ಪುಸ್ತಕದ ಶೀರ್ಷಿಕೆ : ನಿಷ್ಕ್ರಮಣ
ಲೇಖಕರು : ಪ್ರೇಮಾ ಭಟ್
ಪ್ರಕಾಶಕರು : ಪ್ರೇಮಸಾಯಿ ಪ್ರಕಾಶನ
ಪ್ರಥಮ ಮುದ್ರಣ : 1996
ಪುಟಗಳು : 128
'ಹೆತ್ತವರಿಗೆ ಹೆಗ್ಗಣ ಮುದ್ದು' ಎಂಬಂತೆ ತಮ್ಮ ಮಕ್ಕಳು ತಮಗೆ ಬಹಳವೇ ಮುದ್ದು. ಅವರು ಹೇಗಿದ್ದರೂ ಸೊಗಸು ಎಂದು ಹೆತ್ತವರು ಭಾವಿಸಿರುತ್ತಾರೆ. ಆದರೆ, ಕೆಲವೊಮ್ಮೆ ಮಕ್ಕಳಿಂದಲೇ ಸಮಸ್ಯೆಗಳು ಬಂದರೆ..?? ಮಕ್ಕಳು ಮಾಮೂಲಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾ.. ಆರೋಗ್ಯವಂತರಾಗಿದ್ದರೆ ಅದಕ್ಕಿಂತ ಹೆಚ್ಚಿನ ಭಾಗ್ಯ ಇರಲಾರದು ಎಂದು ಭಾವಿಸುವ ತಂದೆ-ತಾಯಿಯರೂ ಇರುತ್ತಾರೆ. ಅದರಲ್ಲಿ ಬುದ್ಧಿಮಾಂದ್ಯ ಮಕ್ಕಳ ತಂದೆ-ತಾಯಿಗಳ ಆಲೋಚನೆ ಹೀಗಿರುತ್ತದೆ ಎಂದರೆ ತಪ್ಪಾಗಲಾರದು. ಅಂತಹಾ ಬುದ್ಧಿಮಾಂದ್ಯ ಮಕ್ಕಳಲ್ಲಿ ಗಂಡು ಮಗು ಬುದ್ಧಿಮಾಂದ್ಯವಾದಾಗ ಅದು ಬೆಳೆಯುತ್ತಾ ಹೋದಂತೆ, ತಂದೊಡ್ಡುವ ಸಮಸ್ಯೆಗಳು, ಮಗುವಿಗೆ ಆಗುವ ಎಷ್ಟೋ ಸಮಸ್ಯೆಗಳು, ಅದರಿಂದ ಉಂಟಾಗುವ ಬದಲಾವಣೆಗಳು ಎಲ್ಲವನ್ನೂ ಚಿತ್ರಿಸಿರುವ ಕಾದಂಬರಿ 'ನಿಷ್ಕ್ರಮಣ'.
ಲೇಖಕಿ ಪ್ರೇಮಾ ಭಟ್ ಅವರು ಪತ್ರಿಕೆಯ ವರದಿಯೊಂದರಲ್ಲಿ ನೂರಕ್ಕೆ ನಾಲ್ಕು ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತವೆ ಎಂದು ಓದಿದಾಗ ಅಂತಹಾ ಸಂಸ್ಥೆಯನ್ನು ಭೇಟಿ ಮಾಡಿ ಆ ಕುರಿತು ಬರೆಯಬೇಕು ಎಂದುಕೊಂಡಾಗ ಬುದ್ಧಿಮಾಂದ್ಯ ಮಕ್ಕಳ ಕಲ್ಯಾಣವನ್ನು ಬಯಸಿದಂತಹಾ ಒಂದು ಸಂಸ್ಥೆಗೆ ಭೇಟಿ ನೀಡಿ ಅಲ್ಲಿ ಮಕ್ಕಳ ತಾಯಂದಿರನ್ನು ಹಾಗೂ ಸಂಸ್ಥೆಯಲ್ಲಿರುವವರನ್ನು ಸಂದರ್ಶಿಸಿ ಅಂತಹಾ ಮಕ್ಕಳ ಉಪಯೋಗಕ್ಕಾಗಿಯೇ ಇರುವ ಸಲಕರಣೆಗಳ ಕುರಿತಾಗಿ ತಿಳಿದು, ಅದೆಲ್ಲವನ್ನು ಚಿತ್ರಿಸಿರುವ ಕಾದಂಬರಿ ಇದು.
'ಸೋತವರ ಬದುಕನ್ನು ಹಸಿರು ಮಾಡಲು ಮನಸ್ಸಿದ್ದವರು ಬರಿದೇ ಮಾತನಾಡುವುದಿಲ್ಲ. ಕೆಲಸ ಮಾಡಿ ತೋರಿಸುತ್ತಾರೆ' ಎಂದು ಇಂತಹಾ ಸಂಸ್ಥೆಗಳ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ. ಇದು ಕಾಲ್ಪನಿಕ ಕಾದಂಬರಿ ಎಂದರೂ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದೆ. ತರಂಗದಲ್ಲಿಯೂ ಧಾರಾವಾಹಿಯ ರೂಪದಲ್ಲಿ ಪ್ರಕಟವಾಗಿತ್ತು.
ಸರಸ್ವತಿ ಹಾಗೂ ಮದನರ ಮಗನಾಗಿ ಹುಟ್ಟಿದ್ದ ಚಂದ್ರ ಎಲ್ಲಾ ಮಕ್ಕಳಂತಲ್ಲ. ಅವನ ಭಾಷೆ ತಾಯಿಗೂ ಅರ್ಥವಾಗದು. ತಾಯಿಯ ಭಾಷೆ ಅವನಿಗೂ ಅರ್ಥವಾಗದು. ಕೆಲವೊಮ್ಮೆ ಪ್ರತಿಕ್ರಿಯಿಸದಿದ್ದರೆ, ಇನ್ನೊಮ್ಮೆ ಅತಿಯಾದ ಚೇಷ್ಟೆ. ಎಲ್ಲಾ ಸಮಯದಲ್ಲಿಯೂ ಅವನನ್ನು ಕಾಯಬೇಕು. ಕೆಲವೊಮ್ಮೆ ಅವನನ್ನು ಕೊಠಡಿಯೊಳಗೆ ಕೂಡಿ ಹಾಕುವುದುಂಟು. ಗುರುತು ಪರಿಚಯದವರು, ಮನೆಗೆ ಬಂದವರೆಲ್ಲರೂ ಬುದ್ಧಿಮಾಂದ್ಯ ಹುಡುಗನನ್ನು ಮನೆಯಲ್ಲಿಟ್ಟುಕೊಂಡು ಏನು ಮಾಡುತ್ತೀರಿ ಎಂದು ಕೇಳಿದವರಿದ್ದಾರೆ. ಹಾಗೆಂದು ಬಳ್ಳಿಗೆ ಕಾಯಿ ಭಾರವೇ..?? ತಾಯಿಗೆ ಮಗು ಭಾರವೇ..?? ಚಂದ್ರ ಸರಸ್ವತಿಗೆ ಮುದ್ದಿನ ಮಗ.
ಮದನನಿಗೆ ಸರಸ್ವತಿಯಷ್ಟು ತಾಳ್ಮೆಯಿಲ್ಲ. ಆತನಿಗೆ ಈ ಮಗು ಯಾಕಾದರೂ ಹುಟ್ಟಿತು ಎಂಬ ಭಾವ. ಆದರೆ, ಸರಸ್ವತಿಯ ಸೋತ ಮುಖವನ್ನು ನೋಡುತ್ತಾ.. ಅವಳ ತಾಳ್ಮೆಯನ್ನು, ಮಾತೃ ಮಮತೆಯನ್ನು ಕಂಡು ಸುಮ್ಮನಾಗುತ್ತಾನೆ. ಈ ಚಂದ್ರ ಸತ್ತಾದರೂ ಹೋಗಬಾರದೇ ಎಂದು ಕೆಲವೊಮ್ಮೆ ಅವನಿಗೆ ಅನ್ನಿಸುತ್ತದೆ.
ಈ ಬುದ್ಧಿಮಾಂದ್ಯ ಮಗುವಿನ ಜೊತೆ ಯಾವುದಾದರೂ ಒಂದು ಹೆಣ್ಣು ಮಗುವನ್ನು ತಂದು ಸಾಕಿಕೊಂಡರೆ ಎಂದು ಸರಸ್ವತಿಯ ಆಲೋಚನೆ. ಆದರೆ, ಬುದ್ಧಿಮಾಂದ್ಯ ಮಕ್ಕಳ ಜೊತೆ ಸರಿಯಾಗಿರುವ ಮಕ್ಕಳನ್ನು ಬೆಳೆಸುವುದಕ್ಕೆ ಯಾರು ಇಷ್ಟಪಡುತ್ತಾರೆ ಎಂದು ಮದನ ಕೇಳಿದರೂ.. ಸರಸ್ವತಿ ಬಡಪೆಟ್ಟಿಗೆ ಜಗ್ಗದೆ, ನಚಿಕೇತ ಮನೋವಿಕಾಸ ಕೇಂದ್ರ ಎಂದು ಒಂದು ಬುದ್ಧಿಮಾಂದ್ಯರ ಹುಡುಗರ ಶಾಲೆ ಇದೆಯಂತೆ. ಅಲ್ಲಿಂದಲೇ ಯಾವುದಾದರೂ ಮಗುವನ್ನು ದತ್ತು ಪಡೆಯಬಹುದಲ್ಲಾ ಎಂಬ ಆಲೋಚನೆಯಲಿದ್ದಳು. ಗಂಡು ಮಗುವಾಗಿ ಚಂದ್ರನಿದ್ದಾನೆ, ಹೆಣ್ಣು ಮಗುವಾದರೆ ಸ್ವಲ್ಪ ಪ್ರೀತಿ, ವಾತ್ಸಲ್ಯದಿಂದ ತಿದ್ದಿ ತೀಡಬಹುದು. ಹೆಣ್ಣು ಮಗುವಾಗಿ ನನಗೆ ಅವಳಾದರೂ ಇರುತ್ತಾಳೆ ಎಂಬ ಭಾವ ಸರಸ್ವತಿಗೆ.
ನಚಿಕೇತ ಮನೋವಿಕಾಸ ಕೇಂದ್ರದಲ್ಲಿ ಸಂಸ್ಥಾಪಕನಾಗಿರುವ ರಮಾನಂದ ಮದನನ ಬಾಲ್ಯದ ಗೆಳೆಯ. ಅಲ್ಲಿಗೆ ಭೇಟಿ ನೀಡಿದಾಗ ಅಲ್ಲಿ ತಾಳ್ಮೆಯಿಂದ ಕಲಿಸುವ ಶಿಕ್ಷಕಿ ಕಾಂತಿಯನ್ನು ನೋಡಿ ಮದನನಿಗೆ ಅಚ್ಚರಿಯಾಗಿತ್ತು. ಇಷ್ಟು ತಾಳ್ಮೆಯಿಂದ ಕಲಿಸುವ ಶಿಕ್ಷಕಿಯರು ಇರುತ್ತಾರಾ..?! ಒಂದು ಮಗುವನ್ನೇ ತಾಯಿ ನೋಡಿಕೊಳ್ಳಲು ಕಷ್ಟಪಡುವಾಗ ಹೀಗೂ ಇರುತ್ತಾರಾ ಎಂಬ ಅವನ ಯೋಚನೆಯನ್ನು ತಲೆಕೆಳಕಾಗಿಸಿದ್ದಳು ಕಾಂತಿ.
ಅಲ್ಲಿನ ಸಲಹೆಯ ಮೇರೆಗೆ ಹೀರೋ ಕೀಪ್ ಫಿಟ್ ಸೈಕಲ್ ಮನೆಗೆ ಬಂತು. ಮನೋವಿಕಾರದ ಮಕ್ಕಳಿಗಾಗಿಯೇ ಅದನ್ನು ತಯಾರಿಸಿದ್ದು. ಅವರ ಕೈಕಾಲುಗಳಿಗೆ ಶಕ್ತಿ ತುಂಬಲು ಅದು ಉಪಯೋಗವಾಗುತ್ತಿತ್ತು. ಚಂದ್ರನ ಪರಿಸ್ಥಿತಿಯು ಸುಧಾರಿಸುತ್ತಾ ಬಂತು. ರಮಾನಂದ ಮನೆಗೆ ಬಂದು ಹೋಗುತ್ತಿದ್ದಾಗ ಸರಸ್ವತಿ ಒಂದು ಹೆಣ್ಣು ಮಗುವನ್ನು ಜೊತೆಯಲ್ಲಿ ಬೆಳೆಸುವ ತನ್ನ ಆಸೆಯನ್ನು ತೋಡಿಕೊಂಡಾಗ, ಅಂತಹಾ ಮಕ್ಕಳ ಬದಲಾಗಿ ಚುರುಕಾಗಿರುವ ಹೆಣ್ಣು ಮಗು ಜೊತೆಯಲ್ಲಿದ್ದರೆ ಆತನೂ ಚುರುಕಾಗಬಹುದು ಎಂಬ ಸಲಹೆ ನೀಡಿದರು. ಜೊತೆಗೆ ತನ್ನ ಮೊಮ್ಮಗಳು ಪುಟ್ಟ ಗಂಗಲಕ್ಷ್ಮೀ ಇದ್ದಾಳೆ. ತನ್ನ ಮಗ-ಸೊಸೆ ಕೆಲಸಕ್ಕೆ ಹೋಗುವುದರಿಂದ ಅವಳನ್ನು ನೋಡಿಕೊಳ್ಳಲು ಯಾರೂ ಇಲ್ಲದಿರುವುದರಿಂದ.. ಮಧ್ಯಾಹ್ನ ಶಾಲೆಯ ನಂತರ ಇಲ್ಲಿಗೆ ಬಂದರೆ ಚಂದ್ರನಿಗೂ ಜೊತೆಯಾಗುತ್ತಾಳೆ ಎಂದರು. ಸರಸ್ವತಿಗೆ ಬಹಳ ಖುಷಿಯಾಗಿತ್ತು.
ಸರಸ್ವತಿಗೆ ಇತ್ತೀಚೆಗೆ ಆರೋಗ್ಯದ ಸಮಸ್ಯೆಯೂ ಕಾಣಿಸಿಕೊಂಡು ಸ್ಕ್ಯಾನಿಂಗ್ ಮಾಡಿಸಿದಾಗ ತಲೆಯಲ್ಲಿ ಟ್ಯೂಮರ್ ಆಗಿದೆಯೆಂದು ತಿಳಿದು ಬಂದಿತ್ತು. ಅದನ್ನು ಆಪರೇಷನ್ ಮಾಡದೇ ವಾಸಿ ಮಾಡುವಂತಿರಲಿಲ್ಲ. ಹಾಗೆಂದು, ಚಂದ್ರನನ್ನು ಒಬ್ಬನನ್ನೇ ಬಿಡುವಂತಿರಲಿಲ್ಲ.
ಕಾಂತಿ ತಾನು ಚಂದ್ರನಿಗೆ ಕಲಿಸಬೇಕಾದ ಬಹಳಷ್ಟನ್ನು ಕಲಿಸಿದ್ದೇನೆ. ಆದರೆ, ಆತನಿಗೆ ಈಗ ಹದಿಹರೆಯದ ವಯಸ್ಸು. ನೈಸರ್ಗಿಕವಾಗಿ ಅವನ ದೇಹದಲ್ಲಿ ಆಗುವ ಬದಲಾವಣೆಗಳನ್ನು ಅವನಿಗೆ ತಡೆದುಕೊಳ್ಳಲು ಸಾಧ್ಯವಾಗದಾಗ ಬೇರೆ ರೀತಿಯ ಸಮಸ್ಯೆ ಆಗಬಹುದೆಂದು.. ಅದಕ್ಕೆ ಪರಿಹಾರವನ್ನು ತಿಳಿಸಿದರು. ಆದರೆ, ಸರಸ್ವತಿ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ.
ಗಂಗಲಕ್ಷ್ಮಿ ಚಂದ್ರನ ಜೊತೆ ಹೊಂದಿಕೊಳ್ಳುತ್ತಿದ್ದಾಳಾದರೂ.. ಕೆಲವೊಮ್ಮೆ ಚಂದ್ರನಂತೆಯೇ ಆಡಲು ಶುರು ಮಾಡುತ್ತಿದ್ದಳು. ಆದರೆ, ಚುರುಕಾದ ಮಕ್ಕಳು ಹಾಗಾಗುವುದಿಲ್ಲವೆಂದು ರಮಾನಂದರೇ ಧೈರ್ಯ ತುಂಬಿದ್ದರು. ಸರಸ್ವತಿಗಂತೂ ಗಂಗಲಕ್ಷ್ಮಿ ಎಂದರೆ ಮಗಳಂತೆಯೇ ಆಗಿ ಹೋಗಿದ್ದಳು.
ಪಕ್ಕದ ಮನೆಯ ಕಮಲಾಬಾಯಿ ಈ ನಡುವೆ ಸರಸ್ವತಿಗೆ ಚಂದ್ರನ ವರ್ತನೆಯ ಕುರಿತು ಎಚ್ಚರಿಸಿದ್ದರು. ಆ ಎಚ್ಚರಿಕೆ ಸರಸ್ವತಿಗೆ ಕೋಪವನ್ನೇ ತರಿಸಿತ್ತು. ಇಷ್ಟಾದರೂ.. ಅವನು ಅವಳ ಮಗನಲ್ಲವೇ..?? ಇದಾದ ಕೆಲದಿನಗಳ ಅಂತರದಲ್ಲಿಯೇ ಸರಸ್ವತಿ ಆಯಾಸದಲ್ಲಿ ಮಲಗಿದ್ದಾಗ, ಚಂದ್ರ ಗಂಗಲಕ್ಷ್ಮಿಯ ಮೇಲೆ ಅತ್ಯಾಚಾರ ನಡೆಸಿದ. ಇದು ಆತನಿಗೆ ತಿಳಿದು ಆದದ್ದಲ್ಲ.. ಆದರೆ, ಅದರ ಪರಿಣಾಮ ಬಹಳ ಭೀಕರವಾಗಿತ್ತು. ಸರಸ್ವತಿಗೆ ತಿಳಿಯದಂತೆ ಮದನನೇ ನಿಭಾಯಿಸಿದನಾದರೂ.. ಗಂಗಲಕ್ಷ್ಮೀಯ ಸಾವು ಆತನಲ್ಲಿ ಅಪರಾಧಿ ಭಾವ ಹುಟ್ಟಿಸಿತ್ತು. ರಮಾನಂದರಿಗೆ ವಿಷಯ ತಿಳಿದರೂ ಮನೆಯಲ್ಲಿ ಬೇರೆಯದ್ದೇ ಕಾರಣ ಹೇಳಿ ಈ ವಿಚಾರವನ್ನು ಬೆಳೆಯಗೊಡಲಿಲ್ಲ.
ಸರಸ್ವತಿಗೆ ಆಪರೇಷನ್ ಆಗುವ ಸಂದರ್ಭದಲ್ಲಿ ಚಂದ್ರನನ್ನು ನೋಡಿಕೊಳ್ಳಲು ಒಂದು ವ್ಯವಸ್ಥೆಯಾಗಬೇಕಿತ್ತು. ಆಕೆ ಮನೋವಿಕಾಸ ಕೇಂದ್ರಕ್ಕೆ ಬಿಡಲು ಸಿದ್ಧಳಿರಲಿಲ್ಲ. ಬದಲಾಗಿ, ತನ್ನ ಅಣ್ಣನ ಮಗಳು ಶ್ರೀಲಕ್ಷ್ಮಿಯನ್ನು ಇಲ್ಲಿಗೇ ಕರೆದುಕೊಂಡು ಬಂದರೆ ಅವರ ಬಡತನಕ್ಕೂ ಸಹಾಯವಾಗುತ್ತದೆ. ಜೊತೆಗೆ ಇಲ್ಲಿಯ ವ್ಯವಸ್ಥೆಯೂ ಆಗುತ್ತದೆ ಎಂದುಕೊಂಡಳು.
ಶ್ರೀಲಕ್ಷ್ಮಿ ಇಲ್ಲಿಗೆ ಚೆನ್ನಾಗಿಯೇ ಹೊಂದಿಕೊಂಡಳು. ಚಂದ್ರನ ಭವಿಷ್ಯದ ಬಗ್ಗೆ ಮದನನಿಗೆ ಕನಸುಗಳಿರಲಿಲ್ಲವಾದ್ದರಿಂದ ಈಕೆಗೆ ವಿವಾಹ ಮಾಡಿ ಮನೆ ಅಳಿಯನನ್ನು ಮಾಡಿಕೊಂಡು.. ಮುಪ್ಪಿನಲ್ಲಿ ಇವರ ಆಸರೆಯಲ್ಲಿ ಇರಬಹುದೆಂದು ಯೋಚಿಸಿದ್ದ. ಶ್ರೀಲಕ್ಷ್ಮಿ ಅತ್ತೆ-ಮಾವರ ಜೊತೆಗೆ ಹೊಂದಿಕೊಳ್ಳುವುದಲ್ಲದೆ, ಚಂದ್ರನ ಕುರಿತು ಕಾಳಜಿ ತೋರುತ್ತಿದ್ದಳು. ಆದರೂ.. ಅವನ ವರ್ತನೆಗೆ ಕೆಲವೊಮ್ಮೆ ಭಯವಾಗುತ್ತಿತ್ತು ಕಮಲಾಬಾಯಿ ಆಕೆಗೆ ಆಗಾಗ ಎಚ್ಚರಿಕೆ ನೀಡುತ್ತಿದ್ದರು.
ಆಪರೇಷನ್ ಮುಗಿಸಿ ಬಂದ ನಂತರವೂ ಸರಸ್ವತಿ ಚೇತರಿಸಿಕೊಳ್ಳಲಿಲ್ಲ. ಕೆಲವು ದಿನಗಳ ನಂತರ ಅವಳು ಮರಣ ಹೊಂದಿದಳು. ಈಗ ಆ ಮನೆಗೆ ಬೆಳಕಾದವಳು ಶ್ರೀಲಕ್ಷ್ಮಿ. ಆದರೆ, ಚಂದ್ರ ಗಂಗಲಕ್ಷ್ಮಿಯ ಮೇಲೆ ಮಾಡಿದ ವರ್ತನೆಯನ್ನೇ ಶ್ರೀಲಕ್ಷ್ಮಿಯ ಜೊತೆಗೂ ಮಾಡಿದ್ದ. ಇದರ ಪರಿಣಾಮ ಮುಂದೇನಾಯಿತು..??
ಎಲ್ಲವೂ ಗೊತ್ತಿದ್ದರೂ.. ಮದನ ತಾನಾಗಿಯೇ ಹೀಗಾಗಲಿ ಎಂದು ಪ್ರೋತ್ಸಾಹ ನೀಡಿದ್ದರಲ್ಲಿ ಆತನ ಸ್ವಾರ್ಥವೂ ಇತ್ತಾದರೂ.. ಆತನ ಸ್ವಾರ್ಥ ಅಷ್ಟು ಮೇರೆ ಮೀರಬೇಕಿರಲಿಲ್ಲ.
ಶ್ರೀಲಕ್ಷ್ಮಿಯ ಬಳಿ ನಯವಾಗಿಯೇ ಇದೆಲ್ಲವನ್ನು ಪರಿಹರಿಸುವವನಂತೆ ಕಂಡರೂ.. ಮದನನ ಆಲೋಚನೆಯೇ ಬೇರೆಯೇ ಇತ್ತು. ಅದೇನು..??
ಶ್ರೀಲಕ್ಷ್ಮಿ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದಳು..?? ಆಕೆಗೆ ಹುಟ್ಟಿದ ಮಗು ಸಾಮಾನ್ಯವಾಗಿತ್ತೇ..?? ಅಥವಾ ಅದು ಚಂದ್ರನ ಪರಿಸ್ಥಿತಿಯಲ್ಲಿಯೇ ಇತ್ತೇ..?? ಚಂದ್ರನನ್ನು ಮದನ ಏನು ಮಾಡಿದ..?? ಗಂಗಲಕ್ಷ್ಮಿಯ ತಂದೆ-ತಾಯಿಯ ಪ್ರತಿಕ್ರಿಯೆ ಏನು..?? ಆಕೆಯ ಭವಿಷ್ಯ ಏನಾಯಿತು..??
ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ನಿಷ್ಕ್ರಮಣ ಕಾದಂಬರಿಯನ್ನು
ಅಪರೂಪದ ಸಮಸ್ಯೆ ಎಂದು ಕಂಡುಬಂದರೂ.. ಬುದ್ಧಿಮಾಂದ್ಯ ಮಕ್ಕಳಲ್ಲಿ ಕಂಡುಬರುವ ಒಂದು ಗಂಭೀರ ಸಮಸ್ಯೆಯನ್ನು ಆಲೋಚಿಸುವಂತೆ ಕಟ್ಟಿಕೊಟ್ಟಿರುವ ಕಾದಂಬರಿ ಇದು. ಅಂತ್ಯ ಬಹಳ ವಿಭಿನ್ನವಾಗಿ ಮೂಡಿ ಬಂದಿರುವುದು, ಓದುಗರಿಗೆ ಕೊಂಚವಾದರೂ ಸಮಾಧಾನ ತರುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ