ಶುಕ್ರವಾರ, ಏಪ್ರಿಲ್ 17, 2026

ಭ್ರಮಣ (ಪುಸ್ತಕ ಯಾನ - 214)


ಪುಸ್ತಕದ ಶೀರ್ಷಿಕೆ : ಭ್ರಮಣ

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ಗೀತಾ ಬುಕ್ ಹೌಸ್

ಪ್ರಥಮ ಮುದ್ರಣ : 1986

ಪುಟಗಳು : 103


ಸಮಾಜದಲ್ಲಿ ವಿವಾಹವಾಗಿ ಬಾಳುತ್ತಿರುವ ಗಂಡು-ಹೆಣ್ಣುಗಳಿಬ್ಬರೂ ಹೊಂದಿಬಾಳುವುದು ಬಹಳಷ್ಟು ಮುಖ್ಯವಾಗುತ್ತದೆ. ಆದರೆ, ಕೆಲವರು ಸ್ವೇಚ್ಛೆಯಾಗಿ ಬದುಕಲು.. ಸ್ವಾತಂತ್ರ್ಯ, ಸ್ವಾಭಿಮಾನವೆಂಬ ಹೆಸರಲ್ಲಿ ಬಾಳಲು ಅವಸರಿಸುತ್ತಾರೆ. ಕೆಲವೊಮ್ಮೆ ಸಂಗಾತಿಗಳಲ್ಲಿ ತಪ್ಪಾಗುವುದು ಸಹಜ, ಅದನ್ನೇ ದೊಡ್ಡದು ಮಾಡಿಕೊಂಡು ವಿಚ್ಛೇದನ ಪಡೆಯುತ್ತಿರುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ, ಅಂತಹವರನ್ನು ತಿದ್ದಿ ನೇರಗೊಳಿಸಿ ತಮ್ಮ ವೈವಾಹಿಕ ಜೀವನವನ್ನು ಕಟ್ಟಿಕೊಳ್ಳುವ ಬಹಳಷ್ಟು ಹೆಣ್ಣುಗಳೂ ಇದ್ದಾರೆ. ಕೆಲವರದ್ದು ಅವಸರದ ನಡೆ ಎಂದು ಕಂಡರೆ, ಮತ್ತೆ ಕೆಲವರ ನಡೆ ತೀರ ತಾಳ್ಮೆ ಬೇಡುವಂತಹದ್ದು. ಅಂತಹಾ ತಾಳ್ಮೆಯ ಬದುಕಲ್ಲಿ ಹೊಂದಿ ನಡೆದರೆ ಮಾತ್ರ ಸಂಸಾರದ ಚಕ್ರ ಸಮಗತಿಯಲ್ಲಿ ಸಾಗುತ್ತಾ ಹೋಗುತ್ತದೆ. 


ಇಲ್ಲಿ ಕೇವಲ ವೈವಾಹಿಕ ಜೀವನದ ವಿರಸ ಹಾಗೂ ವೈರುಧ್ಯಗಳ ಚಿತ್ರಣ ಮಾತ್ರವಿಲ್ಲ.. ಅದರೊಡನೆ ಬದಲಾಗುವ ಅವರ ಆಲೋಚನಾ ಕ್ರಮ ಅವರ ಬದುಕಿನಲ್ಲಿ ನಡೆದ ಸಂಗತಿಗಳಿಗೂ ಹಾಗೂ ಅವರ ವಯೋಮಾನಕ್ಕೂ ಇರುವ ಕೊಂಡಿಯೂ ಕಾಣುತ್ತದೆ.


ರಜನಿ ತನ್ನ ತಂದೆ ತಾಯಿಯರ ವಿರಸ ದಾಂಪತ್ಯವನ್ನು ಕಂಡು ರೋಸಿ ಹೋಗಿದ್ದಳು. ತಂದೆ ದರ್ಪದಲ್ಲಿಯೇ ಬಾಳಿದವರು ಅವರು ಹಾಕಿದ ಗೆರೆ ದಾಟದ ತಾಯಿ ಅವಳ ದೃಷ್ಠಿಯಲ್ಲಿ ಒಂದು ರೀತಿಯಲ್ಲಿ ಪಂಜರದ ಪಕ್ಷಿ. ತಾಯಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾಳೇನೋ ಎಂದೆನಿಸುತ್ತಿತ್ತು ರಜನಿಗೆ. ಕೇವಲ ಗಂಡಿನ ಭೋಗದ ವಸ್ತುವಾಗಿ ಬಾಳುವುದಕ್ಕಿಂತ, ವಿವಾಹವಾಗದೆ ಸುಖವಾಗಿಯೇ ಇರುವುದು ಹಿತವಲ್ಲವೇ..! ಎಂಬ ದೃಷ್ಟಿಕೋನದಲ್ಲಿ ಯೋಚಿಸುತ್ತಿದ್ದ ಅವಳು ಅಮ್ಮನ ಕಣ್ಣೀರಿಗೆ ಮಣಿದು ಪ್ರಹ್ಲಾದನನ್ನು ಮದುವೆಯಾಗಲು ಒಪ್ಪಿದಳು.


ತನ್ನ ತಂದೆಗಿಂತ ಪ್ರಹ್ಲಾದ ವಿಭಿನ್ನವಾಗಿ ಕಂಡಿದ್ದರೆ ರಜನಿಗೆ ಏನೂ ಅನ್ನಿಸುತ್ತಿರಲಿಲ್ಲವೇನೋ.. ಆದರೆ, ತಂದೆಯಂತೆಯೇ ಪ್ರಹ್ಲಾದನೂ ದರ್ಪದಿಂದ ನಡೆದುಕೊಳ್ಳುತ್ತಿದ್ದ. ಜೊತೆಗೆ ಕುಡಿದು ಬಂದು ರಂಪಾಟ ಮಾಡುತ್ತಿದ್ದ. ಅವಳಿಗೆ ನಾಲ್ಕು ವರ್ಷದ ದಾಂಪತ್ಯ ಜೀವನದಷ್ಟರಲ್ಲಿಯೇ ರೋಸಿ ಹೋಗಿತ್ತು. ಅಷ್ಟರಲ್ಲಾಗಲೇ ನೀತಾ ಹಾಗೂ ಸುವರ್ಣ ಹುಟ್ಟಿದ್ದರು. ಕುಡಿದ ಮತ್ತಿನಲ್ಲಿ ಒಂದು ದಿನ ಬೇಡವೆಂದರೂ ಕೇಳದೆ ತನ್ನ ತೃಷೆಯನ್ನು ತೀರಿಸಿಕೊಂಡಾಗ ಅವಳ ಮನಸ್ಸು ವ್ಯಗ್ರಗೊಂಡು ವಿಚ್ಛೇದನ ಪಡೆದಳು. ತಂದೆ ಅಂದಿನಿಂದ ಅವಳನ್ನು ಮಾತನಾಡಿಸುವುದಲ್ಲ.. ನೋಡುವುದಕ್ಕೂ ಬರಲಿಲ್ಲ. ಅವರ ಪಾಲಿಗೆ ಅವಳು ಇದ್ದೂ ಇಲ್ಲದಂತಾಗಿದ್ದಳು. ಆದರೆ, ತಾಯಿಯ ಕಣ್ಣೀರು ಅವಳನ್ನು ಕಟ್ಟಿ ಹಾಕುತ್ತಿತ್ತು.


ಆತನ ಅಂದಿನ ನಡವಳಿಕೆಯ ಫಲವಾಗಿ ಆಕೆ ಮತ್ತೆ ತಾಯಿಯಾಗಿದ್ದಳು. ತನಗಿರುವ ಇಬ್ಬರು ಹೆಣ್ಣು ಮಕ್ಕಳನ್ನೇ ಗಂಡು ಮಕ್ಕಳ ರೀತಿ ಬೆಳೆಸುತ್ತೇನೆ ಎಂದು ತೀರ್ಮಾನಿಸಿದರೂ ಅಮ್ಮನ ಕಣ್ಣೀರಿಗೆ ಕರಗಿ ಆ ಮಗುವನ್ನು ಉಳಿಸಿಕೊಂಡಳು. 


ಶಾಲೆಯಲ್ಲಿ ನೀತಾ ಹುಡುಗನೊಂದಿಗೆ ಕುಸ್ತಿ ಮಾಡಿ ಜಗಳವಾಡಿ ಬಂದದ್ದನ್ನು ಮನೆಯಲ್ಲಿ ಹೇಳಿ, ಆ ಹುಡುಗನ ಪೋಷಕರು ಬರಬಹುದು ಎಂದು ರಜನಿಯನ್ನು ಶಾಲೆಗೆ ಕರೆದುಕೊಂಡು ಬಂದಾಗ ಅಲ್ಲಿ ಸಿಕ್ಕಿದ್ದು ಶಿಕ್ಷಕಿಯಾಗಿದ್ದ ಅವಳ ಬಾಲ್ಯದ ಗೆಳತಿ ಮಂದಾಕಿನಿ. ಇಬ್ಬರೂ ಬಾಲ್ಯದ ಗೆಳತಿಯರಾದರೂ.. ಬದುಕು ಇಬ್ಬರ ಯೋಚನಾಲಹರಿಯನ್ನು ಬದಲಿಸಿತ್ತು. ಮಂದಾಕಿನಿ ಎಷ್ಟೇ ವಾದ ಮಾಡಿದರೂ.. ರಜನಿಯನ್ನು ಬದಲಿಸುವಂತಿರಲಿಲ್ಲ.. ಅಲ್ಲದೇ ಆಕೆ ಪ್ರಹ್ಲಾದನನ್ನು ವಿಚ್ಛೇದನ ಮಾಡಿಯಾಗಿತ್ತು.


ಮುಂದೆ ಆಕೆಯ ತಾಯಿ ಸೀತಾಬಾಯಿ ತೀರಿಕೊಂಡಾಗಲೂ ತಂದೆ ಹೇಳಿ ಕಳಿಸಲಿಲ್ಲ. ಅಷ್ಟರಲ್ಲಾಗಲೇ ಇಲ್ಲಿನ ಆಸ್ತಿಯನ್ನೆಲ್ಲಾ ಮಾರಾಟ ಮಾಡಿ ಬೇರೆ ಊರಿಗೆ ಬಂದಾಗಿತ್ತು. ಅದಕ್ಕೆ ಅಮ್ಮನ ತಮ್ಮನ ಮಗಳಾದ ಪ್ರತಿಭಾಳ ಸಹಾಯ ಪಡೆದಳು. ಜೀವನೋಪಾಯಕ್ಕಾಗಿ ಅಲ್ಲಿ-ಇಲ್ಲಿ ಕೆಲಸ ಮಾಡುವುದರ ಬದಲಾಗಿ ಹೆಣ್ಣುಮಕ್ಕಳಿಗೆ ಕೆಲಸ ಕೊಡೋಣ ಎಂಬ ಭಾವನೆಯಲ್ಲಿ 'ವನಿತಾ ವಿಹಾರ' ಎಂಬ ಹೆಸರಿನಲ್ಲಿ ಹೋಟೆಲ್ ಅನ್ನು ಶುರು ಮಾಡಿದಳು. ಸೋಪ್ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದ ಪ್ರತಿಭಾ ಕೂಡಾ ತನ್ನ ಕೆಲಸವನ್ನು ಬಿಟ್ಟು ರಜನಿಗೆ ಜೊತೆಯಾಗಿ ನಿಂತಳು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು.


ಪ್ರತಿಭಾಳದ್ದು ತುಂಬು ಕುಟುಂಬ. ಅತ್ತೆ, ಮಾವ, ಮೈದುನ, ನಾದಿನಿಯರು ಹೀಗೆ.. ನಂತರ ಪ್ರತಿಭಾಳಿಗೂ ಮನೆ ಕಟ್ಟಿಸಿಕೊಟ್ಟು ಅವಳ ಗಂಡನ ಸಹಾಯವನ್ನು ಪಡೆದು ಶುರು ಮಾಡಿದ ಹೋಟೆಲ್ ಬಹಳ ಚೆನ್ನಾಗಿಯೇ ನಡೆಯಿತು. ಆದರೆ, ಹೆಣ್ಣು ಮಕ್ಕಳಲ್ಲಿಯೇ ಜಗಳ ಶುರುವಾದಾಗ ಯಾರಾದರೂ ಗಂಡಸರ ಮೇಲ್ವಿಚಾರಣೆ ಇದ್ದರೆ ಸರಿ ಎಂದು ಪ್ರತಿಭಾ ತನ್ನ ಮೈದುನ ರವಿಶಂಕರನನ್ನೇ ಅಲ್ಲಿಗೆ ಕರೆಸಿದಳು. ಆತನು ಚೆನ್ನಾಗಿಯೇ ಕೆಲಸ ಮಾಡುತ್ತಿದ್ದ. ರಜನಿ ಸ್ವಲ್ಪ ಸಲುಗೆಯಿಂದಲೇ ವರ್ತಿಸುತ್ತಿದ್ದಳು ಆತನ ಬಳಿ.


ಅಷ್ಟರಲ್ಲಾಗಲಿ ನೀತಾ ಹತ್ತನೇ ತರಗತಿ ಮುಗಿಸಿದ್ದಳು. ಆಕೆಗೆ ಓದಿನಲ್ಲಿ ಆಸಕ್ತಿ ಇರದಿದ್ದರಿಂದ ರಜನಿಗೂ ಮುಂದೆ ತನ್ನ ಹೋಟೆಲ್ ನೋಡಿಕೊಳ್ಳುವವರು ಬೇಕಿದ್ದುದರಿಂದ ಅವಳನ್ನು ಇಲ್ಲಿಗೆ ಕರೆಸಿಕೊಂಡಳು. ನಂತರ ನೀತಾ ಹಾಗೂ ರವಿಶಂಕರರ ಓಡಾಟ ಜೋರಾಗಿತ್ತು. ಮದುವೆಯಾಗಿ ಸಂಸಾರವಂದಿಗನಾಗಿದ್ದ ರವಿಶಂಕರ ನೀತಾಳ ಜೊತೆ ಸಲುಗೆಯಿಂದಿರುವುದು ಪ್ರತಿಭಾಳಿಗೆ ಸರಿ ಬೀಳಲಿಲ್ಲ. ಅದನ್ನು ರಜನಿಗೆ ಹೇಳಿದಾಗ.. ಮಗಳನ್ನು ಮಗನಂತೆ ಬೆಳೆಸಿದ್ದೇನೆ ತಪ್ಪು ಮಾಡಲಾರಳು ಎಂದು ಆಕೆಯ ಕುರಿತು ಹೆಚ್ಚಿನ ನಂಬಿಕೆ ಹೊಂದಿದ್ದಳು.


ಪಿ.ಯು.ಸಿಯಲ್ಲಿ ಒಳ್ಳೆಯ ಅಂಕ ಗಳಿಸಿದ ಸುವರ್ಣ ಎಂ.ಬಿ.ಬಿ.ಎಸ್‌ಗೆ ಸೇರಿಕೊಂಡಳು. ಸಹಪಾಠಿಯಾದ ಹೇಮಾದ್ರಿಯ ಜೊತೆ ಸಲಿಗೆಯಿಂದಲೇ ಇದ್ದಳು. ಹೇಮಾದ್ರಿಯೂ ಒಳ್ಳೆಯ ಹುಡುಗ. ಆಕೆಗೆ ಒಳ್ಳೆಯ ಜೊತೆಯಾದ. ಆತನಿಗೆ ಸದಾ ತನ್ನ ತಾಯಿಯ ಕುರಿತೇ ಚಿಂತೆ. ಅಮ್ಮನ ಆರೋಗ್ಯ ಅಷ್ಟು ಸರಿಯಾಗಿಲ್ಲ.. ಅದಕ್ಕೆ ಕಾರಣ ತನ್ನ ತಂದೆಯ ಚಟಗಳು. ಅದು ತಾಯಿಗೂ ಅಂಟಿಕೊಂಡಿದ್ದು, ಆತನ ತಮ್ಮನಿಗೂ ಆ ಕಾಯಿಲೆ ಬಂದಾಗಿತ್ತು. ಆತನೊಬ್ಬನೇ ಸದ್ಯಕ್ಕೆ ಆರೋಗ್ಯವಂತ. ಅಮ್ಮನನ್ನು ಅದರಿಂದ ಪಾರು ಮಾಡಬೇಕೆಂದು ಆಸೆ ಇತ್ತಾದರೂ.. ಅದು ಅಷ್ಟು ಸುಲಭವಾಗಿರಲಿಲ್ಲ. ಹಾಗೆಂದು, ಅದನ್ನು ಅಂಟಿಸಿದ ತಂದೆಯನ್ನೇನೂ ದ್ವೇಷಿಸುತ್ತಿರಲಿಲ್ಲ. ಆದರೆ, ಒಂದು ಕಾಲದಲ್ಲಿ ಕುಡಿತ, ಹೆಣ್ಣುಗಳ ಚಟವನ್ನು ಅಂಟಿಸಿಕೊಂಡಿದ್ದ ತಂದೆಯನ್ನು ಬದಲಿಸಿದ ತಾಯಿಯ ಕುರಿತು ಆತನಿಗೆ ಹೆಚ್ಚಿನ ಮಮತೆ ಹಾಗೂ ಗೌರವ.


ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಂತೆ ಬೆಳೆಸುತ್ತೇನೆ ಎನ್ನುತ್ತಿದ್ದ ರಜನಿ ಮಗನಿಗೆ ಹೆಚ್ಚಿನ ಕಾಳಜಿ ನೀಡದಿದ್ದುದರಿಂದ ಆತ ಅಂತರ್ಮುಖಿಯಾಗಿ ಎಲ್ಲರಿಗೂ ಹೆದರಿಕೊಂಡೇ ಬಾಳುವಂತವನಾಗಿದ್ದ. ವಿನಯನ ಈ ನಡತೆಯಿಂದ ಅವನು ಶಾಲೆಯಲ್ಲಿಯೂ ಹಿಂದುಳಿದಿದ್ದ. ಹೋಟೆಲ್ ನಲ್ಲಿಯೂ ಆತನಿಗೆ ಅಷ್ಟು ಮರ್ಯಾದೆ ಸಿಗುತ್ತಿರಲಿಲ್ಲ.


ಹೆಣ್ಣುಮಕ್ಕಳನ್ನು ಗಂಡು ಮಕ್ಕಳಂತೆ ಬೆಳೆಸಬಹುದು ಹೌದಾದರೂ.. ಇಬ್ಬರಲ್ಲಿಯೂ ಕುಡಿತದ ಚಟವನ್ನು ಒಪ್ಪಿಕೊಳ್ಳುವುದು ತಪ್ಪು. ನೀತಾಳ ಅಂತಹಾ ನಡೆಯನ್ನು ಪೋಷಿಸಿದ ರಜನಿಗೆ ನೀತಾಳ ಕಡೆಯಿಂದ ಸರಿಯಾದ ಪೆಟ್ಟು ಸಿಕ್ಕಿತ್ತು. ತನ್ನೆಲ್ಲಾ ವರ್ತನೆಗೂ ತಾಯಿಯನ್ನೇ ಹೊಣೆ ಮಾಡಿ ಹೊರ ನಡೆದಳು ಅವಳು. ನೀತಾಳ ಬದುಕಿನಲ್ಲಿ ಆದ ಬದಲಾವಣೆಗಳೇನು..??


ಹೇಮಾದ್ರಿಯ ತಾಯಿ ಮತ್ತಾರೂ ಆಗಿರದೆ ರಜನಿಯ ಗೆಳತಿ ಮಂದಾಕಿನಿಯೇ.. ಈ ಸತ್ಯ ರಜನಿಗೆ ತಿಳಿಯಿತೇ..?? ಸುವರ್ಣ ಹಾಗೂ ಹೇಮಾದ್ರಿಯರ ಸ್ನೇಹ ಪ್ರೇಮಕ್ಕೆ ತಿರುಗಿದ್ದು ಹೌದಾದರೂ.. ಅದು ಸಫಲವೇ ಅಥವಾ ವಿಫಲವೇ..??


ವಿನಯನ ಆ ರೀತಿಯ ನಡವಳಿಕೆಯನ್ನು ತಿದ್ದುವಲ್ಲಿ ರಜನಿ ಎಡವಿದ್ದೇಕೆ..?? ಸುವರ್ಣಳ ಬುದ್ಧಿಯ ಅರ್ಧದಷ್ಟಾದರೂ ರಜನಿ ಯೋಚಿಸಿದ್ದರೆ ಎಲ್ಲರ ಬದುಕೂ ಬದಲಾಗುತ್ತಿತ್ತು ಎನ್ನಿಸಿತು. 


ಎಲ್ಲರ ಬದುಕಿನ ಮುಂದಿನ ಹಾದಿ ಏನಾಯಿತು ಎಂದು ತಿಳಿಯಲು 'ಭ್ರಮಣ' ಕಾದಂಬರಿ ಓದಿ.


ಪ್ರತಿಭಾಳ ತುಂಬು ಕುಟುಂಬವನ್ನು ನೋಡಿ ಆಗಾಗ ತನ್ನ ಕುಟುಂಬವು ಹಾಗೆಯೇ ಆದರೆ ಎಷ್ಟು ಚೆನ್ನಾಗಿರುತ್ತದೆ ಎನ್ನುವ ರಜನಿಗೂ.. ಮದುವೆ, ಮಕ್ಕಳು ಎಲ್ಲದರಿಂದ ತನ್ನ ಮಕ್ಕಳನ್ನು ದೂರವಿಟ್ಟು ಬೆಳೆಸುತ್ತೇನೆ ಎಂದು ಸಿಡಿದು ವಿಚ್ಛೇದನ ಪಡೆದು ಬಂದಿದ್ದ ರಜನಿಗೂ ಬಹಳ ವ್ಯತ್ಯಾಸವಿತ್ತು. ಕಾಲ ಮಾಗಿತ್ತು. ಈ ಬದಲಾವಣೆ ಒಂದೆರಡು ದಿನದಲ್ಲಿಯಂತೂ ಆಗದು. ಅನುಭವಕ್ಕೆ ಬಂದ ನಂತರವೇ ಆಗುವ ಬದಲಾವಣೆಗಳು ಇಲ್ಲಿ ಕಾಣುತ್ತವೆ.


ಹೆಣ್ಣಿನ ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆಯ ಹಾದಿಯಲ್ಲಿ ಕೆಲವೊಮ್ಮೆ ರಜನಿಯನ್ನು ಒಪ್ಪಬಹುದಾದರೂ.. ಸ್ವೇಚ್ಛಾಚಾರ ಹಾಗೂ ತನಗೆ ಬೇಕಾದ ಹಾದಿಯಂತೆ ನಡೆಯುವುದನ್ನು ಒಪ್ಪಲಾಗದು. ಇಲ್ಲಿ ಬದುಕಿನ ಬದಲಾವಣೆಗಳನ್ನು ಹೇಳುತ್ತಲೇ ಸಕಾರಾತ್ಮಕವಾಗಿ ಹಾಗೂ ನಕಾರಾತ್ಮಕವಾಗಿ ಯಾವುದು ಎಷ್ಟು ಬದಲಾಗಬೇಕು ಎನ್ನುವುದನ್ನು ತೋರಿಸುತ್ತಾರೆ ಲೇಖಕಿ. ಇಲ್ಲಿ ಮಂದಾಕಿನಿಯದ್ದೂ ಸಂಪೂರ್ಣ ಗೆಲುವಿನ ಬದುಕಲ್ಲ.. ರಜನಿಯದ್ದೂ ಸಂಪೂರ್ಣ ಗೆಲುವಿನ ಬದುಕಲ್ಲ. ಆದರೆ, ಅವರಿಬ್ಬರೂ ಮುಖಾಮುಖಿಯಾಗದೆ ಅವರ ಮಕ್ಕಳ ಮುಖಾಮುಖಿ ಇವರ ಜೀವನವನ್ನು ಬದಲಾಯಿಸುವುದರ ಜೊತೆಗೆ ಅವರ ಜೀವನವನ್ನು ಎಷ್ಟು ಭ್ರಮೆಗೆ ತಳ್ಳುತ್ತದೆ ಎನ್ನುವುದರ ಕಟು ಸತ್ಯದ ಕಥೆ ಇದು. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ