ಪುಸ್ತಕದ ಶೀರ್ಷಿಕೆ : ಅನುರಾಗದ ಅಂತಃಪುರ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
ಎರಡನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 152
ಬೆಲೆ : 120 ರೂ.
ಸಿನಿಮಾದ ಶೀರ್ಷಿಕೆ : ಅನುರಾಗ ಅರಳಿತು
ನಿರ್ದೇಶಕರು : ಎಂ. ಎಸ್. ರಾಜಶೇಖರ್
ಚಿತ್ರಕಥೆ : ಚಿ. ಉದಯಶಂಕರ್
ಬಿಡುಗಡೆ ದಿನಾಂಕ : 21 ಮೇ 1986
'ಅನುರಾಗದ ಅಂತಃಪುರ' ಎಂದರೆ ಹೆಚ್ಚಿನವರಿಗೆ ತಕ್ಷಣಕ್ಕೆ ತಿಳಿಯದಿದ್ದರೂ.. ಡಾ. ರಾಜಕುಮಾರ್, ಮಾಧವಿ ಹಾಗೂ ಗೀತಾರವರ ಅಭಿನಯದ 'ಅನುರಾಗ ಅರಳಿತು' ಎಂದರೆ ಬೇಗ ತಿಳಿಯುತ್ತದೆ. ದೃಶ್ಯ ರೂಪದಲ್ಲಿಯೂ ಸಮರ್ಥವಾಗಿ ಮೂಡಿಬಂದಿರುವ ಚಲನಚಿತ್ರ. 'ಅನುರಾಗ ಅರಳಿತು' ಕಾದಂಬರಿ ಆಧಾರಿತ ಚಲನಚಿತ್ರ. 1985ರಲ್ಲಿ ಗೆಳತಿ ಮಾಸ ಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ಪ್ರಕಟಗೊಂಡಿತ್ತು.
ಕನ್ನಡದಲ್ಲಿ 50 ವಾರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಓಡಿದ ಚಲನಚಿತ್ರ ಎಂಬ ಹೆಗ್ಗಳಿಕೆ ಹೊಂದಿದೆ. ಕನ್ನಡ ಮಾತ್ರವಲ್ಲದೇ, ಏಳು ಭಾಷೆಗಳಲ್ಲಿ - ತಮಿಳಿನಲ್ಲಿ 1992 ರಲ್ಲಿ ಮನ್ನನ್, ತೆಲುಗಿನಲ್ಲಿ 1992 ರಲ್ಲಿ ಘರಾನಾ ಮೊಗುಡು, ಹಿಂದಿಯಲ್ಲಿ 1994 ರಲ್ಲಿ ಲಾಡ್ಲಾ, ಸಿಂಹಳದಲ್ಲಿ 1996 ರಲ್ಲಿ ಮಲ್ ಹಥೈ, ಒಡಿಯಾದಲ್ಲಿ 2000 ರಲ್ಲಿ ಸಿಂದೂರಾ ನುಹೇನ್ ಖೇಲಾ, ಬಂಗಾಳಿಯಲ್ಲಿ 2001 ರಲ್ಲಿ ಜಮೈಬಾಬು ಜಿಂದಾಬಾದ್ ಮತ್ತು ಬಾಂಗ್ಲಾದಲ್ಲಿ 2002 ರಲ್ಲಿ ಶಮಿ ಸ್ಟ್ರಿರ್ ಜುದ್ದೋ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ.
ಏಳು ಇತರ ಭಾಷೆಗಳಲ್ಲಿ ರಿಮೇಕ್ ಆದ ಮೊದಲ ಭಾರತೀಯ ಚಲನಚಿತ್ರವಾಗಿದೆ. ಒಡಿಯಾ, ಬೆಂಗಾಲಿ, ಸಿಂಹಳ ಭಾಷೆಗೆ ರಿಮೇಕ್ ಆದ ಮೊದಲ ಕನ್ನಡದ ಚಲನಚಿತ್ರ. ಇದು ಎರಡು ವಿದೇಶಿ ಭಾಷೆಗಳಲ್ಲಿ ರೀಮೇಕ್ ಆದ ಕನ್ನಡದ ಮೊದಲ ಚಲನಚಿತ್ರವೂ ಹೌದು. ಈ ಚಲನಚಿತ್ರದ ರೀಮೇಕ್‌ಗಳೊಂದಿಗೆ, ರಾಜ್‌ಕುಮಾರ್ ಅವರ ಚಲನಚಿತ್ರಗಳನ್ನು 50 ಕ್ಕೂ ಹೆಚ್ಚು ಬಾರಿ ರೀಮೇಕ್ ಮಾಡಿದ ಮೊದಲ ಭಾರತೀಯ ನಟರಾದರು ಮತ್ತು ಅವರ ಚಲನಚಿತ್ರಗಳನ್ನು ಇತರ ಒಂಬತ್ತು ಭಾಷೆಗಳಲ್ಲಿ ರೀಮೇಕ್ ಮಾಡಿದ ಮೊದಲ ಭಾರತೀಯ ನಟ.
ಹೆಚ್.ಜಿ ರಾಧಾದೇವಿಯವರ ಕಾದಂಬರಿಗಳಲ್ಲಿ ಹೆಚ್ಚಿನವು ನಾಯಕಿ ಪ್ರಧಾನವಾದ ಕಾದಂಬರಿಗಳು. ಆದರೆ, ಬೆರಳೆಣಿಕೆಯಷ್ಟು ಮಾತ್ರವೇ ನಾಯಕ ಪ್ರಧಾನವಾದ ಕಾದಂಬರಿಗಳು. ಹಾಗೆ ನಾನು ಓದಿದ ಕಾದಂಬರಿಗಳಲ್ಲಿ 'ಪ್ರೇಮ ಸಾಮ್ರಾಜ್ಯ'ದ ನಂತರ ಓದಿದ ನಾಯಕ ಪ್ರಧಾನ ಕಾದಂಬರಿ 'ಅನುರಾಗದ ಅಂತಃಪುರ'.
ರಾಧಾದೇವಿಯವರ ಕಾದಂಬರಿಗಳಲ್ಲಿ ಹೆಣ್ಣು ತೀರಾ ಮೃದು ಅಥವಾ ದುರ್ಬಲೆಯಲ್ಲ. ಬದಲಾಗಿ, ಆಕೆ ಸ್ವಾಭಿಮಾನಿ, ದಿಟ್ಟೆ ಹಾಗೂ ಧೈರ್ಯಶಾಲಿ. ಆದರೆ, ಹೆಣ್ಣು ಆ ಹಂತವನ್ನು ಮೀರಿ ಸ್ವಾತಂತ್ರ್ಯವನ್ನು ಸ್ವೇಚ್ಛೆಯನ್ನಾಗಿಸಿಕೊಂಡು ಮದ, ಅಹಂಕಾರದಿಂದ ವರ್ತಿಸಿದರೆ ಆಕೆಯ ವ್ಯಕ್ತಿತ್ವ ಹೇಗಿರುತ್ತದೆ ಎಂಬುದು ಈ ಕಾದಂಬರಿಯಲ್ಲಿ ಚಿತ್ರತವಾಗಿದೆ. ಹೆಣ್ಣು, ಗಂಡಿನ ದಬ್ಬಾಳಿಕೆಯನ್ನು ಮೆಟ್ಟಿನಿಲ್ಲಬೇಕು. ಹಾಗೆಂದು.. ಗಂಡು ಹೆಣ್ಣಿನ ಕಾಲ ಕೆಳಗೆ ಅವಳ ಅಹಂನಿಂದ ನಲುಗಬಾರದು. ಇಲ್ಲಿನ ದಿಟ್ಟ, ಧೈರ್ಯಶಾಲಿ, ಧೀಮಂತ ಹಾಗೂ ಸ್ವಾಭಿಮಾನಿ ನಾಯಕ ಶ್ರೀಮಂತಿಕೆಯ ಅಹಂ ಹಾಗೂ ಅವಳ ಅಹಂಕಾರಕ್ಕೆ ತಲೆಬಾಗದೆ.. ಸಡ್ಡು ಹೊಡೆದು ನಿಲ್ಲುತ್ತಾನಾದರೂ.. ಆಕೆಯನ್ನೇನೂ ತನ್ನ ಕಾಲಕಸದಂತೆಯೂ ನೋಡುವುದಿಲ್ಲ. ಆಕೆಗೆ ಕೊಡುವ ಗೌರವವನ್ನು ಕಡಿಮೆ ಮಾಡುವುದಿಲ್ಲ. ಇಲ್ಲಿನ ನಾಯಕ ಇಷ್ಟವಾಗಿದ್ದು ಅದೇ ಕಾರಣಕ್ಕೆ.
ಚಲನಚಿತ್ರವನ್ನು ಮೊದಲು ನೋಡಿ, ನಂತರ ಕಾದಂಬರಿ ಓದಿದ್ದರಿಂದ ನನಗೆ ನಾಯಕ ರಾಜೇಂದ್ರನ ಪಾತ್ರದಲ್ಲಿ ಚಲನಚಿತ್ರದ ನಾಯಕ ಶಂಕರ್ ಎಂದರೆ ಡಾ||ರಾಜ್ ಅವರೇ ಕಣ್ಮುಂದೆ ಬಂದಂತಾಗುತ್ತಿತ್ತು. ಇದು ಅವರ ಅಭಿನಯದ ಪ್ರಭಾವವೆಂದರೆ ತಪ್ಪಾಗಲಾರದು.
ಮೋಹನರಾಯರ ಮುದ್ದಿನ ಮಗಳು ಆಶಾ ಪಾತ್ರದಲ್ಲಿ ಮಾಧವಿಯವರು ದಿಟ್ಟ, ಶ್ರೀಮಂತಿಕೆಯ, ಕಟ್ಟುನಿಟ್ಟಿನ, ದರ್ಪದ ಹೆಣ್ಣಾಗಿ ಕಾಣುತ್ತಾರೆ. ತಂದೆಯ ಫ್ಯಾಕ್ಟರಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಅಮೆರಿಕದಲ್ಲಿ ಎಂ.ಬಿ.ಎ ಮುಗಿಸಿ ಬಂದಿದ್ದಳು. ಕಾದಂಬರಿಯಲ್ಲಿ ಚಿತ್ರಿತವಾಗಿರುವ ಈ ದೃಶ್ಯ.. ಚಲನಚಿತ್ರದಲ್ಲಿ ಆಕೆಯ ಸಂದರ್ಶನದಿಂದ ಶುರುವಾಗುತ್ತವೆ.
ಕಾದಂಬರಿಯಲ್ಲಿ ರಾಯರ ಮನಸಿನಲ್ಲಿ ಹೆಚ್ಚಿನ ಚಿಂತೆ ಇದ್ದದ್ದು ಆಶಾ ತನ್ನ ಮದುವೆಗೆ ಯಾವ ವರನನ್ನು ಒಪ್ಪದೇ ಇರುವುದು. ಚಲನಚಿತ್ರದಲ್ಲಿ ಅದರ ದೃಷ್ಟಾಂತವನ್ನು ನ್ಯಾಯಾಧೀಶರ ಮಗನನ್ನು ತಿರಸ್ಕರಿಸುವ ಸನ್ನಿವೇಶದಲ್ಲಿ ಕಾಣಬಹುದು.
ಕಥೆ, ಕಾದಂಬರಿ, ಸಿನಿಮಾಗಳನ್ನು ಓದಿ.. ನೋಡಿದರೂ.. ಆ ಸೆಂಟಿಮೆಂಟ್ ಗಳಿಗೆ ಒಳಗಾಗದವಳಿಗೆ ಅವಳದ್ದೇ ಆದ ಭಾವನೆಯೊಂದಿತ್ತು. "ನನ್ನ ಹೃದಯದ ಅರಮನೆಯಲ್ಲಿ ಒಂದು ಪುಟ್ಟ ಅನುರಾಗದ ಅಂತಃಪುರವಿದೆ. ಆದರೆ, ಆ ಅಂತಃಪುರ ಪ್ರವೇಶಿಸಲಿಕ್ಕೆ ಆತ ಬಹಳ ಯೋಗ್ಯವಾಗಿರಬೇಕು. ಬರೀ ರೂಪ, ಐಶ್ವರ್ಯ ಮೆಚ್ಚಿ ಬರುವ ವ್ಯಕ್ತಿ ನಿಜವಾದ ಸಂಗಾತಿಯಾಗಲಾರ" ಎನ್ನುವ ಅಭಿಪ್ರಾಯವಿತ್ತು.
ಬಿಸಿರಕ್ತ, ಮುಂಗೋಪ, ಬಾಸಿಂಗ್ ನೇಚರ್ ನಿಂದ ಕಂಪನಿಯನ್ನು ಆಳಲು ಮುಂದೆ ನೋಡುತ್ತಿದ್ದಳು. ಅದರ ಫಲವಾಗಿ ಕಂಪನಿಯ ಮುಷ್ಕರ ನಿಲ್ಲಿಸಲು ಕಾರ್ಮಿಕರಲ್ಲಿ ಮುಖ್ಯಸ್ಥರಾಗಿದ್ದ ರಾಮಲಿಂಗಂ, ಮುನಿಸ್ವಾಮಿ ಹಾಗೂ ಚೆನ್ನವೀರಯ್ಯನವರನ್ನು ತನ್ನ ಚೇಂಬರಿಗೆ ಕರೆಸಿ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಕೆಲಸದಿಂದ ತೆಗೆದುಹಾಕಿ.. ಇದಾವುದೂ ತಿಳಿಯದ ಉಳಿದ ಕಾರ್ಮಿಕರನ್ನು ಸವಿ ಮಾತುಗಳಿಂದಲೇ ಓಲೈಸಿದ್ದಳು. ಇಲ್ಲಿ ಅವರಲ್ಲಿ ಇಬ್ಬರ ಪಾತ್ರ ಮಾತ್ರ ಇದೆ.
ಮೈಸೂರಿನ ಗೆಳೆಯ ಸೋಮನಾಥ್ ರವರ ಮನೆಗೆ ಹೋಗಲು ಹೊರಟಿದ್ದ ರಾಯರನ್ನು ರಾಮಲಿಂಗಂ ಮುಂತಾದವರು ಸೇರಿ ಹಲ್ಲೆ ಮಾಡಲು ಯತ್ನಿಸಿದಾಗ.. ಅವರೆಲ್ಲರನ್ನು ತಡೆದು ರಾಯರ ಪ್ರಾಣ ಉಳಿಸಿದ್ದು ರಾಜೇಂದ್ರಬಾಬು. ಚಲನಚಿತ್ರದಲ್ಲಿ ರಾಜೇಂದ್ರಬಾಬು ಶಂಕರ್ ಕಾಣುತ್ತಾರೆ.
ರಾಜೇಂದ್ರ/ಶಂಕರ್ ಮುಂಬೈಯಿಂದ ಕೆಲಸ ಬಿಡಲು ಕಾರಣ ಆತನ ತಾಯಿಯ ಅನಾರೋಗ್ಯ. ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಬಂದವನು ಪಾಪಣ್ಣನವರ ಕೆಲಸದ ಮೇಲೆ ದಾರಿಯಲ್ಲಿ ಹೋಗುತ್ತಿದ್ದಾಗ ರಾಯರನ್ನು ಅಡ್ಡಗಟ್ಟಿದವರನ್ನು ಉಪಾಯವಾಗಿ ಓಡಿಸಿ ಪ್ರಾಣ ಕಾಪಾಡಿದ್ದ.
ರಾಜೇಂದ್ರ/ಶಂಕರ್ ನಿಗೆ ಏನನ್ನಾದರೂ ಕೂಡಲೇ ಬೇಕೆಂಬ ರಾಯರ ಹಂಬಲಕ್ಕೆ.. ಆತ ಅವರ ಪರಿಚಿತರಾದ ಪಾಪಣ್ಣನವರಿಂದ ಪತ್ರ ತಂದು ಕಾರ್ಖಾನೆಯಲ್ಲಿ ಒಂದು ಕೆಲಸ ಕೇಳಿದ್ದ. ಮುಂಬೈಯ ಕಾರ್ಖಾನೆಯಲ್ಲಿ ಯಾಂತ್ರಿಕ ವಿಭಾಗದಲ್ಲಿ ಎಂಟು ವರ್ಷ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ದಕ್ಷ ಹಾಗೂ ಕರ್ತವ್ಯಶಾಲಿ ಎಂದು ರಾಯರು ಕೆಲಸಕ್ಕೆ ಕೊಟ್ಟಿದ್ದರು. ಕಾರ್ಖಾನೆಯಲ್ಲಿಯೂ ಆ ಹುದ್ದೆಗೆ ಯಾರಾದರೊಬ್ಬರು ಯೋಗ್ಯರ ಅವಶ್ಯಕತೆಯಿತ್ತು.
ತನ್ನನ್ನು ಕೇಳದೇ, ತಂದೆ ಆತನಿಗೆ ಕೆಲಸ ಕೊಟ್ಟದ್ದು ಆಶಾಳ ಅಹಂಗೆ ಪೆಟ್ಟು ಕೊಟ್ಟಿತ್ತು. ಅಲ್ಲದೆ, ಆತನ ಸ್ವಾಭಿಮಾನ ಹಾಗೂ ಮಾತುಗಳು ತೀರಾ ಅವಳನ್ನು ಮೆಚ್ಚಿಸುವಂತಿರುತ್ತಿರಲಿಲ್ಲ. ಇದು ಅವಳಿಗೆ ಎರಡನೇ ಪೆಟ್ಟು. ಹೀಗೆ ಆತ ಕೆಲಸಕ್ಕೆ ಸೇರಿದ ನಂತರ ತನ್ನ ಪ್ರಭಾವದಿಂದ ಕಾರ್ಮಿಕರ ಜೀವನ ಶೈಲಿಯಲ್ಲಿಯೂ ಬಹಳಷ್ಟು ಬದಲಾವಣೆಗಳನ್ನು ತಂದ. ಕಾರ್ಮಿಕರ ನಾಯಕನೆಂದು ಅಲ್ಪ ಕಾಲದಲ್ಲಿಯೇ ಹೆಸರು ಗಳಿಸಿಕೊಂಡ. ಕಾರ್ಖಾನೆಯ ಯಾವ ಮೇಲಾಧಿಕಾರಿಗೂ ಕೊಡದಷ್ಟು ಗೌರವವನ್ನು ಕಾರ್ಮಿಕರು ಆತನಿಗೆ ಕೊಡುತ್ತಿದ್ದರು.
ಹೀಗೆ ಹಲವಾರು ಸಂದರ್ಭಗಳು ಘಟನೆಗಳು ಆಶಾಳಿಗೆ ಆತನ ಮಹತ್ವವನ್ನು ಸಾರಿ ಸಾರಿ ಹೇಳುತ್ತಿದ್ದರೂ ಆಕೆ ಆತನನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆತನ ಕೆಲಸದಲ್ಲಿ ತಪ್ಪು ಕಂಡುಹಿಡಿಯಲೆಂದು ಹೋದಾಗ ನಡೆದ ಘಟನೆಯೊಂದು ಇಬ್ಬರ ಬದುಕಿನಲ್ಲಿಯೂ ದೊಡ್ಡ ಬದಲಾವಣೆಯನ್ನೇ ತಂದಿತ್ತು.
ಆತನಿಗೆ ಪಾಠ ಕಲಿಸುತ್ತೇನೆಂಬ ದುರುದ್ದೇಶದಿಂದ ಆಶಾ ತನ್ನ ತಂದೆಯ ಬಳಿ ಬಂದು ಆತನನ್ನೇ ವಿವಾಹವಾಗುತ್ತೇನೆಂದು ಹೇಳಿದಳು. ರಾಜೇಂದ್ರ ಮೊದಲಿಗೆ ಅದನ್ನು ಒಪ್ಪದಿದ್ದರೂ.. ರಾಯರ ಮಾತಿಗೆ ಬೆಲೆ ಕೊಟ್ಟು ಆಕೆಯನ್ನು ಮದುವೆಯಾಗುತ್ತಾನೆ. ಆದರೆ, ಮದುವೆಯಾದ ನಂತರವೂ ತಾನು ಕಾರ್ಮಿಕನಾಗಿ ಅದೇ ಸ್ಥಾನದಲ್ಲಿ ಮುಂದುವರೆಯುತ್ತಾನೆ.
ಶಂಕರ್ ಮದುವೆಗೆ ಒಪ್ಪುವುದು ತನ್ನ ತಾಯಿಯ ಕಾರಣಕ್ಕೆ. ಮೋಹನರಾಯರ ಒಳ್ಳೆಯತನಕ್ಕೆ ರಾಜೇಂದ್ರ ಕಟ್ಟುಬಿದ್ದರೆ.. ಮೋಹನರಾಯರು ತಾಯಿಯ ಮೂಲಕ ಶಂಕರ್ ನನ್ನು ಕಟ್ಟಿ ಹಾಕುತ್ತಾರೆ.
ಆಶಾಳನ್ನು ನೋಡುವ ಆಸೆ ವ್ಯಕ್ತಪಡಿಸಿದ ತನ್ನ ತಾಯಿಯ ಮಾತಿಗೂ ಆಕೆ ಬೆಲೆಕೊಡದಾದಾಗ ರಾಜೇಂದ್ರನಿಗೆ ಅವಳ ಅಹಂಕಾರದ ಪರಮಾವಧಿಯ ಅರಿವಾಗುತ್ತದೆ. ಅಲ್ಲದೆ, ಆತನನ್ನು ಅವಳು ನಡೆಸಿಕೊಳ್ಳುವ ರೀತಿ ಪ್ರತಿಕ್ಷಣಕ್ಕೂ ಆತನ ಸಹನೆಯನ್ನು ಕೆಣಕುತ್ತಾ ಹೋಗುತ್ತದೆ. ಆದರೆ, ಆಶಾ ಆತನ ತಾಯಿಗೆ ನಮಸ್ಕರಿಸುವುದರ ಮೂಲಕ ತಾನು ಬದಲಾಗಿರುವ ಸೂಚನೆ ನೀಡುತ್ತಾಳೆ.
ಶಂಕರ್ ಎಲ್ಲದರ ಅರಿವಿದ್ದೂ.. ತನ್ನ ಪರಿಸ್ಥಿತಿಯನ್ನು ಮುಚ್ಚಿಟ್ಟು ತಾಯಿಗೆ ನೋವಾಗಬಾರದೆಂದು ಆಕೆಯ ಅಹಂಕಾರವನ್ನು ಸಹಿಸುತ್ತಿರುತ್ತಾನೆ. ಒಂದು ಜಗಳದ ಮೂಲಕ ಆಕೆಗೆ ನಿಜ ಅರಿವಾಗಿ ಆಕೆಯ ಸಾವಿನ ಮೂಲಕ ಶಂಕರ್ ಆಶಾಳಿಂದ ವಿಮಖನಾದ ಮೇಲೆ ಆಕೆಗೆ ಪಶ್ಚಾತ್ತಾಪವಾಗಿ ಬದಲಾಗುವ ಸಂಧರ್ಭ ಕಂಡುಬರುತ್ತದೆ.
ಕಾದಂಬರಿಯಲ್ಲಿಲ್ಲದ ಪ್ರಮುಖ ಪಾತ್ರವೊಂದು ಚಲನಚಿತ್ರದಲ್ಲಿದೆ. ಅದೇ ಆಶಾಳ ಆಪ್ತ ಕಾರ್ಯದರ್ಶಿ ಉಮಾ. ಇದನ್ನು ಗೀತಾ ಅವರು ಸೊಗಸಾಗಿ ನಿರ್ವಹಿಸಿದ್ದಾರೆ. ಆಶಾಳ ದರ್ಪದ ಅರಿವಿದ್ದೂ ಆಕೆಯ ಜೊತೆ ಕೆಲಸ ಮಾಡುತ್ತಿದ್ದರೂ.. ಶಂಕರ್ ಬಂದ ನಂತರ ಆತನ ಸ್ವಾಭಿಮಾನ ಹಾಗೂ ಒಳ್ಳೆಯ ಗುಣಕ್ಕೆ ಸೂಜಿಗಲ್ಲಿನಂತೆ ಸೆಳೆತ ಉಂಟಾದಾಗ ಆತನನ್ನು ಪ್ರೇಮಿಸುತ್ತಾರೆ. ಆಶಾಳ ಗುಣ ಕಂಡಾಗ ಶಂಕರ್ ಗೆ ಈಕೆಯ ಸರಿಯಾದ ಜೋಡಿ ಎನ್ನಿಸಿದರೂ.. ಆಕೆಯ ತನ್ನ ತಂದೆಯ ಜೊತೆಗೆ ಹೋಗಿ ಶಂಕರ್ ತಾಯಿಯಲ್ಲಿ ಈ ಸುದ್ದಿ ಪ್ರಸ್ತಾಪಿಸುವ ಸಂದರ್ಭದಲ್ಲಿಯೇ ಮೋಹನರಾಯರು ಅಲ್ಲಿಗೆ ಬಂದು ಆಶಾಳ ವಿಚಾರ ಪ್ರಸ್ತಾಪಿಸುತ್ತಾರೆ. ಆದರೆ, ಅದರಾಚೆಗೂ ಶಂಕರ್ ಹಾಗೂ ಉಮಾ ಸ್ನೇಹ ಆಪ್ತವಾಗುತ್ತದೆ.
ಮೋಹನರಾಯರ ಪಾತ್ರದಲ್ಲಿ ಕೆ. ಎಸ್. ಅಶ್ವತ್ಥ್ ಹಾಗೂ ಶಂಕರ್ ತಾಯಿಯ ಪಾತ್ರದಲ್ಲಿ ಪಂಡರಿಬಾಯಿಯ ನಟನೆಯೂ ಸೊಗಸಾಗಿದೆ.
ಗಂಡಾಗಲೀ.. ಹೆಣ್ಣಾಗಲೀ ತಮ್ಮ ಅಹಂ ಅನ್ನು ಬದಿಗಿಟ್ಟು ವರ್ತಿಸಿದಾಗಲೇ ಸಂಸಾರ ಅನುರಾಗದ ಅಂತಪುರವಾಗಲು ಸಾಧ್ಯ. ಅದಕ್ಕಾಗಿ ಮಾಡಿಕೊಳ್ಳಬೇಕಾದ ಬದಲಾವಣೆಗಳು ಈ ಕಾದಂಬರಿಯಲ್ಲಿ ಬಹಳ ಚೆಂದವಾಗಿ ಚಿತ್ರಿತವಾಗಿವೆ.
ಅನುರಾಗವೇ ಇಲ್ಲದ ಇಬ್ಬರ ನಡುವೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಅನುರಾಗ ಅರಳುವ ಚಲನಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ.
ಕಾದಂಬರಿಯೊಂದು ದೃಶ್ಯರೂಪದಲ್ಲಿ ಇಷ್ಟು ಚೆಂದವಾಗಿ ಚಿತ್ರಿತವಾಗಿದ್ದು ಲೇಖಕಿಯ ಬರವಣಿಗೆಯ ಗೆಲುವೂ ಹೌದು. ನಿರ್ದೇಶಕರು ಹಾಗೂ ನಟರ ಗೆಲುವೂ ಹೌದು. ಎರಡೂ ಅಷ್ಟೇ ಇಷ್ಟವಾದವು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ