ಶನಿವಾರ, ಏಪ್ರಿಲ್ 18, 2026

ಬಣ್ಣದ ಚುಂಬಕ (ಪುಸ್ತಕ ಯಾನ - 253)


ಪುಸ್ತಕದ ಶೀರ್ಷಿಕೆ : ಬಣ್ಣದ ಚುಂಬಕ

ಲೇಖಕರು : ಸಾಯಿಸುತೆ

ಪ್ರಕಾಶಕರು : ಸುಧಾ ಎಂಟರ್ಪ್ರೈಸಸ್

ಪುಟಗಳು : 212


ಇತ್ತೀಚಿನ ವಿದ್ಯಮಾನಗಳನ್ನು ಗಮನಿಸುತ್ತಿರುವಾಗ ತಟ್ಟನೆ ನೆನಪಾದ ಕಾದಂಬರಿ ಸಾಯಿಸುತೆ ಅಮ್ಮನವರ 'ಬಣ್ಣದ ಚುಂಬಕ'. ವಿಚ್ಛೇದನದ ಸರಿ-ತಪ್ಪು ಮತ್ತೊಬ್ಬರ ಕಣ್ಣಿಗೆ ಕಂಡದಕ್ಕೂ.. ಅದರ ಒಳ-ಹೊರಗೆ ಹೊಕ್ಕು ಬದುಕುತ್ತಿರುವವರಿಗೂ ಇರುವ ಅಲೋಚನೆಗಳಲ್ಲಿ ಬಹಳ ವ್ಯತ್ಯಾಸವಿರುತ್ತದೆ.


ಕೌಟುಂಬಿಕ ಮೌಲ್ಯಗಳನ್ನು ಸಾರುವ ಕಾದಂಬರಿಗಳನ್ನು ಬರೆಯುವ 'ಸಾಯಿಸುತೆ' ಮೇಡಂರ 'ಬಣ್ಣದ ಚುಂಬಕ' ದಾಂಪತ್ಯದ, ಹೊಂದಾಣಿಕೆಯ, ಪ್ರೇಮದ ಒಳ ಹೊರಗುಗಳನ್ನು ಬಿಚ್ಚಿಡುತ್ತದೆ. 


ದಾಂಪತ್ಯದಲ್ಲಿ ಹೊಂದಾಣಿಕೆ ಎಂಬುದೇ ಮುಖ್ಯವಾದುದು. ಗಣ ಕೂಟ, ಹೆಸರಿನ ಬಲ ಕೂಡುವುದಕ್ಕಿಂತಲೂ ಮುಖ್ಯವಾಗಿ ಬೇಕಾದದ್ದು ಮನಸ್ಸು ಮನಸ್ಸುಗಳು ಬೆಸೆಯುವುದು. ಆದರೆ, ಎಷ್ಟೋ ಪ್ರೇಮಗಳು ಮದುವೆಯಾದ ನಂತರ ವೈಫಲ್ಯವಾಗುತ್ತವೆ. ಇನ್ನು ಕೆಲವು ಮದುವೆಗೆ ಮುನ್ನವೇ.. ಕೆಲವು ಪ್ರೇಮಗಳು ಮದುವೆಯ ನಂತರ ಬೆಸೆದುಕೊಂಡರೆ ಮತ್ತೆ ಕೆಲವರು ಮದುವೆಯ ನಂತರ ಮತ್ತೊಂದು ಸಂಗಾತಿಗೆ ಹಾತೊರೆಯುತ್ತಾರೆ.  ಎಲ್ಲದಕ್ಕೂ ಮುಖ್ಯ ಕಾರಣ ಹೊಂದಾಣಿಕೆ. ಕೆಲವೊಮ್ಮೆ ದಂಪತಿಗಳು ಅವರಿಗೋಸ್ಕರವಲ್ಲವಾದರೂ ಮಕ್ಕಳಿಗಾಗಿ ಹೊಂದಿಕೊಂಡು ಬಾಳುವುದನ್ನು ಕಾಣಬಹುದಾಗಿತ್ತು. ಮಕ್ಕಳು ಒಂದರ್ಥದಲ್ಲಿ ಅವರ ನಡುವಿನ ಬೆಸುಗೆಯ ಕೊಂಡಿಗಳು ಎಂದರೂ ತಪ್ಪಾಗಲಾರದು. ಹಾಗೆಂದು ಇದು ಸತಿ ಅಥವಾ ಪತಿಯ ಕರ್ತವ್ಯ ಮಾತ್ರವಾ.. ಅಲ್ಲವೇ ಅಲ್ಲ. ಇದು ಇಬ್ಬರಿಂದಲೂ ಮೂಡಬೇಕು. ಇದು ದಂಪತಿಗಳ ನಡುವಿನ ಮನಸ್ಥಿತಿ.


'ಬಣ್ಣದ ಚುಂಬಕ' ಒಂದು ದಾಂಪತ್ಯದಲ್ಲಿ ಹೇಗಿರಬೇಕು ಹಾಗೂ ಹೇಗಿರಬಾರದು ಎಂದು ಹೇಳುವುದರ ಜೊತೆಗೆ ಮಕ್ಕಳನ್ನು ಬೆಳೆಸುವ ವಿಧಾನದ ಕುರಿತು ಹೇಳುತ್ತದೆ.


ನಿವೇದಿತಾ ಹಾಗೂ ಪ್ರಸನ್ನರದ್ದು ಒಂದಿಷ್ಟು ವರ್ಷಗಳವರೆಗೂ ಅನುರೂಪದ ದಾಂಪತ್ಯ. ಇಬ್ಬರದ್ದೂ ಪ್ರೇಮ ವಿವಾಹ. ಇಬ್ಬರ ಮನೆಯಲ್ಲಿಯೂ ಅವರ ಪ್ರೇಮವನ್ನು ಒಪ್ಪದೇ ಇದ್ದುದರಿಂದ ಹೊರ ಬಂದು ಸ್ವತಂತ್ರ ಬದುಕು ರೂಪಿಸಿಕೊಂಡರು ಇಬ್ಬರೂ. ನಿವೇದಿತಾಳದ್ದು ಮದುವೆಯಾಗುವ ವಯಸ್ಸಲ್ಲ, ಪ್ರಸನ್ನನಿಗೆ ಕೈಯಲ್ಲಿ ಕೆಲಸವಿರಲಿಲ್ಲ. ಆದರೆ, ಪ್ರೇಮವೆಂಬುದು ಕುರುಡು. ಪ್ರೀತಿಯಲ್ಲಿ ಎಲ್ಲವೂ ಆಗುತ್ತದೆ ಎಂಬ ಮನಸ್ಥಿತಿಯಲ್ಲಿಯೇ ನಿವೇದಿತಾ ಪ್ರಸನ್ನನ ಓದುವ ಕನಸಿಗೆ ಒತ್ತಾಸೆಯಾಗಿ ನಿಂತು ಪೈಸೆಗೆ ಪೈಸೆ ಉಳಿಸಿ ಎಂ.ಎಸ್.ಸಿ ಮಾಡಿಸುತ್ತಾಳೆ. ಹೆಡ್ ಮೇಡಂ ಬಳಿ ಗೋಗರದು ಶಿಕ್ಷಕಿಯ ಕೆಲಸ ಗಿಟ್ಟಿಸಿಕೊಂಡವಳು ಅಷ್ಟೇ ಛಲದಲ್ಲಿ ದುಡಿಯುತ್ತಾಳೆ. ಮನೆಪಾಠ ಹೇಳಿ ಗಳಿಸುತ್ತಾಳೆ. ಪ್ರಸನ್ನ ಕೂಡಾ ಅವಳಿಗೆ ಹೆಚ್ಚು ತೊಂದರೆ ನೀಡದೆ ತನ್ನ ಓದು ಮುಗಿಸಿ ಕೆಲಸ ಹಿಡಿಯುತ್ತಾನೆ. ಇದೆಲ್ಲದರ ನಡುವಲ್ಲಿ ಪುಟ್ಟ ಅಲೋಕನ ಆಗಮನ ಕೂಡಾ ಆಗುತ್ತದೆ.


ಇಷ್ಟೇ ಆಗಿದ್ದರೆ ಎಲ್ಲವೂ ಸರಿಯಿರುತ್ತಿತ್ತೋ ಏನೋ.. ಆದರೆ, ಸಂಸಾರದ ನಡುವಿನ ಸರಿಗಮ ಮೆಲ್ಲಗೆ ಹಳಿ ತಪ್ಪುತ್ತಾ ಹೋಗುತ್ತದೆ. ಪ್ರಸನ್ನನಿಗೆ ಮನೆಯ ವಾತಾವರಣ ಮೆಲ್ಲನೆ ಉಸಿರುಗಟ್ಟಿಸುತ್ತಾ ಹೋಗುತ್ತದೆ. ರಂಗು-ರಂಗಾಗಿದ್ದ ಹೊರಗಿನ ವಾತಾವರಣ ಮನೆಯಲ್ಲಿ ರಂಗು ಕಳೆದುಕೊಳ್ಳುತ್ತದೆ. ನಿವೇದಿತಾಳದ್ದು ಅದೇ ಸರಳ, ನಿರ್ಮಲ ವ್ಯಕ್ತಿತ್ವ. ಆಕೆ ಬದಲಾಗಳು. ಆತ ಬದಲಾವಣೆಯನ್ನು ಸಹಾ ಬಯಸಿರಲಿಲ್ಲ. ಮೆಲ್ಲನೆ ಮೌನ ಹೊದ್ದ ಮನೆಯಲ್ಲಿ ಅರಿವಿಲ್ಲದಂತೆಯೇ ಸಂಸಾರವೇ ಮುರಿದು ಬೀಳುತ್ತದೆ. 


ಪ್ರಸನ್ನ ಕೆಲಸಕ್ಕೆ ಸೇರಿದ ನಂತರ ಬೌದ್ಧಿಕ ಸಾಂಗತ್ಯ ಬಯಸುತ್ತಾನೆ. ಅದನ್ನು ನೀಲಿಮಾಳಲ್ಲಿ ಕಂಡುಕೊಳ್ಳುತ್ತಾನೆ. ಆದರೆ, ಅವಳ ಆಸೆ, ಆಕಾಂಕ್ಷೆ, ಮನಸ್ಥಿತಿಯೇ ಬೇರೆ. ಅದು ಅವನಿಗೆ ಅರ್ಥವಾಗದೇ ಬಣ್ಣದ ಚುಂಬಕಕ್ಕೆ ಮರುಳಾದವನ ಹಾಗೆ ಆಕೆಯ ಹಿಂದೆ ಹೊರಟು ನಿಲ್ಲುತ್ತಾನೆ. ಆತನಿಗಿಂತ ಆಕೆ ವಯಸ್ಸಿನಲ್ಲಿ ದೊಡ್ಡವಳಾದರೂ ಅದು ಅವನಿಗೆ ನಗಣ್ಯ. ನಿವೇದಿತಾ ತನ್ನದು ಬರೀ ಇನ್ಪ್ಯಾಕ್ಚುಯೇಶನ್ ಎಂದೇ ಭಾವಿಸಿ ಅವಳಿಗೆ ಮೋಸ ಮಾಡುತ್ತಾನೆ. 


ನಿವೇದಿತಾ ಅವನ ಜೀವನ ಚೆನ್ನಾಗಿರಲಿ ಎಂದು ಹರಸಿ ಕಳುಹಿಸುತ್ತಾಳೆ. ಇದೆಲ್ಲದರ ಪರಿಣಾಮವಾಗಿದ್ದು ಅಲೋಕನ ಮೇಲೆ. ಮತ್ತೊಂದು ಮಗುವನ್ನು ಆಗಷ್ಟೇ ಕಳೆದುಕೊಂಡು ದೇಹ ಮಾತ್ರ ನಿತ್ರಾಣವಾಗಿತ್ತು. ಈಗ ಗಂಡನೂ ಹೋದ ನಂತರ ಮನಸ್ಸನ್ನು ನಿತ್ರಾಣವಾಗಿಸಿಕೊಳ್ಳಬಾರದೆಂದು ಅಲೋಕನ ಭವಿಷ್ಯದ ದೃಷ್ಟಿಯಿಂದ ಅವನಿಗಾಗಿ ಬದುಕಲು ನಿರ್ಧರಿಸುತ್ತಾಳೆ. ಮನೆಯವರ ಸಹಕಾರವಿಲ್ಲದೆ ಒಬ್ಬಂಟಿಯಾಗಿರುವಾಗ ಆಸರೆಯಾಗಿ ನಿಲ್ಲುವುದು ಹೆಡ್ ಮೇಡಂ. ಅಮ್ಮನಂತಹಾ ಅಕ್ಕರೆಯಲ್ಲಿ ಅವಳ ಬದುಕನ್ನು ಕಟ್ಟಿಕೊಳ್ಳುತ್ತಾಳೆ. 


ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿದ್ದ ಪಟೇಲ್ ಬರುವಷ್ಟರಲ್ಲಿ ಇಬ್ಬರ ವಿಚ್ಛೇದನ ನಡೆದು ಹೋಗಿರುತ್ತದೆ. ಒಬ್ಬ ಒಳ್ಳೆಯ ಗೆಳೆಯನಾಗಿ, ಒಳ್ಳೆಯ ಅಣ್ಣನಾಗಿ ಬೆಂಬಲವಾಗಿ ನಿಲ್ಲುತ್ತಾನೆ. ಸ್ನೇಹಿತನನ್ನು ನಿಷ್ಠುರವಾಗಿ ಖಂಡಿಸುತ್ತಾನೆ. ಅಲೋಕನ ಭವಿಷ್ಯವನ್ನು ರೂಪಿಸುವಲ್ಲಿ ಇವನ ಪಾತ್ರವೂ ಮಹತ್ವದ್ದು.


ನಿವೇದಿತಾಳಿಂದ ದೂರ ಹೋಗಿ ನೀಲಿಮಾ ಜೊತೆ ವಿವಾಹವಾದವನ ಬದುಕಲ್ಲಿ ಈಗ ನಿವೇದಿತಾಳ ನೆನಪುಗಳು ಕಾಡತೊಡಗುತ್ತವೆ. ನೀಲಿಮಾ ಅಂತಸ್ತಿಗೆ,  ಯೋಚನೆಗಳಿಗೆ ಹೊಂದಿಕೊಳ್ಳಲಾರದೆ ಹೆಣಗುತ್ತಾನೆ. ದಾಂಪತ್ಯ ಜೀವನದಲ್ಲಿ ಬೇಕಾಗಿರುವ ಹೊಂದಾಣಿಕೆಯನ್ನು ಅಲ್ಲಿಯೂ ಮಾಡಿಕೊಳ್ಳಲು ಹೆಣಗುತ್ತಾನೆ. ಆದರೆ, ಸೋತು ಹೋಗುತ್ತಾನೆ.


ನಿವೇದಿತಾ ಸ್ವತಂತ್ರವಾಗಿ ಬೆಳೆಯುತ್ತಾ ಉನ್ನತಿಯಾಗುತ್ತಿದ್ದರೆ, ಇಲ್ಲಿ ಯಾರಿಗೂ ಹೊಂದಿಕೊಳ್ಳಲಾರದೆ ಪ್ರಸನ್ನ ಅವನತಿಯಾಗುತ್ತಾ ಸಾಗುತ್ತಾನೆ. ಪಟೇಲ್ ಸೂಚಿಸುವ ಒಂದು ನಿರ್ಧಾರಕ್ಕೆ ಇಬ್ಬರೂ ಒಪ್ಪುತ್ತಾರೆಯಾ..? ಯಾರ ಬದುಕು ಎತ್ತ ಸಾಗುತ್ತದೆ? ತಿಳಿಯಲು ಓದಿ 'ಬಣ್ಣದ ಚುಂಬಕ'.


ವಿಚ್ಛೇದನವೇ ಇಲ್ಲದಿದ್ದರೆ ಹೇಗಿರುತ್ತಿತ್ತು? ಹೊಂದಾಣಿಕೆಯ ಬೇಲಿ ಎಲ್ಲಿದೆ ? ಆಲೋಚನೆಗಳು, ದುಡುಕು, ಹೊಂದಾಣಿಕೆಯ ಕೊರತೆ ಬರೀ ದಂಪತಿಗಳ ಮೇಲಲ್ಲ ಸುತ್ತಮುತ್ತಲಿನ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ ಲೇಖಕಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ