ಪುಸ್ತಕದ ಶೀರ್ಷಿಕೆ : ಸುವರ್ಣ ಕೀಟ
ಲೇಖಕರು : ಸಂಪಟೂರು ವಿಶ್ವನಾಥ್
ಪ್ರಕಾಶಕರು : ಉದಯ ಪ್ರಕಾಶನ
ಪ್ರಥಮ ಮುದ್ರಣ : 2004
ಪುಟಗಳು : 136
ಬೆಲೆ : 50 ರೂ.
ಮಕ್ಕಳ ಸಾಹಿತ್ಯಕ್ಕೆ ಮತ್ತೊಂದು ಹೆಸರು ಎಂಬಂತೆ ತಮ್ಮನ್ನು ತಾವು ತೊಡಗಿಸಿಕೊಂಡ ಸಂಪಟೂರು ವಿಶ್ವನಾಥರವರು ವೃತ್ತಿಯಲ್ಲಿ ಶಿಕ್ಷಕರು. ಬೆಂಗಳೂರಿನ ಪ್ರೌಢಶಾಲೆಯೊಂದರಲ್ಲಿ 1960-1996 ರವರೆಗೆ ವಿಜ್ಞಾನ, ಇಂಗ್ಲಿಷ್, ನಾಟಕಶಾಸ್ತ್ರಗಳ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ರಾಜ್ಯ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದು ನಿವೃತ್ತರಾಗಿರುವವರು.
ಪ್ರವೃತ್ತಿಯಲ್ಲಿ ಮಕ್ಕಳ ಸಾಹಿತ್ಯ ಲೇಖಕರಾದ ಇವರು ಮಕ್ಕಳಿಗಾಗಿ ಬರೆದ ಕಥೆ, ಕವನ, ಜೀವನಚಿತ್ರ ,ನಾಟಕ ಹೀಗೆ ನಾನಾ ವಿಷಯಗಳನ್ನು ಕುರಿತಾದ ಸುಮಾರು ಒಂದೂವರೆ ಸಾವಿರದಷ್ಟು ಲೇಖನಗಳು ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಸಾಹಸಿ ಸೋದರರು', 'ನೆಲದಡಿ ನಾಲ್ವರು', 'ಭಾರತದ ಪ್ರತಿಭಾನ್ವಿತರು', 'ಜೈವಿಕ ತಂತ್ರಜ್ಞಾನ', 'ಸರಳ ವಿಜ್ಞಾನ' ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.
ಕನ್ನಡಪ್ರಭದಲ್ಲಿಯೂ ದೈನಿಕ ಧಾರಾವಾಹಿಯಾಗಿ ಪ್ರಕಟವಾಗಿರುವ ಈ ಪುಸ್ತಕ ಮಕ್ಕಳ ಕಾದಂಬರಿಯ ಜೊತೆಗೆ ವೈಜ್ಞಾನಿಕ ಕಾದಂಬರಿ ಎಂದರೂ ತಪ್ಪಾಗಲಾರದು. ಇಲ್ಲಿ ಪತ್ತೇದಾರಿ ಶೈಲಿಯೂ ಇರುವುದರಿಂದ ನಮ್ಮ ಊಹಾಶಕ್ತಿ ಹಾಗೂ ಆಲೋಚನಾ ಶಕ್ತಿಯಿಂದ ಮೆದುಳಿಗೆ ಮೇವು ನೀಡುತ್ತದೆ. ವೈಜ್ಞಾನಿಕ ಸಂಗತಿಯ ಜೊತೆಗೆ ಪರಿಸರದ ವಿಚಾರವೂ ತಳುಕು ಹಾಕಿಕೊಂಡಿರುವುದರಿಂದ ಮಕ್ಕಳು ಇದನ್ನು ಓದಿದಾಗ ವೈಜ್ಞಾನಿಕ ವಿಚಾರಗಳು ಮಾತ್ರವಲ್ಲದೆ, ಪರಿಸರದ ಕುರಿತಾದ ಕಾಳಜಿಯೂ ಅವರಲ್ಲಿ ಮೂಡುತ್ತದೆ. ಪರಿಸರ ಮಾಲಿನ್ಯ, ರೇಡಿಯೋ ಆಕ್ಟಿವಿಟಿ ಮುಂತಾದವುಗಳ ದುಷ್ಪರಿಣಾಮದ ಜೊತೆಗೆ ಮ್ಯುಟೇಶನ್ ಕುರಿತ ವಿಚಾರಗಳೂ ಇದರಲ್ಲಿ ಮಿಳಿತವಾಗಿವೆ. ಒಂದೊಳ್ಳೆ ಸೈನ್ಸ್ ಫಿಕ್ಷನ್ ಎಂದರೂ ತಪ್ಪಾಗಲಾರದು.
ಕಾಡಮಲ್ಲಿಪುರ ಬೆಂಗಳೂರಿನ ಉತ್ತರ ದಿಕ್ಕಿನಲ್ಲಿದ್ದು ಹಳೆಯ ಬಡಾವಣೆ. ಅಲ್ಲಿಯ ಸೀನಿಯರ್ ಕ್ಲಾರ್ಕ್ ಶಿವಲಿಂಗಯ್ಯನವರ ತಾತನ ಮನೆಯಲ್ಲಿಯೇ ಅವರು ವಾಸವಾಗಿದ್ದದ್ದು. ಅವರ ಪತ್ನಿ ಜಯಮ್ಮ ಅಂದು ಹೊಡೆದ ಜಿರಲೆಯೊಂದು ವಿ ಜಿರಲೆಯಾಗಿತ್ತು. ವಿ ಜಿರಳೆ ಎಂದರೆ ವಿಲಕ್ಷಣವಾದ, ವಿಪರೀತ ಶಕ್ತಿಯ, ವಿಕಿರಣ ಸೂಸುವ, ವಿಚಿತ್ರವಾದ, ವಿಶೇಷವಾದ, ವಿಲಾಸಿ ಸ್ವಭಾವದ ಎಂದೂ ಅರ್ಥೈಸಿಕೊಳ್ಳಬಹುದು. ಆದರೆ, ಈ ಜಿರಲೆ ಆ ಪ್ರಭೇದಕ್ಕೆ ಸೇರಿದ್ದು ಎಂಬುದು ಅವರಿಗೆ ತಿಳಿದಿರಲಿಲ್ಲಎಂ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಅವರ ಮಗಳು ಬೇಬಿ ಅಪರ್ಣಾಳಿಕೆ ಜಿರಲೆ ಮಾಯವಾಗಿದ್ದು, ಜೊತೆಗೆ ಡಸ್ಟ್ ಬಿನ್ ನಲ್ಲಿ ಅದು ಹೊಳೆಯುವ ಹೊಂಬಣ್ಣದ ಪುಡಿಯಾಗಿದ್ದದ್ದು ಒಂದು ರೀತಿಯ ಕುತೂಹಲ ತಂದಿತ್ತು.
ಮಾರ್ಗರೇಟ್ ಹಾಗೂ ಸೈಮನ್ ರವರ ಮನೆಯಲ್ಲಿಯೂ ವಿಶೇಷವಾದ ಅನುಭವವಾಗಿತ್ತು. ಅದರ ಮೇಲೆ ಹೊಂಬಣ್ಣದ ಧೂಳು ಮೆತ್ತಿಕೊಂಡಿದ್ದು.. ಅದರ ಮೇಲೆ ಕೈ ಇಟ್ಟಾಗ ಅವಳಿಗೆ ಶಾಕ್ ಹೊಡೆದಂತೆಯೂ ಹಾಗೂ ಅಲ್ಲಿಯೇ ಹತ್ತಿರದಲ್ಲಿ ಒಂದು ಹೊಳೆಯುವ ಹುಳ ಓಡಾಡುತ್ತಿದ್ದದ್ದು ಕಂಡಿತ್ತು. ಸೈಮನ್ ರಾತ್ರಿ ಪಾಳಿ ಮುಗಿಸಿ ಬಂದಾಗ ಕಾಲಿಂಗ್ ಬೆಲ್ ಮುಟ್ಟಿ ಶಾಕ್ ಹೊಡೆಸಿಕೊಂಡಿದ್ದ. ಅಲ್ಲಿಯೂ ಹೊಂಬಣ್ಣದ ಪುಡಿ ತಳತಳನೆ ಹೊಳೆಯುತ್ತಿತ್ತು.
ಹೆಚ್ಚು-ಕಡಿಮೆ ಅದೇ ಸಮಯದಲ್ಲಿ ಅಗ್ರಹಾರದ ಈಶ್ವರ ದೇವಸ್ಥಾನದ ಅರ್ಚಕರು ಕೂಡಾ ಒಂದು ಅದ್ಭುತವನ್ನು ಕಂಡಿದ್ದರು. ಗರ್ಭಗುಡಿಯಲ್ಲಿರುವ ಶಿವಲಿಂಗದ ಹಿಂದೆ ಲಿಂಗದ ಆಕಾರದಲ್ಲಿಯೇ ಹಳದಿ ಮಿಶ್ರಿತ ಹಸಿರು ಬೆಳಕಿನ ಜೊತೆಗೆ ವಿಭಿನ್ನ ಶಬ್ದವೂ ಕೇಳಿ ಬಂದಿತ್ತು.ಆ ಶಬ್ದ ಮತ್ತು ಬೆಳಕಿನಿಂದ ದೀಕ್ಷಿತರ ಮೈಯಲ್ಲಿ ವಿದ್ಯುತ್ ಪ್ರವಹಿಸಿದಂತಾಗಿ ಎಚ್ಚರ ತಪ್ಪಿದ್ದರು. ಎಚ್ಚರವಾದಾಗ ಅಲ್ಲಿ ಮುಟ್ಟಿ ನೋಡಿದರೆ ಹೊಂಬಣ್ಣದ ಪುಡಿ.
ಅಲ್ಲಿಗೆ ಬಂದ ಪ್ರಕಾಶ ಹಾಗೂ ಫಣಿಗೆ ಈ ವಿಭಿನ್ನ ವಿಚಾರ ಕುತೂಹಲ ತಂದಿತ್ತು. ಪ್ರಕಾಶ್ ಐ.ಪಿ.ಎಸ್ ಪಾಸ್ ಮಾಡಿ ತರಬೇತಿಗೆಂದು ಹೋಗಿದ್ದವನು.. ತಂದೆ-ತಾಯಿ ಆಕಸ್ಮಿಕ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಹಠಾತ್ತನೆ ಹಿಂತಿರುಗಿದ್ದ. ಫಣಿ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಉತ್ತೀರ್ಣವಾಗಿ ಈಗ ಕೆಲಸ ಹುಡುಕುತ್ತಿದ್ದ ಇದು ಅಲೌಕಿಕ ಶಕ್ತಿ ಇರಬಹುದು ಎಂದು ಪ್ರಕಾಶನಿಗನ್ನಿಸಿದರೂ.. ಫಣಿ ಇದನ್ನು ಸುಲಭವಾಗಿ ನಂಬಲಿಲ್ಲ.
ಈ ವಿಚಿತ್ರದ ಬೆನ್ನು ಬಿದ್ದವರಿಗೆ ಮಾರ್ಗರೇಟ್ ಹಾಗೂ ಸೈಮನ್ ರವರ ಮನೆಯಲ್ಲಿ ನಡೆದ ಪ್ರಸಂಗವೂ.. ಬೇಬಿ ಅಪರ್ಣಾ ಕರೆ ಮಾಡಿದ್ದರಿಂದ ಅವರ ಮನೆಯ ಪ್ರಸಂಗವೂ ತಿಳಿದು ಅತ್ತ ಸಾಗಿದ್ದರು.
ಬೇಬಿ ಅಪರ್ಣಾಳ ಮನೆ ಮುಟ್ಟುವ ಹೊತ್ತಿಗೆ ಅವರ ಶಾಲೆಯಲ್ಲಿ ಅಂದು ನಡೆದಿದ್ದ ದುರಂತವೂ ಇವರಿಗೆ ತಿಳಿದಿತ್ತು. ಅದೇನೆಂದರೆ ಸಾವಿರಾರು ಹುಳುಗಳು, ಕಚ್ಚುವ ಕೀಟಗಳು ಗುಂಪು ಗುಂಪಾಗಿ ಬಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದು.
ಈ ಎಲ್ಲಾ ವಿಚಾರವನ್ನು ತಿಳಿಸಲು ಐ.ಜಿ.ಪಿ ಆಫೀಸಿಗೆ ಹೋದಾಗ ಅಲ್ಲಿನ ಪ್ರಸಂಗ ದಂಗುಬಡಿಸಿತ್ತು. ಸಾವಿರಾರು ಬಾವುಲಿಗಳು ಒಟ್ಟಾಗಿ ಬಂದು ಕಚೇರಿಯ ಮೇಲೆ ದಾಳಿ ಮಾಡಿ ಅಲ್ಲಿನ ಎಲ್ಲವನ್ನು ಅಸ್ತವ್ಯಸ್ತಗೊಳಿಸಿದ್ದವು.
ಬೇಬಿ ಅಪರ್ಣಾ ಮನೆಯಲ್ಲಿ ಅವರ ಮುತ್ತಾತ ಅಡವೀಶಯ್ಯನವರು ಹೇಳಿದ ವಿಚಾರಗಳು ಹಾಗೂ ಬೇಬಿ ಅಪರ್ಣ ನೀಡಿದ ಕೆಲವು ವಿಚಾರಗಳ ಹಿಂದೆ ಬೆನ್ನತ್ತಿದಾಗ ತಿಳಿದದ್ದು.. ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಹಿಂದೆ ಶಾಂತಿನಾಥ ಎಂಬ ಬುದ್ಧಿವಂತ ವಿಜ್ಞಾನಿಯೊಬ್ಬರ ಲ್ಯಾಬೋರೇಟರಿಯಿತ್ತು. ಅದರ ಹೆಸರು ಕಮಲ ಕೆಮಿಕಲ್ ಅಂಡ್ ಪೇಂಟಿಂಗ್ಸ್ ಎಂದು. ಕೀಟಗಳನ್ನು ಕೊಲ್ಲುವ ವಿಷ ವಸ್ತುಗಳು, ಕತ್ತಲಲ್ಲಿ ಹೊಳೆಯುವ ಪೇಯಿಂಟುಗಳು ಈ ರೀತಿಯ ವಸ್ತುಗಳನ್ನು ತಯಾರಿಸುತ್ತಿದ್ದೇವೆ ಎಂದು ಹೇಳಿದ್ದರು. ಕೆಲವರು ಆತ ಸಿಡಿಮದ್ದು ಮತ್ತು ಗುಂಡುಗಳನ್ನು ತಯಾರಿಸುತ್ತಿರಬಹುದು ಎಂಬ ಗುಮಾನಿ ಹೊಂದಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬರುವ ಎರಡು ವರ್ಷ ಮೊದಲು ಲ್ಯಾಬೋರೇಟರಿಯಲ್ಲಿ ದೊಡ್ಡ ಬೆಂಕಿ ಅಪಘಾತವಾಗಿ ಎಲ್ಲವೂ ಸುಟ್ಟು ಹೋಗಿದ್ದವು. ಮೂರು ದಿನ ಯಾರ ಕೈಯಲ್ಲಿಯೂ ಬೆಂಕಿ ಆರಿಸುವುದಕ್ಕೆ ಆಗಿರಲಿಲ್ಲ. ಈಗ ಅದು ಮಾಲಿನ್ಯ ತುಂಬಿದ ಜಾಗವಾಗಿ ಮುಖ್ಯರಸ್ತೆಯ ಪಕ್ಕದಲ್ಲಿದೆ. ಅಲ್ಲಿ ಗಿಡಗಂಟಿಗಳು, ಕ್ರಿಮಿಕೀಟಗಳು ಗಬ್ಬು ವಾಸನೆಗಳು ಬರುತ್ತದೆ. ಅಪರ್ಣ ಅಲ್ಲಿಯೇ ಹೊಳೆಯುವ ಕೀಟಗಳನ್ನು ನೋಡಿದ್ದಳು.
ಅದರ ಬೆನ್ನತ್ತಲು ಹೋದ ಅಪರ್ಣಾಳಿಗೆ ಅಲ್ಲಿನ ಕುಡುಕನೊಬ್ಬ ರೇಗಿದ್ದ. ಈ ಸಾಹಸಗಾಥೆಯಲ್ಲಿ ಆತನದ್ದು ಒಂದು ಪಾತ್ರವಿದೆ. ಆತ ಮತ್ತಾರೂ ಅಲ್ಲದೆ ಶಾಂತಿನಾಥ್ ಅವರ ಮಗ ಪದ್ಮರಾಜು.
ಅಲ್ಲಿ ಬಾರ್ ನಡೆಸುತ್ತಿದ್ದದ್ದು ಶಾಂತಿನಾಥ್ ಅವರ ಎರಡನೆಯ ಹೆಂಡತಿಯ ಮಗ ನಾಕುಮಾರಿ. ಅತಿ ಹೆಚ್ಚಿನ ಶ್ರೀಮಂತ ಹಾಗೂ ಪ್ರಭಾವಶಾಲಿ ವ್ಯಕ್ತಿಗಳಲ್ಲೊಬ್ಬ. ನೈಸ್ ಕಂಪನಿಯ ಮಾಲೀಕ.
ಇದರ ಜೊತೆಜೊತೆಗೆ ಪ್ರಕಾಶ್ ತನ್ನ ತಂದೆ ಪ್ರದೀಪ್ ಸಿಂಹರ ಕಾರು ಅಪಘಾತ ಆಕಸ್ಮಿಕವಲ್ಲವೆಂದು ಕಂಡುಕೊಂಡ. ಅದಕ್ಕೂ ಈ ಘಟನೆಗೂ ಕೊಂಡಿಯಿತ್ತು.
ಸೈನ್ಸ್ ಲ್ಯಾಬೋರೇಟರಿಯಲ್ಲಿ ಕೀಟಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಪರ್ಣಿಕಾ ಕೂಡ ಹೆಚ್ಚಿನ ಮಾಹಿತಿಗಳನ್ನು ನೀಡುತ್ತಾರೆ. ಇಲ್ಲಿ ಸುವರ್ಣ ಕೀಟಗಳ ಆತ್ಮಹತ್ಯೆ ಹಾಗೂ ಸಾವೂ ವಿಭಿನ್ನವಾಗಿ ತೋರುತ್ತದೆ.
ಆ ಎಲ್ಲಾ ಘಟನೆಗಳಿಗೂ.. ಸುವರ್ಣ ಕೀಟಗಳಿಗೂ ಇರುವ ಸಂಬಂಧವೇನು..?? ವಿಕಿರಣತೆ ಕೀಟಗಳ ಮೇಲೆ ಮ್ಯುಟೇಶನ್ ನಿಂದ ತಂದ ಪರಿಣಾಮವೆಂದು ಊಹಿಸಿದರೂ.. ಅದೆಲ್ಲವೂ ಅಷ್ಟು ಸುಲಭವಾ..?? ಜಿರಳೆ ಒಂದು ಯಕಶ್ಚಿತ್ ಹುಳು ಎಂದು ಭಾವಿಸುವವರು ಸಹಾ ಇಲ್ಲಿನ ಕಥೆಯನ್ನು ಓದಿದರೆ ಅದು ಸಮಾಜದ ಮೇಲೆ ಹೇಗೆ ಘಾತುಕ ಪರಿಣಾಮ ಬೀರಬಲ್ಲದು ಎಂಬುದರ ಅರಿವಾಗುತ್ತದೆ. ಶಾಂತಿನಾಥ್ ಆನಂತರ ಏನಾದರು..?? ನಾಕುಮಾರಿ ಹಾಗೂ ನೈಸ್ ಇಲ್ಲಿನ ಪ್ರಸಂಗದಲ್ಲಿ ಎಷ್ಟು ಪ್ರಮುಖ ಪಾತ್ರಗಳು.. ಪದ್ಮರಾಜು ಮೇಲ್ನೋಟಕ್ಕೆ ಕಂಡಂತೆ ಇದ್ದನೇ.. ಆತನ ವ್ಯಕ್ತಿತ್ವವೇನು..? ಸುವರ್ಣ ಕೀಟಗಳ ಕಥೆ ಮುಂದೇನಾಯ್ತು..?? ಎಲ್ಲವನ್ನು ತಿಳಿಯಲು ಓದಿ 'ಸುವರ್ಣ ಕೀಟ'.
ಇಲ್ಲಿ ಇದು ಕೇವಲ ವೈಜ್ಞಾನಿಕ ಕಥೆ ಮಾತ್ರವಲ್ಲದೇ.. ಒಳ್ಳೆಯವರು ಹಾಗೂ ಕೆಟ್ಟವರ ನಡುವಿನ ಸಂಘರ್ಷವೂ ಹೌದು. ವಿಜ್ಞಾನಿಗಳು, ಪತ್ತೇದಾರರ ಜೊತೆಗೆ ಮನುಷ್ಯನ ದುರಾಸೆ, ಗೆಳೆಯರ ಸಾಹಸ.. ಮಕ್ಕಳಲ್ಲಿ ಇರಬೇಕಾದ ಎಚ್ಚರಿಕೆ ಹಾಗೂ ಬುದ್ಧಿವಂತಿಕೆ ಸಾಹಸಪ್ರಜ್ಞೆ ಜೊತೆಗೆ ಕರ್ತವ್ಯ ಪ್ರಜ್ಞೆಗಳು ಕಂಡು, ಮಕ್ಕಳನ್ನು ಹೀಗಿರುವಂತೆ ಪ್ರೇರೇಪಿಸುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ