ಪುಸ್ತಕದ ಶೀರ್ಷಿಕೆ : ಬೆಸೆಯದ ಬಂಧ
ಲೇಖಕರು : ಇಂದಿರಾ ನಾಡಿಗ್
ಪ್ರಕಾಶಕರು : ಚಾರುಮತಿ ಪ್ರಕಾಶನ
ಪ್ರಥಮ ಮುದ್ರಣ : 2023
ಪುಟಗಳು : 163
ಬೆಲೆ : 170 ರೂ.
'ಬಲವಂತದ ಕರ್ಮ' ಎಂಬ ಕಾದಂಬರಿಯನ್ನು ಬರೆದಿರುವ ಶ್ರೀಮತಿ ಇಂದಿರಾ ನಾಡಿಗ್ ಅವರ ಎರಡನೇ ಕಾದಂಬರಿ ಇದು.
ಹೆಣ್ಣುಮಕ್ಕಳು ತಮ್ಮದೇ ಮಗುವಿಗೆ, ತಾಯ್ತನಕ್ಕೆ ಹಂಬಲಿಸಿ ಅದು ಸಾಧ್ಯವೇ ಆಗದಿದ್ದಾಗ ಮಗುವನ್ನು ದತ್ತು ಪಡೆಯುವುದಿದೆ. ಹಾಗೆಂದು ದತ್ತು ಪಡೆಯುವ ಪ್ರಕ್ರಿಯೆ ಸುಲಭವಾದದ್ದಲ್ಲ. ಕೆಲವರಿಗೆ ಬಡತನವಿದ್ದರೂ ಮನೆಯಲ್ಲಿ ಹೆಚ್ಚಿನ ಮಕ್ಕಳಿರುತ್ತಾರೆ. ಹಾಗೆಂದು, ತಮ್ಮ ಮಕ್ಕಳನ್ನು ಬೇರೆಯವರಿಗೆ ದತ್ತು ಕೊಡಲು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಏಕೆಂದರೆ, ಬಳ್ಳಿಗೆ ಕಾಯಿ ಭಾರವಲ್ಲ.. ತಾಯಿಗೆ ಮಗು ಭಾರವಲ್ಲ. ಹಾಗೆಂದು, ತಾಯ್ತನದ ಹಂಬಲದಿಂದ ಹಂಬಲಿಸಿ ಹಂಬಲಿಸಿ ಪಡೆದ ಮಗುವನ್ನು ತೀರಾ ಮುಚ್ಚಟ್ಟೆಯಲ್ಲಿ, ಅತಿ ಪ್ರೀತಿಯಲ್ಲಿ ಬೆಳೆಸುವುದು ಸಹಾ ಅವರ ಮೊಂಡುತನಕ್ಕೆ ಕಾರಣವಾಗಬಹುದು ಅಥವಾ ಅವರನ್ನು ತೀರಾ ದಂಡಿಸಿದರೆ ಅದು ಮಗುವಿನ ಮನಸ್ಸಿನ ಮೇಲೆ ಬೇರೆಯ ರೀತಿಯ ಪರಿಣಾಮ ಬೀರಬಹುದು.
ತಾನು ಅವರ ಸ್ವಂತ ಮಗುವಲ್ಲವೆಂಬ ಕಾರಣಕ್ಕೆ ಅವರು ಹೀಗೆ ವರ್ತಿಸುತ್ತಿದ್ದಾರೇನೊಬ್ಬಎಂಬ ಕಹಿ ಆ ಮಗುವಿನ ಮನಸ್ಸಿನಲ್ಲಿ ಹುಟ್ಟಿ ಬಿಟ್ಟರಂತೂ ಅದನ್ನು ನಿವಾರಿಸುವುದು ಬಹಳವೇ ಕಷ್ಟ. ದತ್ತು ಮಗುವನ್ನು ತಮ್ಮ ಸ್ವಂತ ಮಗುವೇ ಎಂದು ಸತ್ಯವನ್ನು ಮುಚ್ಚಿಟ್ಟು ಬೆಳೆಸುವುದು ಸಹಾ ಕಷ್ಟವೇ.. ಮುಂದೆಂದಾದರೂ ಬೇರೆ ಯಾರಿಂದಲಾದರೂ ಆ ಸತ್ಯ ತಿಳಿದರೆ ಆ ಮಗುವಿಗೆ ಆಗುವ ಆಘಾತ ಬೇರೆಯ ರೀತಿಯದ್ದು. ಕೆಲವು ದತ್ತು ಮಕ್ಕಳು ತಮ್ಮ ಹಿನ್ನೆಲೆಯನ್ನು, ನಿಜವಾದ ತಾಯಿ-ತಂದೆಯರನ್ನು ಹುಡುಕಿಕೊಂಡು ಹೋಗಿರುವ ಪ್ರಸಂಗಗಳನ್ನೂ ಕಥೆ ಕಾದಂಬರಿಯಾಗಿ ಓದಿದ್ದೇನೆ. ಒಟ್ಟಿನಲ್ಲಿ ದತ್ತು ಪಡೆದ ಮಗುವನ್ನು ಯಾವ ರೀತಿ ಸೂಕ್ಷ್ಮವಾಗಿ ಬೆಳೆಸಬೇಕೆಂಬುದರ ಅರಿವು ಪೋಷಕರಿಗಿರಬೇಕು ಎಂಬುದು ಹೌದಾದರೂ.. ಕೆಲವೊಮ್ಮೆ ಪರಿಸ್ಥಿತಿ, ಮನಸ್ಥಿತಿಗಳು ಸಹಾ ಅದಕ್ಕೆ ಅನುಕೂಲಕರವಾಗಿರಬೇಕು. ಈ ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಲೇಖಕಿ ಬಹಳ ಸೊಗಸಾದ ಕಾದಂಬರಿಯನ್ನು ಹೆಣೆದಿದ್ದಾರೆ.
9 ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಬೆಳೆಸುವ ಅಮ್ಮಂದಿರ ಜೊತೆಗೆ ಅದು ಕರುಳು ಸಂಬಂಧವಾಗಿ ಅವರ ಪ್ರತಿ ಮಿಡಿತಕ್ಕೂ ಮಿಡಿಯುವ ಮಗುವಾಗಿ ಬೆಳೆಯುತ್ತದೆ. ಇಂದಿನ ದಿನಗಳಲ್ಲಿ ತಾಯಿ-ತಂದೆಯರನ್ನು ವೃದ್ಧಾಶ್ರಮಕ್ಕೆ ದೂಡುವವರನ್ನು ಹೊರತುಪಡಿಸಿದ ಸಂದರ್ಭವನ್ನು ಉಲ್ಲೇಖಿಸಿದ್ದೇನೆ. ಆದರೆ, ದತ್ತು ಮಗುವಿಗೆ ನಾವಾಗಿಯೇ ಎಲ್ಲವನ್ನೂ ಅರ್ಥ ಮಾಡಿಸಬೇಕು.
ವಿಜಯಮ್ಮನ ಅಕ್ಕಂದಿರ ವಿವಾಹದ ವಯಸ್ಸು ಮೀರಿದರೂ.. ವಿವಾಹಕ್ಕೆ ಮನಸ್ಸು ಮಾಡಲಿಲ್ಲ. ಅವರಿಗೆ ಆ ವಯಸ್ಸಿಗೆ ಚಿನ್ಮಯಾನಂದ ಆಶ್ರಮದ ಸೆಳೆತವಿತ್ತು. ಆಧ್ಯಾತ್ಮದ ಕಡೆ ಒಲವಿತ್ತು. ಅವರ ತಂದೆ ಆ ಇಬ್ಬರ ಮಕ್ಕಳು ಮನಸ್ಸನ್ನು ಅರಿತು ಅವರ ಮದುವೆ ವಿಚಾರ ಬಿಟ್ಟು ವಿವಾಹ ಮಾಡಬಹುದಾಗಿದ್ದರೂ.. ವಿಜಯಮ್ಮನ ವಿವಾಹಕ್ಕೆ ತಡ ಮಾಡಿದರು. ವಿಜಯಮ್ಮನವರಿಗೆ ಶ್ಯಾಮ್ ಜೊತೆಗೆ ಸ್ನೇಹವಿತ್ತು. ಆ ಸ್ನೇಹ ಮದುವೆಯವರೆಗೂ ಹೋಗಿದ್ದರೂ ಎಂದಿಗೂ ಸಂಯಮ ಮೀರಿ ನಡೆದುಕೊಂಡಿರಲಿಲ್ಲ. ವಯಸ್ಸಿಗೆ ಸರಿಯಾಗಿ ವಿವಾಹವಾಗಿದ್ದರೆ ಎಲ್ಲವೂ ಸರಿಯಾಗಿರುತ್ತಿತ್ತೇನೋ.. ಆದರೆ, ಹಾಗಾಗವಷ್ಟರಲ್ಲಿ ಶ್ಯಾಮ್ ಬೇರೊಬ್ಬರನ್ನು ವಿವಾಹವಾಗಿಯಾಗಿತ್ತು. ಕುಟುಂಬದ ಹೊಣೆಯಿಂದ ವಿವಾಹವಾಗದೆ ಉಳಿದಿದ್ದ ರೈಲ್ವೆ ಡಿಪಾರ್ಟ್ಮೆಂಟ್ ನ ಉದ್ಯೋಗಿ ತಾರಾನಾಥ್ ರವರ ವಯಸ್ಸು ಮೀರಿತ್ತು. ಅವರಿಬ್ಬರೂ ಜೋಡಿಯಾದರೂ.. ತಡವಾಗಿ ಮದುವೆಯಾಗಿದ್ದರಿಂದ ಮಕ್ಕಳಾಗಿರಲಿಲ್ಲ. ಮಕ್ಕಳಿಗಾಗಿ ಹಂಬಲಿಸಿದ ವಿಜಯಮ್ಮ, ಎಲ್ಲದರ ನಂತರ ದತ್ತು ಮಗುವಿಗಾಗಿ ಹಂಬಲಿಸುತ್ತಿದ್ದರು.
ಸಹೋದ್ಯೋಗಿ ಪದ್ಮರನ್ನು ನೀವು ಇನ್ನೊಂದು ಮಗು ಮಾಡಿಕೊಂಡರೆ ನನಗೆ ದತ್ತು ಕೊಟ್ಟುಬಿಡಿ ಎಂದು ಆಗಾಗ ಹೇಳುತ್ತಿದ್ದದ್ದೂ ಇತ್ತು. ಕೊಂಚ ದೊಡ್ಡ ಹುಡುಗಿಯೊಬ್ಬಳನ್ನು ದತ್ತು ತೆಗೆದುಕೊಂಡು ಅವಳಿಂದ ಪಾಡು ಪಟ್ಟ ನಂತರ ಚಿಕ್ಕ ಮಗುವಿಗಾಗಿ ಹಂಬಲಿಸುತ್ತಿದ್ದರು. ವಿಜಯಮ್ಮ ಅದಕ್ಕಾಗಿ ಆಸ್ಪತ್ರೆ, ಆಶ್ರಮ ಎಲ್ಲಾ ಕಡೆ ಅನಾಥ ಮಗುವಿಗಾಗಿ ಸುತ್ತುತ್ತಿದ್ದರು. ಯಾರೂ ಇಲ್ಲದ ಮಗುವಾಗಬೇಕು, ಕುಟುಂಬದ ಹಿನ್ನೆಲೆ ಚೆನ್ನಾಗಿರಬೇಕು. ಆಚಾರ-ವಿಚಾರ ತಿಳಿದ ಸುಸಂಸ್ಕೃತ ಕುಟುಂಬದ ಮಗುವೇ ಸಿಗಲಿ ಎಂದು ಹಂಬಲಿಸುತ್ತಿದ್ದರು.
ಕೊನೆಗೂ ಅವರಂದುಕೊಂಡಂತೆ ಅವರ ಕಚೇರಿಯ ಸಮೀಪದಲ್ಲಿಯೇ ಇದ್ದ, ಯಾವಾಗಲೂ ಕುಡಿಯುವ ನೀರು ಪಡೆಯಲು ಹೋಗುತ್ತಿದ್ದ ಮನೆಯಲ್ಲಿ ಗಂಡನಿಲ್ಲದ ಶಾಂತ ಅನಾಥ ಮಗುವೊಂದನ್ನು ತಾನೇ ಸಾಕುತ್ತೇನೆ ಎಂದು ಮುಂದಾದದ್ದು.. ಆಕೆಯ ಅಣ್ಣ-ಅತ್ತಿಗೆ ಅದಕ್ಕೆ ಒಪ್ಪದೇ ಇದ್ದದ್ದು ತಿಳಿದು ಅಲ್ಲಿಗೆ ಹೋಗಿ ವಿಚಾರಿಸಿದಾಗ ತಿಳಿದದ್ದು.. ಹೆರಿಗೆ ಸಮಯದಲ್ಲಿ ಅಮ್ಮನನ್ನು ಕಳೆದುಕೊಂಡ ಮಗುವಿನ ಅಪ್ಪ ಮೊದಲೇ ತೀರಿಕೊಂಡಿದ್ದ. ಎಲ್ಲಾ ನಂಟುಗಳು ಕಡಿದುಕೊಂಡಿದ್ದ ಮಗುವನ್ನು ಹುಟ್ಟಿದ ಸಮಯ, ನಕ್ಷತ್ರ, ರಾಶಿ ಎಲ್ಲಾ ತಿಳಿದು ಜಾತಕ ಬರೆಸಿ ನೋಡಿ ದತ್ತು ತೆಗೆದುಕೊಂಡಿದ್ದರು.
ತಾರಾನಾಥ್ ಅವರಿಗೆ ಕೆಲವೊಮ್ಮೆ ಪತ್ನಿಯ ಕಿರಿಕಿರಿಯಿಂದ ಬೇಸರವಾಗುತ್ತಿದ್ದರೂ.. ತನ್ನ ಪತ್ನಿ ಮಗುವಿಗಾಗಿ ಹಂಬಲಿಸುತ್ತಿದ್ದ ವಿಚಾರ ಅವರ ಮನಸ್ಸಿನಲ್ಲಿಯೂ ಕೊರೆಯುತ್ತಿತ್ತು. ಉದ್ಯೋಗಸ್ಥ ಮಹಿಳೆಯಾಗಿ ಮಗುವನ್ನು ಬೆಳೆಸಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೆಲಸಕ್ಕೆ ಬರುತ್ತಿದ್ದ ಮಂಜುಳ ಸ್ನೇಹಮಯಿ. ಅಲ್ಲದೇ ಆತ್ಮೀಯ ಸಹಾಯಕಳಾಗಿದ್ದಳು. ಆದರೆ, ಮಗುವಾಗಿದ್ದ ವಾಗೀಶ ಬೆಳೆಯುತ್ತಾ ಹೋದಂತೆ ಆತನಿಂದ ರಗಳೆಗಳು, ತೊಂದರೆಗಳು ಹೆಚ್ಚುತ್ತಲೇ ಹೋಗುತ್ತಿದ್ದವು.
ವಾಗೀಶ ಹಠ, ಮೊಂಡುತನ, ಚೇಷ್ಟೆ ಮಾಡುತ್ತಾ ಸುತ್ತಮುತ್ತಲಿನವರಿಗೆ, ತರಗತಿಯಲ್ಲಿ ಎಲ್ಲರಿಗೂ ತಲೆ ನೋವಾಗಿದ್ದ. ದಿನಕ್ಕೊಂದಾದರೂ ದೂರು ಆತನಿಂದಾಗಿ ಕಾದಿರುತ್ತಿತ್ತು. ಮೊದಲೇ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ, ಜೊತೆಗೆ ಬಸ್ಸಿನ ಪ್ರಯಾಣದಿಂದ ಹಣ್ಣಾಗುತ್ತಿದ್ದ ವಿಜಯಮ್ಮನವರಿಗೆ ಇದು ಮತ್ತಷ್ಟು ರೇಜಿಗೆ ಹುಟ್ಟಿಸುತ್ತಿತ್ತು. ಅದೇ ಸಮಯಕ್ಕೆ ತಾವು ಕಟ್ಟಿಸಬೇಕೆಂದುಕೊಂಡಿದ್ದ ಮನೆ ಅರ್ಧಕ್ಕೆ ನಿಂತು ಹೋಗಿತ್ತು. ಕಟ್ಟಬೇಕಾದ ಮೇಸ್ತ್ರಿ ಹಣ ಪಡೆದು ತಲೆತಪ್ಪಿಸಿಕೊಂಡಿದ್ದ.
ಅಚಾನಕ್ಕಾಗಿ ಯಾವ ಸುಳಿವೂ ಕೊಡದೆ ವಿಜಯಮ್ಮನವರ ಪತಿ ತಾರಾನಾಥ್ ರವರು ತೀರಿಕೊಂಡಾಗಲಂತೂ ಅವರ ಪಾಡು ಕೇಳುವಷ್ಟಿಲ್ಲ. ಆ ಸಮಯಕ್ಕೆ ವಿಜಯಮ್ಮನವರ ನಿಸ್ವಾರ್ಥ ತಂಗಿ ಶಾರದಾ ಅವರಿಗೆ ಬೆಂಬಲವಾಗಿ ನಿಂತಳು. ಆಕೆ ಲೆಕ್ಚರರ್ ಆಗಿದ್ದವಳು. ಅಲ್ಲದೆ, ಮೈಸೂರಿನಲ್ಲಿ ನೆಲೆಸಿದ್ದರಿಂದ ಹೆಚ್ಚಿನ ದಿನ ಇಲ್ಲಿರುವಂತಿರಲಿಲ್ಲ. ಆದರೂ ಅಕ್ಕನ ಕಷ್ಟಕ್ಕೆ ಮಿಡಿದ ಹೃದಯಿ. ಕಷ್ಟಕ್ಕೆ ಸಮಯಕ್ಕಾಗುವನು ಎಂದುಕೊಂಡಿದ್ದ ಮಗನಿಂದ ಏನೂ ನಿರೀಕ್ಷಿಸುವಂತಿರಲಿಲ್ಲ.
35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವಿಜಯಮ್ಮನವರ ಬೀಳ್ಕೊಡುಗೆ ಸಮಾರಂಭದ ದಿನವಂತೂ ಬಾಗೀಶ ಮಾಡಿದ್ದ ಕೆಲಸದಿಂದ ಎಲ್ಲರಿಗೂ ಹೃದಯವೇ ಬಾಯಿಗೆ ಬಂದಂತಾಗಿತ್ತು. ವಿಜಯಮ್ಮನವರು ಸಾಯುವವರೆಗೂ ವಾಗೀಶ ಬದಲಾಗಲಿಲ್ಲ. ಬದಲಾಗಿ, ವಿಜಯಮ್ಮನವರಿಗೆ ಮತ್ತಷ್ಟು ಕೊರಗು ಹಚ್ಚಿತು. ತಮ್ಮೆಲ್ಲಾ ಆಸ್ತಿಗೂ ವಾಗೀಶನೇ ಹಕ್ಕುದಾರನಾದರೂ.. ಅವನ ಮೇಲಿನ ಅಪನಂಬಿಕೆಯಿಂದ.. ಬೇಡವೆಂದರೂ ಶಾರದಾಳಿಗೆ ಉಸ್ತುವಾರಿ ನೋಡಿಕೊಳ್ಳುವಂತೆ ವಿಲ್ ಮಾಡಿದ್ದರು ವಿಜಯಮ್ಮನವರು.
'ಬೆಸೆಯದ ಬಂಧ' ಎಂಬ ಶೀರ್ಷಿಕೆ ನೋಡಿ ಕಥೆಯನ್ನು ಓದುತ್ತಾ ಇದು ತಾಯಿ ಮಗನ ನಡುವಿನ ಬೆಸೆಯದ ಬಂಧವೆಂದು ಊಹಿಸಿದ್ದೆ. ಹೊಂದಾಣಿಕೆಯಾಗದ ಸಂಬಂಧದ ಕುರಿತಾಗಿಯೇ ಇರಬಹುದು ಎನ್ನುವ ನನ್ನ ಕಲ್ಪನೆಯನ್ನು ಸುಳ್ಳು ಮಾಡಿದ್ದು ಕಾದಂಬರಿಯ ಮುಂದಿನ ಭಾಗ. ಕೆಲಸಕ್ಕೆ ಬರುತ್ತಿದ್ದ ಮಂಜುಳಾ ಕೂಡ ಕ್ರಮೇಣ ಬರುವುದನ್ನು ನಿಲ್ಲಿಸಿದಳು. ಶಾರದಾಳ ಉಸ್ತುವಾರಿ ವಾಗೀಶನಿಗೆ ಹಿಡಿಸಲಿಲ್ಲ. ಓದಿನಲ್ಲೂ ಆಸಕ್ತಿ ತೋರದೆ ಓದನ್ನು ನಿಲ್ಲಿಸಿದ್ದ ವಾಗೀಶನ ಮುಂದಿನ ಭವಿಷ್ಯ ಏನಾಯ್ತು..?? ಆಸ್ತಿ ಇದ್ದರೂ ಅದನ್ನು ಅನುಭವಿಸುವ ಮನಸ್ಥಿತಿಯಲ್ಲಿದ್ದನೇ ಅಥವಾ ದುಂದುವೆಚ್ಚ ಮಾಡಿ ಕರಗಿಸಿದನೇ ಅಥವಾ ಆತ ಬದಲಾದನೇ..??
ಇದಕ್ಕೆ ಉತ್ತರ ನೀವೇ ಓದಿ ತಿಳಿಯಿರಿ.
ಉದ್ಯೋಗಸ್ಥ ಮಹಿಳೆಯಾಗಿ ಹಾಗೂ ಅಮ್ಮನಾಗಿ ಮಹಿಳೆ ಅನುಭವಿಸುವ ಭಾವನೆಯನ್ನು ಕಣ್ಣಿಗೆ ಕಟ್ಟಿಕೊಡುವಂತೆ ಚಿತ್ರಿಸಿದ್ದಾರೆ ಲೇಖಕಿ. ಮಕ್ಕಳಿದ್ದವರಿಗೆ ನೂರೆಂಟು ಸಮಸ್ಯೆ, ಇಲ್ಲದವರಿಗೆ ಒಂದೇ ಚಿಂತೆ ಎನ್ನುವ ಮಾತು ಇದೆಲ್ಲವನ್ನೂ ಓದುವಾಗ ನೆನಪಾಯಿತು. ವಾರ್ತಾ ಇಲಾಖೆಯಲ್ಲಿ ವರದಿಗಾರ್ತಿಯಾಗಿ ಕಾರ್ಯ ನಿರ್ವಹಿಸಿರುವ ಲೇಖಕಿಯ ಅನುಭವ ಇಲ್ಲಿ ಕಚೇರಿಯ ಚಿತ್ರಣವನ್ನು ಕಟ್ಟಿಕೊಡುವಾಗ ಸಮರ್ಥವಾಗಿ ಚಿತ್ರಿತವಾಗಿದೆ. ಆಫೀಸಿನ ವಾತಾವರಣದಲ್ಲಿನ ಹಠ, ಚಾಡಿ, ಕುಹಕ, ಕೋಲ್ಡ್ ವಾರ್, ಸಹೋದ್ಯೋಗಿಗಳ ಅಸೂಯೆ ಇದೆಲ್ಲವನ್ನೂ ಮೀರಿ ಗೆಳತಿಯರಾಗಿ ಉಳಿಯುವ, ಯೋಗಕ್ಷೇಮ ವಿಚಾರಿಸುವ ಆತ್ಮೀಯರು ಕಷ್ಟಕ್ಕಾಗುವ ಪರಿಯನ್ನು ಚಿತ್ರಿಸಿರುವ ರೀತಿ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ