ಶನಿವಾರ, ಏಪ್ರಿಲ್ 18, 2026

ಕಣ್ಮಣಿ (ಪುಸ್ತಕ ಯಾನ - 235)


ಪುಸ್ತಕದ ಶೀರ್ಷಿಕೆ : ಕಣ್ಮಣಿ

ಲೇಖಕರು : ಅನುಪಮಾ ನಿರಂಜನ

ಪ್ರಕಾಶಕರು : ಡಿ. ವಿ. ಕೆ ಮೂರ್ತಿ ಪ್ರಕಾಶನ

ಪ್ರಥಮ ಮುದ್ರಣ : 1952

ಪುಟಗಳು : 104


ಕಣ್ಮಣಿ ಅನುಪಮಾ ನಿರಂಜನ ಅವರು ಬರೆದಿರುವ 8 ಕಥೆಗಳ ಕಥಾ ಸಂಕಲನ. ತಮ್ಮ ಸುತ್ತಮುತ್ತಲೂ ಕಂಡ ಘಟನೆಗಳನ್ನು ಮನಸ್ಸು ವ್ಯಗ್ರವಾದಾಗ, ಹೊಯ್ದಾಡಿದಾಗ, ಕ್ರಮ-ಕ್ರಮವಾಗಿ ರೂಪಗೊಂಡ ಕಥೆಗಳೆಂದು ಹೇಳಿದ್ದಾರೆ. ಅಲ್ಲದೇ, ಇವರೆಲ್ಲರ ಹೃದಯ ಬೇಗುದಿಯನ್ನು ಚಿತ್ರಿಸಲು, ಅನ್ಯಾಯ ದಬ್ಬಾಳಿಕೆಗಳ ವಿರುದ್ಧ ಸಿಡಿದೇಳಬೇಕು ಎನ್ನುವ ಅವರ ಮನೋಭಾವನೆಗೆ ರೂಪ ಕೊಡಲು ಕೆಲವು ಕಥೆಗಳಲ್ಲಿ ಪ್ರಯತ್ನಿಸುತ್ತೇನೆ ಎನ್ನುವ ಲೇಖಕಿಯ ಮಾತು ಕಥೆಗಳ ವಾಸ್ತವಿಕತೆ ಹಾಗೂ ಅವರ ಭಾವಗಳನ್ನು ಹಿಡಿದಿಟ್ಟ ಬಗೆಯನ್ನು ಹೇಳುತ್ತದೆ. ಇಲ್ಲಿನ ಕಥೆಗಳಲ್ಲಿ ಬಿಡುಬೀಸಾದ ಭಾವಗಳನ್ನು, ಅಂದುಕೊಂಡಿದ್ದನ್ನು ಮಾಡುವ ಸ್ವಭಾವವನ್ನು ನಾವು ಕಾಣಬಹುದು. ಅಲ್ಲದೇ ಮನಸ್ಸಿಗೆ ವಿರುದ್ಧವಾದ ಕೆಲಸವನ್ನು ಮಾಡದ ಹಾಗೂ ಮಾಡಲಾಗದ ವ್ಯಕ್ತಿತ್ವಗಳನ್ನೂ ಕಾಣಬಹುದು. 


ಈ ಕಥಾ ಸಂಕಲನಕ್ಕೆ ಚದುರಂಗರ ಮುನ್ನುಡಿ ಇದೆ. ಈ ಕಥಾಸಂಕಲನದ ಮುನ್ನುಡಿ ವಿಶೇಷ ಕಾರಣಕ್ಕೆ ಇಷ್ಟವಾಯಿತು. ಅದೆಂದರೆ, ನಾವು ಓದಬೇಕಾದ ಎಷ್ಟೋ ಕಥೆಗಳ ಕುರಿತು ಉಲ್ಲೇಖಿಸಿದ್ದಾರೆ. ಕನ್ನಡದಲ್ಲಿ ಸಣ್ಣ ಕಥೆ ಶುರುವಾದ ಪರಂಪರೆಯಿಂದ ಬದಲಾದ ರೂಪದ ಸಣ್ಣ ಕಥೆಗಳಲ್ಲಿ ಗುರುತಿಸುವಂತಹಾ ಕೆಲವು ಕಥೆಗಳು ಹಾಗೂ ಲೇಖಕರನ್ನು ಹೆಸರಿಸಿದ್ದಾರೆ. ನಾವು ಎಷ್ಟೋ ಪುಸ್ತಕಗಳನ್ನು, ಎಷ್ಟೋ ಕಥಾಸಂಕಲನಗಳನ್ನು ಓದಿದ್ದೇವೆ ಎನ್ನುವ ನಮ್ಮ ಅಹಂಗೆ ಕನ್ನಡಿ ಹಿಡಿದು, ಓದಬೇಕಾದದ್ದು ಎಷ್ಟಿದೆ ಎಂದು ನಮ್ಮ ಅಜ್ಞಾನದ ಕುರಿತು ಕನ್ನಡಿ ಹಿಡಿಯುವಂತಿದೆ. 


ಕಣ್ಮಣಿ : ಇದು ಲೇಖಕಿಯವರ ಒಬ್ಬ ಬಂಧುವಿಗೆ ಸಂಬಂಧಿಸಿದ ಸತ್ಯ ಕತೆ. ಮರೆಯಾದ ಅಣ್ಣ ಜಯರಾಮುವಿನ ನೆನಪಿಗಾಗಿ ಬರೆದ ಕಥೆ ಎಂದು ಅದರ ಕುರಿತು ಅವರಿಗೆ ವಿಶೇಷ ಅಕ್ಕರೆ. ಎಲ್ಲಾ ಕೆಲಸವನ್ನೂ ಜಯರಾಮನಂತೆ ನಿಭಾಯಿಸುತ್ತಿದ್ದವರೇ ಕಡಿಮೆ. ಮುಖ್ಯೋಪಾದ್ಯರ ಪ್ರಿಯ ಶಿಷ್ಯನಾಗಿದ್ದ ಜಯರಾಮ್ ಶಾಲಾ ವಾರ್ಷಿಕೋತ್ಸವಕ್ಕೆ ಎಲ್ಲಾ ತಯಾರಿಯನ್ನು, ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನಿರ್ವಹಿಸುತ್ತಿದ್ದ. ಜಿಲ್ಲಾಧಿಕಾರಿಗಳನ್ನು ಒಪ್ಪಿಸುವುದು, ನಾಟಕದಲ್ಲಿ ಪಾರ್ಟ್ ಮಾಡುವುದು.. ಆತನ ನಟನಾ ಸಾಮರ್ಥ್ಯಕ್ಕೆ ಎಲ್ಲರೂ ದಂಗಾಗಿದ್ದರು. 

ಆತ ತನ್ನ ಓದಿನ ಜೊತೆಗೆ ಕಾರ್ಮಿಕರಿಗೂ ಸಹಾಯ ಮಾಡುತ್ತಿದ್ದ. ಅದಾಗಲೇ ಅಲ್ಲಿ ಪ್ಲೇಗ್ ಶುರುವಾಗಿತ್ತು. ಅಲ್ಲಿಗೆ ಹೆಚ್ಚು ಹೋಗಬೇಡ ಎಂದ ಅಣ್ಣ ನಾರಾಯಣ ಹೇಳಿದ್ದರಲ್ಲಿ ಕಾಳಜಿಯಷ್ಟೇ ಅಲ್ಲದೆ, ಬೇರೇನೋ ಕಾರಣವಿತ್ತು. ಅದನ್ನು ತನ್ನ ಪತ್ನಿ ಲಲಿತಾಳಿಗೂ ಹೇಳಿದ್ದ. ಅಲ್ಲದೆ, ಆತ ಇನ್ನು ಮುಂದೆ ಓದಲಾಗದು ಎಂದು ಲಲಿತಾ ಬಳಿ ಹೇಳಿದ್ದ ಆತನ ಮಾತಿಗಿದ್ದ ಕಾರಣವೇನು..?

ಎಲ್ಲರ ಕಣ್ಮಣಿಯಾಗಿದ್ದ ಜಯರಾಮ ಕಣ್ಮರೆಯಾದ ಬಗೆಯನ್ನು ಓದಿದರೆ ಮನಸ್ಸು ಭಾರವಾಗುತ್ತದೆ. 


ಮೂಲಾ ನಕ್ಷತ್ರದ ಹುಡುಗಿ : ಪದ್ದಿಯ ಜಾತಕವನ್ನು ಕಂಡವರೇ ಆಕೆ ಮೂಲಾ ನಕ್ಷತ್ರದ ಹುಡುಗಿ ಎಂದು ತಿರಸ್ಕರಿಸುತ್ತಿದ್ದವರೇ ಹೆಚ್ಚು. ಅದರಿಂದಾಗಿ ಅವಳು ರೋಸಿ ಹೋಗಿದ್ದಳು. ಮನೆಯಲ್ಲಿ ತಾಯಿಯೂ ತಾತ್ಸಾರ ಭಾವದಿಂದ ನೋಡುತ್ತಿರುವಾಗ.. ಆಕೆಗೆ ತನ್ನ ಬೆಲೆ ಇಷ್ಟೆಯೇ ಎನ್ನುಸುತ್ತಿತ್ತು. ಆದರೆ, ಎರಡನೆಯ ಹೆಂಡತಿಯನ್ನು ಕಳೆದುಕೊಂಡು ಆರೇಳು ತಿಂಗಳಾಗಿದ್ದ ಶ್ರೀಮಂತನ ಕೈ ಹಿಡಿದು ಆಕೆ ಪದ್ಮಾವತಿ ಆಗಿದ್ದಳು. ಜರಿದಿದ್ದವರೇ ಅವಳನ್ನು ಕೊಂಡಾಡುತ್ತಿದ್ದರು. ಅಮ್ಮನ ಮೇಲೆ ಹುಟ್ಟಿದ್ದ ಮುನಿಸು ಮುಂದೆ ಯಾವ ಸ್ವರೂಪ ತಳೆಯಿತು..?? ಮೂಲ ನಕ್ಷತ್ರದ ಹುಡುಗಿಯ ಬದುಕು ಏನಾಯ್ತು..?? ತಮ್ಮ ಕಿಟ್ಟಿಯ ಭವಿಷ್ಯವನ್ನು ರೂಪಿಸುವುದರಲ್ಲಿ ಈಕೆಯ ಪಾಲೆಷ್ಟು..??


ಷಹಜಹಾನ್ ಚಂದಣ್ಣ : ಜಮೀನ್ದಾರನಾಗಿದ್ದ ಚಂದಣ್ಣನ ಮನೆಯ ಮುಂದೆ ಸಂಭ್ರಮವೋ ಸಂಭ್ರಮ. ಇಂದವ್ವನನ್ನು ಬಯಸಿ ಬಯಸಿ ಮದುವೆಯಾಗಿದ್ದ ಆತ ಇಂದು ಸಂಭ್ರಮದಲ್ಲಿದ್ದ. ಊರಿಗೇ ಬೇಕಾದವಳಾಗಿದ್ದ ಇಂದವ್ವ  ಮದುವೆಯಾಗಿ ಎರಡು ವರ್ಷ ತುಂಬುವ ಮೊದಲೇ ತವರಿಗೆ ಹೋಗಬೇಕಾಯಿತು. ಇದಿಷ್ಟೂ ಕಥೆಯ ಒಂದು ಸ್ವರೂಪವಾದರೆ, ಷಹಜಹಾನ್ ಚಂದಣ್ಣ ಎಂದು ಶೀರ್ಷಿಕೆ ಏಕಿದೆ.. ಆತನ ಪ್ರೇಮದ ಸ್ವರೂಪವೇನು ಎಂಬುದಕ್ಕೆ ಬೇರೆಯ ತರಹದ ಕಥಾತಂತ್ರವನ್ನು ಬಳಸಿದ್ದಾರೆ ಲೇಖಕಿ. 


ಮಣ್ಣು ದಿಬ್ಬದ ಮೇಲೆ : ಶೀಲಿ ಹಾಗೂ ಸೋನ್ಯಾನ ಮೂಲಕ ಆರಂಭವಾಗುವ ಕಥೆ ಸೋನ್ಯಾನ ಕುರುಡುತನವನ್ನು ತೋರುತ್ತಲೇ.. ಅವರ ಬಡತನ ಹಾಗೂ ಮನೆಯ ಪರಿಚಯ ಮಾಡಿಸುತ್ತದೆ. ಮಣ್ಣು ದಿಬ್ಬದ ಮೇಲಿದ್ದ ಕೆಲವು ಗುಡಿಸಲುಗಳಲ್ಲಿ ಅವರ ಗುಡಿಸಲೂ ಒಂದು. ಪಕ್ಕದ ಮನೆ ವಾಗೀಶಿಯ ಗುಡಿಸಲು ಮಳೆಗೆ ಕಳಚಿ ಬಿದ್ದಾಗ ಅವರ ಅಸಹಾಯಕತೆ ಹಾಗೂ ಶೀಲಿಯ ಮನೆಯವರ ಪ್ರತಿಕ್ರಿಯೆ ಜೊತೆಗೆ ಅಚಾನಕ್ಕಾಗಿ ಎದುರಾದ ಪರಿಸ್ಥಿತಿ.

"ಹಾಗೆ ಮಣ್ಣು ದಿಬ್ಬ ಸ್ಮಶಾನವಾಯಿತು. ಆ ಸ್ಮಶಾನದ ಮೇಲೆ ಇನ್ನು ಕೆಲವಾರು ದಿನಗಳಲ್ಲಿ ಸಾಹುಕಾರನ ಮಹಡಿ ಮನೆಯ ನಿರ್ಮಾಣ." ಎನ್ನುವ ಸಾಲುಗಳು ವಾಸ್ತವತೆಯನ್ನು ಚಿತ್ರಿಸುತ್ತವೆ. 


ಆ ಮೂರು ಮನೆಗಳು : ಒಂದು ಪುಟ್ಟ ಮನೆ, ಮತ್ತೊಂದು ಮಹಡಿ ಮನೆ ಮತ್ತೊಂದು ಗುಡಿಸಲು. ಹೀಗೆ ಮೂರು ಮನೆಗಳಲ್ಲಿ ನಡೆಯುವ ಪ್ರಸಂಗಗಳನ್ನು ಹಾಗೂ ಆ ಮನೆಯಲ್ಲಿರುವ ಮಹಿಳೆಯರ ಮನಸ್ಥಿತಿಯನ್ನು ಕಟ್ಟಿ ಕೊಡುವ ಕಥೆ. ಆ ಮೂರು ಮನೆಗಳಲ್ಲಿ ಅಂತಸ್ತು ಹಾಗೂ ಗಾಂಭೀರ್ಯ ಬೇರೆ ಇದ್ದರೂ.. ಆ ಜೀವಿಗಳ ಮನದ ಮಿಡಿತ ಒಂದೇ ಎನ್ನಿಸಿತು. ಆ ಮೂರು ನೋವುಗಳು ಕೇವಲ ಆ ಮೂರು ಮಂದಿ ಹೆಣ್ಣು ಮಕ್ಕಳದ್ದಲ್ಲ.. ಎಷ್ಟೋ ಮನೆಗಳ ಮನಮಿಡಿಯುವ ಕಥೆ. 


ಒಂದೇ ಜಾತಿ : ಲಕ್ಷ್ಮೀಪತಯ್ಯನಿಗೆ ರಾಜಣ್ಣನ ಪರಿಚಯವಾಗಿದ್ದು ಆಕಸ್ಮಿಕವಾಗಿ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವನು ರಾಜಣ್ಣ. ಲಕ್ಷ್ಮೀಪತಯ್ಯ ಶಿಕ್ಷಕರಾಗಿದ್ದವರು. ಕೆಲಸಗಾರರೆಲ್ಲಾ ಒಂದೇ ಜಾತಿ ಎನ್ನುವ ಅರ್ಥದಲ್ಲಿ ರಚಿತವಾಗಿರುವ ಶೀರ್ಷಿಕೆ ಇದು. ಲಕ್ಷ್ಮೀಪತಯ್ಯನವರು ಸ್ವಾಭಿಮಾನವನ್ನು ಬದಿಗೊತ್ತಿ, ಸಾಹೇಬ್ರು ಎಂದರೆ ಹೆದರಬೇಕು ಅವರು ಅಧಿಕಾರವಿರುವವರು ಎನ್ನುವ ಭಾವದಲ್ಲಿ ಮಾತನಾಡುತ್ತಿರುವಾಗ ಆತ್ಮಗೌರವವಿಲ್ಲದೆ ಬದುಕುವುದು ಎಷ್ಟು ಸರಿ ಎನ್ನುವ ಆಲೋಚನೆಯ ಬೀಜ ಬಿತ್ತಿದ ರಾಜಣ್ಣ ಲಕ್ಷ್ಮೀಪತಯ್ಯನವರ ಬದುಕಿನಲ್ಲಿ ಹಾಗೂ ಶಿಕ್ಷಕರ ಬದುಕು, ಆಲೋಚನೆಯಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಲು ಕಾರಣವಾದವನು. ಅಂತಹಾ ಬದಲಾವಣೆಯೇನು..? 


ಪ್ರತಿಫಲ : ಇದು ಸ್ವಾತಂತ್ರ್ಯದ ಹೋರಾಟದ ಸಮಯದಲ್ಲಿ ನಡೆದ ಘಟನೆ. ಚಂದ್ರುವಿನ ತಂದೆ ಆತನ ಸ್ವಾತಂತ್ರ್ಯದ ಹೋರಾಟಕ್ಕಾಗಿ ತನ್ನ ಎದುರಲ್ಲೇ ಪ್ರಾಣಬಿಟ್ಟ ಮಗನನ್ನು ನೋಡಿದವನು. ಅವನೊಟ್ಟಿಗೆ ಆತನೇ ಆರಿಸಿ ತಂದು ಮಗನ ಬಹಳ ಗೆಳತಿಯನ್ನಾಗಿ ಮಾಡಿದ್ದ ತಬ್ಬಲಿ ಹುಡುಗಿ ಪಾರ್ವತಿ. ಆ ಮುಗ್ದೆ ಹಾಗೂ ಮುಪ್ಪಿನವರಿಗೆ ಸ್ವಾತಂತ್ರ್ಯ ಸಿಕ್ಕದ್ದು ಒಂದು ಹಬ್ಬದಂತೆ ಕಂಡರೂ.. ಅದು ತಮಗೆ ಸಿಕ್ಕ ಸಂಭ್ರಮದಂತೆ ಕಂಡರೂ.. ಚಂದ್ರುವಿನ ತ್ಯಾಗಕ್ಕೆ ಎಂತಹಾ ಪ್ರತಿಫಲ ಸಿಕ್ಕಿತು ಎಂಬುದಕ್ಕೆ ಸಾಕ್ಷಿಯಾದ ಪ್ರಸಂಗವೇ ವಿಭಿನ್ನ. ಅದು ಬಾಳಿನ ವಿಪರ್ಯಾಸದ ಕಥೆಯೂ ಹೌದು.


ಸಾವಿನ ಮುಖ : ಅಂದು ಮರ್ಕ್ಯೂರಿಕ್ ಕ್ಲೋರೈಡ್ ಕುಡಿದು ಸತ್ತು ಹೋದವನ ಹೆಣವನ್ನು ನೋಡಿ ಬಂದ ನಿಖಿಲನಿಗೆ ಮನಸ್ಸಿನಲ್ಲಿ ಅದೇ ಭಾವನೆ. ತನ್ನ ತಂಗಿ ಕಾಮಿನಿಯ ಜೊತೆಗೆ ಸತ್ತವನ ಚರಿತ್ರೆ ಹೇಳುತ್ತಿದ್ದ. ಜೀವನ ಬೇಸರವಾದಾಗ ನಮಗೂ ಹಾಗೆಯೇ ಅನಿಸಬಹುದಾ ಎನ್ನುವ ಆಲೋಚನೆಯಲ್ಲಿದ್ದರು ಅಣ್ಣ-ತಂಗಿ. ರಾತ್ರಿ ಓದಲು ಕುಳಿತು ನಿಖಿಲನಿಗೆ ಮತ್ತೆ-ಮತ್ತೆ ಅದೇ ವಿಚಾರ ಮನಕಲಕುತ್ತಿತ್ತು. ಟೇಬಲ್ ಮೇಲೆ ಇಟ್ಟಿದ್ದ ಗಾಜಿನ ಲೋಟದಿಂದ ನೀರು ಕುಡಿದ ನಂತರವೂ ಬಹಳ ಆಯಾಸವೆನಿಸಿದಾಗ ನಿಖಿಲನಿಗೆ ಮತ್ತೊಂದು ಯೋಚನೆ ಬಂತು. ತಂಗಿಗೆ ತೋರಿಸಲೆಂದು ತಂದ ಮರ್ಕ್ಯೂರಿಕ್ ಕ್ಲೋರೈಡ್ ಕೂಡಾ ಅಲ್ಲಿಯೇ ಪಕ್ಕದಲ್ಲಿತ್ತು. ಅಷ್ಟಕ್ಕೂ ನಿಖಿಲ ಏನನ್ನು ಕುಡಿದ..?? ಕುತೂಹಲ ಮೂಡಿಸಿಕೊಂಡೇ ಓದಿಸಿಕೊಂಡು ಹೋಗುವ ಕಥೆ.


ಇಲ್ಲಿನ ಹೆಚ್ಚು ಕಥೆಗಳಲ್ಲಿ ವಾಸ್ತವದ ಕಹಿ ಸತ್ಯವಿದೆ. ಅವುಗಳ ಪರಿಣಾಮಗಳು ಓದಿದ ನಂತರವೂ ಮನ ತುಂಬಿಕೊಳ್ಳುವ ಕಥೆಗಳಿವು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ