ಪುಸ್ತಕದ ಶೀರ್ಷಿಕೆ : ಓ... ನನ್ನ ಲಹರಿ
ಲೇಖಕರು : ಚಿತ್ರಲೇಖ
ಪ್ರಕಾಶಕರು : ಸುಧಾ ಶಿಶು ಸಾಹಿತ್ಯ ಮಾಲೆ
ಪ್ರಥಮ ಮುದ್ರಣ : 2000
ಓ... ನನ್ನ ಲಹರಿ ಎಂಬ ಶೀರ್ಷಿಕೆಯನ್ನು ಕಂಡಾಗ ಮೊದಲಿಗೆ ನೆನಪಾದದ್ದು ಹಾಡು, ಕ್ಯಾಸೆಟ್, ಸಂಗೀತ. ಸಂಗೀತದ ಕ್ಷೇತ್ರದಲ್ಲಿರುವ ಒಬ್ಬಳು ಗಾಯಕಿಯ ಜೀವನದ ಕಥೆಯನ್ನು ಬಿಚ್ಚಿಟ್ಟಿದ್ದಾರೆ ಚಿತ್ರಲೇಖ ಮೇಡಂ.
ಲಹರಿ ನೂರಾರು ಅಪರಿಚಿತ ಅಭಿಮಾನಿಗಳ ನಡುವೆ ಹಾಡು ಹಾಡಿ ಬಂದರೂ.. ಆಕೆಯನ್ನು ಪರಿಚಿತ ಧ್ವನಿಯೊಂದು ತಿರುಗಿ ನೋಡುವಂತೆ ಮಾಡಿತ್ತು. ಅದು ಬೊಗಸೆ ಕಂಗಳ ಕಿಶೋರಿಯೊಬ್ಬಳ ಧ್ವನಿ. ಆ ಕಾರ್ಡನ್ನು ಪಡೆದ ಲಹರಿ ಆ ಮಗುವಿನ ಕುರಿತಾಗಿ ಯೋಚಿಸುತ್ತಿದ್ದಳು. ಆ ಮಗು ಯಾರು..?? ಯಾರು ಕಳುಹಿಸಬಹುದು..?? ಅದರ ಹೆಸರೇನಿರಬಹುದು..?? ಎಂದು ಹಲವಾರು ಪ್ರಶ್ನೆಗಳಿದ್ದರೂ.. ಆ ಕುರಿತು ಕುತೂಹಲ ತೋರುತ್ತಿದ್ದರೂ.. ಮುಂದುವರಿಯುವಷ್ಟು ಧೈರ್ಯವಿರಲಿಲ್ಲ. ಅದಕ್ಕೆ ಕಾರಣ ಅವಳ ಪ್ರಸಿದ್ಧಿ ಎಂದುಕೊಂಡರೆ ತಪ್ಪಾಗಬಹುದು. ಬದಲಾಗಿ ಸತ್ಯಜಿತ್.
ಅನ್ಯೋನ್ಯ ದಂಪತಿಗಳೆಂದರೆ ಹೀಗಿರಬೇಕು ಎಂದು ಜಗತ್ತಿನ ಕಣ್ಣಿಗೆ ಭಾಸವಾಗುತ್ತಿದ್ದ ಸತ್ಯಜಿತ್ ಹಾಗೂ ಲಹರಿ, ಲಹರಿ ಒಬ್ಬಳೇ ಇರುವಾಗ ತೀರ ಕಟುಕನಾಗಿ, ಕಟು ಹೃದಯಿಯಾಗಿ ಆಕೆಯ ಪ್ರತಿ ನಡೆಯನ್ನು ವಿಮರ್ಶಿಸುತ್ತಾ, ಖಂಡಿಸುತ್ತಾ.. ಆಕೆ ತನ್ನ ಸ್ವತ್ತು, ತನ್ನ ಪಂಜರದ ಪಕ್ಷಿಯೇನೋ ಎಂಬಂತೆ ವರ್ತಿಸುತ್ತಿದ್ದ. ಅವನ ಆ ಮುಖ ಜಗತ್ತಿನ ಕಣ್ಣಿಗೆ ಮರೆಯಾಗಿದ್ದು ಲಹರಿಗೆ ಇದರಿಂದ ತಪ್ಪಿಸಿಕೊಳ್ಳುವ ಮಾರ್ಗವೂ ಇರಲಿಲ್ಲ. ಆತನ ಬಳಿ ಅಸಹಾಯಕಳಾಗಿದ್ದಳು.
ಅಷ್ಟಕ್ಕೂ ಲಹರಿ ಆತನ ಕಪಿಮುಷ್ಟಿಗೆ ಸಿಲುಕಿದ್ದಕ್ಕೆ ಕಾರಣ ಆಕೆ ಒಬ್ಬಳು ಅನಾಥೆ. ಅನಾಥೆ ಎಂಬುದಷ್ಟೇ ಕಾರಣವಾಗಿರಲಿಲ್ಲ.. ಅವಳ ಧ್ವನಿಯೇ ಅವಳನ್ನು ಆತನ ಬಳಿ ಸಿಕ್ಕಿಕೊಳ್ಳುವಂತೆ ಮಾಡಿತ್ತು. ಲಹರಿಯ ಮೊದಲ ಹೆಸರು ಲಹರಿಯಲ್ಲ, ಸತ್ಯಜಿತ್ ಹೆಸರು ಕೂಡಾ ಅದಾಗಿರಲಿಲ್ಲ.
ಸತ್ಯಜಿತ್ ಹುಟ್ಟೂರು ಕೃಷ್ಣಗಿರಿ. ಬಡ ಮಾಸ್ತರರ ಮಗನಾಗಿದ್ದ ಆತ ಮೂರು ಹೆಣ್ಣುಗಳ ನಂತರ ಹುಟ್ಟಿದ್ದ ಗಂಡು ಮಗ. ಆತ ಸತ್ಯಸುಂದರ ಎಂಬ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದ. ತಾನು ಹೆಸರಾಂತ ಬಂಗಾಳಿ ನಿರ್ದೇಶಕ ಸತ್ಯಜಿತ್ ರೇ ಅವರಂತಾಗಬೇಕು ಎಂಬ ಹಂಬಲ ಅದು. ಹಂಬಲಗಳೆಲ್ಲವೂ ನೆನಸಾಗಬೇಕು, ಕೈಗೂಡಬೇಕು ಎಂದಾದಾಗ ಎರಡು ದಾರಿಗಳಿರುತ್ತವೆ. ಒಂದು ಅದಕ್ಕೆ ಶ್ರಮಪಡಬೇಕು. ಸರಿಯಾದ ಹಾದಿಯಲ್ಲಿ ನಡೆಯಬೇಕು. ಆದರೆ, ಆತ ಆಯ್ಕೆ ಮಾಡಿಕೊಂಡು ನಡೆಯುತ್ತಿದ್ದ ಹಾದಿಯೇ ಬೇರೆ ಇತ್ತು.
ಶಾಲಾ ದಿನಗಳಿಂದಲೇ ನಾಟಕ, ಸಿನಿಮಾದ ಹುಚ್ಚು ಬೆಳೆಸಿಕೊಂಡಿದ್ದವನು. ಮನೆಯಲ್ಲಿ ಕಾಸು ಕದ್ದು ಗೆಳೆಯರೊಂದಿಗೆ ಸಿನಿಮಾ ನೋಡುತ್ತಿದ್ದ. ಎಸ್.ಎಸ್.ಎಲ್.ಸಿ ನಪಾಸಾದ ನಂತರ ಅಪ್ಪನಿಂದ ಶಿಕ್ಷೆ ಸಿಕ್ಕಿದ್ದಕ್ಕೆ, ಆತನಿಗೆ ಯಾರೂ ಬೇಡವೆನಿಸಿ ಮನೆಯಲ್ಲಿ ಕಡೆಯ ಅಕ್ಕನ ವಿವಾಹಕ್ಕೆಂದು ತಂದಿದ್ದ ಹಣ, ಚಿನ್ನ ಎಲ್ಲವನ್ನೂ ಎತ್ತಿಕೊಂಡು ಪರಾರಿ ಆದವನು ಮತ್ತೆ ಹುಟ್ಟೂರಿಗೆ ಮರಳುವ ಯೋಚನೆ ಮಾಡಲಿಲ್ಲ. ಚಲನಚಿತ್ರ ನಟನಾಗುವ ಆಸೆಯಲ್ಲಿ ಮುಂಬೈ ಸೇರಿದವನು ಕೈಯಲ್ಲಿದ್ದ ಹಣವನ್ನು ಕರಗಿಸಿಕೊಳ್ಳುತ್ತಿದ್ದ. 'ಸೋನಾ' ಎನ್ನುವ ಸಿನಿಮಾ ವೃಂದನರ್ತಕಿಯೊಬ್ಬಳ ಪರಿಚಯದಿಂದ ಲೈಟ್ ಬಾಯ್ ಹುದ್ದೆ ಸಿಕ್ಕಿತ್ತು. ಆದರೆ, ಅಲ್ಲಿನ ಪರಿಸರದ ಪರಿಚಯವಾದವನೇ ದಕ್ಷಿಣದತ್ತ ವಲಸೆ ಬಂದ. ಮದ್ರಾಸಿನ ಒಬ್ಬ ನಿರ್ಮಾಪಕನ ಸ್ನೇಹ ಮಾಡಿಕೊಂಡು, ಕ್ಯಾಮೆರಾ ಚಾಲನೆಯಲ್ಲಿ ಸ್ವಲ್ಪ ತರಬೇತಿ ಪಡೆದಿದ್ದರಿಂದ, ಕಿರುತೆರೆಗೆ ಆ ನಿರ್ಮಾಪಕನನ್ನೇ ಬಳಸಿಕೊಂಡನು.
ಅಚಾನಕ್ಕಾಗಿ ಆತನಿಗೊಂದು ಅದೃಷ್ಟದ ಬಾಗಿಲು ತೆರೆದಿತ್ತು. ನಿರ್ಮಾಪಕ ಹೋಗಬೇಕಿದ್ದ ಸ್ಪರ್ಧೆಗೆ ಆತ ಹೋಗಲು ಸಾಧ್ಯವಾಗದ್ದರಿಂದ.. ಸತ್ಯಜಿತ್ ನನ್ನು ಕಳುಹಿಸಿದ್ದ. ಸ್ಪರ್ಧೆಯಲ್ಲಿ ಆತನ ಮನಸೆಳೆದದ್ದು ಮಧುರ ಕಂಠದ 'ಲಲಿತ'. ಆಕೆಯ ಹಾಡಿನ ಮೋಡಿಗೆ ಸಿಲುಕಿದವನು ತನ್ನನ್ನೇ ಮರೆತಿದ್ದ. ಹಾಗೆಂದು, ಆತ ಕಲಾ ಪ್ರೇಮಿಯೇನಲ್ಲ. ಬದಲಾಗಿ ಕಲೆಯಿಂದ ಲಾಭ ಗಿಟ್ಟಿಸಬಹುದಾದ ವಿಚಾರ ಮಾಡುವ ವ್ಯಾಪಾರಿ.
ಅವಳಿಂದ ಹಣ ಮಾಡಿಕೊಳ್ಳುವ ಆಸೆಯಲ್ಲಿದ್ದವನಿಗೆ, ಮೊದಲಿಗೆ ನಿರ್ಮಾಪಕನ ಬಳಿ ಹೇಳಿದರೆ..?! ಎನಿಸಿದರೂ.. ಆತ ಆಕೆಯನ್ನು ಧ್ವನಿ ಸುರುಳಿಗೆ ಹಾಡಿಸಿ ಹಣವನ್ನು ಗಂಟು ಮಾಡಿಕೊಂಡರೆ ತನಗೆ ಲಾಭವಿಲ್ಲವೆಂದು ದೊಡ್ಡ ಉಪಾಯವನ್ನೇ ಮಾಡಿದ್ದ.
ಆಶ್ರಮದ ಅನಾಥ ಹುಡುಗಿಯೊಬ್ಬಳು ಗಾಯನ ಸ್ಪರ್ಧೆಯಲ್ಲಿ ತನಗೆ ಇಷ್ಟವಾದಳೆಂದು, ತಾನು ಆಕೆಯನ್ನೇ ಮದುವೆಯಾಗುತ್ತೇನೆಂದು ಹೇಳಿ ನಿರ್ಮಾಪಕನ ಸಹಾಯ ಪಡೆದು, ಆತನ ಹೆಸರಿನ ಬಲದಿಂದ ತನ್ನ ನಿಜವಾದ ಪರಿಸ್ಥಿತಿಯನ್ನು ಮರೆಮಾಚಿ.. ಬಾಡಿಗೆ ತಂದೆ-ತಾಯಿಯರ ಸಹಾಯದಿಂದ ಅಪ್ರಾಪ್ತ ವಯಸ್ಸಿನ ಲಲಿತಾಳನ್ನು ವಿವಾಹ ಮಾಡಿಕೊಂಡು ಬೆಂಗಳೂರಿಗೆ ಹೊರಟ.
ಲಲಿತಳಿಗೆ ಆಯ್ಕೆ ಇರಲಿಲ್ಲ. ಮೊದಲಿಗೆ ಗಾಬರಿಗೊಂಡರೂ.. ದುಃಖವಾದರೂ.. ಆಶ್ರಮದ ನಿರ್ಧಾರವನ್ನು ಬದಲಿಸುವ ಅಥವಾ ಕೇಳುವ ಅಧಿಕಾರವಿಲ್ಲದ್ದುದರಿಂದ ಸುಮ್ಮನಾದಳು. ಬೆಂಗಳೂರಿಗೆ ಬಂದ ನಂತರ ಪತಿಯ ಗುಣಾವಗುಣಗಳ ಪರಿಚಯವಾಗಿತ್ತು. ಆತ ಆಕೆಯನ್ನು ತನ್ನ ಹೆಂಡತಿಯಂತೆ, ಎಂದಿಗೂ ದೈಹಿಕ ಸುಖಕ್ಕೆ ಬಳಸಿಕೊಳ್ಳಲಿಲ್ಲ. ಆಕೆಯನ್ನು ಗಾಯಕಿಯನ್ನಾಗಿ ಮಾಡಿ ಅದರಿಂದ ಬರುವ ಲಾಭದಲ್ಲಿ ಬದುಕಬೇಕೆಂಬ ಆಸೆ ಹೊಂದಿದ್ದವನು. ಅವಳಿಗೆ ಕನ್ನಡ ಕಲಿಸಿ, ಸಂಗೀತದ ಪಾಠ ಕಲಿಸಿ, ದೊಡ್ಡ ಗಾಯಕಿಯಾಗುವ ಅವಕಾಶದತ್ತ ಕರೆದೊಯ್ದ. ಆಕೆ ಸಂಗೀತದಲ್ಲಿಯೇ ತನ್ನ ಬದುಕನ್ನು, ಬದುಕಿನ ಖುಷಿಯನ್ನು ಕಾಣಬೇಕಿತ್ತು. ಈ ಪಯಣದಲ್ಲಿ ಲಲಿತ 'ಲಹರಿ'ಯಾದಳು.
ಹೊರಗೆ ಸಭ್ಯಸ್ಥನಂತೆ ಕಾಣುವ ಸತ್ಯಜಿತ್, ಏಕಾಂತದಲ್ಲಿ ವಿಷ ಕಾರುತ್ತಿದ್ದ. ಪ್ರತಿಕ್ಷಣ ಚುಚ್ಚಿ ನೋಯಿಸುತ್ತಿದ್ದ. ಅವಳು ತನಗೆ ಹೆದರಿ ನಡೆಯಲಿ ಎಂಬುದೇ ಆತನ ಭಾವನೆ. ಅದು ಅವಶ್ಯಕವೂ ಆಗಿತ್ತು. ತನ್ನ ಪಂಜರದ ಪಕ್ಷಿ ಹಾರದಂತೆ ಕಾವಲು ಕಾಯುತ್ತಿದ್ದ. ಈ ಎಚ್ಚರಿಕೆ ಹೊರಗಿನವರಿಗೆ ಪ್ರೀತಿಯಂತೆ ಕಂಡರೆ ಲಹರಿಗೆ ಅದು ಸೆರೆಮನೆ.
ಹಾಡಲು ಹಾಡನ್ನು ಆಯ್ಕೆ ಮಾಡುವುದು, ಸ್ಥಳದ ಆಯ್ಕೆ ಸಹ ಗಾಯಕರ ಆಯ್ಕೆ, ಅಲಂಕಾರದ ಆಯ್ಕೆ ಎಲ್ಲವನ್ನೂ ನಯವಾಗಿಯೇ ಆಯ್ಕೆ ಮಾಡುತ್ತಿದ್ದ ಸತ್ಯಜಿತ್ ನ ಆಯ್ಕೆಗಳನ್ನು ಒಪ್ಪಿಕೊಳ್ಳದೆ ಲಹರಿಗೆ ಬೇರೆ ದಾರಿ ಇರಲಿಲ್ಲ. ಆಕೆಯ ಸಂಭಾವನೆಯ ಕುರಿತು ಆಕೆಗೆ ಗೊತ್ತೇ ಇರಲಿಲ್ಲ. ಹಣದ ಪ್ರತಿ ವಿಚಾರವನ್ನೂ ನಿರ್ಧರಿಸುತ್ತಿದ್ದದ್ದು ಸತ್ಯಜಿತ್. ಆಕೆಗೆ ಯಾರೊಂದಿಗೂ ಮಾತನಾಡುವ ಅಧಿಕಾರವಿಲ್ಲ ಅವನಿಲ್ಲದೆ ಎಲ್ಲಿಗೂ ಹೊರ ಹೋಗುವಂತಿಲ್ಲ. ಅವನನ್ನು ಮೀರಿ ಯಾರೂ ಲಹರಿಯ ಬಳಿ ಬರುವಂತಿಲ್ಲ. ಆದರೆ, ಇದೆಲ್ಲವನ್ನು ಮೀರಿ ಆ ಪುಟ್ಟ ಹುಡುಗಿಯ ಕಾರ್ಡು ಮಾತ್ರ ತಲುಪುತ್ತಿತ್ತು.
ಅದನ್ನು ಜೋಪಾನವಾಗಿರಿಸಿದ್ದ ಲಹರಿ ಅದನ್ನು ಸತ್ಯಜಿತ್ ಕೈಗೆ ಸಿಗುವಂತೆ ಇಟ್ಟಿರಲಿಲ್ಲ. ಆದರೆ, ಅಚಾನಕ್ಕಾಗಿ ಆತನ ಕೈಗೆ ಸಿಕ್ಕ ನಂತರ ಆತನ ಅನುಮಾನ ಮೇರೆ ಮೇರಿ ಕೈಯಲ್ಲಿದ್ದ ಬೆಲ್ಟ್ ನಿಂದ ನಿರ್ದಯವಾಗಿ ಹೊಡೆದು ನೋಯಿಸುತ್ತಿದ್ದ. ಪ್ರಜ್ಞಾಶೂನ್ಯಳಾದ ಲಹರಿ ಎಚ್ಚೆತ್ತಾಗ ಕಂಡದ್ದು ರತ್ನಗಂಬಳಿಯ ಮೇಲಿದ್ದ ಸತ್ಯಜಿತ್ ನ ಹೆಣ.
ಆತನನ್ನು ಯಾರೋ ಕಠೋರವಾಗಿ ತಿವಿದು ಕೊಂದಿದ್ದರು. ಆ ಆಘಾತದಲ್ಲಿ ಇರುವಾಗಲೇ ರೂಮಿನ ಬಳಿ ಬಂದ ಕೆಲಸದ ವಿಶಾಲಮ್ಮ ಈಕೆಯೇ ಕೊಲೆ ಮಾಡಿದ್ದಾಳೆಂದು ಬೊಬ್ಬಿಟ್ಟಳು. ಮುಂದೆ ನಡೆದಿದ್ದು ಲಹರಿಯ ಬಂಧನ.
ಇನ್ಸ್ಪೆಕ್ಟರ್ ಚಂದ್ರಯ್ಯ ಲಹರಿಯ ಅಭಿಮಾನಿಯಾಗಿದ್ದವರು. ಲಹರಿಯಂತಹಾ ಮೃದು ಮನಸ್ಸಿನ ಗಾಯಕಿ ಹೀಗೆ ಮಾಡಿರಲು ಸಾಧ್ಯವಿಲ್ಲವೆಂದುಕೊಂಡಿದ್ದರು. ಆದರೆ, ಲಹರಿ ತಾನೇ ಕೊಲೆಗಾರ್ತಿ ಎಂದು ಒಪ್ಪಿಕೊಳ್ಳಲು ಸಿದ್ದಳಾಗಿದ್ದಳು. ಅವಳ ಆ ನಿರ್ಧಾರಕ್ಕೆ ಕಾರಣವೇನು..?? ಲಹರಿಯೇ ಆ ಕೊಲೆ ಮಾಡಿದಳೇ..?? ಅಷ್ಟು ದಿನದ ಕೋಪ, ಆಕ್ರೋಶ ಒಮ್ಮೆಗೆ ಸ್ಪೋಟವಾಯಿತೇ..ಮ್ಮ್ ಅಥವಾ ಆ ಕೊಲೆ ಮಾಡಿದವರು ಲಹರಿಗೆ ಬೇಕಾದವರೇ..?
ಅಥವಾ ಇದಿಷ್ಟೂ ನಮ್ಮ ಕಣ್ಣಿಗೆ ಸಿಕ್ಕ ನೋಟವೇ..?? ಸತ್ಯ ಬೇರೆ ಇದೆಯೇ..?? ಸತ್ಯಜಿತ್ ನಂತೆ ಲಹರಿಗೂ ಬೇರೆಯ ಮುಖ ಇದ್ದಿರಬಹುದೇ..??
ಆ ಕಾರ್ಡು ಕೊಡುತ್ತಿದ್ದ ಮಗು ಯಾರು.. ಲಹರಿಯ ಮುಂದಿನ ಜೀವನ ಏನಾಯ್ತು..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಓ... ನನ್ನ ಲಹರಿ ಕಾದಂಬರಿಯನ್ನು.
ಹೆಣ್ಣೊಬ್ಬಳ ಅಸಹಾಯಕತೆ ಗಂಡಿನ ಅಸ್ತ್ರವಾದದ್ದು ಹಾಗೂ ಆಕೆಯ ಪ್ರತಿಭೆ ಹಣದ ದಾಹಕ್ಕೆ, ದುರಾಸೆಗೆ ಸಿಲುಕಿ ಆಕೆಯ ಮನಸ್ಸು, ದೇಹ ನಲುಗಿದ ಪರಿ ಯನ್ನು ಇಂಚಿಂಚು ಬಿಡಿಸಿರುತ್ತದೆ ಈ ಕಾದಂಬರಿ. ಪ್ರತಿಭಾವಂತರ ಬದುಕಿನಲ್ಲಿ, ಸಾಮಾಜಿಕ ಜೀವನದಲ್ಲಿ ಕಂಡು ಬರುವ.. ಅವರ ತೋರಿಕೆಯ ಜೀವನಕ್ಕೂ ಹಾಗೂ ಅಂತರಂಗದ ಜೀವನಕ್ಕೂ ಹೀಗೂ ವ್ಯತ್ಯಾಸಗಳಿರಬಹುದು ಎನ್ನುವ ಆಲೋಚನೆಗೆ ಹಚ್ಚಿದ ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ