ಪುಸ್ತಕದ ಶೀರ್ಷಿಕೆ : ಪ್ರೇಮ ಚಂದ್ರಮ
ಲೇಖಕರು : ವೈ. ಕೆ ಸಂಧ್ಯಾಶರ್ಮ
ಪ್ರಕಾಶಕರು : ಸಹನಾ ಪ್ರಕಾಶನ
ಪ್ರಥಮ ಮುದ್ರಣ : 2014
'ಸರಿದ ತೆರೆ' ಕಾದಂಬರಿಯಲ್ಲಿರುವ ಮತ್ತೊಂದು ಕಾದಂಬರಿ 'ಪ್ರೇಮ ಚಂದ್ರಮ'. ಇದರ ಶೀರ್ಷಿಕೆ ನೋಡುತ್ತಿದ್ದಂತೆಯೇ.. ಇದು ಪ್ರೇಮದ ಕುರಿತ ಕಾದಂಬರಿ ಇರಬಹುದಾ ಎನ್ನಿಸುತ್ತದೆ. ಆದರೆ, ಇಲ್ಲಿ ಪ್ರೇಮದಾಚೆಗಿನ ಮಾನವೀಯತೆ ಹಾಗೂ ಮೌಲ್ಯಗಳ ದರ್ಶನವೂ ಆಗಿದೆ. ಅಲ್ಲದೆ ಪ್ರೇಮ ಹುಟ್ಟುವುದು, ಬೆಳೆಯುವುದರ ಹಾದಿಯನ್ನು ತೋರುತ್ತಲೇ.. ನಿಷ್ಕಲ್ಮಶ ಪ್ರೇಮಕ್ಕೆ ಸಿಗುವ ಮನ್ನಣೆ ಹಾಗೂ ಬದಲಾಗಬಹುದಾದ ಒಲವಿನ ಕಥೆಯನ್ನು ಹೇಳುತ್ತಾರೆ ಲೇಖಕಿ.
ಸುಮಾ ಹಾಗೂ ರೇಖಾ ಹೆಚ್ಚು ಕಡಿಮೆ ಸಮವಯಸ್ಕರೇ. ಆದರೆ, ಇಬ್ಬರ ಗುಣ, ನಡತೆಯಲ್ಲಿ ಅಜಗಜಾಂತರ ವ್ಯತ್ಯಾಸ. ಅದಕ್ಕೆ ಕಾರಣವೂ ಇಲ್ಲದಿಲ್ಲ. ರೇಖಾ ಸಂಜೀವರಾಯರ ಮಗಳಾಗಿ ಶ್ರೀಮಂತಿಕೆಯಿಂದ ಬೆಳೆದವಳು. ತಾಯಿ ಇಲ್ಲದ ಮಗುವೆಂದು ಅವಳ ಮೇಲೆ ತೋರುತ್ತಿದ್ದ ಅಕ್ಕರೆ ಹೆಚ್ಚೇ ಇತ್ತು.
ಸುಮಾ ಸಂಜೀವರಾಯರ ದೂರದ ಸಂಬಂಧಿ. ಚಿಕ್ಕಪ್ಪ-ದೊಡ್ಡಪ್ಪನ ಮಗಳು ಅಂದರೆ ತಂಗಿಯಾಗಬೇಕಾದವಳ ಮಗಳು ಸುಮಾ. ಹಳ್ಳಿಯಲ್ಲಿ ಎಲ್ಲಾ ಒಟ್ಟಿಗೆ ಬಾಳಿದ್ದ ಕುಟುಂಬ ಈಗ ದೂರದಲ್ಲಿದ್ದರೂ.. ಬಾಂಧವ್ಯವಂತೂ ಇದ್ದೇ ಇತ್ತು. ಸುಮಾಳ ತಾಯಿ ತೀರಿಕೊಂಡ ಮೇಲೆ ಆಕೆ ಮಲತಾಯಿಯ ಕ್ರೌರ್ಯದಲ್ಲಿ ನುಜ್ಜುಗುಜ್ಜಾಗುತ್ತಿದ್ದಳು. ತಂದೆ ಎನಿಸಿಕೊಂಡವನಿಗೆ ಮಗಳ ಕಷ್ಟದ ಕುರಿತು ಲೆಕ್ಕವೇ ಇರಲಿಲ್ಲ. ಆಕಸ್ಮಿಕವಾಗಿ ಸುಮಾ ರಾಯರ ಮನೆಗೆ ಮಜ್ಜಿಗೆಗೆ ಬಂದಾಗ ರಾಯರು ಹಾಗೆಯೇ ಗಮನಿಸಿದ್ದರು. ಅದಾದ ನಂತರ ಬಿಡುವಾದಾಗ ನಮ್ಮ ರೇಖಾಳ ಜೊತೆ ಬಂದು ಆಡ್ಕೋ ಎಂದಿದ್ದರು. ಆಕೆಗೆ ಆಡುವ ಆಸೆ ಇದ್ದರೂ ಸಮಯವೇ ಇರಲಿಲ್ಲ. ರೇಖಾಳ ಸ್ನೇಹಕ್ಕೆ ಸೋತು ಆಡುವಾಗ ಆಕೆಯ ಮಲತಾಯಿ ನಡೆಸಿದ ದೌರ್ಜನ್ಯವನ್ನು ಕಂಡ ರೇಖಾ ತಂದೆಯ ಬಳಿ ಹೇಳಿದ್ದಳು. ಮಗಳಿಗೆ ಒಬ್ಬಳು ಅತ್ಯುತ್ತಮ ಸ್ನೇಹಿತೆಯಾಗಬಲ್ಲವಳನ್ನು ಮಲತಾಯಿಯ ಕಪಿಮುಷ್ಠಿಯಿಂದ ಬಿಡಿಸಿ, ಅವಳ ತಂದೆಗೆ ಒಂದಿಷ್ಟು ಹಣ ಕೊಟ್ಟು ಅಲ್ಲಿನ ಸಂಬಂಧದಿಂದ ಪಾರು ಮಾಡಿ ತಮ್ಮ ಮನೆಗೆ ಕರೆತಂದಿದ್ದರು. ಅದಾದ ನಂತರ ತಂದೆ ಸತ್ತಾಗೊಮ್ಮೆ ಅಲ್ಲಿಗೆ ಹೋಗಿದ್ದು ಬಿಟ್ಟರೆ ಮತ್ತೆ ಅತ್ತ ತಲೆ ಹಾಕಿರಲಿಲ್ಲ.
ರಾಯರು ಸುಮಾಳನ್ನು ಕಡೆಗಣಿಸಿರಲಿಲ್ಲ. ತನ್ನ ಮಗಳಂತೆ ಎಲ್ಲಾ ಸೌಲಭ್ಯಗಳನ್ನೂ ಮಾಡಿಕೊಟ್ಟಿದ್ದರು. ಆದರೆ, ಸುಮಾ ತೀರಾ ಶ್ರೀಮಂತಿಕೆಯ ಮೋಹಕ್ಕೆ ಒಳಗಾಗದೆ.. ತನ್ನ ಮಿತಿಯಲ್ಲಿ ತಾನಿದ್ದವಳು. ಓದುತ್ತಲೇ ಶಾರ್ಟ್ ಹ್ಯಾಂಡ್ ಟೈಪ್ ರೈಟಿಂಗ್ ಎಲ್ಲವನ್ನೂ ಕಲಿತು ಈಗ ರಾಯರ ಪರ್ಸನಲ್ ಸೆಕ್ರೆಟರಿ ಆಗಿಯೂ ಕೆಲಸ ಮಾಡುತ್ತಿದ್ದಳು. ಸಂಬಳ ಬೇಡವೆಂದರೂ.. ರಾಯರು ಒಪ್ಪದೇ ರೇಖಾಳಿಗೆ ಹಾಕುತ್ತಿದ್ದಂತೆ ಬ್ಯಾಂಕ್ ಅಕೌಂಟ್ ನಲ್ಲಿ ಈಕೆಗೂ ಹಣ ಜಮಾ ಮಾಡುತ್ತಿದ್ದರು. ಅವಳ ಇಷ್ಟವನ್ನು ಅರಿತು ವೀಣೆಯ ತರಗತಿಗೂ ಸೇರಿಸಿದರು.
ರೇಖಾಳೇ ತಮ್ಮ ಮುಂದಿನ ವಾರಸುದಾರಳು ಎಂಬ ಅರಿವಿದ್ದ ರಾಯರು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆ ನೀಡಿ ಆಕೆಗೂ ಜವಾಬ್ದಾರಿ ವಹಿಸಿದ್ದರು. ಕಂಪನಿಗೆ ಹೋದಾಗ ಮೂವರೂ ಬಾಸ್ ಹಾಗೂ ಅಸಿಸ್ಟೆಂಟ್ಗಳ ಹಾಗೆ ಇದ್ದರೂ.. ಮನೆಯಲ್ಲಿ ತಂದೆ-ಮಕ್ಕಳ, ಹಾಗೂ ಸ್ನೇಹಿತರ ಬಾಂಧವ್ಯಕ್ಕೇನು ಕೊರತೆ ಇರಲಿಲ್ಲ.
ಅದೇ ಕಂಪನಿಯಲ್ಲಿ ಸುದೀಪ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದ. ಆತನು ಇಂಡಸ್ಟ್ರೀಸ್ ನ ವಿವಿಧ ವಿಭಾಗಗಳನ್ನು ಸುಧಾರಣೆ ಮಾಡಿ ಅವು ವಿಸ್ತಾರವಾಗಿ ಬೆಳೆಯುವಂತೆ ಮಾಡಿದ್ದ. ರಾಯರಿಗೂ ಆತನ ಪ್ರತಿಭೆಯ ಕುರಿತು ಮೆಚ್ಚುಗೆ ಇತ್ತು.
ಸಾಮಾನ್ಯವಾಗಿ ರೇಖಾ ಸುದೀಪನ ಸ್ವಾರಸ್ಯಕರ ಮಾತು, ಸ್ನೇಹಕ್ಕೆ ಹಾತೊರೆಯುತ್ತಿದ್ದಳು. ಸುಮಾಳ ಮನಸ್ಥಿತಿಯೂ ಅದಕ್ಕಿಂತ ಬೇರೇನೂ ಇರದಿದ್ದರೂ.. ಸುದೀಪನ ಮನಸ್ಸು ಸಹಾ ರೇಖಾಳ ಸಂಘಕ್ಕೆ ಹಾತೊರೆಯುತ್ತಿದ್ದಾಗ, ಆತನ ನಡವಳಿಕೆ ತನ್ನನ್ನು ನಿರ್ಲಕ್ಷಿಸುವಂತಿದ್ದಾಗ ಸುಮಾ ತನ್ನ ಪಾಡಿಗೆ ತಾನಿರುತ್ತಿದ್ದಳು.
ಇದಾವುದರ ಅರಿವೂ ಇಲ್ಲದ ರಾಯರು ತಮ್ಮ ಗೆಳೆಯ ವಾಸುದೇವಯ್ಯ, ಅವರ ಪತ್ನಿ ವನಜಾಕ್ಷಮ್ಮ ಹಾಗೂ ಮಗ ರಾಜೇಶನನ್ನು ತಮ್ಮ ಮನೆಗೆ ಕರೆಸಿಕೊಂಡರು. ಅವರಿಗೆ ರೇಖಾಳನ್ನು ರಾಜೇಶನ ಜೊತೆ ಮಾಡಿ ನೋಡುವ ಆಸೆ. ಇದಕ್ಕೆ ರೇಖಾಳ ಒಪ್ಪಿಗೆ ಬೇಕಾಗಿತ್ತಷ್ಟೇ.. ಆದರೆ ರೇಖಾ ರಾಜೇಶನನ್ನು ವಿವಾಹವಾಗಲು ಒಪ್ಪದಿದ್ದಾಗ, ಎಂದೂ ಕೋಪಗೊಳ್ಳದಿದ್ದ ರಾಯರು ಮೊದಲ ಬಾರಿಗೆ ಮಕ್ಕಳ ಮೇಲೆ ಸಿಡಿಮಿಡಿಗೊಂಡಿದ್ದರು. ಆದರೆ, ಸುಮಾಳಿಗೆ ರೇಖಾ ರಾಜೇಶನನ್ನು ನಿರಾಕರಿಸಿದ್ದರ ಅರಿವು ಸುಮಾರಾಗಿತ್ತು. ಹಾಗೆಂದು, ಅದನ್ನು ಅವಳು ರೇಖಾಳ ಬಳಿಯಾಗಲಿ, ರಾಯರ ಬಳಿಯಾಗಲಿ ಹಂಚಿಕೊಳ್ಳಲಿಲ್ಲ. ಬದಲಾಗಿ ರೇಖಾ ಬಯಸಿದ್ದನ್ನು ತಾನು ಬಯಸಬಾರದೆಂದು ತನ್ನ ಮನಸ್ಸಿಗೆ ಕಡಿವಾಣ ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದಳು.
ಇದಾದ ನಂತರ ರಾಯರು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ತಮ್ಮ ಬಿಸಿನೆಸ್ ಪ್ರಯುಕ್ತ ಸುಮಾರು ಜಾಗಗಳಿಗೆ ಸಂಚರಿಸಲು ನಿರ್ಧರಿಸಿದ್ದರಿಂದ ಕಾರಿನಲ್ಲಿ ಹೊರಡಲು ತೀರ್ಮಾನಿಸಿದ್ದರು. ಸುಮಾ ಕೂಡ ಅವರ ಜೊತೆಯಾಗಬೇಕಾಗಿತ್ತು. ರೇಖಾ ಅವರಿಬ್ಬರೂ ಇಲ್ಲದೆ ನಾನಿರಲಾರೆ ಎಂದು ಅವರ ಜೊತೆ ಹೊರಟಳು. ಅನಿವಾರ್ಯ ಕಾರಣದಿಂದ ಡ್ರೈವರ್ ಸಿಗದೇ ಸುದೀಪ್ ತಾನೇ ಡ್ರೈವ್ ಮಾಡಿಕೊಂಡು ಅವರ ಜೊತೆಯಾದ.
ಈ ಸಂದರ್ಭದಲ್ಲಿ ರಾಯರ ಅನುಪಸ್ಥಿತಿಯಲ್ಲಿ ರೇಖಾ ಹಾಗೂ ಸುದೀಪರ ಒಡನಾಟ ಜೋರಾಗಿತ್ತು. ಆದರೆ, ರಾಯರಿಗೆ ಅದಕ್ಕಿಂತ ಮೊದಲು ಕಣ್ಣಿಗೆ ಬಿದ್ದದ್ದು ಸುಮಾಳ ನಡವಳಿಕೆ. ತಾನು ಸಾಕಿದ ಹುಡುಗಿಯ ಮೇಲೆ ಅನುಮಾನ ಪಟ್ಟ ರಾಯರು ನೇರವಾಗಿ ಏನೂ ಪ್ರಶ್ನಿಸಿರಲಿಲ್ಲವಾದರೂ.. ಅದೇ ಸಮಯಕ್ಕೆ ರೇಖಾ ಹಾಗೂ ಸುದೀಪರ ವಿಷಯವೂ ತಿಳಿದು ಅದನ್ನು ರಾಯರು ಒಪ್ಪಲಿಲ್ಲ. ಮೂವರ ಬದುಕಲ್ಲಿಯೂ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಈ ಪ್ರೇಮ ಚಂದ್ರಮ ಬಾನಲ್ಲಿ ಕರಗಿ ಹೋಯಿತೇ ಅಥವಾ ಪ್ರೇಮ ಅದರ ಜೊತೆಯಾಗಿ ಹೊಳೆಯಿತೇ..?? ಅಷ್ಟಕ್ಕೂ ಸುಮಾಳ ಮೇಲೆ ಅನುಮಾನ ಪಟ್ಟ ಘಟನೆಗೆ ಕಾರಣವಾದ ಪ್ರಸಂಗವೇನು..?? ರೇಖಾ ಹಾಗೂ ಸುದೀಪರ ಪ್ರೇಮವನ್ನು ರಾಯರು ತಿಳಿದದ್ದೇಗೆ..?? ಸುದೀಪನನ್ನು ಒಪ್ಪದ್ದು ಏಕೆ..?? ಎಲ್ಲರ ಬದುಕಲ್ಲಿಯೂ ನಡೆದ ಅನಿರೀಕ್ಷಿತ ತಿರುವು ಏನು..? ಎಲ್ಲವನ್ನು ತಿಳಿಯಲು ಓದಿ 'ಪ್ರೇಮ ಚಂದ್ರಮ' ಕಾದಂಬರಿ.
ಹಲವರು ಪ್ರೇಮಕ್ಕೆ ಕಣ್ಣಿಲ್ಲವೆಂದು ಹೇಳುತ್ತಾರೆ. ಆದರೆ, ಪ್ರೇಮ ಖಂಡಿತವಾಗಿಯೂ ಕುರುಡಲ್ಲ ಅಥವಾ ಪ್ರೇಮವೆಂದರೆ ತ್ಯಾಗವೂ ಅಲ್ಲ. ಅದರ ಆಚೆಗಿನ ಪ್ರೇಮದ ಚಿತ್ರಣವನ್ನು ಲೇಖಕಿ ಸೊಗಸಾಗಿ ಬಿಡಿಸಿಟ್ಟಿದ್ದಾರೆ. ಒಂದು ಸುಂದರ ಕಾದಂಬರಿಯ ನವಿರಾದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ