ಶನಿವಾರ, ಏಪ್ರಿಲ್ 18, 2026

ವಿರಹದ ಸಂಕ್ಷಿಪ್ತ ಪದಕೋಶ (ಪುಸ್ತಕ ಯಾನ - 241)


ಪುಸ್ತಕದ ಶೀರ್ಷಿಕೆ : ವಿರಹದ ಸಂಕ್ಷಿಪ್ತ ಪದಕೋಶ

ಲೇಖಕರು : ಜೋಗಿ

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2015

ಪುಟಗಳು : 128

ಬೆಲೆ : 95 ರೂ.


ಜೋಗಿಯವರ ಕಾದಂಬರಿಗಳೇ ಪುಸ್ತಕಗಳೇ ವಿಭಿನ್ನ ಓದಿನ ಅನುಭವ ಕಟ್ಟಿಕೊಡುತ್ತವೆ. ಅದನ್ನು ನಮ್ಮ ಓದಿಗೆ ದಕ್ಕಿದಂತೆ ಕಟ್ಟಿಕೊಡುವುದು ಕೊಂಚ ಕಷ್ಟವೇ.. ವಿರಹದ ಸಂಕ್ಷಿಪ್ತ ಪದಕೋಶ ಎಂಬ ಕಾದಂಬರಿ ಸಹಾ ಅಂತಹದ್ದೇ ಕ್ಯಾಟಗರಿಗೆ ಸೇರುತ್ತದೆ. ಪುಸ್ತಕದ ಶೀರ್ಷಿಕೆ ಕಂಡಾಗ ಮೊದಲಿಗೆ ಕಾದಂಬರಿ ಎಂಬ ಭಾವ ಕೊಟ್ಟಿರಲಿಲ್ಲ. ಮುಖಪುಟವೂ ಅಷ್ಟೇನೂ ಸೆಳೆದಿರಲಿಲ್ಲ. ಆದರೆ, ಪುಸ್ತಕ ಅವಲೋಕನ ಬಳಗದಲ್ಲಿ ಮಾಲತಿ ಭಟ್ ಮೇಡಂ ಪರಿಚಯಿಸಿದ ಈ ಪುಸ್ತಕ ಪರಿಚಯ ನೋಡಿ ಕೊಂಡ ಪುಸ್ತಕವಿದು. 


ಇದು ಜೋಗಿಯವರ 44ನೇಯ ಕೃತಿ. ಈ ಕಾದಂಬರಿಯಲ್ಲಿ ಮುಖ್ಯವಾಗಿ ಬರುವುದು ಮೂರೇ ಪಾತ್ರಗಳು. ಕಾದಂಬರಿಯಲ್ಲಿ ಬರುವ ಕೊನೆಯನ್ನೇ ಮೊದಲಿಗೆ ಉಲ್ಲೇಖಿಸಿಬಿಡುತ್ತೇನೆ.


ಹೀಗೇ

ವಿಶ್ವಾಸ ಕಾರಂತ

ವಂದನಾ

ನಾನು


ನಾನು

ವಂದನಾ

ವಿಶ್ವಾಸ ಕಾರಂತ


ವಂದನಾ

ವಿಶ್ವಾಸ ಕಾರಂತ

ನಾನು


ವಂದನಾ

ನಾನು

ವಿಶ್ವಾಸ ಕಾರಂತ


ನಾನು ಎಂಬಲ್ಲಿ ರಾಜೀವ ಎಂದುಕೊಳ್ಳಬಹುದು.


ಕಾದಂಬರಿ ಬೆಳೆಯುತ್ತಾ ಹೋಗುವುದೇ ಹೀಗೆ.. ಹಾಗೆಂದು ಈ ಮೂರು ಪಾತ್ರಗಳ ನಡುವೆ ಸಂಘರ್ಷವಿಲ್ಲ. ನವಿರಾದ ಸ್ನೇಹ ಭಾವ ಕಂಡರೂ ಲೇಖಕರು ಇದನ್ನು ಅನುಸಂಧಾನ ಎಂದು ಕರೆಯುತ್ತಾರೆ. ವಿರಹವೇ ಇಲ್ಲಿನ ಮುಖ್ಯ ಭಾವವೆಂದರೂ ತಪ್ಪಾಗಲಾರದು. ಹಾಗೆಂದು, ವಿರಹ ನೋವು ತರುತ್ತದೆ ಎನ್ನುವ ನಮ್ಮ ಆಲೋಚನೆಯೇ ಇಲ್ಲಿ ತಪ್ಪಾಗುತ್ತದೆ. ಒಂದು ರೀತಿಯ ಸ್ವಾತಂತ್ರ್ಯ ಎನ್ನುವ ಭಾವವೂ ಸೇರುತ್ತದೆ.


ವಿರಹ ಮತ್ತಷ್ಟು ಗಾಢವಾಗುತ್ತದೆ ಎನ್ನುತ್ತಲೇ ಈ ಗಾಢವಾದ ವಿರಹದ ಅನುಭವವನ್ನು ಜೊತೆಗಿದ್ದವರು, ಹತ್ತಿರವಿದ್ದವರು ಅನುಭವಿಸುವ ಪರಿಯನ್ನು ಹೇಳುತ್ತಲೇ.. ಓದುಗರನ್ನು ತಲುಪುತ್ತಾರೆ ಲೇಖಕರು. 


ಕಾದಂಬರಿಯ ಶುರುವಿನಲ್ಲಿ ಒಂದು ಪುರಾಣದ ಕಥೆಯ ಉಲ್ಲೇಖ ಮಾಡುತ್ತಾರೆ. ಸ್ವರ್ಗವೆಂಬುದು ಬದಲಾವಣೆಯೇ ಇಲ್ಲದ ಸ್ಥಳವೆಂದು.. ಸ್ವರ್ಗಕ್ಕಿಂತ ಭೂಲೋಕವೇ ಚಂದವೆಂದು ತನ್ನ ಶಾಪವನ್ನು ಮುಗಿಸಿ ಬಂದ ದೇವೇಂದ್ರ ಹೇಳುವಾಗ ಆತನಿಂದ ಪ್ರಭಾವಿತರಾದ ಮೇನಕೆಯ ಮಗಳಾದ ಪ್ರಮಧ್ವರೆ ಅವಳ ಗಂಡ ರುರು ಮತ್ತು ಅವರಿಬ್ಬರ ಗೆಳೆಯ ಚಿತ್ರವರ್ಮ ತಾವೂ ಭೂಲೋಕದಲ್ಲಿ ಮನುಷ್ಯರಾಗಿ ಹುಟ್ಟಬೇಕೆಂದು ಆಸೆಪಡುತ್ತಾರೆ. ಹಾಗೆ ಹುಟ್ಟಬೇಕೆಂದರೆ ಶಾಪಕ್ಕೆ ಗುರಿಯಾಗುವಂತಹಾ ಕೆಲಸ ಮಾಡಬೇಕು. ಅವರು ಶಾಪ ಪಡೆಯಲು ಮಾಡಿದ್ದೇನು..?? ನೀವೇ ಓದಿ ತಿಳಿಯಿರಿ.


ಪ್ರಮಧ್ವರೆ, ರುರು ಮತ್ತು ಚಿತ್ರವರ್ಮ ಹೀಗೆ ಶಾಪಕ್ಕೆ ತುತ್ತಾಗಿ ಭೂಮಿಯಲ್ಲಿ ವಂದನಾ ವಿಶ್ವಾಸ ಕಾರಂತ ಮತ್ತು ರಾಜೀವರಾಗಿ ಹುಟ್ಟುತ್ತಾರೆ ಎನ್ನುವಲ್ಲಿಂದ ಭೂಲೋಕದ ಕಥೆ ಶುರುವಾಗುತ್ತದೆ. 


ವಿಶ್ವಾಸ ಮನೆಗೆ ಬರದೆ ಮೂರು ತಿಂಗಳಾಗುತ್ತಾ ಬಂದಾಗ ಆತನ ಕುರಿತು ಕೇಳಲು ವಂದನಾ ವಾಟ್ಸಪ್ ನಲ್ಲಿ ರಾಜೀವನಿಗೆ ಮೊದಲ ಬಾರಿ ಫೋನಿನಲ್ಲಿ ಸಂಪರ್ಕಿಸಿದ್ದಳು. ಹಾಗೆ ತಲುಪುವಾಗ ಆತನ ಹೋಟೆಲಿನ ಮೂರನೆಯ ಬ್ರಾಂಚು ಉದ್ಘಾಟನೆ ಆಗುವುದಕ್ಕೆ ಎಂಟು ದಿನಗಳಷ್ಟೇ ಬಾಕಿ ಇತ್ತು. ಆ ಉದ್ಘಾಟನೆಗೆ ಮುಖ್ಯಮಂತ್ರಿ ಬರುತ್ತಿದ್ದರು. ಹಾಗಾಗಿ ರಾಜೀವ ಈ ಕುರಿತು ತಲೆಕೆಡಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.


ಹಾಗೆಂದು.. ರಾಜೀವ ಹಾಗೂ ವಿಶ್ವಾಸ ಕಾರಂತ ಇಬ್ಬರೂ ಬಾಲ್ಯದ ಗೆಳೆಯರು ಅಥವಾ ಸಹೋದ್ಯೋಗಿಗಳೇನಲ್ಲ. ಬದಲಾಗಿ ವಿಶ್ವಾಸ ಕಾರಂತ ರಾಜೀವನಿಗೆ ಸಿಕ್ಕಿದ್ದೇ ವಿಶೇಷ. 


ಭಾರತದ ಎಲ್ಲಾ ಜನಪದೀಯ ತಿನಿಸಿಗಳು ಸಿಗುವಂತ ಒಂದು ಹೋಟೆಲ್ ಶುರು ಮಾಡಬೇಕು ಎನ್ನುವ ರಾಜೀವ ಆಸೆಗೆ ತಕ್ಕಂತೆ ಇಂಡಿಯನ್ ರಿಪಬ್ಲಿಕ್ ಹೋಟೆಲ್ ಶುರು ಮಾಡಿದ್ದ. ಒಂದೇ ಸಲಕ್ಕೆ ಅಷ್ಟೂ ರಾಜ್ಯಗಳ ಅಡುಗೆಯನ್ನು ಸೇರಿಸುವ ಬದಲಾಗಿ ಒಂದೊಂದು ತಿಂಗಳಿಗೊಂದೊಂದು ರಾಜ್ಯದಂತೆ ಸೇರಿಸುತ್ತಾ ಬರುತ್ತಿದ್ದ. 


ಒರಿಸ್ಸಾದ ವಿಶೇಷ ಅಡುಗೆಗಳನ್ನು ತಿಳಿದುಕೊಳ್ಳಲು ಭುವನೇಶ್ವರಕ್ಕೆ ಹೋಗಿದ್ದಾಗ ಅಲ್ಲಿನ ಪ್ರೊಫೆಸರ್ ಕೃಷ್ಣದಾಸ್ ಅವರು ಬುಡಕಟ್ಟು ಜನರ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಭಾಷೆ ತೊಡಕಾದಾಗ ಅಲ್ಲಿ ಸಿಕ್ಕಿದ್ದೇ ವಿಶ್ವಾಸ ಕಾರಂತ. 


ವಿಶ್ವಾಸ ಕಾರಂತ ಅರ್ಥಶಾಸ್ತ್ರ ಪಂಡಿತ. ಬಹಳಷ್ಟು ಹೆಸರಾಂತ ದಿನಪತ್ರಿಕೆಗಳಲ್ಲಿ ಲೇಖನ ಬರೆದಿದ್ದವನು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪದವೀಧರ. ಭಾರತೀಯ ಅರ್ಥಶಾಸ್ತ್ರ ವ್ಯವಸ್ಥೆಯ ಮೇಲೆ ಏಳೆಂಟು ಪುಸ್ತಕ ಬರೆದಿದ್ದನು. ಇನ್ನು ಹತ್ತು-ಹಲವು ಗುಣವಿಶೇಷಗಳು ಸಿಕ್ಕಿತ್ತಾದರೂ.. ಆತ ಅಲ್ಲಿ ಏನು ಮಾಡುತ್ತಿದ್ದ ಎಂಬುದಕ್ಕೆ ಉತ್ತರವಿರಲಿಲ್ಲ. 


ಒಂದು ತಲೆಮಾರು ಬದಲಾಗುವಷ್ಟರಲ್ಲಿ.. ರಾಜೀವನ ಹೋಟೆಲ್ ಗೆ ಜನ ಕಡಿಮೆಯಾದಾಗ ಹೋಟೆಲ್ ಮುಚ್ಚಿ ಬೇರೆ ಉದ್ಯಮಕ್ಕಿಳಿಯಲು ಯೋಚಿಸುತ್ತಿದ್ದಾಗ ಆತನ ಗೆಳೆಯನ ಸಹಾಯದಿಂದ ಮತ್ತೆ ಭೇಟಿಯಾಗಿದ್ದು ವಿಶ್ವಾಸ ಕಾರಂತರನ್ನು. ರಾಜೀವನಿಗೆ ಅದೊಂದು ಅಚ್ಚರಿಯೇ.. ವಿಶ್ವಾಸನಿಗೆ ಹಿಂದಿನದ್ದು ನೆನಪಿರಲಿಲ್ಲ. ಆದರೆ, ಆ ಭೇಟಿಯ ನಂತರ ಆತನ ಉಪಾಯಗಳು ಕ್ಲಿಕ್ ಆಗಿ ಹೋಟೆಲ್ ಲಾಭದ ಹಾದಿ ಹಿಡಿದಾಗ ರಾಜೀವ ಹಾಗು ವಿಶ್ವಾಸ ಕಾರಂತರು ಆಪ್ತರಾದರು. 


ವಿಶ್ವಾಸ ಕಾಣೆಯಾದ ಬಗ್ಗೆ ವಂದನಾ ಕಂಪ್ಲೇಂಟು ಕೊಡಲು ಒಪ್ಪಲಿಲ್ಲ. ಆತ ಬರುತ್ತಾನೆಂದು ಕಾಯುತ್ತಿದ್ದಳು. ಆದರೆ, ಅಷ್ಟರಲ್ಲಿ ಮತ್ತೊಂದು ಪೊಲೀಸ್ ಕಂಪ್ಲೇಂಟ್ ರಿಜಿಸ್ಟರ್ ಆಗಿತ್ತು. ದೂರು ಕೊಟ್ಟದ್ದು ವಿಶ್ವಾಸನ ಧರ್ಮಪತ್ನಿ ಸುಶೀಲ ಕಾರಂತ. ಆಕೆಯ ತಂದೆ ಹೈಕೋರ್ಟ್ ಜಡ್ಜ್ ಆಗಿದ್ದವರು. ಆಕೆಯನ್ನು ಮದುವೆಯಾದ ನಂತರ ಡೆಲ್ಲಿ ಸೇರಿದ್ದ ವಿಶ್ವಾಸ ಅಲ್ಲಿಂದ ಗೊತ್ತಾಗದ ಹಾಗೆ ವಂದನಾಳ ಜೊತೆಗಿದ್ದಾನೆ ಇವರಿಬ್ಬರಿಗೂ ಮದುವೆ ಆಗಿಲ್ಲ ಎಂದು ಕಂಪ್ಲೇಂಟ್ ಕೊಟ್ಟಿದ್ದರು ಸುಶೀಲಾ. ರಾಜೀವನಿಗೆ ಈಗ ಎಲ್ಲವೂ ವಿಚಿತ್ರವಾಗಿ ಕಾಣುತ್ತಿತ್ತು.


ಅಷ್ಟರಲ್ಲಾಗಲೇ ರಾಜೀವ ವಂದನಾಳನ್ನು ಸೂಕ್ಷ್ಮವಾಗಿ ಗಮನಿಸಲು ಶುರು ಮಾಡಿದ್ದ. ಆಕೆಯ ಹಾಡು, ಅಪಿಯರೆನ್ಸ್, ನಡೆ-ನುಡಿ ಎಲ್ಲವೂ ವಿಭಿನ್ನವಾಗಿ ಕಾಣುತ್ತಿತ್ತು. ಆಕೆಯ ನಡೆ-ನುಡಿ, ನಗು-ಅಳು, ಹಾಡು, ರಾಗದ ಆಯ್ಕೆ ಎಲ್ಲವನ್ನೂ ರಾಜೀವನ ದೃಷ್ಟಿಯಿಂದ ಕಾಣುತ್ತಾ ಹೋಗುತ್ತೇವೆ. 


ವಂದನಾ ತನ್ನದೇ ಮೊದಲ ಮದುವೆ ಎಂದು ಹೇಳುತ್ತಿದ್ದವಳು.. ಸುಶೀಲಾ ಕಾರಂತಳನ್ನು ಭೇಟಿಯಾಗಲು ಹೋಗುವ ಹೊತ್ತಿಗಾಗಲೇ ಸುಶೀಲಾಳಿಗೆ ಅಪಘಾತವಾಗಿ ಆಸ್ಪತ್ರೆಯಲ್ಲಿರುತ್ತಾಳೆ. 


ವಂದನಾಳೇ ವಿಶ್ವಾಸನಿಗೆ ಏನಾದರೂ ಮಾಡಿರಬಹುದು ಎಂದು ರಾಜೀವನಿಗೆ ಆಲೋಚನೆ ಹುಟ್ಟಿದಂತೆ, ನಮ್ಮಲ್ಲಿಯೂ ಅದೇ ಆಲೋಚನೆ ಮೂಡುತ್ತಾ ಹೋಗುತ್ತದೆ. ಆದರೆ, ವಂದನಾ ರಾಜೀವನನ್ನು ಕರೆಸಿಕೊಂಡು ಭುವನೇಶ್ವರದಿಂದ ಪ್ರಕಟವಾದ ಪತ್ರಿಕೆಯೊಂದನ್ನು ತೋರಿಸಿ, ಭುವನೇಶ್ವರದ ಕಾಡೊಂದರಲ್ಲಿ ಆದಿವಾಸಿಗಳ ನಡುವೆ ವಿಶ್ವಾಸ ಕಾರಂತ ಕುಳಿತಿದ್ದ ಫೋಟೋ ತೋರಿಸುತ್ತಾಳೆ. ರಾಜೀವ ವಿಶ್ವಾಸನನ್ನು ಹುಡುಕಲು ಅಲ್ಲಿಗೆ ಹೊರಡುವ ತೀರ್ಮಾನ ಮಾಡಿದಾಗ ವಂದನಾ ಬರಲು ಒಪ್ಪುವುದಿಲ್ಲ.


ಹುಡುಕಿಕೊಂಡು ಹೊರಟ ರಾಜೀವನಿಗೆ ಅಲ್ಲಿ ಆತನಿಗೆ ದೊರೆತ ಉತ್ತರವೇನು..?? ವಂದನಾಳ ವಿಚಿತ್ರ ನಡೆಗೆ ಕಾರಣವೇನು..?? ಆಕೆ ವಿಶ್ವಾಸನಿಂದ ದೂರ ಉಳಿದು ವಿರಹದಲ್ಲಿ ತೊಳಲಲು ತೀರ್ಮಾನಿಸಿದ್ದೇಕೆ.. ಅಷ್ಟಕ್ಕೂ ವಂದನಾ, ವಿಶ್ವಾಸ ಇಬ್ಬರ ಭೇಟಿಯಾದದ್ದು ಎಲ್ಲಿ, ಹೇಗೆ..? ಆ ಭೇಟಿಯ ನಂತರ ವಿಶ್ವಾಸ ಕಾರಂತ ಏನಾದ..?? ವಂದನಾ, ರಾಜೀವರ ಸ್ನೇಹ ಬೇರೆಯ ದಿಕ್ಕಿಗೇನಾದರೂ ತೀರಿಗಿತೇ..? ಇವೆಲ್ಲದಕ್ಕೂ ಉತ್ತರ ಕಂಡುಕೊಳ್ಳಲು ಓದಿ ಈ ಕಾದಂಬರಿಯನ್ನು. 


ಈ ಇಡೀ ಕಾದಂಬರಿಯನ್ನು ನಾವು ರಾಜೀವನ ಕಣ್ಣಲ್ಲಿ ನೋಡುವುದೇ ಹೆಚ್ಚು. ರಾಜೀವನ ಪಾತ್ರವೇ ನಾವಾಗಿ ಆತನ ಮೂಲಕ ವಿಶ್ವಾಸ ಕಾರಂತರನ್ನು ಹಾಗೂ ವಂದನಾಳನ್ನು ನೋಡಲು ಹೊರಡುತ್ತೇವೆ.


ಇಲ್ಲಿ ಜೋಗಿಯವರ ಬರಹದ ಮ್ಯಾಜಿಕಲ್ ಟಚ್ ಅಂತೂ ಕಾಣಿಸುತ್ತದೆ. ಅಲ್ಲಲ್ಲಿ ಕವಿತೆಗಳ ಓದು ಸಿಗುತ್ತದೆ.

ಇಲ್ಲಿ ಗೆದ್ದದ್ದು ವಿರಹವೋ ಅಥವಾ ಸೋತದ್ದು ವಿರಹವೋ..?? ವಿಭಿನ್ನ ಓದಿನ ಅನುಭವ ನೀಡುವ ಕಾದಂಬರಿ. ಜೋಗಿ ಅವರ ಪುಸ್ತಕ ಓದಿ ರೂಢಿ ಇದ್ದವರು, ಅವರ ಬರಹದ ಶೈಲಿ ಇಷ್ಟವಿದ್ದವರು ಓದಬಹುದಾದ ಕಾದಂಬರಿ ಇದು. ಉಳಿದವರಿಗೆ ಅದು ಅವರವರ ಓದಿನ ಅನುಭವಕ್ಕೆ ದೊರೆತಂತೆ ಎಂದಷ್ಟೇ ಹೇಳಬಲ್ಲೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ