ಶುಕ್ರವಾರ, ಏಪ್ರಿಲ್ 17, 2026

ಶ್ರೀರಾಮ ಮತ್ತು ಸೋದರರ ಬಾಲ್ಯದ ಚಿತ್ರಣ


ಶ್ರೀಕೃಷ್ಣನ ಬಾಲ್ಯದ ದಿನಗಳ ಉಲ್ಲೇಖವಾದಷ್ಟು ಶ್ರೀರಾಮನ ಬಾಲ್ಯದ ದಿನಗಳು ಉಲ್ಲೇಖವಾಗಿರುವುದು ಕಡಿಮೆ. ಬಾಲ್ಯದಲ್ಲಿ ಎಂಬುದಕ್ಕಿಂತ ಕೌಮಾರಾವಸ್ಥೆಗೆ ಬಂದಾಗ ಆತ ಲೋಕಕಲ್ಯಾಣಕ್ಕಾಗಿ ತಾಟಕಿಯನ್ನು ಸಂಹರಿಸುವುದರಿಂದ ಆತನ ಶೌರ್ಯ, ಪರಾಕ್ರಮಗಳ ಅರಿವು ನಮಗಾಗುತ್ತದೆ. ಆದರೆ, ಆತನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವುದಾದರೆ.. ಅಂತಹಾ ಉಲ್ಲೇಖವಿರುವ ವಿವಿಧ ಮೂಲಗಳಿಂದ ನನಗೆ ಸಿಕ್ಕ ಮಾಹಿತಿಗಳು ಹಾಗೂ ಕಥೆಗಳು ಇಂತಿವೆ.


ಹರಿದಾಸರ ಕೀರ್ತನೆಗಳಲ್ಲಿ ರಾಮ ಹಾಗೂ ಕೃಷ್ಣರ ಲೀಲೆಗಳು ಬಹಳವಾಗಿ ಸಿಗುತ್ತವೆ. ಆದರೆ, ಅದರಲ್ಲಿಯೂ ರಾಮನ ಬಾಲ್ಯಲೀಲೆಗಳು ವಿರಳವೇ..ಈ ಕುರಿತು ನನಗೆ ಸಿಕ್ಕದ್ದು ನಿಡಗುರುಕಿ ಜೀವೂಬಾಯಿಯವರ ಈ ಕೀರ್ತನೆ. 


ಅತಿಶಯದಲಿ ದಶರಥ ಪುರೋಹಿತರನು

ಹಿತದಿ ಕರೆಸಿದ ತನ್ನ ಪುತ್ರರಿಗೆ

ಜೊತೆಯಲಿ ಚೌಲುಪನಯನವ ನಡೆಸಿ

ಮತಿವಂತರ ಮಾಡುತಲಿರಲು


ಚೈತ್ರ ಶುದ್ಧನವಮಿಲಿ ಜನಿಸಿದರೆಂದು

ಚಿತ್ತ ಸಂಭ್ರಮದಿ ದಶರಥನು

ಅರ್ಥಿಲಿ ಶ್ರೀ ರಘುರಾಮಚಂದ್ರ ನೆಂ..

ದಿಟ್ಟರು ನಾಮವ ಹರುಷದಲಿ


ಬಾಲಲೀಲೆಗಳ ತೋರುತ ನಲಿದರು

ಶೀಲ ಗುಣಪೂರ್ಣ ಬಾಲಕರು

ಲೋಲ ರಾಮ ಲಕ್ಷ್ಮಣ ಭರತ ಶತ್ರುಘ್ನರು

ಕಾಲಕಾಲಕೆ ಹರುಷವ ಕೊಡುತ


ಚಿಣ್ಣಿ ಕೋಲು ಚಂಡು ಬುಗುರಿಗಳಿಂದಲಿ

ಬಣ್ಣ ಬಣ್ಣದಾಟಗಳಾಡೆ

ಸಣ್ಣ ಬಾಲಕರು ಮಾತಾಪಿತೃಗಳಿಗೆ

ಚನ್ನವಾಗಿ ಹರುಷವ ಕೊಡುತ


ಬಗೆ ಬಗೆ ಆಟಗಳಾಡುತ ಬೆಳೆದರು

ಮಿಗೆ ಸಂತೋಷದಿ ಬಾಲಕರು

ಖಗವಾಹನ ಕಮಲನಾಭ ವಿಠಲನ

ನಗೆ ಮುಖ ನೋಡಲು ಬಂದ ಮುನಿವರನು


ಈ ಕೀರ್ತನೆಯಲ್ಲಿ ದಶರಥ ತನ್ನ ಮಕ್ಕಳು ಹುಟ್ಟಿದಾಗಿನಿಂದ ಅವರು ಅನ್ಯೋನ್ಯತೆಯಲ್ಲಿ ಬೆಳೆದ ರೀತಿ ಹಾಗೂ ರಾಮ, ಲಕ್ಷ್ಮಣ, ಭರತ, ಶತ್ರುಘ್ನರು ಒಬ್ಬರಿಗೊಬ್ಬರು ಹೊಂದಿಕೊಂಡಿರುವ ರೀತಿಯನ್ನು ಹೇಳಿದ್ದಾರೆ. ಜೊತೆಗೆ ಇಲ್ಲಿ ಬಿಲ್ಲು-ಬಾಣದಲ್ಲಿ ಆಡಿದರು ಎಂಬುದಕ್ಕಿಂತ ಬುಗುರಿ, ಚೆಂಡು, ಚಿಣ್ಣಿ-ದಾಂಡುಗಳನ್ನು ಆಡಿರುವರೆಂದು ಹೇಳಿರುವುದು ವಿಶೇಷವಾಗಿ ಕಾಣುತ್ತದೆ. ಮಕ್ಕಳ ಈ ಬಾಲಲೀಲೆಗಳಿಂದ ತಂದೆ-ತಾಯಿಯರಿಗೆ ಆಗುವ ಸಂತೋಷವೂ ಇಲ್ಲಿ ವ್ಯಕ್ತವಾಗಿದೆ.


ಆಧ್ಯಾತ್ಮ ರಾಮಾಯಣದಲ್ಲಿ ಶ್ರೀರಾಮ ವಿಷ್ಣುವಿನ ಅವತಾರವಾಗಿರುವುದನ್ನು ಹಾಗೂ ಆತ ಹುಟ್ಟಿದಾಕ್ಷಣ ಕೌಸಲ್ಯೆಗೆ ತನ್ನ ವಿಶ್ವರೂಪ ದರ್ಶನ ಮಾಡಿಸಿದಾಗ ತಾಯಿಯಾಗಿ ಆಕೆ ಬಾಲರಾಮನಾಗಿ ತನ್ನ ಬಾಲಲೀಲೆಗಳಿಂದ ಸಂತೋಷಪಡಿಸುವಂತೆ ಕೇಳಿಕೊಳ್ಳುವ ಪ್ರಸಂಗವಿದೆ.


ಈಶ್ವರಚಂದ್ರ ಚಿಂತಾಮಣಿಯವರ ಜನಪ್ರಿಯ ರಾಮಾಯಣದಲ್ಲಿ ರಾಮನು ಆಗಸದಲ್ಲಿ ಹೊಳೆಯುವ ಚಂದಿರನನ್ನು ಕಂಡು ಆ ಚಂದ್ರ ಆತನಿಗೆ ಬೇಕೆಂದು ಹಠ ಮಾಡುವ ಮೂಲಕ ಬಾಲಲೀಲೆಯನ್ನು ತೋರಿರುವ ಉಲ್ಲೇಖವಿದೆ. ಆತನ ಹಠವನ್ನು ಯಾರೂ ನಿಯಂತ್ರಿಸಲಾಗದಿದ್ದಾಗ ಮಂಥರೆ ಬಂದು ರಾಮನ ಎದುರಿಗೆ ಕನ್ನಡಿ ಹಿಡಿದು ಆತನನ್ನು ಖುಷಿಪಡಿಸುತ್ತಾಳೆ. ಈ ಪ್ರಸಂಗ ಆಧ್ಯಾತ್ಮ ರಾಮಾಯಣದಲ್ಲಿಯೂ ಬರುತ್ತದೆ. ಜನಪದ ರಾಮಾಯಣದಲ್ಲಿಯೂ ಇದರ ಉಲ್ಲೇಖವಿದ್ದು ಕೌಸಲ್ಯೆ ಒಂದು ಹೊಳೆಯುವ ತಟ್ಟೆಯಲ್ಲಿ ಚಂದಿರನನ್ನು ತೋರುತ್ತಾಳೆ ಎಂದೂ ಹೇಳುತ್ತಾರೆ. ಬಾಯಿಂದ ಬಾಯಿಗೆ ಹರಿಯುವ ಜನಪದ ಕಾವ್ಯಗಳಲ್ಲಿ ಈ ರೀತಿಯ ವ್ಯತ್ಯಾಸಗಳು ಕಂಡುಬರುತ್ತವೆ.


ಜನಪದ ರಾಮಾಯಣದಲ್ಲಿ ಮಂಥರೆಯು ರಾಮನನ್ನು ಸಮಾಧಾನಿಸುವವರೆಗಿನ ಪ್ರಸಂಗ ಮಾತ್ರವಿದ್ದು ನಂತರ ಕವಿಗಳು ತಮ್ಮ ಕಲ್ಪನಾ ಶಕ್ತಿಯಿಂದ ಮಂಥರೆಯ ಅವಲಕ್ಷಣ ಹಾಗೂ ಅಂದು ಮಂಥರೆ ರಾಮನನ್ನು ಸಮಾಧಾನ ಪಡಿಸಿದ ಮೇಲೆ ಆತನನ್ನು ಎತ್ತಿಕೊಳ್ಳಲು ಹೋಗುವಾಗ ಕೌಸಲ್ಯೆ ಬಂದು ಆಕೆಯನ್ನು ತಡೆದುದ್ದರ ಕುರಿತಾಗಿ ಹೇಳುತ್ತಾರೆ. ಅದೇ ಮುಂದೆ ಮಂಥರೆ ರಾಮನನ್ನು ದ್ವೇಷಿಸಲು ಕಾರಣವಾಗಿರಬಹುದು ಎಂಬುದಕ್ಕೆ ಮುನ್ನುಡಿಯಾಗಿ ಈ ಕಹಿ ಪ್ರಸಂಗವನ್ನು ಬಳಸುತ್ತಾರೆ. ಇಲ್ಲಿ ಮಂಥರೆಯ ಬುದ್ಧಿವಂತಿಕೆಯೂ ಕಾಣುತ್ತದೆ. ಮುಂದೆ ಕುತ್ಸಿತ ಬುದ್ಧಿಯೂ ಕಾಣುತ್ತದೆ. ಕೌಸಲ್ಯೆಯ ವರ್ತನೆಯನ್ನು ತಾಯಿ ತನ್ನ ಮಗುವಿನ ಮೇಲೆ ತೋರುವ ಅಪರಿಮಿತ ಪ್ರೇಮದ ರೂಪವಾಗಿ ಕಾಣಬಹುದಾದರೂ ಇನ್ನೊಮ್ಮೆ ಒಪ್ಪಲಾಗುವುದಿಲ್ಲ. ರಾಮ ಎಲ್ಲಾ ಜನರನ್ನು ಅಷ್ಟು ಪ್ರೇಮ ಭಾವದಿಂದ ಕಾಣುವಾಗ ಆ ಸಂಸ್ಕಾರದಲ್ಲಿ ಹೆಚ್ಚಿನಂಶ ತಾಯಿಯಿಂದಲೇ ಬಂದಿರುತ್ತದೆ ಎನ್ನುವ ನಂಬಿಕೆ. 


ಜನಪದ ರಾಮಾಯಣದ ಒಂದೆರಡು ಕಥೆಗಳು ಅಂತರ್ಜಾಲದಲ್ಲಿ ಸಿಕ್ಕವು. ಇದರಲ್ಲಿ ರಾಮನ ಕಾಲಂದುಗೆ ಸವೆದ ಪ್ರಸಂಗ ಇಷ್ಟವಾಯಿತು. ಜನಪದರು ರಾಮ ಚಿಕ್ಕ ಬಾಲಕನಾದರೂ.. ಆತನನ್ನು ದೇವರ ಸ್ವರೂಪದಲ್ಲಿ ಕಾಣುವುದನ್ನು ಹಾಗೂ ಜನರು ಆತನ ಕಾಲು ಮುಟ್ಟಿ ನಮಸ್ಕರಿಸುವುದನ್ನು ಹೇಳುವ ಪರಿಯಲ್ಲಿ.. ಎಲ್ಲರೂ ತನ್ನ ಕಾಲು ಮುಟ್ಟಿ ನಮಸ್ಕರಿಸುತ್ತಾರೆ ಹಾಗಾಗಿ ನನ್ನ ಕಾಲಂದುಗೆ ಸವೆದು ಹೋಯಿತು ಎನ್ನುವ ಮುಗ್ಧತೆಯ ರಾಮ ಕೌಸಲ್ಯೆಯ ಮುದ್ದಿನ ಮುಗ್ಧ ಮಗನ ರೂಪವಾಗಿ ಕಂಡುಬರುತ್ತಾನೆ.


ರಾಮಾಯಣದಲ್ಲಿ ಹೆಚ್ಚಿನಂಶ ರಾಮನ ಕಥೆಗೆ ಒತ್ತು ನೀಡಿರುವುದಾದರೂ.. ಲಕ್ಷ್ಮಣ ಆತನ ನೆರಳಿನಂತೆಯೇ ಹಿಂಬಾಲಿಸಿದವನು. ಭರತ-ಶತ್ರುಜ್ಞರು ಕೂಡ ಒಟ್ಟಿಗೆ ಬಾಲ್ಯವನ್ನು ಕಳೆದವರು. ಜನಪದ ರಾಮಾಯಣದಲ್ಲಿ ಲಕ್ಷ್ಮಣನ ಬಾಲ್ಯದ ಒಂದು ಪ್ರಸಂಗ ಹೀಗೆ ಕಾಣುತ್ತದೆ. ದಶರಥನ ತೊಡೆಯ ಮೇಲೆ ಬಲ ಭಾಗದಲ್ಲಿ ರಾಮನು, ಎಡಭಾಗದಲ್ಲಿ ಭರತನು ಕೂತಿದ್ದರಿಂದ ಲಕ್ಷ್ಮಣನಿಗೆ ಅಲ್ಲಿ ಕೂರಲು ಸ್ಥಳವಿಲ್ಲದುದರಿಂದ.. ನನಗೆ ಕೂರಲು ಮಾತ್ರವಲ್ಲ, ಹೃದಯದಲ್ಲಿಯೂ ಶೂನ್ಯ ಸ್ಥಾನ ಎಂದು ಹಲುಬುತ್ತಿರುವಾಗ ರಾಮ ತಕ್ಷಣವೇ ತಂದೆಯ ತೊಡೆಯ ಮೇಲಿಂದ ಇಳಿದು ಆತನನ್ನು ಭ್ರಾತೃವಾತ್ಸಲ್ಯದಿಂದ ಅಪ್ಪಿಕೊಂಡು ತಂದೆಗಿಂತಲೂ ಮಿಗಿಲಾದ ಪ್ರೇಮವನ್ನು ತೋರುತ್ತಾನೆ. ಹಾಗಾಗಿ, ಇಲ್ಲಿ ಅಸೂಯೆಯ ಭಾವವೇ ಮೂಡುವುದಿಲ್ಲ. ಇದು ನಮಗೆ ಧ್ರುವನ ಕಥೆಯನ್ನು ನೆನಪಿಸಿದರೂ.. ಅಲ್ಲಿ ತಮ್ಮನಿಂದಲೇ ಆಗುವ ಅವಮಾನದಿಂದ ಧೃವ ಕಾಡಿನ ಹಾದಿ ಹಿಡಿದು ತಪಸ್ಸು ಮಾಡಿದರೆ, ಇಲ್ಲಿ ರಾಮನ ಭ್ರಾತೃವಾತ್ಸಲ್ಯಕ್ಕೆ ಮಣಿದ ಲಕ್ಷ್ಮಣ ಆತನ ನೆರಳಾಗುವ ಪ್ರಸಂಗವಿದೆ. 


ಕೌಸಲ್ಯ ಹಾಗೂ ಕೈಕೇಯಿಯರಿಗೆ ಹೋಲಿಸಿಕೊಂಡರೆ ಸುಮಿತ್ರೆಗೆ ಕೊಂಚ ಕೆಳಗಿನ ಸ್ಥಾನವಿತ್ತು ಎಂದು ಉಲ್ಲೇಖವಾಗಿರುವ ಪ್ರಸಂಗಗಳು ಇದಕ್ಕೆ ಪುಷ್ಠಿ ಕೊಟ್ಟರೂ.. ಮಕ್ಕಳಿಲ್ಲದ ದಶರಥ ನಾಲ್ವರು ಮಕ್ಕಳನ್ನೂ ಹೆಚ್ಚೇ ಪ್ರೀತಿಸುತ್ತಿದ್ದಾನೆಂದು.. ಆದರೆ, ರಾಮನ ಮೇಲೆ ಅವನಿಗೆ ಕೊಂಚ ಹೆಚ್ಚು ಮಮತೆಯಿತ್ತು ಎಂಬುದನ್ನು ಅಲ್ಲಗಳೆಯಲಾಗದು.


ಹೀಗಾಗಿ ಲಕ್ಷ್ಮಣನ ಹಾಗೂ ಭರತ, ಶತ್ರುಘ್ನರ ದೃಷ್ಟಿಯಿಂದ ರೂಪಿತವಾಗಿರುವ ರಾಮಾಯಣದ ಪುಸ್ತಕಗಳನ್ನು ಹುಡುಕಿದರೆ ಇದಕ್ಕೆ ಉತ್ತರ ಸಿಗಬಹುದೇನೋ ಎಂಬ ಹುಡುಕಾಟದಲ್ಲಿದ್ದಾಗ ಸಿಕ್ಕ ಉತ್ತರವಿದು. 


ಎಂ. ರಾಮರಾವ್ ಅವರ 'ಸೌಮಿತ್ರಿ' ಪುಸ್ತಕವು ಲಕ್ಷ್ಮಣನ ದೃಷ್ಟಿಯಿಂದ ರಾಮಾಯಣವನ್ನು ತೋರುತ್ತದೆ. ಇದರಲ್ಲಿ ರಾಮಲಕ್ಷ್ಮಣರೆಂಬುದು ಒಂದೇ ಪದ. ರಾಮನೊಡನೆ ಹೊಂದಿಕೊಂಡಿರುವ ಲಕ್ಷ್ಮಣನ ಬಾಲ್ಯವನ್ನು ನಾವು ವಿಭಿನ್ನವಾಗಿ ನೋಡಲಾಗದು ಎಂದು ಹೇಳುತ್ತಾರೆ ಲೇಖಕರು. ವಿಷ್ಣು ರಾಮನಾಗಿ ಅವತಾರ ಎತ್ತಿದಾಗ ಆದಿಶೇಷನೇ ಲಕ್ಷ್ಮಣನಾದನೆಂದು ಹೇಳುತ್ತಾರೆ. ನಾಲ್ವರು ರಾಜಕುಮಾರರೂ ಒಬ್ಬರಿಗೊಬ್ಬರು ಬೆರೆತು ಆಡುತ್ತಿದ್ದರಾದರೂ.. ಲಕ್ಷ್ಮಣನಿಗೆ ರಾಮನ ಮೇಲೆ ವಿಶೇಷ ಒಲವು. ಶತ್ರುಘ್ನ ಭರತನೊಟ್ಟಿಗೆ ಹೆಚ್ಚಿನ ಒಲವಿನೊಂದಿಗೆ ಬೆರೆಯುತ್ತಾ.. ಕ್ಷತ್ರಿಯ ವಿದ್ಯೆಗಳಲ್ಲಿ ಪಾರಂಗತರಾಗುವಾಗ ತಮ್ಮ ಸಹಪಾಠಿಗಳೊಂದಿಗೂ ಬೆರೆತು ಕಲಿತದ್ದನ್ನು ಹೇಳುತ್ತಾರೆ. ಇದರ ನಂತರ ವಿಶ್ವಾಮಿತ್ರರೊಡನೆ ಅವರು ಹೊರಡುವ ಕೌಮಾರ್ಯದ ದಿನಗಳ ಉಲ್ಲೇಖವಿದೆ.


ಸೀತಾಸುತ ಅವರ 'ಮಹಾತ್ಮ ಭರತ ಮತ್ತು ಶತ್ರುಘ್ನ' ಎಂಬ ಪುಸ್ತಕದಲ್ಲಿ ದಶರಥ ಮರಣ ಹೊಂದಿದಾಗ ಭರತ ಶತ್ರುಘ್ನರು ಬಂದ ಸಂದರ್ಭದಲ್ಲಿ ನಡೆದುದೆಲ್ಲವನ್ನು ತಿಳಿದು.. ಅಪ್ಪ ತನ್ನನ್ನು ಎಷ್ಟು ಪ್ರೀತಿಸುತ್ತಿದ್ದ ಹಾಗೂ ಏನೆಂದು ಭೋಧಿಸುತ್ತಿದ್ದನೆಂದು ನೆನೆಯುತ್ತಾನೆ. "ಅಪ್ಪ ಅಣ್ಣನಿಗೆ ವಿಧೇಯವಾಗಿರಬೇಕೆಂದು ಯಾವಾಗಲೂ ನೀನು ಬೋಧಿಸುತ್ತಿದೆಯಲ್ಲವೇ..??" ಎನ್ನುತ್ತಾ ಭರತ ವಿಲಾಪಿಸುತ್ತಿರುವಾಗ ಶತ್ರುಘ್ನ "ಅಪ್ಪ.. ಸುಕುಮಾರನೂ, ಬಾಲಕನೂ ಆದ ಭರತ ಗೋಳಾಡುತ್ತಿರುವನಲ್ಲ.. ಯಾವಾಗಲೂ ಅವನನ್ನು ಲಾಲಿಸುತ್ತಿದ್ದೆಯಲ್ಲ..?? ಉತ್ತಮವಾದ ಪಾನ, ಭೋಜ್ಯ, ವಸ್ತ್ರಾಭರಣಾದಿಗಳನ್ನು ಧರಿಸಿ ನಿಮಗೆ ಬೇಕಾದುದ್ದನ್ನು ತೆಗೆದುಕೊಳ್ಳಿ ಎಂದು ಒತ್ತಾಯಪಡಿಸುತ್ತಿದ್ದಿರಲ್ಲವೇ..?" ಎಂದು ತಂದೆ ತಮ್ಮನ್ನು ಬಾಲ್ಯದ ದಿನಗಳಲ್ಲಿ ನೋಡಿಕೊಳ್ಳುತ್ತಿದ್ದನ್ನು ಹೇಳುವುದನ್ನು ಕಾಣಬಹುದು. ಅಲ್ಲದೇ ಶತ್ರುಘ್ನನು ಭರತನನ್ನು ಸುಕುಮಾರ ಹಾಗೂ ಬಾಲಕ ಭರತ ಎಂದು ಸಂಭೋಧಿಸುತ್ತಿರುವುದನ್ನು ಕಂಡಾಗ ಆತನ ಅಪರಿಮಿತ ಭ್ರಾತೃಪ್ರೇಮ ವ್ಯಕ್ತವಾಗಿರುವುದು ಕಾಣುತ್ತದೆ.


ಹೀಗೆ ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಬಾಲ್ಯವು ನಿರ್ಮಲವಾದ ಪ್ರೇಮದಿಂದ ಕೂಡಿದ್ದು.. "ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು" ಎಂಬ ಗಾದೆ ಮಾತನ್ನು ಸುಳ್ಳು ಮಾಡುವಂತಿದೆ. ಅಲ್ಲದೆ, ರಾಜಕುಮಾರರಾಗಿ ಬೆಳೆದರೂ.. ಸಾಮಾನ್ಯರೊಂದಿಗೆ ಬೆರೆತು ಬಾಳುವ ಅವರ ಗುಣವನ್ನು ಹಾಗೂ ತಮ್ಮಲ್ಲಿನ ಹೊಂದಾಣಿಕೆಯಿಂದ ಎಲ್ಲರಿಗೂ ಮಾದರಿಯಾಗಿರುವುದನ್ನು ಕಾಣಬಹುದಾಗಿದೆ. ತಂದೆ-ತಾಯಿಯರಿಗೆ ಮಕ್ಕಳಿಂದ ದೊರೆಯುವ ವಿಶೇಷ ಖುಷಿಯನ್ನೂ, ನೆಮ್ಮದಿಯನ್ನು ಕಾಣಬಹುದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ