ಪುಸ್ತಕದ ಶೀರ್ಷಿಕೆ : ಬೆಳದಿಂಗಳ ಗುಲಾಬಿ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಸನ್ನ
ಎರಡನೇ ಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು)
ಅಪ್ಪ-ಅಮ್ಮ ಇಬ್ಬರನ್ನು ಕಳೆದುಕೊಂಡಿದ್ದ ಹೇಮಳಿಗೆ ಇಬ್ಬರು ಅಣ್ಣಂದಿರು. ಟ್ಯುಟೋರಿಯಲ್ ಟ್ಯೂಷನ್ ಒಪ್ಪಿಕೊಂಡು ತನ್ನ ಮದುವೆಗೆ ತಾನೇ ಹಣ ಕೂಡಿಸಿಟ್ಟುಕೊಳ್ಳುತ್ತಿದ್ದಳು. ಅವಳ ಸೋದರತ್ತೆ ಭಾಗಮ್ಮನಿಗೆ ತಾಯಿ ಇಲ್ಲದ ಮಗಳಾದ ಹೇಮಳೆಂದರೆ ಬಹಳ ಪ್ರೀತಿ. ಗೆಳತಿ ಶೀಲಳನ್ನು ಬಿಟ್ಟರೆ ಅತ್ತೆಯೇ ಆಪ್ತಳು. ಸೋದರತ್ತೆಯೇ ಓಡಾಡಿ ಅವಳಿಗೆ ಒಂದು ಗಂಡು ಕುದುರಿಸಿದಳು.
ರತ್ನಮ್ಮನ ಅಕ್ಕನ ಮಗ ಸುರೇಂದ್ರ ಪಾರ್ಟ್ ಟೈಮ್ ಲೆಕ್ಚರರ್ ಆಗಿದ್ದವನು. ಆತನ ಅಣ್ಣ ರವೀಂದ್ರ ಕಾಂಟ್ರಾಕ್ಟ್ ಮಾಡುತ್ತಿದ್ದ. ಅವರ ತಾಯಿಯ ಅಣ್ಣನ ಮಗಳು ಜಲಜಾಕ್ಷಿಯನ್ನೇ ವಿವಾಹವಾಗಿದ್ದ ರವೀಂದ್ರ ಮಾವನ ಮನೆಯ ಕಡೆಯಿಂದ ದೊರೆತ ಆಸ್ತಿಯಿಂದ ಸುಖವಾಗಿಯೇ ಇದ್ದ. ಅಣ್ಣನಿಗೆ ಅಸಿಸ್ಟೆಂಟ್ ಇದ್ದ ಹಾಗೆ ಸುರೇಂದ್ರ. ಹುಡುಗಿ ತುಂಬಾ ಚೆನ್ನಾಗಿರುವುದರಿಂದ ವರದಕ್ಷಿಣೆ, ವರೋಪಚಾರ ಬೇಡವೆಂದು ಸರಳವಾಗಿ ವಿವಾಹವಾಗಿದ್ದ. ಹೇಮಳಿಗೂ ಹುಡುಗ ಹಿಡಿಸಿದ್ದ. ಅವಳಿಗೂ ಹೆಚ್ಚಿನ ನಿರೀಕ್ಷೆಗಳಿರಲಿಲ್ಲ. ಅವಳ ಅಣ್ಣಂದಿರಿಗೂ ಇದೇ ಬೇಕಾಗಿತ್ತು.
ವಿವಾಹವಾಗಿ ಬಂದ ಹೇಮಳಿಗೆ ಅವನ ಕೋಣೆಯನ್ನು ನೋಡಿ ಆತನ ಪರಿಸ್ಥಿತಿಯ ಅರಿವಾಗಿತ್ತು. ಅತ್ತಿಗೆ ಜಲಜಾಕ್ಷಿ ಮೊದಲ ರಾತ್ರಿಗೆ ಒಂದು ಲೋಟ ಹಾಲನ್ನೂ ಕೊಡದೆ 3 ದಿನಕ್ಕೆ ಅವರ ಕೋಣೆಯನ್ನು ಬಿಟ್ಟುಕೊಟ್ಟಿದ್ದಳು. ಜೊತೆಗೆ ಮನೆಯಲ್ಲಿ ಆಕೆ ಅವಳನ್ನು ನಡೆಸಿಕೊಂಡ ರೀತಿ ಹೇಮಳಿಗೆ ಕೊಂಚವೂ ಇಷ್ಟವಾಗಲಿಲ್ಲ. ಸುರೇಂದ್ರ ನೋಡಲು ಚೆನ್ನಾಗಿದ್ದರೂ ಬೆನ್ನೆಲುಬಿಲ್ಲದ ವ್ಯಕ್ತಿ ಎಂದೆನಿಸಿತ್ತು ಅವಳಿಗೆ. ಐಷಾರಾಮದ ಹೆಂಗಸಾದ ಅತ್ತಿಗೆಯನ್ನು ಮಾತನಾಡಿಸಿಕೊಂಡು, ಅವರ ಮಕ್ಕಳೊಂದಿಗೆ ಆರಾಮವಾಗಿ ಇರುತ್ತಿದ್ದ.
ಪರ್ಮನೆಂಟ್ ಕೆಲಸ ಸಿಗುವವರೆಗೂ ಅತ್ತಿಗೆಗೆ ಹೊಂದಿಕೊಂಡಿರಬೇಕು ಎಂಬುದು ಅವನ ಧೋರಣೆ. ಹಾಗಾಗಿ ಅತ್ತಿಗೆಯ ಬಳಿ ತಕರಾರು ತೆಗೆಯಬೇಡವೆಂದು.. ತಾವೇನು ಸ್ವತಂತ್ರರಾಗಿಲ್ಲದಿದ್ದರಿಂದ ತವರು ಮನೆಯ ಬಲವೂ ಇಲ್ಲದಿದ್ದರಿಂದ ಸ್ವತಂತ್ರ ಸಂಸಾರ ಹೂಡುವಷ್ಟಿಲ್ಲವೆಂದು ಹೇಮಳಿಗೆ ಹೇಳಿದ್ದನು. ಅಲ್ಲದೆ, ಮನೆ ಕೆಲಸದ ಹೇಮಮ್ಮ ಬರೆದಿದ್ದಾಗ ಅವಳೇ ನಿಭಾಯಿಸಿಕೊಂಡು ಹೋಗಬೇಕೆಂದೂ ಹೇಳಿದ್ದನು.
ಅತ್ತಿಗೆಯ ತಂಗಿ ವನಜಳ ಬಳಿ ಸುರೇಂದ್ರನ ಸಲುಗೆ ಹೆಚ್ಚೇ ಇದ್ದಿತು. ಸುರೇಂದ್ರ ಅವಳ ಬಳಿ ಹೇಮಳನ್ನು ಬೆಳದಿಂಗಳಲ್ಲಿ ಅರಳಿದ ಗುಲಾಬಿ ಎಂದೇ ವರ್ಣಿಸಿದ್ದನು. ಅವಳಾಡಿದ ಮಾತು ಹಾಗೂ ಸಲುಗೆ ಹೇಮಳಿಗೆ ಇಷ್ಟವಾಗಲಿಲ್ಲ. ಇಬ್ಬರೂ ಹೆಂಗಸರಿಗೆ ಜವಾನನಂತಿರುವ ತನ್ನ ಗಂಡನ ಕುರಿತು ಅಸಹ್ಯಪಟ್ಟುಕೊಂಡಿದ್ದಳು. ವನಜಳಿಗೆ ತನ್ನ ಮೇಲೆ ಇಷ್ಟವಿದೆ ಎಂದೂ.. ಆದರೆ, ಅವರಪ್ಪ ತಮ್ಮ ಪ್ರೆಸ್ಟಿಜ್ ಗೆ ಫಾರಿನ್ ರಿಟರ್ನ್ ಡಾಕ್ಟರನ್ನು ವಿವಾಹ ಮಾಡುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದ. ಅದಕ್ಕಾಗಿಯೇ ಅವಳಿಗಿಂತ ಮೊದಲು ವಿವಾಹವಾಗಲು ಹೇಮಳನ್ನು ಆರಿಸಿಕೊಂಡಿದ್ದ.
ಜಲಜಾಕ್ಷಿ ವಿವಾಹವಾಗಿ ಬಂದ ಮೊದಲಲ್ಲಿಯೇ ಅತ್ತೆಯನ್ನು ತನ್ನ ತಂದೆಯ ಮನೆಗೆ ಅಡುಗೆಯವಳಂತೆ ಕಳುಹಿಸಿದ್ದಳು. ಹೇಮ ಮೂರು ದಿನಕ್ಕೇ ಆ ಮನೆಯವರ ದಬ್ಬಾಳಿಕೆಯನ್ನು ಸಹಿಸಲಾಗದೆ, ಸುರೇಂದ್ರನಿಂದಲೂ ಬೇಸತ್ತು ಮನೆಯಿಂದ ಹೊರಟವಳು ತನ್ನ ಗೆಳತಿ ಶೀಲಳ ಮನೆಗೆ ಹೋಗಬೇಕೆಂದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಸುರೇಂದ್ರನ ತಾಯಿ ಸುಭದ್ರಮ್ಮ ಸಿಕ್ಕರು.
ಮಗ ವನಜಳೊಂದಿಗೆ ಸುತ್ತುತ್ತಿದ್ದದ್ದು ಹಾಗೂ ವನಜ ತನ್ನ ಮೇಲಿನ ಪ್ರೀತಿಯಿಂದ ವಿವಾಹದ ನಂತರವೂ ತನ್ನನ್ನೇ ಅನುಸರಿಸಿ ಬರುತ್ತಾಳೆ ಎಂದುಕೊಂಡ ಸುರೇಂದ್ರನ ಆಲೋಚನೆ ಅವರಿಗೂ ಗೊತ್ತಿತ್ತು. ವಿವಾಹವಾದ ಮೇಲೆ ಶ್ರೀಮಂತ ಹೆಂಡತಿಯ ದಾಸನಾದ ದೊಡ್ಡ ಮಗ, ಮದುವೆಗೆ ಮುಂಚೆಯೇ ಮತ್ತೊಂದು ಹೆಣ್ಣಿನ ದಾಸನಾಗಿದ್ದ ಚಿಕ್ಕ ಮಗನನ್ನು ತಿದ್ದಲಾಗದೆ ಸೋತಿದ್ದರು ಸುಭದ್ರಮ್ಮ. ಇಬ್ಬರ ಮನಸ್ಸಿನ ಮಾತುಗಳು ಅದಲು-ಬದಲಾದ ನಂತರ ಹೇಮ ಹಾಗೂ ಸುಭದ್ರಮ್ಮನ ಹೊಸ ಬದುಕು ಶುರುವಾಯಿತು. ಅವರು ಸುಭದ್ರಮ್ಮನ ಆಪ್ತರಾದ ಕನಕಮ್ಮ ಮನೆಯಲ್ಲಿ ವಾಸ ಮಾಡತೊಡಗಿದ್ದರು. ನಂತರ, ಕನಕಮ್ಮನ ಪತಿ ರಾಮಣ್ಣನವರ ದೆಸೆಯಿಂದ ಬಾಲಚಂದ್ರ ಫುಡ್ ಸೆಂಟರ್ ನಲ್ಲಿ ಹೇಮಳಿಗೆ ಅಕೌಂಟೆಂಟ್ ಕೆಲಸವೂ ಸಿಕ್ಕಿತು.
ಅತ್ತ ಮದುವೆಯಾದ ವನಜ ವಿದೇಶಕ್ಕೆ ಹಾರಿದಳು. ಅದಾದ ನಂತರ ಸುರೇಂದ್ರನಿಗೆ ಬುದ್ಧಿ ಬಂದಿತ್ತು. ಈಗ ಹೆಂಡತಿಯ ಬಳಿ ಬರಲು ಅಮ್ಮನ ಮೊರೆ ಹೋಗಿದ್ದ. ಆದರೆ, ಆತನಿಗೆ ನಿಜಕ್ಕೂ ಬುದ್ಧಿ ಬಂದಿರಲಿಲ್ಲ. ಸುಭದ್ರಮ್ಮನಿಗೆ ಗೊತ್ತಿಲ್ಲದ ವಿಚಾರವೊಂದು ಹೇಮಳಿಗೆ ಗೊತ್ತಿತ್ತು. ಆತ ವಿನೋದಿನಿಯ ಬಳಿ ಹೋಗಿ ಹತ್ತುಸಾವಿರ ಕಳೆದುಕೊಂಡು ಹಣಕ್ಕಾಗಿ ಬಂದದ್ದು. ಆತ ನಿಜವಾಗಿಯೂ ಪಾಪಪ್ರಜ್ಞೆಯಿಂದ ಬಂದಿದ್ದರೆ ಒಪ್ಪುತ್ತಿದ್ದಳೇನೋ.. ಆದರೆ, ಇಲ್ಲಿ ಹಾಗಾಗಲಿಲ್ಲ.
ಸುಭದ್ರಮ್ಮನೂ ಈಗ ಮಗನ ಪಕ್ಷ ಸೇರಿದ್ದಳು. ಮಗನೇ ಇಲ್ಲದ ಸೊಸಿಯನ್ನು ಆದರಿಸುವುದು ಹೇಗೆ ಎಂಬುದು ಅವಳ ರೀತಿಯಾಗಿದ್ದರೂ.. ಅವಳು ಕನಕಮ್ಮನ ಜೊತೆ ಸೇರಿ ಸೊಸೆಗೆ ಪಾಠ ಕಲಿಸಲು ಹುನ್ನಾರ ಮಾಡುತ್ತಿದ್ದಳು. ಮಗ ಬೇರೆ ಮನೆ ಮಾಡುತ್ತಾನೆ, ತಾನು ಅಲ್ಲಿಗೆ ಹೋಗುತ್ತೇನೆಂದೂ.. ಒಂಟಿ ಹುಡುಗಿಯಾದ ನಿನ್ನನ್ನು ಕನಕಮ್ಮ ಇಟ್ಟುಕೊಳ್ಳಲಾರರೆಂದು ಹೆದರಿಸಿದ್ದಳು. ಆದರೆ, ಕನಕಮ್ಮನ ಪತಿ ರಾಮಣ್ಣನವರಿಂದ ಈಕೆಗೆ ಎಲ್ಲಾ ವಿಷಯಗಳು ತಿಳಿದು ಅವರಿಬ್ಬರೂ ಸೇರಿ ಬೇರೆಯದ್ದೇ ಉಪಾಯ ಮಾಡಿದ್ದರು.
ಅವರಿಬ್ಬರೂ ಸೇರಿ ಮಾಡಿದ ಆ ಉಪಾಯವೇನು..? ಇದರಿಂದ ಹೇಮಳ ಬದುಕು ಸರಿಯಾಯಿತೇ..? ಸುಭದ್ರಮ್ಮ ಹಾಗೂ ಸುರೇಂದ್ರ ಇಬ್ಬರೂ ಪಾಠ ಕಲಿತರೇ..? ಎಲ್ಲವನ್ನು ತಿಳಿಯಲು ಓದಿ 'ಬೆಳದಿಂಗಳ ಗುಲಾಬಿ' ಕಾದಂಬರಿಯನ್ನು.
ಇಲ್ಲಿ ಬೆಳದಿಂಗಳ ಗುಲಾಬಿ ಸೌಂದರ್ಯಕ್ಕೆ ಅನ್ವರ್ಥಕ ನಾಮದಂತಿದ್ದರೂ.. ಹೆಣ್ಣು ಕೇವಲ ಸೌಂದರ್ಯವತಿಯಾದರೆ ಸಾಲದು ಬದಲಾಗಿ ಸ್ವಾಭಿಮಾನಿಯಾಗಿ, ಸ್ವಾವಲಂಬಿಯಾದರೆ ಆಕೆಯ ಬದುಕನ್ನು ಆಕೆಯೇ ರೂಪಿಸಿಕೊಳ್ಳಬಹುದಾದ ಬಗೆಯನ್ನು ತೋರಿದ್ದಾರೆ. ಹೆಣ್ಣು ಕ್ಷಮಯಾಧರಿತ್ರಿಯಾದರೂ.. ಆಕೆ ಮೋಸವನ್ನು ಅರಿತು ಒಳ್ಳೆಯದ್ದು ಹಾಗೂ ಕೆಟ್ಟದ್ದನ್ನು ಬೇರ್ಪಡಿಸುವ ರೀತಿಯನ್ನು ಅರಿತಿರಬೇಕು. ಬೆಳ್ಳಗಿರುವುದನ್ನು ಹಾಲೆಂದು ನಂಬಿದರೆ ಆಕೆಯ ಬದುಕಿನಲ್ಲಿ ಆಗಬಹುದಾಗಿದ್ದ ಅನಾಹುತಗಳ ಚಿತ್ರಣ ಕಾಣುತ್ತದೆ. ಸೌಂದರ್ಯದ ಜೊತೆಗೆ ಬುದ್ಧಿವಂತಿಕೆಯಿಂದ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ನಾಯಕಿಯ ಚಿತ್ರಣವಿದೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ.. ತಾಯಿಯಂತಿದ್ದ ಅತ್ತೆ ಸೊಸೆಗೆ ಮುಳುವಾಗಬಹುದಾದ ಸಂದರ್ಭವಿದೆ. ಅತ್ತೆ ತಾಯಿಯಾಗಲಾರಳು ಎಂಬ ಸುಭದ್ರಮ್ಮನವರ ನಡವಳಿಕೆ ಅವರ ದೃಷ್ಟಿಯಿಂದ ಆಲೋಚಿಸಿದಾಗ ಬೇರೆಯದ್ದೇ ರೀತಿ ಕಾಣಲೂಬಹುದು. ಆದರೂ.. ಮಗನ ಜೊತೆ ಸೇರಿ ಸೊಸೆಗೆ ಕೊಟ್ಟ ಕಷ್ಟ ಒಪ್ಪಿಕೊಳ್ಳುವಂತಹದ್ದೇನಲ್ಲ. ವೈವಾಹಿಕ ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆಗಳ ವಿವಿಧ ಸ್ವರೂಪಗಳಿವೆ.
ಸಂಸಾರದಲ್ಲಿ ನಾನಾ ಕಷ್ಟಗಳು ಎದುರಾದರೂ.. ಕುಗ್ಗದೆ ತನ್ನ ಆತ್ಮಬಲದಿಂದ ತನ್ನ ಬದುಕನ್ನು ರೂಪಿಸಿಕೊಳ್ಳುವ ನಾಯಕಿ ಹೇಮ ಇಷ್ಟವಾಗುತ್ತಾಳೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ