡ್ಡ ಭೂಕಂಪ ಹಾಗೂ ಬಿರುಗಾಳಿಯಿಂದ ಮಲೇಷಿಯಾದಲ್ಲಿ ಬಹಳ ಹಾನಿಯಾಗುತ್ತಿತ್ತು. ಹಡಗು ಲ್ಯಾಂಡ್ ಆಗುವುದು ಸಾಧ್ಯವಿರಲಿಲ್ಲ. ಅಲ್ಲದೇ ಮಲಯ್ ತೀರವೆಲ್ಲಾ ಹೊಡೆದು ಹೋಗಿತ್ತು. ಸಮುದ್ರದ ಮಧ್ಯದಲ್ಲಿರುವದರಿಂದ ಇವರಿಗೆ ಯಾವುದೇ ತೊಂದರೆ ಇರಲಿಲ್ಲ.
ಚಿಕ್ಕಮಗಳೂರಿನ, ಕನ್ನಡದವರೇ ಆದ ನಾಗರಾಜ್ ಹಾಗೂ ಮಂಜುಳಾ ದಂಪತಿಗಳ ಪರಿಚಯವಾಗಿತ್ತು. ಅವರ ಮಗಳು ಮಲ್ಲಿಕಾ ಹಾಗೂ ನಾಗರಾಜ್ ಅವರ ತಾಯಿ ಅಂಬಮ್ಮ ಹಾಗೂ ಅವರ ಊರಿನ ಸೀತಾ ಮತ್ತು ಜಾನಕಿಯರ ಪರಿಚಯವಾಗಿತ್ತು. ಸುನಾಮಿಯ ಕುರಿತು ಕೇಳಿದ ಅವರಿಗೆ ಭಯವಾಗಿತ್ತು. ಅವರಿಗೆಲ್ಲರಿಗೂ ಧೈರ್ಯ ತುಂಬುವಲ್ಲಿ ನೆರವಾದಳು ನೀಲ.
ಸಮಯ ಕಳೆಯುತ್ತಿದ್ದಂತೆ ಮೊಬೈಲ್ ನೆಟ್ವರ್ಕ್ ಸಿಗುತ್ತಲೇ ಇರಲಿಲ್ಲ. ಕೆಲವು ಟೂರಿಸ್ಟ್ ಹಡಗುಗಳಲ್ಲಿದ್ದವರಿಗೆ ಇದೇ ಹಡಗಿನಲ್ಲಿ ಆಶ್ರಯ ನೀಡುತ್ತಾ ಅವರಿಗೆ ನೆರವಾದರು. ಅಪಾಯದಲ್ಲಿದ್ದ ಕೆಲವು ದೋಣಿಯಲ್ಲಿರುವವರನ್ನೂ ರೆಸ್ಕ್ಯೂ ಮಾಡುತ್ತಿದ್ದರು. ಜೊತೆಗೆ ನೀಲಳ ದಯದಿಂದ ಅವರಿಗೆ ಆಗಾಗ ಭೂಮಿಯ ಮೇಲಿನ ವಿಷಯವೂ ತಿಳಿಯುತ್ತಿತ್ತು. ಹಾಗೆ ಅಡಗಿಗೆ ಬಂದ ಒಬ್ಬರು ವ್ಯಕ್ತಿಯನ್ನು ಅಂಬಮ್ಮ ಗುರುತಿಸಿದರು. ಅವರು ಆಕೆಯ ಬಾಲ್ಯದ ಗೆಳತಿ ಭೂಮಾದೇವಿ.
ಅವರು ಭೂಮಾದೇವಿ ಹೌದಾ.. ಅಲ್ಲವಾ.. ಎನ್ನುವ ಅನುಮಾನ ಬಂದರೂ ತನ್ನ ಅನುಮಾನವನ್ನು ನಿವಾರಿಸಿಕೊಂಡು ಖುಷಿಪಟ್ಟರು ಅಂಬಮ್ಮ. ಆಕೆ ನಿಜವಾಗಿಯೂ ಅವರ ಬಾಲ್ಯದ ಗೆಳತಿ ಭೂಮಾದೇವಿಯೇ.. ಅವರನ್ನು ಭೇಟಿ ಮಾಡಿ ಸಂತೋಷದಿಂದ, ಉಳಿದ ವ್ಯಥೆಗಳನ್ನು ತೊರೆದು ಇರುವಾಗಲೇ.. ನೀಲಾಳಿಗೆ ಅವರನ್ನು ಕಂಡು ಅಚ್ಚರಿಯಾಗಿತ್ತು. ಏಕೆಂದರೆ, ಆಕೆ ಅವರ ದೊಡ್ಡಮ್ಮ. ಎಷ್ಟೋ ವರ್ಷಗಳ ಹಿಂದೆ ಇಬ್ಬರೂ ಬೇರೆಬೇರೆಯಾಗಿದ್ದರು.ಅದೂ ಈ ಸಂದರ್ಭದಲ್ಲಿ ಈ ರೀತಿ ಸಿಗುತ್ತವೆಂದು ಅವರಿಬ್ಬರೂ ಕನಸಿನಲ್ಲಿಯೂ ನೆನೆಸಿರಲಿಲ್ಲ. ಒಟ್ಟಾಗಿ ಎಲ್ಲರ ಸಮಾಗಮವಾಗಿತ್ತು.
ಭೂಮಾದೇವಿ ತಮ್ಮ ಹಿಂದಿನ ಕಥೆಯನ್ನೆಲ್ಲಾ ಹೇಳತೊಡಗಿದರು. ಅವರ ಶ್ರೀಮಂತಿಕೆಯ ಜೀವನದಿಂದ ಬಡತನದ ಬದುಕಿನತ್ತ ಸಾಗಿದ್ದು ಹೇಗೆ..?? ಆಕೆ ನೀಲಾಳ ತಾಯಿಯ ಅಕ್ಕನಲ್ಲ. ಭೂಮಾ ಹಾಗೂ ನೀಲಾ ಜೊತೆಯಾದದ್ದು ಹೇಗೆ ಹಾಗೂ ಅವರಿಬ್ಬರೂ ಪರಸ್ಪರ ಬೇರೆಯಾಗಿದ್ದೇಕೆ..?? ಮೊದಲಿಗೆ ನೀಲ ತನ್ನ ಪರಿಚಯವನ್ನು ಎಲ್ಲರ ಜೊತೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದಳಾದರೂ.. ಭೂಮಾದೇವಿ ಸಿಕ್ಕ ನಂತರ, ಅವಳ ಹಿಂದಿನ ಕತೆಯನ್ನೆಲ್ಲಾ ತಿಳಿದ ಅಂಬಮ್ಮನಿಗೂ ಅಚ್ಚರಿಯಾಗಿತ್ತು. ಅದಕ್ಕೆ ಕಾರಣವೇನು..?? ಶ್ರೀಮಂತೆಯಾದ ಭೂಮಾದೇವಿಯ ದಯೆಯಿಂದ ನೀಲಾಳ ಬದುಕು ಬದಲಾಯಿತೇ..?? ಅಥವಾ ಆಕೆ ಈಗಿನಂತೆಯೇ ಟೂರಿಸ್ಟ್ ಗೈಡ್ ಆಗಿಯೇ ಉಳಿದಳೇ..??
ನಾಗರಾಜು ಹಾಗೂ ಪಾಲ್ ಇಬ್ಬರೂ ಭೂಮಾಗೆ ಹೇಗೆ ಪರಿಚಯ..?? ಹಡಗಿನಲ್ಲಿ ನಡೆಯುವ ವ್ಯಾಪಾರ, ಒಪ್ಪಂದಗಳು ಹಾಗೂ ಅವರ ಸ್ಥಿತಿಗಳು ಹೇಗಿದ್ದವು..?? ವಿನ್ನಿಯ ಪ್ರಭಾವದಿಂದ ಹಡಗಿನಲ್ಲಿ ಪ್ರಭಾವಿಯಾಗಿದ್ದ ನೀಲ ಹಾಗೂ ವಿನ್ನಿಯ ಪರಿಚಯ ಹೇಗಾಗಿತ್ತು..?? ಅಪರಿಚಿತರಾಗಿದ್ದ ಅವರು ಅಕ್ಕ-ತಮ್ಮನಂತೆ ಬೆಸೆದುಕೊಂಡದ್ದು ಹೇಗೆ..?? ಹಡಗು ಸುರಕ್ಷಿತವಾಗಿ ತೀರ ತಲುಪಿತೇ..??
ಕಾದಂಬರಿಯ ಮೊದಮೊದಲಲ್ಲಿ ಹಡಗಿನ ಹಾಗೂ ಅವಘಡದ ಕುರಿತು ಓದುವಾಗ ಟೈಟಾನಿಕ್ ನೆನಪಾಗಿತ್ತು. ನೀಲ ಕೂಡ ಟೈಟಾನಿಕ್ ನ ಲೈಫ್ ಬೋಟುಗಳ ಹಾಗೂ ತಮ್ಮ ಹಡಗಿನ ಲೈಫ್ ಬೋಟ್ ಗಳ ಲೆಕ್ಕಾಚಾರ ಹಾಕುತ್ತಿದ್ದಳು. ಈ ಕಾದಂಬರಿ ಓದುವಾಗ ಮೊದಲಿನಿಂದಲೂ ಟೈಟಾನಿಕ್ ರೀತಿಯ ಸನ್ನಿವೇಶವೆನಾದರೂ ಇರಬಹುದಾ ಎಂಬ ಕುತೂಹಲ ಹುಟ್ಟಿಸಿತ್ತು.
ಒಂದು ರೀತಿ ಉಸಿರು ಬಿಗಿ ಹಿಡಿದು ಮುಂದೇನಾಗುತ್ತದೆ ಎಂಬಂತೆ ಕಾಯುತ್ತಾ.. ಓದಿಸಿಕೊಂಡು ಹೋಗುವಂತಹಾ ನಿರೂಪಣೆ. ಸುನಾಮಿ, ಸಮುದ್ರಯಾನ, ಹಡಗು, ಪ್ರಯಾಣಿಕರ ಮನಸ್ಥಿತಿಗಳು, ಭೂಮಿಯ ಮೇಲಿನ ಪರಿಸ್ಥಿತಿ, ವಿದೇಶಿಯರ ಹಾಗೂ ವಿದೇಶೀ ಸ್ಥಳಗಳ ಕುರಿತಾದ ಪರಿಚಯ ಹಾಗೂ ವಿವರಣೆ,ಆಯಾ ಭಾಷೆಗಳ ಹಾಡುಗಳ ಪ್ರಸ್ತಾಪ. ಹೀಗೆ ಎಲ್ಲದರ ಕುರಿತು ಹೆಣೆದಿರುವ ಕುತೂಹಲ ಹುಟ್ಟಿಸಿ ಓದಿಸಿಕೊಂಡು ಹೋಗುವಂತಹಾ ಒಂದೊಳ್ಳೆ ಕಾದಂಬರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ