ಪುಸ್ತಕದ ಶೀರ್ಷಿಕೆ : ನಿನ್ನೆಯಿಂದ ದೇವರಿಲ್ಲ
ಲೇಖಕರು : ವಿಷ್ಣು ಭಟ್ ಹೊಸ್ಮನೆ
ಪ್ರಕಾಶಕರು : ಗೋಮಿನಿ ಪ್ರಕಾಶನ
ಪ್ರಥಮ ಮುದ್ರಣ : 2023
ಪುಟಗಳು : 100
ಬೆಲೆ : 100 ರೂ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಿಬೈಲಿನವರಾದ ವಿಷ್ಣು ಭಟ್ ಹೊಸ್ಮನೆಯವರು ಪ್ರಸ್ತುತ ಮಣಿಪಾಲ್ ಟೆಕ್ನಾಲಜಿ ಲಿಮಿಟೆಡ್ ನಲ್ಲಿ ಉದ್ಯೋಗಿ. ಪ್ರವೃತ್ತಿಯಲ್ಲಿ ಲೇಖಕರು. 'ಒಂದು ನಾಟಕದ ಕೊನೆಯ ಅಂಕ' ಇವರ ಮೊದಲ ಕಥಾಸಂಕಲನ. 'ನಿನ್ನೆಯಿಂದ ದೇವರಿಲ್ಲ' ಎಂಬ ವಿಭಿನ್ನ ಶೀರ್ಷಿಕೆಯಿಂದಲೇ ಸೆಳೆಯುವ ಈ ಕಥಾಸಂಕಲನ ಇವರ ಎರಡನೆಯ ಪ್ರಕಟಿತ ಪುಸ್ತಕ.
ಈ ಕಥಾ ಸಂಕಲನದಲ್ಲಿ 14 ಕಥೆಗಳಿವೆ.
ಸಾಮಾನ್ಯವಾಗಿ ಕಥೆಗಳನ್ನು ಓದಿದಾಗ ಕಂಡ ವಿಚಾರಗಳಾಗಿದ್ದರೆ.. ನಾವು ಅವುಗಳನ್ನು ಅನುಭವವೆಂದು ಗುರುತಿಸುತ್ತೇವೆ. ಆದರೆ, ಎಲ್ಲಾ ಕಥೆಗಳೂ ಅನುಭವವೇ ಆಗಿರಬೇಕಿಲ್ಲ. ಕಥೆ ಕಟ್ಟುವ ಶೈಲಿ ಆಯಾ ಕಥೆಗಾರನ ಮೇಲೆ ನಿರ್ಧಾರವಾಗುತ್ತದೆ. ನಿಜ ಜೀವನದಲ್ಲಿ ನಾವು ಕಾಣದ ಅಥವಾ ಗುರುತಿಸದ ಕೆಲವು ಸಂಗತಿಗಳು ಕಥೆಗಳಾಗಿ ಬಂದಾಗ..ಅವುಗಳನ್ನು ಓದಿದಾಗ ಆಗುವ ಅನುಭೂತಿ ವಿಭಿನ್ನ. ಅಂತಹಾ ವಿಶಿಷ್ಟ ಕಥಾನಕಗಳು ಕಾಣುತ್ತವೆ.
ಸುಳ್ಳು ನಿಜ ಮುಖ್ಯವಲ್ಲ
ಕಥೆ ಮುಖ್ಯ
ಎನ್ನುವ ಶರ್ವರ ಮಾತು ನೂರಕ್ಕೆ ನೂರು ಒಪ್ಪುವಂತಹದ್ದು.
ಸರಳ ಲೆಕ್ಕಾಚಾರ: ಇದು ನೇರಾನೇರವಾಗಿ ಪರಿಸರವನ್ನು ಹಾಳು ಮಾಡುವುದರಿಂದ ಆಗುವ ದುಷ್ಪರಿಣಾಮವನ್ನು ಚಿತ್ರಿಸದೆ.. ಈಗಿನ ಕಾಲಕ್ಕೆ ಅಪ್ಡೇಟ್ ಆದಂತಹಾ ಕಥೆ. ಪರಮೇಶನಿಗೆ 10 ವರ್ಷಗಳಿಂದ ಕಸ ಗುಡಿಸುವ ಕೆಲಸ. ಆ ಮರದಿಂದ ಉಂಟಾಗುವ ಕಸವೇ ಬುಟ್ಟಿಗಟ್ಟಲೆ ಆಗುತ್ತಿತ್ತು. ಮೊದಮೊದಲು ಪ್ರೀತಿಯಿಂದ ಮಾಡುತ್ತಿದ್ದವನು, ನಂತರ ಅದನ್ನು ದ್ವೇಷಿಸತೊಡಗಿದಾಗ ಮರವನ್ನೇ ಕಡೆ ಎನ್ನುವ ಬೇಡಿಕೆ ಇಡುತ್ತಾನೆ. ಕಂಪನಿಯಲ್ಲಿಯೂ ಖರ್ಚು ಕಡಿಮೆ ಮಾಡುವ ಸಂದರ್ಭ ಬಂದಾಗ, ಅವರಿಗೂ ಈ ಸಲಹೆ ಒಪ್ಪಿಗೆಯಾಗಿ ಅಷ್ಟೂ ವರ್ಷದಿಂದ ಇದ್ದ ಮರ ನೆಲಸಮವಾಗಿತ್ತು. ಆದರೆ, ಅದರ ನಂತರದ ಪರಿಣಾಮಗಳು..?? ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವಂತಾಗುವುದರ ಜೊತೆಗೆ ಮನುಷ್ಯ ಅದನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಚಿತ್ರಣ ಇಲ್ಲಿದೆ.
ಕಡುಮೋಹದ ಮೌನ: ಅಪ್ಪನ ಕಡುಮೌನ. ಸಂಸಾರಿಯಾಗಿಯೂ ಸನ್ಯಾಸಿಯಾಗಿ, ನಿರ್ಮೋಹಿಯಾಗಿ ಉಳಿದದ್ದೇಕೆ ಎನ್ನುವ ಯೋಚನೆ ಬಂದಾಗ ಅಮ್ಮನ ಮೌನವು ಆತನಿಗೆ ನೆನಪಾಗಿತ್ತು. ಅಮ್ಮನು ಮೌನದ ಕೆಂಡ ಎನ್ನುವಾಗ ಮೌನದ ತೀವ್ರತೆಯ ಅರಿವಾಗುತ್ತದೆ. ದೊಡ್ಡಪ್ಪನೇ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದುದರಿಂದ ಹೆಚ್ಚು ದೊಡ್ಡಪ್ಪನೆಡೆಗೆ ವಾಲಿದವನು, ಅಮ್ಮನನ್ನು ಬಿಟ್ಟು ಕೊಟ್ಟ ನಂತರ ಜೀವನದ ಒಂದು ಬದಲಾವಣೆಯಿಂದ ಅಪ್ಪನ ಹಾದಿಯನ್ನೇ ಹಿಡಿದಾಗ ಅಪ್ಪನ ಪ್ರತಿರೂಪವೇ ಅವನಾಗಿದ್ದು ಅವನಿಗೆ ಅರಿವಾಗಿತ್ತು. ಇದೆಲ್ಲದರ ಮರ್ಮವೇನು..?
ನಿನ್ನೆಯಿಂದ ದೇವರಿಲ್ಲ: ಶೀರ್ಷಿಕೆಯಿಂದಲೇ ಸೆಳೆದ ಕಥೆ ಇದು. ಇಲ್ಲಿನ ಅಚ್ಯುತ ಮಠದಲ್ಲಿ ವಾಮನ ಭಟ್ಟರು ಹಾಗೂ ಸ್ಟಾಲ್ವಿನ್ ಇಬ್ಬರ ಬದುಕು ನಡೆಯುತ್ತಿದ್ದರೂ.. ದೇವರಿದ್ದಾನೆ ಎಂಬ ನಂಬಿಕೆ ನನ್ನನ್ನು ಹೀಗೆ ಜೀವಂತವಾಗಿಸಿದೆ ಎನ್ನುವ ನಂಬಿಕೆಯ ವಾಮನ ಭಟ್ಟರು.. ನಂಬುವವರಿಗೆ ಬೇರೆ ಕಸುಬಿಲ್ಲ ಎಂದು ಅಹಂಕಾರದಲ್ಲಿ ಮಾತನಾಡುತ್ತಿದ್ದ ಸ್ಟಾಲ್ವಿನ್ ನ ವ್ಯವಹಾರವೂ ಕಂಡುಬರುತ್ತದೆ. ಇಲ್ಲಿ ಗೆಲ್ಲುವುದು ಯಾವುದು..? ನಂಬಿಕೆಯೋ ವ್ಯವಹಾರವೋ.. ಅಷ್ಟಕ್ಕೂ ನಿನ್ನೆಯಿಂದ ದೇವರು ಇಲ್ಲವಾದದ್ದು ಹೇಗೆ ಹಾಗೂ ಯಾಕೆ..??
ಸರ್ವಾಂತರ್ಯಾಮಿ: ಕಾಲದ ಮಹಿಮೆಯಲ್ಲಿ ಸಾಗುವ ಹಾಗೂ ಯೋಜನೆಗಳು ಬದಲಾಗುವ ಚಿತ್ರಣವನ್ನು ಕಟ್ಟಿಕೊಟ್ಟಿರುವ ಕತೆ. ಅಚ್ಚುತ ಹಾಗೂ ಶಾಸ್ತ್ರಿಗಳ ನಡುವಿನ ಸಂಭಾಷಣೆ ಆ ಕ್ಷಣಕ್ಕೆ ಶಾಸ್ತ್ರಿಗಳಿಗೆ ಅರ್ಥವಾಗದಂತೆ ಕಂಡರೂ.. ಇಲ್ಲಿ ಅರ್ಥಪೂರ್ಣ ಘಟನೆಯೊಂದಿಗೆ, ಅಷ್ಟಕ್ಕೂ.. ಬದುಕಿನದ್ದೇ ಕನಸು ಕಾಣುವವರಿಗೆ ಸರ್ವಾಂತರ್ಯಾಮಿಯ ಅರಿವಾಗುವುದೇಗೆ ಎನ್ನುವ ಚಿತ್ರಣವಿದೆ.
ಭುವನ ಸುಂದರಿ: ಅಪ್ಪ, ಅಮ್ಮ ಇಬ್ಬರ ಕುರಿತೂ ಚಿಕ್ಕಂದಿನಲ್ಲಿ ಕಂಡದ್ದು ಎಳೆಯ ಮನಸ್ಸಿನ ಮೇಲೆ ಅದ್ಯಾವ ಪರಿ ಅಚ್ಚೊತ್ತಿ ನಿಂತು ಬಿಡುತ್ತದೆಂದರೆ.. ಅಮ್ಮ ಕಾಣೆಯದದ್ದಕ್ಕೆ ಅಮ್ಮನ ಮೇಲೆ ತಪ್ಪು ತಿಳಿದುಕೊಂಡ ಮಗ.. ಕಾಲೇಜಿನಲ್ಲಿ ಮತ್ತ್ಯಾರೋ 'ಭುವನ ಸುಂದರಿ'ಯ ಮಗನೆಂದು ಕರೆದಾಗ ಆಗದ ಆಘಾತ ಮಗನಿಗಾದದ್ದು ಸತ್ಯ ತಿಳಿದಾಗ. ತಾನು ತಿಳಿದದ್ದು ತಪ್ಪು ಎಂದು ಅರಿವಾಯಿತಾದರೂ.. ಅದು ಸರಿಯಾಯಿತಾ..?? ಹೆತ್ತವರ ನಡವಳಿಕೆಗೆ, ತಪ್ಪಿಗೆ ಮಕ್ಕಳು ಅನುಭವಿಸುವ ಪರಿಸ್ಥಿತಿಯ ಕತೆ.
ದೇವರ ಕಲ್ಲು: ಎಲ್ಲಾ ಕಲ್ಲುಗಳು ದೇವರಾಗುವುದಿಲ್ಲ ಎಂಬ ಸತ್ಯವನ್ನು ಅರಿವಾಗಿಸುತ್ತಲೇ ದೇವರಾಗುವ ಕಲ್ಲನ್ನು ಹುಡುಕುವ ಶಂಭುಭಟ್ಟರ ಹಿಂದೆ ಒಂದು ದೊಡ್ಡ ಕಥೆಯಿದೆ. ಅದು ನಿಮಿತ್ತವೆನಿಸಿದರೂ.. ಮಾದೇವಿಯ ಅಂಗಳದ ಪುಟ್ಟ ಚೌಡಿ ಗುಡಿಯ ಹಿಂದೆ ಮಹಿಮೆ ಕಾಣುತ್ತದೆ. ದೈವತ್ವವನ್ನು ಆರೋಪಿಸುವ ಮನುಷ್ಯ ಹಾಗೂ ಮನುಷ್ಯನ ನಂಬಿಕೆಯಿಂದ ಉಂಟಾದ ದೇವರು ಹೀಗೆ ಎರಡು ವಿಭಿನ್ನ ಚಿತ್ರಣಗಳು ಕಾಣುತ್ತವೆ.
ಬೆನ್ನ ಹಿಂದಿನ ಬೆಂಕಿ: ನಾರಾಯಣ ಭಟ್ಟರಿಗೆ ಯಕ್ಷಗಾನವೆಂದರೆ ಪಂಚಪ್ರಾಣ ಜೊತೆಗೆ ಕತ್ತಲಿನ ಭಯವೂ ಇರುವುದರಿಂದ ಯಾರನ್ನಾದರೂ ಜೊತೆ ಮಾಡಿಕೊಂಡೇ ಹೊರಡುತ್ತಿದ್ದರು. ಕುಡುಕ ದೇವಪ್ಪ ಅವರ ಜೊತೆ ಹೋಗುತ್ತಿದ್ದದ್ದು ಕುಡಿತದ ಆಸೆಗಾಗಿಯೇ.. ಅವರಿಗೂ ಅದು ಗೊತ್ತಿಲ್ಲದಿಲ್ಲ. ಆದರೂ ಗತ್ಯಂತರವಿರಲಿಲ್ಲ. ಅಂದು ಯಕ್ಷಗಾನವನ್ನು ಅರ್ಧಕ್ಕೆ ಬಿಟ್ಟು ಮನೆಗೆ ಬರಬೇಕಾದ ಪ್ರಸಂಗವಾದರೂ ಏನು ನಡೆಯಿತು..?? ಜೊತೆಗೆ ಆ ಬೆನ್ನ ಹಿಂದಿನ ಬೆಂಕಿಯ ಮರ್ಮವೇನು..??
ಸಂಭವ: ಊರವರೆಲ್ಲರೂ ಹುಚ್ಚ ಎಂದೇ ಭಾವಿಸಿದ ಸುಕುಮಾರ ಈಗ ಬಹಳ ಚೆನ್ನಾಗಿದ್ದ. ಆತನ ಭೇಟಿಯಾದ ದಿನ ಆತನ ಹೆಂಡತಿಯ ಜೊತೆ, ಆತನೊಟ್ಟಿಗೂ ಮಾತನಾಡಿದಾಗ ತಿಳಿದ ಸತ್ಯವೇ ಅಚ್ಚರಿ ಮೂಡಿಸುತ್ತದೆ. ಆಕೆ ಸುಕುಮಾರನ ಪ್ರೇಯಸಿ ರೇಣುಕೆ ಆಗಿರಲಿಲ್ಲ, ಅವಳು ರೇವತಿ. ಆತ ಆಕೆಯನ್ನು ರೇಣುಕೆ ಎಂದುಕೊಂಡಿದ್ದಾನೆಂದು ಅವಳ ಭಾವನೆ. ಆತನ ದೃಷ್ಟಿಯಲ್ಲಿ ಆತ ಅವಳ ಕುಮಾರ, ಸುಕುಮಾರನಲ್ಲ. ಅವರಿಬ್ಬರೂ ನಿಜಕ್ಕೂ ಯಾರು.. ಅವರಿಬ್ಬರ ಬದುಕಿನ ನಿಜರೂಪವೇನು..?
ಕಿಟಕಿಯಾಚಿಗಿನ ಕನಸಿನ ಪುಟ: ಕಿಟಕಿಯಾಚೆ ಕಂಡ ಮುಖವೊಂದು ಆಕೆಯಲ್ಲಿ ಪ್ರೇಮ ಭಾವನೆ ಉದಯಿಸಿದ್ದು ಹೌದಾದರೂ.. ಆತನಲ್ಲಿಯೂ ಅದೇ ಭಾವವಿತ್ತಾ ಎಂದು ತಿಳಿಯುವ ಮುನ್ನವೇ ಆಕೆ ಕನಸಿನೊಳಗೆ ಕಳೆದು ಹೋಗಿದ್ದಳು. ಹರೆಯದ ಪ್ರೇಮದ ಪುಳಕಗಳು ಚಿತ್ರಿತವಾಗಿರುವಂತೆಯೇ.. ಅಮ್ಮನ ದೃಷ್ಟಿಯಲ್ಲಿನ ಪ್ರೇಮವು ಹೀಗೆ ವ್ಯಕ್ತವಾಗುತ್ತದೆ. "ಕೇವಲ ನೀನು ಪ್ರೀತಿಸುವುದಲ್ಲ. ಅವನು ನಿನ್ನನ್ನು ನಿನಗಿಂತ ಬಲವಾಗಿ ಪ್ರೀತಿಸಬೇಕು. ಯಾವುದೇ ಚೌಕಟ್ಟು ಹಾಕಿಕೊಳ್ಳದೆ ನಂಬಬೇಕು" ಎನ್ನುವುದು ಅನುಭವದ ನಿರೀಕ್ಷೆಯಾಗಿ ಕಂಡರೆ, ಹರೆಯದ ಪ್ರೇಮವೂ ಕಡಿಮೆಯೇನಿಲ್ಲ. "ಪ್ರೀತಿಸುತ್ತೇನೆ ಎಂಬ ಹಂಬಲ ಜೀವಂತವಾಗಿರಬೇಕು. ಪ್ರೀತಿಯನ್ನು ಹೇಳಿಕೊಂಡ ಕೂಡಲೇ ಆ ಹಂಬಲ ಸತ್ತುಬಿಟ್ಟರೆ ಎಂಬ ಭಯ ನಿನ್ನನ್ನು ದೂರ ಮಾಡಿತು"ಎನ್ನುವ ಮಾತಿನಲ್ಲಿ ಮತ್ತೊಂದು ಪ್ರೀತಿಯ ವ್ಯಾಖ್ಯಾನ ಕಾಣುತ್ತದೆ. ಆ ಕನಸು ಏನಾಯಿತು ನೀವೇ ಓದಿ.
ಆ ಜನ್ಮ: ತನ್ನಮ್ಮನ ಕುರಿತಾಗಿ ಊರಿನವರು ಆಡಿಕೊಳ್ಳುತ್ತಿದ್ದ ಮಾತು ಜಯಂತನ ಕಿವಿಗೆ ಬೀಳುತ್ತಿದ್ದಾಗ ಆತನಿಗೆ ಒಂದು ರೀತಿಯ ರೋಷ ಬೆಳೆದಿತ್ತು. ಸಿಟ್ಟಿನಲ್ಲಿ ಊರು ಬಿಟ್ಟು ಹೊರಟವನು 10 ವರ್ಷದ ನಂತರ ಮನೆಗೆ ಬಂದಾಗ.. ಅಮ್ಮ ಮಂದಾಕಿನಿಯ ಮಾತು ಆತನಿಗೆ ಸತ್ಯದರ್ಶನ ಮಾಡಿಸಿತ್ತು. ಆ ಸತ್ಯವೇನು.. ಆತ ಮನೆಗೆ ವಾಪಸು ಬಂದದ್ದೇಕೆ..? ಅಮ್ಮನ ಮಾತು ಆತನನ್ನು ತಂದ ಬದಲಾವಣೆಗಳೇನು..?
ಮೌನ ಮುದ್ರೆ: ಶಿವಪ್ಪ ತನ್ನ ಹೆಂಡತಿ ಸೀತೆಗೆ ಸಾಯುವ ಮುಂಚೆ ಕೊಟ್ಟಿದ್ದ ಮಾತಿನಂತೆ ಆಕೆಯನ್ನು ಒಳ್ಳೆಯ ಕಡೆಗೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾಗ ಶ್ರೀಮಂತ ಪರಮಪ್ಪ ತನ್ನ ಅಕ್ಕನ ಮಗ ಜಗನ್ನಾಥನಿಗೆ ಮದುವೆ ಮಾಡಿಸಿದ್ದ. ಅಳಿಯನ ಹಣದಿಂದ ಸಾಗುವಳಿ ಮಾಡಿ ಆರ್ಥಿಕ ಸಂಕಷ್ಟದಿಂದ ಆತ ಪಾರಾದರೂ.. ಮಗಳ ಜೀವನ ಸುಲಭವಾಗಿರಲಿಲ್ಲ. ಆಕೆ ಬಸುರಾಗಿದ್ದು ಮದುವೆಯಾಗಿ ಐದು ವರ್ಷ ಕಳೆದ ನಂತರ. ಹುಟ್ಟಿದ ಮಗುವನ್ನು ಸಂಶಯದಿಂದ ಕಂಡ ಜಗನ್ನಾಥ ಮತ್ತೆ ಬರಲಿಲ್ಲ, ಹಿಂದಕ್ಕೂ ಕರೆಯಲಿಲ್ಲ. ಲಕುಮಿ ಮಗುವಿನ ಮುಖದಲ್ಲಿಯೇ ಎಲ್ಲವನ್ನೂ ಕಾಣುತ್ತಾ ನೋವು ಮರೆಯುತ್ತಿರುವಾಗ ಗಂಡ ಸತ್ತಿದ್ದ ಮಗಳು ಮೂಕಿಯಾಗಿದ್ದು ಅರಿವಾಗಿತ್ತು. ಆ ಕಂದನಿಗೆ ಮಾತು ಬರುವಾಗ ಲಕುಮಿಗೆ ಮೌನ ಮುದ್ರೆ ಬಿದ್ದಾಗಿತ್ತು. ಅದು ಹೇಗೆ..?
ನನ್ನ ಎದೆಯ ಭಾರ: ಅಣ್ಣನಿಗೆ ಮದುವೆಯಾಗಿ ಏಳು ವರ್ಷ ದಾಟಿದರೂ ಮಕ್ಕಳಾಗಿಲ್ಲದಾಗ, ವಂಶಕ್ಕೊಂದು ಮಗು ಬೇಕು ಎನ್ನುವುದನ್ನು ಮುಂದಿಟ್ಟುಕೊಂಡು ಆತನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರಾದರೂ.. ಬಹಳ ಒತ್ತಾಯದ ನಂತರ ಸರಳಳನ್ನು ವಿವಾಹವಾಗಿದ್ದ. ಆದರೆ, ಅವರಿಬ್ಬರಿಗೂ ಮಗುವಾಗದಿದ್ದಾಗ ಸರಳ ಕುಗ್ಗಿ ಹೋದಳು ಜೊತೆಗೆ ತಮ್ಮನ ವರ್ತನೆಯೂ ಕುಗ್ಗಿಸಿತ್ತು. ಅವರಿಬ್ಬರ ಎದೆಯ ಭಾರ ಇಳಿಯಿತೇ..?
ಚಿತ್ರ ಪೂರ್ಣನ ಮದುವೆಯ ಪ್ರಸಂಗ: ಚಿತ್ರಪೂರ್ಣ ಯಾವುದೋ ಅನಾಥ ಮಗುವೊಂದನ್ನು ತಂದು ಸಾಕಿಕೊಂಡದ್ದು ಆತನ ಮದುವೆಗೆ ಕುತ್ತಾಗಿತ್ತು. ಮಗುವಿನ ವಿಚಾರ ಹೇಳುವುದು ಬೇಡವೆಂದು ಚಂದ್ರದೀಪ್ತಿಯನ್ನು ನೋಡಿ ಬಂದಾಗ ಅವರಿಬ್ಬರ ಮನೆಯಲ್ಲಿಯೂ ಇಷ್ಟವಾಗಿದ್ದರೂ.. ಆತನಿಗೆ ಮಗುವಿನ ಬಗ್ಗೆ ಹೇಳದೆ ಇರುವುದು ಸರಿ ಕಾಣಲಿಲ್ಲ. ಹಾಗೆಯೇ ಚಂದ್ರದೀಪ್ತಿಗೂ ಹೇಳುವುದೇನೋ ಇತ್ತು. ಆಕೆಗೂ ಅದನ್ನು ಮುಚ್ಚಿಟ್ಟು ಮದುವೆಯಾಗಲು ಇಷ್ಟವಿರಲಿಲ್ಲ. ಚಿತ್ರಪೂರ್ಣನ ಮದುವೆಯ ಪ್ರಸಂಗ ಸುಖಾಂತ್ಯವಾಯಿತೇ ಅಥವಾ ದುಃಖಾಂತ್ಯವಾಯಿತೇ..??
ವನವಾಸ: ಪದ್ಮನಾಭರಿಗೆ ತಿರುಪತಿಗೆ ಹೋಗುವ ಬಯಕೆ ದಿನೇದಿನೇ ಹೆಚ್ಚುತ್ತಿತ್ತಾದರೂ.. ಅದು ಈಡೇರುವುದು ಅಷ್ಟು ಸುಲಭವಿರಲಿಲ್ಲ. ಅವರು ತಮ್ಮ ಹಳೆಯ ಮಿತ್ರ ಗೋಪಿನಾಥರ ಜೊತೆ ತಿರುಪತಿಗೆ ಹೊರಟಾಗ ಸ್ವರ್ಗಕ್ಕೆ ಕಾಲಿಟ್ಟಷ್ಟು ಆನಂದವಾಗಿತ್ತು. ಅವರ ಬದುಕಿನ ಮಹದಾಸೆ ಈಡೇರಿತಾದರೂ.. ಅವರು ವನವಾಸವನ್ನು ಅನುಭವಿಸಬೇಕಾಗಿ ಬಂದಿತು. ಅದಕ್ಕೆ ಕಾರಣವೇನು..??
ಇಲ್ಲಿನ ಕಥೆಗಳಲ್ಲಿ ಕಥೆಗಾರರ ಸಿಗ್ನೇಚರ್ ಶೈಲಿಯಂತೆ ಕಂಡುಬರುವುದು ಕಥೆಗಳ ಅಂತ್ಯದಲ್ಲಿ ಬರುವ ಚಮತ್ಕಾರಗಳು. ಇದು ಕಥೆಗೆ ಹೊಸ ಆಯಾಮವನ್ನು ತಂದುಕೊಡಬಲ್ಲದು. ಚೆಂದದ ಕಥೆಗಳ ಸೊಗಸಾದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ