ಶುಕ್ರವಾರ, ಏಪ್ರಿಲ್ 17, 2026

ಪಲ್ಲಟ (ಪುಸ್ತಕ ಯಾನ - 215)


ಪುಸ್ತಕದ ಶೀರ್ಷಿಕೆ : ಪಲ್ಲಟ

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು

ಪ್ರಥಮ ಮುದ್ರಣ : 2003

ಪುಟಗಳು : 115

ಬೆಲೆ : 40 ರೂ.


ಬದುಕಿನಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿ.. ಅಸಹಾಯಕರಾಗಿ ಮತ್ತೊಬ್ಬರ ಮೇಲೆ ಅವಲಂಬಿತರಾಗಿ ಬದುಕುವ ರೀತಿ ಅಧೈರ್ಯಕ್ಕೆ ದೂಡುವುದಲ್ಲದೇ ನಾವು ಎಷ್ಟು ಅಶಕ್ತರು ಎಂಬುದನ್ನು ಪದೇಪದೇ ನೆನಪಿಸುವಂತಿರುತ್ತದೆ. ಸಹಾಯ ಮಾಡುವವರಿಗೆ ಯಾವ ಭಾವವಿರುತ್ತದೋ ಗೊತ್ತಿಲ್ಲ.. ಆದರೆ, ಖಾಲಿ ಕೂತಿರುವಾಗಲಂತೂ ಅಂತಹವರ ಮನಸ್ಸು ಬೇಡದ ಆಲೋಚನೆಗಳಲ್ಲಿ ಮುಳುಗಿ ಹೋಗುತ್ತದೆ. ದೈಹಿಕವಾಗಿ ಮನುಷ್ಯ ದುರ್ಬಲನಾದಾಗ ಮನಸ್ಸು ಸಹ ದುರ್ಬಲತೆಗೆ ಒಳಗಾಗುತ್ತದೆ. ಅಂತೆಯೇ.. ಆ ಮಾನಸಿಕ ವೇದನೆಯಿಂದ ಉಂಟಾಗುವ ನೋವು ದೈಹಿಕ ನೋವಿಗಿಂತಲೂ ಹೆಚ್ಚಾದದ್ದು. ಮಾನವೀಯತೆಯಿಂದ ಸಹಕಾರ ನೀಡಿದರೂ.. ಅವರು ನಮ್ಮ ಕುರಿತು ಕರುಣೆ ತೋರುತ್ತಿದ್ದಾರೆ ಎಂಬ ಭಾವ ಮೂಡುತ್ತದೆ. ಆ ಕರುಣೆ, ಅನುಕಂಪಗಳೇ ಕೆಲವೊಮ್ಮೆ ನಮ್ಮನ್ನು ಮತ್ತಷ್ಟು ಕುಗ್ಗಿಸಿ ಬಿಡುವುದೂ ಹೌದು. ಇಲ್ಲಿ ಕಥಾನಾಯಕನ ಪರಿಸ್ಥಿತಿ ಇಂತಿದ್ದಾಗ.. ಆತನ ಪರಿಸ್ಥಿತಿ, ಮನಸ್ಥಿತಿ ಹೇಗಿದೆ ಎಂಬುದರ ಕುರಿತಾದ ಕಥೆಯೇ 'ಪಲ್ಲಟ'.


ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಹೆಚ್ಚಿನ ಪರಿಮಿತಿ ಹೊಂದಿದ್ದ ರವಿ ಸ್ವಂತ ಕಂಪನಿ ಕಟ್ಟಿಸಿ ಡಾಟ್ ಕಾಮ್ ಸಂಸ್ಥೆಯನ್ನು ಸ್ಥಾಪಿಸಿ ಹೆಚ್ಚಿನ ಶ್ರದ್ಧೆ, ಆಸಕ್ತಿಯಿಂದ ಅಭಿವೃದ್ಧಿ ಮಾಡಿದ್ದ. ಕಂಪ್ಯೂಟರ್ ತಂತ್ರಜ್ಞಾನವೇ ಹೊಸದಾಗಿದ್ದು.. ನಾಳೆ ಮತ್ತೊಂದು ಹೊಸ ತಂತ್ರಜ್ಞಾನ ಬರಬಹುದು.. ಪ್ರತಿದಿನ ಕಲಿಕೆಯ, ಪ್ರತಿದಿನ ಸವಾಲಿನ ಈ ಸಂಗತಿಗೆ ಅಷ್ಟು ಶ್ರಮ ಬೇಕಾಗಿತ್ತು. ಆತನ ಜೊತೆಗೆ ಉದ್ಯೋಗಿಗಳು ಸಹಾ ಆತನಿಗೆ ಬಹಳವೇ ಸಹಕಾರ ನೀಡುತ್ತಿದ್ದರು.


ಉದ್ಯೋಗದ ನಂತರ ಬರುವುದೇ ಮದುವೆಯ ವಿಚಾರ. ಅಮ್ಮನೇ ನೋಡಿ ಮದುವೆ ಮಾಡಿಸಿದ್ದ ವಸುಮತಿಯ ತವರು ಮನೆ ಹುಬ್ಬಳ್ಳಿಗೆ ಕಾರಿನಲ್ಲಿ ಹೋಗಿ ಬರುವಾಗ ನಡೆದ ರಸ್ತೆ ಅಪಘಾತದಲ್ಲಿ ಅಮ್ಮ ಅಸುನೀಗಿ, ವಸುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ.. ರವಿಗೆ ಸ್ಪೈನಲ್ ಕಾರ್ಡ್ ಜಕಮ್ ಆಗಿ ಬೆನ್ನುಹುರಿ ಪೂರ್ತಿ ಛಿದ್ರಛಿದ್ರವಾಗಿತ್ತು. ಮದುವೆಯಾಗಿ ಒಂದು ವಾರವಷ್ಟೇ ಕಳೆದಿದ್ದರೂ ವಸುವಿಗೆ ರವಿಯಲ್ಲಿ ಸಂಪೂರ್ಣ ಪ್ರೀತಿಯಿತ್ತು. ಆತನನ್ನು ಆ ಸ್ಥಿತಿಯಲ್ಲಿ ಜೋಪಾನವಾಗಿ ಕಾಪಾಡಿಕೊಂಡಳು. ಆರ್ಥಿಕವಾಗಿ ಅವರು ಸಬಲರಾಗಿದ್ದರು. ಯಾರ ಮುಂದೆಯೂ ಕೈಚಾಚುವಂತಿರಲಿಲ್ಲ. ವಸುಮತಿಯೂ ಓದಿ ಚುರುಕಾಗಿದ್ದ, ಎಲ್ಲವನ್ನೂ ನಿಭಾಯಿಸಬಹುದಾಗಿದ್ದಂತಹಾ ಸಾಮರ್ಥ್ಯವುಳ್ಳ ಹೆಣ್ಣು.


ರವಿಗೆ ಬೇಡದ ಯೋಚನೆಗಳು ಬರುತ್ತಿದ್ದಾಗ ವಸುಮತಿಯೇ ಧೈರ್ಯ ತುಂಬಿ ನ್ಯೂಯಾರ್ಕ್ ನಲ್ಲಿರುವ ಸ್ಪಾನ್ ಕಂಪನಿಗೆ ಕಾಗದ ಬರೆದು ಅಲ್ಲಿನ ಅಂಗಸಂಸ್ಥೆಯಲ್ಲಿ ನೆಟ್ವರ್ಕ್ ಪ್ರೋಗ್ರಾಮರ್ ಹುದ್ದೆಗೆ ರವಿಯ ಅರ್ಜಿ ಕಳುಹಿಸಿದ್ದಳು. ಅದು ಕೇವಲ ಆತನಿಗೆ ಕೆಲಸ ಕೊಡಿಸುವ ಉದ್ದೇಶದಿಂದ ಮಾತ್ರವಲ್ಲ. ವಿದೇಶಗಳಲ್ಲಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಆತನ ದೇಹದ ಭಾಗಗಳಿಗೆ ಬೇಕಾದ ಉಪಕರಣಗಳನ್ನು ಅಳವಡಿಸಿಕೊಂಡು, ಸ್ವಾವಲಂಬಿಯಾಗುವತ್ತ ಹೆಜ್ಜೆ ಇಡುವ ಸಂದರ್ಭ. ವಸುವಿನ ಆಸೆಗೆ, ನಿರೀಕ್ಷೆಗೆ ತಕ್ಕಂತೆ ಅಲ್ಲಿಂದ ರವಿಗೆ ಕರೆ ಬಂದಿತ್ತು.


ಇಲ್ಲಿದ್ದ ಕಂಪನಿಯನ್ನು ಲೀಸ್ ಕಮ್ ಸೇಲ್ ಬೇಸಿಸ್ ಮೇಲೆ ಮತ್ತೊಬ್ಬರಿಗೆ ವಹಿಸಿಕೊಟ್ಟು ಮನೆಯನ್ನು ವಸುವಿನ ಅಣ್ಣ ಶ್ರೀಧರ ಹಾಗೂ ಅತ್ತಿಗೆ ಶಾಲಿನಿಗೆ ಇದನ್ನು ನೋಡಿಕೊಳ್ಳುವಂತೆ ಹೇಳಿ, ಅವರ ಕುಟುಂಬಕ್ಕೂ ಒಂದು ದಾರಿ ಮಾಡಿಕೊಟ್ಟಳು. 


ಮೊದಲಿಗೆ ಲಂಡನ್ ಗೆ ಹೋಗಿ ನಂತರ ಅಲ್ಲಿಂದ ನ್ಯೂಯಾರ್ಕ್ ಗೆ ಹೋದರು. ರವಿಗೆ ಜಾನ್.ಎಫ್ ಟೆಕ್ನಾಲಜಿ ಕಂಪನಿಯ ಅಂಗಸಂಸ್ಥೆಗೆ ಸೇರಿಕೊಳ್ಳಲು ಅವಕಾಶ ಸಿಕ್ಕಿತು. ಅದು ಡೆಟ್ರಾಯಿಡ್ ಗೆ ಸ್ಥಳಾಂತರಗೊಂಡಿದ್ದರಿಂದ ಅಲ್ಲಿಗೆ ಹೋಗಿ ರಿಪೋರ್ಟ್ ಮಾಡಿಕೊಂಡರು. ಅವರೇ ವಾಸಕ್ಕೆ ಕೊಟ್ಟ ಮನೆಗೆ ಒಬ್ಬ ಕೆಲಸದವನು ಬೇಕೆಂದು ನೇಮಿಸಿಕೊಂಡದ್ದು ಬೆಟ್ಟಿಯನ್ನು.


ವಸು ಯಾರು ಜೊತೆ ಮಾತನಾಡಿದಳು, ಎಲ್ಲಿಗೆ ಹೋದರು ಎಂದು ರವಿಗೆ ಒಂದು ರೀತಿಯ ಅಭದ್ರತೆ, ಆತಂಕ ಕಾಡುತ್ತಿತ್ತು. ಆಕೆ ಅಲ್ಲಿನ ವಿದೇಶಿ ಸಂಸ್ಕೃತಿಗೆ ಮರುಳಾದರೆ..?! ಎಂಬ ಆತಂಕವೂ ಇತ್ತು. ಹಾಗಾಗಿ ಬೆಟ್ಟಿಯೊಡನೆ ಅವಳನ್ನು ಕಂಡರೂ ಆತನಿಗೆ ಅಭದ್ರತೆಯ ಭಾವವೇ.. ಆದರೆ, ವಸುವಿನಂತಹಾ ಸೂಕ್ಷ್ಮಮತಿಗೆ ಇದೆಲ್ಲವೂ ಅರ್ಥವಾಗುತ್ತಿತ್ತು. ಬೆಟ್ಟಿಗೆ ಭಾರತೀಯ ಸಂಸ್ಕೃತಿಯ ಕಥೆಗಳನ್ನು, ಪ್ರಸಂಗಗಳನ್ನು ಹೇಳಿ ಆತನ ಮನಸ್ಸನ್ನು ಹದಗೊಳಿಸುತ್ತಾ.. ತಮ್ಮ ಊಟ-ತಿಂಡಿ ಜೊತೆಗೆ ಸಂಸ್ಕೃತಿಯ ಭಾವವನ್ನು ಬೆಳೆಸಿ ಬದಲಾವಣೆ ತಂದಳು.


ಅಲ್ಲೇ ಸ್ವಲ್ಪ ದೂರದಲ್ಲಿ ನೆಲೆಸಿದ್ದ ಮೈಸೂರಿನವರಾದ ಡಾಕ್ಟರ್ ಜಯಸಿಂಹ ಅವರ ಪರಿಚಯವಾಯಿತು. ಅವರ ಮನೆಗೊಮ್ಮೆ ಭೇಟಿ ನೀಡಿ ಬಂದಾಗ ಅವರ ಸ್ನೇಹಮಯಿ ತಾಯಿ ಹಾಗೂ ಅವರ ಕಲಾಭಿರುಚಿ ಜೊತೆಗೆ ಗ್ರಂಥ ಭಂಡಾರಕ್ಕೆ ವಸು ಮನಸೋತಳು. ಅವರ ತಮ್ಮ ಯಶು ಮಿಚಿಗನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದು ಸಂತೋಷವಾಯಿತು. ಅಲ್ಲಿನ ರವಿಯ ಕೆಲಸಕ್ಕೆ ಬೇಕಿದ್ದ ಎಷ್ಟೋ ಗ್ರಂಥಗಳಿಗೆ ಅನುಕೂಲವಾಯಿತು.


ಡಾಕ್ಟರ್ ಜಯಸಿಂಹ ಇನ್ನು ಅವಿವಾಹಿತರಾಗಿದ್ದರು. ಅವರ ಕಲಾಭಿರುಚಿ ಹಾಗು ಸಾಹಿತ್ಯ ಪ್ರೇಮಕ್ಕೆ ಸರಿಹೊಂದುವಂತಹಾ ವೈದ್ಯ ವೃತ್ತಿಯಲ್ಲಿರದ ಹುಡುಗಿಗೆ ಹುಡುಕಾಡುತ್ತಿದ್ದರು. ವಸುವನ್ನು ಕಂಡಾಗ ಅವರ ಎಲ್ಲಾ ನಿರೀಕ್ಷೆಗಳು ತುಂಬಿದವು. ಆದರೆ, ಆಕೆಗೆ ಆಗಲೇ ಮದುವೆಯಾಗಿತ್ತು. ಅವರ ತಾಯಿಯ ಅಭಿಪ್ರಾಯವೂ ಅದೇ ಆಗಿತ್ತು. ರವಿಯನ್ನು ಬಿಟ್ಟು ಬಂದರೆ ಈಗಲೂ ತಮ್ಮ ಸೊಸೆಯನ್ನಾಗಿ ಸ್ವೀಕರಿಸಲು ಆಕೆ ತುಂಬು ಮನಸ್ಸಿನಿಂದ ಸಿದ್ಧವಿದ್ದರು.


ರವಿಯ ಮೇಲಿನ ಪ್ರೇಮವನ್ನು ಬಿಡಲಾಗದ ವಸುವಿಗೆ ಹೆಣ್ಣಾಗಿ.. ಆಸೆಯೊಂದು ಕಾಡುತ್ತಿತ್ತು. ಅದೇ ತಾಯಿಯಾಗುವ ಬಯಕೆ. ಅದು ಜಯಸಿಂಹರಿಂದ ಪೂರೈಸಿದರೆ ಎಂಬ ಭಾವವೂ ಕಾಡದಿರಲಿಲ್ಲ. ಅದೇ ಸಮಯಕ್ಕೆ ಜಯಸಿಂಹ ತಮ್ಮ ಮನಸ್ಸಿನ ಆಸೆಯನ್ನು ಹೇಳಿಕೊಂಡಾಗ ಆಕೆಯ ಮನಸ್ಸಿನಲ್ಲಿ ಸರಿ-ತಪ್ಪುಗಳ ಅಲೆ ಎದ್ದಿತು. ಅದರ ನಡುವೆಯೇ ಆಕೆ ತಾಯಿಯೂ ಆದಳು.


ರವಿಯ ಜೊತೆ ಕೆಲಸ ಮಾಡುತ್ತಿದ್ದ ಸ್ಟೀಫನ್ ಗೆ ವಸುವಿನ ಮೇಲೆ ಕಣ್ಣಿದೆ ಎಂದು ಗೊತ್ತಾದಾಗ ಜೇಮ್ಸ್ ಸ್ಮಿತ್ ಸನ್ ಎಂಬ ತರುಣನನ್ನು ಕೆಲಸಕ್ಕೆ ತೆಗೆದುಕೊಂಡ. ಆದರೆ ಆತನ ಮೋಸ ಸ್ಟೀಫನ್ ಅನ್ನೂ ಮೀರಿಸಿತ್ತು. ಅದರ ಫಲವಾಗಿ ರವಿಯ ಕೆಲಸ ಏನಾಯಿತು..?? ವಿದೇಶದಲ್ಲಿ ಆತ ಅಂದುಕೊಂಡದ್ದು ಸಾಧ್ಯವಾಯಿತೇ..??


ವಸು ತನಗೆ ಹುಟ್ಟಿದ ಮಗುವಿಗೆ ರವಿತೇಜ ಎಂದು ಹೆಸರಿಟ್ಟಳು. ಹಾಗೆ ಮಗುವನ್ನು ಪಡೆದ ಬಗೆ ಹೇಗೆ..? ಭಾರತೀಯ ಸಂಸ್ಕೃತಿಯನ್ನು ಬೆಟ್ಟಿಗೆ ಭೋದಿಸುತ್ತಿದ್ದ ಆಕೆ ಮಾಡಿದ್ದು ಸರಿಯಿತ್ತೇ..?? ರವಿ ರವಿತೇಜನನ್ನು ತನ್ನ ಮಗು ಎಂದು ಒಪ್ಪಿಕೊಂಡನೇ..?? 


ಒಂದು ಸಣ್ಣ ಅಪಘಾತದಿಂದ ಆದ ಪಲ್ಲಟ ನಂತರ ದೇಶವನ್ನೇ ಬದಲಿಸಿತು. ಆದರೆ, ವಿದೇಶದಲ್ಲಿ ನಡೆದ ಪಲ್ಲಟದ ಪರಿಣಾಮವೇನು..?? ಕೆಲವೊಮ್ಮೆ ರವಿಯ ನಡೆಗಳು ಅತಿರೇಕವೆಂದೆನ್ನಿಸಿದರೂ.. ಅಸಹಾಯಕ ಪರಿಸ್ಥಿತಿಯ ಅವನ ಅಧೀರತೆ ಹಾಗೆ ಮಾಡಿಸಿತು ಎನಿಸುತ್ತದೆ. ವಸುವಿನ ಆಲೋಚನೆಯನ್ನು ಸಂಪೂರ್ಣ ತಪ್ಪು ಎನ್ನಲ್ಲಾಗುವುದಿಲ್ಲ. ಅಕಸ್ಮಾತ್ ಗಂಡ ಸತ್ತಿದ್ದರೆ ಮರು ವಿವಾಹವಾಗುವ ಆಯ್ಕೆಯಾದರೂ ಇರುತ್ತಿತ್ತು. ಆದರೆ, ಇಲ್ಲಿ ಅದೂ ಇಲ್ಲ. ಬಿಟ್ಟು ನಡೆಯಬಹುದಾಗಿದ್ದರೂ.. ರವಿಯ ಮೇಲಿನ ಪ್ರೇಮ ಆಕೆಯ ಹಾಗೆ ಮಾಡಲು ಬಿಡಲಿಲ್ಲ. ಜಯಸಿಂಹರಂತಹಾ ವಿನಮ್ರ ಹಾಗೂ ಒಳ್ಳೆಯ ಮನಸ್ಸಿನ ವೈದ್ಯರು ಸ್ನೇಹಿತರಾಗಿ ಸಿಗುವುದು ಅಪರೂಪ ಎಂದೆನ್ನಿಸಿತು. ಇದೇ ಪ್ರಸಂಗ ನಮ್ಮ ದೇಶದಲ್ಲಿ ನಡೆದಿದ್ದರೆ ಅದರ ಪರಿಣಾಮ ಏನಿರುತ್ತಿತ್ತು ಎಂಬ ಪ್ರಶ್ನೆಯೂ ಮೂಡಿತು. ವಿಜ್ಞಾನ ತಂತ್ರಜ್ಞಾನ ಜೊತೆಗೆ ಸಂಪ್ರದಾಯ, ಮನಸ್ಸುಗಳೆಲ್ಲದರ ಮಿಳಿತವಾದ ಕಾದಂಬರಿಯ ಒಂದೊಳ್ಳೆ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ