ಶನಿವಾರ, ಏಪ್ರಿಲ್ 18, 2026

ತಾಯಿಯೇ ಮೊದಲ ಗುರು

ಬರಹಗಾರರ ಕಣ್ಣಿಗೆ ಕಾಣುವ ಅಮ್ಮನಿಗೂ.. ಬರಹಗಾರರ ಸಾಹಿತ್ಯದಲ್ಲಿ ಕಾಣುವ ಅಮ್ಮನಿಗೂ ಬಹಳಷ್ಟು ವ್ಯತ್ಯಾಸಗಳನ್ನು  ಕಾಣಬಹುದು. ತನ್ನ ಅಮ್ಮನನ್ನು ಚಿತ್ರಿಸುವಾಗ ಅವರ ಬದುಕು ಸಹಾ ಕಾಣುತ್ತದೆ. ಅವರ ಭಾವನೆಗಳು ಸಹಾ ಕಾಣಸಿಗುತ್ತವೆ. ಅಮ್ಮನ ನಂತರವೂ ಅಮ್ಮನನ್ನು ಸದಾ ಜೀವಂತವಿರಿಸಿಕೊಳ್ಳುವ ಈ ನೆನಪುಗಳು ಅಮ್ಮನನ್ನು ಮತ್ತಷ್ಟು ಹತ್ತಿರವಾಗಿಸುತ್ತವೆ. ಲೇಖಕರ ಅಮ್ಮಂದಿರು 'ಅಮ್ಮ'ನ ಸಾರ್ವತ್ರಿಕ ರೂಪವಾದ ಅಚ್ಚರಿ ನನ್ನ ನೋಟಕ್ಕೆ ದಕ್ಕಿದ್ದು ಹೀಗೆ.


ತನ್ನ ಅಮ್ಮ/ಅವ್ವನನ್ನೇ ನಮಗೆ ಕಾಣಿಸಿದವರಲ್ಲಿ ಮೊದಲಿಗೆ ನೆನಪಾಗುವುದು ಪಿ. ಲಂಕೇಶ್ ಅವರ 'ಅವ್ವ' ಕವಿತೆ. ಹಳ್ಳಿಯ 'ಅವ್ವ'ನ ಸಾರ್ವತ್ರಿಕ ರೂಪವೇ ಆಗಿದೆ ಈ ಕವಿತೆ. ಅವರ ಅಮ್ಮನ ಸಾವಿನ ನಂತರ ಅವರು ಬರೆದಿರುವ ಈ ಕವಿತೆ ಅಮ್ಮನನ್ನು ಫಲವತ್ತಾದ ಕಪ್ಪು ನೆಲವೆಂದು ಹೇಳುತ್ತಾ.. ಮನೆಯಿಂದ ಹೊಲಕ್ಕೆ ಹೋದಂತೆ ಎನ್ನುತ್ತಾ ಹೇಳುವ ಪರಿ ಅಮ್ಮನ ದುಡಿತದ ಜೀವನವನ್ನು ಹೇಳುತ್ತದೆ.


"ನನ್ನವ್ವ ಬದುಕಿದ್ದು

ಕಾಳು ಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;

ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ ;

ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.



ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು:

ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,

ಮನೆಯಿಂದ ಹೊಲಕ್ಕೆ ಹೋದಂತೆ

ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದ್ದಕ್ಕೆ."


(ಪಿ. ಲಂಕೇಶ್ ಅವರ 'ಅವ್ವ' ಕವಿತೆಯ ಸಾಲುಗಳು)


ಈ ಸಾಲುಗಳನ್ನು ನೆನಪಿಸುತ್ತಾ.. ಅವ್ವನ ನೆನಪನ್ನು ಕಟ್ಟಿಕೊಟ್ಟ ಪುಸ್ತಕ ಜಯರಾಮಾಚಾರಿಯವರ 'ನನ್ನವ್ವನ ಬಯೋಗ್ರಫಿ'. ಇಲ್ಲಿನ 'ಅವ್ವ' ಕೂಡಾ ದುಡಿತದಲ್ಲಿಯೇ ತನ್ನವರಿಗಾಗಿ ಜೀವನ ಸವೆಸಿದವರು. ಆದರೆ,  ಆ ಅವ್ವನಿಗೂ.. ಈ ಅವ್ವನಿಗೂ ಕಂಡ ಮುಖ್ಯ ವ್ಯತ್ಯಾಸವೆಂದರೆ ಕೊನೆಯ ದಿನಗಳು. ಇಲ್ಲಿಯ ಅವ್ವನ ಕೊನೆಯ ದಿನಗಳು ತಣ್ಣಗಿರದೆ.. ಎಷ್ಟು ಯಾತನಾಭರಿತವಾಗಿದ್ದವು ಎನ್ನುವುದನ್ನು ಓದುತ್ತಾ ಕಾಡತೊಡಗುತ್ತದೆ. 


ಕಷ್ಟ ಪಡುವ ದಿನಗಳಲ್ಲಿ ಅವ್ವ ಕಷ್ಟಪಟ್ಟ ಬಗೆ.. ದುಡಿಮೆಯ ಬಗ್ಗೆ ಅವರಿಗಿದ್ದ ಮನೋಭಾವ, ಕೂತು ತಿನ್ನದೇ ವಿವಿಧ ರೀತಿಯ ದುಡಿಮೆಗಳನ್ನು ಮಾಡಿದ ರೀತಿ, ಗಂಡನ ಸಾವಿನ ನಂತರ ಬದುಕಿದ ಪರಿ, ದೊಡ್ಡ ಮಗನಿಗೆ ಕುಡಿತಕ್ಕೆ ಪ್ರೀತಿಯಿಂದಲೇ ಕೊಡುತ್ತಿದ್ದ ಕಾಸು, ಅರ್ಥ ಮಾಡಿಕೊಂಡ ಪರಿ, ಕಿವಿ ಸರಿಯಾಗಿ ಕೇಳದೆ ಸೊಸೆಯ ಪಿಸು ಮಾತಿಗಾಗಿ ಪಟ್ಟ ಅನುಮಾನ, ಮೊಮ್ಮಗುವಿನ ಮೇಲಿನ ಪ್ರೀತಿಗೆ ಜಾತಿಯನ್ನು ಧಿಕ್ಕರಿಸಿ ಮದುವೆಯಾದ ಮಗನ ಮನೆಗೆ ಹೋಗಿದ್ದು, ಸೊಸೆಯಂದಿರ ಜೊತೆಗಿನ ಲವ್ ಹೇಟ್ ರಿಲೇಷನ್ ಶಿಪ್, ಬಂಧು-ಮಿತ್ರರ ಜೊತೆಗಿನ ಬಾಂಧವ್ಯ, ಅಣ್ಣಾವ್ರ ಮೇಲಿನ ಅಭಿಮಾನ, ಅವ್ವನ ಆಸ್ತಿಕತೆ ಇವೆಲ್ಲವೂ ಕಂಡವು.


ಅವ್ವ ಕ್ಯಾನ್ಸರ್ ನ ಕೊನೆ ಹಂತದಲ್ಲಿ ಇದ್ದಾಗಿನ ನೋವು- ನರಳಾಟ, ಬೆಡ್ ಸೋರ್ ಆಗಿ ನರಳುತ್ತಿದ್ದಾಗಿನ ಪರಿಸ್ಥಿತಿಯಲ್ಲಿ ವಾಟರ್ ಬೆಡ್ ತಂದದ್ದು.. ಇಂತಹಾ ಸಂಧರ್ಭದಲ್ಲಿ ಅವ್ವನ ಮೇಲೆ ರೇಗಿ ಪರಿತಪಿಸಿದ ನೋವು ಗೋಚರವಾದಾಗ.. "ನಮ್ಮನ್ನು ಹೆತ್ತು ಆಡಿಸಿದ, ಬೆಳೆಸಿದ ಪೋಷಕರು ನಮ್ಮ ಮುಂದೆ ಅಸಹಾಯಕರಾಗಿ ನಿಲ್ಲುವುದು ಬದುಕಿನ ಅತ್ಯಂತ ಕೆಟ್ಟ ಕ್ಷಣ" ಎಂಬ ಸಾಲು ಕಂಡು ಈ ಸಂದರ್ಭ ಬಾರದಿರಲಿ ಎಂದು ಮನಸ್ಸು ಪ್ರಾರ್ಥಿಸಿದ್ದೂ ಇದೆ. 


ಆದರೆ, ಅಂತಹಾ ಪ್ರಾರ್ಥನೆಗಳು ಎಷ್ಟೋ ಬಾರಿ ಫಲಿಸದೇ ಹೋಗಬಹುದು. 

ಇಂತಹಾ ಅಮ್ಮನ ಅಸಹಾಯಕತೆಯನ್ನು ನಾನು ಮತ್ತೆ ಕಂಡದ್ದು ವಸುಧೇಂದ್ರ ಅವರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಎನ್ನುವ ಸುಲಲಿತ ಪ್ರಬಂಧಗಳ ಪುಸ್ತಕದಲ್ಲಿ. ಇಲ್ಲಿ 'ಅವ್ವ'ನ ಬದಲಾಗಿ 'ಅಮ್ಮ' ಕಾಣುತ್ತಾರೆ. ಜೊತೆಗೆ, ಇದು ಲಲಿತ ಪ್ರಬಂಧಗಳ ಪುಸ್ತಕಗಳ ಪುಸ್ತಕವಾಗಿರುವುದರಿಂದ ತಿಳಿ ಹಾಸ್ಯದ ರೂಪದ ಬರಹಗಳು ಕಾಣುತ್ತವೆ. ಹೇಳಲು ಮುಜುಗರ ಪಡುವ ಕೆಲವು ವಿಚಾರಗಳನ್ನು ಸರಳವಾಗಿ, ತಿಳಿ ಹಾಸ್ಯದಿಂದ ಕೂಡಿರುವುದು ಓದಲು ಮುಜುಗರವಾಗದಂತೆ ಮಾಡುತ್ತದೆ.


ತಾಯಿ ಸಾಕಿ ಚಿಕ್ಕಂದಿನಲ್ಲಿ ನಮ್ಮನ್ನು ಸಲಹುವಾಗ ಇಷ್ಟವಾಗುತ್ತಾಳೆ. ಅದೇ ಅಮ್ಮನನ್ನು ನಾವು ಸಾಕುವಂತಾದ ದಿನಗಳಲ್ಲಿ..?! ಅಮ್ಮ ಮಗುವಿನ ಸ್ಥಿತಿಗೆ ಬಂದಾಗಲೂ ಅವಳನ್ನು ಸುಧಾರಿಸಿಕೊಂಡು, ಇಷ್ಟಪಡುವ ರೀತಿ ಇಲ್ಲಿ ವ್ಯಕ್ತವಾಗಿದೆ. ಮಕ್ಕಳು ಚಿಕ್ಕಂದಿನಲ್ಲಿ ಅನುಭವಿಸುವ ಪೇಚಾಟಗಳಲ್ಲಿ ಒಂದಾದ ಮಲ, ಮೂತ್ರ ವಿಸರ್ಜನೆಯ ಸಮಸ್ಯೆಯನ್ನು "ಚಡ್ಡಿ ರ್ಯಾಸ್ಕಲ್" ಎಂದು ಹೇಳಿಕೊಳ್ಳುತ್ತಾ.. ತಮ್ಮ ಪೇಚಾಟದ ಚಿಕ್ಕಂದಿನ ದಿನಗಳು ಹಾಗೂ ಅಮ್ಮನ ವಯಸ್ಸಾದ ದಿನಗಳಲ್ಲಿ, ಆಕೆಗೆ ಡಯಾಬಿಟೀಸ್ ಬಂದು ಮಲ,ಮೂತ್ರ ವಿಸರ್ಜನೆಗೆ ತೊಂದರೆಯಾದ ಸಂದರ್ಭಗಳು, ಆ ಸಂದರ್ಭವನ್ನು ನಿವಾರಿಸಲು ಹೋದಾಗ ಆದ ತೊಂದರೆಗಳು ಹಾಗೂ ಅದೆಲ್ಲವನ್ನೂ ಮೀರಿದ ಅವರಿಬ್ಬರ ನಡುವಿನ ಭಾಂದವ್ಯವನ್ನು ಬಿಂಬಿಸುತ್ತಾರೆ. ಆಗಲೂ "ನಮ್ಮಮ್ಮ ಅಂದ್ರೆ ನಂಗಿಷ್ಟ" ಎನ್ನುವ ಪರಿ ಆಪ್ತವಾಗುತ್ತದೆ.  


ನನ್ನವ್ವನ ಬಯೋಗ್ರಫಿಯಲ್ಲಿ ಕಂಡ ಅಣ್ಣಾವ್ರ ಮೇಲಿನ ಅಭಿಮಾನದ ಪ್ರಸಂಗವೊಂದನ್ನೂ ಇಲ್ಲಿ ನೆನೆಯಬಹುದು.

ಇಲ್ಲಿ.. ಅಮ್ಮ ಸಿನಿಮಾ ನೋಡಿ ಬೆಳೆದವರಾದ್ದರಿಂದ.. ಅಣ್ಣಾವ್ರನ್ನು ನೋಡಲು ಮಗನನ್ನು ಕರೆದುಕೊಂಡು ತಾನೂ ಹೊರಡುತ್ತಾಳೆ. ಇನ್ನೂ ಪುಟ್ಟ ಮಗನನ್ನು ಕಟ್ಟಿಕೊಂಡು ಹೋದ ಅವಳು.. ಆ ಜನ ಜಂಗುಳಿಯಲ್ಲಿ ತನಗೆ ಕಾಣದಿದ್ದರೂ ಪರವಾಗಿಲ್ಲ.. ತನ್ನ ಮಗನಿಗೆ ಕಾಣಲಿ ಎನ್ನುವ ನಿಸ್ವಾರ್ಥ ಭಾವನೆಯಿಂದ ಆತನನ್ನು ಹೆಗಲೇರಿಸಿಕೊಂಡು ಅವನಿಗೆ ಎಲ್ಲವೂ ದಕ್ಕಲಿ ಎಂಬ ತ್ಯಾಗದ ಪ್ರತಿಫಲವೇನೋ ಎಂಬಂತೆ ಅಣ್ಣಾವ್ರು ಅವಳಿಗೆ ದರ್ಶನ ಕೊಟ್ಟ ರೀತಿ ಇಲ್ಲಿ ಪುಳಕಿತರಾಗುವಂತೆ ಮಾಡುತ್ತದೆ.  


ಅಮ್ಮನ ಪಾತ್ರೆಯ ಪ್ರೇಮ, ಮಗನ ಮೇಲಿನ ಮಮತೆಯ ಇನ್ನೂ ಹಲವು ಪ್ರಸಂಗಗಳು ಕಾಣಸಿಗುತ್ತವೆ. ಹೀಗೆ ಅಮ್ಮನ ಘಮಲು ಮಂಜುನಾಥ್ ಚಾಂದ್ ಅವರ 'ಅಮ್ಮ ಕಟ್ಟಿದ ಜಾಜಿದಂಡೆ' ಪುಸ್ತಕದಲ್ಲಿಯೂ ಕಾಣಸಿಗುತ್ತದೆ. ಹಾಗೆ ಅಮ್ಮನ ಅನಾರೋಗ್ಯದ ದಿನಗಳೂ.. ಅಮ್ಮನ ದೈನಂದಿನ ಕಾಯಕ, ಬೆಳೆದ/ಬೆಳೆಸಿದ ಪರಿಸರ, ಬದುಕಿದ ರೀತಿ ಹೀಗೆ ಅಮ್ಮ ದಕ್ಕಿದಷ್ಟನ್ನು ಸುಂದರವಾಗಿ ಜಾಜಿ ದಂಡೆಯಂತೆಯೇ ಪೋಣಿಸಿ ಕೊಟ್ಟಿದ್ದಾರೆ ಲೇಖಕರು.


ಅಮ್ಮ ಹೂ ಕಟ್ಟುವ ರೀತಿಯನ್ನು ಮಾತ್ರವಲ್ಲದೇ.. ಆಕೆಯ ಧ್ಯಾನಸ್ಥ ಸ್ಥಿತಿಯನ್ನು ದಾಖಲಿಸುತ್ತಾ ಅಮ್ಮನ ಹಸನ್ಮುಖಿತನ ಹಾಗೂ ಆಕೆ ಜೀವನದ ದಾರದಲ್ಲಿ ಬದುಕನ್ನು ಹೂವಿನಂತೆ ನಾಜೂಕಾಗಿ ಕಟ್ಟುವ ಪರಿಯನ್ನು ಹೇಳುತ್ತಲೇ.. ಆಕೆಯ ಮುಪ್ಪಿನಲ್ಲಿ ಕೈ ಸುಕ್ಕುಗಳು ಬಂದಾಗಿನ ಅಮ್ಮನನ್ನೂ ಪರಿಚಯಿಸುತ್ತಾರೆ.


ಅಮ್ಮನಿಗೆ ಐವತ್ತರ ಆಸುಪಾಸಿನಲ್ಲಿ ಕಾಣಿಸಿಕೊಂಡ ಹೃದಯದ ಕಾಯಿಲೆ ಆಕೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದು, ಅಮ್ಮನನ್ನು ನೋಡಿಕೊಳ್ಳುತ್ತಿದ್ದ ರೀತಿ ಹಾಗೂ ಅಮ್ಮ ಮಾಡುತ್ತಿದ್ದ ಕೆಲಸಗಳೆಲ್ಲವನ್ನೂ ಕಲಿತುಕೊಂಡ ದಿನಗಳು ಇಲ್ಲಿವೆ. 


ಅಮ್ಮ ಲವಲವಿಕೆಯಿಂದ ಇರುತ್ತಿದ್ದುದಷ್ಟನ್ನೇ ಹೇಳಿದ್ದ ಲೇಖಕರು ಅವರ ನೋವಿನ ಬಗ್ಗೆ ತಿಳಿಸುವಾಗ ಮನಸ್ಸು ಅರ್ದ್ರವಾಗುತ್ತದೆ. ಅದರಲ್ಲೂ ಶನಿವಾರ ರಾತ್ರಿಯ ಅಸಹನೀಯ ನೋವು ಕಾಡುತ್ತದೆ.


ಉಳಿದ ಪುಸ್ತಕಗಳಲ್ಲಿ ಅಮ್ಮನ ಕೊನೆಯ ದಿನಗಳು ಸೂಚ್ಯವಾಗಿ ಹೇಳಲ್ಪಟ್ಟಿವೆ. ಆದರೆ, ಇಲ್ಲಿ ಅಮ್ಮ ಎಂದಾದರೂ ಅಷ್ಟು ಬೇಗ ಮಕ್ಕಳಿಂದ ದೂರ ಹೋದಾಳಾ..??  ಎನ್ನುತ್ತಾ ಅಮ್ಮ ಸಾವನ್ನು ಗೆದ್ದು ಬಂದ ಪರಿಯನ್ನು ಹೇಳಿದ್ದಾರೆ. ಡಾಕ್ಟರ್ ಒಬ್ಬರು ದೇವರ ರೂಪದಲ್ಲಿ ಬಂದು ಅಮ್ಮನನ್ನು ಬದುಕಿಸಿದ ಪ್ರಸಂಗವಿದೆಯಾದರೂ.. ಅಮ್ಮ ನಂಬಿಕೆಯಿಂದ ಸಣ್ಣಗೆ ಹೇಳುತ್ತಿದ್ದ ಮೃತ್ಯುಂಜಯ ಮಂತ್ರದ ಕುರಿತು ಕೇಳಿದಾಗ ರೋಮಾಂಚನವಾಗುತ್ತದೆ. ನಂಬಿಕೆಯೇ ಬದುಕು ಎನ್ನುವ ಸತ್ಯದರ್ಶನವೂ ಆಗುತ್ತದೆ.


'ಮತ್ತೆ ಮಗುವಾಗಬೇಕು' ಎಂಬ ಆಸೆಯನ್ನು ಕವನದ ರೂಪದಲ್ಲಿ ಹೇಳುತ್ತಾ.. 'ನಕ್ಷತ್ರಗಳನ್ನು ಹಾಸಿದವಳು' ಎನ್ನುತ್ತಾ ಅಮ್ಮನನ್ನು ಕವಿತೆಯಾಗಿಯೂ ನೆನೆಯುತ್ತಾರೆ. ಅಮ್ಮನ ಕವಿತೆಗಳ ಓದು ಆಪ್ತವೆನ್ನಿಸುವಂತೆ ಮಾಡುತ್ತಾರೆ.


ಕಾಡಿನಲ್ಲಿ ಕಳೆದುಹೋಗದಂತೆ, ಅಲ್ಲಿನ ಸರ್ಪಗಳಿಗೆ ಬೆದರದಂತೆ, ಕವಲುದಾರಿಗಳನ್ನು ಪರಿಚಯ ಮಾಡಿ ಕೊಡುವ ಅಮ್ಮ ಪರಿಸರವನ್ನು ಮಕ್ಕಳಿಗೆ ಸೂಕ್ಷ್ಮವಾಗಿ ಅರ್ಥ ಮಾಡಿಸಿರುವ ಪರಿ ಕಂಡಾಗ ನನ್ನಮ್ಮ ಹೇಳಿದ ಬಡತನದ ಕತೆಗಳನ್ನು ಹಂಚಿಕೊಂಡ ಜೋಗಿಯವರ 'ನಾನು ಬಡವ, ನಾನೇ ಸುಖಿ' ಕೂಡಾ ನೆನಪಾಯಿತು.


ಅಮ್ಮನನ್ನು ಹಲಸಿನಹಣ್ಣಿಗೆ ಹೋಲಿಸುತ್ತಾ.. ಮಾಗಿದ ಮಗನೊಬ್ಬ ಹಣ್ಣು ಕುರಿತು ಬರೆದುಕೊಂಡ ಅಮ್ಮನ ಚರಿತೆ ಎನ್ನುತ್ತಾರೆ. 


ತಾವು ಕಂಡ ತಮ್ಮ ಅಮ್ಮ ಶಾರದಮ್ಮನನ್ನು.. ಬಡತನದ ಬದುಕನ್ನು ಹಾಗೂ ಅದರ ಸವಿಯನ್ನು ಸಿಹಿಯಾಗಿಯೇ ಉಣಬಡಿಸುತ್ತಾರೆ. ನಡೆಯಲು ಕಲಿಸಿದ ಅಮ್ಮನಂತೆಯೇ ಸೋಲುವುದನ್ನು ಕಲಿಸಿದ ಅಮ್ಮ ಕಾಣುತ್ತಾರೆ. 


ಹಳ್ಳಿಯ ಬದುಕಿನ ಸಾರ್ವತ್ರಿಕ ಅಮ್ಮಂದಿರ ಒಂದು ಕಾಮನ್ ಅಂಶವೆಂದರೆ ತರಕಾರಿ ಕೊಂಡು ತರುವುದು ಕಡಿಮೆಯೇ.. ಅಮ್ಮ ಯಾವತ್ತೂ ತರಕಾರಿ ಕೊಂಡು ತಂದದ್ದೇ ಇಲ್ಲವೆಂದು ಹೇಳುವಾಗ ಸಣ್ಣ ಸಣ್ಣ ಸಂಗತಿಗಳು ಅಮ್ಮಂದಿರಿಗೆ ಪರಿಸರದ ಮೂಲಕವೇ ದಕ್ಕಿದ್ದವೇನೋ ಎನ್ನುವ ಅಚ್ಚರಿಯಾಗುತ್ತದೆ. 


'ಬಾಲ್ಯದಲ್ಲಿ ಅಮ್ಮ ಹೇಳಿದಾಗ ವಿರೋಧಿಸಿದಂಥ ಎಷ್ಟೋ ಸಂಗತಿಗಳನ್ನು ನಾನೇ ಹೇಳುತ್ತಿರುವುದು ಕೂಡಾ ನನ್ನನ್ನು ಅಚ್ಚರಿಗೊಳಿಸುತ್ತಿದೆ' ಎನ್ನುವ ಲೇಖಕರು ಮೊಂಡಾಟದ, ವಿರೋಧಿಸಿದ ಮಕ್ಕಳು ಅಮ್ಮನ ಪಥದಲ್ಲಿ ಹಾದುಹೋಗುವ ಸಹಜತೆಯನ್ನು ತೋರುತ್ತಾರೆ. 


ಅವ್ವನಿಂದ ಅಮ್ಮ ರೂಪಾಂತರಗೊಂಡ ಬಗೆ ಹೀಗೆಯೇ ಮುಂದುವರಿಯುತ್ತಾ ಹೋಗಬಹುದು. ಆದರೆ, ನಮ್ಮ ಬದುಕಿನಲ್ಲಿ ಎಷ್ಟೋ ಬಾರಿ ನಮ್ಮ ಅಮ್ಮಂದಿರಿಗೂ.. ಗೆಳೆಯರ ಅಮ್ಮಂದಿರಿಗೂ ಇರುವ ಸಾಮ್ಯತೆಯ ಬದಲಾಗಿ ವೈರುಧ್ಯವೇ ಕಂಡಿರಬಹುದು. ಅದು ವಯಸ್ಸಿನ ಪ್ರಭಾವವೂ ಆಗಿರಬಹುದು. ಮಾಗಿದ ನಂತರ ಅಮ್ಮಂದಿರ ಸಾರ್ವತ್ರಿಕ ರೂಪ ಕಾಣುತ್ತಾ ಹೋಗುತ್ತದೆ. ಅಮ್ಮ ಎಲ್ಲರನ್ನೂ ತನ್ನ ಮಕ್ಕಳಂತೆ ಪ್ರೀತಿಸುವ ಪರಿ ಕಾಣುವಾಗ.. ಎಲ್ಲಾ ತಾಯಂದಿರೂ ಅಮ್ಮನಾಗಿಯೇ ಕಾಣುತ್ತಾ ಹೋಗುತ್ತಾರೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ