ಶನಿವಾರ, ಏಪ್ರಿಲ್ 18, 2026

ಅವಳ ಮನೆ (ಪುಸ್ತಕ ಯಾನ - 245)


ಪುಸ್ತಕದ ಶೀರ್ಷಿಕೆ : ಅವಳ ಮನೆ

ಲೇಖಕರು : ತ್ರಿವೇಣಿ

ಪ್ರಕಾಶಕರು : ಭಾರತೀ ಪ್ರಕಾಶನ

ಮರು ಮುದ್ರಣ : 2019

ಪುಟಗಳು : 175

ಬೆಲೆ : 115 ರೂ.


ಮೇಷ್ಟ್ರಾಗಿದ್ದ ಸುಬ್ಬಣ್ಣನವರ ಕುಟುಂಬ ಬಡತನದಲ್ಲಿದ್ದರೂ ಮಕ್ಕಳ ವಿಚಾರದಲ್ಲಿ ಏನೂ ಬಡತನವಿರಲಿಲ್ಲ. ಸಾಲಾಗಿ ಆರು ಮಕ್ಕಳು. ಪತ್ನಿ ಭಾಗ್ಯ ಭಾಗ್ಯಮ್ಮ ಇದ್ದುದರಲ್ಲಿ ಸುಧಾರಿಸಿಕೊಂಡು ಹೋಗುತ್ತಿದ್ದರು.


ಮನೆಯ ಹಿರಿ ಮಗಳು ಶಾಂತಿ ತಾಯಿಯಂತೆ ಕೋಮಲವಾದ ಕೃಷವಾದ ಶರೀರ. 12 ವರ್ಷಗಳಿಗೆ ಜೀವನದ ಬಿಸಿಯನ್ನು ಅನುಭವಿಸಿ, ವಯಸ್ಸಿಗೆ ಮೀರಿದ ಗಾಂಭೀರ್ಯ ನೆಲೆಸಿತ್ತು. ತಾಯಿಗೆ ಬಾಣಂತನ ಮಾಡುವುದರಿಂದ ಅಡುಗೆಯವರೆಗೂ ನಿಪುಣೆಯಾಗಿದ್ದಳು ಶಾಂತಿ.


ಅವಳ ನಂತರ ಹುಟ್ಟಿದ್ದು ಶಾರದೆ. ಶಾಂತಿಗಿಂತ ಒಂದೂವರೆ ವರ್ಷ ಚಿಕ್ಕವಳು. ಈಕೆ ಶಾಂತಿಯಂತೆ ಚುರುಕಲ್ಲ, ಬುದ್ಧಿವಂತೆಯೂ ಅಲ್ಲ. ಮನೆಯ ಕೆಲಸಗಳಲ್ಲಿಯೂ ಅಷ್ಟೇನೂ ಕೈಜೋಡಿಸುತ್ತಿರಲಿಲ್ಲ. ಜೊತೆಗೆ ಖಾಯಿಲೆಯ ಹುಡುಗಿ, ಆಕೆಗೆ ಶಕ್ತಿ ಇಲ್ಲವೆಂದು ಭಾಗ್ಯಮ್ಮ ಆಕೆಯ ಕೈಯಲ್ಲಿ ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ. ರಕ್ತಹೀನತೆ, ನಿತ್ರಾಣದಿಂದ ಬಳಲುತ್ತಿದ್ದಳು ಶಾರದಾ. 


ಶಾರದೆಗಿಂತಲೂ ಒಂದು ವರ್ಷ ಚಿಕ್ಕವಳು ಅನಂತಲಕ್ಷ್ಮಿ. ಅನಂತವ್ರತದ ದಿನ ಹುಟ್ಟಿದವಳಾದ್ದರಿಂದ ಅವಳಿಗೆ ಅನಂತಲಕ್ಷ್ಮಿ ಎಂದು ನಾಮಕರಣ ಮಾಡಿದ್ದರು.ಮೂರನೇಯ ಮಗುವು ಹೆಣ್ಣಾದಾಗ ತಂದೆ-ತಾಯಿ ತೋರಿದ್ದ ಅನಾದರಣೆಯಲ್ಲಿಯೇ ಬೆಳೆದಿದ್ದಳು ಅನಂತು.


ಸರೋಜಿ ಅನಂತನಿಗಿಂತ ಒಂದು ವರ್ಷ ಚಿಕ್ಕವಳು. ಮೂರನೆಯ ಮಗಳಿಗೇ ಅನಾದರಣೆ ತೋರಿದ್ದ ತಂದೆ-ತಾಯಿ ಈಕೆಗೆ ಅವುಗಳ ಜೊತೆ ಮೂದಲಿಕೆಯನ್ನೂ ಸೇರಿಸಿದ್ದರು. ಹಿರಿಯವರು ಹಾಕಿಬಿಟ್ಟ ಬಟ್ಟೆ, ಊಟ ಇವಳ ಪಾಲಿಗೆ. ಆದರೆ, ಎಲ್ಲರಿಗಿಂತಲೂ ಬಹಳ ಆರೋಗ್ಯವಂತೆ. ಹರಕು ಬಟ್ಟೆ ಹಾಕಿದ್ದರೂ ಶ್ರೀಮಂತರ ಮನೆಯ ಹುಡುಗಿಯಂತೆಯೇ ದುಂಡು-ದುಂಡಾಗಿ ಬೆಳೆಯುತ್ತಿದ್ದಳು. 


ಸರೋಜಿಯ ನಂತರದವನೇ ಬಯಸಿ ಬಯಸಿ ಪಡೆದ ಮಗ. ಅಂತೂ ಕೊನೆಗೆ ಹುಟ್ಟಿದ್ದ ಮಗ ನರಸಿಂಹ. ನಾಲ್ಕು ಜನ ಅಕ್ಕಂದಿರ ಕಣ್ಣು ತಪ್ಪಿಸಿ ತಾಯಿ ಅವನಿಗೆ ತರಕಾರಿ, ಹಾಲು ನೀಡುತ್ತಿದ್ದರು. ಎಲ್ಲರಿಗಿಂತಲೂ ಹೆಚ್ಚಿನ ಪ್ರೀತಿ, ಸೇವೆ ಆತನಿಗೆ ಮುಡಿಪಾಗಿತ್ತು. ಅವನ ನಂತರ ಹುಟ್ಟಿದ್ದು ಸಾವಿತ್ರಿ. ಇನ್ನೂ ಚಿಕ್ಕ ಕೂಸು. 


ನರಸಿಂಹನ ಪರವೇ ಇದ್ದ ತಂದೆ-ತಾಯಿಯನ್ನು ಎದುರು ಹಾಕಿಕೊಳ್ಳಲು ಮೊದಲ ಮೂವರು ಹೆಣ್ಣುಮಕ್ಕಳು ಹಿಂದೆ-ಮುಂದೆ ನೋಡುತ್ತಿದ್ದರಾದರೂ.. ಸರೋಜಿ ಮಾತ್ರ ನರಸಿಂಹನಿಗೆ ತಗ್ಗುತ್ತಿರಲಿಲ್ಲ. ಅವರಿಬ್ಬರಿಗೆ ಜಗಳಗಳಂತೂ ಕಟ್ಟಿಟ್ಟ ಬುತ್ತಿ. 


ಇಂತಹಾ ಮನೆಯಲ್ಲೂ ಕಷ್ಟಪಟ್ಟು ಸುಧಾರಿಸಿಕೊಂಡು ಹೋಗುತ್ತಿದ್ದ ಸುಬ್ಬಣ್ಣನವರ ಮನೆಗೆ ಒಂದು ಕಾಗದ ಬಂದಿತ್ತು. ಅದನ್ನು ಹಿಡಿದುಕೊಂಡು ಮುಖ್ಯೋಪಾಧ್ಯಾಯರಾದ ನರಸಪ್ಪನವರ ಬಳಿ ಹೊರಟಿದ್ದರು ಸುಬ್ಬಣ್ಣ. ಹಾಗೆಂದು, ಅದು ವೃತ್ತಿಗೆ ಸಂಬಂಧಿಸಿದ ವಿಚಾರವಲ್ಲ. ಬದಲಾಗಿ ವೈಯಕ್ತಿಕ ವಿಚಾರವೇ.. ಎಲ್ಲದರಲ್ಲಿಯೂ ಅವರ ತೀರ್ಮಾನ ಕೇಳಿ ಮುಂದೆ ಸಾಗುತ್ತಿದ್ದ ಸುಬ್ಬಣ್ಣ ಇದನ್ನು ಬಿಡಿಸಿಟ್ಟರು.


ಮೈಸೂರಿನಲ್ಲಿರುವ ದೂರದ ನೆಂಟರೊಬ್ಬರು ಶ್ರೀಮಂತರು. ಆದರೆ, ಅವರಿಗೆ ಮಕ್ಕಳಿಲ್ಲದರಿಂದ ನಮ್ಮ ಮಗುವನ್ನು ದತ್ತು ಕೇಳುತ್ತಿದ್ದಾರೆ ಎಂದರು. ಆದರೆ, ದತ್ತು ವಿಚಾರವಾಗಿ ತೀರ್ಮಾನಿಸುವುದು ಸುಲಭವಾಗಿರಲಿಲ್ಲ. ಬಡತನದಿಂದಾಗಿ ಮಕ್ಕಳನ್ನು ಚೆನ್ನಾಗಿ ಸಾಕುವುದು ಕಷ್ಟವಿದ್ದರೂ ಮಕ್ಕಳನ್ನು ದೂರ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ನರಸಪ್ಪನವರ ಸಲಹೆಯಂತೆ ತನ್ನ ಪತ್ನಿಯನ್ನೇ ಕೇಳುವುದೆಂದು ಮನೆಗೆ ಬಂದರು. ಆದರೆ, ಭಾಗ್ಯಮ್ಮನವರಾದರೂ ಈ ಕುರಿತು ಹೇಗೆ ತಾನೇ ನಿರ್ಧರಿಸಲು ಸಾಧ್ಯ..?? ತನ್ನ ಒಂದು ಮಗುವಾದರೂ ಚೆನ್ನಾಗಿರಲಿ ಎಂಬ ದೂರದ ಆಸೆ ಇಬ್ಬರಲ್ಲೂ..


ಮಗುವನ್ನು ಕಳುಹಿಸಲು ನಿರ್ಧರಿಸಿ ಪುನಃ ಕಾಗದ ಬರೆದಾಗ ರಾಮಸ್ವಾಮಯ್ಯ ಹಾಗೂ ನಾಗಮ್ಮ ದಂಪತಿಗಳು ಬಂದರು. ಮಗನನ್ನು ಕೊಡಲಿಕ್ಕಾಗುವುದಿಲ್ಲವೆಂದೂ.. ಹೆಣ್ಣು ಮಕ್ಕಳಲ್ಲಿ ಯಾರಾದರೂ ಆಗಬಹುದಾ ಎಂದು ಕೇಳಿದ್ದಕ್ಕೆ ಸಾವಿತ್ರಿಯನ್ನು ಕೇಳಿದರು ಅವರು. ಅದಾದರೆ, ಕೈ ಕೂಸು ತಮಗೆ ಈಗಿನಿಂದಲೇ ತಿದ್ದಿ ಬೆಳೆಸಲು ಸುಲಭವೆನ್ನುವ ಉತ್ತರ ಕೊಟ್ಟರು. ಆದರೆ, ಶಾಂತಿ ಅದಕ್ಕೆ ಎರಡನೇ ತಾಯಿಯಂತಿದ್ದಳು. ಜೊತೆಗೆ ಭಾಗ್ಯಮ್ಮನವರಿಗೂ ಅಷ್ಟು ಚಿಕ್ಕ ಮಗುವನ್ನು ಕಳುಹಿಸಲು ಮನಸಿರಲಿಲ್ಲ. ಅವರ ಜೊತೆ ಹೋಗುವ ಆಯ್ಕೆಯನ್ನು ಬುದ್ಧಿವಂತಿಕೆಯಿಂದ ಮಕ್ಕಳಿಗೆ ಬಿಟ್ಟಾಗ, ಕೊಂಚ ಧೈರ್ಯವಂತೆ ಎನಿಸಿದ ಸರೋಜಿ ಒಪ್ಪಿದಳು. ಆದರೆ, ಅವಳಿಗೆ ಮುಂದಿನ ಜೀವನದ ಅರಿವಿರಲಿಲ್ಲ. 


ರಾಮಸ್ವಾಮಯ್ಯ ಹಾಗೂ ನಾಗಮ್ಮನವರ ಮನೆಯಲ್ಲಿ ಸರೋಜಿಯ ಬದುಕಿನ ದಿಕ್ಕೇ ಬದಲಾಯಿತು. ಅವರ ಮನೆಯಲ್ಲಿ ಮೌನ ತಾಂಡವವಾಡುತ್ತಿತ್ತು. ಜೊತೆಗಾರರಿಲ್ಲದೆ, ಸರೋಜಿ ತನ್ನವರನ್ನೆಲ್ಲಾ ನೆನೆಸಿಕೊಂಡು.. ನರಸಿಂಹನ ಹಾಗೂ ತನ್ನ ಜಗಳವನ್ನು ಮೆಲುಕು ಹಾಕುತ್ತಿದ್ದಳು. ಅವಳ ಜೊತೆಗಾರರಾಗಿದ್ದು ಆ ಮನೆಯ ನಾಯಿ ಸರದಾರ್ ಹಾಗೂ ಬೆಕ್ಕು ರಂಭಾ. ಶಾಲೆಗೆ ಸೇರಿದ ಸರೋಜಿ ಅಲ್ಲಿಂದ 'ಸರೋಜಿನಿ ದೇವಿ'ಯಾದಳು. ಒಂಟಿಯಾಗಿ ಮಲಗುವ ಅಭ್ಯಾಸ ಮಾಡಿಕೊಂಡಳು. ಶ್ರೀಮಂತಿಕೆಯ ಜೀವನವನ್ನು ಆಕೆ ಇಷ್ಟವಿಲ್ಲದಿದ್ದರೂ ರೂಡಿಸಿಕೊಳ್ಳಲೇ ಬೇಕಿತ್ತು. ಬೆರಗಿನಿಂದ ಎಲ್ಲವನ್ನೂ ಗಮನಿಸುತ್ತಿದ್ದಳು. ವಾಚಾಳಿಯಾಗಿ, ಚುರುಕಾಗಿದ್ದವಳು ಮೌನಿಯಾದಳು. ಒಬ್ಬಳೇ ಓಡಾಡಲು ಸಹಾ ಆಗುತ್ತಿರಲಿಲ್ಲ. ನಾಗಮ್ಮನವರ ಕಣ್ಗಾವಲಿರುತ್ತಿತ್ತು.


ನಾಗಮ್ಮ ಹಾಗೂ ಸರೋಜಿನಿಯ ಭಾಂದವ್ಯ ಬೆಳೆದರೂ.. ಆಕೆ ಹೆತ್ತ ಮಗಳಷ್ಟು ಬಾಂಧವ್ಯವನ್ನು ತೋರಲಿಲ್ಲ. ಸಾಕು ತಂದೆ, ಸಾಕು ಮಗಳ ಭೇಟಿಯೂ ಅಪರೂಪ. ಅದು ಎರಡೇ ಮಾತಿಗೆ ಮುಗಿದು ಹೋಗುತ್ತಿತ್ತು. ಆಕೆಗೆ ಮನೆಪಾಠದ ಮೇಷ್ಟ್ರಾಗಿ ಮಾಧವ ಅವರ ಮನೆಗೆ ಬರುತ್ತಿದ್ದ. ಆಗ ಎಲ್ಲರಿಗಿಂತ ಹೆಚ್ಚಿನ ಆತ್ಮೀಯವಾದ ಮಾತುಕತೆಯನ್ನು ಸರೋಜಿನಿ ಮಾಧವನ ಜೊತೆಗೆ ಆಡುತ್ತಿದ್ದಳು. ಇದು ಒಮ್ಮೊಮ್ಮೆ ನಾಗಮ್ಮನವರಲ್ಲಿ ಅಸೂಯೆಯನ್ನೂ ಹುಟ್ಟಿಸುತ್ತಿತ್ತು. ಮಾಧವನು ತನ್ನ ಹೆಚ್ಚಿನ ಓದಿನ ನಿಮಿತ್ತ ದೂರವಾದ. ಆದರೆ, ಆತ ಹಚ್ಚಿಕೊಟ್ಟ ಸಂಗೀತದ ಹುಚ್ಚು ಸರೋಜಿನಿಯ ಜೊತೆಯಾಯಿತು. 


ಮೊದಲನೇ ಬಾರಿಗೆ ತನ್ನ ಮನೆಗೆ ಹೋದ ಸರೋಜಿನಿಗೆ ಅಲ್ಲಿ ತಾನೇ ಪರಕೀಯಳು ಎಂದೆನಿಸಿತು. ಹೆಚ್ಚಾಗಿ ಅಲ್ಲಿಗೆ ಹೋಗಲು ಇಚ್ಚಿಸದ ಸರೋಜಿನಿಗೆ ಒಮ್ಮೆ ಧರ್ಮ ಸಂಕಟ ಬಂದಿತ್ತು. ನರಸಿಂಹನನ್ನು ಓದಿಸಲು, ಆಕೆಯ ಜೊತೆಗೆ ಕರೆತರಲು ಹಾಗೂ ಮೊದಲನೆಯ ಮಗಳಾದ ಶಾಂತಿಯ ಮದುವೆಗೆ ಹಣದ ಸಹಾಯಕ್ಕಾಗಿ ಭಾಗ್ಯಮ್ಮ ಹಾಗೂ ಸುಬ್ಬಣ್ಣನವರು ಸರೋಜಿನಿಯನ್ನು ಒತ್ತಾಯಿಸುತ್ತಿದ್ದರು. ಆದರೆ, ಇಲ್ಲಿ ಸರೋಜಿನಿ ರಾಜ್ಯವಿಲ್ಲದ ರಾಜನಂತೆ ಎಂಬುದರ ನಿಜಸ್ಥಿತಿಯ ಅರಿವಿರಲಿಲ್ಲ ಅವರಿಗೆ. ನಂತರ ಹೆತ್ತ ತಂದೆ-ತಾಯಿ ಹಾಗೂ ಮಗಳ ಬಾಂಧವ್ಯ ದೂರವೇ ಆಯಿತು. ಶಾರದೆಯ ಮದುವೆಗೆ ಸಹಾಯ ಬೇಡಿ ಬಂದಾಗಲೂ ಅದೇ ಪರಿಸ್ಥಿತಿ. ಅವರೆಲ್ಲರಿಗಿಂತ ನಾಗಮ್ಮನೇ ಆಪ್ತರಾಗಿದ್ದರು ಸರೋಜಿನಿಗೆ. 


ಮತ್ತೆ ಮಾಧವ ಅವಳಿಗೆ ಸಿಕ್ಕಿದ್ದು ಕಾಲೇಜಿಗೆ ಸೇರಿದಾಗ. ಅಷ್ಟರಲ್ಲಾಗಲೇ ಬೆಳೆದಿದ್ದ ಸರೋಜಿನಿ ಮಾಧವನಿಗೆ ಗುರುತಾಗಲಿಲ್ಲ. ಆದರೆ, ಆಕೆಯ ಪ್ರತಿಯೊಂದು ನೆನಪು ಆತನೊಡನೆ ಭದ್ರವಾಗಿತ್ತು. ಇಲ್ಲಿಂದ ಮಾಧವ ಹಾಗೂ ಸರೋಜಿನಿಯರ ಸ್ನೇಹ ಹಾಗೂ ಸಲುಗೆ ಬೆಳೆದು ಅದು ಪ್ರೇಮವಾಯಿತು. ಅದು ನಾಗಮ್ಮನವರಿಗೆ ತಿಳಿದಾಗ ಅವರು ಪ್ರತಿಕ್ರಿಯಿಸಿದ ಬಗೆ ಹೇಗೆ..? ಸರೋಜಿನಿಯ ಮುಂದಿನ ಬದುಕು ಹಾಗೂ ಭವಿಷ್ಯವನ್ನು ತಿಳಿಯಲು ಓದಿ 'ಅವಳ ಮನೆ' ಕಾದಂಬರಿಯನ್ನು.


ಸರೋಜಿನಿಯ ಮನಸ್ಸಿನ ತುಮುಲಗಳು.. ಹೆತ್ತವರಿಂದ ದತ್ತು ಕೊಡಲ್ಪಟ್ಟು, ಅವರು ಬದುಕಿರುವಾಗಲೇ ಮತ್ತೊಂದು ಮನೆಯಲ್ಲಿ ಬೆಳೆಯಬೇಕಾದ ಅನಿವಾರ್ಯತೆಯ ಬದುಕು, ಮಗುವಿನ ಬದುಕನ್ನೇ ಬದಲಿಸಿದ ರೀತಿಯನ್ನು ಬಿಡಿಸಿಟ್ಟಿದ್ದಾರೆ ಲೇಖಕಿ. ಅತ್ತ ಆ ಮನೆಯಲ್ಲಿಯೂ ತನ್ನ ಸ್ಥಾನ ಭದ್ರವಾಗಿಲ್ಲ, ಈ ಮನೆಯಲ್ಲಿಯೂ ತಾನು ಯಾವ ಸ್ಥಾನದಲ್ಲಿದ್ದೇನೆ ಎಂದು ಅರಿಯಲಾಗದೆ ತೊಳಲಾಡುವ ಮಕ್ಕಳ ಪ್ರತಿನಿಧಿಯಂತಿದ್ದಾಳೆ ಸರೋಜಿನಿ. ಹರಿಹರೆಯದ ಪ್ರೀತಿ ಎನ್ನುವುದು ಒಬ್ಬೊಬ್ಬರ ಬಾಳಲ್ಲಿ ಒಂದೊಂದು ರೀತಿಯಾದರೂ.. ಇಲ್ಲಿ ಹದಿಹರೆಯದ ಪ್ರೀತಿಯನ್ನು ಪಕ್ವತೆಯನ್ನು ತೋರಿದ್ದಾರೆ ಲೇಖಕಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ