ಪುಸ್ತಕದ ಶೀರ್ಷಿಕೆ : ನಿರ್ಗಮನ
ಲೇಖಕರು : ಜೋಗಿ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2024
ಪುಟಗಳು : 160
ಬೆಲೆ : 170 ರೂ.
ನನಗಂತೂ ಜೋಗಿ ಅವರ ಪುಸ್ತಕಗಳನ್ನು ಓದಿದಷ್ಟು ಸರಾಗವಲ್ಲ ಅವರ ಪುಸ್ತಕದ ಕುರಿತ ಚಿತ್ರಣ ಕಟ್ಟಿಕೊಡುವುದು. ಕಡಿಮೆ ಹೇಳಿದರೆ ಹೇಳಬೇಕಾದುದನ್ನು ಹೇಳಲಿಲ್ಲವೇನೋ ಎಂದೆನಿಸಿದರೆ, ಹೆಚ್ಚು ಹೇಳಿದರೆ ಎಲ್ಲಿ ಪುಸ್ತಕದ ಹೂರಣವನ್ನು ಬಿಟ್ಟುಕೊಟ್ಟೆನೋ ಎಂದೆನಿಸಿಬಿಡುತ್ತದೆ. ಇದು ಅವರ ಒಂದೆರಡು ಪುಸ್ತಕದ ಕಥೆಯಲ್ಲ ಹೆಚ್ಚಿನ ಪುಸ್ತಕಗಳದ್ದು. ಈ ನಡುವಲ್ಲಿ ಕೆಲವೊಮ್ಮೆ ಅಂಕಣ ಬರಹದಲ್ಲಿ ಓದಿದ್ದನ್ನು ಅಥವಾ ಒಂದು ಪುಸ್ತಕದಲ್ಲಿದ್ದ ಪ್ರಸಂಗವನ್ನು ಇನ್ನೊಂದು ಪುಸ್ತಕದಲ್ಲಿ ಬರೆದಾಗ ಇದು ಚರ್ವಿತಚರ್ವಣ ಎಂದೆನಿಸುತ್ತಿತ್ತು. ಆದರೆ, ಅವರ ಇತ್ತೀಚಿನ ಪುಸ್ತಕಗಳು ಆ ರೀತಿಯ ಭಾವ ಹುಟ್ಟಿಸುತ್ತಿಲ್ಲ.
ಮೊದಲಿಗೆ ಈ ಪುಸ್ತಕದ ಮುಖಪುಟವನ್ನು ನೋಡಿದಾಗ "ನೋ ಕಂಟ್ರಿ ಫಾರ್ ಓಲ್ಡ್ ಮ್ಯಾನ್" ಎನ್ನುವ ಬರಹ ಇದು ವೃದ್ಧರ ಕುರಿತಾದದ್ದಾ ಎನ್ನಿಸಿದರೂ.. ಕಥೆ ಅಂದುಕೊಂಡಷ್ಟು ಸರಳವಾಗಿ ಸಾಗುವುದಿಲ್ಲ. ಇದು ಕೇವಲ ವೃದ್ಧರ ಕಥೆ ಖಂಡಿತವಾಗಿಯೂ ಅಲ್ಲ .
ಅನಿರುದ್ಧನಿಗೆ ನ್ಯೂಸ್ ಚಾನೆಲ್ ನಲ್ಲಿ ಕೆಲಸ. ಆತ ಸಂಪಾದಕೀಯ ಮೀಟಿಂಗ್ ನಲ್ಲಿ ಭಾಗವಹಿಸುವಾಗ ಸಾಮಾನ್ಯವಾಗಿ ಅವನ ಫೋನ್ ಸೈಲೆಂಟ್ ಮೋಡಿನಲ್ಲಿರುತ್ತದೆ. ಅಂದೂ ಅದೇ ರೀತಿಯ ಮೀಟಿಂಗ್ ಗೆಂದು ಇನ್ನೇನು ಫೋನನ್ನು ಸೈಲೆಂಟ್ ಮೋಡ್ ನಲ್ಲಿ ಹಾಕಬೇಕು ಎನ್ನುವಷ್ಟರಲ್ಲಿ ಫೋನ್ ರಿಂಗ್ ಆಗಿತ್ತು. ಫೋನ್ ಮಾಡಿದ್ದು ಆತನ ಪತ್ನಿ ಮಾನಸಿ.
ಸಹಕಾರ ನಗರದಲ್ಲಿ ಅನಿರುದ್ಧನ ತಂದೆಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೀಲಾ ಮಾನಸಿಗೆ ಫೋನ್ ಮಾಡಿ ಆತನ ತಂದೆ ನಿನ್ನೆ ಬೆಳಗ್ಗೆಯಿಂದ ಕಾಣಿಸುತ್ತಿಲ್ಲವೆಂದು ಹೇಳಿದ್ದರಿಂದ ಗಾಬರಿಗೊಂಡು ಆಕೆ ಅಲ್ಲಿಗೆ ಹೋಗಿದ್ದಳು. ಆಕೆಯ ಮಾತಿನಲ್ಲಿ ಸತ್ಯಾಂಶವಿದ್ದುದರಿಂದ ಗಾಬರಿಯಾಗಿ, ಅನಿರುದ್ಧನಿಗೆ ಕರೆ ಮಾಡಿದ್ದಳು. ಆತನನ್ನು ಸಂಪರ್ಕಿಸಲು ಸಾಧ್ಯವಾಗದೆ ಮಾನಸಿ ಆಫೀಸಿಗೆ ಫೋನ್ ಮಾಡಿ ಈ ವಿಚಾರವನ್ನು ಮನೋಹರಿಯ ಬಳಿ ಹಂಚಿಕೊಂಡಿದ್ದಳು.
ವಿಚಾರ ತಿಳಿದ ಅನಿರುದ್ಧ ಅಲ್ಲಿಂದ ಹೊರಟ. ಅಂದಿನ ಮೀಟಿಂಗ್ ಮೇಲೆ ಇದರ ಪರಿಣಾಮವೇನಾಯಿತು..??
ಸಹಕಾರನಗರ ಪಟ್ಟಣದಿಂದ ದೂರವಿದ್ದ ಬಡಾವಣೆ. ಅಲ್ಲಿದ್ದ ಮನೆ ಅನಿರುದ್ಧನ ತಂಗಿ ಮಾಲವಿಕಾಳದ್ದು. ಬಾಸ್ಟನ್ ನಲ್ಲಿ ನೆಲೆಸಿದ್ದ ಅವಳು ಆ ಮನೆಯನ್ನು ಬಾಡಿಗೆಗೆ ಕೊಡಲು ಇಷ್ಟವಿಲ್ಲದೆ ಅಣ್ಣನ ಸಂಸಾರವನ್ನೇ ಅಲ್ಲಿಗೆ ಬಂದಿರಲು ಹೇಳಿದ್ದಳು. ಆದರೆ, ಮಾನಸಿ ಆ ಪ್ರಸ್ತಾಪವನ್ನು ತಳ್ಳಿ ಹಾಕಿದ್ದಳು. ಮಗಳು ಶಾನ್ವಿಯ ಸ್ಕೂಲ್ ಬದಲಾಯಿಸುವುದು ಕಷ್ಟ ಎಂಬ ಕಾರಣವನ್ನು ಹೇಳಿದ್ದಳು. ಕಾರಣ ಅದಾಗಿರಲಿಲ್ಲವೆಂಬುದು ಎಲ್ಲರಿಗೂ ಅರಿವಿತ್ತು.
ಅನಿರುದ್ಧನ ತಂದೆ ಶಾರದಾ ಪ್ರಸಾದ್ ಸೋವಿಯತ್ ಯೂನಿಯನ್ ಪ್ರೆಸ್ ನಲ್ಲಿ ಪ್ರೂಫ್ ರೀಡರ್ ಆಗಿದ್ದವರು. ನೂರಾರು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದವರು. ಅಲ್ಲಿ ಕೆಲಸ ಮಾಡುವಾಗ ರಷ್ಯನ್ ನಿಂದ ಇಂಗ್ಲೀಷ್ ಗೆ ಅನುವಾದವಾದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಬೇಕಿತ್ತು. ಹಾಗೆ ಕೆಲಸ ಮಾಡುತ್ತಿದ್ದವರಿಗೆ ಬಹಳ ಕಾಲದ ನಂತರ ಮತ್ತೆ ಅನುವಾದಕ್ಕೆ ಒಂದು ಪುಸ್ತಕ ಬಂದಿರುವುದರಿಂದ ಅದನ್ನು ಒಪ್ಪಿಕೊಂಡಿದ್ದೇನೆಂದು.. ತನಗೆ ಏಕಾಂತ ಬೇಕೆಂದು ಮಾಲವಿಕಳ ಮನೆಗೆ ತಾನೊಬ್ಬನೇ ಹೋಗಿ ನೆಲೆಸುವುದಾಗಿ ಹೇಳಿ ಎಲ್ಲರ ಸಮಸ್ಯೆಗೂ ತಾವೇ ಪರಿಹಾರ ಕೊಟ್ಟಿದ್ದರು. ಅಂದಿನಿಂದ ಯಾವ ಸಮಸ್ಯೆಗಳೂ ಇರಲಿಲ್ಲ. ಶಾರದಾ ಪ್ರಸಾದ್ ಕಾಣೆಯಾಗುವವರೆಗೂ..
ಹಠಾತ್ತನೆ ಕಾಣೆಯಾದ ಶಾರದಾ ಪ್ರಸಾದ್ ಅವರ ಪ್ರಸಂಗ ಈ ಆರೇಳು ವರ್ಷಗಳ ಅಂತರದಲ್ಲಿ ಏನೇನು ಆಗಿರಬಹುದು ಆಲೋಚಿಸುವಂತೆ ಮಾಡಿತ್ತು. ಮನೆ ಉಸ್ತುವಾರಿಗೆಂದು ಮಾಲವಿಕ ನೇಮಿಸಿದ್ದ ನೀಲಾಲಿಂದ ಹೌಸ್ ಕೀಪಿಂಗ್ ಕೆಲಸಗಳೆಲ್ಲವೂ ಸಾಗುತ್ತಿದ್ದವು. ಮೊದಮೊದಲು ಮಗ, ಸೊಸೆ, ಮೊಮ್ಮಗಳು ಬಂದು ಹೋಗುತ್ತಿದ್ದವರು ನಂತರ ಕ್ರಮೇಣ ಕಡಿಮೆಯಾಗಿ ಮಾನಸಿ ನೀಲಾಳ ಜೊತೆ ಸಂಪರ್ಕ ಇಟ್ಟುಕೊಂಡು ಮಾವನ ಕುರಿತು ವಿಚಾರಿಸಿಕೊಳ್ಳುತ್ತಿದ್ದಳು.
ನಾಪತ್ತೆಯಾಗಲು ಕಾರಣವೇನಿರಬಹುದು ಎಂದು ಯೋಚಿಸುತ್ತಲೇ ವೃದ್ಧರ ಕುರಿತಾದ ಹಲವಾರು ಘಟನೆಗಳು ನೆನಪಿಗೆ ಬರುತ್ತವೆ. ಅನಿರುದ್ಧನಿಗೆ ಬಂದ ಯೋಚನೆಗಳನ್ನು ಆತ ತೋಡಿಕೊಂಡದ್ದು ಬಲದೇವನ ಜೊತೆ. ಪತ್ರಿಕೋದ್ಯಮದಲ್ಲಿ ತನಗಿದ್ದ ಲಿಂಕ್ ಗಳನ್ನು ಬಳಸಿಕೊಳ್ಳುತ್ತಿದ್ದ ಬಲದೇವ ಶಾರದಾಪ್ರಸಾದ್ ರವರ ಅನ್ವೇಷಣೆಗೆ ಅನಿರುದ್ಧನಿಗೆ ಸಹಾಯ ಮಾಡಿದ. ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿ, ರಿಪೋರ್ಟರ್ ಗಳ ಸಹಾಯ ಪಡೆದು, ಹೀಗೆ..
ಶರ್ಮಿಲಾ ಕೂಡಾ ಇದಕ್ಕೆ ಜೊತೆಯಾಗುತ್ತಾಳೆ. ಇದರಲ್ಲಿ ಶರ್ಮಿಳಾಳ ಪಾತ್ರವೇನು..?? ಇದರ ಪರಿಣಾಮವೇನು..??
ಹೊರಗೆ ವಿಚಾರಣೆ ನಡೆಯುತ್ತಿತ್ತು. ಸುಮ್ಮನಿರಲಾಗದ ಅನಿರುದ್ಧ ಮನೆಯೊಳಗೆ ಹುಡುಕುತ್ತಿದ್ದಾಗ ಆತ ಅವರ ಡೈರಿಯನ್ನು ಓದಿದ. ಅನಿರುದ್ಧನಿಗೆ ತಿಳಿಯದ ಬಹಳಷ್ಟು ವಿಚಾರಗಳು ತಿಳಿಯುತ್ತಾ ಹೋದವು. ಅಪ್ಪ ಹೇಳಬೇಕೆಂದ ಎಷ್ಟೋ ವಿಷಯಗಳನ್ನು ಅವರು ಪತ್ರದ ರೂಪದಲ್ಲಿ ಬರೆದಿಟ್ಟಿದ್ದನ್ನು ಓದುತ್ತಾ ಹೋದ. ಈ ಪತ್ರಗಳಿಂದ ಆತನಿಗೆ ಅಪ್ಪ ಸಿಕ್ಕರೇ..?? ಶಾರದಾಪ್ರಸಾದ್ ಕಣ್ಮರೆಯಾಗಿದ್ದು ಹೇಗೆ ಹಾಗೂ ಏಕೆ..??
ಪತ್ರಿಕೋದ್ಯಮದ ಕುರಿತು ಹಲವಾರು ವಿಷಯಗಳನ್ನು ಕಟ್ಟಿಕೊಡುವಾಗ ಹಾಗೂ ತಮ್ಮ ನಿಲುವನ್ನು ಅವರು ಪತ್ರಗಳ ಮೂಲಕ ತಿಳಿಸುವ ಸಂದರ್ಭದಲ್ಲಿ ಇಲ್ಲಿ ಐದು ಪತ್ರಗಳಿವೆ. ಈ ರೀತಿಯ ಪತ್ರಗಳು ಇನ್ನಷ್ಟು ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಜೋಗಿಯವರ ಬರಹದ ಸಿಗ್ನೇಚರ್ ಶೈಲಿಯಂತೆ ಕಾದಂಬರಿಯ ಕೊನೆ ತೆಗೆದುಕೊಳ್ಳುವ ತಿರುವು ಇಷ್ಟವಾಯಿತು.
ಮೊದಲಿಗೆ ಕಾಣೆಯಾದ ಅಪ್ಪನನ್ನು ಕಳೆದುಕೊಳ್ಳುವ ಮಗ ಮಾತ್ರ ಕಾಣಿಸಿದರೆ.. ನಂತರ ಪತ್ರಿಕೋದ್ಯಮದ ಪಾಠ ಹೇಳುವ ಶಾರದಾಪ್ರಸಾದ್ ಕಾಣಿಸುತ್ತಾರೆ. ಮಾಧ್ಯಮದ ವಿಭಿನ್ನ ಮುಖಗಳು ತೆರೆದುಕೊಳ್ಳುತ್ತವೆ. ನಿರ್ಗಮನಕ್ಕೆ ತೆರೆದುಕೊಂಡ ಹಾದಿ ನಿರ್ಮಿಸಿಕೊಂಡದ್ದೇ ಅಥವಾ ತಾನಾಗಿಯೇ ತೆರೆದುಕೊಂಡದ್ದೇ ನೀವೇ ಓದಿ ನೋಡಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ