ಪುಸ್ತಕದ ಶೀರ್ಷಿಕೆ : ದೇವರಾಣಿ
ಲೇಖಕರು : ಪ್ರೇಮಾ ಭಟ್
ಪ್ರಕಾಶಕರು : ರಾಗಿಣಿ ಶಿಕ್ಷಣ ಪ್ರತಿಷ್ಠಾನ
ಪ್ರಥಮ ಮುದ್ರಣ : 2002
ಪುಟಗಳು : 148
ಪ್ರೇಮಾ ಭಟ್ ರವರ ಐತಿಹಾಸಿಕ ಕಾದಂಬರಿ 'ದೇವರಾಣಿ' ದಾನಚಿಂತಾಮಣಿ ಎಂದೇ ಖ್ಯಾತಿ ಪಡೆದ ಅತ್ತಿಮಬ್ಬೆಯ ಬದುಕನ್ನು ಚಿತ್ರಿಸುವ ಕಾದಂಬರಿ. ಜೈನರ ಸಾಹಿತ್ಯ ಕ್ಷೇತ್ರದ, ಧಾರ್ಮಿಕ ಕ್ಷೇತ್ರದ ಅಸಾಮಾನ್ಯ ಸೇವೆಯಲ್ಲಿ ಎದ್ದು ಕಾಣುವ ಹೆಸರು ಅತ್ತಿಮಬ್ಬೆಯದ್ದು.
ಪುಂಗನೂರಿನಲ್ಲಿ ಜಿನ ಮಹಾಮುನಿಗಳ 'ಲೋಚು' ಸಮಾರಂಭ ನಡೆಯುತ್ತಿತ್ತು. ಅದರ ಮೇಲ್ವಿಚಾರಣೆಯ ಹೊತ್ತದ್ದು ಚಾಲುಕ್ಯ ಮಹಾರಾಜರ ಮಹಾಮಂತ್ರಿ ನಾಗಮಯ್ಯ ಹಾಗೂ ಮನೆತನದ ಕುಲಗುರು ಜಿನಚಂದ್ರ ಮಹಾಮುನಿಗಳು. ಈ ಸಮಾರಂಭವನ್ನು ಕಂಡು ಇನ್ನೂ ಪುಟ್ಟ ಮಕ್ಕಳಾದ ನಾಗಮಯ್ಯನ ಮೊಮ್ಮಕ್ಕಳಾದ ಅತ್ತಿಮಬ್ಬೆ ಹಾಗೂ ಗುಂಡಮಬ್ಬೆಯವರಿಗೆ ಸಡಗರ ಹಾಗೂ ಸಂಭ್ರಮ. ಅರಳು ಹುರಿದಂತೆ ಮಾತನಾಡುವ ಗುಂಡಮಬ್ಬೆ ಹಾಗೂ ಸಮಾಧಾನ ಚಿತ್ತದ ಅತ್ತಿಮಬ್ಬೆ ಇಬ್ಬರೂ ಅವಳಿ ಮಕ್ಕಳು.
ನಾಗಮಯ್ಯನಿಗೆ ಮಲ್ಲಪ ಹಾಗೂ ಪುನ್ನಮಯ್ಯ ಎನ್ನುವ ಇಬ್ಬರು ಗಂಡುಮಕ್ಕಳು. ಮಲ್ಲಪ ಸಾಹಸಕ್ಕೆ ಹೆಸರಾಗಿದ್ದರೆ ಪುನ್ನಮಯ್ಯ ಬುದ್ಧಿವಂತಿಕೆಗೆ ಹೆಸರಾಗಿದ್ದ. ಪುನ್ನಮಯ್ಯನಿಗೆ ಮಕ್ಕಳಿರಲಿಲ್ಲ. ಮಲ್ಲಪ್ಪನಿಗೆ ಅಬ್ಬಕ್ಕಬ್ಬೆಯಿಂದ ಐದು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಅವಳಿ ಜವಳಿ ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡವಳು ಅತ್ತಿಮಬ್ಬೆ ಹಾಗೂ ಎರಡನೆಯವಳು ಗುಂಡಮಬ್ಬೆ. ಇದರ ನಂತರ ಅವರಿಗೆ ಮತ್ತೊಂದು ಹೆಣ್ಣು ಮಗುವಾಗಿತ್ತು. ಆಕೆ ನಾಗಿಮಬ್ಬೆ.
ತಾತ ನಾಗಮಯ್ಯನವರ ನೇತೃತ್ವದಲ್ಲಿ ಅವರ ಬಾಲ್ಯದ ಸ್ನೇಹಿತರಾದ ಜಿನಚಂದ್ರ ಮುನಿಗಳ ಬಳಿ ವಿದ್ಯಾಭ್ಯಾಸ ಪಡೆದ ಅತ್ತಿಮಬ್ಬೆ ಹಾಗೂ ನಾಗಮಬ್ಬೆಯರು ತಮ್ಮ ಮನೆಯಲ್ಲಿಯೂ ಯೋಗ್ಯ ಶಿಕ್ಷಣವನ್ನು ಪಡೆದು ಕಲೆಗೆ ಪ್ರೋತ್ಸಾಹ ಕೊಡುತ್ತಾ ಉದಾರಿಯಾದ ತಾತನನ್ನು ನೋಡಿ ಹಾಗೂ ಮನೆಗೆ ಬರುತ್ತಿದ್ದ ಪ್ರತಿಭಾಶಾಲಿಗಳ ಸಂಪರ್ಕದಿಂದ ದಿನೇದಿನೇ ಆದರ್ಶವಾಗಿ ಬೆಳೆಯುತ್ತಿದ್ದರು. ಕಲಿಯಬೇಕಾದುದನ್ನೆಲ್ಲಾ ಕಲಿತು ಮುಗಿಸಿದ್ದ ಗುಂಡಮಬ್ಬೆ ಹಾಗೂ ಅತ್ತಿಮಬ್ಬೆರಿಬ್ಬರು ತಾತನ ಕಣ್ಮಣಿಯರು. ದೇಹಕ್ಕೆ ಮುಪ್ಪು ಆವರಿಸಿದ್ದ ಪರಿಣಾಮದಿಂದ ಜಿನಚಂದ್ರರು ಸಲ್ಲೇಖನ ವ್ರತ ತೆಗೆದುಕೊಳ್ಳಲು ತೀರ್ಮಾನಿಸಿದರು. ಬಾಲ್ಯ ಗೆಳೆಯರಾದ ನಾಗಮಯ್ಯನವರೂ ಅವರನ್ನೇ ಅನುಸರಿಸಿದರು. ಆದರೆ, ಮೊದಲಿಗೆ ಅದರ ಫಲ ದೊರೆತದ್ದು ನಾಗಮಯ್ಯನವರಿಗೆ.
ಮಲ್ಲಪ ಪಂಪ ಮತ್ತು ಪೊನ್ನರನ್ನು ಪುಂಗನೂರಿಗೆ ಕರೆಸಿಕೊಂಡು ಜಿನಚಂದ್ರರ ಆಸೆಯಂತೆ ಶಾಂತಿಪುರಾಣ ಬರೆಯುವ ಪ್ರಸ್ತಾಪ ಮಾಡಿದರು. ಆದರೆ, ಅರಿಕೇಸರಿ ಮಹಾರಾಜರ ಮರಣದಿಂದ ಪಂಪ ಅದಾಗಲೇ ಲೇಖನಿಯನ್ನು ಕೆಳಗಿಟ್ಟಾಗಿತ್ತು. ಹಾಗಾಗಿ, ಶಾಂತಿಪುರಾಣವನ್ನು ಪೊನ್ನ ಕವಿಯೇ ಬರೆಯುವಂತೆ ಪಂಪನೂ ಒತ್ತಾಯಿಸಿದ. ನಂತರ ಪೊನ್ನ ಶಾಂತಿಪುರಾಣ ಬರೆಯಲು ಶುರುವಿಟ್ಟ. ಪಂಪನ ನಿಲುವು ಮಹಾರಾಜರ ಮೇಲಿದ್ದ ಆತನ ಅತಿಶಯವಾದ ಪ್ರೀತಿ ಗೌರವವನ್ನು ತೋರುತ್ತದೆ.
ಅತ್ತಿಮಬ್ಬೆ ಹಾಗೂ ಗುಂಡಮಬ್ಬೆಯರ ವಿವಾಹದ ವಿಚಾರ ಎಲ್ಲರ ಮನಸ್ಸಿನಲ್ಲಿಯೂ ಇದ್ದಿತು. ಅದೇ ಸಂದರ್ಭದಲ್ಲಿ ಚಾಲುಕ್ಯರ ಮಹಾಮಂತ್ರಿ ದಲ್ಲಪ ಪುಂಗನೂರಿಗೆ ಬಂದು ತನ್ನ ಮಗ ನಾಗದೇವನಿಗೆ ಆ ಮನೆಯಿಂದ ಹೆಣ್ಣನ್ನು ಆಶಿಸಿದ. ಅದೇ ಸಮಯಕ್ಕೆ ಚಾವುಂಡರಾಯನೂ ತನ್ನ ಮನೆಗೆ ಸೊಸೆಯರನ್ನಾಗಿಸಿಕೊಳ್ಳುವ ಪ್ರಸ್ತಾಪ ತಂದ. ದಲ್ಲಪನ ಮಗ ನಾಗದೇವನಿಗೆ ಅತ್ತಿಮಬ್ಬೆಯನ್ನು ಕೊಡುವುದಾಗಿ ನಾಗಮಯ್ಯ ಮಾತು ಕೊಟ್ಟಿದ್ದರಿಂದ ಅದು ನಿಶ್ಚಯವಾದರೂ.. ಗುಂಡಮಬ್ಬೆ ಅತ್ತಿಮಬ್ಬೆಯನ್ನು ತೊರೆದು ತಾನು ಬೇರೆ ಹೋಗಲಾರೆನೆಂದು ಕಾಳಲಾದೇವಿಗೆ ಸೊಸೆಯಾಗಿ ಹೋಗಲು ಒಪ್ಪಲಿಲ್ಲ. ಇಬ್ಬರೂ ಒಬ್ಬರನ್ನೇ ವಿವಾಹವಾಗಲು ತೀರ್ಮಾನಿಸಿದ್ದರು. ಆ ಸಂದರ್ಭದಲ್ಲಿ ಪಂಪನ ಸಲಹೆಯಂತೆ ಜಿನಬಿಂಬಕ್ಕೆ ಆರತಿ ಎತ್ತಿ ಚೀಟಿ ತೆಗೆದಾಗ ಅಲ್ಲಿ ಬಂದದ್ದು ದಲ್ಲಪನ ಹೆಸರು. ಚಾವುಂಡರಾಯ ಮನಸ್ಸಿಗೆ ನೋವಾಗಿದ್ದರೂ ತೋರಿಸಿಕೊಳ್ಳಲಿಲ್ಲ. ದೈವೀ ಕೃಪೆಯಿಂದ ನಾಗದೇವನನ್ನು ಅವರಿಬ್ಬರೂ ಮದುವೆಯಾದರು.
ಅವರ ಮದುವೆಯ ಹೊತ್ತಿಗೆ ಶಾಂತಿಪುರಾಣ ಅಚ್ಚಾಗಿತ್ತು. ಮದುವೆಯಲ್ಲಿ ಒಬ್ಬರ ಕೈಗೆ ಕೊಟ್ಟು ಇನ್ನೊಬ್ಬರ ಕೈಗೆ ಕೊಡಲಿಲ್ಲವೆಂದು ಅತ್ತಿಮಬ್ಬೆ ಬೇಸರ ವ್ಯಕ್ತಪಡಿಸಿದಾಗ, ಅದರ ಇನ್ನಷ್ಟು ಪ್ರತಿಗಳನ್ನು ಅಚ್ಚಾಗಿಸಿ ವಿವಾಹಕ್ಕೆ ಬಂದವರ ಮನೆಗೇ ತಲುಪಿಸುವ ಆಶ್ವಾಸನೆ ನೀಡಿದ ಮಲ್ಲಪ.
ಸೊಸೆಯರಿಬ್ಬರನ್ನೂ ಆತ್ಮೀಯವಾಗಿ ಸ್ವಾಗತಿಸಿದಳು ಪದ್ಮಬ್ಬೆ. ಇಬ್ಬರು ಅಕ್ಕ-ತಂಗಿಯರೂ ಹೊಂದಿ ಬಾಳುತ್ತಿದ್ದರು. ಒಮ್ಮೆ ಬಳೆಗಾರ ಬಳೆ ತೋರಿಸಲು ಬಂದ ಸಂದರ್ಭದಲ್ಲಿ ಆತನನ್ನು ರಾತ್ರಿ ಊಟಕ್ಕೆ ಆಹ್ವಾನಿಸಿದ್ದರು ಆಗ ಬಂದ ಅವನ ಮಗ ರನ್ನನ ವಿದ್ಯಾಭ್ಯಾಸದ ಹಂಬಲವನ್ನು ಕಂಡು ತಮ್ಮಲ್ಲೇ ಉಳಿಸಿಕೊಂಡು ತಾವೇ ಆತನಿಗೆ ವಿದ್ಯಾಭ್ಯಾಸ ಮಾಡಿಸುತ್ತೇವೆಂದು ಆತನ ಜವಾಬ್ದಾರಿ ತೆಗೆದುಕೊಂಡಳು ಅತ್ತಿಮಬ್ಬೆ. ಇದಕ್ಕೆ ಎಲ್ಲರ ಒಪ್ಪಿಗೆಯೂ ದೊರೆಯಿತು. ರನ್ನನ ತಂದೆ ಜಿನವಲ್ಲಬನಿಗೂ ತನ್ನ ಮಗನ ಉಜ್ವಲ ಭವಿಷ್ಯ ಕಂಡು ಸಂತಸವಾಯಿತು. ಅಜಿತಸೇನಾಚಾರ್ಯರ ಆಶ್ರಮಕ್ಕೆ ರನ್ನ ದಾಖಲಾದ.
ಯುದ್ಧವೊಂದರಲ್ಲಿ ನಾಗದೇವ ತೀರಿಕೊಂಡಾಗ ಗುಂಡಮಬ್ಬೆ ಸಹಗಮನ ಮಾಡುತ್ತಾಳೆ. ಮಗ ಅಣ್ಣಿಗದೇವನಿಗಾಗಿ ಅತ್ತಿಮಬ್ಬೆ ಉಳಿಯುತ್ತಾಳೆ. ಅಣ್ಣಿಗದೇವನಿಗೆ ಸೂಕ್ತವಾದ ಮಾರ್ಗದರ್ಶನ ನೀಡಿ ಯೋಗ್ಯನನ್ನಾಗಿ ಬೆಳಸುತ್ತಾಳೆ ಅತ್ತಿಮಬ್ಬೆ. ಅಣ್ಣಿಗದೇವ ತಾಯಿಗೆ ಸಹಾಯಕನಾಗಿ ನಿಲ್ಲುತ್ತಿದ್ದ. ಆತ ತನ್ನ ಗರ್ಭದಲ್ಲಿರುವಾಗಿನಿಂದಲೇ ಆಕೆ ಪಟ್ಟ ಬಯಕೆ, ಆಕೆಯ ದಾನದ ಗುಣವನ್ನು ಬಿಂಬಿಸುವಂತಿದೆ. ಆಕೆಯ ದಾನದ ಗುಣ ಪ್ರತಿ ನಡೆಯಲ್ಲಿಯೂ ಬಿಂತವಾಗುತ್ತಾ ಜಿನಾಲಯ ಕಟ್ಟಿಸುವ ಕೆಲಸಗಳೂ ಸಾಗುತ್ತಿದ್ದವು.
ರನ್ನ ಅತ್ತಿಮಬ್ಬೆಯ ಮೇಲೆ ಅತಿಶಯವಾದ ಪ್ರೀತಿ, ಗೌರವವನ್ನು ಇಟ್ಟಿದ್ದ. ಅಣ್ಣಿಗದೇವನ ವಿವಾಹದ ಸಂದರ್ಭದಲ್ಲಿ ಅಜಿತತೀರ್ಥಂಕರ ಪುರಾಣ ರನ್ನನಿಂದ ಎಲ್ಲರಿಗೂ ಹಂಚಲ್ಪಟ್ಟಿತು.
ಅತ್ತಿಮಬ್ಬೆಯನ್ನು ತನ್ನ ಸೊಸೆಯನ್ನಾಗಿಸಿಕೊಳ್ಳಲು ಚಾವುಂಡರಾಯ ಪುಂಗನೂರಿಗೆ ಬರುವ ಮೊದಲಿನಲ್ಲೇ ಕಾಳಲಾದೇವಿಗೆ ಬಿದ್ದ ಕನಸಿನಂತೆ ಶ್ರವಣಬೆಳಗೊಳದಲ್ಲಿ ಗೊಮ್ಮಟನ ಪ್ರತಿಷ್ಠಾಪನೆಯೂ ಆಯಿತು. ಆ ಸಂದರ್ಭದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆಯ ಕುರಿತಾದ ನಂಬಿಕೆಗೆ ಪುಷ್ಟಿ ಕೊಡುವ ಘಟನೆಯೊಂದು ನಡೆದು ಆಕೆಯ ಶ್ರೇಷ್ಠತೆಯನ್ನು ಮತ್ತಷ್ಟು ಹೆಚ್ಚಿಸಿತು.
ಅತ್ತಿಮಬ್ಬೆಯ ಹಿರಿಮೆಯನ್ನು ಸಾರುವ ಆಕೆಯ ಹಲವು ನಡೆಗಳು ಹಾಗೂ ಪವಾಡದಂತೆನಿಸುವ ಘಟನೆಗಳು ಆಕೆಯ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತಾ ಹೋಗುತ್ತವೆ.
ಈ ಪುಸ್ತಕದ ಬೆನ್ನುಡಿಯಲ್ಲಿ ಡಾಕ್ಟರ್ ಎಂ. ಚಿದಾನಂದಮೂರ್ತಿಯವರು "ಶಾಂತಲೆಯು ಕರ್ನಾಟಕ ಸಂಸ್ಕೃತಿಯು ಇತ್ತಿರುವ ಹೂವಾದರೆ, ಅತ್ತಿಮಬ್ಬೆಯು ಕರ್ನಾಟಕ ಸಂಸ್ಕೃತಿಯು ಇತ್ತಿರುವ ಪಕ್ವ ಫಲ" ಎಂದು ಹೇಳಿರುವ ಮಾತು ಅವರಿಬ್ಬರ ಹಿರಿಮೆಯನ್ನು ದ್ವನಿಸುತ್ತದೆ.
ಆದರ್ಶ, ಆಧ್ಯಾತ್ಮ, ಆಶಯ ಎಲ್ಲದಕ್ಕೂ ಅನ್ವರ್ಥಕದಂತಿರುವ ಸರ್ವಶ್ರೇಷ್ಠರಾದ ಅತ್ತಿಮಬ್ಬೆಯ ಕುರಿತಾಗಿ ಶ್ರೀ ಟಿ. ಕೆ ರಾವ್ ಅವರು ರಚಿಸಿರುವ ಈ ಕಾದಂಬರಿಯ ಮುಖಪುಟ ಬಹಳಷ್ಟು ಅರ್ಥಪೂರ್ಣವಾಗಿ ಮೂಡಿಬಂದಿದೆ . ಒಂದೊಳ್ಳೆ ಐತಿಹಾಸಿಕ ಕಾದಂಬರಿಯ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ