ಪುಸ್ತಕದ ಶೀರ್ಷಿಕೆ : ಬೆಳಕಿನತ್ತ
ಲೇಖಕರು : ಚಿತ್ರಲೇಖ
ಪ್ರಕಾಶಕರು : ಸುಧಾ ಶಿಶು ಸಾಹಿತ್ಯಮಾಲೆ
ಪ್ರಥಮ ಮುದ್ರಣ : 2000
ಓ ನನ್ನ ಲಹರಿ ಕಾದಂಬರಿಯಲ್ಲಿ ಇರುವ ಮತ್ತೊಂದು ಕಾದಂಬರಿ 'ಬೆಳಕಿನತ್ತ'.
ದಿನೇಶ್ ಬಾಬುರವರು ಖಾಸಗಿ ಕಾರ್ಖಾನೆಯೊಂದರಲ್ಲಿ ಸಾಧಾರಣ ನೌಕರರಾಗಿದ್ದವರು. ಅವರ ವಿವಾಹ ರಂಗವಲ್ಲಿಯವರೊಂದಿಗೆ ನಡೆದಿತ್ತು. ಆಕೆ ಅವರ ಕುಟುಂಬದ ಏಕೈಕ ಮಗಳಾಗಿದ್ದರಿಂದ ಅಲ್ಪಸ್ವಲ್ಪ ಆಸ್ತಿಯೊಂದಿಗೆ ಇವರ ಮನೆ ಸೇರಿದ್ದ ಕಾರಣ ಇವರಿಗೆ ಅನುಕೂಲವೂ ಆಯಿತು. ತಂಗಿಯ ವಿವಾಹದ ನಂತರ, ತಾಯಿಯೂ ನಿಧನರಾದ ಮೇಲೆ ಚಿಕ್ಕ-ಚೊಕ್ಕ ಸಂಸಾರದಂತೆ ಪತಿ-ಪತ್ನಿಯರು ಅರಿತು ನಡೆಯುತ್ತಿದ್ದರು. ಒಬ್ಬಳೇ ಮಗಳಾಗಿ ಮುದ್ದಾಗಿ ಬೆಳೆದಿದ್ದ ರಂಗವಲ್ಲಿಯ ಮುಂಗೋಪವು ದಿನೇಶ್ ಬಾಬುರವರ ಸಹವಾಸದಲ್ಲಿ ಮಾಯವಾಗಿತ್ತು. ಇಂತಹಾ ಅನ್ಯೋನ್ಯ ದಂಪತಿಗಳ ಮೊದಲ ಮಗಳೇ ಅಕ್ಷತಾ. ಗಂಡು ಮಗುವಾಗಬೇಕೆಂಬ ಆಸೆ ಇದ್ದರೂ.. ಅಕ್ಷತಾಳನ್ನೇ ಮುದ್ದಿನಿಂದ ಬೆಳೆಸುತ್ತಿದ್ದರು ದಂಪತಿಗಳು. ಅದಾದ 10 ವರ್ಷದ ನಂತರ ಹುಟ್ಟಿದವರು ಅವಳಿ ಮಕ್ಕಳು ಅರ್ಚಿತಾ ಹಾಗೂ ಪೂಜಿತಾ.
ತನ್ನ ಇಬ್ಬರು ತಂಗಿಯರನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು ಅಕ್ಷತಾ. ಮೊದಲು ಹುಟ್ಟಿದ ಅರ್ಚಿತಾ ತೀರ ಮೃದು ಸ್ವಭಾವದವಳು. ಸಣ್ಣ ನೋವನ್ನು ತಡೆದುಕೊಳ್ಳುತ್ತಿರಲಿಲ್ಲ. ಮನಸ್ಸಿನಲ್ಲಿ ಕೊರಗುತ್ತಿದ್ದ ಅಂತರ್ಮುಖಿಯಂತವಳು. ಅವಳ ಸೂಕ್ಷ್ಮತೆ ಯನ್ನು ಅರ್ಥ ಮಾಡಿಕೊಂಡು ಎಲ್ಲರೂ ಕಾಳಜಿ ಮಾಡುತ್ತಿದ್ದರು. ಪೂಜಿತಾ ಅವಳ ವಿರುದ್ಧ ಸ್ವಭಾವದವಳೆಂದರೂ ತಪ್ಪಾಗಲಾರದು. ಆಟ-ಪಾಠದಲ್ಲಿ ಮುಂದಿದ್ದವಳು. ಆರೋಗ್ಯವೂ ಚೆನ್ನಾಗಿತ್ತು. ಮನಸ್ಸು ಅಷ್ಟೇ ಗಟ್ಟಿ. ಮುಖದಲ್ಲಿ ಸಾಮ್ಯತೆ ಇದ್ದರೂ ಸ್ವಭಾವ ಭಿನ್ನವಾಗಿತ್ತು.
ಅಕ್ಷತಾಳಿಗೆ ಶಿಕ್ಷಕಿ ಆಗುವ ಆಸೆ ಹೆಚ್ಚಾಗಿದ್ದರೂ.. ತಂದೆ ತನ್ನ ಸರ್ವಿಸಿನಲ್ಲಿ ಇವಳ ವಿವಾಹ ಮಾಡುವ ಆಸೆ ಇಟ್ಟುಕೊಂಡಿದ್ದರಿಂದ, ಹಿರಿಯರಿಗೆ ಎದುರಾಡದೆ ಅವರ ತಂದೆಯ ಗೆಳೆಯರೊಬ್ಬರ ನೆಂಟರು ಕಳುಹಿಸಿದ್ದ ಜಾತಕವನ್ನು ನೋಡಿ ಮೆಚ್ಚಿದವರ ವಧುಪರೀಕ್ಷೆಗೆ ಸಿದ್ಧಳಾದಳು. ಆತ ಬೊಂಬಾಯಿಯಲ್ಲಿ ಬ್ಯಾಂಕ್ ಕೆಲಸದಲ್ಲಿದ್ದ. ವಿಮಲಾಬಾಯಿ ಹಾಗೂ ಗೋಪಾಲ್ ರಾವ್ ಅವರ ಏಕೈಕ ದತ್ತು ಪುತ್ರ. ಮದುವೆಯಾದ ಹೊಸತರಲ್ಲಿ ಕಟ್ಟಡ ನಿರ್ಮಾಣದ ಪ್ರಗತಿ ಕಾರ್ಯ ನೋಡಲು ಹೋಗಿ ಉಂಟಾದ ಅಪಘಾತದಿಂದ ಗೋಪಾಲ್ ರಾವ್ ಅವರಿಗೆ ಮಗುವಾಗದು ಎಂದು ತಿಳಿದ ಮೇಲೆ ವಿಮಲಾಬಾಯಿಯವರು "ಜೀವ ಉಳಿದದ್ದೇ ಸಾಕು. ಮಗುವನ್ನು ದತ್ತು ಪಡೆಯೋಣ" ಎಂದು ಅನಾಥಾಶ್ರಮದಿಂದ ಆರೋಗ್ಯವಂತ ಕೂಸು ನಿಶ್ಚಲ್ ನನ್ನು ತಂದು ಸಾಕತೊಡಗಿದರು. ದತ್ತು ಮಗನಿಂದ ಅವರು ಯಾವ ರಹಸ್ಯವನ್ನೂ ಮರೆಮಾಚಿರಲಿಲ್ಲ. ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದವರನ್ನು ತನ್ನ ಹೆತ್ತ ತಾಯಿ-ತಂದೆಯರಂತೆ ನೋಡಿಕೊಳ್ಳುತ್ತಿದ್ದ ನಿಶ್ಚಲ್.
ಇಂತಹಾ ಇಬ್ಬರೂ ಸದ್ಗುಣಿಗಳ ಜಾತಕ ಕೂಡಿ ಬಂದು ಇಬ್ಬರ ವಿವಾಹವೂ ಆಯಿತು. ದೇವರಂತಹಾ ಅತ್ತೆ-ಮಾವ ಅವಳ ಪಾಲಿಗೆ ಅಪ್ಪ-ಅಮ್ಮನೇ ಆಗಿ ಹೋಗಿದ್ದರು. ಎಲ್ಲವೂ ಇದ್ದರೂ ಹೆಣ್ಣುಮಕ್ಕಳಿಗೆ ತವರಿನ ಕೊರತೆಯೊಂದು ಕಾಡುತ್ತಿರುತ್ತದೆ. ಅದರಲ್ಲೂ ಅರ್ಚಿತ ತನ್ನನ್ನೇ ನೆಚ್ಚಿಕೊಂಡಿರುವ ವಿಚಾರ ಮನಸ್ಸಿಗೆ ಬಂದಾಗಲಂತೂ ಅಕ್ಷತಾ ಖಿನ್ನಳಾಗುತ್ತಿದ್ದಳು. ಆದರೆ, ನಿಶ್ಚಲ್ ಸಂತೈಸಿ ಧೈರ್ಯ ತುಂಬುತ್ತಿದ್ದ.
ಈಗ ಅಕ್ಷತಾಳ ಬಾಳಲ್ಲಿಯೂ ವಸಂತಕಾಲ. ಆಕೆ ಗರ್ಭಿಣಿಯಾದ ವಿಚಾರ ತಿಳಿದು ಎಲ್ಲರೂ ಸಂತಸದಲ್ಲಿದ್ದರು. ಮುಂಬೈಯಿಂದ ಅವಳನ್ನು ಇಲ್ಲಿಗೆ ಕರೆತರುವುದು ಸರಿಯಲ್ಲವೆಂದು ಎಲ್ಲರೂ ಅಲ್ಲಿಗೆ ಹೊರಟಿದ್ದರು. ಬಳೆ ತೊಡಿಸುವ ಶಾಸ್ತ್ರ ಅಡ್ಡಿ ಇಲ್ಲದಂತೆ ಮುಗಿದಿತ್ತು. ನಿಶ್ಚಲ್ ಕಡ್ಡಿಯಂತೆ ಸುರಗಿದ್ದು ದಿನೇಶ್ ಬಾಬು ದಂಪತಿಗಳಿಗೆ ಆತಂಕ ತಂದರೂ.. ಕೆಲಸದ ಒತ್ತಡ ಎಂಬ ಅವನ ಉತ್ತರಕ್ಕೆ ಸುಮ್ಮನಾಗಿದ್ದರು.
ಅಕ್ಷತಾ ಬಳಲಿ ಸುಸ್ತಾದಂತಾದಾಗ ಬೀಗತಿಯರಿಬ್ಬರು ಡಾಕ್ಟರ್ ಬಳಿಗೆ ಕರೆದೊಯ್ದರು. ಅದಾದ ನಂತರ ನಿರೀಕ್ಷೆಯನ್ನು ಮೀರಿ ಬಚ್ಚಲಿನಲ್ಲಿ ಜಾರಿ ಬಿದ್ದ ಅಕ್ಷತಾ ಆಸ್ಪತ್ರೆ ಸೇರಿದಳು. ಮಗುವನ್ನು ಕಳೆದುಕೊಂಡವಳು ಅದಕ್ಕೆ ಕಾರಣವನ್ನು ತಿಳಿದಾಗ ಉನ್ಮಾದಗೊಂಡವಳಂತೆ ವರ್ತಿಸಿದಳು. ನಂತರ ಆಕೆ ಉಳಿಯಲಿಲ್ಲ. ಅವಳನ್ನು ಕಳೆದುಕೊಂಡ ನಂತರ ಅರ್ಚಿತಾ ಅದನ್ನು ಮನಸ್ಸಿಗೆ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಳು.
ಎಲ್ಲವೂ ಕತ್ತಲಿನತ್ತಲೇ ಸಾಗುತ್ತಿರುವ ಈ ಕಾದಂಬರಿಯಲ್ಲಿ 'ಬೆಳಕಿನತ್ತ' ಎಂಬ ಶೀರ್ಷಿಕೆ ಹಿರಿದರ್ಥವನ್ನೇ ದ್ವನಿಸುತ್ತದೆ. ಅಕ್ಷತಾ ಹೋದ ನಂತರ ನಿಶ್ಚಲ್ ಪರಿಸ್ಥಿತಿ ಏನಾಯಿತು..? ಅಕ್ಷತಾಳಿಗೆ ತಿಳಿದ ಸತ್ಯವೇನು..? ನಿಶ್ಚಲ್ ಪಾಲಿಗೆ ಬದುಕು ಕರಾಳವಾದದ್ದು ಏಕೆ..? ಅರ್ಚಿತಾಳನ್ನು ಕಳೆದುಕೊಂಡ ನಂತರ ದಿನೇಶ್ ಬಾಬು ದಂಪತಿಗಳು ಪೂಜಿತಾಳನ್ನು ಬೆಳಕಿನತ್ತ ನಡೆಸಲು ತೆಗೆದುಕೊಂಡ ತೀರ್ಮಾನವೇನು..? ವಿಮಲಾಬಾಯಿ ದಂಪತಿಗಳು ತೆಗೆದುಕೊಂಡ ನಿರ್ಧಾರವೇನು..?
ಮನುಷ್ಯ ತನ್ನ ಜೀವನದಲ್ಲಿ ಇಡುವ ಒಂದು ತಪ್ಪು ಹೆಜ್ಜೆ ಮತ್ತೊಬ್ಬರ ಬದುಕಲ್ಲಿ ಅದೆಷ್ಟು ದೊಡ್ಡ ಪರಿಣಾಮವನ್ನು ಮಾಡಿಬಿಡುತ್ತದೆ ಎನ್ನುವ ಕರಾಳ ಘಟನೆಯೊಂದು ಇದರ ಹಿಂದಿದೆ. ಕತ್ತಲಿನಿಂದ ಬೆಳಕಿಗೆ ಬರುವ ಹಾದಿ ಸುಲಭವಲ್ಲ. ಅದಕ್ಕೆ ಬಹಳಷ್ಟು ಅಂತಃಸತ್ವ ಹಾಗೂ ಆತ್ಮವಿಶ್ವಾಸ ಬೇಕಾಗುತ್ತದೆ. ಈ ಕಾದಂಬರಿ ನೋವನ್ನು ನೀರಿ ನಿಲ್ಲುವ ಬಗೆಯನ್ನು ಹೇಳುತ್ತಾ.. ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಕತ್ತಲಿನಲ್ಲಿದ್ದವರಿಗೆ ಬೆಳಕಿನ ಹಾದಿ ತೋರುತ್ತದೆ ಈ ಕಾದಂಬರಿ. ಚಂದದ ಸಂದೇಶ ಕೊಡುವ ಸುಂದರ ಕಾದಂಬರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ