ಪುಸ್ತಕದ ಶೀರ್ಷಿಕೆ : ಅಮೃತ ವಾಹಿನಿ
ಲೇಖಕರು : ಕೆ. ಆರ್. ಪದ್ಮಜೆ
ಪ್ರಕಾಶಕರು :ಮುರುಳಿ ಪ್ರಕಾಶನ
ಪ್ರಥಮ ಮುದ್ರಣ : 1991
ಪುಟಗಳು : 128
ಲಭ್ಯತೆ : ಹಳೆಯ ಪುಸ್ತಕದ ಅಂಗಡಿಗಳು
ಕೆ.ಆರ್. ಪದ್ಮಜೆ ಅವರ ಹೆಸರನ್ನು ಪತ್ತೇದಾರಿ ಸಾಹಿತ್ಯದಲ್ಲಿ ಕೇಳಿರಬಹುದು. ಇವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದವರು. 12 ಪತ್ತೇದಾರಿ ಕಾದಂಬರಿಗಳು, 30ಕ್ಕೂ ಅಧಿಕ ಸಾಮಾಜಿಕ ಕಾದಂಬರಿಗಳು, 7 ಕಥೆಗಳು (ಮಕ್ಕಳ ಸಾಹಿತ್ಯ) ಹಾಗೂ ಒಂದು ನಾಟಕ ಬರೆದಿದ್ದಾರೆ. ಇವರಿಗೆ ಸಂಚಿ ಹೊನ್ನಮ್ಮ ಪ್ರಶಸ್ತಿ, ಶ್ರೇಷ್ಠ ಪ್ರಶಿಕ್ಷಕಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ಪತಿ ರಘುಸುತ ಅವರು ಕೂಡಾ ಸಾಹಿತಿಯಾಗಿದ್ದವರು. 2015 ಆಗಸ್ಟ್ 10ರಂದು ಪದ್ಮಜೆಯವರು ಹೃದಯಾಘಾತದಿಂದ ನಿಧನರಾದರು.
ಇದು ನಾನು ಓದಿದ ಪದ್ಮಜೆಯವರ ಮೊದಲ ಕಾದಂಬರಿ. ಈ ಕಾದಂಬರಿ ತೆಲುಗು ಕಾದಂಬರಿಗಾರ್ತಿಯಾದ ದಿವಂಗತ ಶ್ರೀಮತಿ ಮಾದರೆಡ್ಡಿ ಸುಲೋಚನರವರ ಕಾದಂಬರಿಯೊಂದರ ಕನ್ನಡ ಅನುಸರಣೆ.
ಹೆಣ್ಣಿಗೆ ತಂದೆಯ ಆಸರೆಯೂ ಸರಿಯಾಗದೆ, ಪತಿಯ ಆಸರೆಯೂ ತಪ್ಪಿ ತನ್ನದೆಲ್ಲವನ್ನು ಕಳೆದುಕೊಂಡಾಗ ಇದ್ದೊಬ್ಬ ಮಗಳ ಪಾಲನೆ ಪೋಷಣೆಗೆ ಒತ್ತು ನೀಡಿ ಸಾಮಾನ್ಯರಂತೆ ಬದುಕಲು ಪ್ರಯತ್ನಿಸಿದಾಗಲೂ ವಿಧಿ ಆಕೆಯನ್ನು ಸುಮ್ಮನೆ ಬಿಡಲಿಲ್ಲ. ಒಂಟಿ ಹೆಣ್ಣು ಎಂಬ ಪಟ್ಟ ಹೊತ್ತು ಈ ಸಮಾಜದಲ್ಲಿ ಬದುಕುವುದು ಎಷ್ಟು ಕಷ್ಟವೆಂಬುದನ್ನು ಲೇಖಕಿ ಬಹಳ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಆದರೂ.. 'ಅಮೃತವಾಹಿನಿಯೊಂದು ಹರಿಯುತ್ತಿದೆ ಮಾನವನ ಎದೆಯಿಂದ ಎದೆಗೆ ಸತತ..' ಎನ್ನುವ ಭಾವಗೀತೆಯಂತೆ ಇಂತಹಾ ಸಂದರ್ಭದಲ್ಲಿಯೂ ಅವಳಿಗೆ ಆಸರೆಯಾಗಿ ನಿಲ್ಲುವವರು, ಆಕೆಯ ಒಳ್ಳೆಯತನಕ್ಕೆ ಬೆಲೆ ಕೊಡುವವರು ಇದ್ದೇ ಇರುತ್ತಾರೆ. ಅದು ಎಷ್ಟರಮಟ್ಟಿಗೆ ಅವಳಿಗೆ ದಕ್ಕುತ್ತದೆ ಎಂಬುದು ಓದಿಯೇ ತಿಳಿಯಬೇಕು.
ರೇಣುಕಾ ಹಾಗೂ ಸಾರಥಿಯ ವಿವಾಹವಾದ ನಂತರ ವಸುಧಾ ಹುಟ್ಟಿದಳು. ಶ್ರೀಮಂತರ ಮನೆಯ ಒಬ್ಬಳೇ ಮಗಳೆಂದು ಅತ್ತೆ ಸೀತಮ್ಮ ಹಾಗೂ ಸಾರಥಿ ಇಬ್ಬರೂ ತಮಗೆ ವರದಕ್ಷಿಣೆಯಾಗಲಿ ಅಥವಾ ಬೇರೆ ರೂಪದಲ್ಲಿ ಹಣ, ಆಸ್ತಿ ಬೇಡವೆಂದು ರೇಣುಕಾ ಮಾತ್ರ ಸಾಕೆಂದು ವಿವಾಹ ಮಾಡಿಕೊಂಡರು. ಸಾರಥಿ ತಾನು ಬಿಸಿನೆಸ್ ಮಾಡುತ್ತೇನೆ ಎಂದು ಹೊರಟು ಜೂಜಿನ ಮೋಹಕ್ಕೆ ಒಳಗಾಗಿದ್ದ. ಹಾಗಾಗಿ ಮನೆಯಲ್ಲಿನ ಎಲ್ಲವೂ ಕರಗಿ. ಮಗುವಿನ ಹಾಲಿಗೆ, ದಿನದ ಊಟಕ್ಕೂ ಬಡತನದ ಪರಿಸ್ಥಿತಿ. ಸೀತಮ್ಮನವರು ಮಗು ಹೆಣ್ಣೆಂದು ಮೊಮ್ಮಗಳನ್ನು ಆದರದಿಂದ ನೋಡುತ್ತಿರಲಿಲ್ಲ. ಸೊಸೆಯ ಮೇಲೂ ಆಕೆ ವರದಕ್ಷಿಣೆ ತರಲಿಲ್ಲವೆಂದು ಸದಾ ಸಿಡಿಮಿಡಿ ಮಾಡುತ್ತಾ.. ಒಂದು ರೀತಿ ದ್ವೇಷವನ್ನೇ ಮಾಡುತ್ತಿದ್ದರು. ಸಾರಥಿಯದ್ದು ಕ್ಷಣ ಚಿತ್ತ ಕ್ಷಣ ಪಿತ್ತದಂತಹಾ ಮನಸ್ಥಿತಿ.
ತನ್ನ ವ್ಯಾಪಾರಕ್ಕೆ ಹಣ ಬೇಕು ಅದಕ್ಕಾಗಿ ನಿನ್ನ ತಂದೆಯ ಮನೆಯಿಂದ ಹಣ ಕೇಳಿ ತೆಗೆದುಕೊಂಡು ಬಾ ಎಂದು ರೇಣುಕಾಳನ್ನು ಪೀಡಿಸುತ್ತಿದ್ದ. ಸಾರಥಿಯ ಮಾತಿಗೆ ಆಕೆ ಹೋಗದೆ ವಿಧಿಯಿರಲಿಲ್ಲ. ಅದೇ ಸಮಯಕ್ಕೆ ತವರು ಮನೆಯಲ್ಲಿ ನಾಮಕರಣದ ಆಹ್ವಾನ ಬಂದಿತ್ತು. ರೇಣುಕಾಳ ತಂದೆ ಶ್ರೀನಿವಾಸರಾವ್ ತನ್ನ ಮೊದಲ ಪತ್ನಿ ರಾಧಮ್ಮನವರು ಪೂರ್ತಿ ಹಾಸಿಗೆ ಹಿಡಿದ ಮೇಲೆ ಮಧುರಾಕ್ಷಿಯನ್ನು ವಿವಾಹವಾಗಿದ್ದರು. ಈಗ ಅವರಿಗೆ ಮಗುವಾಗಿ.. ವೆಂಕಟೇಶ್ ಆ ಮನೆಯ ವಾರಸುದಾರನಾಗಿದ್ದ. ಒಬ್ಬಳೇ ಮಗಳಾಗಿದ್ದರೆ ರೇಣುಕಾಳಿಗೆ ಎಲ್ಲಾ ಆಸ್ತಿಯು ಬಂದೇ ಬರುತ್ತದೆ ಎನ್ನುವ ಭ್ರಮೆಯಲ್ಲಿದ್ದ ಸಾರಥಿಗೆ ಅವನ ಕನಸು ಮುರಿದಿತ್ತು.
ಆಗ ತಂದ ಹಣವೆಲ್ಲ ಕರಗಿತ್ತು. ಅಷ್ಟೇ ಅಲ್ಲದೆ.. ಶ್ರೀನಿವಾಸರವರ ಜೊತೆ ಮಾತಿನ ಚಕಮಕಿಯಾಗಿ ಜಗಳವಾಗಿತ್ತು. ಅವರೂ ಅಳಿಯನಿಗೆ ಸಾಕಷ್ಟು ಸಹಾಯ ಮಾಡಿ ಸೋತಿದ್ದರು. ಈಗ ಮಧ್ಯಮ ವರ್ಗದ ಮನೆಯಿಂದ, ತೀರಾ ಬಡ ಕುಟುಂಬದ ಜೋಪಡಿಯಂತಹಾ ಮನೆಗೆ ಕಾಲಿಟ್ಟಿದ್ದರು ಸೀತಮ್ಮ ಹಾಗೂ ರೇಣುಕೆಯರು. ಆತ ಹೆಂಡತಿ ಹಾಗೂ ತಾಯಿಯನ್ನು ಬಿಟ್ಟು ಎಲ್ಲಿಗೋ ಹೋಗಿಬಿಡುತ್ತಿದ್ದ. ಅಪರೂಪಕ್ಕೊಮ್ಮೆ ಬಂದರೆ ಬಂದಾನು. ಈಗ ಮನೆಯಲ್ಲವನ್ನೂ ನಿಭಾಯಿಸುವ ಹೊಣೆ ರೇಣುಕಾಳದ್ದೇ.. ಸೀತಮ್ಮನವರಂತೂ ಸಂಪೂರ್ಣ ಹಾಸಿಗೆ ಹಿಡಿದಿದ್ದರು. ಈಗ ತನ್ನ ಸೇವೆ ಮಾಡುತ್ತಿದ್ದ ಸೊಸೆಯ ಮೇಲೆ ಮಮತೆ ಬಂದಿತ್ತು. ತಾವು ಮಗನಿಗೆ ಕುಮ್ಮಕ್ಕು ನೀಡಿದ್ದು, ಅವನನ್ನು ಬೆಳೆಸಿದ ರೀತಿ ತಪ್ಪೆಂದು ಅರಿವಾಗಿತ್ತು. ಆದರೆ ತೀರಾ ಬಡತನದ ಸ್ಥಿತಿಯಲ್ಲಿ ಒಂದು ಹನಿ ಗಂಜಿಗೂ ಗತಿ ಇಲ್ಲವಾದಾಗ ಅವರೇ ತಾವು ಹೆಣ್ಣುಮಕ್ಕಳ ಮನೆಗೆ ಹೋಗುವುದಾಗಿ ಒಪ್ಪಿದ್ದರು. ಅಲ್ಲದೆ ಮಗ ಜೂಜಿನ ಅಡಿಯಾಳಾಗಿ ಮತ್ತೊಬ್ಬ ಹೆಣ್ಣಿನ ದಾಸನಂತಾಗಿರುವುದು ಕೂಡಾ ಅವರಿಗೆ ತಿಳಿದಿತ್ತು.
ಹೆಣ್ಣು ಮಕ್ಕಳು ಈ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ರೇಣುಕಾಳ ಮೇಲೆ ಮಮತೆ ತೋರಿಸಿ ತನ್ನ ತಂದೆಯ ಮನೆಗೆ ಹೋಗುವಂತೆ ಕಳಿಸಿದ್ದರು. ಮಗಳಾದ ಕಾಂತಾ ತನ್ನ ತಾಯಿಯನ್ನು ಕರೆದೊಯ್ದಳು. ಮೊದಮೊದಲು ಚೆನ್ನಾಗಿಯೇ ಇದ್ದ ಮಧುರಾಕ್ಷಿ ನಂತರ ಹೇಳಿಕೆಯ ಮಾತುಗಳಿಂದ ವೆಂಕಟೇಶನಿಗೂ.. ವಸುಧಾಳಿಗೂ ಭೇದ-ಭಾವ ಮಾಡುವುದು ರೇಣುಕಾಳ ಮನಸ್ಸಿಗೆ ಬರುತ್ತಿತ್ತು. ಆದರೂ ಮೂಕಪ್ರೇಕ್ಷಕಿಯಂತೆ ಎದುರಾಡದೆ ಮಗಳನ್ನೇ ಅತ್ತ ಕಳುಹಿಸುತ್ತಿರಲಿಲ್ಲ.
ಅತ್ತೆಯನ್ನು ನೋಡುವುದಾಗಿ ಕೆಲದಿನ ಕಾಂತಾಳ ಮನೆಗೆ ಹೋದವಳಿಗೆ ಒಳ್ಳೆಯ ಆತಿಥ್ಯವೇ ದೊರಕಿತು. ಅಲ್ಲದೆ, ಸಾರಥಿಯ ತಂಗಿಯಾದ ಪುಷ್ಪಾಳ ಬಾಣಂತನ ಮಾಡಬಹುದಾ ಎಂದು ಕೇಳಿಕೊಂಡಾಗ ಖುಷಿಯಿಂದಲೇ ಅವರ ಮನೆಗೆ ಹೋಗಿದ್ದಳು. ಪುಷ್ಪಾ ಪತಿ ಉಮಾಕಾಂತ್ ಹಾಸ್ಯ ಪ್ರವೃತ್ತಿಯವರು. ಇಬ್ಬರು ಗಂಡುಮಕ್ಕಳು. ಈಗ ಮೂರನೆಯ ಮಗು ಹೆಣ್ಣಾಗಲಿ ಎಂಬ ಆಸೆಯಿತ್ತು. ಮೊದಮೊದಲಿಗೆ ಯಾರೊಂದಿಗೂ ಬೆರೆಯದ ರೇಣುಕ ನಂತರ ಉಮಾಕಾಂತನನ್ನು ಅಣ್ಣನೆಂದೇ ಭಾವಿಸಿ ಸಲುಗೆಯಿಂದ ಇದ್ದಳು. ಆದರೆ, ಹೆರಿಗೆಯ ನಂತರ ಇದು ಪುಷ್ಪಾಳಿಗೆ ಇವರ ಸಲುಗೆ ಬೇರೆ ರೀತಿ ಗೋಚರವಾಗಿ ಅವರ ಕುಟುಂಬದಲ್ಲಿ ಒಡಕು ಮಾತು ಎದ್ದಾಗ ಎಲ್ಲವನ್ನು ತಿರಸ್ಕರಿಸಿ ನಡೆದಳು ರೇಣುಕಾ. ಎಲ್ಲದಕ್ಕೂ ಅವಳ ಬಳಿ ಇದ್ದ ಮದ್ದು ಎಂದರೆ ಸಂಗೀತ ಮಾತ್ರವೇ..
ತನ್ನ ಮನೆಗೆ ಬಂದ ರೇಣುಕಾ ಮನೆ ಮಗಳಾಗಿದ್ದವಳು ತೀರಾ ಆಳಾಗುವ ಪರಿಸ್ಥಿತಿ ಒದಗಿ ಬಂದಿತ್ತು. ರಾಧಮ್ಮನವರಿಗೆ ಮರುಗುವುದನ್ನು ಬಿಟ್ಟರೆ ಈಗ ಬೇರೆ ಆಯ್ಕೆ ಇರಲಿಲ್ಲ. ಅವರ ಕಡೆಗಾಲವೂ ಹತ್ತಿರ ಬಂದಿತ್ತು. ಅಮ್ಮನ ಸಾವಿನ ನಂತರ ರೇಣುಕಾಳ ಮುಂದಿನ ಪರಿಸ್ಥಿತಿ ಏನು..?? ಪುಷ್ಪಾ ಅವಳ ಬಗ್ಗೆ ತಪ್ಪಾಗಿ ತಿಳಿಯಲು ಕಾರಣವೇನು..?? ಆ ತಪ್ಪು ತಿಳುವಳಿಕೆ ಸರಿಯಾಯಿತೇ..?? ವಸುಧಾಳ ಮುಂದಿನ ಜೀವನ ಹೇಗಿತ್ತು..?? ಸಾರಥಿ ಮತ್ತೆ ಎಂದಾದರೂ ಬಂದನೇ..??
ಶ್ರೀಮಂತರ ಮನೆಯ ಮಗಳಾದವಳು, ರಾಜಕುಮಾರಿಯಂತೆ ಬೆಳೆದವಳು ತೀರಾ ಮನೆ ಕೆಲಸಕ್ಕೂ ಹೋಗುವಂತಹಾ ಪರಿಸ್ಥಿತಿ ಇರಲಿಲ್ಲ. ವಿಧಿ ತಂದೊಡ್ಡಿದ ಪರೀಕ್ಷೆಯಲ್ಲಿ ರೇಣುಕಾ ಒಂದು ಬೊಂಬೆಯಂತೆ ಕಂಡರೂ ಹೆಣ್ಣು ಸಬಲಳಾಗುವುದಕ್ಕೆ ಎಷ್ಟು ದಾರಿಗಳಿವೆ ಹಾಗೂ ಯಾವುದು ಅವಳ ಆಯ್ಕೆಯಾಗಬೇಕು ಎಂಬುದನ್ನು ಲೇಖಕಿ ಮಾರ್ಮಿಕವಾಗಿ ಹೇಳಿದ್ದಾರೆ.
ಇವರ ಕಾದಂಬರಿಯ ಶೈಲಿ ಕೊಂಚ ವಿಭಿನ್ನವಾಗಿದೆ ಎನ್ನಿಸಿತು. ಏಕೆಂದರೆ, ಇಲ್ಲಿ ಎಲ್ಲಿಯೂ ಹಿನ್ನೆಲೆಯಾಗಲಿ ಅಥವಾ ಆ ಸಂದರ್ಭದಲ್ಲಿ ಬರುವ ಮುಂಚೆ ನಡೆದ ಸಂಗತಿಗಳಾಗಲಿ ಕಂಡುಬರುವುದಿಲ್ಲ. ಉದಾಹರಣೆಗೆ ಶ್ರೀನಿವಾಸರಾವ್ ಹಾಗೂ ಮಧುರಾಕ್ಷಿಯವರ ವಿವಾಹವಾದದ್ದು ಹೇಗೆ ಹಾಗೂ ಏಕೆ.. ರೇಣುಕಾ ಹಾಗೂ ಸಾರಥಿಯರದ್ದು ಪ್ರೇಮ ವಿವಾಹವೇ ಅಥವಾ ನಿಶ್ಚಯಿಸಿದ ವಿವಾಹವೇ.. ರಾಧಮ್ಮನವರ ಅತಂತ್ರ ಸ್ಥಿತಿಗೆ ಕಾರಣವೇನು.. ಹೀಗೆ ಯಾವುದಕ್ಕೂ ಹಿನ್ನೆಲೆಯಿಲ್ಲ. ಬದಲಾಗಿ ಕಥೆ ಬೆಳೆದಂತೆ ಆ ಕಥಾ ಸಂದರ್ಭದಲ್ಲಿ ತಕ್ಕಷ್ಟು ಮಾತ್ರವೇ ನಮಗೆ ಕಾಣಸಿಗುತ್ತದೆ. ಓದುಗರ ಕಲ್ಪನೆಗೆ ತಕ್ಕಂತೆ ಹಿನ್ನೆಲೆಯನ್ನು ರೂಪುಗೊಳಿಸಿಕೊಳ್ಳಬಹುದು.
ಇಲ್ಲಿ ಕಥೆಯ ಕಾಲಘಟ್ಟವೂ ಕಾಲಾನುಕ್ರಮದಲಿಲ್ಲ. ಮೊದಲಿಗೆ ಇದು ಮೊದಲಿನಿಂದ ಶುರುವಾಗಿ ಕತೆ ಬೆಳೆಯುತ್ತಿದೆ ಎಂದು ಓದುತ್ತಾ ಹೋದರೆ ಮಧ್ಯದಲ್ಲಿ ಅರಿವಾದದ್ದು ಇದು ಸಿಂಹಾವಲೋಕನದಲ್ಲಿ ಕಂಡ ಕಥೆ ಎಂಬುದಾಗಿ. ಮತ್ತೆ ವಾಸ್ತವ ಹಾಗೂ ಹಿಂದಿನ ನೆನಪುಗಳು.. ವಿಭಿನ್ನ ರೀತಿಯ ಕಾದಂಬರಿಯ ಓದು ಎನ್ನಿಸಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ