ಶುಕ್ರವಾರ, ಏಪ್ರಿಲ್ 17, 2026

ಬೀಸಿ ಬಂತು ತಂಗಾಳಿ (ಪುಸ್ತಕ ಯಾನ - 208)


ಪುಸ್ತಕದ ಶೀರ್ಷಿಕೆ : ಬೀಸಿ ಬಂತು ತಂಗಾಳಿ

ಲೇಖಕರು : ವೇದ ಮಂಜುನಾಥನ್

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2006


ಇದು ನಾನು ಓದಿದ ವೇದ ಮಂಜುನಾಥನ್ ಅವರ ಮೊದಲ ಪುಸ್ತಕ. ಸಣ್ಣ ಕಥೆ, ಕವನ, ಹಾಸ್ಯ ಲೇಖನಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಿದ್ದವರು ಖ್ಯಾತ ನಿರ್ದೇಶಕರಾದ ಟಿ. ಎನ್. ಸೀತಾರಾಮ್ ರವರ ಸಲಹೆಯ ಮೇರೆಗೆ ಬರವಣಿಗೆಯ ವ್ಯಾಪ್ತಿ ಅಧಿಕವಾಗಿರುವ ಕಾದಂಬರಿಯನ್ನು ಬರೆಯಲು ಶುರು ಮಾಡಿರುವುದರ ಕುರಿತು ಹೇಳಿಕೊಂಡಿದ್ದಾರೆ.


ಬೀಸಿ ಬಂತು ತಂಗಾಳಿ ಕಾದಂಬರಿಯಲ್ಲಿ ಬೇರೆ ಬೇರೆ ಹೆಣ್ಣುಗಳ, ಬೇರೆ ಬೇರೆ ರೀತಿಯ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ.


ಶಾರದಮ್ಮ ಹಾಗೂ ಭವಾನಿಶಂಕರ್ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯವಳು ಸಂಹಿತಾ ಹಾಗೂ ಎರಡನೆಯವಳು ಸ್ಮೃತಿ. ಸರ್ಕಾರಿ ಅಧಿಕಾರಿಯಾಗಿದ್ದ ಭವಾನಿಶಂಕರ್ ಅವರು ಪ್ರಾಮಾಣಿಕತೆಯಲ್ಲಿ ಬದುಕು ನಡೆಸುತ್ತಿದ್ದವರು. ಮಕ್ಕಳನ್ನೂ ಹಾಗೆಯೇ ಬೆಳೆಸಿದ್ದವರು. ತೀರಾ ಐಷಾರಾಮಿ, ವೈಭೋಗದ ಜೀವನಕ್ಕಿಂತ, ಇರುವದರಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದವರು. ಅವರಿಗೆ ತಕ್ಕ ಪತ್ನಿ ಶಾರದಮ್ಮ. ತುಂಬು ಕುಟುಂಬದಲ್ಲಿ ಹುಟ್ಟಿ, ಬೆಳೆದು 17ನೇ ವರ್ಷಕ್ಕೆ ಅತ್ತೆ ಇಲ್ಲದ ಮನೆಗೆ ತಾನೇ ಗೃಹಿಣಿಯಾಗಿದ್ದವರು. ಅವರ ಆಲೋಚನೆಯಲ್ಲಿಯೂ ಪ್ರೌಢತೆಯಿತ್ತು. ಇಂತಹಾ ದಂಪತಿಗಳ ಮಕ್ಕಳಾಗಿದ್ದವರೂ.. ಇಂತಹದ್ದೇ ಪ್ರೌಢತೆಯನ್ನು ಮೈಗೂಡಿಸಿಕೊಂಡಿದ್ದರು.


ಸಂಹಿತಾ ತಾಯಿಯ ಸ್ವಭಾವ ಹೊಂದಿದ್ದರು ತಂದೆಯಂತೆ ಸುಂದರ ರೂಪ. ಓದಿನಲ್ಲಿ ಮುಂದಿದ್ದಳು. ಅವಳಿಗೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ಕನ್ನಡದಲ್ಲಿ ಬಿ.ಎ ಮಾಡಿ ನಂತರ ಲೆಕ್ಚರರ್ ಆಗಬೇಕೆಂದುಕೊಂಡಿದ್ದಳು. 


ಸ್ಮೃತಿ ಸಂಹಿತಾಳ ಹಾಗಲ್ಲ. ಅಕ್ಕನಿಗಿಂತಲೂ ಓದಿನಲ್ಲಿ 10 ಪಟ್ಟು ಹೆಚ್ಚು ಮುಂದೆ. ಸೌಂದರ್ಯದಲ್ಲಿ ಸಾಧಾರಣವಾಗಿದ್ದರೂ.. ದಿಟ್ಟತನ ಹಾಗೂ ಮಾತಿನ ತೀಕ್ಷ್ಣತೆಯಿಂದ ಎಲ್ಲರನ್ನು ಆಕರ್ಷಿಸುತ್ತಿದ್ದಳು. ಅವಳು ಡಾಕ್ಟರ್ ಆಗಬೇಕೆನ್ನುವ ಕನಸನ್ನು ಹೊಂದಿದ್ದವಳು. ಸಂಹಿತಾ ಉಡುಗೆಗೆ ಹಣ ಖರ್ಚು ಮಾಡಿದರೆ, ಸ್ಮೃತಿ ಪುಸ್ತಕಕ್ಕೆಂದು ಖರ್ಚು ಮಾಡುತ್ತಿದ್ದಳು. ಸಂಹಿತಾ ಕೊಂಚ ಆಸಕ್ತಿ ವಹಿಸಿ ಉಡುಗೆಗಳನ್ನು ಆಯ್ಕೆ ಮಾಡಿಕೊಂಡರೆ.. ಇವಳದ್ದು ಸರಳ ಹಾಗೂ ಮಿತಿಯಾದ ಅಲಂಕಾರ. ತನ್ನ ಆಸೆಯಂತೆಯೇ ಡಾಕ್ಟರ್ ಕೂಡಾ ಆಗುತ್ತಾಳೆ.


ಸಂಹಿತಾಳ ಆಪ್ತ ಗೆಳತಿ ಚಂದನಾ ಶಾರದಮ್ಮರ ಗೆಳತಿ ವಿಜಯಮ್ಮರ ಮಗಳು. ಚಂದನಾ ತನ್ನ ಹತ್ತನೆಯ ವರ್ಷದಲ್ಲಿಯೇ ತಂದೆಯನ್ನು ಅಪಘಾತವೊಂದರಲ್ಲಿ ಕಳೆದುಕೊಂಡಿದ್ದಳು. ತಾಯಿ ವಿಜಯಮ್ಮನವರಿಗೆ ಮೂವರು ಮಕ್ಕಳು. ಆಕೆ ಶಿಕ್ಷಕಿಯಾಗಿ ತನ್ನ ಮಕ್ಕಳನ್ನು ಪೋಷಿಸುತ್ತಿದ್ದರು. ತನ್ನ, ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ತಾಯಿಗೆ ಸದಾ ನೆರವಾಗುವ ವ್ಯಕ್ತಿತ್ವ ಚಂದನಾಳದ್ದು. ಬಹಳ ಕಷ್ಟಜೀವಿ ಭವಾನಿಶಂಕರ್ ಅವರೂ ಆಗಾಗ ಅವಳಿಗೆ ಸಹಾಯ ಮಾಡುತ್ತಿದ್ದರು. ತನಗೇನಾದರೂ ಮಗನಿದ್ದಿದ್ದರೆ.. ಚಂದನಾಳನ್ನೇ ಸೊಸೆ ಮಾಡಿಕೊಳ್ಳುತ್ತಿದೆ ಎನ್ನುತ್ತಿದ್ದರು.


ಈ ಮೂವರು ಹೆಣ್ಣುಮಕ್ಕಳ ಬದುಕು ಅವರವರ ಓದು ಮುಗಿದ ನಂತರ ಬದಲಾಗಿತ್ತು.


ವೆಂಕಟೇಶಯ್ಯ ಹಾಗೂ ಪದ್ಮಾವತಿಯರ ಒಬ್ಬನೇ ಮಗ ಉದಯ್ ಸಂಹಿತಾಳ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದವರು. ಅವನ ತಂದೆ-ತಾಯಿ ಚಿತ್ರದುರ್ಗದಲ್ಲಿ ನೆಲೆಸಿದ್ದರು. ಅಲ್ಲಿಯೇ ಹಳ್ಳಿಯಲ್ಲಿ ಅತಿ ದೊಡ್ಡ ಶ್ರೀಮಂತರು. ಮಗನನ್ನು ಕೆಲಸಕ್ಕೆ ಅಷ್ಟು ದೂರ ಕಳುಹಿಸಲು ಇಚ್ಛೆಯಿಲ್ಲದಿದ್ದರೂ ಬಿಟ್ಟಿದ್ದರು. ಆತನಿಗೆ ವಿವಾಹ ಮಾಡುವ ಇಚ್ಛೆ ಹೊಂದಿದ್ದರು. ಉದಯ್ ಗೆ ಒಮ್ಮೆ ಹುಷಾರಿಲ್ಲದಿದ್ದಾಗ ನೋಡಲು ಬಂದ ವಿದ್ಯಾರ್ಥಿನಿಯರಲ್ಲಿ ಸಂಹಿತಾಳ ರೂಪ ಹಾಗೂ ನಡೆ-ನುಡಿ, ಗಂಭೀರ ವ್ಯಕ್ತಿತ್ವ ಉದಯ್ ತಾಯಿಯನ್ನು ಸೆಳೆದಿತ್ತು. ಆಕೆಯ ಕುರಿತು ವಿಚಾರಿಸಲು ಹೇಳಿದ್ದರು. ನಂತರ ಋಣಾನುಬಂಧ ಎಂಬಂತೆ ಇವರಿಬ್ಬರ ವಿವಾಹ ನಡೆದಿತ್ತು. ಚಿಕ್ಕಂದಿನಿಂದ ಸುಖ ಜೀವಿಯಾಗಿ ಬೆಳೆದಿದ್ದ ಸಂಹಿತಾ ಮದುವೆಯಾಗಿ ಬಹಳ ಸುಖವಾಗಿದ್ದಳು. ಎರಡು ವರ್ಷವಾದರೂ ಮಕ್ಕಳಾಗದಿದ್ದಾಗ ಮನೆಯ ಹಿರಿಯರ ವರ್ತನೆ ಬೇರೆಯದ್ದೇ ಆಕೆಗೆ ಬದುಕಿನ ದರ್ಶನ ಮಾಡಿಸಿತ್ತು. ಇಲ್ಲಿನ ತೊಂದರೆಯೇನು..??


ಡಾ|| ಸತೀಶ್ ಕುಮಾರ್ ಅವರ ಪ್ರೀತಿಯ ಶಿಷ್ಯಳಾಗಿದ್ದ ಸ್ಮಿತಾ ಹೆಚ್ಚಿನ ಬಾರಿ ಅವರು ಪೇಷಂಟ್ ನೋಡುವಾಗ ಜೊತೆಗಿರುತ್ತಿದ್ದಳು. ಆ ಸಮಯದಲ್ಲಿ ರೋಗಿಯಾಗಿ ಬಂದು ಪರಿಚಿತವಾಗಿದ್ದ ಬೆಂಗಳೂರಿನ ಪ್ರತಿಷ್ಠಿತ ಶ್ರೀಮಂತ ಮನೆತನಕ್ಕೆ ಸೇರಿದ ಮದನ್ ಗೋಪಾಲ್. ಅವರ ಮಗ ಗಿರೀಶನೊಂದಿಗಿದ್ದ ಸ್ನೇಹ ಆತನನ್ನು ವಿವಾಹವಾಗುವವರೆಗೂ ಬಂದಿತ್ತು. ಅದೇ ಸಮಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಉನ್ನತ ಶಿಕ್ಷಣಕ್ಕಾಗಿ ಆಕೆ ಉಚಿತವಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿತ್ತು . ಸ್ಮೃತಿಯ ನಿರ್ಧಾರವೇನು..??


ಚಂದನಾಳ ತಾಯಿ ವಿಜಯಮ್ಮ ಹೃದಯಾಘಾತದಿಂದ ತೀರಿಕೊಂಡಾಗ, ಅದಕ್ಕೆ ಆಘಾತಕಾರಿ ಸುದ್ದಿಯೊಂದು ಕಾರಣವಾಗಿತ್ತು. ಅದು ರಮೇಶನ ಕುರಿತಾದದ್ದು. ಅಂತಹಾ ಆಘಾತಕಾರಿ ಸುದ್ದಿಯೇನು..?? 


ಚಂದನಾ ತನ್ನ ತಂಗಿ ವಿನುತಾಳ ಜೊತೆ ಗಟ್ಟಿಯಾಗಿ ಬದುಕಿನಲ್ಲಿ ನೆಲೆ ನಿಲ್ಲುತ್ತಿರುವ ಸಂದರ್ಭದಲ್ಲಿಯೇ.. ತನ್ನ ಸ್ನೇಹಿತೆ ವೇದಾಳ ಅಣ್ಣ ಕಿರಣ್ ಪರಿಚಯವಾಗಿತ್ತು. ಆತ ಶ್ರಮಜೀವಿ ಹಾಗೂ ಕಷ್ಟಜೀವಿ. ಎಲ್ಲದರ ಅರಿವಿದ್ದವನು. ಧಾರಾವಾಹಿ ನಿರ್ದೇಶಕನೂ ಆಗಿದ್ದ ಅವನು ಮಾಡುತ್ತಿದ್ದ ಧಾರಾವಾಹಿಯೊಂದು ಥೇಟ್ ಚಂದನಾಳ ಬದುಕಿನ ಕಥೆಗೆ ಬಹಳ ಹೋಲಿಕೆಯಾಗುತ್ತಿತ್ತು. ಮುಂದೆ ಇದೇ ಪ್ರೇಮಕ್ಕೆ ತಿರುಗುತ್ತದೆ. ಕಿರಣ್ ಗೆ ಅಪಘಾತವಾಗುತ್ತದೆ. ಮುಂದೆ ಏನಾಯಿತು..?


ಬದುಕಿನಲ್ಲಿ ಕಷ್ಟವನ್ನೇ ಕಾಣದಿದ್ದವಳು ಕಷ್ಟವನ್ನು ಎದುರಿಸುವ ಪರಿ ಸಂಹಿತಾಳ ಬದುಕಿನಲ್ಲಿದ್ದರೆ.. ಬದುಕಿನಲ್ಲಿ ಕಷ್ಟವನ್ನೇ ಅನುಭವಿಸಿದವರಿಗೆ ಮುಂದೆ ಸುಖ ಸಿಗುತ್ತದೆ ಎನ್ನುವ ಮಾತು ಚಂದನಾಳ ಬದುಕಿನಲ್ಲಿ ನಿಜವಾಯಿತೇ..?? ಎಲ್ಲವನ್ನು ಸಮಚಿತ್ತದಲ್ಲಿಯೇ ನೋಡುತ್ತಿದ್ದ ಸ್ಮೃತಿಯ ಬದುಕು ಮತ್ತಷ್ಟು ವಿಭಿನ್ನ. 


"ಬೀಸಿ ಬಂತು ತಂಗಾಳಿ" ಎಂಬ ಶೀರ್ಷಿಕೆ ಕಂಡ ಮಾತ್ರಕ್ಕೆ ಇದು ಸಂಪೂರ್ಣ ಸುಖಾಂತ್ಯದ ಕಥೆಯಲ್ಲ.. ಹಾಗೆಂದು ಸಂಪೂರ್ಣ ದುಃಖಾಂತ್ಯ ಎಂದೂ ಹೇಳಲಾಗದು. ಬದಲಾಗಿ ಬದುಕನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದು ನಮ್ಮ ನಡವಳಿಕೆಯ ಮೇಲೆ ಅವಲಂಬಿತ ಎಂಬುದನ್ನು ಸೂಚಿಸುವ ಕಾದಂಬರಿ.

(ಈ ಕಾದಂಬರಿ ಓದುವ ಆಸಕ್ತರಿಗೆ.. ಇದು ಡಿಜಿಟಲ್ ರೂಪದಲ್ಲಿ ಪ್ರತಿಲಿಪಿ ಕನ್ನಡದಲ್ಲಿ ಲಭ್ಯವಿದೆ.)

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ