ಶನಿವಾರ, ಏಪ್ರಿಲ್ 18, 2026

ಒಂದು ಜಿಲೇಬಿ - ಜಯಂತ ಕಾಯ್ಕಿಣಿ ಕವಿತೆಗಳು (ಪುಸ್ತಕ ಯಾನ - 247)


ಪುಸ್ತಕದ ಶೀರ್ಷಿಕೆ : ಒಂದು ಜಿಲೇಬಿ - ಜಯಂತ ಕಾಯ್ಕಿಣಿ ಕವಿತೆಗಳು

ಲೇಖಕರು : ಜಯಂತ ಕಾಯ್ಕಿಣಿ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2008

ತೃತೀಯ ಮುದ್ರಣ : 2018 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 68

ಬೆಲೆ : 50 ರೂ.


ನನಗೆ ಜಯಂತ ಕಾಯ್ಕಿಣಿಯವರ ಕತೆಗಳಿಗಿಂತ ಕವಿತೆಗಳೇ ಹೆಚ್ಚು ಆಪ್ತವೆನಿಸುತ್ತವೆ. ಅವರ ಕತೆಗಳ ಪ್ರವೇಶಕ್ಕೆ, ಓದಿಗೆ ಹೆಚ್ಚು ತಾಳ್ಮೆ, ಏಕಾಗ್ರತೆ ಬೇಕೆನ್ನಿಸುತ್ತದೆ. ಕವಿತೆಗಳ ಸಂಧರ್ಭ, ಪದ ಲಾಲಿತ್ಯ, ಅದರ ಅರ್ಥ ಹೊಸ ಹೊಳವನ್ನೇ ದಕ್ಕಿಸಿಕೊಡುತ್ತದೆ. 


ಈ ಕವನ ಸಂಕಲನವನ್ನು ಅವರಿಗೆ 35 ವರ್ಷದ ಹಿಂದೆ ಕವಿತೆಯ ರುಚಿ ಹಟ್ಟಿಸಿದ ಗಂಗಾಧರ ಚಿತ್ತಾಲರ 'ಹರಿವ ನೀರಿದು', ಎ. ಕೆ. ರಾಮಾನುಜನ್ ರ 'ಹೊಕ್ಕುಳಲ್ಲಿ ಹೂವಿಲ್ಲ' ಹಾಗೂ ಕೆ. ವಿ ತಿರುಮಲೇಶರ 'ಮುಖಾಮುಖಿ' ಗೆ ಅರ್ಪಿಸಿದ್ದಾರೆ. 


ಈ ಕವನ ಸಂಕಲನದಲ್ಲಿ ಸುಮಾರು 36 ಕವಿತೆಗಳಿವೆ. ನನಗಿಷ್ಟವಾದ ಕೆಲ ಸಾಲುಗಳನ್ನು ಕವಿತೆಯ ಶೀರ್ಷಿಕೆಯೊಂದಿಗೆ ನನಗೆ ದಕ್ಕಿದಂತೆ ಉಲ್ಲೇಖಿಸುತ್ತಾ ಹೋಗುತ್ತೇನೆ.


ಹುಟ್ಟದೇ ಹೋದ ಶಿಶುಗಳ

ಕೋಮಲ ಹೆಜ್ಜೆ ಸ್ವರ

ರಾತ್ರಿಯ ಎದೆಯಲ್ಲಿ 

'ನಿರ್ಮಲ ನೀರವ' ಎಂಬ ಕವಿತೆಯ ಆಯ್ದ ಸಾಲುಗಳಿವು. ಇನ್ನೂ ಹುಟ್ಟದೇ ಇರುವ ಶಿಶುಗಳಿಗೂ.. ಹುಟ್ಟದೇ ಹೋದ ಶಿಶುಗಳಿಗೂ ಇರುವ ವ್ಯತ್ಯಾಸವನ್ನು ಗಮನಿಸಬಹುದು. ಈ ಮೂರು ಸಾಲುಗಳು ಬೇರೆಯದ್ದೇ ಕತೆ ಹೇಳುವಂತೆನಿಸುತ್ತದೆ.


ನದಿಯ ಮೈ ತುಂಬ ಹರಿದಾಡುತ್ತಿವೆಯಲ್ಲ ಹಳದಿ ಲಾರಿ

ಅವುಗಳಲ್ಲಿ ತುಂಬಿರುವುದು ಮರಳಲ್ಲಾ ಗುರು

ನದಿಯ ಕಳೇವರ ಅದು

ಶಹರಗಳಲ್ಲಿ ಅದರ ಅಂತಿಮ ಸಂಸ್ಕಾರ

ನಾನಾ ಅಂತಸ್ತುಗಳ ಸುಂದರ ಗೋರಿ

'ಪಟ' ಕವಿತೆಯಲ್ಲಿ ಗಾಳಿಪಟ ಹೋಗುತ್ತಿರುವ ದಾರಿಯನ್ನು ಹೇಳುತ್ತಲೇ ಈ ಸಾಲುಗಳನ್ನು ಉಲ್ಲೇಖಿಸುತ್ತಾರೆ. ಮರಳನ್ನು ನದಿಯ ಕಳೇಬರಕ್ಕೆ ಹೋಲಿಸುವಾಗ ಮನುಷ್ಯ ನದಿಗಳಿಗೆ ಮಾಡುತ್ತಿರುವ ಅಪಚಾರ ಕಾಣುತ್ತದೆ. ಮನೆ ಕಟ್ಟಲು, ಸುಂದರ ಕನಸುಗಳಂತಹಾ ನಮ್ಮ ಕಟ್ಟಡಗಳನ್ನು ಕಟ್ಟಲು ಯೋಚಿಸುತ್ತಿದ್ದರೆ ಇಲ್ಲಿ ಅವು ಕವಿಯ ಕಣ್ಣಿಗೆ ಸುಂದರ ಗೋರಿಗಳಂತೆ ಕಂಡುಬರುತ್ತಿದೆ.


ಬೇಡ ಸರ್ ನಾನು ನಿಮ್ಮ ಹಳೇ ವಿದ್ಯಾರ್ಥಿ ಸರ್ ಎಂದರೂ

ಅವರು ಬಹುವಚನ ಕೊಟ್ಟು ತೆಪ್ಪಗೆ ನೋಡುತ್ತಿದ್ದಾರೆ

ಎರಡು ಬಿಗಿಯಿರಿ ಸರ್ ದಯವಿಟ್ಟು

ಪ್ರೀತಿಯ ಪೆಟ್ಟು ತಿಂದು ಯುಗವಾಯಿತು ಸರ್

'ಒಂದು ಸರೀ ಕಡ್ಡಿಗಾಗಿ' ಕವಿತೆಯ ಸಾಲುಗಳಿವು. ಬಹುಶಃ ಇಂದಿನ ವಿದ್ಯಾರ್ಥಿಗಳಲ್ಲಿ ಈ ಆತ್ಮೀಯತೆ, ಸಲುಗೆ ಕಾಣಲಾರೆವೇನೋ.. ಈ ಭಾವಗಳೂ ಈ ಪೀಳಿಗೆಯವರಿಗೆ ಹೊಸದರಂತೆಯೇ ಕಾಣಬಹುದು. ಹಳೆಯ ವಿದ್ಯಾರ್ಥಿಯಾಗಲು, ಈ ಅನುಭವ ಪಡೆಯಲು ಹಾತೊಯುವ ಕ್ಷಣಗಳೆಷ್ಟು ಸೊಗಸು.


ಕಳ್ಳರು ಎಣಿಸುವ ನೋಟಲ್ಲು

ಏತಕೆ ನಗುತಿಹೆ ನೀನು

ಆತ್ಮವ ಮಾರುವ ಜನಗಳಿಗೆ 

ಪರಮಾತ್ಮನು ಒಲಿಯುವನೇನು

'ಬಾಪು ಏಕೆ ಬೀದಿಯಲ್ಲಿ' ಕವಿತೆಯ ಸಾಲುಗಳು ಇವು. ಬಾಪುವನ್ನು ಪ್ರಶ್ನೆ ಮಾಡುವಂತೆ ಕೇಳುವ ಸಾಲುಗಳಲ್ಲಿ ಕೊನೆಯ ಎರಡು ಸಾಲುಗಳೆಷ್ಟು ಅರ್ಥಗರ್ಭಿತವೆನ್ನಿಸಿತು. 'ದುಡ್ಡೇ ದೊಡ್ಡಪ್ಪ' ಎಂದು ಬದುಕುವವರಿಗೆ ಸವಾಲೆಸೆಯುವಂತಹಾ ಸಾಲುಗಳು. 


ಹೀಗೆ ಹಲವಾರು ಕವಿತೆಗಳು ಎಷ್ಟೋ ಹೊಳಹು ಹೊಳೆಸುತ್ತವೆ. ಈ ಕವನ ಸಂಕಲನದ ಶೀರ್ಷಿಕೆಯಾಗಿರುವ ಕವಿತೆ ಕಥನ ಕವನದಂತಹದ್ದು. 


ಇಲ್ಲಿ ಕವಿತೆಗಳ ಮೂಲಕ ಹೊಸ ಲೋಕವನ್ನೇ ಕಾಣಬಹುದು. ಒಂದೊಂದು ಕವಿತೆಗಳೂ ಒಂದೊಂದು ಹೊಸ ಕತೆಯನ್ನೇ ಹೇಳುತ್ತವೆ. ಮೇಲಿನಂತೆ ಕೇವಲ ಆಯ್ದ ಬಿಡಿ ಸಾಲುಗಳನ್ನು/ ಪ್ಯಾರಾಗಳನ್ನು ಉಲ್ಲೇಖಿಸುವುದು ಕಷ್ಟ. ಹೆಚ್ಚಿನ ಕವಿತೆಗಳು ಹೀಗೆಯೇ ಇವೆ. ಓದುತ್ತಾ ಬೇರೆಯದ್ದೇ ಲೋಕ ಹೊಕ್ಕು ಬಂದಂತೆ ಮಾಡುತ್ತವೆ. ನೀವೂ ಈ ಕವಿತೆಗಳನ್ನು ಓದಿ ಸವಿಯಿರಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ