ಶನಿವಾರ, ಏಪ್ರಿಲ್ 18, 2026

ದಿಕ್ಕುಗಳಿಲ್ಲದ ದಾರಿ (ಪುಸ್ತಕ ಯಾನ - 249)



ಪುಸ್ತಕದ ಶೀರ್ಷಿಕೆ : ದಿಕ್ಕುಗಳಿಲ್ಲದ ದಾರಿ

ಲೇಖಕರು : ಮೀನಾ ಹರೀಶ್ ಕೋಟ್ಯಾನ್

ಪ್ರಕಾಶಕರು : ಓಂ ಶಕ್ತಿ ಪ್ರಕಾಶನ

ಪ್ರಥಮ ಮುದ್ರಣ : 2007


ಒಲವಿನ ಪ್ರಿಯಲತೆ ಕಾದಂಬರಿಯಲ್ಲಿ ಇರುವ ಮತ್ತೊಂದು ಸಂಯುಕ್ತ ಕಾದಂಬರಿ 'ದಿಕ್ಕುಗಳಿಲ್ಲದ ದಾರಿ'. ಶೀರ್ಷಿಕೆಯೇ ವಿಭಿನ್ನವಾಗಿ ಸೆಳೆಯುತ್ತದೆ. ಸಾಮಾನ್ಯವಾಗಿ ಅರ್ಥೈಸಿಕೊಳ್ಳುವುದಾದರೆ.. ಯಾವುದಾದರೂ ಒಂದು ದಾರಿ ಯಾವುದಾದರೂ ಒಂದು ದಿಕ್ಕಿಗೆ ತೆರೆದೇ ಇರುತ್ತದೆ. ಆದರೆ, ಬದುಕಿನಲ್ಲಿ ಕೆಲವೊಮ್ಮೆ ದಾರಿ ಕಾಣದೆ ಕೂರಬಹುದು ಅಥವಾ ದಿಕ್ಕು ಕಾಣದೆ ಕೂರಬಹುದು. ಆದರೆ, ಆಯ್ದುಕೊಳ್ಳುವ ದಾರಿಗೆ ಯಾವ ದಿಕ್ಕಿನ ಸಾಗುತ್ತಿದ್ದೇವೆ ಎನ್ನುವ ಪರಿವೇ ಇರುವುದಿಲ್ಲ. ಅಂತಹಾ ಬದುಕು ಸಾಗುವುದು ಒಂದು ಅನಿವಾರ್ಯಕ್ಕೆ ಸಿಲುಕಿ.. ಇಲ್ಲವೇ ನಮ್ಮದೇ ಆಯ್ಕೆಯಿಂದ ನಾವೇ ತಂದುಕೊಂಡ ಪರಿಸ್ಥಿತಿಗೆ. ಈ ಕಾದಂಬರಿಯಲ್ಲಿಯೂ ಇಂತಹದ್ದೇ ಒಂದು ಸಂದರ್ಭವಿದೆ. 


ಭಾನುಮತಿ ಹಾಗೂ ರವಿಶಂಕರ್ ದಂಪತಿಗಳಿಗೆ ಒಬ್ಬಳೇ ಮಗಳು ಸುಪ್ರಭಾ. ಯಾವುದಕ್ಕೂ ಕೊರತೆ ಇರಲಿಲ್ಲ. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದಂತಿದ್ದವಳು. ಮಗಳನ್ನು ಎಷ್ಟು ಮುದ್ದು ಮಾಡಿದರೂ ಸಾಲುತ್ತಿರಲಿಲ್ಲ ಹೆತ್ತವರಿಗೆ. ಸುಪ್ರಭಾ ಬಂದ ಮೇಲೆ ತಮ್ಮ ಅದೃಷ್ಟದ ಬಾಗಿಲು ತೆರೆಯಿತು, ಶ್ರೀಮಂತಿಕೆ ಹೆಚ್ಚಾಯಿತು ಎನ್ನುತ್ತಲೇ ಅವಳ ಮೇಲೆ ಅತಿರೇಕದ ಪ್ರೀತಿ ತೋರುತ್ತಿದ್ದರು. ಆದರೆ, ಸುಪ್ರಭಾ ಇದೆಲ್ಲದರಿಂದ ಹಠಮಾರಿಯಾಗಿಯೇ ಬೆಳೆಯುತ್ತಿದ್ದಳು. ಹೆಂಡತಿ ಎಷ್ಟೇ ಎಚ್ಚರಿಕೆ ಕೊಟ್ಟರು ರವಿಶಂಕರ್ ದೊಡ್ಡವಳಾದ ಮೇಲೆ ಸರಿ ಹೋಗುತ್ತಾಳೆ ಎಂದು ಅದನ್ನು ನಿರ್ಲಕ್ಷಿಸುತ್ತಿದ್ದರು. ಒಂದು ದಿನ ತನ್ನ ತೀರ್ಮಾನಕ್ಕೆ ತಿರುಗಿ ಬಿದ್ದಾಗ ಅದರ ತೀವ್ರತೆಯನ್ನು ಅರಿವಾಗಿಸಿಕೊಂಡಿದ್ದರು.


ರವಿಶಂಕರ್ ಅವರಿಗೆ ಅಕ್ಕ ಪಾರ್ವತಮ್ಮನೆಂದರೆ ವಿಶೇಷ ಪ್ರೀತಿ, ಭಕ್ತಿ. ಅದೇ ಕಾರಣಕ್ಕೆ ಅವರ ಹಿರಿಯ ಮಗ ರೋಹಿತ್ ಗೆ ಸುಪ್ರಭಾಳನ್ನು ಕೊಡಬೇಕೆಂದು ಮೊದಲೇ ನಿಶ್ಚಯಿಸಿಕೊಂಡಿದ್ದರು. ಸುಪ್ರಭಾ ಡಿಗ್ರಿ ಮುಗಿಸುತ್ತಲೇ ಮನೆಯಲ್ಲಿ ಇದನ್ನು ವ್ಯಕ್ತಪಡಿಸಿದ್ದರು. ಭಾನುಮತಿಯವರಿಗೆ ಇದರ ಕುರಿತು ವಿರೋಧವಿರಲಿಲ್ಲ. ಸರ್ಕಾರಿ ಹುದ್ದೆಯಲ್ಲಿದ್ದು ಕೈ ತುಂಬಾ ಸಂಬಳ ಪಡೆಯುತ್ತಿದ್ದ ರೋಹಿತ್ ನ ಗುಣ, ಸ್ವಭಾವ ಬಲ್ಲವರು. ಸುಪ್ರಭಾಳಿಗೆ ಅವನು ಸರಿಯಾದ ಜೋಡಿಯಾಗಬಲ್ಲ ಎನ್ನಿಸಿತು. ಆದರೆ, ಸುಪ್ರಭಾ ಮಾತ್ರ ಆತನನ್ನು ಮದುವೆಯಾಗುವುದಿಲ್ಲವೆಂದೇ ಹಠ ಹಿಡಿದಿದ್ದಳು. ಮಗಳ ಹಟಮಾರಿತನದ ಸ್ವರೂಪವೆಂದು ಇಬ್ಬರೂ ನಿರ್ಲಕ್ಷಿಸಿ ನಿಶ್ಚಿತಾರ್ಥಕ್ಕೆ ಮುಂದುವರೆದಿದ್ದರು. ಆದರೆ, ನಿಶ್ಚಿತಾರ್ಥದ ದಿನ ಸುಪ್ರಭಾ ಎಲ್ಲಿಯೂ ಕಾಣದೆ ಮರ್ಯಾದೆ ಹೋದಾಗಲೇ ಇಬ್ಬರೂ ಎಚ್ಚೆತದ್ದು. 


ಸುಪ್ರಭಾಳಿಗೆ ಮದುವೆ ಇಷ್ಟವಿಲ್ಲ ಎನ್ನುವುದೇ ಕಾರಣವಾಗಿದ್ದು ಹೌದಾದರೂ.. ಸುಪ್ರಭಾಳಿಗೆ ಯಾಕೆ ಆ ಮದುವೆ ಇಷ್ಟವಿಲ್ಲ ಎನ್ನುವುದರ ಕಾರಣ ಹುಡುಕಿದ್ದರೆ ಎಲ್ಲವೂ ಸರಿಯಾಗುತ್ತಿತ್ತೇನೋ.. ಆದರೆ, ಹಾಗಾಗಿರಲಿಲ್ಲ. ಎಲ್ಲರೂ ಹೋದ ನಂತರ ಸಂಜೆ ನಿಧಾನವಾಗಿ ಮನೆಗೆ ಬಂದ ಸುಪ್ರಭಾಳನ್ನು ಎಲ್ಲರೂ ತರಾಟೆಗೆ ತೆಗೆದುಕೊಂಡಿದ್ದರು. ಆಕೆ ಹೇಳಿದ ಕಾರಣ ಎಲ್ಲರ ಮನಸ್ಸನ್ನು ಇನ್ನೂ ಕೆಡಿಸಿತು.


ಆಕೆ ಪ್ರೀತಿಸುತ್ತಿದ್ದದ್ದು ಹಾಗೂ ಮದುವೆಯಾಗಬೇಕು ಎಂದುಕೊಂಡದ್ದು ರೋಹಿತ್ ನ ತಮ್ಮ ರಾಕೇಶ್ ನನ್ನು. ರೋಹಿತ್ ಎಷ್ಟು ಗಂಭೀರನೋ ಅದರ ತದ್ವಿರುದ್ಧ ರಾಕೇಶ್. ಸದಾ ಹಸನ್ಮುಖಿ, ಹುಡುಗಾಟಕೆಯ ಸ್ವಭಾವ, ಆಯಸ್ಕಾಂತದಂತೆ ಸೆಳೆಯುವ ನಗು. ಯಾರೊಂದಿಗೆ ಹೇಗೆ ಮಾತಾಡಬೇಕು ಎಂದು ಗೊತ್ತಿದ್ದ ಚತುರ. ಆತನ ಈ ವಿಶೇಷ ಗುಣಗಳೇ ಆಕೆಯನ್ನು ಸೆಳೆದಿದ್ದು. ಆದರೆ ರಾಕೇಶ್ ಗೆ ಆಕೆ ತನ್ನನ್ನು ಪ್ರೀತಿಸುತ್ತಿರಬಹುದು ಎಂಬುದರ ಕಿಂಚಿತ್ ಸುಳಿವೂ ಇರಲಿಲ್ಲ. ಎಲ್ಲರೂ ಸುಪ್ರಭಾಳೊಟ್ಟಿಗೆ ರಾಕೇಶನನ್ನು ಅಪಾರ್ಥ ಮಾಡಿಕೊಳ್ಳುವಂತಾಗಿದ್ದರು. ಬೇರೆ ದಾರಿ ಇಲ್ಲದೆ, ನಿಶ್ಚಿತಾರ್ಥ ತಪ್ಪಿ ಹೋದ ಹುಡುಗಿಯನ್ನು ಮತ್ತೆ ಬೇರೆಯವರಿಗೆ ವಿವಾಹ ಮಾಡಿಕೊಡುವುದು ಕಷ್ಟವೆಂದು ರಾಕೇಶನನ್ನೇ ಕಾಡಿ-ಬೇಡಿ ಈ ಮದುವೆಗೆ ಒಪ್ಪಿಸಿದ್ದರು ರವಿಶಂಕರ್.


ಪಾರ್ವತಮ್ಮ ಹಾಗೂ ಸದಾನಂದಯ್ಯನವರು ಅಕ್ಕ-ಬಾವನೇ ಆಗಿದ್ದರೂ.. ಮಗಳ ಮದುವೆಗೆ ಒಪ್ಪಿ ಅವಳೊಟ್ಟಿಗೆ ಚೆನ್ನಾಗಿರುತ್ತಾರೆ ಎಂಬ ನಂಬಿಕೆ ಅವರಿಗಿರಲಿಲ್ಲ. ಮಗಳ ಕುರಿತು ಮನಸ್ಸು ಕಲ್ಲು ಮಾಡಿಕೊಂಡಿದ್ದರು. ಆದರೆ, ಸುಪ್ರಭಾ ಮದುವೆಯಾದರೆ ರಾಕೇಶನನ್ನೇ ಎಂದು ಹಠ ಹಿಡಿದು ಕೂತುಬಿಟ್ಟಿದ್ದಳು. ರೋಹಿತ್ ರಾಕೇಶನನ್ನು ಮದುವೆಯಾದರೆ ನಿನಗೆ ಕಷ್ಟ ತಪ್ಪಿದ್ದಲ್ಲ ಎಂಬ ಎಚ್ಚರಿಕೆ ಕೊಟ್ಟಾಗಲೂ ಆಕೆ ಅದನ್ನು ಅರ್ಥಮಾಡಿಕೊಳ್ಳಲಿಲ್ಲ. 


ರಾಕೇಶ್ ಹಾಗೂ ಸುಪ್ರಭಾ ಮದುವೆಯಾದ ಒಂದೇ ವಾರದೊಳಗೆ ರೋಹಿತ್ ಗೂ ಮದುವೆಯಾಗಿತ್ತು. ರೋಹಿತ್ ಪತ್ನಿ ಅಶ್ವಿನಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದವಳು. ಬಹಳ ಸುಲಭವಾಗಿ ಇವರಿಗೆಲ್ಲಾ ಹೊಂದಿಕೊಂಡಳಾದರೂ.. ಕೆಲವೇ ದಿನಗಳಲ್ಲಿ ರೋಹಿತ್ ಬೇರೆ ಮನೆ ಮಾಡಿ ತನ್ನ ವಾಸ್ತವ್ಯ ಬದಲಾಯಿಸಿದ್ದ. ಅಶ್ವಿನಿಗೆ ಇಲ್ಲಿಗೆ ಸ್ಕೂಲಿಗೆ ತುಂಬಾ ದೂರವಾಗುತ್ತದೆ ಎನ್ನುವ ನೆಪ ಹೇಳಿದ್ದ. ಅದು ಸುಳ್ಳೆಂದು ತಿಳಿದಿದ್ದರೂ.. ಸದ್ಯಕ್ಕೆ ಅದೇ ವಾಸಿ ಎಂಬ ತೀರ್ಮಾನಕ್ಕೆ ಬಂದಂತಿತ್ತು ಎಲ್ಲರೂ. 


ಮದುವೆಯಾದ ಮೊದಲಲ್ಲಿ ಎಲ್ಲವೂ ಚೆನ್ನಾಗಿತ್ತೆನ್ನಿಸಿದರೂ.. ರಾಕೇಶನ ಕಲ್ಯಾಣ ಗುಣಗಳು ಸುಪ್ರಭಾಳಿಗೆ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋದವು. ನೀನು ಬೇರೆ ಯಾರನ್ನೋ ಪ್ರೀತಿಸಿ ಆತನೊಂದಿಗೆ ಓಡಿ ಹೋಗಿ ಅಲ್ಲಿ ಮೋಸವಾದಾಗ ನನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿ ಮದುವೆಯಾದದ್ದು ಎನ್ನುವ ಆಪಾದನೆ ಮಾಡಿದ್ದ. ಆತ ರವಿಶಂಕರ್ ಅವರಿಂದ ಲಕ್ಷ-ಲಕ್ಷ ಹಣ ಪಡೆದೇ ಸುಪ್ರಭಾಳನ್ನು ಮದುವೆಯಾಗಲು ಒಪ್ಪಿದ್ದು. ಅಷ್ಟೇ ಅಲ್ಲದೆ, ಆತನಿಗೆ ಕುಡಿತದ ಚಟವೂ ಇತ್ತು. ಒಮ್ಮೆ ಕುಡಿತದ ನಶೆಯಲ್ಲಿ ಕ್ರಿಸ್ಟಿ ಎಂಬ ಹೆಸರನ್ನು ಗುನುಗುನಿಸಿದ್ದ. ಅವರಿಬ್ಬರ ಪ್ರೇಮದ ಕುರಿತ ವಿಚಾರವೂ ತಿಳಿದಾಗ ಸುಪ್ರಭಾ ಭೂಮಿಗಿಳಿದು ಹೋಗಿದ್ದಳು. ಆದರೆ, ಇದಲ್ಲವನ್ನೂ ಯಾರ ಬಳಿಯೂ ಹಂಚಿಕೊಳ್ಳುವಂತಿರಲಿಲ್ಲ. 


ಮೊದಲು ಆತ ನಾರ್ತ್ ಇಂಡಿಯಾ ಟೂರ್ ಎಂದು ಹೋದಾಗ 15 ದಿನ ಅಮ್ಮನ ಮನೆಯಲ್ಲಿದ್ದು ಹೋಗಲು ಬಂದವಳು ನಂತರ ತಾನು ಎಲ್ಲಿಯೂ ಹೋಗಬಾರದು ರಾಕೇಶ್ ಇದ್ದರೂ.. ಇಲ್ಲದಿದ್ದರೂ.. ತನ್ನ ಅತ್ತೆಯ ಮನೆಯಲ್ಲಿಯೇ ಇರಬೇಕು ಎನ್ನುವ ತೀರ್ಮಾನವನ್ನು ತೆಗೆದುಕೊಂಡು ತನ್ನ ಬದುಕಿನ ಶಿಕ್ಷೆಯನ್ನು ತಾನೇ ವಿಧಿಸಿಕೊಂಡಿದ್ದಳು.


ಆರು ತಿಂಗಳಾದರೂ ಮಗಳು ತವರಿಗೆ ಬಾರದಿದ್ದಾಗ ರವಿಶಂಕರ್ ಅವರು ಹೆಂಡತಿಯಲ್ಲಿ ವಿಚಾರಿಸಲು ಹೇಳಿದ್ದರು. ಅಷ್ಟರಲ್ಲಾಗಲೇ ಮಗಳಿಂದಾದ ಅಪಮಾನ ಹಾಗೂ ಮಗಳ ಮೇಲಿನ ಕೋಪ ಎರಡೂ ಕರಗುತ್ತಾ ಬಂದಿತ್ತು. ಆದರೆ, ಸುಪ್ರಭಾ ಸ್ವಾಭಿಮಾನಿ. ಅಂದೇ ತಂದೆಯ ಹಣ, ಆಸ್ತಿ ಎಲ್ಲವೂ ತನಗೆ ಬೇಡವೆಂದೇ ತೊರೆದು ಬಂದಿದ್ದಳು. ಮತ್ತೆ ದೀನಳಾಗಿ ಹೋಗಲು, ತನ್ನ ನೋವನ್ನು ಅವರಿಗೂ ಹಂಚಲು ಇಚ್ಛಿಸಲಿಲ್ಲ.


ಸುಪ್ರಭಾಳ ಈ ನಡೆ ಅವಳ ಅತ್ತೆಗೂ ಸೋಜಿಗ. ಇಬ್ಬರೂ ಗಂಡ-ಹೆಂಡತಿಯರಂತಿದ್ದರೂ ಕೆಲವೊಮ್ಮೆ ಅವರ ವರ್ತನೆ ಅನುಮಾನ ತರುತ್ತಿತ್ತು ಅವರಿಗೆ. ರಾಕೇಶನ ಕುರಿತ ನಿಜ ಸ್ವರೂಪ ಗೊತ್ತಿದ್ದು ರೋಹಿತ್ ಒಬ್ಬನಿಗೇ.


ಆದರೆ, ಒಂದು ದಿನ ಬಂದ ರೋಹಿತ್ ತಿಳಿಸಿದ ಸತ್ಯ ಅವನ ತಾಯಿಯಿಂದ ಅರಗಿಸಿಕೊಳ್ಳಲಾಗಲಿಲ್ಲ. ಸುಪ್ರಭಾಳಿಗೆ ಎಲ್ಲವೂ ಗೊತ್ತಿದ್ದರೂ.. ರೋಹಿತ್ ಅದೆಲ್ಲವನ್ನು ಸರಿ ಮಾಡುತ್ತೇನೆ ಎಂದು ಹೊರಟಾಗ ತಡೆದಿದ್ದೇಕೆ .?? ರೋಹಿತ್ ತಿಳಿಸಿದ ಸತ್ಯವಾದರೂ ಏನು..?? ನಿಜವಾಗಿ ಕ್ರಿಸ್ಟಿ ಹಾಗೂ ರಾಕೇಶನ ನಡುವಲ್ಲಿದ್ದ ಸಂಬಂಧವೇನು..?? ರಾಕೇಶ್ ಸುಪ್ರಭಾಳ ಮೇಲೆ ಮಾಡಿದ ಆರೋಪದಲ್ಲಿ ಹುರುಳಿತ್ತೇ..?? ಎಲ್ಲವನ್ನೂ ತಿಳಿಯಲು ಓದಿ 'ದಿಕ್ಕುಗಳಿಲ್ಲದ ದಾರಿ' ಕಾದಂಬರಿಯನ್ನು.


ಹದಿಹರೆಯದಲ್ಲಿ ದುಡುಕಿ, ಒಮ್ಮುಖ ಪ್ರೀತಿಯಿಂದ ಆತನನ್ನೇ ಮದುವೆಯಾಗುತ್ತೇನೆ ಎಂದು ಹಠ ಮಾಡಿ ಹೊರಡುವ ಹೆಣ್ಣುಮಕ್ಕಳ ಬದುಕು ಹೀಗೆ ದಿಕ್ಕಿಲ್ಲದ ದಾರಿಯಾಗಬಹುದು ಎನ್ನುವುದನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ ಲೇಖಕಿ. ಇದು ಇಂತಹಾ ಹೆಣ್ಣುಮಕ್ಕಳಿಗೆ ಒಂದು ಪಾಠದಂತೆಯೂ ಇದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ