ಶನಿವಾರ, ಏಪ್ರಿಲ್ 18, 2026

ರಾಣಿ ಚನ್ನಮ್ಮ (ಪುಸ್ತಕ ಯಾನ - 237)


ಪುಸ್ತಕದ ಶೀರ್ಷಿಕೆ : ರಾಣಿ ಚನ್ನಮ್ಮ

ಲೇಖಕರು : ಕೊರಟಿ ಶ್ರೀನಿವಾಸರಾವ್

ಪ್ರಕಾಶಕರು : ಪರಿಚಯ ಪ್ರಕಾಶನ

ಪ್ರಥಮ ಮುದ್ರಣ : 1961

ನಾಲ್ಕನೇ ಮುದ್ರಣ : 2019 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 192

ಬೆಲೆ : 140 ರೂ. 


ಕೊರಟಿ ಶ್ರೀನಿವಾಸರಾವ್ ಅವರ ಬರಹದ ಶೈಲಿ ಆಕರ್ಷಕ. ಇತಿಹಾಸವನ್ನು ಕೊಂಚವೂ ಬೋರಾಗದಂತೆ ಹೇಳುವ ಅವರ ಐತಿಹಾಸಿಕ ಕಾದಂಬರಿಗಳು ಓದುಗರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತವೆ. 


ಚನ್ನಮ್ಮ ಎಂಬ ಶೀರ್ಷಿಕೆ ಕಂಡು ಮೊದಲಿಗೆ ಇದು ಕಿತ್ತೂರು ರಾಣಿ ಚೆನ್ನಮ್ಮನ ಕತೆ ಇರಬಹುದು ಎಂದುಕೊಂಡೆನಾದರೂ.. ಇದು ಬಿದನೂರಿನ ರಾಣಿ ಚನ್ನಮ್ಮಾಜಿಯ ಕತೆ. ಹೆಚ್ಚಿನ ಪುಸ್ತಕ ಅಥವಾ ಕತೆಗಳಲ್ಲಿ ಚೆನ್ನಮ್ಮ ಎಂದು ಉಲ್ಲೇಖಿಸಿದ್ದರೂ.. ಇಲ್ಲಿ ಚನ್ನಮ್ಮ ಎಂದೇ ಇರುವುದರಿಂದ ಹಾಗೆಯೇ ಉಲ್ಲೇಖಿಸುತ್ತಾ ಹೋಗುತ್ತೇನೆ. 


ಕನ್ನಡ ನಾಡಿನ ವೀರ ವನಿತೆ ಕೆಳದಿ ಚನ್ನಮ್ಮನೆಂದೇ ಖ್ಯಾತಿ ಪಡೆದು.. ಬಿದನೂರಿನ ಸಿಂಹಾಸನವನ್ನೇರಿ ಅಖಂಡ 25 ವರ್ಷಗಳವರೆಗೂ ರಾಜ್ಯಭಾರ ಮಾಡಿ, ಭರತ ಖಂಡದ ಮತ್ತಾವ ದೊರೆಯೂ ಸೋಲಿಸದೇ ಇದ್ದ ಆಲಂಗೀರ ಔರಂಗಜೇಬನನ್ನು ಸೋಲಿಸಿ, ಆತನಿಂದ ಸನ್ಮಾನಿತಳಾದ ವೀರವನಿತೆ. ಆಕೆಯ ವೀರಾವೇಶ, ಧೈರ್ಯ, ಸಾಹಸಗಳನ್ನು, ಆಳ್ವಿಕೆಯ ಕುರಿತು ಕೇಳಿರುವ ನಮಗೆ ಆಕೆಯ ನಿಜಜೀವನದ ನೋವುಗಳನ್ನೂ ಪರಿಚಯಿಸಿ, ಆಕೆ ಅದೆಲ್ಲವನ್ನೂ ಮೀರಿ ಬೆಳೆದ ಕುರಿತು ಪರಿಚಯಿಸುತ್ತಾರೆ ಕೊರಟಿ ಶ್ರೀನಿವಾಸರಾವ್ ಅವರು.


ಈ ಕಾದಂಬರಿ ರಚನೆಗೆ ಆಕರವಾಗಿರುವ ಕೆಲ ಗ್ರಂಥಗಳ ಕುರಿತು ಸಹಾ ಹೇಳಿದ್ದಾರೆ. 

ಲಿಂಗಣ್ಣ ಕವಿಯ ಕೆಳದಿ ನೃಪವಿಜಯಂ

ಎಂ. ಎಸ್ ಪುಟ್ಟಣ್ಣನವರ ಇಕ್ಕೇರಿ ಸಂಸ್ಥಾನದ ಚರಿತ್ರೆ

ಕೆ. ಡಿ ಸ್ವಾಮಿನಾಥನ್ ಅವರ ಇಕ್ಕೇರಿಯ ನಾಯಕರು

ಹಯವದನರಾಯರ ಮೈಸೂರಿನ ಚರಿತ್ರೆ

ಜಿ. ಪಿ. ರಾಜರತ್ನಮ್ ಅವರ ಬಿದನೂರಿನ ರಾಣಿ ವೀರಮ್ಮಾಜಿ

ಆಸಕ್ತರು ಈ ಕಾದಂಬರಿಯ ಜೊತೆಗೆ ಓದಬಹುದಾಗಿದೆ.


ಇತಿಹಾಸದಲ್ಲಿ ರಾಣಿಯಾಗಿ ಪ್ರಸಿದ್ದಿಯಾಗಿರುವವಳ ಜೀವನದ ಘಟನೆಗಳನ್ನು ತೆರೆದಿಡುತ್ತಾರೆ. ಆದರೆ, ಅದು ಅವಳ ಅಂತರಂಗದ ಮಾತುಗಳಲ್ಲ. ಬದಲಾಗಿ, ಆಪ್ತರೊಬ್ಬರು ಹತ್ತಿರದಿಂದ ರಾಣಿಯನ್ನು ಕಂಡ ಬಗೆ. ಅದಕ್ಕಾಗಿ ರಾಜನ ಹಿನ್ನೆಲೆಯನ್ನು ತಿಳಿಯುವುದು ಸಹಾ ಅವಶ್ಯಕ. ಹಾಗಾಗಿ, ಕಾದಂಬರಿ ಮೊದಲಿಗೆ ಅವರಿಬ್ಬರ ಸಂಭಾಷಣೆಗಳ ಮೂಲಕವೇ ಶುರುವಾಗುತ್ತದೆ.


"ಸ್ಮರಗುಟಕ" ಎನ್ನುವ ದುಷ್ಟ ಮಾದಕ ಪದಾರ್ಥವನ್ನು ಸೇವಿಸಬೇಡಿ. ಅದರಿಂದ ಯಾವ ಪ್ರಯೋಜನವೂ ಇಲ್ಲವೆಂದು ರಾಣಿ ಚನ್ನಮ್ಮ ಪರಿಪರಿಯಾಗಿ ಕೇಳಿಕೊಂಡರೂ ಅದಕ್ಕೆ ಒಪ್ಪದ ರಾಜನನ್ನು ಭರಮೇಮಾವುತನ ಬಿಗಿಮುಷ್ಟಿಯಿಂದ ಬಿಡಿಸುವ ಉಪಾಯವನ್ನು ಆಲೋಚಿಸುತ್ತಿದ್ದಳು ರಾಣಿ. ಭರಮೇಮಾವುತನೆನ್ನುವ ಧೂರ್ತ ವೈದ್ಯನ ಸೋಗು ಹಾಕಿದ್ದಾನೆ ಎನ್ನುತ್ತಾ ಗೋಮುಖ ವ್ಯಾಘ್ರನ ಮುಖವಾಡ ಕಳಚುವ ಪ್ರಯತ್ನದಲ್ಲಿದ್ದ ರಾಣಿಗೆ ಸಿಕ್ಕಿದ್ದು ಕಟು ಮಾತುಗಳ ಭೀಕರ ಆಪಾದನೆ. ನೀನು ಸಿಂಹಾಸನದ ಮೇಲೆ ಕಣ್ಣಿಟ್ಟಿದ್ದೀಯ ಎಂಬ ಘೋರ ಆಪಾದನೆ ಬಂದಿತ್ತು. ಆಕೆ ಸಿಂಹಾಸನಕ್ಕೆ ಮುಂದಿನ ಉತ್ತರಾಧಿಕಾರಿಯಿಲ್ಲದ ಕಾರಣ ದತ್ತು ಪಡೆಯಲು ಯೋಚಿಸಿದ್ದು. 


ರಾಜ ಸೋಮಶೇಖರನಾಯಕ ಇದನ್ನು ವಿರೋಧಿಸುತ್ತಿದ್ದುದ್ದಕ್ಕೆ ಕಾರಣ ಆತನ ತಪ್ಪು ತಿಳುವಳಿಕೆ. ಅದಕ್ಕೆಲ್ಲಾ ಕಾರಣವಾಗಿದ್ದು ಪುಟ್ಟತಾಯಿ ಚನ್ನೆ ಹಾಗೂ ಭರಮೇ ಮಾವುತ. 


ಇದಕ್ಕೂ 8 ವರ್ಷಗಳ ಹಿಂದಿನ ಸೋಮಶೇಖರನಾಯಕ ಹೀಗಿದ್ದ..


ಸೋಮಶೇಖರನಾಯಕನ ತಂದೆ ಶಿವಪ್ಪನಾಯಕನು ರಾಜ್ಯಾಡಳಿತವನ್ನು ಮಕ್ಕಳಿಗೆ ವಹಿಸಿ, ಅವರಿಗೆ ನೆರವಾಗಲು ಮಲಸಹೋದರ ವೆಂಕಟಪ್ಪನಾಯಕನನ್ನು ನೇಮಿಸಿದ್ದನು. ಹಿರಿಯವನಾದ ಭದ್ರಪ್ಪನಾಯಕನಿಗೆ ವಿವಾಹವಾಯಿತಾದರೂ.. ಸೋಮಶೇಖರನಾಯಕ ವಿವಾಹಕ್ಕೆ ಮನಸ್ಸು ಮಾಡದೆ, ವಿರಕ್ತನಂತೆ ಬಾಳುತ್ತಿದ್ದ. ಆಗ ಅಚಾನಕ್ಕಾಗಿ ತೋಟದಲ್ಲಿ ಹೂ ಕೊಯ್ಯಲು ಬಂದಿದ್ದ ಮುಗ್ಧ ಬಾಲಕಿ ಚನ್ನಮ್ಮಾಜಿಗೆ ಮನಸೋತು ವಿವಾಹವಾಗಿದ್ದ. ಆಕೆ ರಾಜಮನೆತನದವಳಲ್ಲವಾದರೂ.. ಬಸಪ್ಪ ಶ್ರೇಷ್ಠಿಯ ಮಗಳಾಗಿದ್ದವಳು ಸೋಮಶೇಖರನಾಯಕನ ಮಡದಿಯಾಗಿದ್ದಳು. ಕೆಲವೇ ತಿಂಗಳಲ್ಲಿ ಭದ್ರಪ್ಪನಾಯಕ ತೀರಿಕೊಂಡು ಸೋಮಶೇಖರನಾಯಕನು ಹಿರೇ ಸೋಮಶೇಖರನಾಯಕನೆಂಬ ಹೆಸರಿನಲ್ಲಿ ಕೆಳದಿಯ ಸಿಂಹಾಸನವನ್ನೇರಿದನು. 20 ರ ತರುಣಿಗೆ ಧರ್ಮದಿಂದ ರಾಜ್ಯಪರಿಪಾಲನೆಯಾಗುವುದನ್ನು ನೋಡಿಕೊಳ್ಳುವ ಮಹತ್ವದ ಹೊಣೆ ಹೆಗಲೇರಿತು. ದಿನೇ ದಿನೇ ಪ್ರಬುದ್ಧಳಾಗುತ್ತಿದ್ದಳು ರಾಣಿ ಚನ್ನಮ್ಮ.


ವಿಜಯೋತ್ಸವದ ಆಚರಣೆಯ ಸಂಧರ್ಭವೊಂದರಲ್ಲಿ ಯೌವ್ವನದ ನರ್ತಕಿ ಪುಟ್ಟತಾಯಿ ಚನ್ನೆಗೆ ಮರುಳಾದ. ಆಕೆ ಜಮಖಂಡಿಯ ದೇವದಾಸಿ ಪುಟ್ಟತಾಯಿಯ ಮಗಳು ಚನ್ನೆ. ಆಕೆಯ ಹಿಂದಿನ ಸೂತ್ರಧಾರ ಭರಮೇ ಮಾವುತ. ರಾಜನ ಕೃಪಾದೃಷ್ಟಿ ಬಿದ್ದು ದೇವದಾಸಿಯಾಗಿದ್ದವಳು ಯಾವ ಮಹಾರಾಣಿಗೂ ಕಡಿಮೆಯಿಲ್ಲದಂತೆ ಸೌಲಭ್ಯವನ್ನು ಗಳಿಸಿಕೊಂಡಳು. ಪುಟ್ಟತಾಯಿ ಮನೆ ಹೆಗ್ಗಡತಿಯೆನಿಸಿಕೊಂಡಳು. ಭರಮೇ ಮಾವುತನು ದೊರೆಯ ಆಪ್ತ ನಮ್ರಸಚಿವನಾದನು. ನಿಧಾನವಾಗಿ ರಾಜ ಅವರತ್ತ ವಾಲತೊಡಗಿದ. ಇದರ ಪರಿಣಾಮ ದೇಹ ರೋಗದ ಗೂಡಾಗಿ ಅಲ್ಲೇ ಉಳಿದ. ಭರಮೇ ಮಾವುತನ ಮಾತುಗಳಿಂದ ತಾನಿನ್ನೂ ಶಕ್ತಿವಂತನಾಗುತ್ತೇನೆಂದು ನಂಬಿಕೊಂಡು, ತನಗೆ ಮಕ್ಕಳಾಗುತ್ತವೆಂದು ಭ್ರಮೆಯಲ್ಲಿ ದತ್ತು ತೆಗೆದುಕೊಳ್ಳಲು ಒಪ್ಪಲಿಲ್ಲ. 


ಚನ್ನಮ್ಮಾಜಿ ತನ್ನ ಶಕ್ತಿ ಮೀರಿ ದೊರೆಯನ್ನು ಅಲ್ಲಿಂದ ಕರೆದೊಯ್ಯಲು ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ. ಅಷ್ಟರಲ್ಲಿ ತನ್ನ ತಂದೆ ಬಸಪ್ಪ ಶ್ರೇಷ್ಠಿಯಿಂದ ಬಂದ ಸುದ್ದಿ ಚನ್ನಮ್ಮಾಜಿಗೆ ಆತಂಕಕಾರಿಯಾಗಿತ್ತು. ಅದು ನಿಜವೂ ಆಗಿತ್ತೆಂದು ನಂತರ ತಿಳಿಯಿತು.


ವೀರಭದ್ರಯ್ಯ ಹಾಗೂ ಕಂದಾಚಾರದ ಲಕ್ಷ್ಮಯ್ಯ ಅಂಧಕ ವೆಂಕಟಪ್ಪನ ಮಗ ಕುತ್ಸಿತ ಶಿವಪ್ಪನಾಯಕನನ್ನು ಸಿಂಹಾಸನದ ಮೇಲೆ ಕೂರಿಸಲು ಯೋಚಿಸುತ್ತಿದ್ದರೆ.. (ಇವರ ಹೆಸರಿನ ಹಿಂದಿನ ಹಿನ್ನೆಲೆಯೂ ಸ್ವಾರಸ್ಯಕರವಾಗಿದೆ. ತಿಳಿಯಲು ಕಾದಂಬರಿ ಓದಿ)

ಪ್ರಧಾನಿ ಕಾಸರಗೂಡು ತಿಮ್ಮಣ್ಣನಾಯಕ ಹಾಗೂ ಸಬ್ಬುನೀಸ ಕೃಷ್ಣಪ್ಪಯ್ಯನವರು ಪ್ರಭುಗಳ ದೂರದ ಸಂಬಂಧಿ ಭದ್ರಯ್ಯನ ಮಗ ವೀರಭದ್ರನಾಯಕನನ್ನು ದತ್ತು ಸ್ವೀಕರಿಸಬೇಕೆನ್ನುತ್ತಿದ್ದರು.

ಆದರೆ, ರಾಣಿ ಇಬ್ಬರಿಗೂ ಅಸಮಾಧಾನವಾಗದಂತೆ ಬಸಪ್ಪನನ್ನು ದತ್ತು ತೆಗೆದುಕೊಳ್ಳಲು ಆಲೋಚಿಸಿದ್ದಳು. 


ಆದರೆ, ರಾಣಿಯ ಈ ಯೋಜನೆಗೆ ಎಲ್ಲೆಡೆಯಿಂದ ಅಸಹಕಾರವಿತ್ತು.. ತನ್ನ ಆಪ್ತ ಬಳಗ, ಆತ್ಮಸಖಿಯಂತಿದ್ದ ಮಲ್ಲಮ್ಮನ ಸಲಹೆಯ ಮೇರೆಗೆ ತಂದೆಯ ಮಾರ್ಗದರ್ಶನದಂತೆ ನಡೆಯಲು ತೀರ್ಮಾನಿಸಿದಳು.


ಭರಮೇ ಮಾವುತನ ಹೆಣ್ಣಿನ ಆಸೆಗೆ ಸೋಮಶೇಖರನಾಯಕನ ಹೆಸರು ಬಳಕೆಯಾಗಿ ದೊಡ್ಡ ಪ್ರಸಂಗವೊಂದು ನಡೆದು ರಾಜನ ಕೊಲೆಯಾಯಿತು. ಆ ಪ್ರಸಂಗವನ್ನು ನೀವೇ ಓದಿ ನೋಡಿ.


ನಂತರ, ಸಿಂಹಾಸನ ಖಾಲಿಯಾಗುತ್ತದೆಂದು ಆಸೆಯಿಂದ ಸಮಯ ಕಾಯ್ದುಕೊಂಡಿದ್ದವರಿಗೆ ಅಚ್ಚರಿಯಾಗುವಂತೆ ತಾನೇ ಅಧಿಕಾರದ ಚುಕ್ಕಾಣಿ ಹಿಡಿದಳು ರಾಣಿ. ನಂತರ, ರಾಜನ ಕಾಲದಲ್ಲಿ ಉಂಟಾಗಿದ್ದ ಆರಾಜಕತೆಯನ್ನೆಲ್ಲಾ ನಿವಾರಿಸಿಕೊಂಡ ಬಗೆ, ಜಾಣ್ಮೆಯಿಂದ ಕಂದಾಯದ ರೀತಿ ರೂಪಿಸಿದ್ದನ್ನು ನೋಡಿ ಅಚ್ಚರಿಯಾಗುತ್ತದೆ. ಅದೆಲ್ಲವೂ ಎಚ್ಚರಿಕೆಯ ನಡೆಗಳು ಹಾಗೂ ಪ್ರಬುದ್ಧ ನಡೆಗಳು. 


ಆದರೆ, ಬಿಜಾಪುರದ ಸುಲ್ತಾನನ ಜೊತೆಯಾದ ದ್ರೋಹಿಗಳು ಅವರ ದಂಡನಾಯಕ ಜೋನೋಪಂಥನನ್ನು ಸಂಧಾನದ ಹೆಸರಿನಲ್ಲಿ ಕಳುಹಿಸಿದರು. ಆದರೆ, ಅಲ್ಲಿಯೂ ಮೋಸವಾಗಿ ರಾಣಿಯ ಪ್ರಾಣಕ್ಕೆ ಕುತ್ತು ಬರುವಂತಾದಾಗ ತಂದೆಯ ಜಾಣ್ಮೆಯಿಂದ ಪಾರಾದಳು ರಾಣಿ. ಹೇಡಿಯಂತೆ ಓಡಿ ಹೋಗಲು ಒಪ್ಪದಿದ್ದರೂ.. ಆ ಸಮಯಕ್ಕೆ ಅದು ಅಗತ್ಯವಿತ್ತು. ನಂತರ ಸಿಂಹಾಸನ ಬೇರೆಯವರ ಪಾಲಾಗಲು ಬಿಡದ ನಿಷ್ಠರು ತಮ್ಮ ಯೋಚನೆಗಳನ್ನು ಬಿಟ್ಟು ರಾಣಿಯ ಜೊತೆಯಾದರು. 


ಭರಮೇ ಮಾವುತ, ಪುಟ್ಟತಾಯಿ ಚನ್ನಿ ಏನಾದರು ? ಈ ಮೇಲಿನ ಪ್ರಸಂಗವಾಗಲು ಯಾರು ಕಾರಣರು ? ಮೈಸೂರಿನ ಒಡೆಯರು ದಂಡೆತ್ತಿ ಬಂದದ್ದೇಕೆ ? ಅದರ ಪರಿಣಾಮವನ್ನು ತಿಳಿಯಲು ಕಾದಂಬರಿ ಓದಿ.


ಮರಾಠಾ ಸಂಸ್ಥಾಪಕರಾದ ಛತ್ರಪತಿ ಶಿವಾಜಿಯವರ ಮಗನಾದ ರಾಜಾರಾಮ ಚನ್ನಮ್ಮನ ಆಶ್ರಯ ಕೇಳಿ ಬಂದಾಗ ಆಸ್ಥಾನದಲ್ಲಿ ಭಿನ್ನಾಭಿಪ್ರಾಯಗಳೆದ್ದವು. ಮೊಗಲರನ್ನು ಎದುರು ಹಾಕಿಕೊಳ್ಳುವ ಮುನ್ನ ಸಾಕಷ್ಟು ಬಲಿಷ್ಠವಾಗಿರಬೇಕು ಎಂದವರೇ ಹೆಚ್ಚು.

ಆಗ ತರೀಕೆರೆಯ ಹನುಮಪ್ಪನ ಪ್ರಸಂಗದಲ್ಲಿ ಸೋಮಶೇಖರನಾಯಕರು ನಡೆದುಕೊಂಡ ರೀತಿಯನ್ನು ಉದಾಹರಿಸಿ, ತಾಯಿ ಚನ್ನಮ್ಮನ ಆಶಯವನ್ನು, ದೇಶಪ್ರೇಮದ ಮೂಲಕ ಸೂಕ್ತ ನಿರ್ಧಾರ ಕೈಗೊಂಡ ಕುಮಾರ ಬಸಪ್ಪನಾಯಕನನ್ನು ಎಲ್ಲರೂ ಬೆಂಬಲಿಸುತ್ತಾರೆ. 


ನಂತರ ನಡೆದದ್ದು ಇತಿಹಾಸದಲ್ಲಿ ಚನ್ನಮ್ಮನನ್ನು ವೀರ ವನಿತೆಯನ್ನಾಗಿಸಿದ ಪ್ರಸಂಗ. 


ಇಲ್ಲಿ ಚನ್ನಮ್ಮನನ್ನು ಆದರ್ಶವಾಗಿರಿಸಿಕೊಂಡ ಪ್ರಜೆಗಳ ಚಿತ್ರಣವಿದೆ. ಚನ್ನಮ್ಮನ ಹಾದಿಯಲ್ಲಿ ನಡೆದ ಮಗನಿದ್ದಾನೆ. ರಾಣಿಯ ಹಿರಿಮೆಯಿಂದ, ಆಕೆಯ ಉದಾತ್ತತೆಯಿಂದ ನಾಡಿಗೆ ಕಷ್ಟ ತಂದೊಡ್ಡಿ ಹಿತಶತ್ರುಗಳ ಹಾಗಿದ್ದವರು ಮಿತ್ರರಾಗಿ ದೇಶವನ್ನು ಕಾಯ್ದರು. ಚನ್ನಮ್ಮನ ಹಿಂದಿದ್ದ ಆಕೆಯ ತಂದೆ ಬಸಪ್ಪ ಶ್ರೇಷ್ಠಿ ಹಾಗೂ ಮಲ್ಲಮ್ಮನ ಪಾತ್ರವೂ ಹಿರಿದು. ತನ್ನ ಸ್ವಂತ ನೋವನ್ನು ಮೀರಿ ದೇಶಕ್ಕೇ ತಾಯಾದ ಪರಿಯನ್ನು ಕಟ್ಟಿಕೊಡುತ್ತಾರೆ ಕೊರಟಿ ಶ್ರೀನಿವಾಸರಾವ್ ಅವರು. ಅವರ ಬರಹದ ಶೈಲಿ ಚರಿತ್ರೆಯನ್ನು ತಿಳಿಸುವುದರ ಜೊತೆಗೆ, ದೇಶಪ್ರೇಮವನ್ನು ಉದ್ದೀಪಿಸುತ್ತದೆ. ಅಲ್ಲದೇ, ಐತಿಹಾಸಿಕ ಕಾದಂಬರಿಗಳಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ