ಶುಕ್ರವಾರ, ಏಪ್ರಿಲ್ 17, 2026

ನಿನ್ನ ಕಣ್ಣೀರು ನನ್ನೆದೆಯ ನೆತ್ತರು (ಪುಸ್ತಕ ಯಾನ - 230)


ಪುಸ್ತಕದ ಶೀರ್ಷಿಕೆ : ನಿನ್ನ ಕಣ್ಣೀರು ನನ್ನೆದೆಯ ನೆತ್ತರು

ಲೇಖಕರು : ಚಿತ್ರಲೇಖ

ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 1994

ಪರಿಷ್ಕೃತ ಮರು ಮುದ್ರಣ : 2024


"ನಿನ್ನ ಕಣ್ಣೀರು ನನ್ನೆದೆಯ ನೆತ್ತರು" ಎನ್ನುವ ಶೀರ್ಷಿಕೆಯೇ ವಿಭಿನ್ನವಾಗಿ ಸೆಳೆಯುತ್ತದೆ. ಈ ಶೀರ್ಷಿಕೆಯ ಕುರಿತು ಚಿತ್ರಲೇಖ ಮೇಡಂ ಹೇಳಿರುವ ಮಾತುಗಳು ಸೆಳೆದವು. ಅವರಿಗೆ ಸುಬ್ರಮಣ್ಯ ಭಾರತಿಯವರ ಹಾಡುಗಳೆಂದರೆ ಬಹಳ ಆಪ್ತ. ಅವರ ಒಂದು ಹಾಡಿನ ಸಾಲಿನಲ್ಲಿ 'ನಿನ್ನ ಕಣ್ಣಲ್ಲಿ ನೀರು ಹರಿದರೆ ನನ್ನ ಹೃದಯದಲ್ಲಿ ರುಧಿರ ಹರಿಯುವುದು' ಎನ್ನುವ ಅರ್ಥವಿತ್ತು. ಅದರ ಭಾವಾರ್ಥದಂತಹಾ ಶೀರ್ಷಿಕೆಯನ್ನು ಬರೆದುಕೊಂಡಿದ್ದು.. ಆ ಶೀರ್ಷಿಕೆಗೆ ತಕ್ಕ ಕಥೆಯೊಂದನ್ನು ರಚಿಸಲು ಕಾಯುತ್ತಿದ್ದರು. ಅವರ ಬೀದಿಯ ಒಂದು ವಠಾರದಲ್ಲಿ ನಡೆದ ಕಹಿಘಟನೆಯ ಪ್ರೇರಣೆ ಈ ಕಾದಂಬರಿಯ ಪೂರ್ವಾರ್ಧ. ಆದರೆ, ಅಂತ್ಯಭಾಗ ಲೇಖಕಿಯ ಕಲ್ಪನೆಯಂತೆ ರಚಿಸಿದ್ದು.


ಸಾಧಾರಣ ಗುಮಾಸ್ತನಾಗಿದ್ದ ಗಜೇಂದ್ರನಾಥ ಅವರು ಹಿರಿಯ ಮಗನಾಗಿ ತಮ್ಮ ಜವಾಬ್ದಾರಿಯನ್ನೆಲ್ಲಾ ಕಳೆಯುವ ಹೊತ್ತಿಗೆ ಸುಮಾರು ವಯಸ್ಸು ಕಳೆದಿತ್ತು. ಭವಾನಿ ಅವರ ಕೈ ಹಿಡಿದಾಗ ಅವರಿಗೆ 35 ವರ್ಷ. ಬಡವರ ಮನೆಯ ಹುಡುಗಿಯನ್ನು ಮದುವೆಯಾಗಿದ್ದರು. ಆಕೆಗೂ ಆಸ್ತಿಪಾಸ್ತಿ ಇರಲಿಲ್ಲ. ಅಂತೆಯೇ ದುರಾಸೆಯೂ ಇರಲಿಲ್ಲ. ಸಾಮರಸ್ಯದಿಂದ ಇದ್ದುದರಲ್ಲಿಯೇ ಸಂಸಾರ ಚೆಂದವಾಗಿ ಕಳೆಯುತ್ತಿತ್ತು. ಆದರೆ, ತಮ್ಮ ಮಕ್ಕಳು ತಮ್ಮಂತೆ ಬಡತನದಲ್ಲಿ, ಜವಾಬ್ದಾರಿಯಲ್ಲಿ ನಲುಗಬಾರದು ಎನ್ನುವ ಮುಂದಾಲೋಚನೆಯಿಂದ ಅವರು ತಮಗೆ ಒಂದೇ ಮಗು ಸಾಕು ಎನ್ನುವ ನಿರ್ಧಾರ ಮಾಡಿದರು. ಅವರ ಉದಾತ್ತ ಆಲೋಚನೆಯ ಫಲವೇ ಮುದ್ದಾದ ಮಗಳು ಬಿಂದು.


ಹೆಣ್ಣು ಮಗುವಾದ್ದರಿಂದ ಅವಳ ವಿವಾಹ, ಅವಳ ಭವಿಷ್ಯವೇ ಅವರ ತಲೆಯಲ್ಲಿ ಕೊರೆಯುತ್ತಿದುದರಿಂದ.. ಎಷ್ಟು ಕಷ್ಟವಾದರೂ ಸರಿ ಆಕೆಗೊಂದು ಮದುವೆ ಮಾಡಿಬಿಡಬೇಕು ಎನ್ನುವ ಆಲೋಚನೆಯಲ್ಲಿದ್ದರು. ಆಕೆಗೆ ಓದಲು ಬಹಳ ಆಸೆ ಇದ್ದರೂ.. ಮದುವೆಯಾದ ನಂತರ ನಿನ್ನ ಗಂಡನ ಹಾಗೂ ಆತನ ಮನೆಯವರ ತೀರ್ಮಾನದಂತೆ ನೀನು ಏನನ್ನಾದರೂ ಮಾಡಬಹುದು ಎಂದು ಹೇಳಿದ್ದರು ಮನೆಯಲ್ಲಿ. ಆಕೆಯೂ ಹೆಚ್ಚು ವಾದಿಸದೆ ತಂದೆ-ತಾಯಿಯರ ಮಾತಿಗೆ ಒಪ್ಪಿಗೆ ನೀಡಿದ್ದಳು.


ಈ ಮಧ್ಯೆ ಆಕೆಯ ಮದುವೆಗೆಂದು ಇಟ್ಟಿದ್ದ ಹಣದಲ್ಲಿ ಸುಮಾರು ಭಾಗ ಭವಾನಿಯವರ ಹೊಟ್ಟೆಯಲ್ಲಿ ಗೆಡ್ಡೆಯಿದ್ದುದರಿಂದ ಅದನ್ನು ಆಪರೇಷನ್ ಮಾಡಿ ತೆಗೆಯುವ ಸಲುವಾಗಿ ಖರ್ಚಾಗಿತ್ತು.


ಭವಾನಿ ಚೇತರಿಸಿಕೊಂಡು ಮೊದಲಿನಂತೆ ಓಡಾಡಿ ಕೆಲಸ ಮಾಡತೊಡಗಿದಾಗ ಬಿಂದುವಿಗೊಂದು ವರ ಬಂದಿತ್ತು. ಸೀತಮ್ಮ ಹಾಗೂ ರಾಮಚಂದ್ರಯ್ಯನವರ ಮಗನೇ ದೀಪಕ್. ಇಬ್ಬರು ಹೆಣ್ಣುಮಕ್ಕಳಿಗೆ ಈಗಾಗಲೇ ಮದುವೆ ಮಾಡಿದ್ದರು. ದೀಪಕ್ ನ ವಿವಾಹ ಮಾಡುವುದು ಬಾಕಿಯಿತ್ತು. ಸ್ಥಿತಿವಂತರಾಗಿದ್ದರೂ.. ಬರುವ ಸೊಸೆಯ ಮನೆಯಿಂದ ತಮ್ಮ ಹೆಣ್ಣುಮಕ್ಕಳಿಗೆ ಖರ್ಚು ಮಾಡಿದ ಹಣವನ್ನು ವಸೂಲಿ ಮಾಡಲು ತುದಿಗಾಲಿನಲ್ಲಿ ಕಾದಿದ್ದರು. ಸೀತಮ್ಮ ಗಯ್ಯಾಳಿಯಾದರೆ, ರಾಮಚಂದ್ರಯ್ಯ ಪರಮಲೋಭಿ. ಹೆಣ್ಣುಮಕ್ಕಳು ಸಹಾ ತಂದೆ-ತಾಯಿಯ ಸ್ವಭಾವದವರಂತೆಯೇ.. ದೀಪಕ್ ಬಿ.ಕಾಂ ಓದಿ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಅಕೌಂಟೆಂಟ್ ಆಗಿದದ್ದರೂ.. ಆತ ತಂದೆ-ತಾಯಿಯ ಬಿಗಿಮುಷ್ಟಿಯೊಳಗಿದ್ದ. ಅದೆಲ್ಲವನ್ನೂ ಎದುರಿಸಿ ನಿಲ್ಲುವಷ್ಟು ಬುದ್ಧಿವಂತನೂ ಅಲ್ಲ, ಧೈರ್ಯವಂತನೂ ಅಲ್ಲ. ಹೆತ್ತವರು ಆಡಿಸಿದಂತೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ. ಇದಾವುದರ ಅರಿವಿಲ್ಲದೆ ಬಿಂದುವಿನ ವಿವಾಹ ಆತನೊಡನೆ ನಿಶ್ಚಯವಾಯಿತು. 


ಒಂದಕ್ಕೆರಡು ಖರ್ಚು ಬೆಳೆದು, ಗಜೇಂದ್ರನಾಥರು ಸ್ವಯಂ ನಿವೃತ್ತಿ ಪಡೆಯುವಂತಾಯ್ತು. ಇರುವ ಮನೆಯನ್ನು ಖಾಲಿ ಮಾಡಿ ಯಾವುದೋ ವಠಾರದ ಪುಟ್ಟ ಮನೆಯೊಂದರಲ್ಲಿ ವಾಸ ಮಾಡಲು ಶುರು ಮಾಡಿದರು. ಅತ್ತ ಗಂಡನ ಮನೆ ಸೇರಿದ ಬಿಂದುವಾದರೂ ನೆಮ್ಮದಿಯಾಗಿದ್ದಳೇ..? ಖಂಡಿತವಾಗಿಯೂ ಇಲ್ಲ..!


ಹೆಣ್ಣುಮಕ್ಕಳ ಮದುವೆಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿ ಅವರು ಸುಖವಾಗಿರಲೆಂದು ಆಶಿಸುವ ತಂದೆ-ತಾಯಿಯರ ಪ್ರತಿ ರೂಪದಂತೆ ಕಾಣುತ್ತಾರೆ ಗಜೇಂದ್ರನಾಥ ಹಾಗೂ ಭವಾನಿಯವರು.


ಗಿಣಿಯನ್ನು ಸಾಕಿ ಗಿಡುಗನ ಕೈಲಿ ಕೊಟ್ಟಾಯ್ತು ಎಂದುಕೊಂಡರು. ಬಿಂದು ಅದೆಲ್ಲವನ್ನು ಧಿಕ್ಕರಿಸಿ ತವರಿನಲ್ಲಿಯೇ ಬಂದು ಉಳಿಯಲು ಧೈರ್ಯ ಮಾಡಲಿಲ್ಲ. ಅಷ್ಟು ಧೈರ್ಯ ಇವರಿಗೂ ಇರಲಿಲ್ಲ. ಕಾರಣ ಬಡತನ. ಆಕೆಗೆ ಓದಿಸಿದ್ದರಾದರೂ ಆಕೆಯ ಮುಂದಿನ ಭವಿಷ್ಯ ಸುಖಮಯವಾಗಿರುತ್ತಿತ್ತೇನೋ.. ಆದರೆ, ಇಲ್ಲಿ ಹಾಗಾಗಲಿಲ್ಲ. ಮಗಳ ಕಣ್ಣಲ್ಲಿ ಬಂದ ನೀರು ತಂದೆಯ ಹೃದಯದಲ್ಲಿ ರಕ್ತವನ್ನೇ ಹರಿಸುವ ಎಷ್ಟೋ ಸಂದರ್ಭಗಳನ್ನು ಓದುವಾಗ ವಿಚಲಿತಗೊಳಿಸಿಬಿಡುತ್ತವೆ. ಭಾವುಕರನ್ನಾಗಿಸುತ್ತವೆ.


ದೀಪಕ್ ನಿಂದ ಬೇರೇನೂ ಸಿಗದಿದ್ದರೂ.. ದೈಹಿಕ ಪ್ರೀತಿ ಸಿಕ್ಕು ಬಿಂದು ಗರ್ಭಿಣಿಯಾದಳು. ಆ ಸಮಯದಲ್ಲಿಯೂ ಸರಿಯಾದ ವಿಶ್ರಾಂತಿ, ಆರೈಕೆ ಸಿಗದೇ ಗರ್ಭಪಾತವಾಗಿತ್ತು. ಅದಾದ ನಂತರವೂ ಆಕೆಯ ಸ್ಥಿತಿ ಗಂಭೀರವಾಗುತ್ತಾ, ಮತ್ತೆ ಚೇತರಿಸಕೊಳ್ಳಲಿಲ್ಲ. ಬದಲಾಗಿ, ಅವಳು ಶಕ್ತಿಹೀನಳಾಗುತ್ತಾ ಅತ್ತೆ-ಮಾವನ ಕಪಿಮುಷ್ಠಿಯಲ್ಲಿ ನಲುಗುತ್ತಲೇ ಹೋದಳು. ಗಾಣದತ್ತಿನಂತೆ ದುಡಿಯುತ್ತಾ, ಜೀವವನ್ನು ಸವೆಸುತ್ತಾ ಇದ್ದವಳು ಮಗುವೊಂದಕ್ಕೆ ಜನ್ಮ ಕೊಟ್ಟು ತನ್ನ ಜೀವವನ್ನೇ ತ್ಯಜಿಸಿದಳು.


ಮಗಳೆಡೆಗಿನ ತಮ್ಮ ಪ್ರೀತಿ ಅವಳಿಗೆ ಮುಳುವಾಗಬಹುದೆಂದು ತಾವು ದೂರವೇ ಇದ್ದ ಗಜೇಂದ್ರನಾಥ್ ಅವರು ಅದೆಲ್ಲವನ್ನೂ ಕಂಡು ಕುಸಿದು ಹೋಗಿದ್ದರು. ಬಡವರಾದ ಅವರ ಬಳಿ ಏನೂ ಇರಲಿಲ್ಲ. ಮಗಳ ಹೆಣವನ್ನು ಆಸ್ಪತ್ರೆಯಿಂದ ಗಂಡನ ಮನೆಗೆ ಬಿಟ್ಟು, ಕಟುಹೃದಯದ ತಂದೆಯಾಗಿ ಗಜೇಂದ್ರನಾಥರವರು ಹೊರಡುವಾಗ ಅವರ ನೋವು ನಮ್ಮನ್ನೂ ಕಾಡುತ್ತದೆ. ಅದೇ ಕೊರಗಿನಲ್ಲಿ ಭವಾನಿಯವರು ಸಾವನ್ನಪ್ಪುತ್ತಾರೆ. ಮುಂದೆ..?


ಸ್ವಾಭಿಮಾನಿಯಾದ ಗಜೇಂದ್ರನಾಥ್ ರವರು ತಮ್ಮ ಮನೆಯಲ್ಲಿದ್ದ ಸಾಮಾನುಗಳನ್ನು ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದೆಂದೂ.. ಅದಕ್ಕೆ ತಕ್ಕ ಹಣವನ್ನು ಕೊಟ್ಟರೆ ಸಾಕೆಂದು ಹೇಳುತ್ತಾ.. ಪತ್ನಿಯ ಸಾವಿನಲ್ಲಿಯೂ ತಮ್ಮ ಸ್ವಾಭಿಮಾನ ಬಿಡದೆ ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸಿ ದಿಕ್ಕೆಟ್ಟವರಂತೆ ಹೊರಟದ್ದು ಎಲ್ಲಿಗೆ..?


ಬಿಂದುವಿನ ಮಗು ಮುಂದೆ ಬೆಳೆದದ್ದು ಹೇಗೆ..? ದೀಪಕ್ ನ ತಂದೆ-ತಾಯಿ ಇದಕ್ಕೆ ಪ್ರತಿಕ್ರಿಯಿಸಿದ್ದು ಹೇಗೆ..? ದೀಪಕ್ ಈ ಎಲ್ಲಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ..?


ತನ್ನ ಮಗಳ ನೋವಿನಿಂದ ಹೃದಯದಲ್ಲಿ ನೆತ್ತರನ್ನೇ ಕಕ್ಕಿದ ತಂದೆಯ ನೋವನ್ನು ಮುಂದೆಂದಾದರೂ ದೀಪಕ್ ಅನುಭವಿಸುತ್ತಾನಾ..?


ಒಬ್ಬ ತಂದೆಯ ನೋವು ಮತ್ತೊಬ್ಬ ತಂದೆಗೆ ಮಾತ್ರ ಅರಿವಾಗಲು ಸಾಧ್ಯವೆನ್ನುವ ಮಾತು ಇಲ್ಲಿ ನಿಜವಾಗುತ್ತದಾ..?


ಇಲ್ಲಿ ಭವಾನಿಯವರ ಮರಣದವರೆಗೂ ಕಾದಂಬರಿಯ ಪೂರ್ವಾರ್ಧವಷ್ಟೇ.. ಕಾದಂಬರಿಯ ಉತ್ತರಾರ್ಧವನ್ನು ಓದಿದರೆ ಇದೆಲ್ಲದಕ್ಕೂ ಉತ್ತರ ದೊರಕುತ್ತದೆ. ಈ ಕಾದಂಬರಿ ಮನಕಲಕಿದರೂ.. ಅಂತ್ಯ ಸ್ವಲ್ಪ ಮಟ್ಟಿಗೆ ನೆಮ್ಮದಿ ತರುತ್ತದೆ. ಈ ಕಾದಂಬರಿಯಲ್ಲಿ ನನಗೆ ಹೆಚ್ಚು ಕಾಡಿದ್ದು ಗಜೇಂದ್ರನಾಥ ಅವರು. ತನ್ನ ಮಗುವಿನ ಉಳಿವಿಗಾಗಿ ತಂದೆ ಏನೆಲ್ಲವನ್ನು ಮಾಡಬಲ್ಲನು ಎಂದು ತೋರಿಸಿಕೊಟ್ಟರೂ.. ಕೆಲವೊಮ್ಮೆ ಅವರ ವ್ಯತಿರಿಕ್ತವಾದ ಪ್ರತಿಕ್ರಿಯೆ ಅವರ ನೋವಿನ ಮತ್ತೊಂದು ಮುಖವಾಗಿ ಕಾಣುತ್ತದೆ. ಕಾದಂಬರಿ ಓದಿ ಮುಗಿದ ನಂತರವೂ ಎಷ್ಟೋ ಹೊತ್ತು ಈ ತಂದೆ ಕಾಡಿದರು. ಉತ್ತರಾರ್ಧ ಆಶಾದಾಯಕವಾಗಿದ್ದರೂ.. ಪೂರ್ವಾರ್ಧದ ಅವರ ಆಘಾತ, ಮನಸ್ಸಿನ ನೋವೇ ಹೆಚ್ಚು ಮನಸ್ಸಿನಲ್ಲುಳಿಯಿತು. ಇದು ಲೇಖಕಿಯ ಗೆಲುವು ಎಂದರೆ ತಪ್ಪಾಗಲಾರದು. ಸೊಗಸಾದ ಕಾದಂಬರಿಯ ಚೆಂದದ ಓದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ