ಪುಸ್ತಕದ ಶೀರ್ಷಿಕೆ : ಮಿಂಚಿನ ಬಳ್ಳಿ
ಲೇಖಕರು : ಬಿ. ಎಲ್. ವೇಣು
ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಷನ್ಸ್
ಪ್ರಥಮ ಮುದ್ರಣ : 2001
ಪುಟಗಳು : 348
ಬೆಲೆ : 150 ರೂ.
ಬಿ ಎಲ್ ವೇಣು ಅವರ 'ಮಿಂಚಿನಬಳ್ಳಿ' ಕಾದಂಬರಿಯ ಶೀರ್ಷಿಕೆಯನ್ನು ಕಂಡಾಗ ಇದು ನಾಯಕಿಯ ಪ್ರಾಮುಖ್ಯತೆ ಇರುವ ಅಥವಾ ನಾಯಕಿಯ ಅನ್ವರ್ಥ ರೂಪವಾಗಿ ಕೊಟ್ಟಿರಬಹುದಾ ಎಂದೆನಿಸಿದರೂ.. ಮುಖಪುಟದ ಚಿತ್ರ ಬೇರೆ ಕಥೆ ಹೇಳುತ್ತಿದೆಯೇನೋ ಎಂದೆನಿಸಿತು. ಈ ಕಾದಂಬರಿ ತರಂಗದಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಗಿತ್ತು.
ಕಾದಂಬರಿಯ ನಾಯಕಿ ಹೇಮಾ ಪಟ್ಟಣದ ಕುರಿತು ಕನಸು ಕಂಡಿದ್ದವಳು. ನಯ, ನಾಗರೀಕತೆ, ಸಂಸ್ಕಾರ, ಸಂಸ್ಕೃತಿಯ ಪ್ರತೀಕ, ಆಧುನಿಕತೆ, ವಿದ್ಯಾವಂತರ ಒಡಲು, ವಿವೇಕವಂತರ ತಾಣವೇ ಪಟ್ಟಣವೆಂದು ಭಾವಿಸಿದ್ದವಳಿಗೆ ಭ್ರಮೆ ಹರಿದಿತ್ತು. ಸಿಟಿಯ ಮೋಜಿನ ಜೀವನ ತನ್ನದಾಗಬಹುದು ಎಂದು ಕನಸು ಕಂಡಿದ್ದಳು. ಆದರೆ, ಪರಿಸ್ಥಿತಿ ಹಾಗಿರಲಿಲ್ಲ. ಹೇಮಳ ಅಣ್ಣನಿಗೆ ಸರ್ಕಾರಿ ನೌಕರಿ. ಹಾಗಾಗಿ ವರ್ಗವಾಗುತ್ತಿದ್ದದ್ದು ಸಾಮಾನ್ಯವೇ.. ಪುಟ್ಟ-ಪುಟ್ಟ ಊರುಗಳಲ್ಲಾದರೆ ಕಾಲೇಜು, ಮನೆ, ದೇವಸ್ಥಾನಗಳ ಅಂತರದ ಕುರಿತು ತಲೆಕೆಡಿಸಿಕೊಳ್ಳುವಷ್ಟರಲ್ಲಿಲ್ಲ. ಆದರೆ, ಪಟ್ಟಣದಲ್ಲಿ ಹಾಗಿರಲಿಲ್ಲ. ಅಣ್ಣ ಪೊಲೀಸ್ ಆಗಿದ್ದರಿಂದ ಆಕೆ ಯಾವುದಕ್ಕೂ ಹೆದರುವಂತೆಯೂ ಇರಲಿಲ್ಲ.
ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದವಳಿಗೆ ಅಣ್ಣ-ಅತ್ತಿಗೆಯ ಮನೆಯೇ ಅವಳ ಮನೆಯೂ ಆಗಿತ್ತು. ಸಿನಿಮಾದ ಹುಚ್ಚಿದ್ದ ಹಾಗೂ ಸದಾ ಸಿಡುಕುತ್ತಿದ್ದ ಅತ್ತಿಗೆಯ ಜೊತೆಗೆ ಹೊಂದಿಕೊಂಡು ಹೋಗುತ್ತಿದ್ದಳು. ಹಾಗೆ ಎಲ್ಲದಕ್ಕೂ ಬೇಗ ಹೊಂದಿಕೊಳ್ಳುವ ಅಭ್ಯಾಸವಿತ್ತು ಹೇಮಾಳಿಗೆ. ತನ್ನದೇ ಆದ ಲವಲವಿಕೆ, ಸರಳತೆ, ಸೌಂದರ್ಯದಿಂದ ಹಲವರ ಮಧ್ಯೆಯೂ ಎದ್ದು ಕಾಣುತ್ತಿದ್ದಳು. ಹಾಗೆಯೇ ಧೈರ್ಯವೂ ಹೆಚ್ಚಿಗೆಯೇ ಇತ್ತು.
ಸಿಟಿ ಬಸ್ ನಲ್ಲಿ ಹೇಮಾ ಕಾಲೇಜಿಗೆಂದು ಹೋಗುವಾಗ ಅವಳಿಗೆ ಆದ ಕಹಿ ಅನುಭವ ನೂಕುನುಗ್ಗಲು, ಪುಂಡರ ಕಾಟ, ತಳ್ಳಾಟದ ಜೊತೆಗೆ ಲಾಂಗ್ ಲಚ್ಚನ ಉಪದ್ರವ ಶುರುವಾಗಿತ್ತು. ಆಗ ಒಂದೆರಡು ದಿನ ಅವಳಿಗೆ ಸೀಟು ಬಿಟ್ಟುಕೊಟ್ಟು ಉಪಕಾರ ಮಾಡಿದ್ದು ಅನಂತ. ಆದರೆ, ಆತನೇನೂ ದೊಡ್ಡ ಉಪಕಾರ ಮಾಡಿಲ್ಲ ಎನ್ನುವ ಭಾವದಲ್ಲಿದ್ದವಳಿಗೆ ಆತ ಹೀರೋ ಎನ್ನುವ ಫೀಲ್ ಬರಲೇ ಇಲ್ಲ. ಅದಕ್ಕೆ ಕಾರಣವೆಂದರೆ, ಆತನ ದೈಹಿಕವಾಗಿ ಹೊಡೆದಾಟ ಮಾಡಿ ರೌಡಿಗಳ ಜೊತೆಗೆ ವಿರೋಧ ಕಟ್ಟಿಕೊಳ್ಳುವುದಕ್ಕಿಂತ.. ಬುದ್ಧಿವಂತಿಕೆ ಹಾಗೂ ಮಾತಿನ ಚಾಕಚಕ್ಯತೆಯನ್ನು ಬಳಸಿ ಆಕೆಯನ್ನು ಪಾರು ಮಾಡಿದ್ದ. ಹಾಗೆಂದು ಇದು ಎಷ್ಟು ದಿನ ನಡೆಯಲು ಸಾಧ್ಯ ..?
ತನ್ನ ಅತ್ತಿಗೆ ಶೋಭಾಳ ಜೊತೆಗೆ ಅಣ್ಣ ನರಸಿಂಹ ಸಿನಿಮಾಗೆ ಹೋಗದಿದ್ದಾಗಲೆಲ್ಲಾ ಆಕೆಯ ಜೊತೆಗೆ ಹೇಮ ಹೋಗಬೇಕಾದದ್ದು ಅನಿವಾರ್ಯವಾಗುತ್ತಿತ್ತು. ಹಾಗೆಯೇ ಒಂದು ದಿನ ಸಿನಿಮಾಗೆ ಹೋದಾಗ ಅಲ್ಲಿ ಟಿಕೆಟ್ ಸಿಗದೇ ಪರದಾಡುತ್ತಿದ್ದಾಗ.. ಅಚಾನಕ್ಕಾಗಿ ಅನಂತನ ಭೇಟಿಯಾಗಿ, ಅವನ ದೆಸೆಯಿಂದ ಟಿಕೆಟ್ ಸಿಕ್ಕಿತು. ಆದರೆ, ಲಾಂಗ್ ಲಚ್ಚ ಅಲ್ಲಿಯೂ ಬೆನ್ನು ಬಿಟ್ಟಿರಲಿಲ್ಲ. ಅಲ್ಲಿ ಅವನ ಅಸಭ್ಯ ವರ್ತನೆಗೆ ಹೇಮ ಪೆಟ್ಟು ಕೊಟ್ಟಾಗ ಅಂದು ಬಚಾವ್ ಮಾಡಿದ್ದು ಅನಂತ. ಶೋಭಾ ಇದನ್ನು ನೋಡಿ, ನಿನಗೆ ಪೊಗರು ಜಾಸ್ತಿ ಎಂದು ಕುದ್ದು ಹೋಗಿದ್ದಳು.
ಅನಂತ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾ ಇದ್ದವನು. ನಿಧಾನವಾಗಿ ಹೇಮಳ ಜೊತೆಗೆ ಪ್ರೇಮದಲ್ಲಿ ಬಿದ್ದಿದ್ದ. ಆದರೆ, ಆತನಿಗೆ ಅವಳ ಹೆಸರೇ ಗೊತ್ತಿರಲಿಲ್ಲ.
ಲಾಂಗ್ ಲಚ್ಚ ಎಂಬ ರೌಡಿಯನ್ನು ನರಸಿಂಹನೂ ಮುಟ್ಟಲು ಹಿಂದೆ-ಮುಂದೆ ನೋಡಿದಾಗ ಹೇಮಾ ತಾನು ಸಿಟಿ ಬಸ್ಸಿನಲ್ಲಿ ಹೋಗಲಾರೆನೆಂದು ಸೈಕಲ್ ನಲ್ಲಿ ಹೋಗಲು ಒಪ್ಪಿಗೆ ಪಡೆಯುತ್ತಾಳೆ.
ಕಾಲೇಜಿನಲ್ಲಿ ಮೊದಲ ದಿನವೇ ರವಿ, ಈಕೆಯ ಮೇಲೆ ಕೃಪಾ ದೃಷ್ಟಿ ಬೀರಿರುತ್ತಾನೆ. ಆತ ರಾಜಕಾರಣಿ ನಾಗರಾಜಯ್ಯನ ಮಗ. ಚೆನ್ನಾಗಿ ಓದುತ್ತಿದ್ದನಾದರೂ.. ಪುಂಡಾಟಗಳು ಇದ್ದೇ ಇತ್ತು. ಆದರೆ, ಹೇಮಳ ಸೌಂದರ್ಯ, ಧೈರ್ಯದಿಂದಾಗಿ ಆತ ಅವಳೆಡೆಗೆ ಆಕರ್ಷಿತನಾಗಿದ್ದ. ಆದರೆ, ಹೇಮಾ ಆತನನ್ನು ತಪ್ಪು ತಿಳಿದದ್ದೇ ಹೆಚ್ಚು.
ಹೇಮಳಿಗೆ ಇದ್ದ ಹವ್ಯಾಸವೆಂದರೆ ಪುಸ್ತಕ ಓದುವುದು. ಅದರಲ್ಲಿಯೂ ಪದ್ಮರಾಜನ ಕಾದಂಬರಿಗಳೆಂದರೆ ಆಕೆಗೆ ಪ್ರಾಣ. ಆದರೆ, ಕಾಲಾನಂತರ ತಿಳಿದದ್ದೆಂದರೆ.. ಅನಂತನೇ ಪದ್ಮರಾಜ ಎಂಬುದು. ನಂತರ ಆಕೆ ಅನಂತನಡೆಗೆ ಹೆಚ್ಚು ಹೆಚ್ಚು ಆಕರ್ಷಿತಳಾಗುತ್ತಾಳೆ.
ಕಾಲೇಜಿನಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರ ಆಂಗ್ಲ ಪಾಠವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅವರ ಜೊತೆಗೆ ಹೆಚ್ಚಿನ ಒಡನಾಟ, ಮಾತುಕತೆಯಿಂದ ಹೇಮ ಹತ್ತಿರವಾಗುತ್ತಿದ್ದಂತೆ.. ರವಿಗೆ ಇವರ ಕುರಿತು ಕಣ್ಣುರಿ ಶುರುವಾಗುತ್ತದೆ.
ಅನಂತನ ತಾಯಿಯ ಮಮತೆಯಲ್ಲಿ ರವಿಗೆ ಒಂದು ಪಾಲು ಹೆಚ್ಚೇ ಸಿಗುತ್ತಿತ್ತು. ರವಿಗೆ ತಾಯಿ ಇಲ್ಲದ ಕೊರತೆಯನ್ನು ಆ ತಾಯಿ ನೀಗಿಸಿದ್ದರು. ನಾಗರಾಜಯ್ಯನವರ ದೆಸೆಯಿಂದ ಅವರ ಕಾರ್ಖಾನೆಯಲ್ಲಿಯೇ ಕೆಲಸ ಸಿಕ್ಕಿತ್ತು. ಅವರು ಓದಿಸುತ್ತೇನೆ ಎಂದರೂ.. ತನ್ನ ಸ್ವಾಭಿಮಾನದಿಂದಾಗಿ ಅದಕ್ಕೆ ಒಪ್ಪದ ಅನಂತ ರವಿಯ ಜೊತೆ ಓದಬಹುದಾಗಿದ್ದರೂ.. ದುಡಿಯುವ ಹಾದಿಯನ್ನು ಆಯ್ದುಕೊಂಡು ಅದರ ಜೊತೆಗೆ ಕಾದಂಬರಿಯ ರಚನೆಯ ಮೂಲಕ ಬದುಕು ಕಟ್ಟಿಕೊಂಡಿದ್ದ.
ವಿಪರ್ಯಾಸವೆಂದರೆ ರವಿ ಹಾಗೂ ಅನಂತ ಇಬ್ಬರೂ ಆತ್ಮೀಯ ಗೆಳೆಯರು. ಇಬ್ಬರೂ ಪ್ರೇಮಿಸುತ್ತಿದ್ದದ್ದು ಒಂದೇ ಹುಡುಗಿಯನ್ನು. ಅವಳೇ ಹೇಮಾ. ಅನಂತನಿಗೆ ಆಕೆಯ ಹೆಸರೂ ಗೊತ್ತಿರಲಿಲ್ಲ. ರವಿಯ ಹುಡುಗಿಯ ಕುರಿತು ಕೇಳದ್ದರೂ ಆಕೆಯ ಮುಖ ನೋಡಿರಲಿಲ್ಲ. ಕಾದಂಬರಿಯ ಬಿಡುಗಡೆಯಲ್ಲಿ ಆಕೆ ಒಬ್ಬಳೇ ಎಂಬುದರ ಅರಿವಾಗಿತ್ತು.
ಒಂದು ಪಕ್ಷ ಅನಂತನೇ ತನ್ನ ಪ್ರೇಮವನ್ನು ತ್ಯಾಗ ಮಾಡಲು ಸಿದ್ಧನಿದ್ದರೂ.. ರವಿ ಅದನ್ನು ಒಪ್ಪಲಿಲ್ಲ. ಬದಲಾಗಿ, ಒಂದು ವರ್ಷದ ಗಡುವು ಕೇಳುತ್ತಾನೆ. ಈ ವಿಚಾರ ಯಾರಿಗೂ ತಿಳಿದಿರಲಿಲ್ಲ.
ಒಂದು ವರ್ಷವೆಂಬುದು ಕೆಲವರಿಗೆ ಮಿಂಚಿನಂತೆ ಕಳೆದು ಹೋದರೆ. ಇನ್ನೂ ಕೆಲವರಿಗೆ ನಿಧಾನವಾಗಿ ಕಳೆಯುತ್ತಿತ್ತು. ಹೇಮಾ ತನ್ನ ರಕ್ಷಣೆಯನ್ನು ಮಾಡಿಕೊಳ್ಳಲು ಈಗ ಕರಾಟೆ ಕಲಿಯುತ್ತಿದ್ದಳು. ಅಲ್ಲಿ ತನ್ನ ಸ್ನೇಹಿತ ಜನಾರ್ದನ/ ಜಾನಿಯಿಂದ ರವಿಗೊಮ್ಮೆ ಪೆಟ್ಟಿನ ರುಚಿ ತೋರಿಸಿದ್ದಳು. ಒಮ್ಮೆ ನರಸಿಂಹ ರವಿಯನ್ನು ಚೆನ್ನಾಗಿ ಹೊಡೆದು ಅರೆಸ್ಟ್ ಸಹಾ ಮಾಡಿದ್ದ. ಆದರೆ, ಆತ ನಾಗರಾಜಯ್ಯನವರ ಮಗನೆಂದು ತಿಳಿದಿರಲಿಲ್ಲ. ರವಿ ಎಲ್ಲಿಯೂ ತನ್ನ ಅಸ್ತಿತ್ವವನ್ನು ಬಿಟ್ಟುಕೊಟ್ಟಿರಲಿಲ್ಲ.
ಒಂದು ಹುಡುಗಿಯ ಕಾರಣದಿಂದ ಅವರಿಬ್ಬರ ಸ್ನೇಹ ಮಂಕಾಗಿಯೇ ಮುಂದುವರೆಯುತ್ತಿತ್ತು. ಕಾಲೇಜಿನಲ್ಲಿ ನಡೆದ ಒಂದು ಪ್ರಸಂಗಕ್ಕೆ ರವಿ ಕಾರಣ ಎಂದು ಹೇಮಾ ದ್ವೇಷಿಸುವಾಗ.. ಆ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿದರು ಎಲ್ಲರೂ. ನಂತರ ಆಕೆ ಹಾಕಿದ ಸವಾಲಿನಿಂದ ಕತೆ ಬರೆದ ರವಿ ರಾಜ್ಯಮಟ್ಟದ ವಿದ್ಯಾರ್ಥಿ ಸ್ಪರ್ಧೆಯಲ್ಲಿಯೂ ಗೆದ್ದ. ಪದ್ಮರಾಜನೇ ಅನಂತ ಎಂದು ಗೊತ್ತಾದ ನಂತರ ಆಕೆ ಆತನ ಮನೆಗೂ ಹೋಗಿ ಬರುತ್ತಿದ್ದಳು. ಸ್ನೇಹ ವೃದ್ಧಿಸುತ್ತಿತ್ತು ಹಾಗೂ ಆತನ ತಾಯಿಯೊಡನೆ ಒಡನಾಟ ಗಟ್ಟಿಯಾಗಿತ್ತು.
ತಾನು ಪ್ರೀತಿಸಿದ ಹುಡುಗಿಗಾಗಿ.. ತನ್ನ ಎಲ್ಲಾ ದುರ್ಗುಣಗಳನ್ನು ತೊರೆದು ಆಕೆಗೆ ಇಷ್ಟವಾಗುವಂತೆ ಎಲ್ಲವನ್ನೂ ಬದಲಾಯಿಸಿಕೊಂಡ ರವಿ ಒಂದೆಡೆಯಾದರೆ.. ತನ್ನಷ್ಟಕ್ಕೆ ತಾನು ತನ್ನ ಒಳ್ಳೆಯತನ, ಬರಹದಿಂದಲೇ ಗೆಲ್ಲುತ್ತಿದ್ದ ಅನಂತ ಇನ್ನೊಂದೆಡೆ. ಆಕೆಯ ಸೌಂದರ್ಯದಿಂದ ಆಕೆಯ ಬದುಕಿನಲ್ಲಿ ಆಗುತ್ತಿದ್ದ ಅನರ್ಥಗಳನ್ನು ನೋಡಿದ ಆಕೆಯ ಅತ್ತಿಗೆ ಶೋಭಾ ತನ್ನ ತಮ್ಮನನ್ನೇ ವಿವಾಹ ಮಾಡಲು ಹೊರಟಿದ್ದಳು. ಇತ್ತ ಅನಂತನ ತಾಯಿಗೂ ಆಕೆ ಮೆಚ್ಚುಗೆಯಾಗಿದ್ದಳು. ರವಿಯ ತಂದೆ, ಮಗನನ್ನು ಕೇಳದೆ.. ಆತ ಇಷ್ಟ ಪಟ್ಟದೆಲ್ಲವನ್ನೂ ಕೊಡಿಸಬೇಕೆಂದು.. ತಾನಾಗಿಯೇ ಹೆಣ್ಣು ಕೇಳಲು ಹೊರಟರು.
ಇದೆಲ್ಲದರ ಆಚೆಗೆ ಸಫಲವಾದ ಪ್ರೇಮ ಯಾರದ್ದು..?? ಮಿಂಚಿನ ಬಳ್ಳಿಯಂತಹಾ ಹೇಮಾ ದೊರೆತದ್ದು ಯಾರ ಪಾಲಿಗೆ..?
ಲಾಂಗ್ ಲಚ್ಚನ ದ್ವೇಷ ಮುಂದೆ ಏನಾಯಿತು..?? ನಂಜುಂಡ ಶಾಸ್ತ್ರಿಯನ್ನು ಕಾಲೇಜಿನಿಂದ ದೂರ ಮಾಡಿದ ಪ್ರಸಂಗವಾದರೂ ಏನು..? ಮಿತ್ರನಂತಿದ್ದ ಜಾನಿ ಶತ್ರುವಂತಾದದ್ದಕ್ಕೆ ಕಾರಣವೇನು..??
ಮಿಂಚಿನ ಬಳ್ಳಿ ಎಂದಾಕ್ಷಣ ಕಣ್ಣು ಕೋರೈಸುವ ಪ್ರಕರ ಬೆಳಕು ಕಾಣುತ್ತದೆ. ಆದರೆ, ಅದರ ನಂತರ ಉಳಿಯುವುದು ಕತ್ತಲೆ. ಇಂತಹಾ ಬೆಳಕು-ಕತ್ತಲೆಯ ಆಟದಲ್ಲಿ ಗೆದ್ದವರು ಯಾರು..? ಸೋತವರು ಯಾರು..? ಕಡೆಯವರೆಗೂ ರೋಚಕವಾಗಿ ಎಲ್ಲಿಯೂ ಗುಟ್ಟು ಬಿಟ್ಟುಕೊಡದೆ, ಆಕರ್ಷಕವಾದ ಬರಹದ ಶೈಲಿಯಿಂದ ಓದಿಸಿಕೊಂಡು ಹೋಗುವ ಕಾದಂಬರಿ ಇದು. ಕೆಲವೊಮ್ಮೆ ಇದು ಸಿನಿಮೀಯ ಶೈಲಿ ಎನ್ನಿಸಿದರೂ.. ಅದರಾಚೆಗಿನ ರೋಚಕ ಕಾದಂಬರಿಯ ಓದು ನಮ್ಮದಾಗುತ್ತದೆ. ನಾನು ಓದಿದ ಈ ಲೇಖಕರ ಮೊದಲ ಕಾದಂಬರಿ ಇದು ಇವರ ಬರಹದ ಶೈಲಿ ಬಹಳ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ