ಪುಸ್ತಕದ ಶೀರ್ಷಿಕೆ : ಜಿಲೇಬಿ
ಲೇಖಕರು : ರಂಗರಾಜ್ ಚಕ್ರವರ್ತಿ
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಪ್ರಥಮ ಮುದ್ರಣ : 2018
ಪುಟಗಳು : 112
ಬೆಲೆ : 100 ರೂ.
ಲೇಖಕರಾದ ರಂಗರಾಜ್ ಚಕ್ರವರ್ತಿ ಅವರು ಬೆಂಗಳೂರು ಮೂಲದವರಾಗಿದ್ದು ಇಂಜಿನಿಯರಿಂಗ್ ಪದವೀಧರರು. ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿಯೂ ಸ್ನಾತಕೋತ್ತರ ಪದವಿ ಪಡೆದದ್ದು.. ಬಿಜಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಬರವಣಿಗೆ ಇವರ ಹವ್ಯಾಸ. ಇವರ ಮೊದಲ ಪುಸ್ತಕ 'ಕಾಫಿ ಬ್ರೇಕ್'. 'ಜಿಲೇಬಿ' ಅವರ ಎರಡನೇ ಪುಸ್ತಕ. ಇದು ನಾನು ಓದಿದ ಈ ಲೇಖಕರ ಮೊದಲ ಪುಸ್ತಕ
ಜಿಲೇಬಿ ಎಂಬ ಶೀರ್ಷಿಕೆಯ ಜೊತೆಗೆ ಅನುಭವದ ಅಡುಗೆ ಮನೆಯಿಂದ ಎಂಬ ಅಡಿ ಬರಹವಿದೆ. ಇಲ್ಲಿನ ಲೇಖನಗಳಲ್ಲಿ ಉಪದೇಶದ ಬದಲಾಗಿ ಹಲವಾರು ಮಾತುಗಳನ್ನು ಉಲ್ಲೇಖಿಸುತ್ತಲೇ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಈ ಅನುಭವಗಳು ಕೇವಲ ಜೀವನಾನುಭವವಲ್ಲ. ಆ ಕಥೆಯನ್ನು ಓದದಿದ್ದರೆ ಅವರ ನಡೆ ಬೇರೆಯೇ ಇರುತ್ತಿತ್ತು ಎಂದೆನಿಸಿದ, ಕತೆಗಳ ಒಳನೋಟದಿಂದ ದಕ್ಕಿದ ಅನುಭವದಿಂದ ತಾವು ಬದಲಾಯಿಸಿಕೊಂಡ ನಡವಳಿಕೆಗಳನ್ನು ಹೇಳುತ್ತಾ ಆ ಕಥೆಗಳನ್ನು ಉಲ್ಲೇಖಿಸಿದ್ದಾರೆ. ಆ ಮೂಲಕ ಜೀವನದ ಸರಳ ಪಾಠ ಹೇಳುತ್ತಾರೆ. ಅದರಲ್ಲಿ ನನಗಿಷ್ಟವಾದ ಕೆಲವನ್ನು ಇಲ್ಲಿ ಪುಟ್ಟದಾಗಿ ಹೋಗುತ್ತೇನೆ. ಈ ಪುಸ್ತಕದಲ್ಲಿ ಇಂತಹಾ 24 ಲೇಖನಗಳು ಚೆಂದದ ಶೀರ್ಷಿಕೆಗಳಿಂದ ಸೆಳೆಯುತ್ತವೆ.
ಮಗಳ ಸಮೋಸಾದ ಬೇಡಿಕೆಯನ್ನು ಈಡೇರಿಸಲು ಬೇಕರಿಯ ಒಳ ಹೊಕ್ಕಾಗ ಅಲ್ಲಿ ಆಸೆ ಕಣ್ಣುಗಳಿಂದ ಮೂರು ಜಿಲೇಬಿಗಳಿಗಾಗಿ ಆಶಿಸುತ್ತಿದ್ದ ಹುಡುಗಿಯ ಬಳಿಯಲ್ಲಿ ಅಷ್ಟು ದುಡ್ಡಿರಲಿಲ್ಲ. ಎರಡು ಜಿಲೇಬಿಗಾಗುವಷ್ಟಿತ್ತು. ಆಗ ತಮ್ಮ ಬಳಿ ಜೇಬಿನಲ್ಲಿ ಉಳಿಸಿಕೊಳ್ಳುವ ದುಡ್ಡಿಗಿಂತ ಆ ಮಗುವಿನ ಖುಷಿ ದೊಡ್ಡದೆಂದು.. ಜಿಲೇಬಿ ಕೊಡಿಸಿ ಸಿಹಿ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಯಾರಿಗಾದರೂ ಏನನ್ನಾದರೂ ಕೊಡಬೇಕೆಂದನಿಸಿದಲ್ಲಿ ಸಮಯ ಹಾಳು ಮಾಡದೆ ಮೊದಲು ಆ ಕೆಲಸ ಮಾಡಿ. ನಿಮಗೆ ಸಣ್ಣ ವಿಷಯವಿರಬಹುದು ಆದರೆ ಅವರಿಗೆ ದೊಡ್ಡದು ಎಂಬ ಅನುಭವದ ಪಾಠ ಹೇಳುತ್ತಾರೆ.
ಝೆನ್ ಕಥೆಯೊಂದನ್ನು ಉಲ್ಲೇಖಿಸಿ.. ನದಿಯೊಂದರಲ್ಲಿ ಸಂಜೆಯ ತಂಗಾಳಿಯ ಆಹ್ಲಾದದಲ್ಲಿ ಮೈಮರೆತಿದ್ದಾಗ ತನ್ನತ್ತ ದೋಣಿ ಎಂದು ಬರುತ್ತಿರುವುದನ್ನು ಗಮನಿಸಿ, ಅದು ನಿಲ್ಲುವ ಸಾಧ್ಯತೆ ಇಲ್ಲವೆಂಬುದನ್ನು ಅರ್ಥ ಮಾಡಿಕೊಂಡು ಕೂಗಲು ಆರಂಭಿಸಿದರಾದರೂ.. ದೋಣಿಯಲ್ಲಿ ಯಾವ ಬದಲಾವಣೆಯು ಆಗದೆ, ಆ ದೋಣಿ ಇನ್ನೂ ವೇಗವಾಗಿ ಅವರತ್ತಲೇ ಬಂದು ಅಪ್ಪಳಿಸಿಯೇ ಬಿಟ್ಟಿತು. ಆಗ ಅರ್ಥವಾದದ್ದು ಅದು ಖಾಲಿ ದೋಣಿ ಎಂದು. ಬದುಕಿನಲ್ಲಿಯೂ ಇಂತಹ ಖಾಲಿ ದೋಣಿಗಳು ಬಹಳಷ್ಟು ಬರುತ್ತವೆ. ನಾವು ನಿಯಂತ್ರಿಸಲಾಗದ ಇಂತಹಾ ಖಾಲಿ ದೋಣಿಗಳನ್ನು ನಿರ್ಲಕ್ಷಿಸಬೇಕು ಹಾಗೂ ಅವುಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂಬುದೇ ಇದರಿಂದ ಕಲಿತ ಪಾಠವೆಂದು ಹೇಳುತ್ತಾರೆ.
ಈ ಖಾಲಿ ದೋಣಿಯ ಕಥೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬಲ್ಲರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಇದು ನಿಮ್ಮಲ್ಲಿ ಅನುರಣನಗೊಳ್ಳದೇ ಇದ್ದಲ್ಲಿ, ನಿಮ್ಮದೇ ಆದ ಕಥೆಯೊಂದನ್ನು ಹುಡುಕಿಕೊಳ್ಳಿ. ಮಾನಸಿಕ ಒತ್ತಡ, ಸಿಟ್ಟು ಹಾಗೂ ಹತಾಶೆಗಳನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮದಾದ ಅತ್ಯುತ್ತಮ ಹಾದಿ ಯಾವುದು ಎಂಬುದನ್ನು ಪತ್ತೆ ಮಾಡಿಕೊಳ್ಳಿ ಎನ್ನುತ್ತಾರೆ. ನಾವು ಬದುಕಿಗೆ ಅಳವಡಿಸಿಕೊಳ್ಳುವ ಇಂತಹಾ ಕಥೆಗಳನ್ನು ಕೇವಲ ಓದಿದರೆ ಸಾಲದು. ಬದಲಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಕಸ್ಮಾತ್ ಆ ಕಥೆ ನಮ್ಮದಲ್ಲ ಎನಿಸಿದರೆ, ನಮ್ಮ ಕಥೆಯನ್ನು ಹುಡುಕಿಕೊಳ್ಳುವ ಅವಶ್ಯಕತೆಯೂ ಇದೆ ಎಂದೆನಿಸಿತು.
ಹತ್ತು ವರ್ಷದ ಹಿಂದೆ ಲೇಖಕರು ಹಾಗೂ ಅವರ ಸ್ನೇಹಿತರು 30 ಮಕ್ಕಳಿರುವ ಅನಾಥಾಶ್ರಮಕ್ಕೆ ಊಟದ ಪ್ರಾಯೋಜಕತ್ವ ನೀಡಲು ನಿರ್ಧರಿಸಿ ಅಲ್ಲಿಗೆ ತಲುಪಿದಾಗ ಅಲ್ಲೊಂದು ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿತ್ತು. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಮಗು ಬಹಳ ಸಂತೋಷದಿಂದಿತ್ತು. ಆದರೆ, ಆ ಮಗುವಿಗಿಂತ.. ಅನಾಥಾಶ್ರಮದ ಮಕ್ಕಳ ಭಾವವನ್ನು ಹಿಡಿದಿಟ್ಟಿದ್ದಾರೆ. ಅವರು ಪ್ರತಿ ವಾರಾಂತ್ಯದಲ್ಲಿ ಹಾಡುವಂತೆ, ಯಾವುದೇ ಭಾವನೆ ಇಲ್ಲದೆ ಹಾಡುತ್ತಾರೆ. ಫೋಟೋ ತೆಗೆಯುವವರಿಗೆ ಕೃತಕ ನಗುವಿನ ಮೂಲಕ ಪೋಸ್ ಕೊಡುತ್ತಾರೆ ಎನ್ನುವ ಮಾತು ಮನಕಲಕುತ್ತದೆ.
ಹುಟ್ಟುಹಬ್ಬವನ್ನು ಅವರೊಂದಿಗೆ ಆಚರಿಸುವ ಬದಲು, ಯಾಕೆ ನೀವು ಅವರ ಹುಟ್ಟುಹಬ್ಬವನ್ನು ಆಚರಿಸಬಾರದು..? ಎಂಬ ಲೇಖಕರ ಪ್ರಶ್ನೆ ಆಲೋಚನೆಗೆ ಹಚ್ಚುತ್ತದೆ. ಇಂತಹಾ ಬದಲಾವಣೆಯೊಂದು ಖಂಡಿತವಾಗಿಯೂ ಬೇಕಾಗಿದೆ. ನಮ್ಮ ಉದ್ದೇಶಗಳು ನಮ್ಮ ಮಕ್ಕಳು ಕರುಣೆ ಬೆಳೆಸಿಕೊಳ್ಳಲಿ ಎಂದಿದ್ದರೂ.. ಮಕ್ಕಳಿಗೆ ಅದು ಅಪ್ಯಾಯಮಾನವಾಗಬೇಕಿಲ್ಲ ಎಂಬ ಸತ್ಯವನ್ನು ಹೊರಗೆಡಹುತ್ತಾರೆ. ಇದನ್ನು ಹೇಳಿದ ಬಗೆ ಜಿಲೇಬಿಯಂತೆ ಸಿಹಿ ಎನ್ನಿಸಿದರೂ ಅರಗಿಸಕೊಳ್ಳಬೇಕಾದ ಕಹಿ ಸತ್ಯವಿದು.
ಡಾಕ್ಟರ್ ರಾಜಕುಮಾರ್ ಹಾಗೂ ಪುಟ್ಟಣ್ಣ ಕಣಗಾಲ್ ರವರ ನಡುವೆ ನಡೆದ ಒಂದು ಸಂದರ್ಭವನ್ನು ಹೇಳುತ್ತಾ.. ರಾಜಕುಮಾರ್ ರವರ ಸಿನಿಮಾವೊಂದರ ಸಂಭಾಷಣೆಯನ್ನು ವಿಮರ್ಶಿಸುತ್ತಾ ಪುಟ್ಟಣ್ಣ ಕಣಗಾಲ್ ರವರು ಆ ಚಿತ್ರೀಕರಣದ ಸಮಯದಲ್ಲಿ ಆ ಸಂಭಾಷಣೆ ಹೇಳುವ ರೀತಿಯನ್ನು ಸರಿಯಾಗಿ ಹೇಳುವಂತೆ ತೀಕ್ಷ್ಣವಾಗಿ ಹೇಳಿ ಮರುದಿನದ ಚಿತ್ರೀಕರಣಕ್ಕೆ ಅವರು ಬಯಸುವಂತೆ, ಸರಿಯಾಗುವಂತೆ ಹೇಳಬೇಕೆಂದರು. ಡಾಕ್ಟರ್ ರಾಜಕುಮಾರ್ ಅದನ್ನು ಧನಾತ್ಮಕವಾಗಿ ತೆಗೆದುಕೊಂಡು ರಾತ್ರಿಯಿಡೀ ಅದನ್ನು ಅಭ್ಯಾಸ ಮಾಡಿ, ಮರುದಿನ ಆ ಅವರಿಗೆ ತೃಪ್ತಿಯಾಗುವಂತೆ ಹೇಳಿದರು.
ಇಲ್ಲಿ ಲೇಖಕರು ಹೇಳಬಯಸಿದ್ದು ಯಾವುದೇ ಟೀಕೆ ಅಥವಾ ವಿಮರ್ಶೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯ ಬದಲಾಗಿ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದೆಂಬುದನ್ನು. ಇದರ ಜೊತೆಗೆ ಯಾರದ್ದಾದರೂ ಟೀಕೆ/ವಿಮರ್ಶೆಗೆ ಪ್ರತಿಕ್ರಿಯಿಸುವುದರ ಬದಲಾಗಿ ಸುಮ್ಮನಾದಾಗ ಟೀಕೆ ಅಥವಾ ವಿಮರ್ಶೆಗಳನ್ನು ತಡೆಯಬಹುದು ಎನ್ನುವ ಮತ್ತೊಂದು ಸಂದೇಶವನ್ನೂ ನೀಡುತ್ತಾರೆ. ಇದು ನಮ್ಮ ಬೆಳವಣಿಗೆಯಲ್ಲಿ ಸಹಕಾರಿಯೂ ಹೌದು.
ಇಲ್ಲಿನ ಲೇಖನಗಳಲ್ಲಿ ಹಲವಾರು ಪ್ರಮುಖ ವ್ಯಕ್ತಿಗಳ ಕೋಟ್ ಗಳಿವೆ. ಮಂಕುತಿಮ್ಮನ ಕಗ್ಗವಿದೆ. ಹಲವಾರು ಮಹಾನ್ ವ್ಯಕ್ತಿಗಳ ಜೀವನದ ನಿದರ್ಶನವಿದೆ. ಅವೆಲ್ಲವನ್ನು ಮೂಲವಾಗಿಟ್ಟುಕೊಂಡು ಲೇಖಕರು ಬರೆದಿರುವ ಸರಳವಾದ ವಿಸ್ತೃತವಾದ ಲೇಖನಗಳು ಮಾರ್ಗದರ್ಶನದಂತಿವೆ. ಇವುಗಳನ್ನು ಓದುತ್ತಾ ಹೋದಂತೆ ಹೊಸ ಹೊಳವು ದಕ್ಕುತ್ತದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಪುಟ್ಟ-ಪುಟ್ಟ ಲೇಖನಗಳಲ್ಲಿ ಕಥೆಗಳಿವೆ. ಅನುಭವಗಳೂ ಇವೆ.
ಹೈಸ್ಕೂಲ್ ಓದುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಜೀವನಾನುಭವ ನೀಡುವ ಲೇಖನಗಳ ಗುಚ್ಛವಿದು. ಹಾಗೆಂದು ಅನುಭವದ ಅಡುಗೆ ಮನೆಯಿಂದ ತಯಾರಾದ ಎಲ್ಲಾ ಜಿಲೇಬಿಗಳು ಒಂದೇ ಸಮನಾದ ಸಿಹಿಯಿವೆ ಎಂದು ಹೇಳಲಾರೆ. ಕೆಲವು ಕಡಿಮೆ ಸಿಹಿ ಇರಬಹುದು ಮತ್ತೆ ಕೆಲವು ಹೆಚ್ಚು ಸಿಹಿ ಇರಬಹುದು ಮತ್ತೆ ಕೆಲವು ಹದವಾಗಿಯೂ ಇರಬಹುದು. ಇಲ್ಲಿ ನನಗೆ ಹೆಚ್ಚು ಮೆಚ್ಚುಗೆಯಾದದ್ದು ಲೇಖಕರ ಸರಳ, ಸುಲಲಿತ ಬರಹದ ಶೈಲಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ