ಪುಸ್ತಕದ ಶೀರ್ಷಿಕೆ : ಯೋಚಿಸಿದರೆ
ಲೇಖಕರು : ಡಾ|| ಎಂ. ಶಿವರಾಂ
ಪ್ರಕಾಶಕರು : ಕನ್ನಡ ವಿಜ್ಞಾನ ಪರಿಷತ್ತು
ಪ್ರಥಮ ಮುದ್ರಣ : 1981
ಪುಟಗಳು : 60
ಯೋಚಿಸಿದರೆ ಎನ್ನುವ ಪುಸ್ತಕದ ಶೀರ್ಷಿಕೆ ಯೋಚಿಸುವಂತೆ ಮಾಡುವುದು ಹೌದು. ಇಲ್ಲಿ ಹೆಚ್ಚಿನ ವಿಜ್ಞಾನದ ವಿಷಯಗಳು ಪ್ರಯೋಗದ ಕತೆಯ ಮೂಲಕ ಓದುಗರಿಗೆ ತಲುಪಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಹಾಗೆಂದು ಈ ಪ್ರಯೋಗಗಳು ಅರ್ಥವಾಗದ ಯಾವುದೋ ಪ್ರಯೋಗಗಳಲ್ಲ. ಬದಲಾಗಿ ನಿಜ ಜೀವನದ ಘಟನೆಗಳಿಗೂ ಹಾಗೂ ಹಾಗೆ ಇರುವ ವಿಜ್ಞಾನದ ಸೂತ್ರಗಳನ್ನು ಸಾಮಾನ್ಯರಿಗೆ ಅರ್ಥವಾಗುವಂತೆ ಬಿಡಿಸಿಟ್ಟಿದ್ದಾರೆ.
ಯೋಚಿಸಿದರೆ ಎಂದು ಯೋಚಿಸುತ್ತಿರುವಾಗಲೇ ನಮ್ಮ ಆಲೋಚನೆಗೂ ಹಾಗೂ ಕೇಳುವುದಕ್ಕೂ ಇರುವ ಸಂಬಂಧವನ್ನು ಹೇಳಿದ್ದಾರೆ. ಅರೆ..! ಕೇಳುವುದಕ್ಕೂ ಹಾಗೂ ಯೋಚಿಸುವುದಕ್ಕೂ ಯಾವುದಾದರೂ ಕೊಂಡಿ ಇದೆಯಾ..?? ಹಾಗಾದರೆ ಕೇಳಿಸಿಕೊಂಡರೆ ಮಾತ್ರ ಆಲೋಚಿಸಲು ಸಾಧ್ಯವಾ..?? ಎಂದು ಪ್ರಶ್ನೆ ಹುಟ್ಟಿತು. ಆದರೆ, ಈ ವಿಚಾರ ಹಾಗಲ್ಲ. ಯೋಚಿಸುವಾಗ ನಮ್ಮ ಮನಸ್ಸು ಕೇಳಿಸಿಕೊಂಡ ವಿಚಾರಗಳಿಗೆ ಬದ್ಧವಾಗಿ ಆ ನಿಟ್ಟಿನಲ್ಲಿಯೇ ಆಲೋಚಿಸುತ್ತಿರುತ್ತದೆ. ಕಾರ್ಲ್ ಡಂಕರ್ ಎನ್ನುವ ಮನೋ ವೈಜ್ಞಾನಿಕ ಸಂಶೋಧಕನ ಸಂಶೋಧನೆಯೆಂದನ್ನು ಸರಳವಾಗಿ ವಿವರಿಸಿದ್ದಾರೆ.
ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ. ಮೇಜಿನ ಮೇಲೆ ಇಬ್ಬರಿಗೂ ಒಂದೇ ರೀತಿಯ ಸಾಮಗ್ರಿಗಳನ್ನು ಇಟ್ಟಿರುತ್ತಾರೆ. ಒಂದು ಮೊಳ ದಾರ, ಒಂದು ಕಬ್ಬಿಣದ ಗುಂಡು ಹಾಗೂ ಮೊಳೆ. ಆ ಕಬ್ಬಿಣದ ಗುಂಡಿಗೆ ಅದಾಗಲೇ ದಾರ ಕಟ್ಟಿ ಆಗಿರುತ್ತದೆ. ಮೊದಲ ಗುಂಪಿಗೆ ಇಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಗುಂಡನ್ನು ಪೆಂಡುಲಂನಂತೆ ತೂಗಾಡಿಸಿ ಎಂದು ಹೇಳುತ್ತಾರೆ. ಆದರೆ, ಆ ಗುಂಪು ಈ ಪರೀಕ್ಷೆಯಲ್ಲಿ ಯಶಸ್ವಿಯಾಗುವುದಿಲ್ಲ. ಅಲ್ಲಿ ಸುತ್ತಿಗೆ ಇಲ್ಲ ಎನ್ನುವ ಕಾರಣ ಕೊಟ್ಟು ಸುಮ್ಮನಾಗುತ್ತಾರೆ.
ಎರಡನೇ ಗುಂಪಿಗೆ ಇದೇ ಟಾಸ್ಕ್ ಅನ್ನು ನೀಡುವಾಗ ಪೆಂಡುಲಂ ಎನ್ನುವ ಪದವನ್ನು ಬಳಸುವುದಿಲ್ಲ. ಆ ಗುಂಪು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಅಲ್ಲಿದ್ದ ಗುಂಡನ್ನೇ ಸುತ್ತಿಗೆಯಂತೆ ಉಪಯೋಗಿಸಿ, ಮೊಳೆ ಹೊಡೆದು ದಾರದಲ್ಲಿ ಕಟ್ಟಿದ್ದ ಗುಂಡನ್ನು ತೂಗಿ ಬಿಡುತ್ತಾರೆ.
ಹಾಗೆಂದು, ಎರಡನೇ ಗುಂಪಿನವರು ಬುದ್ಧಿವಂತರು ಹಾಗೂ ಮೊದಲನೇ ಗುಂಪಿನವರು ದಡ್ಡರು ಎಂದರ್ಥವಲ್ಲ. ಬದಲಾಗಿ ಅವರಿಗೆ ಟಾಸ್ಕ್ ನೀಡುವಾಗ ಉಪಯೋಗಿಸಿದ ಪದದ ಕುರಿತು ಅವರು ಆಲೋಚಿಸಲು ತೊಡಗುತ್ತಾರೆ. ಪೆಂಡುಲಂ ಎಂದಾಗ ಆ ಗುಂಡನ್ನು ಕೇವಲ ಪೆಂಡುಲಂ ಎಂದು ಮಾತ್ರವೇ ನೋಡಿ ಆಲೋಚಿಸುತ್ತಾರೆ. ಆದರೆ, ಎರಡನೇ ಗುಂಪಿನವರಿಗೆ ಆ ಶಬ್ದವನ್ನೇ ಹೇಳದಿದ್ದಾಗ.. ಆ ಗುಂಡನ್ನು ಬಹುಪಯೋಗಿಯಂತೆ ಕಾಣುತ್ತಾರೆ. ಹಾಗಾಗಿ, ಯೋಚಿಸುವಾಗ ನಾವು ಕೇಳಿಸಿಕೊಂಡ ವಿಷಯದಿಂದ ನಾವು ಪೂರ್ವಗ್ರಹಪೀಡಿತರಾಗುತ್ತೇವೆ ಎನ್ನುವ ತರ್ಕವನ್ನು ನೀಡುತ್ತಾರೆ ಡಂಕರ್.
ಇದು ಇಲ್ಲಿ ಕೊಟ್ಟಿರುವ ಪ್ರಯೋಗಗಳಲ್ಲಿ ಕೇವಲ ಒಂದು ವಿಚಾರವಷ್ಟೇ.. ಇಂತಹಾ ಹಲವಾರು ಮನಸೆಳೆಯುವ ಹಾಗೂ ಸರಳವಾಗಿರುವ ಪ್ರಯೋಗಗಳನ್ನು ಹಾಗೂ ವಿಜ್ಞಾನದ ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಡುತ್ತಾ ಹೋಗುತ್ತಾರೆ ಲೇಖಕರು. ಹಾಗೆಯೇ ಕುತೂಹಲ ಮೂಡಿಸುವ ಮತ್ತೊಂದು ಪ್ರಸಂಗದ ಕುರಿತು ಹೇಳುತ್ತೇನೆ.
ಸುಂದರ್ ಬನ್ಸ್ ಗೂ ಪ್ರಾಂಟೋಸಿಲ್ ಗೂ ಎತ್ತಿಂದೆತ್ತಣ ಸಂಬಂಧ ಗೊತ್ತಾ..?
ಸುಂದರ್ ಬನ್ಸ್ ಕಾಡುಗಳಲ್ಲಿ ಬೆಳೆಯುತ್ತಿದ್ದ ಮರಗಳಿಂದ ಉಪಯೋಗಿಸಿಕೊಂಡ ಕೆಲವು ರಾಸಾಯನಿಕಗಳು ಹಾಗೂ ಬೇರೆ ಬೇರೆಯ ಪ್ರಯೋಗಗಳಿಂದ ಗೆಲ್ಮೋ ಎನ್ನುವ ವಿಜ್ಞಾನಿ ಬಟ್ಟೆಗಳಿಗೆ ಬಳಸುವ ಗಾಢ ಬಣ್ಣವನ್ನು ತಯಾರಿಸುವುದನ್ನು ಕಂಡುಹಿಡಿಯುತ್ತಾನೆ. ಆತ ಹಲವಾರು ಪ್ರಯೋಗಗಳನ್ನು ಮಾಡಿ ಹಾಗೆ ಟಿಪ್ಪಣಿ ಬರೆದಿಟ್ಟು.. ಚಿಕ್ಕ ವಯಸ್ಸಿನಲ್ಲಿಯೇ ಸತ್ತು ಹೋಗುತ್ತಾನೆ. ಅದಾದ ನಂತರ ಅವನ ರೂಮ್ ಅನ್ನು ಶುಚಿಗೊಳಿಸುತ್ತಿರುವಾಗ ಡಾಕ್ಟರ್ ಡೋಮಾಕ್ ಗೆ ಪ್ರಾಂಟೋಸಿಲ್ ಎನ್ನುವ ವಸ್ತು ರೋಗಕಾರಕ ಕ್ರಿಮಿಗಳನ್ನು ಹೇಗೆ ನಾಶಮಾಡುತ್ತದೆ ಎನ್ನುವ ಪ್ರಯೋಗ ಮನಸೆಳೆಯುತ್ತದೆ. ಆದರೆ, ಗೆಲ್ಮೊ ಅದನ್ನು ಮನುಷ್ಯರ ಮೇಲೆ ಪ್ರಯೋಗಿಸಿರಲಿಲ್ಲ.
ಡಾಕ್ಟರ್ ಡೋಮಾಕ್ ಅವರ ಮಗಳು ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಸಂದರ್ಭದಲ್ಲಿಯೇ ಈ ಪ್ರಯೋಗ ಅವರ ಕೈ ಸೇರಿದ್ದು. ತನ್ನ ಮಗಳು ಬದುಕುವ ಆಸೆಯನ್ನೇ ಕೈ ಬಿಟ್ಟಿದ್ದವರಿಗೆ.. ಪ್ರಯೋಗ ಮಾಡುವ ಅವಕಾಶವೊಂದು ಸಿಕ್ಕಿ, ಆ ಪ್ರಯೋಗ ಯಶಸ್ವಿಯೂ ಆಗಿ ಅವರ ಮಗಳು ಬದುಕುಳಿದಳು. ಅಷ್ಟೇ ಅಲ್ಲದೆ ಇದು ಪರಿಣಾಮಕಾರಿಯಾದ ರಾಸಾಯನಿಕ ವಸ್ತು ಎಂಬುದರ ಅರಿವಾಗಿತ್ತು. ಡಾಕ್ಟರ್ ಡೋಮಕ್ ಜರ್ಮನಿಯ ವ್ಯಾಪಾರಿ ಸಂಸ್ಥೆಯಲ್ಲಿದ್ದಾಗ ಈ ಸಂಶೋಧನೆ ಮಾಡಿ ಪ್ರಕಟಿಸಿದ್ದರಿಂದ ಇದು ಆ ಕಂಪನಿಯ ಕಾಪಿರೈಟ್ ಪಾಲಾಯಿತು. ಮುಂದೆ ಡೋಮಾಕ್ ಇದನ್ನೇ ಮೂಲವಾಗಿರಿಸಿಕೊಂಡು ಇನ್ನಷ್ಟು ಸಂಶೋಧನೆಗಳನ್ನು ನಡೆಸಿ, ಅದರ ಮೇಲೆ ನೊಬೆಲ್ ಪ್ರಶಸ್ತಿಯನ್ನೂ ಪಡೆಯುತ್ತಾನೆ.
ಹೀಗೆ ಮುಂದುವರಿದ ಅವನ ಸಂಶೋಧನೆಯಲ್ಲಿ ಸಲ್ಫಾದ ಕುರಿತ ಸಂಶೋಧನೆ ಹಾಗೂ ಅದರ ಪರಿಣಾಮವನ್ನು ಇಂಗ್ಲೆಂಡಿನ ಸಭೆಯೊಂದರಲ್ಲಿ ಹೇಳುತ್ತಿರುವಾಗ.. ಆ ಸಭೆಯಲ್ಲಿ ಹಿಂದೆ ಕೂತಿದ್ದವರೊಬ್ಬರು ಇದಕ್ಕಿಂತಲೂ ಪರಿಣಾಮಕಾರಿ ಪ್ರಯೋಗ ನನ್ನಲ್ಲಿದೆ ಎನ್ನುತ್ತಾರೆ. ಅವರು ಮತ್ತಾರೂ ಅಲ್ಲ ಅಲೆಕ್ಸಾಂಡರ್ ಫ್ಲೆಮಿಂಗ್ ಮತ್ತದು ಪೆನ್ಸಿಲಿನ್.
ನಂತರ ಪೆನ್ಸಿಲಿನ್ ಕುರಿತಾದ ಪ್ರಯೋಗ ಹಾಗೂ ಕಥೆಯನ್ನು ಬಿಡಿಸಿಡುತ್ತಾರೆ. ವ್ಯಾಕ್ಸಿನೇಷನ್ ಕುರಿತ ಜೆನ್ನರ್ ಹಾಗೂ ಪಾಸ್ತೂರರ ವಿಚಾರವಿದೆ.
ಕಿವಿಯಿಂದ ನೋಡಬಹುದಾ..? ಇದು ಸಾಮಾನ್ಯವಾಗಿ ಬೇರೆ ಯಾರಿಗಾದರೂ ಕೇಳಿದರೆ ಕಿವಿಯಿಂದ ನೋಡಲಿಕ್ಕೆ ಸಾಧ್ಯವೇ..? ಎಂದು ಮರು ಪ್ರಶ್ನಿಸುತ್ತಾರೆ ಇಲ್ಲವೇ ಹುಚ್ಚು ಎಂದು ನಕ್ಕು ಬಿಡುತ್ತಾರೆ. ಆದರೆ ಇಲ್ಲಿನ ವೈಜ್ಞಾನಿಕ ವಿಶ್ಲೇಷಣೆ ಅಚ್ಚರಿಗೊಳಿಸುತ್ತದೆ. ಹಾಗೆಂದು, ಇದು ಮನುಷ್ಯನಿಗೆ ಸಂಬಂಧಪಟ್ಟ ವಿಚಾರವಲ್ಲ. ಬದಲಾಗಿ ಪ್ರಾಣಿ ಪ್ರಪಂಚದ ಒಂದು ಜೀವಿಗೆ ಸಂಬಂಧಿಸಿದ್ದು.
ಇಲ್ಲಿ ವೈಜ್ಞಾನಿಕ ವಿಚಾರವಿದ್ದರೂ.. ಕೊನೆಯ ಲೇಖನದಲ್ಲಿ 'ಸದ್ಯಕ್ಕೆ ಅವ್ಯಕ್ತ' ಎಂದು ಅರಿವಿಗೆ ನಿಲುಕದ ವಿಚಾರಗಳನ್ನು ಮುಂದೆ ಎಂದಾದರೂ ವಿಶ್ಲೇಷಿಸಬಹುದು ಎನ್ನುವ ಕುತೂಹಲವನ್ನಿಟ್ಟು ಮುಕ್ತಾಯಗೊಳಿಸಿರುವುದು ವಿಜ್ಞಾನದ ವಿಕಸನದ ಹಾದಿಗೆ ಹಾಗೂ ಓದಿಗೆ ತೆರೆದಿಟ್ಟ ಹಾದಿಯಂತಿದೆ. ಇಲ್ಲಿನ ಕುತೂಹಲಕಾರಿ ವಿಚಾರವೆಂದರೆ ಇಲ್ಲಿ ಜಿಮ್ ಕಾರ್ಬೆಟ್ ಪ್ರಸ್ತಾಪವಿದೆ. ಏಕೆ ಎಂದು ತಿಳಿಯಲು ನೀವು ಈ ಪುಸ್ತಕ ಓದಿ ನೋಡಿ.
ಹೀಗೆ ಹತ್ತು-ಹಲವು ವಿಚಾರಗಳನ್ನು ಕುತೂಹಲಕಾರಿಯಾಗಿ, ರಸವತ್ತಾಗಿ ಕಟ್ಟಿರುವ ಪುಸ್ತಕವನ್ನು ಓದಿಯೇ ಸವಿಯಬೇಕು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ