ಪುಸ್ತಕದ ಶೀರ್ಷಿಕೆ : The Untold Story of ಕಶ್ಮೀರ್
ಲೇಖಕರು : ಸಂತೋಷಕುಮಾರ ಮೆಹೆಂದಳೆ
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : ಮೇ 2022
ಪುಟಗಳು : 204
ಬೆಲೆ : 210 ರೂ.
'ಕಶ್ಮೀರ್' ಎಂಬ ಭಾರತದಲ್ಲಿ ಇತ್ತಾ ಎಂದು ಕೇಳುವ ಪರಿಸ್ಥಿತಿ ನಮ್ಮ ಮುಂದಿನ ಪೀಳಿಗೆಯವರಿಗೆ ಬರಬಾರದು ಎಂದಾದಲ್ಲಿ..
ಅಲ್ಲಿನ ಪಂಡಿತರು ಚೆದುರಿ ಹೋಗಿ ಅವರ ಪೀಳಿಗೆಯೇ ನಶಿಸಿ ಹೋಗುತ್ತಿರುವುದರ ಹಾಗೂ ಅವರು ಅಲ್ಲಿದ್ದರಾ..?? ಪ್ರಶ್ನೆ ಹುಟ್ಟುವುದಾದಲ್ಲಿ
ಕಶ್ಮೀರ್ ಎಂಬ ಒಂದಾನೊಂದು ಕಾಲದ ಜ್ಞಾನದ ಕಣಜ ಇಂದು ಭಯೋತ್ಪಾದನೆಯ ಬೀಡಾಗಿ ಮಾರ್ಪಾಡಾಗಿದ್ದು ಏಕೆ ಎಂದು ಗೊತ್ತಾಗಬೇಕಾಗಿದ್ದಲ್ಲಿ..
ಅಲ್ಲಿನ ಕುರಿತು ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ, ಕಶ್ಮೀರ್ ಕುರಿತು ಹೇಗೆ ತಿಳಿದುಕೊಳ್ಳುವುದು ಎಂದಾದಲ್ಲಿ ಸಂತೋಷ್ ಕುಮಾರ್ ಮೆಹೆಂದಳೆ ಅವರ 'ಕಾಶ್ಮೀರವೆಂಬ ಖಾಲಿ ಕಣಿವೆ' ಹಾಗೂ 'The Untold Story of ಕಶ್ಮೀರ್' ಅನ್ನು ಗಮನವಿಟ್ಟು ಓದಿ ನೋಡಿ. ಅದರಲ್ಲೂ The Untold Story of ಕಶ್ಮೀರ್ ಅಲ್ಲಿ ಪ್ರತಿ ಮಾಹಿತಿಗೂ ಲಿಂಕ್ ಗಳಿವೆ. ಆಕರ ಗ್ರಂಥ ಮತ್ತು ಮಾಹಿತಿ ಸಂಪರ್ಕಗಳಿವೆ.
'ಕಶ್ಮೀರ್ ಫೈಲ್ಸ್' ಸಿನಿಮಾ ನೋಡಿದ ನಂತರ ಅದರಲ್ಲೂ ಆ ಹಸಿ ಕ್ರೌರ್ಯ ಕಂಡ ನಂತರ ಮನಸ್ಸು ವಿಚಲಿತಗೊಂಡಿತ್ತು. ಆದರೆ, ಕಶ್ಮೀರ್ ಕುರಿತು ತಿಳಿದುಕೊಳ್ಳುತ್ತಾ.. ಓದುತ್ತಾ, ಕೇಳುತ್ತಾ ಹೋದಂತೆಲ್ಲಾ ಸತ್ಯ ಅನಾವರಣಗೊಳ್ಳುತ್ತಾ ಹೋಯಿತು. ನಾವ್ಯಾಕಿಷ್ಟು ಕಾಲ ಇದನ್ನು ತಿಳಿದುಕೊಂಡಿರಲಿಲ್ಲ..??ಎಂಬ ಪ್ರಶ್ನೆ ಸಹಾ ಮೂಡಿತ್ತು. ಒಂದೋ ಆಸಕ್ತಿಯ ಕೊರತೆ ಮತ್ತೊಂದು ಮಾಹಿತಿಯ ಕೊರತೆ ಎನ್ನಿಸಿತು. ಯಾವಾಗಲೋ ಯಾವುದೋ ಪೇಪರ್ ನ ಮೂಲೆಯಲ್ಲಿ ನೋಡಿದ್ದ ಕಶ್ಮೀರ್ ವಿಚಾರ, ಆರ್ಟಿಕಲ್ 370 ಯನ್ನು ರದ್ದು ಮಾಡಿದಾಗ ಸುದ್ದಿ ಮಾಡಿತ್ತು. ನಂತರ ಸಿನಿಮಾ ಮುಖಾಂತರ..
ಸಿನಿಮಾ ತಲುಪುವಷ್ಟು ಪರಿಣಾಮಕಾರಿಯಾಗಿ ಬರಹಗಳು ತಲುಪುವುದಿಲ್ಲ. ಇದಕ್ಕೆ ಎರಡು ಕಾರಣಗಳಿವೆ. ಒಂದು ಓದುವವರ ಸಂಖ್ಯೆ ಕಡಿಮೆ ಹಾಗೂ ಮತ್ತೊಂದು ಇಂತಹಾ ಘನ ಘೋರ ಸತ್ಯಗಳನ್ನು ತೆರೆದಿಡಲು ಧೈರ್ಯ ಬೇಕು. ಹಾಗೆಯೇ ಅದು ಮುಂಚೂಣಿಗೆ ಬರಲು ರಾಜಕೀಯ ಒತ್ತಡವೂ ಇರಬಾರದು. ಕಶ್ಮೀರ್ ಈಗ ಎಲ್ಲವನ್ನೂ ಮೀರಿ ನಿಂತಿದೆ ಎಂದೆನಿಸಿತು.
ಜೀವನವಿಡೀ ಬದುಕಿದ್ದ ಸ್ಥಳವನ್ನು ಬಿಟ್ಟು ಹೋಗು ಎಂದರೆ ಹೋಗುವುದಾದರೂ ಎಲ್ಲಿಗೆ..?? ಜೀವನವಿಡೀ ಕಷ್ಟ ಪಟ್ಟದ್ದೇ ಆಸ್ತಿ-ಪಾಸ್ತಿ ಗಳಿಸಲು. ಅಂತಹಾ ಆಸ್ತಿ-ಪಾಸ್ತಿ ಇಂದಿನಿಂದ ನಮ್ಮದು ಅಷ್ಟೇ ಅಲ್ಲ ನಿಮ್ಮ ಮನೆಯ ಹೆಣ್ಣು ಮಕ್ಕಳು ಸಹಾ ಎಂದಾಗ ರಕ್ತ ಕೊತಕೊತನೆ ಕುದಿಯುವುದು ಸುಳ್ಳಲ್ಲ. ತಲೆತಲಾಂತರದಿಂದ ಪಾಲಿಸಿಕೊಂಡು ಬಂದ ಹಿಂದೂ ಧರ್ಮದಿಂದ ಒಮ್ಮೆಲೇ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಿಬಿಡು ಎಂದರೆ ಆದಾದರೂ ಹೇಗೆ ಸಾಧ್ಯ..?? ಇದು ಧರ್ಮ, ಹಕ್ಕು, ಬದುಕು, ಆಸ್ತಿ-ಪಾಸ್ತಿ ಎಲ್ಲವನ್ನೂ ಕಿತ್ತುಕೊಂಡು ಅವರನ್ನು ಕಶ್ಮೀರ್ ನಿಂದ ಹೊರಹೋಡಿಸುವ ಸಂಚಾಗಿತ್ತು. ತಪ್ಪಿದಲ್ಲಿ ಘೋರ ಮರಣ. ಅದೂ ನರಳಿ ನರಳಿ ಸಾಯುವಷ್ಟು ಚಿತ್ರಹಿಂಸೆ. ಒಮ್ಮೆಲೇ ಸಾವು ಬಂದವರೇ ಪುಣ್ಯವಂತರಿರಬೇಕೇನೋ ಅಲ್ಲಿ. ಅಲ್ಲಿನ ಹೆಣ್ಣು ಮಕ್ಕಳು ಹಾಗೂ ಹಸುಗೂಸುಗಳು ಮಾಡಿದ್ದ ತಪ್ಪೇನು ಅಲ್ಲಿ ಹುಟ್ಟಲು..?? ಅತ್ಯಾಚಾರದ ಭೀಕರತೆಗಳನ್ನು ಓದುತ್ತಿದ್ದರೆ ಸಂಕಟವಾಗುತ್ತದೆ.
"ಬಹುಶಃ ಹುಟ್ಟಿಸಿದ್ದಕ್ಕೆ ದೇವರನ್ನೇ ಪಾಪಿ ಎಂದ , ಬೈದ, ಸಾಧ್ಯವಾದರೆ ಓ ದೇವರೇ ನೀನು ಒಮ್ಮೆ ಹೆಂಗಸಾಗು ಎಂದು ಶಪಿಸಿದ್ದೇ ಆದರೆ, ಅದು ಕಾಶ್ಮೀರಿ ಪಂಡಿತರ ಹೆಂಗಸರು. " ಎಂದು ಬರೆದ ಲೇಖಕರ ಬರಹದಲ್ಲಿ ಅತಿಶಯೋಕ್ತಿಯೇನಿಲ್ಲ. ಅಲ್ಲದೇ, ದೇವರಿಗೂ ದಿಗಿಲಾಗಬಹುದು.
ಇಲ್ಲಿರುವುದು ಒಂದೆರಡು ತಿಂಗಳ ಅಥವಾ ಒಂದು ವರ್ಷಗಳ ಕತೆಯಲ್ಲ. 1980 ರಿಂದ 2010 ರ ವರೆಗಿನ ಕರಾಳ ಸತ್ಯ. ಸಾಮೂಹಿಕ ಹತ್ಯಾಕಾಂಡಗಳು, ನಂಬಿಸಿ ಕತ್ತು ಕೊಯ್ದ ಕತೆಗಳು.
ಪ್ರಾಮಾಣಿಕರ ಅಸಹಾಯಕತೆಗಳು, ಅಡ್ಡಿಗಳು, ಮಾಧ್ಯಮಗಳು ಹಾಗೂ ಪೋಲೀಸರ ಕಣ್ಣು ಮುಚ್ಚಿಕೊಂಡಿರುವಿಕೆ, ಭ್ರಷ್ಟತೆ ಇದೆಲ್ಲದಕ್ಕೂ ಏನೆಂದು ಹೇಳುವುದು..??
ಕಣಿವೆಯ ಭವಿಷ್ಯ ತಲೆಕೆಳಕಾದದ್ದು ಏಕೆ? ಕಾಶ್ಮೀರದ ಪಂಡಿತರು ನಂಬಿದ್ದಕ್ಕೆ ತೆತ್ತ ಬೆಲೆ ಏನು? ಅವರವರ ಅಂತರ್ ಯುದ್ಧ, ಧರ್ಮ ಯುದ್ಧಗಳಿಗೆ ಕಶ್ಮೀರ್ ಟಾರ್ಗೆಟ್ ಆದದ್ದಾದರೂ ಏಕೆ..?? ಮತಾಂಧರು ಹಿಂದೂ ದೇವಾಲಯಗಳನ್ನು ಇಲ್ಲದಂತೆ ಮಾಡಿದ ಹುನ್ನಾರ ಕಣ್ಣಿಗೆ ಕಾಣದ್ದಾದರೂ ಏಕೆ..??
ಶ್ರೀನಗರದಲ್ಲಿ ಹಾಡು ಹಗಲೇ ಮೊಟ್ಟ ಮೊದಲ ಬಹಿರಂಗ ಜಿಹಾದ್ ಟೀಕಾ ಲಾಲ್ ಟಪ್ಲುವನ್ನು ಕೊಂದಾಗ ಉಂಟಾದಾಗ ದೇಶ ಮತ್ತು ವ್ಯವಸ್ಥೆ ಹೇಗೆ ಸ್ಪಂದಿಸಿತ್ತು ಗೊತ್ತೇ..?? ಮಾನವೀಯತೆ ಎಂಬುದನ್ನೇ ಮರೆತ ಜನರ ಕತೆಯಿದು.
ಮೊದಲು ತೆರೆಮರೆಯಲ್ಲಿ ನಡೆಯುತ್ತಿದ್ದದ್ದು ನೇರ ದಬ್ಬಾಳಿಕೆಗೆ ಕಾರಣವಾದುದ್ದೇಕೆ..?? ಅದರ ಹಿಂದಿನ ಕುಟಿಲ ಶಕ್ತಿ ಹಾಗೂ ಅದನ್ನು ಮುಂದುವರೆಸಿದ ಕುತಂತ್ರಿ ಯಾರು..?? ಟಾರ್ಗೆಟ್ ಕಿಲ್ಲಿಂಗ್ ನ ಫಲಿತಾಂಶ, ಹತ್ಯಾಕಾಂಡದ ಭೀಕರತೆ , ನರ ಸತ್ತ ವ್ಯವಸ್ಥೆ , ಬೆಳಕಿಗೆ ಬಾರದ ಅಮಾನುಷ ಆಘಾತಕಾರಿ ಹತ್ಯೆಗಳು, ಗಿರಿಜಾ ಟೀಕೂ, ಸರ್ವಾನಂದ ಕೌಲ್ ಹೀಗೆ ಒಂದೆರಡು ಹತ್ಯೆಗಳಾ..??
ವಿದೇಶಿಯರ ಹತ್ಯಾಕಾಂಡವಾದಾಗಲೇ ಇಡೀ ಜಗತ್ತಿಗೆ ಇದರ ಭೀಕರತೆ ತಿಳಿದದ್ದು ಎನ್ನುವಾಗ ನಮ್ಮ ಮಾಧ್ಯಮ ಹಾಗೂ ವ್ಯವಸ್ಥೆಯ ಕುರಿತು ಯೋಚಿಸುವಂತಾಗುತ್ತದೆ.
ಸಂಗ್ರಾಮ್ ಪೊರಾ, ವಾಂಧಮಾ, ಚಂಪಾನೇರಿ, ಪ್ರಾಣ್ ಕೋಟ್, ಬಾಕರವಾಲ ಹೀಗೆ ಸಾಲು ಸಾಲು ಹಸಿ ಹಸಿ ಹತ್ಯಾಕಾಂಡದ ಸತ್ಯಗಳು.
ನಮಗಲ್ಲ 'ಕಶ್ಮೀರ್' ಕುರಿತು ಅದರ ಭವಿಷ್ಯದ ಕುರಿತು ದೇವರಿಗೂ ದಿಗಿಲಿದೆ ಎನ್ನುತ್ತಾರೆ ಲೇಖಕರಾದ ಸಂತೋಷ್ ಕುಮಾರ್ ಮೆಹೆಂದಳೆ.
ಲೇಖಕರ ಇಷ್ಟು ಮೊನಚು ಬರಹದ ಅವಶ್ಯಕತೆ ಖಂಡಿತಾ ಇತ್ತು. ಹೆಚ್ಚಿನ ಮಾಹಿತಿಗೆ ಹಾಗೂ ಇನ್ನೂ ಓದಿರದಿದ್ದಲ್ಲಿ ಖಂಡಿತಾ ಓದಲೇ ಬೇಕು ಸಂತೋಷ್ ಕುಮಾರ್ ಮೆಹೆಂದಳೆ ಅವರ 'The Untold Story of ಕಶ್ಮೀರ್'ನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ