ಶನಿವಾರ, ಏಪ್ರಿಲ್ 18, 2026

ಒಲವಿನ ಪ್ರಿಯಲತೆ (ಪುಸ್ತಕ ಯಾನ - 248)


ಪುಸ್ತಕದ ಶೀರ್ಷಿಕೆ : ಒಲವಿನ ಪ್ರಿಯಲತೆ

ಲೇಖಕರು : ಮೀನಾ ಹರೀಶ್ ಕೋಟ್ಯಾನ್

ಪ್ರಕಾಶಕರು : ಓಂ ಶಕ್ತಿ ಪ್ರಕಾಶನ

ಪ್ರಥಮ ಮುದ್ರಣ : 2007


ಒಲವಿನ ಪ್ರಿಯಲತೆ ಅರಳಲು ಸಮಯ ಬೇಕಾಗಬಹುದು ಅಥವಾ ಅದು ಮನಸ್ಸು-ಮನಸ್ಸುಗಳ ನಡುವೆ ಹಠಾತ್ತನೆಯೂ ಅರಳಬಹುದು. ಆದರೆ, ಎರಡಕ್ಕೂ ವ್ಯತ್ಯಾಸವಿದೆ. ಇಲ್ಲಿನ ಪ್ರೇಮ ಕಥೆಯಲ್ಲಿ ಒಲವಿನ ಪ್ರಿಯಲತೆ ಬಾಗಿದ್ದು ಯಾರ ಕಡೆಗೆ ಎಂಬುದನ್ನು ಕೊನೆಯವರೆಗೂ ಗುಟ್ಟು ಬಿಟ್ಟುಕೊಡದಂತೆ ಕಟ್ಟಿಕೊಡುತ್ತಾ ಹೋಗಿದ್ದಾರೆ ಲೇಖಕಿ. 


ರಾಜಶೇಖರ್ ಹಾಗೂ ಇಂದುಮತಿಯವರ ಮಗಳು ಪ್ರಿಯಲತಾ ಪಿ.ಯು.ಸಿ ಯಲ್ಲಿ ಒಂದು ಸಬ್ಜೆಕ್ಟ್ ಹೋದ ನಂತರ ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದಳು. ಆದರೆ, ಇತ್ತೀಚೆಗೆ ಅವಳ ಗೆಳತಿಯ ಜೊತೆ ನಡೆದ ಮಾತುಕತೆಯಿಂದ ಕೆಲಸಕ್ಕೆ ಹೋಗಬೇಕೆಂದು ತೀರ್ಮಾನಿಸಿದಳು. ಅಂತಹಾ ಮಹತ್ವದ ತೀರ್ಮಾನಕ್ಕೆ ಕಾರಣವಾದ ಘಟನೆ ಯಾವುದೆಂದು ನೀವೇ ಓದಿ ತಿಳಿಯಿರಿ.


ಆದರೆ, ಅವಳಿಗೆ ಓದಿಗೆ ತಕ್ಕಂತಹ ಕೆಲಸ ಸಿಗುವುದು ಕಷ್ಟವಿತ್ತು. ಅದೇ ಸಮಯದಲ್ಲಿ ಹಳೆಯ ಪರಿಚಯದವರಾಗಿದ್ದ ಶ್ರೀನಿವಾಸಮೂರ್ತಿಯವರು ಏನೋ ಒಂದು ಕೆಲಸ ಸೃಷ್ಟಿಸಿ ಕೊಡ್ತೀನಿ. 10 ನಿಮಿಷದ ಸಂದರ್ಶನಕ್ಕೆ ಬಂದರೆ ಸಾಕು ಎಂದು ಹೇಳಿ ಕಳುಹಿಸಿದ್ದರು. ಆದರೆ, ಅಲ್ಲಿಗೆ ಹೋಗುವ ಮುನ್ನ ನಡೆದ ಘಟನೆಯಿಂದ ಸಂದರ್ಶನವನ್ನು ತಪ್ಪಿಸಿ ತಾಯಿಯ ಕೆಂಗಣ್ಣಿಗೂ ಗುರಿಯಾಗಿದ್ದಳು. 


ಮನೆಯಿಂದ ಹೊರಟವಳು ಮುಂದಿನ ಬೀದಿಗೆ ಬರುವಷ್ಟರಲ್ಲಿ ಜೋರು ಮಳೆ ಬಂದು ಅಲ್ಲೇ ಇದ್ದ ಮನೆಯೊಂದರ ಮೆಟ್ಟಿಲ ಬಳಿ ಆಶ್ರಯ ಪಡೆದಳು. ಇನ್ನೇನು ಹೊರಡುವ ಸಮಯದಲ್ಲಿ ಯಾರೋ ನೋವಿನಿಂದ ನರಳುತ್ತಿದ್ದ ಸದ್ದು ಕೇಳಿ ಕಿಟಕಿಯಲ್ಲಿ ಇಣುಕಿ ನೋಡಿದರೆ.. ಜ್ಞಾನ ತಪ್ಪಿದ ಹಾಗೆ ಬಿದ್ದಿದವರನ್ನು ಕಂಡಳು. ತಲೆಯ ಸುತ್ತ ರಕ್ತವೂ ಇತ್ತು. ಅವರನ್ನು ಹಾಗೆಯೇ ಬಿಟ್ಟು ಹೋಗಲು ಮನಸ್ಸಾಗದೆ, ಸುತ್ತಮುತ್ತಲಿನವರ ಮನೆಯ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದಳು. ಅದರಲ್ಲೂ ಶಿವಾನಂದರ ಸಹಾಯ ಹೆಚ್ಚೇ ಇತ್ತು. ತಂದೆಯೂ ಜೀವ ಉಳಿಸಿದ ಇವಳ ಕೆಲಸವನ್ನು ಹೊಗಳಿದ್ದರು.


ಪ್ರಿಯಲತಾಳ ಮನೆಯಲ್ಲಿ ದುಡಿಯುವ ಅನಿವಾರ್ಯವೇನೂ ಇರಲಿಲ್ಲ. ರಾಜಶೇಖರ್ ಅವರೇ 'ಅನ್ನಪೂರ್ಣ ಗ್ಲಾಸ್ ಅಂಡ್ ಪ್ಲೈವುಡ್' ಅಂಗಡಿ ನಡೆಸುತ್ತಿದ್ದರು. ಜನನಿಬಿಡ ಸ್ಥಳಗಳಲ್ಲಿದ್ದ ಅಂಗಡಿಯಲ್ಲಿ ಚೆನ್ನಾಗಿಯೇ ವ್ಯಾಪಾರವಾಗುತ್ತಿತ್ತು. ಇವಳು ಕೇವಲ ನಿಗಾ ಇಟ್ಟು ಕೂತರೆ ಸಾಕಿತ್ತು. ಆದರೆ ಪ್ರಿಯಲತಾಗೆ ಅದು ಇಷ್ಟವಿರಲಿಲ್ಲ.


ಅಷ್ಟರಲ್ಲಾಗಲೇ ಮನೆಯಲ್ಲಿ ರಾಘು ಮಾವನ ಮಗ ಸಂಜಯ್ ನಿಗೆ ನಿನ್ನನ್ನು ಮದುವೆ ಮಾಡಿಕೊಡಬೇಕೆಂದುಕೊಂಡಿದ್ದೇವೆ ಎಂದಾಗ ಪ್ರಿಯಾಳ ಮನಸ್ಸಿನಲ್ಲಿ ಕೋಲಾಹಲವೆದ್ದಿತ್ತು. ಹಾಗೆಂದು ಆಕೆ ಆತನನ್ನು ದ್ವೇಷಿಸುತ್ತಿರಲಿಲ್ಲ. ಬದಲಾಗಿ, ಅವಳ ಮನಸ್ಸಿನಲ್ಲಿ ಇದ್ದ ಆತಂಕವೇ ಬೇರೆ. ಮನೆಯ ಮಗನಂತಿದ್ದ ಪ್ರಬುದ್ಧ ವ್ಯಕ್ತಿತ್ವದ ಸಂಜಯ್ ನನ್ನು ಪ್ರಿಯಲತಾ ಒಪ್ಪದಿರಲು ಕಾರಣ ಬೇರೆಯೇ ಇತ್ತು. 


ಪ್ರಿಯಲತಾಳ ಅಕ್ಕ ಪ್ರೇಮಾಳನ್ನು ಸಂಜಯ್ ವಿವಾಹವಾಗಬೇಕೆಂದುಕೊಂಡಿದ್ದ. ಆತ ಪ್ರೇಮಾಳನ್ನು ಪ್ರೀತಿಸುತ್ತಿದ್ದನು. ಆದರೆ, ಪ್ರೇಮಾ ಸುರೇಶ್ ನನ್ನು ಪ್ರೀತಿಸಿ ಆತನನ್ನೇ ವಿವಾಹವಾಗಬೇಕೆಂದು ಸಂಜಯನನ್ನು ವಿವಾಹವಾಗಲು ಒಪ್ಪಲಿಲ್ಲ. ಈಗ ಪ್ರೇಮ ತನ್ನ ಗಂಡ ಹಾಗೂ ಮಗಳು ಲಿಖಿತಾ ಜೊತೆಗೆ ಸುಖವಾಗಿದ್ದಳು. ಅಕ್ಕನನ್ನು ಮನಸ್ಸಿನಲ್ಲಿಟ್ಟುಕೊಂಡ ಗಂಡು ತನಗೆ ಬೇಡವೆಂಬ ಕಾರಣದಿಂದ ಪ್ರಿಯಲತಾ ಆತನನ್ನು ಒಪ್ಪಿರಲಿಲ್ಲ. ಅದನ್ನು ನೇರವಾಗಿ ಹೇಳಲಾಗದೆ ಒಂದು ತಿಂಗಳ ಸಮಯ ಕೇಳಿದಳು.


ಸಂಜಯ್ ಜೊತೆ ಮಾತನಾಡಿ ಗೆಳತಿ ರಾಜೇಶ್ವರಿಯ ಮನೆಗೆ ಹೋಗಿ ಬರುವಷ್ಟರಲ್ಲಿ ಪ್ರಿಯಾಳ ಮನೆಗೆ ಆಕೆ ಅಂದು ಜೀವ ಉಳಿಸಿದ್ದ ವ್ಯಕ್ತಿ ವರುಣ್ ಬಂದಿದ್ದ. ನೋಡಲು ಸುಂದರ ಹಾಗೂ ಆಕರ್ಷಕ ವ್ಯಕ್ತಿತ್ವದವನು. ಆಕೆಗೆಂದು ಬಿಳಿ ಗುಲಾಬಿ ಹೂಗಳನ್ನು ತಂದು ಧನ್ಯವಾದಗಳನ್ನು ಹೇಳಿದ್ದನು. ಪ್ರಿಯಲತಾಳ ಮನಸ್ಸಿನಲ್ಲಿ ಆತ ಅನುರಾಗ ಮೂಡಿಸಿದ್ದ. ಆಕೆ ಸಂದರ್ಶನ ತಪ್ಪಿಸಿಕೊಂಡದ್ದನ್ನು ತಿಳಿದು ತನ್ನ ಕಂಪ್ಯೂಟರ್ ಸೆಂಟರ್ ನಲ್ಲಿ ಪರ್ಸನಲ್ ಸೆಕ್ರೆಟರಿ ಎಂಬ ಹುದ್ದೆಯನ್ನು ಸೃಷ್ಟಿಸಿ ಆಕೆಗೆ ಕೆಲಸ ಕೊಟ್ಟಿನು.


ಇಂದುಮತಿಯವರಿಗೆ ಇದು ಮನಸ್ಸಿಗೆ ಒಪ್ಪಿಗೆ ಆಗದಿದ್ದರೂ.. ಗಂಡನ ಮಾತಿನಿಂದ ಸಮಾಧಾನವಾಗಿದ್ದರು. ಆದರೆ, ರಾಜಶೇಖರ್ ರವರು ಸುತ್ತಮುತ್ತ ವಿಚಾರಿಸಲು ತಪ್ಪಿ ಹೋಗಿ ಅವರ ಪತ್ನಿಯ ಮನಸ್ಸಿಗೆ ಸಮಾಧಾನವಾಗಲೆಂದು ಎಲ್ಲವೂ ಚೆನ್ನಾಗಿದೆ, ಒಳ್ಳೆಯ ಜಾಗ ಎಂಬ ಅಭಿಪ್ರಾಯವನ್ನೇ ನೀಡಿದಾಗ ಇಂದುಮತಿಯವರು ಮಗಳನ್ನು ಕಳುಹಿಸಿಕೊಡಲು ಯಾವುದೇ ತಕರಾರು ತೆಗೆಯಲಿಲ್ಲ. 


ಇತ್ತ ಕೆಲಸಕ್ಕೆ ಹೋಗುತ್ತಿದ್ದ ಪ್ರಿಯಲತಾಳಿಗೆ ವರುಣ್ ಮೇಲೆ ದಿನವೂ ಅನುರಾಗ ಹೆಚ್ಚುತ್ತಿತ್ತು. ಆತನ ನಡವಳಿಕೆ ಇಷ್ಟವಾದ ಮೇಲಂತೂ ಪ್ರೀತಿಯಲ್ಲಿ ಮುಳುಗಿದ್ದಳು. ಇತ್ತ ಸಂಜಯ್ ಕೊಟ್ಟ ಒಂದು ತಿಂಗಳ ಗಡುವು ಮುಗಿದ ಮೇಲೆ ಸಂಜಯ್ ಪ್ರಿಯಲತಾಳ ಮನಸ್ಸನ್ನು ತಾನೇ ಅರ್ಥ ಮಾಡಿಕೊಂಡು ತಾನು ಬೇರೆಯ ಹುಡುಗಿಯನ್ನು ವಿವಾಹವಾಗುತ್ತೇನೆಂದು ಪ್ರಬುದ್ಧವಾಗಿ ನಡೆದುಕೊಂಡಿದ್ದ. ವರುಣ್ ಕೆಲವೊಮ್ಮೆ ಪ್ರಿಯಲತಾಳನ್ನು ಮನೆಯವರೆಗೂ ಬಿಡುವ ವಿಷಯ ತಿಳಿದ ಇಂದುಮತಿ ಮಗಳ ಮೇಲೆ ಕೂಗಾಡಿ ಕೆಲಸಕ್ಕೆ ಹೋಗುವುದು ಬೇಡವೆಂದಿದ್ದರು. ಅಷ್ಟರಲ್ಲಿ ವರುಣ್ ತಾನೇ ಈ ಭಾನುವಾರ ಮನೆಗೆ ಬಂದು ತಂದೆಯೊಂದಿಗೆ ಮಾತನಾಡುತ್ತೇನೆಂದಿದ್ದ. ಅಷ್ಟರಲ್ಲಿ ರಾಜಶೇಖರ್ ಅವರು ಹೇಳಿದ ವಿಷಯ ಇಂದುಮತಿಯವರಿಗೆ ಆತಂಕ ತಂದಿತ್ತು.


ರಾಜಶೇಖರ್ ಗೆ ಗೊತ್ತಾದ ವಿಷಯವೂ.. ವರುಣ್ ಅಂದು ಮನೆಗೆ ಬಂದಾಗ ಹೇಳಿದ ವಿಷಯವು ಒಂದೇ ಆಗಿತ್ತು. ಅಂದು ಸಂಜಯ್ ಕೂಡಾ ಅದೇ ಸಮಯಕ್ಕೆ ಮನೆಗೆ ಬಂದಿದ್ದ. ಪ್ರಿಯಲತಾಳ ಕನಸಿನ ಗೋಪುರ ಕುಸಿದು ಬೀಳಲಿತ್ತು. 


ವರುಣ್ ಗೆ ಅದಾಗಲೇ ವಿವಾಹವಾಗಿತ್ತು. ಮದುವೆಯಾದ ಹುಡುಗಿ ಅಷ್ಟು ಸ್ಪುರದ್ರೂಪಿ ಅಲ್ಲದಿದ್ದರೂ.. ಅದು ಆತನಿಗೆ ಸಮಸ್ಯೆಯಾಗಿರಲಿಲ್ಲ. ಆದರೆ, ಆತನಿಗೆ ತಿಳಿಯದಂತೆ ಆತನ ತಂದೆ ವರದಕ್ಷಿಣೆ ಪಡೆದದ್ದನ್ನು ಆಕೆ ಪದೇಪದೇ ಎತ್ತಿ ಆಡಿ ವರುಣ್ ನನ್ನು ತನ್ನ ಕಾಲಕಸದಂತೆ ನೋಡುತ್ತಿದ್ದಳು. ಆಕೆಗೆ ಬೇರೆ ಪ್ರೇಮ ಪ್ರಕರಣವಿದ್ದುದರಿಂದ ಆಕೆ ಅವನ ಜೊತೆ ಓಡಿ ಹೋಗಬಾರದೆಂದು ವರುಣ್ ನೊಟ್ಟಿಗೆ ವಿವಾಹ ಮಾಡಿದ್ದರು. ಒಟ್ಟಿನಲ್ಲಿ ಪಲಿಪಶುವಾಗಿದ್ದ ವರುಣ್ ವಿಚ್ಛೇದನವನ್ನೂ ಪಡೆದಿದ್ದ. ಯಾರಿಗೂ ವರುಣ್ ಕುರಿತು ಕೆಟ್ಟ ಅಭಿಪ್ರಾಯವಿರಲಿಲ್ಲವಾದರೂ.. ಪ್ರಿಯಾಳ ಮನಸ್ಸು ಒಡೆದಿತ್ತು. ಆದರೆ, ವರುಣ್ ಅಂದು ಬಂದದ್ದು ಪ್ರಿಯಲತಾಳನ್ನು ತನ್ನ ತಮ್ಮ ಅರುಣ್ ನಿಗೆ ವಿವಾಹ ಮಾಡಿಕೊಡಬೇಕೆಂದು ಕೇಳಲು. ಆತನ ತಮ್ಮ ಅರುಣ್ ಕೂಡಾ ಅವನಂತೆ ಇದ್ದ. ಒಳ್ಳೆಯ ಕೆಲಸದಲ್ಲಿಯೂ ಇದ್ದ. ವರುಣ್ ತನಗಾಗಿ ವಿವಾಹ ಪ್ರಸ್ತಾಪ ತಂದಿರುವನೇನೋ ಎಂದು ಗಾಬರಿಯಾಗಿದ್ದ ಇಂದುಮತಿಯವರ ಮನಸ್ಸಿನ ಭಾರ ಇಳಿದಿತ್ತು. ಆದರೆ, ಪ್ರಿಯಲತಾ ಒಲಿದದ್ದು ಯಾರಿಗೆ..?


ವಿಚ್ಛೇದಿತನಾಗಿದ್ದರೂ ಸರಿ ತಾನು ಪ್ರೀತಿಸಿದ ವರುಣ್ ನನ್ನೇ  ಮದುವೆಯಾಗುತ್ತೇನೆ ಎಂದಳೇ ಅಥವಾ ತಾಯಿ-ತಂದೆಯರ ಸಲಹೆಯಂತೆ ಸಂಜಯ್ ಅವಳ ಆಯ್ಕೆಯಾದನೇ ಅಥವಾ ವರುಣ್ ತಮ್ಮ ಅರುಣ್ ನನ್ನು ವಿವಾಹವಾಗುತ್ತಾಳಾ..? ಇದೆಲ್ಲದಕ್ಕೂ ಸಂಜಯ್ ನ ಪ್ರತಿಕ್ರಿಯೆ ಹೇಗಿತ್ತು..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಒಲವಿನ ಪ್ರಿಯಲತೆ' ಕಾದಂಬರಿಯನ್ನು. 


ಕೆಲವೊಂದು ಪ್ರೇಮಗಳು ವಿಫಲವಾಗಬಹುದು. ಆದರೆ, ಆ ವಿಫಲ ಪ್ರೇಮದ ನಂತರವೂ ಒಂದು ಸುಂದರ ಪ್ರೇಮ ಜೊತೆಯಾಗುತ್ತದೆ. ಆದರೆ, ಎಲ್ಲರಿಗೂ ಅಂತಹಾ ಅದೃಷ್ಟವಿರಲಾರದು. ಆದರೆ, ಅರ್ಥ ಮಾಡಿಕೊಳ್ಳುವವರು ಮಾತ್ರ ಇಂತಹಾ ಪ್ರೇಮವನ್ನು ಗಳಿಸಿಕೊಳ್ಳಬಲ್ಲರು ಎಂಬ ಸುಂದರ ಆಶಯವನ್ನು ಹೊತ್ತ ಕಾದಂಬರಿ ಇಷ್ಟವಾಯಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ